Thursday, 29 June 2017

ಮಳೆ ಮತ್ತು ನಾವು

ಮಳೆ, ಸುಡುವ ಬಿಸಿಲ ತಾಪ ತಾಳಲಾಗದೆ ಎಲ್ಲರ ಬಾಯಲ್ಲೂ ಮತ್ತೆ ಮತ್ತೆ ಹೊರಳಿದ ಶಬ್ಧ. ಮಳೆ ಕೇವಲ ಹನಿಯುವ ನೀರಲ್ಲ ಅದು ಭೂಮಿ ಆಕಾಶಗಳ ನಡುವಿನ ಸಂಪರ್ಕ ಸೇತು. ಇಂತಹ ಸ್ನಿಗ್ಧ ಸಿಂಚನದ ಕುರಿತು ಈ ಮಳೆಗಾಲದ ಮುಂಜಾವಿನಲಿ ಹರಟೋಣ ಬನ್ನಿ.

ಹಾಗೊಂದು ಕಾಲವಿತ್ತು, ಬೆಳಗ್ಗೆ ಏಳೇಳುತ್ತಲೇ ಬಿಡದೆ ಸುರಿಯುತ್ತಿದ್ದ ಮಳೆ, ಆಕಾಶ ಮಾರ್ಗದಲ್ಲಿ ಕುದುರೆ ಮೇಲೆ ಓಡಾಡುವಂತೆ ಭಾಸವಾಗುವಂತಹ ಗುಡುಗು, ಮುಂಜಾವಿನ ತುಂಬಾ ತುಂತುರಿನ ಸೋನೆ ಮಳೆ! ಹಾಸಿಗೆಯಿಂದಲೋ ಚಾಪೆಯಿಂದಲೋ  ಎದ್ದು ಹೊರಬರುತ್ತಿದ್ದಂತೆ ಮೂಗಿಗೆ ಬಡಿಯುತ್ತಿದ್ದದ್ದು ಅಮ್ಮ ಮಾಡುತ್ತಿದ್ದ ನೀರುದೋಸೆಯ ಘಮ, ಅದಕ್ಕೂ ಮಿಗಿಲಾಗಿ ಕೇಳುತ್ತಿದ್ದದ್ದು ದೋಸೆ ಹೊಯ್ಯುವ "ಚುಂಯ್ಯ್" ಎಂಬ ಸದ್ಧು. ಹಾಗೆ ಮೂಗಾಳಿ ಹಿಡಿದು ಅಡುಗೆ ಮನೆಗೆ ಹೋಗಿ ಅಮ್ಮ ಮಾಡುವ ದೋಸೆಯನ್ನೊಮ್ಮೆ ನೋಡಿ ಹಾಗೆ ಹಿತ್ತಲಿಗೆ ಹೋಗಿ ಹೊರಗಿಳಿಯಲಾಗದ ಮಳೆಯಲಿ ಸುಮ್ಮನೆ ಮೆಟ್ಟಿಲ ಮೇಲೆ ಕುಕ್ಕರಗಾಲಿನಲ್ಲಿ ಕೂತು ಮಳೆ ನೋಡುತ್ತಾ ನೋಡುತ್ತಾ ಮಳೆಯೇ ಆದೇವೋ ಎಂಬ ಹಾಗೆ ಕಳೆದುಹೋಗುತ್ತಿದ್ದ ಮಧುರ ಕಾಲ.

ಯಾವ ಮುಗಿಲಿನ ಯಾವ ತುದಿಯಿಂದ ಹೀಗೆ ಜಾರಿ ಬಿಳುತ್ತಿದೆಯೋ ಈ ಮಳೆ ಎಂಬ ಖಗೋಳ ಭೂಗೋಳ ಪ್ರಶ್ನೆಗಳು, ಹನಿ ಬೀಳುವಾಗ ಓಲಾಡುವ ಮರಗಿಡಗಳ ಬಾಗುಬಳುಕಿನ ಚಂದ, ಹರಿದು ಓಡುವ ನೀರಿನ ದಾರಿ, ನೀರ ಜೊತೆ ತೇಲಿ ಹೋಗುವ ಎಲೆ, ಒದ್ದೆ ಕಾಗೆಗಳು, ಮೂಲೆಯಲ್ಲಿ ಬೂದಿ ರಾಶಿಯಲ್ಲಿ ಮೈಮುದುಡಿ ಮಲಗಿದ ಬೆಕ್ಕು, ಕಾಸಿದ ಹಂಡೆ ಒಲೆಯ ಬೆಂಕಿ ಧಗ ಧಗ ಎಲ್ಲವೂ ಮಳೆಯ ಭಾಗವಾಗಿ ತೋರುತ್ತಿತ್ತು. ಎಲ್ಲದಕ್ಕೂ ಸಾವಧಾನ. ಶಾಲೆಗೇ ಹೋಗಲು ಆತುರವಿರಲಿಲ್ಲ, ಹಂಡೆ ಒಲೆಯಿಂದ ಮೇಲೆದ್ದ ಹೊಗೆ ಮಳೆಯ ಹೊಡೆತಕ್ಕೆ ಹೆಚ್ಚು ಮೇಲೆ ಹೋಗದೆ ಅಲ್ಲೇ ಸುಳಿದಾಡುವ ಸೊಗಸು, ಮನೆಯ ಹೆಂಚಿನಿಂದ ಮುತ್ತಿನ ಮಣಿಸರದ ತೆರದಿ ಜಾರಿ ಬೀಳುತ್ತಿದ್ದ ನೀರ ಸಾಲು, ದೂರದಿಂದಲೇ ಗುಡುಗಿ ಸುಮ್ಮನಾಗುತ್ತಿದ್ದ ಸಣ್ಣಪುಟ್ಟ ಗುಡುಗುಗಳು, ಅಡುಗೆ ಮನೆಯಲ್ಲಿ ಕೈ ಬಳೆ ಸದ್ದಿನೊಂದಿಗೆ ತಯಾರಾಗುತ್ತಿದ್ದ ಅಮ್ಮನ ದೋಸೆಯ ಘಮದಷ್ಟೇ ಆಪ್ಯಾಯಮಾನ ಮನೆಯ ಎಲ್ಲ ವ್ಯಾಪಾರಗಳು.

ಶಾಲೆಗೆ ಹೋಗುವಾಗ ಮತ್ತೆ ಮಳೆ ನೀರ ದಾರಿಯಲ್ಲೇ ನೀರು ಹಾರಿಸುತ್ತ, ಛತ್ರಿ ತಿರುಗಿಸುತ್ತಾ  ಹೋಗುವ ಮಜಾ. ಯಾವ ಗಡಿಬಿಡಿ ಇಲ್ಲದೆ ಮಳೆಯಷ್ಟೇ ಸಾವಧಾನವಾಗಿ ಅಥವಾ ಅದಕ್ಕಿಂತಲೂ ನಿಧಾನವಾಗಿ ಸಾಗುವ ನಮ್ಮ ಶಾಲಾ ಪಯಣ ಶಾಲೆ ತಲುಪುವಷ್ಟರಲ್ಲಿ ಮೊದಲ ಗಂಟೆ ಹೊಡೆದಿರುತ್ತಿತ್ತು. ಆಟಗಳು ಮಳೆಯೊಂದಿಗೆ ಸಾಗಿ ಚಂಡಿ ಮುದ್ದೆಯಾಗುವ ಜೀವ ಮಳೆಯಲ್ಲಿ ಮಿಂದೆದ್ದು ಪುನೀತ. ಸಂಜೆ ಶಾಲೆಯಿಂದ ವಾಪಸಾಗುವಾಗಂತೂ ಬಿಡದೆ ಹೊಡೆಯುವ ಮಳೆಗೆ ಮೈ ಮನಸೂ ಮಳೆಯೋ ಮಳೆ. ಅಂಗಿಚಡ್ಡಿಯೆಲ್ಲ ಮಳೆಯಿಂದ ತೊಯ್ದು ಮನೆ ತಲುಪಿದಾಗ ಅಮ್ಮನ ಮಮತಾ ವಾತ್ಸಲ್ಯದ ಸಾಲುಗಳು " ಮಕ್ಕಳು ಮನೆ ತಲುಪುವ ತನಕನಾದರೂ ಈ ಮಳೆಗೆ ನಿಲ್ಲಲಿಕ್ಕಾಗಲಿಲ್ಲವೇ".

ನನಗೆ ಮಳೆ ಕೇವಲ ಮಳೆಯಲ್ಲ, ಅದು ಇಹದಿಂದ ಪರಕ್ಕೆ ಆವಿಯಾಗಿ ಹೋದ ನೀರು ಅಮೃತವಾಗಿ ಅಕ್ಷಯವಾಗಿ ಮತ್ತೆ ತವರು ಸೇರುವ ಅಪೂರ್ವ ಪ್ರಾಕೃತಿಕ ವ್ಯಾಪಾರ. ಇಹದಿಂದ ಅಗಲಿ ಹೋದ ಜೀವಗಳು ಹೀಗೆ ಮತ್ತೆ ನಮ್ಮನ್ನು ಸೇರಿದ್ದರೆ, ಅನ್ನಿಸುತ್ತಿತ್ತು ಎಷ್ಟೋ ಸಾರಿ. ಮಳೆ ಜೀವಂತಿಕೆ, ಮಳೆ ಉತ್ಸಾಹ, ಮಳೆ ಸವಿಭಾವ. ಸುರಿಯುವ ಮಳೆಯನ್ನು ಮಾತೇ ಇಲ್ಲದೆ ಕುಳಿತು ಆಲಿಸಿದಾಗ ಮಾತ್ರ ತಿಳಿಯುತ್ತದೆ ಮಳೆ ಕೇವಲ ಮಳೆಯಲ್ಲ ಎಂಬ ಸತ್ಯ.

ಈಗ ಕಾಲ ಬದಲಾಗಿದೆ, ಮೊದಲಿನಷ್ಟು ಮಳೆ ಇಲ್ಲದಿರಬಹುದು ಆದರೆ, ಇರುವ ಮಳೆಯನ್ನು ಕುಳಿತು ಆಲಿಸುವಷ್ಟು ಸಮಯ ಯಾರಿಗಿದೆ. ಈಗಲೂ ಬೆಳಕಾಗುತ್ತದೆ. ಮಳೆ ಹೊರಗೆ ಧೋ ಎನ್ನುತ್ತದೆ, ಎದ್ದು ಕುಳಿತ ಮಗು ಮಳೆಗೆ ಕಿವಿಯಾಗುವ ಮುನ್ನವೇ ಹೆತ್ತವರು ಬೊಬ್ಬೆ ಇಡುತ್ತಿರುತ್ತಾರೆ "ಸ್ಕೂಲ್ ಗೆ ಲೇಟಾಯ್ತು, ಬೇಗ ಬ್ರಷ್ ಮಾಡು!!" ಮನೆಯಲ್ಲಿ ದೋಸೆಯ ಘಮವಲ್ಲ ಗಡಿಬಿಡಿಯದ್ದೆ ಪಾರುಪತ್ಯ. ಹೊರಗೆ ಅದೇ ಮಳೆ ಸುರಿದು ಸುರಿದು ಸೊರಗುತ್ತಿದೆ, ಗುಡುಗು ಗುಡುಗಿ ಗುಡುಗಿ ಸಾರುತ್ತಿದೆ ನಾನಿದ್ದೇನೆ ಎಂಬ ಸತ್ಯವನ್ನು, ಒದ್ದೆ ಕಾಗೆ, ಹರಿದು ಹೋಗುವ ನೀರ ದಾರಿ, ಬಳುಕಿ ಬಾಗುವ ಗಿಡ ಮರ ಎಲ್ಲವೂ ಇದೆ ನೋಡುವವರಿಲ್ಲದೆ, ಕಾಣುವವರಿಲ್ಲದೆ. ದಾರಿ ತುಂಬಾ ನಿಬಿಡವಾಗಿ ಸಾಲುಗಟ್ಟಿದ ಗಾಡಿಗಳು, ಕೆಲಸಕ್ಕೆಂದು ಓಡುವ ಜನ, ಗಡಿಬಿಡಿ ಗಲಾಟೆ, ಮಳೆ ಒಂದು ಪಿರಿಪಿರಿ!!!

ಯಾರಿಗಿದೆ ಪುರುಸೋತ್ತು ಮಳೆಯನ್ನು ಕೂತು ನೋಡುವುದಕ್ಕೆ, ಯಾರಿಗಿದೆ ಸಮಯ ಮಳೆಯ ಜೊತೆ ಮಳೆಯಾಗಿ ಆಲಿಸುವುದಕ್ಕೆ? "ಟೈಮಿಲ್ಲ" ಎಂಬ ಪದದೊಂದಿಗೆ ತಳುಕು ಹಾಕಿರುವ ನಮ್ಮ ಜೀವನದ ಪದಕೋಶದಲ್ಲಿ ಸಾವಧಾನ ಎಂಬ ಪದ ಅಳಿಸಿಹೋಗಿದ್ದೇ ತಿಳಿಯಲಿಲ್ಲ. ಓಡುವ ಕಾಲದೊಂದಿಗೆ ಓಟಕ್ಕಿಳಿದ ನಾವುಗಳು ಅವಸರವೇ ಬದುಕಾಗಿ ಬಾಳುತ್ತಿದ್ದೇವೆ. ಸಾವಧಾನವೂ ಇಲ್ಲಿ ಅವಸರದ ಬೆನ್ನೇರಿದೆ !!

ಮನೆಯೇ ಗಡಿಬಿಡಿಯ ಗೂಡಾಗಿ ಮಕ್ಕಳನ್ನು ಶಾಲೆಗೆ ಅವಸರದಲ್ಲೇ ಸಾಗಹಾಕುವ ಹೆತ್ತವರದ್ದೊಂದು ನಾಗಾಲೋಟ. ಶಾಲೆಯ ಅಂಗಳ ತಲುಪಲು ಬಸ್ಸುಗಳಿವೆ ಅಂದಾದಮೇಲೆ ನೀರ ಹಾದಿಯಲ್ಲಿ ಸಾಗುವ ಮಕ್ಕಳೆಲ್ಲಿ? ಮಳೆ ಹನಿಯೂ ತಾಕದೆ ಬೆಳೆಯುವ ಮಕ್ಕಳಿಗೆ ಮಳೆ ಅಮೃತ ಸಿಂಚನವೆ? ಸಂಜೆ ಮತ್ತೆ ಬಸ್ಸಲ್ಲೇ ಮನೆ ತಲುಪುವ ಮಕ್ಕಳು ಅದಾಗಲೇ ಹೋಂ ವರ್ಕ್ , ಪ್ರಾಜೆಕ್ಟ್ ನಲ್ಲಿ ಬಿಡುವಿಲ್ಲದೆ ಮುಳುಗಿರುತ್ತಾರೆ ಕುಳಿತು ನೋಡಬಹುದಾದ ಅಮೋಘ ಸಂಧ್ಯಾಕಾಲದ ಮಳೆಯನ್ನು ಲಕ್ಷಿಸದೆ. "ಮಳೆ" ಎಂಬ ಪ್ರಬಂಧಕ್ಕೆ ಅಪ್ಪ ಅಮ್ಮ ಹೇಳಿಕೊಟ್ಟಂತೆ ಗೀಚುತ್ತಿರುತ್ತಾರೆ. "ಮಳೆ ಬೇಕು, ಬೆಳೆ ಬೆಳೆಯಲು, ಕುಡಿಯಲು ನೀರು ಮಳೆಯಿಂದ" ಇತ್ಯಾದಿ ಇತ್ಯಾದಿ   

ಆದರೆ, ಮೂಲಭೂತ ಪ್ರಶ್ನೆ ಮಳೆ ಕೇವಲ ಬೆಳೆಗಾಗಿಯೆ? ಅಥವಾ ಅದರಾಚೆಗೂ ಮಳೆಯ ಅಸ್ಥಿತ್ವ ಹುಡುಕಬೇಕಿದೆಯೇ? ಹೆತ್ತವರು ಮಕ್ಕಳಿಗೆ ಕೂತು ತೋರಿಸಬೇಕಿರುವುದೇ ಈ ಸುರಿಯುವ ಮಳೆಯನ್ನು, ಆಲಿಸಬೇಕಿರುವುದೇ ಈ "ಧೋ" ಮಳೆಯನ್ನು. ಯಾಕೆಂದರೆ ಮಳೆ ಬರಿ ಮಳೆಯಲ್ಲ, ಅದೊಂದು ಧ್ಯಾನ! " ಕಾಲೇ ವರ್ಷತು ಪರ್ಜನ್ಯ, ಪೃಥ್ವಿ ಸಸ್ಯ ಶಾಲಿನಿ".

ಮೌನದಲಿ ಮಕ್ಕಳು ಆಲಿಸಬೇಕಿರುವುದು ಮಳೆಯನ್ನು, ಗುಡುಗನ್ನು, ಮಳೆ ಸುರಿವ ಓರಣವನ್ನು, ಮಳೆಯ ಸದ್ದಿನ ಸುಮಧುರ ನಿನಾದವನ್ನು. ಯಾಕೆಂದರೆ ಇದೆ ಮಳೆ ನಮ್ಮನ್ನು ಮತ್ತೆ ಮತ್ತೆ ಪ್ರಕೃತಿಗೆ ಹತ್ತಿರವಾಗಿಸುವುದು, ಇದೆ ಮಳೆ ಹೊಸ ಚಿಗುರು ಹುಟ್ಟಿಸಿ ಮತ್ತೆ ಭವಿಷ್ಯದ ಭರವಸೆ ಮೂಡಿಸುವುದು, ಇದೆ ಮಳೆ ಭುವಿಗಿಳಿದು ಮತ್ತೊಂದು ವರುಷದ ದಾಹ ತೀರಿಸುವುದು, ಇದೆ ಮಳೆ ನಮ್ಮನ್ನು ಅಂತರ್ಮುಖಿಯಾಗಿಸಿ ನಮ್ಮ ಒಳ ಹೊರಗನ್ನು ಶೋಧಿಸಿ ಶುಭ್ರಗೊಳಿಸುವುದು. ಹೊರಗೆ ಸುರಿದ ಮಳೆ ಒಳಗಿನ ಕಲ್ಮಶ ತೊಳೆದು ಪರಿಶುದ್ಧಗೊಳಿಸಬೇಕಿದೆ. ಯಾಂತ್ರಿಕತೆಯ ಹುಚ್ಚು ಅವಸರದ ಈ ಕಾಲಘಟ್ಟದಲ್ಲಿ ತಂತ್ರಜ್ಞಾನಗಳನ್ನು ದೂರ ಸರಿಸಿ ಮಕ್ಕಳನ್ನು ಸುಮ್ಮನೆ ಕುಳಿತು ಮಳೆ ಸುರಿವ ಓಘವನ್ನು ಆಲಿಸಲು ಬಿಡಬೇಕಿದೆ. ಮಳೆಯಲ್ಲಿ ತೊಯ್ದು, ಮಳೆಯಲ್ಲಿ ಕುಣಿದು, ಕಾಗದ ದೋಣಿಗಳ ಮಾಡಿ, ಕೆಸರು ಮೆಟ್ಟಿ ನಲಿವ ಮಕ್ಕಳು ಮಾತ್ರ ಭೂಮಿಗೆ ಹತ್ತಿರವಾಗುವುದು. ಬಹುಮಹಡಿ ಕಟ್ಟಡದ ಆಕಾಶ ಮುಟ್ಟುವ ಮಹಡಿ ಮೇಲೆಲ್ಲೋ ಭೂಮಿಗೆ ಕಾಲು ತಾಕಿಸದೆ, ಮಳೆಯಲ್ಲಿ ತೋಯದೆ ಬೆಳೆವ ಮಕ್ಕಳು ಪ್ರಕೃತಿಯಿಂದ ವಿಮುಖರಾಗುವರು.

ಈ ಸಾರಿ ಮತ್ತೆ ಬಂದಿದೆ ಮಳೆ. ಹಾಗೆ ಸಂಜೆಯಲ್ಲಿ ಮಕ್ಕಳೊಂದಿಗೆ ಕೂತು ಮಳೆಯನ್ನು ಆಸ್ವಾದಿಸಿ. ಸುರಿವ ಮಳೆ ಮನೆ ಮನಗಳಿಗೆ ಹೊಸ ಸೊಗಸನ್ನು ಚೆಲ್ಲಿ ಹೋಗಲಿ. ಇಲ್ಲವಾದರೆ ರಾತ್ರಿ ಎಲ್ಲಾ ಮಲಗಿದ ಮೇಲೂ ಸುರಿವ ಮಳೆ ಒಂಟಿಯಾಗಿ ಸುರಿಯುತ್ತಲೇ ಇರುತ್ತವೆ. ಕೇಳುವ ಕಿವಿಗಳು ಆಲಿಸದೆ ಸುಮ್ಮನೆ ನಿದ್ದೆ ಹೋಗಿ ಬಿಡುತ್ತವೆ ನಾಳಿನ ಅವಸರಕ್ಕೆ ಮತ್ತೆ ಅಣಿಯಾಗಲು

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.