Sunday, 23 July 2017

ಪ್ರೀತಿ ಯಾವುದು?

ದೂರ ಬಾನ ಅಂಚಿನಿಂದ
ಮಳೆಯ ಮೋಡ ತೇಲಿ ಬಂದು
ಊರ ತುಂಬ ಹನಿದು ಸುರಿಯೆ
ಅದುವೆ ಪ್ರೀತಿಯು

ಸುರಿದ ಮಳೆಯ ಹನಿಯ ಹೀರಿ
ಭುವಿಯ ಒಡಲ ಬೀಜ ತಾನು
ಒಡೆದು ಮೇಲೆ ಬಂದು ನಗಲು
ಅದುವೆ ಪ್ರೀತಿಯು

ಬಳ್ಳಿಯಾಗಿ ಹಂಬಿ ಹಬ್ಬಿ
ಬೇರು ಆಳಕಿಳಿಸಿಕೊಂಡು
ಮಣ್ಣ ಸತುವ ಹೀರಿ ಬೆಳೆದು
ಅದುವೆ ಪ್ರೀತಿಯು

ಸಾವಿರಾರು ಮೈಲಿನಿಂದ
ಹರಿದು ಬರುವ ರವಿಯ ಕಿರಣ
ಎಲೆಯ ಹಸಿರು ಮಾಡಿಯಾಡಿ
ಅದುವೆ ಪ್ರೀತಿಯು

ಹೂವು ಅರಳಿ ಚಿಟ್ಟೆ ಬರಲು
ಮಧುವ ಹೀರಿ ರಮಿಸುತಿರಲು
ಪರಾಗವಾಗಿ ಕಾಯಿಬಿಡಲು
ಅದುವೆ ಪ್ರೀತಿಯು

ಕಾಯಿ ಬಲಿತು ಬೆಳೆದು ನಿಲ್ಲಲು
ಮನುಜ ಕಿತ್ತು ತಿನ್ನಲು ಅದನು
ಎಸೆದ ಬೀಜ ಮತ್ತೆ
ಭುವಿಯ ಮಣ್ಣ ಸೇರಿತು

ತಾನು ತನ್ನದು ಎನುವ ಮನುಜ
ತನ್ನದಷ್ಟೆ ನೋಡೊ ಮನುಜ
ತನ್ನ ತಾನೆ ಕೇಳ ಬೇಕು
ಪ್ರೀತಿ ಯಾವುದು?

             ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.