Tuesday, 4 July 2017

ನೆನಪೋಲೆ

ಮಂಗಳೂರಿನ ಉರಿ ಬಿಸಿಲ ಧಗೆಗೆ ಮಡಿಕೇರಿಯ ಮಂಜಿನ ಹಾಗೆ ನೆನಪಾದೆ

ಬೆಂಗಳೂರಿನ ಟ್ರಾಫೀಕಿನಂತೆ ಎದೆಯಲ್ಲಿ
ಆಗಾಗ ನಿನ್ನ ನೆನಪಿನ ಸಿಗ್ನಲ್ ಬೀಳುತ್ತಿದೆ,

ನಿನ್ನ ಒಂದು ಕುಡಿ ನಗೆಗೆ
ಶಿವಮೊಗ್ಗದ ಜೋಗದಂತೆ ಹೃದಯದಲ್ಲೆಲ್ಲೋ ಜಲಪಾತ,

ನಿನ್ನ ತುಟಿಯ ಸವಿಗೆ
ಧಾರವಾಡ ಪೇಡ, ಬೆಳಗಾವಿಯ ಕುಂದ ಯಾವುದು ಸಾಟಿ.....?

ನನ್ನೆಡೆಗೆ ತಿರುಗಿ ನೋಡಿದರೆ
ನಾನಾಗಲೇ ದಾವಣಗೆರೆಯ ಬೆಣ್ಣೆದೋಸೆಯಂತೆ ಮೃದು,

ಮಂಡ್ಯದ ಸಕ್ಕರೆ ಬೇಕಾಗಿಯೇ ಇಲ್ಲ
ನೀ ಕುಡಿದು ಕೊಟ್ಟ ಚಹಕ್ಕೆ,

ಬಿಜಾಪುರದ ಗೋಲಗುಮ್ಮಟದಂತೆ ನಿನ್ನ ಹೆಸರು ಅನುರಣಿಸುತ್ತಿದೆ,

ನಿನ್ನ ಸಂಭ್ರಮಕ್ಕೆ ಚಿಕ್ಕಮಗಳೂರ ಸೊಬಗಿದೆ

ನನ್ನ ಕಾಯುವಿಕೆಗೆ ಬೀದರದ ಬಿಸಿಲ ಬೇಗೆಯಿದೆ,

ಆದರೆ, ನಮ್ಮಿಬ್ಬರ ಸವಿಕ್ಷಣಗಳು
ಇನ್ನು ಹಂಪಿಯ ಗತವೈಭವದಂತೆ ನೆನಪು ಮಾತ್ರ.

     ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.