Monday, 28 August 2017

ರಾಧಾಷ್ಟಮಿ

*ಭಾದ್ರಪದ ಮಾಸದ ಶುಕ್ಲಪಕ್ಷದ ಅಷ್ಟಮಿಯನ್ನು "ರಾಧಾ ಅಷ್ಟಮಿ" ಎಂದು ಕರೆಯಲಾಗುತ್ತದೆ*.

*ರಾಧೆಯನ್ನು ರಾಧಿಕ ರಾಧಾರಾಣಿ ಎಂದೂ ಕರೆಯಲಾಗುತ್ತದೆ*.

*ಮೂಲ ಮಹಾಭಾರತದಲ್ಲಿ "ರಾಧಾ" ಎಂಬ ಏಕವ್ಯಕ್ತಿ ಪಾತ್ರ ಇಲ್ಲದಿದ್ದರೂ  ತದನಂತರದಲ್ಲಿ ವಿಶೇಷವಾಗಿ ಗೀತಗೋವಿಂದದಲ್ಲಿ "ರಾಧಾ" ಎಂಬ ಒಂದು ಪಾತ್ರ ಮೈತೆಳೆದು ನಿಲ್ಲುತ್ತದೆ*.

*ರಾಧಾ ಕೇವಲ ಒಂದು ಪಾತ್ರವಾಗಿ ಕಾಣುವುದಕ್ಕಿಂತಲೂ ಆಕೆ ಗೋಪಿಕೆಯರನ್ನು ಪ್ರತಿನಿಧಿಸುತ್ತಾಳೆ*.

*ಇಂದು ರಾಧೆ ಇಲ್ಲದ ಕೃಷ್ಣನನ್ನು ಕಲ್ಪಿಸುವುದು ಸಾಧ್ಯವಿಲ್ಲ ಎನ್ನುವಾಗ ಆ ಪಾತ್ರದ ಮಹತ್ವ ಮತ್ತು ಪ್ರಾಮುಖ್ಯ ಅರ್ಥವಾಗುತ್ತದೆ*.

*ಕೃಷ್ಣನ ಮೇಲಿನ ರಾಧೆಯ ಒಲವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಕಾಣಲಾಗುತ್ತದೆ. ಅರ್ಥಾತ್ ಪ್ರತಿ ಮನುಷ್ಯನ ಭಗವಂತನೆಡೆಗಿನ ಭಕ್ತಿ ಅದು ರಾಧೆಯ ಪ್ರೀತಿಯಂತೆ ಸಾತ್ವಿಕವೂ ಸಹಜವೂ ಆಗಿರಬೇಕು. ಆಗ ಪ್ರತಿ ಒಬ್ಬರೂ ರಾಧೆಯರೇ*.

*ರಾಧೆ ಎಂಬ ಶಬ್ಧವೂ ಬಹಳ ಸುಂದರವಾದದ್ದು. ಸಾಮಾನ್ಯವಾಗಿ ನಾವು ರಾಧೆಕೃಷ್ಣ ಎನ್ನುತ್ತೇವೆ, ಆ ಶಬ್ಧವನ್ನು ಖಂಡರಿಸಿದಾಗ ಅದು ರಾಹ್ ದೇ ಕೃಷ್ಣ ಆಗುತ್ತದೆ ಅರ್ಥಾತ್ ರಾಹ್ (ದಾರಿ) ದೇ (ತೋರು) ಕೃಷ್ಣಾ ಎಂದು*.

*ರಾಧೆ ಭಗವಂತನೆಡೆಗಿನ ಸಾತ್ವಿಕ ಬಯಕೆಯನ್ನು, ಆತ್ಮ ಪರಮಾತ್ಮನೊಂದಿಗೆ ಬೆಸೆದುಕೊಳ್ಳುವ ಕಲ್ಪನೆಯನ್ನು ನಿರೂಪಿಸುತ್ತದೆ*

*ಐಹಿಕ ಬದುಕಿನ ಜಂಜಾಟದಲ್ಲಿ ಶಾಶ್ವತ ಸತ್ಯವಾದ ಕೃಷ್ಣನ ಹುಡುಕಾಟದಲ್ಲಿರುವವರಿಗೆ  ರಾಧೆಯು ದಾರಿಯನ್ನು ತೋರಲಿ.*

ರಾಧಾಷ್ಟಮಿಯು ಭಗವಂತನೆಡೆಗಿನ ನಮ್ಮ ಆಧ್ಯಾತ್ಮಿಕ ಪ್ರೇಮವನ್ನು ಮತ್ತಷ್ಟು ಪ್ರೌಢ ಮತ್ತು ಪರಿಪಕ್ವ ಗೊಳಿಸಲಿ ಎಂದು ಆಶಿಸುತ್ತಾ ರಾಧಾಷ್ಟಮಿಯ ಶುಭಾಶಯಗಳು

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Thursday, 24 August 2017

ಗಣಪತಿ ಬಪ್ಪ ಮೋರೆಯಾ

*ಗಣೇಶ ಮೂಲದಲ್ಲಿ ಜನಪದರ ಕಲ್ಪನೆಯಲ್ಲಿ ಸಂಪೂರ್ಣವಾಗಿ ಮೈತೆಳೆದು ನಿಂತವನು.ಹಾಗಾಗಿ, ಗೌರಿ ಗಣೇಶನ ಆಚರಣೆಗಳು ಗ್ರಾಮ್ಯ ಸೊಗಡುಗಳಾದ ಮಣ್ಣು, ಗರಿಕೆ, ಬಳೆ, ತರಕಾರಿ, ಇಲಿ ಇವುಗಳ ಕಲ್ಪನೆಯಲ್ಲಿಯೇ ಜೀವ ತೆಳೆಯುತ್ತವೆ ಅನ್ನುವುದು ಗಮನಿಸ ಬೇಕಾದ ಅಂಶ.*

*ಜ್ಞಾನ ಹಾಗೂ ಕ್ರಿಷಿ ಜೀವನದಲ್ಲಿ ಅತಿ ಅಗತ್ಯವಾದುದು. ಇವೆರಡಕ್ಕೂ ಅಧಿದೇವತೆಯಾದ ಏಕೈಕ ದೇವರು "ಗಣೇಶ".*

*ಮಳೆಗಾಲ ಕ್ರಿಷಿಗೆ ಸೂಕ್ತ ಸಮಯ ಆವಾಗಲೇ ಗಣೇಶನ ಹಬ್ಬ.*
*ಮಣ್ಣು ಕ್ರಿಷಿಗೆ ಅತಿ ಅಗತ್ಯ ಅದರಿಂದಲೇ ಆತನ ತಯಾರಿ.*
*ಮಳೆಗಾಲದಲ್ಲಿ ಸಮ್ರದ್ಧವಾಗಿ ಆಗುವ ಗರಿಕೆ ಅವನಿಗೆ ಅರ್ಪಿತ.*
*ಇಲಿ ರೈತನಿಗೆ ತೊಂದರೆ ಕೊಡುವ ಪ್ರಾಣಿ ಅದನ್ನು ತನ್ನ ವಾಹನವಾಗಿಸಿ ಇಲಿಯನ್ನು ಮರ್ಧಿಸುವ ಸಂಕೇತ.*
*ಧವಸ ಧಾನ್ಯ ಶುದ್ಧೀಕರಿಸುವ ಮೊರದಂತಹ ಕಿವಿ.*
*ಹೊಟ್ಟೆ ಧವಸ ಧಾನ್ಯ ತುಂಬುವ ಕಣಜದ ಸಂಕೇತ.*
*ಹಾವು ರೈತ ಸ್ನೇಹಿ ಅದನ್ನು ಹೊಟ್ಟೆಗೆ ಕಟ್ಟಿ ಕ್ರಿಷಿ ರಕ್ಷಣೆಯ ಸಂದೇಶ ನೀಡುತ್ತಾನೆ ನಮ್ಮ "ಕ್ರಿಷಿ ಗಣಪ".*

*ಇನ್ನು ವಿದ್ಯಾ ಗಣಪನ ರೂಪ*
*ಮೊರದಂತಹ ಕಿವಿ ಕೇಳಿದ್ದನ್ನು ಜಾಲಿಸಿ ಒಳ್ಳೆಯದನ್ನಷ್ಟೇ ಸ್ವಿಕರಿಸು.*
*ಸಣ್ಣ ಕಣ್ಣು ಸೂಕ್ಷ್ಮ ಪರಿಶೀಲನೆ.*
*ದೊಡ್ಡ ಹೊಟ್ಟೆ ಜ್ಞಾನ ದಾಹ.*
*ಉದ್ದ ಸೊಂಡಿಲು ಅಗಾಧ ಗ್ರಹಿಕೆ.*
*ಇಲಿ ಚಂಚಲ ಮನಸ್ಸನ್ನು ಪ್ರತಿನಿಧಿಸುತ್ತದೆ ಅದನ್ನು ಹಿಡಿತದಲ್ಲಿ ಇಟ್ಟಾಗ ಯಶಸ್ಸು ಎಂಬ ಸಿಹಿಯಾದ ಮೋದಕ ಜೀವನದಲ್ಲಿ ಪಡೆಯಲು ಸಾಧ್ಯ.*
*ಇದು ಗಣೇಶನ ವಿದ್ಯಾ ರೂಪ*

*ಗಣೇಶನ ತಯಾರಿ ಮಳೆಗಾಲದ ಮುಂಚೆ ಆರಂಭವಾಗುತ್ತದೆ, ಅದಕ್ಕಾಗಿ ಮಣ್ಣುಗಳನ್ನು ಕೆರೆಗಳಿಂದಲೇ ತರುವುದು ಮಳೆಗಿಂತಲೂ ಮುನ್ನ ಕೆರೆಯ ಹೂಳು ತೆಗೆಯುವುದಕ್ಕೂ ಮಳೆಯ ತಯಾರಿಯೂ ಆಗುತ್ತದೆ. ಗಣೇಶನ ಹಬ್ಬ ಸಮ್ರದ್ಧ ಮಳೆಯ ನಡುವಿನಲ್ಲಿ, ಹಾಗಾಗಿ ಮಳೆ ಸುರಿದು ಕೆರೆ ತುಂಬಿ ಕೋಡಿ ಒಡೆಯುವ ಸಂದರ್ಭದಲ್ಲಿ ಅದೇ ಕೆರೆಗೆ ವಿಸರ್ಜಿಸಿದ ಗಣಪತಿಯ ಮಣ್ಣು ಕೆರೆಯ ಕೋಡಿ ಒಡೆಯದಂತೆ ತಡೆಯುತ್ತದೆ ಹೀಗೆ ಗಣೇಶ ನಮ್ಮನ್ನು ಕಾಪಾಡುತ್ತನೆ.*

*ಮಣ್ಣಿನ ಮಗಳಾದ ಪಾರ್ವತಿಯು ಪ್ರಕ್ರಿತಿ ತತ್ವದವಳು ಮತ್ತು ಆಕೆಯ ಮಗ ಮಣ್ಣಿನಿಂದ ತಯಾರಾಗುವುದು ಮತ್ತು ಪ್ರಕ್ರಿತಿಯು ಮಳೆ ಸುರಿದು  ನಳನಳಿಸುತಿರುವ ಗಳಿಗೆಯಲ್ಲಿ  ಬರುವ ಆತನ ಹಬ್ಬ ಆತನ ಪ್ರಕ್ರಿತಿ ತತ್ವವನ್ನು ತೋರಿಸುತ್ತದೆ.*

*ತಂದೆಯಾದ ಶಿವನು ಅತ್ಯಂತ ಜಟಿಲನೂ ಗೂಢನೂ ಆಗಿರುವಾಗ ಆತನ ಮಗ ಗಣೇಶ ಅಷ್ಟೇ ಸುಲಭದಲ್ಲಿ ಅರ್ಥವಾಗುವ ಮಹಾಕಾಯ. ಆದುದರಿಂದಲೇ ಚಿತ್ರಕಾರರು ಆತನನ್ನು ಗೆರೆಗಳಲ್ಲೂ ಬಿಡಿಸಿ ತೋರಿಸಬಲ್ಲರು ಅರ್ಥಾತ್ ಭಕ್ತಿ ಇದ್ದಲ್ಲಿ ಅಷ್ಟು ಸುಲಭದಲ್ಲಿ ಗಣಪತಿ ನಮಗೆ ದಕ್ಕುತ್ತಾನೆ, ಗರಿಕೆಗೂ ಒಲಿಯುತ್ತಾನೆ ಎನ್ನುವುದು ಇದಕ್ಕೆ ಅಲ್ಲವೆ.*

*ರಾಮಾಯಣ, ಮಹಾಭಾರತಗಳಲ್ಲೂ ಆತನ ಶಕ್ತಿಯನ್ನು ಕೊಂಡಾಡಿದ್ದಾರೆ. ಸ್ವತಃ ರಾಮ, ಕ್ರಿಷ್ಣರೂ ವಿಘ್ನ ನಿವಾರಣೆಗಾಗಿ ಆತನನ್ನೇ ಪೂಜಿಸಿದ್ದಾರೆ. "ಬದುಕಿನಲ್ಲಿ ಇನ್ನೇನು ಎಲ್ಲವೂ ಮುಗಿದೇ ಹೋಯಿತು ಎಂಬ ಅಸಹಾಯಕ ಪರಿಸ್ಥಿತಿಯಲ್ಲಿ ಒಮ್ಮೆ ಆ ಗಜಮುಖನನ್ನು ಭಕ್ತಿಯಿಂದ ನೆನೆದಲ್ಲಿ ಘಟನೆಗಳೇ ಬದಲಾಗಿ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಕ್ರಿಷ್ಣನೇ ಒಂದೆಡೆ ಹೇಳುತ್ತಾನೆ. ಎಷ್ಟಾದರೂ ಶಮಂತಕ ಮಣಿ ಕದ್ದ ಆರೋಪದಿಂದ ಕ್ರಿಷ್ಣ ಮುಕ್ತನಾದದ್ದು ಇದೇ ಗಣಪತಿಯ ನೆನೆದು ಅಲ್ಲವೆ.*

ಹೀಗೆ ಜ್ಞಾನ ಮತ್ತು ಕ್ರಿಷಿಯ ಅಧಿದೇವತೆಯಾದ ಗಣೇಶನು ಎಲ್ಲರಿಗೂ ಶುಭತರಲಿ. ಗಣೇಶ ಚರ್ತುಥಿಯ ಹಾರ್ದಿಕ ಶುಭಾಶಯಗಳು. 🌰🌰

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

Wednesday, 23 August 2017

ಗೌರಿ ಗಣೇಶ

ಭಾದ್ರಪದ ಮಾಸದ ಮೊದಲ ಹಬ್ಬ ಗೌರಿಹಬ್ಬ.
ಗೌರಿ ಸಮ್ರದ್ಧಿಯ ಸಂಕೇತ, ಗಣಪತಿ ಶುಭ ಹಾಗೂ ಲಾಭದ ಸಂಕೇತ.
ಹಾಗಾಗಿ ಎಲ್ಲಿ ಸಮ್ರದ್ಧಿ ಇರುತ್ತದೊ ಅಲ್ಲಿ ಶುಭ ಹಾಗೂ ಲಾಭ ಇರುತ್ತದೆ. ಅರ್ಥಾತ್ ಎಲ್ಲಿ ಮಳೆ ಬಿದ್ದು ಬೆಳೆ ಸಮ್ರದ್ಧವಾಗಿದೆಯೊ ಅಲ್ಲಿ ಶುಭ ಹಾಗೂ ಲಾಭ ನೆಲೆಸುತ್ತದೆ. ಆದುದರಿಂದ, ಗೌರಿ ಬಂದ ಮೇಲೆ ಗಣೇಶ ಬರುವುದು ಇದನ್ನೇ ಸಂಕೇತಿಸುತ್ತದೆ.

ಭಾದ್ರಪದ ಮಾಸ ಬೆಳೆ ಕೈಗೆ
ಬರುವ ಕಾಲ ಹಾಗಾಗಿ ಕಣಜ ತುಂಬಿದ ಧವಸ ಧಾನ್ಯ ಸಮ್ರದ್ಧತೆಯನ್ನೂ ಹಾಗೂ ಗ್ರಹಿಣಿ ಮುಂದಿನ ಒಂದು ವರುಷ ಆ ಧವಸ ಧಾನ್ಯದಿಂದ ಮನೆ ನಿಭಾಯಿಸುವ ನಿಟ್ಟಿನಲ್ಲಿ ಮಂಗಳಗೌರಿಯನ್ನು ಪೂಜಿಸಿ ಸಮ್ರದ್ಧತೆಯನ್ನು ಸಂಕೇತಿಸುತ್ತಾರೆ.

ಶ್ರಾವಣದ ತನಕ ಹೊಲದಲ್ಲಿ ಬೆಳೆಗಾಗಿ ಕೆಲಸ ಮಾಡುವ ಹೆಂಗಸರ ಗಾಜಿನ ಬಳೆಗಳು ಒಡೆದು ಹೋಗುವುದು ಸಹಜ, ಮತ್ತೆ ಬಳೆ ಖರೀದಿಸಲು ಸಮ್ರದ್ಧ ಫಸಲು ಕೈ ಸೇರಬೇಕು ಹಾಗಾಗಿ ಗೌರಿ ಹಬ್ಬದಂದು ಮಹಿಳೆಯರು ಬಳೆ ತೊಡುತ್ತಾರೆ.

ಈ ಗೌರಿ ಹಬ್ಬ ಬರೀ ಆರ್ಥಿಕ ಸಮ್ರದ್ಧತೆ ತರದೆ ಕ್ರಿಷಿ, ಆರೋಗ್ಯ, ಮನಸ್ಥಿತಿಯಲ್ಲೂ ಸಮ್ರದ್ಧತೆ ತರಲಿ.

*ಗೌರಿ ಗಣೇಶ ಹಬ್ಬದ ಶುಭಾಶಯಗಳು*

ಹಬ್ಬವನ್ನು ಅರಿತು ಆಚರಿಸೋಣ

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Sunday, 13 August 2017

ಕೃಷ್ಣಾ ಎನಬಾರದೆ


ಕರ್ಷತಿ ಇತಿ ಕೃಷ್ಣಾ , ಯಾವುದು ಆಕರ್ಷಿಸುತ್ತದೊ ಅದು ಕೃಷ್ಣಾ . ಕೃಷ್ಣನ ಬಣ್ಣ ಕಪ್ಪು ಮತ್ತು ಕಪ್ಪು ಬಹಳ ಬೇಗ ಸೆಳೆಯಲ್ಪಡುತ್ತದೆ. ಕಪ್ಪು ನಿಗೂಢತೆಯ ಸಂಕೇತ ಕೃಷ್ಣನಾದರೂ ಎಷ್ಟು ತಿಳಿದರೂ ತಿಳಿಯಲಾಗದ ನಿಗೂಢನಾಗಿದ್ದಾನೆ.

ಹಾಲಿನಂತಹ ವಿಚಾರವೇ ಆದರೂ ಜ್ಞಾನದ ಕಡೆಗೋಲಿನಿಂದ ಮಥಿಸಿದಾಗ ಬರುವ ಸತ್ಯ ಎಂಬ ಬೆಣ್ಣೆಯೇ ಶ್ರೇಷ್ಠ ಎಂದು ತಿಳಿಸಿದ ನವನೀತಚೋರ.

ತಾಯಿಯಾದವಳಿಗೆ ತನ್ನ ಕಂದನ ಲೀಲಾವಿನೋದದಲ್ಲೇ ಸಕಲ ಬ್ರಹ್ಮಾಂಡ ಕಾಣಿಸುತ್ತದೆ ಎನ್ನುವುದನ್ನು ತಿಳಿಸಿಕೊಟ್ಟ ಬಾಲಕೃಷ್ಣಾ.

ಗೋಪಿಕೆಯರ ಸೀರೆ ಕದ್ದು ಕಳ್ಳನಾಗುತ್ತಾನೆ, ದ್ರೌಪದಿಗೆ ಅಕ್ಷಯ ವಸನವನಿತ್ತು ರಕ್ಷಕನಾಗುತ್ತಾನೆ, ಅರ್ಜುನನ ರಥಕ್ಕೆ ಸಾರಥಿಯಾಗುತ್ತಾನೆ, ಗೀತೆಯ ಬೋಧಿಸಿ ನಮ್ಮ ಬದುಕಿನ ರಥಕ್ಕೇ ಸಾರಥ್ಯ ನೀಡುತ್ತಾನೆ, ಕೊಳಲ ಊದಿ ಸಂಗೀತಗಾರನಾಗುತ್ತಾನೆ, ಸೆರೆಮನೆಯಲಿ ಜನಿಸಿ ಭವಸೆರೆಯ ಬಿಡಿಸುತ್ತಾನೆ.

ಆತನ ಕೊಳಲು ಮತ್ತು ಶಂಖ ಪ್ರೀತಿ ಹಾಗೂ ಯುದ್ಧದ ಸಂಕೇತ, ಎಲ್ಲಿ ಪ್ರೀತಿ ಇದೆಯೊ ಅಲ್ಲಿ ಯುದ್ಧ ಇಲ್ಲ ಮತ್ತು ಎಲ್ಲಿ ಯುದ್ಧ ಇದೆಯೊ ಅಲ್ಲಿ ಪ್ರೀತಿ ಇರಲು ಸಾಧ್ಯವಿಲ್ಲ.

ವಸುದೇವಕಿಯರ ಕುಡಿಯಾಗಿ, ನಂದ ಯಶೋಧೆಯರ ಕಂದನಾಗಿ, ಸುಧಾಮನಿಗೆ ಸಖನಾಗಿ, ರುಕ್ಮಿಣಿಗೆ ಪ್ರಿಯಕರನಾಗಿ, ಅರ್ಜುನನಿಗೆ ಮಾರ್ಗದರ್ಶಕನಾಗಿ, ದ್ರೌಪದಿಗೆ ಪ್ರೀತಿಯ ಅಣ್ಣನಾಗಿ, ಹೀಗೆ ನಮ್ಮ ಜೀವನದಲ್ಲಿ ನಾವು ನಿಭಾಯಿಸುವ ಹಲವು ಪಾತ್ರಗಳನ್ನೇ ಉತ್ತಮವಾಗಿ ನಿಭಾಯಿಸಿ ತೋರಿಸಿಕೊಟ್ಟ ಸಕಲಗುಣಸಂಪನ್ನ ಕಪಟನಾಟಕಸೂತ್ರಧಾರಿ ಶ್ರೀಕೃಷ್ಣಾ ಎಲ್ಲರನ್ನೂ ಹರಸಲಿ...

ಕೃಷ್ಣಾ ಜನ್ಮಾಷ್ಟಮಿಯ ಶುಭಾಶಯ

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು