ಗೆಳತಿ, ಬಂದಿದೆಯಂತೆ
ಹೊಸ ವರುಷ
2018ರ ಹೊಸ ಇಸವಿ,
ಈ ಸಂಭ್ರಮಕ್ಕೆ
ಇಂದಾದರೂ ಕೊಡುವೆಯ
ನಿನ್ನ ತುಟಿಯ ಈ ಸವಿ!!
Sunday, 31 December 2017
ಹೊಸ ವರುಷ- ಹೊಸ ಇಸವಿ
Tuesday, 26 December 2017
ನನ್ನ-ಅವಳ ಮಾತು
ಅವಳಂದಳು: ನಾ ಸತ್ತರೆ ನನ್ನ ನೆನಪಲ್ಲಿ ಏನು ಕಟ್ಟುವೆ?
ನಾನಂದೆ: ಪ್ರಿಯೇ, ನಿನಗಾಗಿ ತಾಜಮಹಲ್ ಕಟ್ಟುವುದಿಲ್ಲ, ಪ್ರೇಮಸೌಧ ಕಟ್ಟುವುದಿಲ್ಲ, ಕವಿತೆಗಳ ಸಾಲನ್ನೂ ಕಟ್ಟುವುದಿಲ್ಲ.
ಅವಳಂದಳು: ಹಾಗಿದ್ದರೆ ನನ್ನ ನೆನಪಲ್ಲಿ ಏನು ಕಟ್ಟುವೆ?
ನಾನಂದೆ: ಪ್ರಿಯೆ, ನಿನ್ನ ನೆನಪಲ್ಲಿ ಇನ್ನೊಬ್ಬಳಿಗೆ ತಾಳಿ ಕಟ್ಟುವೆ.
ಯೋಗೀಶ್ ಮಲ್ಲಿಗೆಮಾಡು
Thursday, 21 December 2017
ಕೊಳಲ ಹಾಡಿನ ರಾತ್ರಿ
ಕೊಳಲ ನುಡಿಸಿದ ಕೃಷ್ಣ ರಾಧೆಗೆ
ಹರಿವ ಯಮುನೆಯ ದಡದಲಿ,
ಬೆಳಗು ಇನ್ನೂ ಹೊರಳುತಿತ್ತು
ರಮ್ಯ ರಾತ್ರಿಯ ಬುಡದಲಿ.
ರಾತ್ರಿ ಕಳೆಯುವ ಕೊನೆಯ ಜಾವದಿ
ಚಂದ್ರ ತಾರೆಯು ಮಿನುಗಿದೆ,
ಬಾನಬಯಲಿನ ಹೊಸ್ತಿಲಂಚಲಿ
ದೀಪ ಬೆಳಗಿದ ಹಾಗಿದೆ.
ಗಾನ ಹೊಮ್ಮಿತು ಕೊಳಲ ಉಸಿರಲಿ
ರಾಧೆ ನಾಚಲು ಚೆಲುವಲಿ,
ನೂರು ಬೆಳಕಿನ ತಾರೆ ಬೆಳಗಿತು
ನೀಲ ಬಯಲಿನ ನಭದಲಿ.
ಬಿರಿದ ಸಂಪಿಗೆ, ತೆರೆದ ಜಾಜಿಯ
ಕಂಪು ಹಬ್ಬಿತು ಗಾಳಿಗೆ,
ಮುರಳಿಗೋಪನ ಗಾನ ಮಾತ್ರವೆ
ಸಾಕು ರಾಧೆಯ ಪಾಲಿಗೆ.
ಜೀವದೊಳಗಿನ ಉಸಿರ ಶ್ವಾಸವು
ಬರಿಯ ಗಾಳಿಯೇ ಆಯಿತು,
ತುಂಡು ಬಿದಿರೊಳು ಹೊಮ್ಮಿದುಸಿರು
ರಾಗವಾಗಿ ತೇಲಿತು.
ಕೃಷ್ಣ ನುಡಿಸಿದ, ರಾಧೆ ನುಲಿದಳು
ರಾತ್ರಿ ಕರಗಿತು ಹೀಗೆಯೆ,
ದಡದ ಆ ಕಡೆ ಮನೆಯ ಒಳಗಿನ
ದೀಪ ಬಳುಕುವ ಹಾಗೆಯೆ.
ಅರಳು ಮಲ್ಲಿಗೆ ಬಿರಿದು ಒಲವಿನ
ಕಂಪು ಚೆಲ್ಲಿತು ಸುತ್ತಲು,
ವೀಣೆ ಮೀಟಿದ ಹಾಗೆ ಬೆಳಕಿನ
ತೆರೆಯ ಬಿಚ್ಚಿತು ಕತ್ತಲು.
ಯೋಗೀಶ್ ಮಲ್ಲಿಗೆಮಾಡು
Wednesday, 20 December 2017
ಹೆಸರಿಡದ ಕವಿತೆಗಳು
ನಡೆಯುತಿರಲಿ ಬದುಕು ಅದರದೇ ಪಾಡಿಗೆ,
ಹೆಜ್ಜೆ ಹಾಕೋಣ ನಾವು ನಮ್ಮದೇ ಹಾಡಿಗೆ.
******************************************
ಕನಸು ಸತ್ತರೆ ಏನಂತೆ,
ಕನಸು ಕಾಣುವ ಮನಸು ಸಾಯದಿರಲಿ.
******************************************
ಕ್ರಮಿಸಿ ಬಂದ ಪಯಣದ ನೆನಪು ಮಾಸಿಲ್ಲ
ನಡೆಯುತಿರುವ ದಾರಿಯಲಿ ಹೂವಿಲ್ಲ ಹಾಡಿಲ್ಲ
ಬರಲಿರುವ ಹಾದಿ ಕನಸಲಷ್ಟೇ ಕಾಣುವ ಕವಿತೆ.
******************************************
ಬಸ್ಸು ಕಾರಿನ ಸಿಡಿಲ ಸದ್ದು
ಸಹಜ ಸಂಜೆಯ ಕೊಂದಿತು
ಹಕ್ಕಿ ಹಾಡಿನ, ಕೆಂಪು ಬಾನಿನ
ಸೊಬಗು ನಗರದಿ ಕುಂದಿತು
******************************************
ಜೀವದೊಳಗಿನ ಶ್ವಾಸ ಬರೀ ಗಾಳಿಯಾಯಿತು
ತುಂಡು ಬಿದಿರೊಳಗಿನ ಉಸಿರು ರಾಗವಾಗಿ ತೇಲಿತು
******************************************
ಮಾಘಿ ಚಳಿಗೆ
ಮೇಘ ಚದುರಲು
ಮೌನವಾಯಿತೆ ಕೋಗಿಲೆ?
******************************************
ಉದಯ ರಾಗವೇ ಮೂಡಿ ಬಂದಿದೆ
ಸೂರ್ಯ ರಶ್ಮಿಯ ತೇರಲಿ
******************************************
ರಾತ್ರಿ ಎಂದರೆ?
ಒಡೆದರಳಲು ಕಾದ ಮುಗುಳಿನ ಅಧರದಲಿ
ಸುಗಂಧ ಬಂಧಿಯಾದ ಘಳಿಗೆ
******************************************
ಮಂಜು ಮುಸುಕಿದ ಮುಂಜಾವಿಗೆ
ಮೌನ ಮಬ್ಬಿನ ಮೆರುಗು
******************************************
ಎಲ್ಲೋ ಕತ್ತಲರಳಿ ಚಂದಿರ ನಕ್ಕ
ಮನೆಯಂಗಳ ಫಳ್ ಎಂದಿತು ಬೆಳದಿಂಗಳಲಿ
******************************************
ಬಿರಿದ ಮಲ್ಲಿಗೆಯ ಘಮ ಹರಡಿತ್ತು
ಕತ್ತಲೆಗೆ ಕತ್ತಲೆಯೇ ಮಲಗಿದ ಹೊತ್ತಲ್ಲಿ
******************************************
ಇರುಳ ತಾಯಿಯ
ಬಿಚ್ಚು ಮುಡಿಯಲ್ಲಿ
ಬಿಡಿ ಮಲ್ಲಿಗೆಯಂತಹ
ತಾರಕೆಗಳು
******************************************
ಮುಳ್ಳು ಬೇಲಿಯ ಮೇಲೆ
ಹಂಬಿ ಹಬ್ಬಿದ ಬಳ್ಳಿಲತೆಯ ತುಂಬಾ
ಬಿರಿದ ರಾತ್ರಿರಾಣಿ
ಯೋಗೀಶ್ ಮಲ್ಲಿಗೆಮಾಡು
Tuesday, 19 December 2017
ಹೃದಯದಾಹ್ವಾನ
ಬಾನ ಬಯಲಿನ ಮುರಿದ ತಾರಕೆಗಳೇ
ಬನ್ನಿ ನನ್ನೆದೆಯ ಬೆಳಗಿ!
ಎಲ್ಲೋ ಕಟ್ಟಿದ ಕರಿಮುಗಿಲುಗಳೇ
ಬನ್ನಿ ನನ್ನೆದೆಯ ತಣಿಸಿ!
ಬೆಟ್ಟದಿಂದಿಳಿಯುತಿಹ ಬಿಳಿ ನೀರ ಝರಿಗಳೇ
ಹರಿದು ಬನ್ನಿರಿ ನನ್ನೆದೆಗಡಲ ಕಡೆಗೆ!
ಹಾಸಿ ಹರವಿದ ಶ್ರುತಿಗೊಂಡ ವೀಣೆಗಳೇ
ನುಡಿದು ತಾಕಿರಿ ನನ್ನೆದೆಯ ತಡಿಗೆ!
ಬಣ್ಣದೊಳೆ ಮೈ ಅದ್ದಿ ಹಾರುತಿಹ ಚಿಟ್ಟೆಗಳೇ
ಬನ್ನಿ ನನ್ನದೆಯ ಮಕರಂದ ಹೀರುವೊಲೆ!
ಬಿರಿದ ಮಲ್ಲಿಗೆ ಅರಳ ಹೂಬಳ್ಳಿ ಲತೆಗಳೇ
ಬನ್ನಿ ಸೂಸಿರಿ ಕಂಪು ನನ್ನೆದೆಯ ತೋಟದೊಳೆ!
ಮುಂಜಾವ ಮಂಜಿನಲಿ ಹಕ್ಕಿಗೊರಲಿನ ಹಾಡುಗಳೇ
ಬನ್ನಿ ಇನಿಗೈಯ್ದು ನನ್ನೆದೆಯ ತುಂಬಿರಿ!
ತೂಗಿ ತೊನೆದಾಡುತಿಹ ಹೆಜ್ಜೇನ ಗೂಡುಗಳೆ
ಬನ್ನಿ ನನ್ನೆದೆಬನವ ಮಧುಶಾಲೆ ಮಾಡಿರಿ!
ವಿಶ್ವಚೈತನ್ಯದ ಶಾಂತಿ ಪ್ರಭೆಗಳೇ
ಬನ್ನಿ ನನ್ನೆದೆಯೊಳಗೆ ಕಿರಣವನು ಬೀರಿ!
ನೋವ ಮರೆಸಿ, ನಗುವ ತರಿಸಿ
ಒಂದಾಗಿ ಬಾಳುವ ದಾರಿ ತೋರಿ!
ಬಾನ ಬಯಲಿನ ಮುರಿದ ತಾರಕೆಗಳೇ
ಬನ್ನಿ ನನ್ನೆದೆಯ ಬೆಳಗಿ!
ಎಲ್ಲೋ ಕಟ್ಟಿದ ಕರಿಮುಗಿಲುಗಳೇ
ಬನ್ನಿ ನನ್ನೆದೆಯ ತಣಿಸಿ!
ಯೋಗೀಶ್ ಮಲ್ಲಿಗೆಮಾಡು
Sunday, 17 December 2017
ಬನಸಿರಿಯ ಸೊಬಗು
ಅಡಿಕೆ ಸಾಲಿನ ತೋಟ, ತಂಪು ಬೀಸಿದ ಹಾದಿ,
ಹೆಮ್ಮರದ ಬುಡದಲ್ಲಿ ನಾಗ ಕಲ್ಲು.
ಇಳಿಬಿದ್ದ ಹೂಬಳ್ಳಿ, ಬನಬನದಿ ಹಸಿರ ಸಿರಿ,
ಕಾಡುಚಪ್ಪರದಿ ನುಸುಳುತಿಹ ಸೂರ್ಯರಶ್ಮಿ.
ಕೆಂಪು ಹಣ್ಣಿನ ಅರಳಿ, ಅಗಲದೆಲೆಗಳ ಆಲ,
ಜಡೆಯಾಗಿ ಜಟೆಯಾಗಿ ಜೋತ ಬಿಳಲು.
ನಾಗ ಕಲ್ಲಿನ ಮುಂದೆ, ಎಣ್ಣೆ ಜಿಡ್ಡಿನ ದೀಪ,
ಬುಡದಲ್ಲಿ ಬೆಳಗುತಿದೆ ದಾಸವಾಳ.
ಉದುರಿದಾಲದ ತರಗು, ಬೀಸು ಗಾಳಿಯ ಬೆರಗು,
ಸರಸರನೆ ಸದ್ದಿಟ್ಟ ಸರ್ಪ ಸದ್ದು.
ಸಹಜ ಶಾಂತಿಯ ಸೊಬಗು, ಬನದಿ ಸುಳಿಯುತಲಿರಲು,
ಗೆಲ್ಲು ಗೆಲ್ಲಿನ ಮೇಲೆ ಹಕ್ಕಿ ಹಾಡು.
ಜೇನ ಹೀರುವ ದುಂಬಿ, ಝೇಂಕಾರವನೆ ತುಂಬಿ,
ಬನದಲ್ಲಿ ಆಗಾಗ ಮಂತ್ರ ಘೋಷ.
ಕರಿನಾಗ ಕಲ್ಲಲ್ಲಿ, ಕಲ್ಲ ದೀಪಗಳಲ್ಲಿ,
ಬನವೆಲ್ಲ ಸುರಿಸುತಿದೆ ಭಕ್ತಿವರ್ಷ.
ಹಕ್ಕಿ ಉಲಿಹವೆ ಶ್ಲೋಕ, ಬೀಸು ಗಾಳಿಯೆ ನಾದ,
ಉದುರುತಿಹ ಹೂ ಮೊಗ್ಗೆ ಪುಷ್ಪವೃಷ್ಟಿ.
ಮನುಜನಿಲ್ಲದ ಲೋಕ, ಶಾಂತಿ ಪ್ರೇಮದ ನಾಕ
ಮೌನದೊಳು ಕಾಣುವುದು ದೈವಸೃಷ್ಟಿ.
Saturday, 16 December 2017
ಚಳಿಗೊಂದು ಕವಿತೆ
ಹೊರಗೆ ಮಂಜು ಸುರಿವ ಚಳಿ
ಒಳಗೆ ಹಕ್ಕಿ ಗೂಡಿನ ಬಿಸುಪು
ಒಡೆದ ಕಿಟಕಿ ಗಾಜಿನೊಳಗೆ
ಸಣ್ಣಗೆ ಸುಳಿದ ಶೀತಗಾಳಿಗೆ
ಮೈಯೆಲ್ಲಾ ಮಾಘ ಮಾಸ!!
ಯೋಗೀಶ್ ಮಲ್ಲಿಗೆಮಾಡು
Wednesday, 13 December 2017
ನೀರೆ ನೀನು ನೀರೆ!!!
ನೀರು ಮತ್ತು ಹೆಣ್ಣು ಎರಡೂ ಜೀವಸೆಲೆ. ನೀರು ಜೀವ ನೀಡುವಂತದ್ದು ಮತ್ತು ಹೆಣ್ಣು ಜೀವನ ನೀಡುವವಳು. ನೀರಿದ್ದಲ್ಲಿ ಜೀವನ, ನೀರಿದ್ದಲ್ಲಿ ಉತ್ಸಾಹ, ನೀರಿದ್ದಲ್ಲಿ ಜೀವಂತಿಕೆ. ಹೆಣ್ಣಾದರೂ ಅಷ್ಟೇ. ಆಕೆ ಇದ್ದಲ್ಲಿ ಜೀವ ಚೈತನ್ಯ, ಮನೆ ಮನೆಯಾಗುವುದು.
ನಮ್ಮ ದೇಶದಲ್ಲಿ ಅನೇಕ ನದಿಗಳಿಗೆ ಹೆಣ್ಣಿನ ಹೆಸರನ್ನು ನೀಡಲಾಗಿದೆ. ಕಾರಣ, ನದಿಗಳು ತಾವು ಹರಿಯುವ ಉದ್ದಗಲಕ್ಕೂ ಹಸಿರನ್ನುಂಟು ಮಾಡಿ ನದಿ ಪಾತ್ರದ ಜನರ ಜೀವನವನ್ನು ಕಟ್ಟಿಕೊಟ್ಟಿದೆ. ಅಂತೆಯೇ, ಹೆಣ್ಣು ಕೂಡ ತಾನು ಇದ್ದ ಮನೆಗೂ, ತಾನು ಹೋದ ಮನೆಗೂ ಜೀವಂತಿಕೆಯನ್ನು ಹರಿಸಿ ಹೋಗುವವಳು.
ತಾಯಿಯ ಗರ್ಭದಲ್ಲಿಯೂ ಒಂಭತ್ತು ತಿಂಗಳು ಹೊರಳುವ ಜೀವವೂ ನೀರಿನಿಂದಲೇ ಆವೃತವಾಗಿರುತ್ತದೆ. ಹೊತ್ತವಳು ನೀರೆ ಮತ್ತು ಆವೃತವಾಗಿರುವುದು ನೀರೆ!! ಹಾಗಿರುವಾಗ ಹೆಣ್ಣು ಮತ್ತು ನೀರು ಎರಡೂ ನಮ್ಮ ಬದುಕಿಗೆ ಎಷ್ಟು ಅನಿವಾರ್ಯ ಮತ್ತು ಅಗತ್ಯ ಎಂಬ ಕಲ್ಪನೆ ಮೂಡುತ್ತದೆ.
ಹೆಂಡತಿಯಾಗಿ ಬರುವವಳಾದರೂ ಮೊರೆವ ಕಡಲನ್ನು ಸಂಧಿಸುವ ನದಿಯೇ ಅಲ್ಲವೆ? ಗಂಡಿನ ಒಡಲ ಬೀಜವನ್ನು ತನ್ನೊಳಗೆ ಹುದುಗಿಸಿ ಜೀವಸೆಲೆಯ ಕೊಟ್ಟು ಕ್ಷೀರಸಾಗರವುಣಿಸಿ ಪೊರೆಯುವ ನೀರೆ (ಹೆಣ್ಣೆ) ನೀನು ನಿಜಕ್ಕೂ ನೀರೆ!!
ಯೋಗೀಶ್ ಮಲ್ಲಿಗೆಮಾಡು
Saturday, 9 December 2017
ಹಕ್ಕಿಯ ಹಾಡು-- ಹಕ್ಕಿನ ಹಾಡು
ಬೇಲಿಯ ಸಾಲಲಿ ಉಲಿಯುವ ಹಕ್ಕಿ
ಸುಂದರ ಹಾಡನು ಹಾಡುತಿದೆ
ಬಯಲಲಿ ಆಡುವ ಪುಟಾಣಿ ಮಕ್ಕಳು
ನಲಿಯುತ ಕುಣಿಯುತ ಓಡುತಿಹೆ
ಬಣ್ಣದ ಗರಿಗಳ ರೆಕ್ಕೆಯು ಚೆಂದ
ಹಾರುವ ಹಕ್ಕಿಯ ಬೆಡಗಿನೊಲು
ಮಕ್ಕಳಿಗಂತು ಹಕ್ಕಿನ ರೆಕ್ಕೆ
ಬೇಕಿದೆ ಹಾರಲು ಬಾನಿನೊಳು
ಬದುಕುವ ಹಕ್ಕು, ಬೆಳೆಯುವ ಹಕ್ಕು
ಹೆಸರನು ಹೊಂದುವ ಹಕ್ಕುಗಳು
ಬೇಕಿದೆ ತಾನೆ ಪ್ರತಿ ಮಕ್ಕಳಿಗೂ
ಸಾಯದೆ ಬದುಕುವ ಉಸಿರುಗಳು
ತನ್ನದೆ ರಾಗ, ತನ್ನದೆ ಹಾಡು
ಹಕ್ಕಿಗೆ ತನ್ನದೆ ಆಲಾಪ
ತನ್ನತನವನು ನೀಡಿದ ಮಕ್ಕಳು
ಸಾಧಿಸಿತೋರ್ವರು ಬಹುರೂಪ
ಮರದಲಿ ಟೊಂಗೆಯ ಮೇಗಡೆ ಹಾಡುವ
ಹಕ್ಕಿಯ ತಿನ್ನಲು ಹೊಂಚುತಿದೆ
ಕಾಡಿನ ಬೆಕ್ಕೊ, ಹರಿಯುವ ಹಾವೊ
ಸದ್ದೇ ಮಾಡದೆ ಕಾಯುತಿದೆ
ಆಡುವ, ಬೆಳೆಯುವ ಮಕ್ಕಳಿಗಾದರು
ರಕ್ಷಣೆ ಹಕ್ಕು ಎಂಬುದಿದೆ
ದೈಹಿಕ, ಲೈಂಗಿಕ ಕಿರುಕುಳದಿಂದ
ಮಕ್ಕಳ ರಕ್ಷಣೆ ಬೇಕಿದೆ
ಹಾರುವ, ಹಾಡುವ ಹಕ್ಕಿಯು ತಾನು
ಪ್ರಕೃತಿಯಿಂದಲೆ ಕಲಿಯುತಿದೆ
ಅರಳುವ, ಬಿರಿಯುವ ಮಕ್ಕಳಿಗಂತು
ಶಾಲೆಯು ತಾನೆ ಕರೆಯುತಿದೆ
ಶಿಕ್ಷೆಯೆ ಇಲ್ಲದ ಶಿಕ್ಷಣ ನೀಡುವ
ನಗುತಲಿ ಕಲಿಯುವ ಶಾಲೆಯು ಬೇಕು
ಚಟುವಟಿಕೆಯಲಿ ತನ್ನನು ತೊಡಗಿಸಿ
ಚಿಂತನೆ ಹಚ್ಚುವ ಶಿಕ್ಷಣ ಬೇಕು
ಹೊಡೆತ ಬಡೆತದ ಶಿಕ್ಷಣದಲ್ಲಿ
ಬಿರಿಯುವ ಮೊಗ್ಗು ಬಾಡುತಿದೆ
ಹೂವಿನ ಹಾಗೆ ಅರಳುತ ಮಕ್ಕಳು
ವಿಕಸನಗೊಳ್ಳುವ ಹಕ್ಕುಯಿದೆ
ಮಕ್ಕಳ ಮಾತನು ಕೇಳಲಿ ಎಲ್ಲರು
ಮಕ್ಕಳ ವಿಚಾರ ಆಲಿಸಲಿ
ಮಕ್ಕಳ ನಿರ್ಣಯದಲ್ಲಿಯು ಕೂಡ
ಮಕ್ಕಳು ಭಾಗವಹಿಸಲಿ
ಮಯಸಿಗೆ ಮುನ್ನ ಮದುವೆಯು ಬೇಡ
ಕಲಿಯುವ ಮುನ್ನ ದುಡಿಮೆಯು ಬೇಡ
ಹಕ್ಕಿಯ ಹಾಗೆ ಹಾಡಲಿ ಮಕ್ಕಳು
ಹಕ್ಕಿಯ ಹಾಗೆ ಹಾರುತಲಿ
ಹಾರಲಿ ಹಕ್ಕಿ ರೆಕ್ಕೆಯ ಬಲದಲಿ
ನೀಲ ಬಾನಿನ ಬಯಲೊಳಗೆ
ಬೆಳೆಯಲಿ ಮಕ್ಕಳು ಹಕ್ಕಿನ ಬಲದಲಿ
ಮಕ್ಕಳ ಸ್ನೇಹಿ ಜಗದೊಳಗೆ
ಯೋಗೀಶ್ ಮಲ್ಲಿಗೆಮಾಡು
Friday, 10 November 2017
Saturday, 4 November 2017
ಹೆಸರಿಗಾಗಿ ಬರೆದ ಕವನವಲ್ಲ
ಇಂದು ಮುಂಜಾವಿಗೆ ಸದ್ದೇ ಇಲ್ಲದೆ ಸುರಿದ ಜಡಿ ಮಳೆಗೆ ಮೌನವಾಗಿ ಬೀಸಿದ ಗಾಳಿಯ ಸಾಥ್ ಇತ್ತು....
ಹೆಸರೇ ಹೇಳದೆ ಹಾಡಿದ ಹಕ್ಕಿಯ ಹಾಡಲ್ಲಿ ಅಹಂ ಇರಲಿಲ್ಲ....
ಎಲ್ಲೋ ಅರಳಿದ ಹೂವಿನ ಘಮ ತಾನು ಬಂದ ಊರಿನ ಹೆಸರೂ ತಿಳಿಸದೆ ಮೂಗಿಗೆ ಬಡಿದಿದೆ...
ಹರಿವ ನದಿ ನೆಲವ ಹಸಿರಾಗಿಸಿ ಪ್ರತಿಫಲವ ಬಯಸದೆ ಕಡಲ ತವಕಿಸಿ ಮುಂಬರಿದಿದೆ...
ಮನುಷ್ಯನೊಬ್ಬನೇ ತಾನೆ ಇಲ್ಲಿ ಹೆಸರಿಗಾಗಿ ತವಕಿಸಿ, ಆಂತರ್ಯದ ಸಂತಸವ ಮರೆತು ಬಡಬಡಿಸುತ್ತಿದ್ದಾನೆ.....!!!!
(ಹೆಸರಿಗಾಗಿ ಬರೆದ ಕವನವಲ್ಲ)
Wednesday, 1 November 2017
ಉತ್ತರ ಬಯಸಿದ ಪ್ರಶ್ನೆಗಳು
ಒಡೆದ ತುಟಿ, ಕೈಕಾಲುಗಳಿಗೆ ಇಲ್ಲಿದೆ
ವ್ಯಾಸಲಿನ್, ಕ್ರ್ಯಾಕ್ರೀಮುಗಳು
ಒಡೆದ ಸಂಬಂಧಗಳಿಗಿಲ್ಲಿ ಯಾವ ಲೇಪ....?
ಮುರಿದ ವಸ್ತುಗಳಿಗೆ ಫೆವಿಕಾಲ್, ಫೆವಿಕ್ವಿಕ್ಕುಗಳು
ಮುರಿದ ಮನಸುಗಳಿಗೆ ಇಲ್ಲಿ ಯಾವ ಅಂಟು ಮೇಣ...??
ಅನ್ನ ಹಳಸದೇ ಇರಲು ಇಲ್ಲಿ ರೆಫ್ರಿಜ್ಜರೇಟರುಗಳು
ಬಾಂಧವ್ಯ ಹಳಸದಿರಲು ಯಾವ ಪೆಟ್ಟಿಗೆ....???
ನಮ್ಮ ಸಂಭ್ರಮಗಳ ಹಂಚಿಕೊಳ್ಳಲು ಇಲ್ಲಿ ವಾಟ್ಸ್ ಆ್ಯಪ್, ಫೇಸ್ ಬುಕ್ಕುಗಳು
ಕುಳಿತು ದುಃಖವ ಕೇಳಲು ಯಾವ ಜಾಲತಾಣ....????
ದೂರದೂರದವರನು ಆಲಿಸಲು ಇಲ್ಲಿ ಕಾನ್ಫರೆನ್ಸ್, ಮೊಬೈಲು, ಸ್ಕೈಪುಗಳು
ಪಕ್ಕದ ಮನೆಯವರ ಕಷ್ಟ ಆಲಿಸಲು ಯಾವ ಕನೆಕ್ಷನ್...???
(ಯೋಗೀಶ್ ಮಲ್ಲಿಗೆಮಾಡು)
Tuesday, 31 October 2017
ತುಳಸಿ ವಿವಾಹ
"ವೃಂದ್ಯಾಯ್ಯೆ, ತುಳಸಿ ದೇವ್ಯೆಯ್ಯೆ, ಪ್ರಿಯಾಯ್ಯೆ ಕೇಶವಸ್ಯ ಚ
ಕೃಷ್ಣ ಭಕ್ತಿ ಪ್ರದೆ ದೇವಿ, ಸತ್ಯವತ್ಯೆಯ್ಯೆ ನಮೋ ನಮಃ"
🌿🌿🌿🌿🌿🌿🌿🌿🌿🌿🌿
ಭಾರತೀಯ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಔಷಧೀಯ ಏವಂ ಪಾವಿತ್ರ್ಯದ ಸ್ಥಾನವನ್ನು ಕಲ್ಪಿಸಲಾಗಿದೆ... ಹಿಂದು ಧರ್ಮವು ತುಳಸಿಯನ್ನು ದೈವಿಕ ಎಂದೂ ಭಾವಿಸಿದೆ... ವೈಷ್ಣವಿ, ಹರಿಪ್ರಿಯಾ, ಶ್ರೀ ತುಳಸಿ, ರಾಮಾ ತುಳಸಿ, ಕೃಷ್ಣ ತುಳಸಿ ಮುಂತಾದ ಹೆಸರಿನಿಂದ ತುಳಸಿಯನ್ನು ಕರೆಯುತ್ತಾರೆ...
🌿🌿🌿🌿🌿🌿🌿🌿🌿🌿🌿
ವಿಷ್ಣುವಿಗೆ ಅತ್ಯಂತ ಪ್ರಿಯ ಎಂದು ಭಾಗವತ ಪುರಾಣ ಹಾಗೂ ಇತರೆ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ...
🌿🌿🌿🌿🌿🌿🌿🌿🌿🌿🌿
ಕೃಷ್ಣನನ್ನು ತುಳಸಿಯ ದಳದಿಂದ ತೂಗಿದ ಕಥೆ ಜನಜನಿತ... "ಒಲ್ಲನೊ ಹರಿ ಕೊಳ್ಳನೊ, ಎಲ್ಲಾ ಸಾಧನವಿದ್ದು ತುಳಸಿ ಇಲ್ಲದ ಪೂಜೆ" ಎಂದು ಪುರಂದರ ದಾಸರು ತುಳಸಿಯ ಪಾರಮ್ಯವನ್ನು ಹಾಡಿಕೊಂಡಾಡಿದ್ದಾರೆ....
🌿🌿🌿🌿🌿🌿🌿🌿🌿🌿🌿
ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ರಾತ್ರಿ ತುಳಸಿ ಗಿಡವನ್ನು ನೆಲ್ಲಿಯ ಗಿಡದೊಂದಿಗೆ ಪೂಜಿಸಿ ವಿವಾಹ ಸಂಪನ್ನಗೊಳಿಸಲಾಗುತ್ತದೆ... ಮುಂದೆ ಬರುವ ಮಾಘಮಾಸದ ಚಳಿಯ ಕುಳಿರ್ಗಾಳಿಗೆ ದೇಹಕ್ಕೆ ನೆಲ್ಲಿ ಮತ್ತು ತುಳಸಿ ಉತ್ತಮ ಔಷಧೀಯ ಸಸ್ಯಗಳು... ಈ ನಿಟ್ಟಿನಲ್ಲಿ ಇವುಗಳ ಪೂಜೆ ಸಾಂಕೇತಿಕವೂ ಹೌದು...
🌿🌿🌿🌿🌿🌿🌿🌿🌿🌿🌿
ಚಾತುರ್ಮಾಸ ಮುಗಿಸುವ ಸ್ವಾಮೀಜಿಗಳು ತುಳಸಿ ವಿವಾಹ ನೆರವೇರಿಸಿ ತಮ್ಮ ದೈನಂದಿನ
ವೃತದಲ್ಲಿ ಮುಂದುವರೆಯುತ್ತಾರೆ.... ತುಳಸಿ ವಿವಾಹವು ನಂತರದ ತಿಂಗಳುಗಳಲ್ಲಿ ಬರುವ ಮದುವೆಗಳಿಗೆ ಅಧಿಕೃತ ಚಾಲನೆಯೂ ಹೌದು...
🌿🌿🌿🌿🌿🌿🌿🌿🌿🌿🌿
ತುಳಸಿ ಬೃಂದಾವನವು ಸಕಲ ಆಯಃ, ಆರೋಗ್ಯ, ಸ್ವಸ್ಥ ಮನಸ್ಸು, ಐಶ್ವರ್ಯ ಸಿದ್ಧಿ ಕರುಣಿಸಿ ಕಾಪಾಡಲಿ.....
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
ಕನ್ನಡ ರಾಜ್ಯೋತ್ಸವ
ಜನಪದ, ಚಂಪೂ, ರಗಳೆ, ತ್ರಿಪದಿ, ವಚನ, ಕೀರ್ತನೆ, ನವ್ಯ, ಪ್ರಗತಿಶೀಲ, ನವೋದಯ, ದಲಿತ, ಬಂಡಾಯ ಮುಂತಾದ ಸಾಹಿತ್ಯದಿಂದ 📚
ಯಕ್ಷಗಾನ, ಕೋಲಾಟ, ಹಗಲುವೇಷ, ಡೊಳ್ಳುಕುಣಿತ, ಕಂಸಾಳೆ,
ಮುಂತಾದ ನ್ರತ್ಯ ಪ್ರಕಾರದಿಂದ 💃🏻🏃🏽
ಸೋಬಾನೆ ಹಾಡು, ಗೀಗಿಪದ, ಪಾಡ್ದಾನ, ಓಬೇಲೆ ಹಾಡು, ಭಾವಗೀತೆ ಮುಂತಾದ ಪದ್ಯ ಪ್ರಕಾದಿಂದ 🎤🎼
ಪಂಪ, ರನ್ನ, ಪೊನ್ನ, ಜನ್ನ, ಕುವೆಂಪು, ದ ರಾ ಬೇಂದ್ರೆ ಮೊದಲಾದ ಮಹಾಕವಿಗಳಿಂದ ✍🏼
ಮಲೆಗಳಲ್ಲಿ ಮದುಮಗಳು, ಕಾನೂರ ಹೆಗ್ಗಡತಿ, ದಾಟು, ಮೂಕಜ್ಜಿಯ ಕನಸುಗಳು, ಗ್ರಹಭಂಗ, ಸಂಸ್ಕಾರ ಮುಂತಾದ ಅದ್ಭುತ ಕಾದಂಬರಿಗಳಿಂದ 📚
ಚಾಳುಕ್ಯ, ಕದಂಬ, ಗಂಗ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮೊದಲಾದ ರಾಜಮನೆತನಗಳಿಂದ⚔🛡
ಬಸವಣ್ಣ, ದಾಸರು, ಷರೀಫರು, ಅಕ್ಕ ಮಹಾದೇವಿ ಮತ್ತು ಇತರೆ ವಚನಕಾರ್ತಿಯರು ಮೊದಲಾದ ಚಿಂತಕರಿಂದ 👳🏽👩🏾
ಕರಾವಳಿ, ಮಲೆನಾಡು, ಬಯಲುಸೀಮೆ, ಬೆಟ್ಟ, ಗುಡ್ಡ, ಬಂಡೆ, ಝರಿ ತೊರೆ ಸಮುದ್ರಗಳಿಂದ 🏔🏖
ಹಲ್ಮಡಿ, ಆತಕೂರು, ದೇಕಬ್ಬೆ ಮುಂತಾದ ಶಾಸನಗಳಿಂದ ⚠
ಹಲವು ಜನಾಂಗ, ಜಾತಿ, ಮತ, ಪಂಥ, ಧರ್ಮಗಳಿಂದ 👦🏻👲🏼🎅🏻
ಮಂದಿರ, ಮಸೀದಿ, ಇಗರ್ಜಿ, ಸ್ತೂಪ, ವಿಹಾರ, ಜಿನಾಲಯಗಳಿಂದ 🕋🕍⛪🕌
ಖಾದ್ಯ ವೈವಿಧ್ಯಗಳಿಂದ 🍲🍵☕
"ಕನ್ನಡ" ಎಂಬ ಶಬ್ಧಮಣಿ ಮೂಲಕ ಒಟ್ಟಾಗಿರುವ ಸಂಪದ್ಭರಿತ ಕರ್ನಾಟಕದ "ಕನ್ನಡ ರಾಜ್ಯೋತ್ಸವ" ಶುಭಾಶಯಗಳು
"ಯೋಗೀಶ್ ಮಲ್ಲಿಗೆಮಾಡು"🙏🏽🙏🏽
Thursday, 19 October 2017
ದೀಪದ ಸಾಲು
ಮಣ್ಣಿನ ಧರ್ಮ ಒತ್ತಿದ ಆಕಾರದ ರೂಪು ಪಡೆಯುವುದು
ಹತ್ತಿಯ ಧರ್ಮ ಮ್ರದುತ್ವ
ಎಣ್ಣೆಯ ಧರ್ಮ ನೆನೆಸುವುದು
ಬೆಂಕಿಯ ಧರ್ಮ ಉರಿಸುವುದು
ಗಾಳಿಯ ಧರ್ಮ ಬೆಂಕಿಯಂತಹ ಬೆಂಕಿಯನ್ನೂ ನಂದಿಸುವುದು 🌪
ಆದರೆ, ಭಿನ್ನ ಧರ್ಮಗಳ ಈ ಎಲ್ಲಾ ವಸ್ತುಗಳು ಜೊತೆ ಸೇರಿದಾಗ ಮಾತ್ರ ನಿಚ್ಚಳ ಬೆಳಕು....
ಜೀವನವಾದರೂ ಅಷ್ಟೇ, ಹಲವು ಭಿನ್ನ ಧರ್ಮಗಳು
ಭಿನ್ನ ವ್ಯಾಖ್ಯಾನಗಳು
ಭಿನ್ನ ಸಿದ್ಧಾಂತಗಳು
ಆದರೆ, ಈ ಭಿನ್ನ ಧರ್ಮಗಳ ಮೂಲ ತತ್ವ ಮಾತ್ರ ಶಾಂತಿ.
ಶುಭ ದೀಪಾವಳಿ
ಯೋಗೀಶ್ ಮಲ್ಲಿಗೆಮಾಡು
ದೀಪದ ಕವಿತೆಗಳು
ನೀ ಬರುವ ಹಾದಿ ಕಾಯುತ್ತಾ,
ದಶಕಗಳಿಂದಲೂ ಒಂಟಿಯಾಗೇ ಬೆಳಗುತ್ತಿರುವೆ
ಈ ದೀಪದಂತೆ.
****************************************
ಈ ದೀಪಾವಳಿಗೆ ನೀನಿರುತ್ತಿದ್ದರೆ
ನಾವಿಬ್ಬರೂ ಕಣ್ಣಲ್ಲೇ ದೀಪ ಹಚ್ಚಬಹುದಿತ್ತು!! ****************************************
ಬದುಕೆಂಬ ಖಾಲಿ ತೂತಿನ ಜೋಳಿಗೆ ಧರಿಸಿ,
ಬಾಳ ಹಾದಿಯಲಿ ಸಿಕ್ಕ ಪ್ರೀತಿಯನ್ನ ಅದೇ ಜೋಳಿಗೆಗೆ ಇಳಿಸಿ,
ಸಾಗುತ್ತಿರುವ ಈ ಬರಿಗೈಯ ಫಕೀರನ ಕಣ್ಣ ತುಂಬಾ,
ಮೂರು ದಿನದ ದೀಪಾವಳಿಯ ಸಂಭ್ರಮ.
****************************************
ದೀಪದಿಂದ ಮಾತ್ರ ದೀಪವನ್ನು ಹಚ್ಚಬಹುದು,
ಪ್ರೀತಿಯಿಂದ ಮಾತ್ರ ಪ್ರೀತಿ.
ಬರೀ ಹಣತೆ, ಬರೀ ಎಣ್ಣೆ, ಬರೀ ಬತ್ತಿ, ಬರೀ ಗಾಳಿ,
ದೀಪ ಉರಿಯಲು ಸಾಧ್ಯವಿಲ್ಲ,
ಎಲ್ಲವೂ ಜೊತೆಯಾದಾಗ ಬೆಳಕು.
ಬದುಕಿನಲ್ಲೂ ಅಷ್ಟೇ...
*****************************************
ಈ ದೀಪಾವಳಿಗೆ ನೀ ಜೊತೆಗಿರುತ್ತಿದ್ದರೆ,
ಮನಮನೆಯ ತುಂಬಾ ಸಾವಿರ ದೀಪದ ಹೊಳಪಿರುತ್ತಿತ್ತು,
ಕಂಗಳಲಿ ನೂರು ಮತಾಪಿನ ಸಿಡಿತದ ಸಂಭ್ರಮವಿರುತ್ತಿತ್ತು,
ಎದೆಯಲ್ಲಿ ಆಕಾಶ ದೀಪದ ಹೂಮಾಲೆಯ ಬೆಳಕಿರುತ್ತಿತ್ತು.
*****************************************
ಮನೆಯೊಳಗೆ ಬೆಳಗುವ ಹಣತೆ,
ಎದೆಯೊಳಗೆ ಉರಿಯುವ ಭರವಸೆಯ ದೀಪ,
ಎರಡೂ ಹೊರಗಿನ ಗಾಳಿಗೆ ಆರದಿರಲಿ!
*****************************************
ಈ ದೀಪಾವಳಿಗೆ
ನಿನ್ನ ಕಣ್ಣಲ್ಲಿ ಬೆಳಗುವ ಹಣತೆ,
ನನ್ನ ಕಣ್ಣ ಹಣತೆಗಳ ಬೆಳಗೀತೆ...?
*****************************************
ಮನೆಯ ಮುಂದಿನ ಗೋಡೆಯ ಮೇಗಡೆ,
ಸಾಲಾಗಿ ಬೆಳಗುವ ಮಣ್ಣ ಹಣತೆಗಳು
ಗೋಡೆಯಾಚೆಗಿನ ಸಂಬಂಧವನು ಬೆಳಗಲಿ..
*****************************************
ಸಾವಿರ ದೀಪದ ಸಾಲುಗಳು ಬೆಳಗಿ ಕರಗುತ್ತವೆ
ಕತ್ತಲಷ್ಟೇ ಮೂಡಿ...
ಬೆಳಗಿದ ಹಣತೆ ತೋರಿದ ಸತ್ಯ ಉಳಿಯುತ್ತದೆ ಮನದಲ್ಲಿ ನೋಡಿ...
ಯೋಗೀಶ್ ಮಲ್ಲಿಗೆಮಾಡು
Wednesday, 18 October 2017
ದೀಪಾವಳಿಗೆ ಇದನ್ನೊಮ್ಮೆ ಓದಿರಿ
ದೀಪಾವಳಿಯೊಂದು ವಿಶೇಷವಾದ ಹಬ್ಬ. ಬೇರೆಲ್ಲಾ ಹಬ್ಬಕ್ಕಿಂತ ಭಿನ್ನವಾದ ಸಾವಿರ ಅರ್ಥಗಳ ಹೊಳೆಯಿಸುವ ಬೆಳಕಿನ ಹಬ್ಬ!!
ಜಗತ್ತಿನ ಮೂಲ ತತ್ವವೇ ಶಾಖ ಅರ್ಥಾತ್ ಅಗ್ನಿ. ನಾವೆಲ್ಲರೂ ಬದುಕುತ್ತಿರುವುದಕ್ಕೆ ಮೂಲಕಾರಣ ಸೂರ್ಯ (ಅಗ್ನಿ). ಸೂರ್ಯ ಎನ್ನುವ ಕೇಂದ್ರ ಸ್ಥಾನವೇ ಇಲ್ಲದಿದ್ದರೆ? ಎಲ್ಲಿಯ ಮಳೆ? ಎಲ್ಲಿಯ ಬೆಳೆ? ಎಲ್ಲಿಯ ನೀರು? ಎಲ್ಲಿಯ ಜೀವಿಗಳು?
ಹಾಗಾಗಿ, ಅಂತಹ ಅಗ್ನಿಯನ್ನು ದೀಪಗಳ ಸಾಲಲ್ಲಿ ಪ್ರತಿಷ್ಠಾಪಿಸುವ ತನ್ಮೂಲಕ ಸಾಲು ಸಾಲು ದೀಪಗಳ ಶಾಖೋತ್ಪನ್ನದಲ್ಲಿ ಬದುಕಿನ ಅರ್ಥವನ್ನು ಅರ್ಥೈಸುವ ಈ ಹಬ್ಬದ ಹಿಂದೆ ಎಂತಹ ಉದ್ಧಾತ ಕಲ್ಪನೆ!!!
ಇನ್ನು ಮಾನವನ ಜೀವಿತದ ಮೂಲ ತತ್ವ ಉಸಿರು ಅರ್ಥಾತ್ ಗಾಳಿ. ನಾವೆಲ್ಲರೂ ಜೀವಿಸುತ್ತಿರುವುದಕ್ಕೆ ಮೂಲ ಕಾರಣ ಉಸಿರು (ಗಾಳಿ). ಉಸಿರು ಎಂಬ ಮೂಲ ತತ್ವ ಇಲ್ಲದಿದ್ದರೆ? ಎಲ್ಲಿಯ ಬದುಕು? ಎಲ್ಲಿಯ ಚೇತನ? ಎಲ್ಲವೂ ಬರೀ ಶವ.
ಅಲ್ಲಿಗೆ ನಾವು ಬದುಕುವುದಕ್ಕೆ ಶಾಖ ಬೇಕು ಮತ್ತು ಜೀವಿಸುವುದಕ್ಕೆ ಗಾಳಿ. ಎರಡೂ ಪ್ರಮುಖವಾದವು.
ದೀಪದಲ್ಲಿರುವುದು ಶಾಖ ಮತ್ತು ದೀಪ ಬೆಳಗಲು ಗಾಳಿ ಬೇಕು. ಗಾಳಿ ಅತಿಯಾದರೆ ದೀಪ ನಂದುತ್ತದೆ. ಹಾಗೆಂದು ಗಾಳಿಯೇ ಅತಿಶಾಖದಿಂದ ಕೂಡಿದರೆ ಬದುಕು ಅಸಾಧ್ಯ ಮತ್ತು ಗಾಳಿ ಅತಿ ಶೀತಲವಾದರೂ ಬದುಕು ಅಸಾಧ್ಯ. ದೀಪದಲ್ಲಿ ಸಮನಾದ ಗಾಳಿ ಇದ್ದರೆ ದೀಪ ಬೆಳಗುತ್ತದೆ, ಗಾಳಿಯಲ್ಲಿ ಮಿತವಾದ ಶಾಖವಿದ್ದರೆ ಹಿತವಾಗುತ್ತದೆ. ಅರ್ಥಾತ್ ಗಾಳಿ ಮತ್ತು ಶಾಖದ ಸಮವಾದ ಮಿಲನ ಮಾತ್ರ ಬದುಕನ್ನು ಹಸನಾಗಿಸುತ್ತದೆ. ಈ ಭೂಮಿಯಾದರೂ ಗಾಳಿ ಮತ್ತು ಶಾಖದ ಹಿತಮಿತವಾದ ವ್ಯವಸ್ಥೆಯೆ ಆಗಿದೆ.
ದೀಪಾವಳಿಯೂ ಇದೆ ತತ್ವದ ಹಬ್ಬ ಅಲ್ಲವೆ? ಸೂರ್ಯನೇ (ಅಗ್ನಿ) ಇರದ ಮಳೆಗಾಲದಿಂದ ಚಳಿಗಾಲದ ಶೀತಗಾಳಿಯ ಕಡೆಗೆ ಹೊರಳುವ ಈ ಸಂಧಿಕಾಲದಲ್ಲಿ ಹಣತೆ ಹಣತೆಗಳಲ್ಲಿ ದೀಪ ಹಚ್ಚಿ ಶಾಖ ಮತ್ತು ಗಾಳಿಯ ಮೂಲ ಕಲ್ಪನೆಯ ಜೊತೆ ಸಮೀಕರಿಸುವ ದೀಪಾವಳಿ ಹಬ್ಬ ಸನಾತನ ಧರ್ಮದ ಅಮೋಘ ಆಚರಣೆಯಲ್ಲೊಂದು.
ಸರಿ ಎನಿಸಿದರೆ ಇತರರೊಡನೆ ಹಂಚಿಕೊಳ್ಳಿ.
ರಚನೆ: ಯೋಗೀಶ್ ಮಲ್ಲಿಗೆಮಾಡು
Friday, 29 September 2017
ತನ್ನೊ ದುರ್ಗಾ ಪ್ರಚೋದಯಾತ್
ಇಲ್ಲಿಗೆ ನವದುರ್ಗೆಯರ *ಅವತಾರಗಳ ವಿಶ್ಲೇಷಣೆಗೆ* ವಿರಾಮ ಹೇಳುತ್ತಾ.....
ಹೀಗೆ ನವರಾತ್ರಿಯಲ್ಲಿ ನವದುರ್ಗೆಯರ *ಸ್ಮರಣೆ, ಪಠನೆ, ಸಂಕೀರ್ತನೆಗಳಿಂದ* ಬದುಕಿನ ಜಂಜಡಗಳನ್ನು ದಾಟಿ ಬರುವುದೇ *ವಿಜಯ.* ತಸ್ಮಾತ್ *ವಿಜಯದಶಮಿ* ಪ್ರಮುಖವಾಗುತ್ತದೆ. ನವರಾತ್ರಿ ಕಳೆದು ಹತ್ತನೇ ದಿನ ಆಚರಿಸುವ ವಿಜಯದಶಮಿ, *ದೇಹ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಿ ವಿಜಯವನ್ನು ಗಳಿಸುವ ಸಂದೇಶವನ್ನು ನೀಡುತ್ತದೆ...*
*"ದುರ್ಗಾ ದುರ್ಗತಿ ನಾಶಿನಿ"* ಅರ್ಥಾತ್ ದುರ್ಗತಿಯನ್ನು ನಾಶ ಮಾಡುವವಳು ದುರ್ಗೆ ⚔. *ದುರ್ಗಾ* ಎಂದರೆ *ಕೋಟೆ,* *ರಕ್ಷಣೆ* ಎನ್ನುವ ಅರ್ಥವೂ ಇದೆ. ಅಂದರೆ ಎಲ್ಲಾ ರೀತಿಯ ಕಷ್ಟಗಳಲ್ಲಿ ತಾಯಿ ದುರ್ಗೆಯ ಸ್ಮರಣೆ ಮಾಡಿದರೆ ಆಕೆ ಕೋಟೆಯಂತೆ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಾಳೆ ಅನ್ನುವುದೊಂದು ನಂಬಿಕೆ....
ನವರಾತ್ರಿಯು ಒಂಭತ್ತು 9ರಾತ್ರಿಗಳನ್ನು ಪ್ರತಿನಿಧಿಸುತ್ತವೆ. *ರಾತ್ರಿ* ಅಂದರೆ *ಕತ್ತಲು,* *ಕತ್ತಲು* ಎಂದರೆ *ನಕಾರಾತ್ಮಕತೆ* (negativity).... ನಮ್ಮ ದೇಹದ ನವದ್ವಾರದ ಮೂಲಕ ಬರುವ *ಕಾಮ, ಕ್ರೋಧ,ಮೋಹ, ಲೋಭ, ಮದ, ಮತ್ಸರವನ್ನು* ನಾಶ ಮಾಡುವ ಸಂದೇಶ ನೀಡುತ್ತದೆ.
ದೇಹದ *ಸಪ್ತ ಚಕ್ರಗಳನ್ನು*ಈ ನವದುರ್ಗೆಯರು ಪ್ರತಿನಿಧಿಸಿ ಚಕ್ರಗಳನ್ನು ಜಾಗ್ರತಗೊಳಿಸಿ, ಪರಿಶುದ್ಧತೆಯಲ್ಲಿ ಸಿದ್ಧಿಗಳಿಸುವ ಸಂದೇಶವನ್ನು ನೀಡುತ್ತಾರೆ.
ದೇವಿಯ ಬಗೆ ಬಗೆಯ ರೂಪಗಳು
*ಪ್ರಕ್ರತಿ ಆರಾಧನೆ (ಶೈಲ ಪುತ್ರಿ)*
*ಜ್ಞಾನಾರ್ಜನೆ (ಬ್ರಹ್ಮಚಾರಿಣಿ)*
*ನಕಾರಾತ್ಮಕತೆಯ ನಾಶದಿಂದ ಮನಃಕ್ಲೇಶ ನಿವಾರಣೆ (ಚಂದ್ರಘಂಟ)*
*ನಗು ನಲಿವಿನಿಂದ ಸಕಾರಾತ್ಮಕ ಪ್ರಭೆ (ಕೂಷ್ಮಾಂಡ)*
*ಮಾತ್ರ್ ವಾತ್ಸಲ್ಯ ಕರುಣೆ (ಸ್ಕಂದ ಮಾತಾ)*
*ವಿಷಯಸುಖಗಳ ಮೇಲಿನ ಹಿಡಿತ (ಕಾತ್ಯಾಯಿನಿ)*
*ದುಷ್ಟತೆಗಳ ನಾಶ ಸತ್ಯ ನ್ಯಾಯ ಧರ್ಮಗಳ ಪಾಲನೆ (ಕಾಲರಾತ್ರಿ)*
*ಶಾಂತಿಯೊಂದಿಗೆ ಬದುಕಿನ ಪರಿಶುದ್ಧತೆ (ಮಹಾಗೌರಿ)*
*ಸಾರ್ಥಕ್ಯದ ಬದುಕಿನೊಂದಿಗೆ ಸಿದ್ಧಿ (ಸಿದ್ಧಿಧಾತ್ರಿ)*
ಬದುಕಿಗೆ ಪಾಠವೇ ಆಗಿದೆ.
*ಶಮಿ ಶಮಯತೆ ಪಾಪಂ, ಶಮಿ ಶತ್ರು ವಿನಾಶಿನಿ| ಅರ್ಜುನಸ್ಯ ಧನುರ್ಧಾರಿ, ರಾಮಸ್ಯ ಪ್ರಿಯದರ್ಶಿನಿ||
*ಶಮಿ (ಬನ್ನಿ)* ಮರ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಿದ್ದಾರೆ.. *ಬನ್ನಿಯ ಎಲೆ ಬಂಗಾರಕ್ಕೆ ಸಮ ಅಂತಾರೆ....* ಆದುದರಿಂದ ಇದರ ಎಲೆ ಕೊಟ್ಟು *" ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ"* ಅಂತ ಹೇಳಿ ಹಳೆ ಕೋಪ ಮನಸ್ತಾಪ ಮರೆತು ಮತ್ತೆ ಬೆರೆತು ಬಾಳುತ್ತಾರೆ.
ಈ ಒಂಭತ್ತು ದಿನಗಳ ವಿಶ್ಲೇಷಣೆಯು ನಮ್ಮೊಳಗಿನ *ಮಾನವತ್ವವನ್ನು* *ದೈವಿಕತ್ವದೆಡೆ* ಕೊಂಡೊಯ್ಯಲಿ ತನ್ಮೂಲಕ *"ಅಹಂ ಬ್ರಹ್ಮಾಸ್ಮಿ"*ಎನ್ನುವ ಕಲ್ಪನೆ ಮೂಡಲಿ ಎಂದು ಆಶಿಸುತ್ತಾ, ವಿಜಯದಶಮಿ ಶುಭಾಶಯಗಳು ಧನ್ಯವಾದಗಳು
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
Thursday, 28 September 2017
ಸಿದ್ಧಿಧಾತ್ರಿ
ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು *ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ.* ಆ ಮೂಲಕ ಬಗೆಬಗೆಯ *ಸಿದ್ಧಿಗಳನ್ನೂ ಕರುಣಿಸುವ ಮಹಾಪರ್ವ ನವರಾತ್ರಿ.*
ನವರಾತ್ರಿಯ ಒಂಭತ್ತನೆ 9ದಿನ ಪೂಜಿಸಲ್ಪಡುವವಳು *ಸಿದ್ಧಿಧಾತ್ರಿ* 🙏:
ಹೆಸರೇ ಸೂಚಿಸುವಂತೆ *ಸಿದ್ಧಿಧಾತ್ರಿ*ಬಗೆ ಬಗೆಯ ಸಿದ್ಧಿಗಳನ್ನು 🙌 ನೀಡುವವಳು.
*ಅಷ್ಟಸಿದ್ಧಿಗಳಾದ "ಅನಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಖ್ಯಮ್ಯ, ಇಷಿತ್ವ, ವಷಿತ್ವ"* ಇವುಗಳನ್ನು ನೀಡುತ್ತಾಳೆ ಎಂದೂ ಉಲ್ಲೇಖಿಸಿದೆ....
ಶಿವನು 👤ಈಕೆಯನ್ನು ಪೂಜಿಸಿ 🙏ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ.... ಶಕ್ತಿಯನ್ನು ಒಲಿಸಿದ ಶಿವ *ಅರ್ಧನಾರೀಶ್ವರನಾದ*👫.... ಗಂಡು ಹೆಣ್ಣು ಒಂದೇ ಎಂದು ಸಾರಿದ್ದು *ಅರ್ಧನಾರೀಶ್ವರ ತತ್ವ...*
ಈಕೆ ಕಮಲದ 🌷ಮೇಲೆ ಕುಳಿತಿದ್ದು *ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ...*
*ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ* ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ.....
*ತಂತ್ರ ಮಾಡುವವರು, ಸಾಧಕರು, ಯೋಗಿಗಳು* ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ...
ಎಲ್ಲಾ ಚಕ್ರ ಜಾಗ್ರತವಾದ ಮೇಲೆ ಮನುಷ್ಯ *ಮಹಾಗೌರಿಯಂತೆ* ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ *ಸಿದ್ಧಿಯನು ಹೊಂದಬಹುದು...* ತಥಾ ಸಿದ್ಧಿದಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ....
*ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ| ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||*
ಸಿದ್ಧಿದಾತ್ರಿ ಸಕಲ ಸಿದ್ಧಿಯನ್ನು ಕರುಣಿಸಲಿ
*ಆಯುಧಪೂಜೆಯನ್ನೂ* 🔫🔪🔨💉📺📠💻🚴🏇 ಇದೆ ದಿನ ನೆರವೇರಿಸಲಾಗುತ್ತದೆ... *ಪಾಂಡವರು* ಇದೆ ದಿನ *ವನವಾಸದಿಂದ ವಾಪಾಸಾಗಿ ತಮ್ಮ ಶಸ್ತ್ರಗಳನ್ನು ತಾವು ಬಚ್ಚಿಟ್ಟ ಶಮಿ (ಬನ್ನಿ)🌿 ಮರದಿಂದ ತಗೆದು ಅದಕ್ಕೆ ಪೂಜೆಯನ್ನು ಸಲ್ಲಿಸಿದರು ಎಂಬ ಪ್ರತೀತಿ ಇದೆ....*
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
Wednesday, 27 September 2017
ಮಹಾಗೌರಿ
ನವರಾತ್ರಿಯು ಕಲ್ಮಶಗಳನ್ನು ಕಳೆದು *ಪರಿಶುದ್ಧತೆಯನ್ನು ಧಾರಣೆಮಾಡುವ ಸಂಕೇತವನ್ನು ನೀಡುತ್ತದೆ.* ತಸ್ಮಾತ್ ನವರಾತ್ರಿಯು *ಕೆಡುಕಿನ ಮೇಲಿನ ಒಳಿತಿನ ಗೆಲುವಾಗಿದೆ.*
ನವರಾತ್ರಿಯ ಎಂಟನೇ 8ದಿನ ಪೂಜಿಸಲ್ಪಡುವವಳು *"ಮಹಾಗೌರಿ"* 👰🏻:
*ಗೌರಿ* 👰🏻 ಎಂದರೆ *ಬಿಳಿ* ⚪ಎನ್ನುವ ಅರ್ಥ ನೀಡುತ್ತದೆ. ಮಹಾಗೌರಿಯು ಬಿಳಿಯ ಮೈಬಣ್ಣ ಹೊಂದಿದ್ದು *ಶ್ವೇತ ವಸನ* ಧಾರಿಯಾಗಿ ಆಕೆಯನ್ನು ಉಲ್ಲೇಖಿಸಿದೆ. ಅಚ್ಚ ಬಿಳುಪಿನ ಶುಭ್ರವರ್ಣವಾಗಿ ಕಂಡು ಬರುವ ಈಕೆಯ *ಶುಭ್ರತೆಯನ್ನು ಶಂಖ ಅಥವಾ ಚಂದ್ರನಿಗೆ 🌝 ಸಮೀಕರಿಸಿದೆ....*
ಶಿವನಿಗಾಗಿ 👤ತಪಸ್ಸನ್ನು ಮಾಡಿದ *ಬ್ರಹ್ಮಚಾರಿಣಿಯು*👱🏻♀ ಗಾಳಿ, ಮಳೆ, ಬಿಸಿಲಿಗೆ ಕಪ್ಪಗಾಗಿ ಶಿವನೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎಂಬ ವಿಚಾರವನ್ನು ಹಿಂದಿನ ರೂಪದಲ್ಲಿ ಕೇಳಿದ್ದೆವು.... ಮುಂದುವರೆದು *ಶಿವನು ಆಕೆಯನ್ನು ಗಂಗಾ ನದಿಯಲ್ಲಿ 🌊🌊 ಸ್ನಾನ ಮಾಡಿಸಿದಾಗ ಆಕೆಯ ಕಪ್ಪು ವರ್ಣ ⚫ತೊಳೆದು ಶುಭ್ರವಾದಳು ⚪ ಎಂಬ ಪ್ರತೀತಿ ಇದೆ....* ಅರ್ಥಾತ್ *ಮನಸ್ಸಿನ 🙇 ಆಂತರ್ಯದಲ್ಲಿರುವ ಕೊಳೆ, ಕಲ್ಮಶಗಳನು ಜ್ಞಾನ ಗಂಗೆಯಿಂದ 📚🌊🌊 ತೊಳೆದಾಗ ಬದುಕು ಶುಭ್ರವಾಗುತ್ತದೆ....* ತಥಾ ಮಹಾಗೌರಿಯ ಸ್ಮರಣೆ ಬದುಕನ್ನು ಶುಭ್ರಗೊಳಿಸಿ ಬೆಳಗುತ್ತದೆ....
ಮಹಾಗೌರಿಯು *ನಂದಿ*ಯನ್ನು 🐄ವಾಹನವಾಗಿ ಹೊಂದಿದ್ದು... *ಚತುರ್ಭುಜ* ಹೊಂದಿದ್ದಾಳೆ... *ತ್ರಿಶೂಲ ಮತ್ತು ಢಮರು ಹಾಗೂ ಅಭಯಮುದ್ರೆಯನ್ನು ಧರಿಸಿದ್ದಾಳೆ....*
ಈಕೆಯದು *ಸಾತ್ವಿಕ ರೂಪ.* ಶಾಂತಿ, ಪಾವಿತ್ರ್ಯ, ಪರಿಶುದ್ಧತೆ, ಸಮ್ರದ್ಧಿಯನ್ನು ಈಕೆ ಕರುಣಿಸುತ್ತಾಳೆ.... ಈಕೆಯನ್ನು *"ಶ್ವೇತಾಂಬರಧರಾ"* ಎಂದೂ ಈಕೆಯನ್ನು ಕರೆಯುತ್ತಾರೆ....
*ಯೋಗದಲ್ಲಿ ಈಕೆ ಯಾವುದೇ ಚಕ್ರವನ್ನು ಪ್ರತಿನಿಧಿಸುವುದಿಲ್ಲ🐍* ಅರ್ಥಾತ್ ಏಳು ಚಕ್ರಗಳು ಕಾಲರಾತ್ರಿ ಅವತಾರದೊಂದಿಗೆ ಸಮಾಪನವಾಗುತ್ತದೆ. ಅಂದರೆ ಯಾವಾಗ ಈ ಏಳೂ ಚಕ್ರಗಳು ಮನುಷ್ಯನಲ್ಲಿ ಜಾಗ್ರತವಾಗುತ್ತದೊ ಆವಾಗ ಮನುಷ್ಯ ಪರಿಶುದ್ಧನಾಗುತ್ತಾನೆ. ಆಂತರಿಕವಾಗಿ ಕಲ್ಮಶಗಳು ಜ್ಞಾನಗಂಗೆಯಲಿ ತೊಳೆದು ಮಹಾಗೌರಿಯಂತ ಸಾತ್ವಿಕ ಶುಭ್ರರೂಪು ಧಾರಣೆಯಾಗುತ್ತದೆ... ತಥಾ ಮಹಾಗೌರಿಯ ಆರಾಧನೆ ಮುಖ್ಯವಾಗುತ್ತದೆ....
*ಶ್ವೇತೆ ವ್ರಷೆ ಸಮಾರೂಢ ಶ್ವೇತಾಂಬರಧರ ಶುಚಿ| ಮಹಾಗೌರಿ ಶುಭಂ ದಧ್ಯಂತ್ರ ಮಹಾದೇವ ಪ್ರಮೋದಾದ||*
ಎಂದು ಪಠಿಸಿ ಫಲವನ್ನು ಪಡೆಯಬಹುದು
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"
Tuesday, 26 September 2017
ಕಾಲರಾತ್ರಿ
9 ದಿನಗಳ ನವರಾತ್ರಿಯು ಮೂರು ಮೂರು ದಿನಗಳಾಗಿ *ಸರಸ್ವತಿ, ಲಕ್ಷ್ಮೀ ಮತ್ತು ಪಾರ್ವತಿಯ ರೂಪಗಳನ್ನು ಪ್ರತಿನಿಧಿಸುತ್ತದೆ.* ತಥಾ *ಸಾತ್ವಿಕ, ರಾಜಸ ಮತ್ತು ತಾಮಸ ತತ್ವಗಳನ್ನು ನವರೂಪಗಳು ಸಂಕೇತಿಸುತ್ತವೆ.* ಕಾಲರಾತ್ರಿಯು ತಾಮಸತತ್ವವನ್ನು ಸಂಕೇತಿಸುತ್ತಾ ದುಷ್ಟ ನಾಶದ ಸಂದೇಶ ನೀಡುತ್ತದೆ.
ನವರಾತ್ರಿಯ ಏಳನೇ 7ದಿನ ಪೂಜಿಸಲ್ಪಡುವವಳು *"ಕಾಲರಾತ್ರಿ"* 🕘🌌:
*"ಕಾಲಿ"* ಅಥವಾ *"ಕಾಳಿ"* *"ಕಾಲ"* 🕘 ಎಂಬ ಶಬ್ಧದಿಂದ ಉದಿಸಿದ ಶಬ್ಧವಾಗಿದೆ. ಕಾಲ ಅಂದರೆ ಇಲ್ಲಿ *ಸಮಯ 🕓* ಅಥವಾ *ಮೃತ್ಯು 💀* ಎಂದು ಪರಿಗಣಿಸಬಹುದು... *ಕಾಲರಾತ್ರಿ ಎಂದರೆ ಕಾಲ ಅರ್ಥಾತ್ ಸಮಯ 🕘ಅಥವಾ ಸಾವಿಗೆ💀 ಅಂತ್ಯವನ್ನು 🔚ಕರುಣಿಸುವವಳು ಎಂದು ಸಂಕೇತಿಸುತ್ತದೆ.* ಕಾಲಿ ಎಂಬ ಶಬ್ಧಕ್ಕೆ ಕಪ್ಪು ⬛ ಎಂಬ ಅರ್ಥವೂ ಇದೆ.... *ಕಪ್ಪು ಅತ್ಯಂತ ಗೂಢವೂ, ನಿಗೂಢವೂ ಆಗಿದೆ.* ಕಾಲರಾತ್ರಿಯು ಅಂತ್ಯಕ್ಕೆ ಅಂತ್ಯ ಕರುಣಿಸುವವಳಾಗಿ ಆಕೆ ಯಾರಿಗೂ ಅರ್ಥವಾಗದ ಗೂಢತೆಯೊಂದಿಗೆ ಕಪ್ಪು ಬಣ್ಣವನ್ನು ಸಮೀಕರಿಸಿರುವುದು ಸಮಂಜಸವೇ ಆಗಿದೆ.
ಶಬ್ಧಕಲ್ಪಧ್ರುಮದಲ್ಲಿ ಕಾಲಿಯನ್ನು *"ಕಾಲಃ ಶಿವಃ ತಸ್ಯ ಪತ್ನೇತಿ ಕಾಲಿ"* ಎಂದು ಉಲ್ಲೇಖಿಸಿದೆ. ಅರ್ಥಾತ್ ಕಾಲನಾದ ಶಿವನ ಪತ್ನಿ ಕಾಲಿ... *ಕಾಲನಿಗೂ ಕಾಲವಾದವಳು...*
ರಕ್ತಬೀಜಾಸುರ 👽, ಎಲ್ಲಿ ಆತನ ರಕ್ತ ಬೀಳುತ್ತದೊ ಅಲ್ಲಿ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುವಂತಹ ವರವನ್ನು ಪಡೆದಿದ್ದನು....ಆತನ ವಧೆ ದುಸ್ಸಾಧ್ಯವಾದಾಗ ಮಹಾಕಾಲಿ ತನ್ನ ನಾಲಿಗೆಯಿಂದ 👅 ಆತನ ದೇಹದಿಂದ ತೊಟ್ಟಿಕ್ಕುವ 💉ರಕ್ತವನ್ನು ಹೀರುತ್ತಾ ವಧಿಸಿದಳು ಎಂಬ ಪ್ರತೀತಿ ಇದೆ.
*ಶೈಲಪುತ್ರಿಯು* 👩 *ಬ್ರಹ್ಮಚಾರಿಣಿ*ಯಾಗಿ 👱🏻♀ಶಿವನನ್ನು 👤 ಒಲಿಸಲು ಅನೇಕ ವರುಷ ಮಳೆ ☔ ಚಳಿ ⛄ ಗಾಳಿ 🌾🍃ಬಿಸಿಲಲ್ಲಿ ☀ತಪಸ್ಸು ಮಾಡಿದ ಪರಿಣಾಮ ಆಕೆಯ ಮೈ ಬಣ್ಣ ಕಪ್ಪಾಯಿತು ⬛... ತದನಂತರ ಶಿವನು ಆಕೆಯ ತಪಸ್ಸಿಗೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎನ್ನುವುದು ಇನ್ನೊಂದು ಪ್ರತೀತಿ...
ಕಾಲರಾತ್ರಿಯು ಕೆದರಿದ ಕೂದಲು, ಹೊರಚಾಚಿದ ಕಣ್ಣಗುಡ್ಡೆ 👀, ರಕ್ತಭರಿತವಾದ ಹೊರಚಾಚಿದ ನಾಲಿಗೆ 👅, ಬೆಂಕಿ ಉಗುಳುವ 🔥 ಮೂಗಿನ ಹೊಳ್ಳೆ, ಕಪ್ಪು ಮೈ ಬಣ್ಣ, ⬛, ರುಂಡ ಮಾಲೆ 💀💀💀💀💀,ಕೈಯಲ್ಲಿ ಖಡ್ಗ ಧಾರಣೆ ಮಾಡಿ, ಕತ್ತೆಯನ್ನು 🐴 ವಾಹನವಾಗಿಸಿದ ಭೀಕರ ರೂಪ
ನವದುರ್ಗೆಯರಲ್ಲಿ ಆಕೆಯದು ಭೀಕರ 👹ಮತ್ತು ಭೀಭತ್ಸ 👹ರೂಪ. *ಮಹಾಗೌರಿ ಎಷ್ಟು ಸುಂದರವೋ ಅಷ್ಟೇ ಭೀಕರತೆ ಕಾಲರಾತ್ರಿ.* ಅರ್ಥಾತ್ ಪ್ರಕೃತಿ 🌿🌾 ಎಷ್ಟು ಸುಂದರವೊ ಅಷ್ಟೇ ಪ್ರಳಯ ಭೀಕರ 🌊⚡ಎಂದು ಈ ರೂಪ ಸೂಚಿಸುತ್ತದೆ.... ಪ್ರಳಯಕಾಲದಲ್ಲಿ ⚡⚡ *ಪ್ರಕೃತಿಯು ಕಾಲಿಯಷ್ಟೇ ಭೀಕರವಾಗಿ ಸರ್ವವನ್ನೂ ನಾಶಮಾಡುವ ಸಂದೇಶ ನೀಡುತ್ತದೆ.....*
ಕೆಲವು ಚಿತ್ರಗಳು ಶಿವನು 👤ನೆಲದ ಮೇಲೆ ಮಲಗಿರುವಂತೆ ಹಾಗೂ ಕಾಲಿ ಶಿವನ ಎದೆಯನ್ನು ಮೆಟ್ಟಿರುವಂತೆ ಕಾಣಬಹುದು....
ಅರ್ಥಾತ್ ಶಿವ ಪುರುಷ ತತ್ವ ಮತ್ತು ಶಕ್ತಿ ಪ್ರಕೃತಿ ತತ್ವವನ್ನು ತಿಳಿಸುತ್ತದೆ. ಪುರುಷನಿಗೆ ಪ್ರಕೃತಿ ಅಂದರೆ ಶಕ್ತಿ ಇಲ್ಲದಿದ್ದರೆ ವ್ಯರ್ಥ... *"ಶಕ್ತಿ ಇಲ್ಲದಿದ್ದರೆ ಶಿವನೂ ಶವದಂತೆ"* ಎನ್ನುವುದನ್ನು ಈ ಚಿತ್ರ ಉಲ್ಲೇಖಿಸುತ್ತದೆ....
*ಕಾಲಿದಾಸ ಮಾತಾ ಕಾಲಿಯ ಕೃಪೆಯಿಂದ ಕವಿಯಾದ ಎಂಬ ಪ್ರತೀತಿ ಇದೆ....*
ಕಾಲರಾತ್ರಿ ನಂಬಿದವರನ್ನು ಸಲಹುತ್ತಾಳೆ 🙌 ಆಕೆ ಮಾತಾ ಸ್ವರೂಪಿಣಿ.... ಇಡೀ ಬ್ರಹ್ಮಾಂಡ 🌏🌋🌌 ಏನೂ ಇರದಾಗ ಕತ್ತಲಿನಿಂದ ಕೂಡಿತ್ತು 🌑ಮತ್ತು ಅದೇ *ಕತ್ತಲನ್ನು ಕಾಲಿಯ ಕಪ್ಪು ಬಣ್ಣದೊಂದಿಗೆ ಸಮೀಕರಿಸಿ ಆಕೆಯಿಂದಲೇ ಸಕಲ ಚರಾಚರದ ಉಗಮ ಮತ್ತು ಅಂತ್ಯ ಎಂದು ಸೂಚಿಸುತ್ತದೆ...*
*ಯೋಗದಲ್ಲಿ ಈಕೆ ಸಹಸ್ರಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ.....🐍*
ಕಾಲಿ, ಮಹಾಕಾಲಿ, ಕಾಲಿಕೆ, ಪರಮೇಶ್ವರಿ||
ಸರ್ವಾನಂದಕರಿ ದೇವಿ ನಾರಾಯಣಿ ನಮೋಸ್ತುತೆ||
ಕಾಲರಾತ್ರಿ ನನ್ನ ಮೆಚ್ಚಿನ ರೂಪ.... ತಾಯಿ ಸಕಲರಿಗೂ ಶುಭ ಕರುಣಿಸಲಿ....🙏🙏🙏
ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"