Wednesday, 6 September 2017

ಪಿತೃ ಪಕ್ಷ

*ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಪಿತೃ ಪಕ್ಷವೆಂದೂ ಕರೆಯುತ್ತಾರೆ. ಈ ಹದಿನೈದು ದಿನಗಳು ನಮ್ಮ ಅಗಲಿದ ಪೂರ್ವಜರನ್ನು ಸ್ಮರಿಸುವ ಕಾರಣ ಇದನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ.*

*ಅಗಲಿದ ಆತ್ಮಗಳಿಗೆ ಮಾಡುವ ಶ್ರಾದ್ಧವು ನಮ್ಮ ಮನಸ್ಸಿಗೆ ಒಂದು ಬಗೆಯ ನೆಮ್ಮದಿಯನ್ನು ಕಲ್ಪಿಸುತ್ತದೆ ತನ್ಮೂಲಕ ಅವರ ಆತ್ಮವು ಶಾಂತಿಯನ್ನು ಪಡೆಯಿತು ಎಂದು ಪರಿಭಾವಿಸಬಹುದು.*

*ಅಗ್ನಿ ಪುರಾಣ, ಗರುಡ ಪುರಾಣ, ಮತ್ಸ್ಯ ಪುರಾಣಗಳು ಈ ಶ್ರಾದ್ಧ ಕಾರ್ಯದ ಮೇಲೆ ವಿಶದವಾಗಿ ತಿಳಿಸಿದೆ. ಯಮನು ಈ ಪಿತೃ ಪಕ್ಷದ ಬಗ್ಗೆ ತಿಳಿಸಿದ ಎಂಬ ಪ್ರತೀತಿ ಇದೆ.*

*ಪಿತೃ ಪಕ್ಷದ ಕುರಿತು ಒಂದು ಕಥೆಯು ಈ ರೀತಿಯಾಗಿದೆ. ಕರ್ಣನು ಸಾವನಪ್ಪಿದ ಮೇಲೆ ಆತನ ಆತ್ಮವು ದೇವಲೋಕ ತಲುಪಿತು. ಅಲ್ಲಿ ಆತನಿಗೆ ಇಂದ್ರ ಒಡವೆಗಳನ್ನು ಊಟದ ರೀತಿಯಲ್ಲಿ ಅರ್ಪಿಸಿದನು. ಇದನ್ನು ಕಂಡ ಕರ್ಣನ ಆತ್ಮವು ಇಂದ್ರನಲ್ಲಿ ನನಗೆ ಒಡವೆ ಅಲ್ಲ ಊಟ ಬೇಕಿದೆ ಎಂದು ಕೇಳಲು ಇಂದ್ರನು "ಕರ್ಣ ನೀನು ನಿನ್ನ ಜೀವನದಲ್ಲಿ ಎಲ್ಲರಿಗೂ ಒಡವೆ ವಸ್ತುಗಳನ್ನೇ ದಾನ ಮಾಡಿದೆ ಆದರೆ ನಿನ್ನ ಅಗಲಿದ ಪೂರ್ವಜರಿಗೆ ಒಂದು ತುತ್ತು ಅನ್ನ ಅವರ ನೆನಪಲ್ಲಿ ನೀಡಲಿಲ್ಲ" ಎಂದು ಹೇಳಿದ. ಕರ್ಣನು ತನಗೆ ತನ್ನ ಪೂರ್ವಜರಾರು ಎಂದು ಗೊತ್ತಿರಲಿಲ್ಲ ಎಂದು ಕಾರಣ ಹೇಳಲು ಇಂದ್ರನು ಕರ್ಣನಿಗೆ ಪಿತೃ ಪಕ್ಷದ ಹದಿನೈದು ದಿನಗಳು ಶ್ರಾದ್ಧ ಮಾಡಲು ಅವಕಾಶ ಕಲ್ಪಿಸಿದ ಎಂದೂ ಅದೇ ನಂತರ ಪಿತೃ ಪಕ್ಷವಾಯಿತು ಎಂದೂ ಪ್ರತೀತಿ ಇದೆ. ಈ ಕಥೆಯ ಅಂತರಾರ್ಥವು ಮನುಷ್ಯ ಎಷ್ಟೇ ಒಳ್ಳೆ ಕಾರ್ಯ ಮಾಡಲಿ ಆತ ತನ್ನ ಅಗಲಿದ ಹಿರಿಯರನ್ನು ಸ್ಮರಿಸದಿದ್ದರೆ ಆತನಿಗೆ ಅದು ಶ್ರೇಯಸ್ಸಲ್ಲ ಎಂದು ತಿಳಿಸುತ್ತದೆ.*

*"ಶ್ರದ್ಧ್ಯ ಪಿತ್ರಾನ್ ಉದ್ಧಿಶ್ಯ ವಿಧೀನ ಕ್ರಿಯತೆ ಯತ್ ಕರ್ಮ ತಥಾ ಶ್ರಾದ್ಧಂ" ಅರ್ಥಾತ್ ಅಗಲಿದ ಆತ್ಮೀಯರ ನೆನಪಲ್ಲಿ ಭಕ್ತಿಯಿಂದ ಮಾಡುವ ಯಾವುದೇ ಕಾರ್ಯ ಅದುವೆ ಶ್ರಾದ್ಧ.*

*ಕೃಷ್ಣನು ಭಗವದ್ಗೀತೆಯಲ್ಲಿ ಆತ್ಮವನ್ನು ನೈನಂ ಚಿದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕ ಎಂಬುದಾಗಿ ಹೇಳಿದ್ದಾನೆ ಅರ್ಥಾತ್ ಆತ್ಮವನ್ನು ಶಸ್ತ್ರದಿಂದ ಕತ್ತರಿಸಲಾಗದು ಬೆಂಕಿಯಿಂದ ದಹಿಸಲಾಗದು ಎಂದು ಹಾಗಿದ್ದರೆ ಈ ಆತ್ಮಕ್ಕೆ ಶ್ರಾದ್ಧದ ಹೆಸರಲ್ಲಿ ಪಿಂಡವನ್ನು ಏಕೆ ಪ್ರಧಾನ ಮಾಡಬೇಕು. ಆತ್ಮಕ್ಕೆ ಹಸಿವಿದೆಯೆ ಎಂದು ಕೇಳಬಹುದು. ಮೂಲದಲ್ಲಿ ಅಗಲಿದ ನಮ್ಮ ಹಿರಿಯರ ಮೂರು ತಲೆಮಾರಿನ ಆತ್ಮವನ್ನು ಸ್ಮರಿಸುವುದೇ ಮುಖ್ಯವಾಗಿದ್ದು ಸ್ಮರಿಸುವ ವಿಧಾನವನ್ನು ಪಿಂಡ ಪ್ರಧಾನದ ಮೂಲಕ ನಡೆಸಲಾಗುತ್ತದಷ್ಟೆ. ಶ್ರಾದ್ಧವನ್ನು ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಬೇಕೆ ವಿನಃ ದುಂದುವೆಚ್ಚದಿಂದಲ್ಲ ಎಂದು ಶಾಸ್ತ್ರವು ತಿಳಿಸುತ್ತದೆ. ಏನೂ ಇಲ್ಲದ ಒಬ್ಬ ಬಡವನು ಬರಿ ತನ್ನ ಅಗಲಿದ ಪೂರ್ವಜರನ್ನು ನೆನೆದು ತನ್ನಲ್ಲಿ ಭಕ್ತಿ ವಿನಃ ನೀಡಲು ಬೇರೆನೂ ಇಲ್ಲ ಎಂದು ಹೇಳುವುದೂ ಶ್ರಾದ್ಧವೇ ಎಂದು ಹೇಳಿದೆ. ತಥಾ ಶ್ರಾದ್ಧವು ಬರಿ ಸತ್ತವರಿಗೆ ಅನ್ನ ಇಡುವುದಕ್ಕಿಂತಲೂ ಅವರನ್ನು ಭಕ್ತಿಯಿಂದ ಸ್ಮರಿಸುವುದಷ್ಟೇ ಆಗಿದೆ*

ಹೀಗೆ ಭಾದ್ರಪದ ಕೃಷ ಪಕ್ಷದ ಪಾಡ್ಯದಿಂದ ಶುರುವಾಗುವ ಪಿತೃ ಪಕ್ಷ ಮಹಾಲಯ ಅಮವಾಸ್ಯೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಇಂದಿನಿಂದ ಆರಂಭವಾಗುವ ಈ ಪಿತೃ ಪಕ್ಷದಲ್ಲಿ ಪೂರ್ವಜರು ಹರಸಿ ಹಾರೈಸಲಿ.

*ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು*

No comments:

Post a Comment

Note: only a member of this blog may post a comment.