Monday, 11 September 2017

ಅನಂತಪದ್ಮನಾಭನ ರೂಪವು ಏನನ್ನು ಪ್ರತಿನಿಧಿಸುತ್ತದೆ?

ಸನಾತನ ಧರ್ಮವು ಜಗತ್ತಿನ ಅತ್ಯಂತ ಪುರಾತನ ಧರ್ಮ ಎಂಬುವುದು ನಮ್ಮೆಲ್ಲರಿಗೂ ತಿಳಿದ ವಿಚಾರವಾಗಿದೆ. ಬರೀ ಒಂದು ಧರ್ಮವಾಗಿರದೆ ವಿಶಾಲ ತತ್ವಗಳನ್ನು ಜಗತ್ತಿಗೆ ಸಾರಿದ ಶ್ರೇಷ್ಠ ಧರ್ಮವಾಗಿದೆ. ಒಂದು ಪುರಾತನ ಧರ್ಮವು ಅನೇಕ ಮತ ಪಂಥ ಧರ್ಮಗಳಿಂದ ಅವ್ಯಾಹತ ದಾಳಿಗೆ ಒಳಗಾಗಿದ್ದು, ಆಳ ಹರಿವುಗಳ ತಪ್ಪುಗ್ರಹಿಕೆಯಿಂದ ಅನೇಕ ಮೂಢಾಚಾರ, ಗೊಡ್ಡು ಅರ್ಥಹೀನ ಪದ್ಧತಿಗಳು ಇದರೊಳಗೆ ಸೇರಿಕೊಂಡಿದ್ದು ದುರಂತವೆ. ಆ ಕಾರಣಕ್ಕಾಗಿಯೇ ಅನೇಕ ಟೀಕೆ ಟಿಪ್ಪಣಿಗಳಿಗೆ ಒಳಗಾಗಿದ್ದೂ ನಿಜವೆ. ಅವೆಲ್ಲಾ ಟೀಕೆಗಳನ್ನು ಹಿಂದೂ ಧರ್ಮ ಸಮರ್ಥವಾಗಿ ಸ್ವೀಕರಿಸಿ ಬದಲಾವಣೆಗೆ ತೆರೆದುಕೊಂಡಷ್ಟು ಬೇರಾವ ಧರ್ಮವೂ ಇರಲಾರದು.

ಇಂದಿಗೂ ಕೂಡ ಅನೇಕ ಧಾರ್ಮಿಕ ವಿಚಾರಗಳು ನಮ್ಮಲ್ಲಿ ಪ್ರಶ್ನೆಗಳಾಗಿಯೇ ಉಳಿದಿವೆ. ಎಷ್ಟೊ ಬಾರಿ ನಮ್ಮ ಧರ್ಮದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥ ವಿವರಣೆಗಳೇ ದೊರಕದೆ ತಡಕಾಡುತ್ತೇವೆ. ದೇವತೆಗಳ ರೂಪದ ಬಗ್ಗೆಯೂ ನಮ್ಮಲ್ಲಿ ಜಿಜ್ಞಾಸೆ ಮೂಡದೇ ಇಲ್ಲ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿಯೇ ಈ ಅಂಕಣ.

ಶೇಷಶಯನ ಶ್ರೀಮನ್ನಾರಾಯಣನ ರೂಪವನ್ನೊಮ್ಮೆ ಕಲ್ಪಿಸಿಕೊಳ್ಳಿ ಅಥವಾ ಇತ್ತೀಚಿಗಷ್ಟೇ ಸುದ್ದಿಯಾದ ಅನಂತಪದ್ಮನಾಭನನ್ನೇ ನೆನಪಿಸಿಕೊಳ್ಳಿ. ಹಾವಿನ ಹಾಸಿಗೆಯ ಮೇಲೆ ಪವಡಿಸಿದ ವಿಷ್ಣವು ನೆನಪಾಗುತ್ತಾನೆ. ಹಾವಿನ ಹೆಡೆಗಳು ಕೊಡೆಯಂತೆ ಮೇಲಕ್ಕೆ ತೆರೆದಿರುವ, ವಿಷ್ಣವು ನಿದ್ರಾಭಂಗಿಯಲ್ಲಿರುವಂತೆ, ಹೊಕ್ಕುಳಿನಿಂದ ಕಮಲದ ದಂಟು ಮೇಲೆದ್ದು ಅಲ್ಲಿ ಅರಳಿದ ಕಮಲದ ಮೇಲೆ ವಯಸ್ಸಾದ ಬ್ರಹ್ಮನು ಕುಳಿತಿರುವ ಜೊತೆಗೆ ಕಾಲ ಬುಡದಲ್ಲಿ ಶ್ರೀ ಲಕ್ಷ್ಮಿಯು ಸ್ಥಿತಳಾಗಿರುವ ಚಿತ್ರ ಕಣ್ಣಿಗೆ ಕಟ್ಟುತ್ತದೆ.

ಅಯ್ಯೊ, ಯಾರಾದರೂ ಹಾವಿನ ಹಾಸಿಗೆಯ ಮೇಲೆ ಮಲಗಲು ಸಾಧ್ಯವೆ, ಹಾಗೆ ಮಲಗಿದರೆ ನಿದ್ರೆ ಬಂದೀತೆ, ಅಲ್ಲದೆ ಜಗವನ್ನೇ ಸಲಹುವ ವಿಷ್ಣುವೇ ಹೀಗೆ ಮಲಗಿದರೆ ಮಾನವರ ಗತಿಯೇನು, ಹೊಕ್ಕುಳಿನಿಂದ ಮೇಲೆದ್ದ ಕಮಲದ ಮೇಲೆ ಬ್ರಹ್ಮ ಕುಳಿತುಕೊಳ್ಳುವುದೆಂದರೇನು. ಅಲ್ಲದೆ ಬ್ರಹ್ಮನನ್ನು ವಿಷ್ಣುವಿನ ಮಗನೆಂದು ಹೇಳಲಾಗುತ್ತದೆ ಆದರೆ ಇಲ್ಲಿ ತಂದೆಯಾದ ವಿಷ್ಣುವು ಯುವಕನಂತೆಯೂ ಮಗನಾದ ಬ್ರಹ್ಮನು ವಯಸ್ಸಾದಂತೆಯೂ ತೋರುತ್ತಿದೆ, ಅಲ್ಲದೆ ಪತ್ನಿಯಾದ ಶ್ರೀ ಲಕ್ಷ್ಮಿಯು ಕಾಲ ಬುಡದಲ್ಲಿ ಇದೇನು ಸ್ತ್ರೀ ಶೋಷಣೆಯೆ. ಹೀಗೆ ಅನೇಕ ಪ್ರಶ್ನೆಗಳ ಮೂಲಕ ಉತ್ತರ ಹೊಳೆಯದೆ ಎಷ್ಟೊ ಬಾರಿ ಇದೊಂದು ಗೊಡ್ಡು ಧರ್ಮ ಎಂದು ಅವಹೇಳನವೂ ಅದೆಷ್ಟೊ ಬಾರಿ ನಡೆದಿದೆ.

ಆದರೆ, ಹಿಂದೂ ಧರ್ಮದ ಕಥೆಗಳನ್ನು ಯಥಾವತ್ತು ಸ್ವೀಕರಿಸಿದರೆ ನಾವು ಎಂದಿಗೂ ಅದರ ಮೂಲ ತತ್ವವನ್ನು ಅರ್ಥ ಮಾಡಿಕೊಳ್ಳಲಾರೆವು. Hinduism= Symbolism ಎಂಬ ತತ್ವದ ಆಧಾರದ ಮೇಲೆ ನಾವು ಈ ರೂಪದ ಸಂಕೇತಗಳನ್ನು ಅರ್ಥೈಸಿದಾಗ ಮಾತ್ರ ಅದರ ಗೂಢಾರ್ಥವನ್ನು ಗ್ರಹಿಸಲು ಸಾಧ್ಯ.

ಸಂಕೇತಗಳ ಆಧಾರದ ಮೇಲೆ ನೋಡುವುದಾದರೆ ಅನಂತಪದ್ಮನಾಭ ರೂಪವು ಬರೀ ನಿದ್ರಾಭಂಗಿಯಲ್ಲದೆ ಇಲ್ಲಿ ಆತ ಯೋಗ ನಿದ್ರೆಯ ರೂಪವನ್ನು ಪ್ರತಿನಿಧಿಸುತ್ತಾನೆ. ಪ್ರತಿ ಮನುಷ್ಯನ ಮೂಲಾಧಾರದಲ್ಲಿ ಅರ್ಥಾತ್ ಬೆನ್ನುಮೂಳೆಯ ಮೂಲದಲ್ಲಿ ಸುರುಳಿ ಸುತ್ತಿದ ಹಾವಿನ ರೀತಿಯಲ್ಲಿ ಶಕ್ತಿಯು ಸ್ಥಿತವಾಗಿದೆಯೆಂದೂ, ವಿವಿಧ ಆಸನಗಳ ಮೂಲಕ ವಿಭಿನ್ನ ಚಕ್ರಗಳನ್ನು ಜಾಗ್ರತಗೊಳಿಸಿ ಆ ಮೂಲಕ ಹಾವಿನ ಹೆಡೆಯಂತೆ ಶಕ್ತಿಯನ್ನು ಮೇಲ್ಮುಖವಾಗಿ ಪ್ರವಹಿಸುವಂತೆ ಮಾಡುವುದನ್ನು ಯೋಗವು ತಿಳಿಸುತ್ತದೆ. ಅದನ್ನೇ ಈ ರೂಪವು ಮೂಲವಾಗಿ ಪ್ರತಿಪಾದಿಸುತ್ತದೆ. ಅನಂತಪದ್ಮನಾಭ ಯಾ ಶೇಷಶಯನನು ಯೋಗ ನಿದ್ರೆಯ ಮೂಲಕ ಮತ್ತು ಹೆಡೆಚಾಚಿದ ಹಾವು ಆಂತರ್ಯದ ಶಕ್ತಿಯನ್ನು ಜಾಗ್ರತಗೊಳಿಸುವ ಸಂಕೇತವನ್ನು ನೀಡುತ್ತಿದೆ.

ಯೋಗವು ವಿವಿಧ ನಾಡಿಗಳಲ್ಲಿ ಚಕ್ರಗಳನ್ನು ಉದ್ದೀಪಿಸುತ್ತಾ ಅಷ್ಟದಳ ಪದ್ಮವನ್ನು ಅರಳಿಸುವ ಬಗ್ಗೆ ನಾವು ಕೇಳಿದ್ದೇವೆ. ಅದನ್ನೇ ನಾಭಿಯಿಂದ ಅರ್ಥಾತ್ ಹೊಕ್ಕುಳಿನಿಂದ ಹೊರಬಂದ ತಾವರೆಯು ಪ್ರತಿನಿಧಿಸುತ್ತದೆ. ಯಾರು ಅಷ್ಟದಳ ಪದ್ಮದಿಂದ ಅರಳಿದ್ದಾರೊ ಅವರು ಪದ್ಮನಾಭನನ್ನೇ ಪ್ರತಿನಿಧಿಸುತ್ತಾರೆ. ಶಾಂತ ಮತ್ತು ಸಾತ್ವಿಕ. ಮತ್ತು ಯಾವಾಗ ಪದ್ಮವು ಯೋಗದ ಮೂಲಕ ಅರಳುತ್ತದೊ ಆತ ಅಲೌಕಿಕ ಜ್ಞಾನದ ಮಹಾನಿಧಿಯಾಗುತ್ತಾನೆ. ಮಾನವ ಸಹಜ ಗುಣಗಳಾದ ಅರಿಷಡ್ವರ್ಗಗಳನ್ನು ಮೀರಿ ಆತ ಬ್ರಹ್ಮನನ್ನೇ ಪಡೆಯುತ್ತಾನೆ. ತಥಾ ಹೊಕ್ಕುಳಿನಿಂದ ಹೊರಬಂದ ಪದ್ಮದ ಮೇಲಿನ ಬ್ರಹ್ಮ ಯೋಗದಿಂದ ಪಡೆದ ಅಲೌಕಿಕ ಜ್ಞಾನವನ್ನು ಪ್ರತಿನಿಧಿಸುತ್ತಾನೆ.

ಇನ್ನು ಯೋಗದಿಂದ ಬ್ರಹ್ಮಜ್ಞಾನ ಕೈವಶವಾದರೂ ಜ್ಞಾನವು ಪುರಾತನವಾದುದು. ಅದು ನಮ್ಮಿಂದ ಉತ್ಪತ್ತಿಯಾಗಿದ್ದರೂ ಅದು ನಮ್ಮೊಳಗೆ ಮೊದಲೆ ಸ್ಥಿತವಾಗಿರುವುದು ತಸ್ಮಾತ್ ತಂದೆಯಾದ ವಿಷ್ಣು ಯುವಕನಂತೆಯೂ ಮಗನಾದ ಬ್ರಹ್ಮನು ವಯಸ್ಸಾದಂತೆ ಕಲ್ಪಿಸಲಾಗಿದೆ.

ಇನ್ನು ಶ್ರೀಲಕ್ಷ್ಮಿಯು ಹಣ ಸಿರಿ ಸಂಪತ್ತುಗಳನ್ನು ಸಂಕೇತಿಸುತ್ತಾಳೆ. ಇವೆಲ್ಲವೂ ಲೌಕಿಕ ಆಸೆಗಳನ್ನು ಪ್ರತಿನಿಧಿಸುತ್ತದೆ. ಯಾವಾಗ ಯೋಗಧ್ಯಾನದಿಂದ ಚಕ್ರಗಳನ್ನು ಉದ್ದೀಪಿಸಿ ಪದ್ಮವನ್ನು ಅರಳಿಸಿ, ಕುಂಡಲಿನಿ ಶಕ್ತಿಯು ಜಾಗ್ರತಿ ಹೊಂದಿ ಹೆಡೆ ಮೇಲೆದ್ದ ಸರ್ಪದೊಂದಿಗೆ ಬ್ರಹ್ಮಜ್ಞಾನವು ಪ್ರಾಪ್ತವಾಗುತ್ತದೊ ಆವಾಗ ಲೌಕಿಕ ಕಾಮನೆಗಳು ಕಾಲ ಬುಡಲ್ಲಿರುತ್ತವೆ ಅರ್ಥಾತ್ ಕ್ಷುಲ್ಲಕವೆನಿಸುತ್ತವೆ. ಅಲೌಕಿಕ ಸಿರಿಯೇ ಶಾಶ್ವತ ಎಂಬ ಕಲ್ಪನೆ ಮೂಡುತ್ತದೆ.

ತನ್ಮೂಲಕ ಶೇಷಶಯನ ಅನಂತಪದ್ಮನಾಭ ರೂಪವು ಯೋಗದ ಮೂಲ ತತ್ವವನ್ನೂ, ಲೌಕಿಕಾಲೌಕಿಕದ ಪರಮ ಸತ್ಯವನ್ನೂ ತಿಳಿಸುತ್ತದೆ.

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.