ಹಿಂದೂ ಧರ್ಮವು ಅನೇಕ ಕಥೆಗಳ ಮೂಲಕ ಬದುಕಿನ ಮೂಲತತ್ವಗಳನ್ನು ಜಗತ್ತಿಗೆ ಸಾರಿದೆ. ಆದರೆ ಈ ಕಥೆಗಳನ್ನು ಯಥಾವತ್ತು ಸ್ವೀಕರಿಸಿದರೆ ಗೊಂದಲಕ್ಕೆ ಒಳಗಾಗುವುದು ಶತಸಿದ್ಧ. ಕಥೆಗಳನ್ನು ಆಳವಾಗಿ ಗ್ರಹಿಸಿದಾಗ ಮಾತ್ರ ಅದರ ಅಂತರ್ ಸತ್ವ ಗ್ರಾಹ್ಯವಾಗುತ್ತವೆ. ಜನರನ್ನು ಕಥೆಗಳ ಮೂಲಕ ಚಿಂತನೆಗೆ ಹಚ್ಚಿ ತನ್ಮೂಲಕ ಬದುಕಿನ ಸತ್ಯಗಳನ್ನು ಹೇಳುವ ಧರ್ಮ ಈ ಜಗತ್ತಿನಲ್ಲಿ ಇನ್ನೊಂದಿರಲಿಕ್ಕಿಲ್ಲ.
ಬ್ರಹ್ಮನ ಕಥೆಯನ್ನೇ ನೋಡೋಣ. ಸನಾತನ ಧರ್ಮದಲ್ಲಿ ಬರುವ ತ್ರಿಮೂರ್ತಿಗಳಲ್ಲಿ ಬ್ರಹ್ಮ ಪ್ರಮುಖನು. ಬ್ರಹ್ಮ ಮತ್ತು ಸರಸ್ವತಿಯ ಕುರಿತು ಅನೇಕ ಕಥೆಗಳಿದೆ. ಒಂದು ಕಥೆಯಲ್ಲಿ ಸರಸ್ವತಿಯು ಬ್ರಹ್ಮನ ಬಾಯಿಂದ ಉದಿಸಿದಳು ಎಂದು ಹೇಳಿದರೆ, ಮತ್ತೊಂದು ಕಥೆಯು ಆಕೆಯು ಬ್ರಹ್ಮನ ವೀರ್ಯದಿಂದ ಜನಿಸಿದಳು ಎಂದು ಹೇಳುತ್ತವೆ. ಒಟ್ಟಿನಲ್ಲಿ ಬ್ರಹ್ಮನ ಮೂಲಕ ಜನಿಸಿದಳಾದ್ದರಿಂದ ಆಕೆ ಬ್ರಹ್ಮನ ಮಗಳು ಎನ್ನುವುದು ವಿಧಿತ.
ನಂತರದಲ್ಲಿ ಬ್ರಹ್ಮನು ಸರಸ್ವತಿಯ ರೂಪು ಲಾವಣ್ಯಕ್ಕೆ ಮನಸೋತು ಆಕೆಯನ್ನು ನೆಟ್ಟನೋಟದಿಂದ ನೋಡತೊಡಗಿದನಂತೆ. ಇದರಿಂದ ಕೋಪಗೊಂಡ ಸರಸ್ವತಿಯು ಆತನ ನೋಟದಿಂದ ತಪ್ಪಿಸಿಕೊಳ್ಳಲು ದಿಕ್ಕು ದಿಕ್ಕಿಗೆ ಓಡಿದಳಂತೆ. ಆದರೆ ಬ್ರಹ್ಮ ಆಕೆ ಹೋದ ಕಡೆಯೆಲ್ಲ ಆಕೆಯನ್ನು ನೋಡುವ ಸಲುವಾಗಿ ನಾಲ್ಕು ದಿಕ್ಕಿಗೂ ತಲೆಗಳನ್ನು ಸೃಷ್ಟಿಸಿದನಂತೆ . ನಾಲ್ಕು ದಿಕ್ಕಿನಿಂದ ನೋಡುತ್ತಿದ್ದ ಬ್ರಹ್ಮನ ನೋಟದಿಂದ ತಪ್ಪಿಸಲು ಸರಸ್ವತಿಯು ಮೇಲಕ್ಕೆ ಹೋದಳಂತೆ ಆ ಕ್ಷಣ ಬ್ರಹ್ಮನು ತನ್ನ ಐದನೇ ತಲೆಯನ್ನು ಊರ್ಧ್ವಮುಖವಾಗಿ ಅರ್ಥಾತ್ ಮೇಲ್ಮುಖವಾಗಿ ಸೃಷ್ಟಿಸಿದನಂತೆ. ಸಂಕಷ್ಟಕ್ಕೆ ಸಿಲುಕಿದ ಸರಸ್ವತಿ ಶಿವನಿಗೆ ಮೊರೆ ಇಟ್ಟಳಂತೆ. ಕುಪಿತಗೊಂಡ ಶಿವನು ಬ್ರಹ್ಮನ ಊರ್ಧ್ವಮುಖವಾದ ಐದನೇ ತಲೆಯನ್ನು ಚಿವುಟಿ ಹಾಕಿದನಂತೆ. ತದನಂತರದಲ್ಲಿ ಸರಸ್ವತಿಯನ್ನು ಒಪ್ಪಿಸುವಲ್ಲಿ ಸಫಲನಾದ ಬ್ರಹ್ಮನು ಸರಸ್ವತಿಯೊಂದಿಗೆ ವಿವಾಹವಾಗಿ ತನ್ಮೂಲಕ ಸೃಷ್ಟಿ ಕಾರ್ಯ ನಿರ್ವಹಿಸಿದನು ಎಂಬ ಉಲ್ಲೇಖಗಳು ಭಿನ್ನ ಭಿನ್ನ ಕಥೆಗಳೊಂದಿಗೆ ನಮಗೆ ದೊರಕುತ್ತವೆ.
ಈಗ ಪ್ರಶ್ನೆಗೆ ಬರೋಣ, ಅತ್ಯಂತ ಸಂಸ್ಕಾರವಂತ ಧರ್ಮದಲ್ಲಿ ಮಗಳನ್ನೇ ಮದುವೆಯಾಗುವ ಬ್ರಹ್ಮನ ಕಲ್ಪನೆ ಹೇಗೆ ಬಂತು? ಮಾನವರಲ್ಲೇ ಇಂತಹ ಸಂಬಂಧಗಳನ್ನು ಕಲ್ಪಿಸಲು ಒಪ್ಪದಿರುವಾಗ ದೇವರನ್ನು ಈ ಕಲ್ಪನೆಯಲ್ಲಿ ಹೇಗೆ ಕಾಣುವುದು? ಬ್ರಹ್ಮ ಸರಸ್ವತಿಯನ್ನು ನೋಡಲು ಸುತ್ತಲೂ ತಿರುಗುವುದನ್ನು ಬಿಟ್ಟು ಯಾಕೆ ನಾಲ್ಕೈದು ತಲೆ ಸೃಷ್ಟಿಸಿದ ? ಶಿವನು ಬ್ರಹ್ಮನ ಒಂದು ತಲೆಯನ್ನು ಮಾತ್ರ ಏಕೆ ಚಿವುಟಿದ? ಸರಸ್ವತಿ ನಂತರದಲ್ಲಿ ವಿವಾಹಕ್ಕೆ ಒಪ್ಪಿದ್ದಾದರು ಏಕೆ?
ಉತ್ತರಿಸುವ ಮೊದಲು ಮತ್ತೊಮ್ಮೆ ನೆನಪಿಸುತ್ತೇನೆ. ಡಾ. ಆರತಿಯವರು ಹೇಳುವಂತೆ Hinduism=Symbolism ಅರ್ಥಾತ್ ಹಿಂದೂ ಧರ್ಮ ಸಂಕೇತವನ್ನು ಹೇಳುವಂತದ್ದು ಹಾಗಾಗಿ ಈ ಕಥೆಯನ್ನು ಯಥಾವತ್ತು ನೋಡುವುದು ಸಾಧ್ಯವಿಲ್ಲ.
ಬ್ರಹ್ಮ ಎಂದರೆ ಜ್ಞಾನ. ಬ್ರಹ್ಮಾಂಡದ ಸಕಲ ಜ್ಞಾನವನ್ನು ಪ್ರತಿನಿಧಿಸುವವನೇ ಬ್ರಹ್ಮ. ಆತ ಅಗಾಧ ಜ್ಞಾನವನ್ನು ಪ್ರತಿನಿಧಿಸುವುದರಿಂದ ಇಲ್ಲಿ ಜ್ಞಾನದ ಅರ್ಥ ವಿಶಾಲವಾಗಿದೆ. ಸರಸ್ವತಿ ವಿದ್ಯೆಯನ್ನು ಪ್ರತಿನಿಧಿಸುತ್ತಾಳೆ. ಈ ಜಗತ್ತಿನಲ್ಲಿ ಅನೇಕ ವಿದ್ಯೆಗಳಿದ್ದು ಆ ಎಲ್ಲಾ ವಿದ್ಯೆಗಳ ಮೂಲ ತತ್ವವನ್ನು ಸರಸ್ವತಿ ಪ್ರತಿನಿಧಿಸುತ್ತಾಳೆ. ವಿದ್ಯೆಗಳು ಅಗಾಧ ಜ್ಞಾನ ರಾಶಿಯಿಂದ ಹುಟ್ಟುವಂತದ್ದು. ಈ ಜಗತ್ತಿನಲ್ಲಿ ಇಂದಿಗೂ ಕೂಡ ಹೊಸ ಹೊಸ ವಿದ್ಯೆಗಳು ಹುಟ್ಟುತ್ತಿವೆ. ಆದರೆ ವಿದ್ಯೆ ಹುಟ್ಟಬೇಕದರೆ ಅಗಾಧ ಜ್ಞಾನದ ಅವಶ್ಯಕತೆ ಇದೆ. ಅಲ್ಲಿಗೆ ವಿದ್ಯೆ ಹುಟ್ಟಲು ಜ್ಞಾನವೇ ಕಾರಣ ಎಂಬುವುದು ವಿಧಿತವಾಯಿತು. ತಸ್ಮಾತ್ ವಿದ್ಯೆ (ಸರಸ್ವತಿ) ಜ್ಞಾನದಿಂದ (ಬ್ರಹ್ಮನಿಂದ) ಹುಟ್ಟಿದಳು ಎಂದಾಯಿತು. ಹಾಗಾಗಿ ಆಕೆ ಬ್ರಹ್ಮನ ಮಗಳು.
ಬ್ರಹ್ಮನ ನೋಟದಿಂದ ತಪ್ಪಿಸಲು ದಿಕ್ಕು ದಿಕ್ಕಿಗೆ ಚಲಿಸಿದ ಸರಸ್ವತಿಯನ್ನು ನೋಡಲು ಸೃಷ್ಟಿಯಾದ ನಾಲ್ಕು ತಲೆಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತದೆ. ಬ್ರಹ್ಮ ಎಂದರೆ ಜ್ಞಾನ, ವೇದ ಎಂದರೂ ಜ್ಞಾನ. ವೇದಗಳು ಬ್ರಹ್ಮನ ಬಾಯಿಗಳಿಂದ ಹೊಮ್ಮಿತು ಎನ್ನುವುದು ಸಹಜವಾಗಿಯೇ ನಾಲ್ಕು ತಲೆಗಳು ನಾಲ್ಕು ವೇದವನ್ನು ಪ್ರತಿನಿಧಿಸುತ್ತವೆ. ಐದನೇ ತಲೆಯು ಮ್ರತ್ಯುವಿನ ನಂತರದ ಸತ್ಯವನ್ನು ತಿಳಿಸುತ್ತದೆ. ಇದು ಗೂಢವಾದ ಸತ್ಯವಾಗಿದೆ. ಸಾವಿನ ಅನಂತರದ ಸತ್ಯವು ರಹಸ್ಯಜ್ಞಾನವಾಗಿದೆ. ಶಿವನು ಕಾಲನಾಗಿದ್ದಾನೆ. ಶಿವ ಎಲ್ಲಾ ಜೀವದ ಲಯಕಾರಕ. ಆತ ಲೇಪಿಸಿದ ಭಸ್ಮ ಎಲ್ಲಾ ನಾಶದ ನಂತರ ಉಳಿದು ಹೋಗುವ ಆತ್ಮವನ್ನು ಪ್ರತಿನಿಧಿಸುತ್ತದೆ. ಆದುದರಿಂದ ಸಾವಿನ ಅನಂತರದ ಸತ್ಯವು ಶಿವನಿಗೆ ಆರೋಪಿಸಲಾಗಿದೆ. ಹಾಗಾಗಿ ಐದನೇ ತಲೆಯನ್ನು ಶಿವ ಚಿವುಟಿ ಹಾಕಿರುವುದು ಸಮಂಜಸವೇ ಆಗಿದೆ.
ಇನ್ನು ಈ ಜಗತ್ತಿನಲ್ಲಿ ವಿದ್ಯೆಯು ಜ್ಞಾನದ ಸಂಯೋಗದೊಂದಿಗೆ ಮಾತ್ರ ಬೆಳವಣಿಗೆಗೆ ಸಹಕಾರಿ. ಉದಾಹರಣೆಗೆ ಇಂದು ಅನೇಕರು ವಿದ್ಯೆಯನ್ನು ಪಡೆದಿದ್ದಾರೆ ಆದರೆ ಅದನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಜ್ಞಾನವನ್ನೇ ಪಡೆದಿಲ್ಲ. ಇನ್ನು ಜ್ಞಾನ ಇದ್ದವರಿಗೆ ಆ ವಿಷಯದ ಕುರಿತು ವಿದ್ಯೆಯು ಕೂಡ ಅಷ್ಟೇ ಅವಶ್ಯಕ. ಹಾಗಾಗಿ ಜ್ಞಾನ (ಬ್ರಹ್ಮ) ಮತ್ತು ವಿದ್ಯೆ (ಸರಸ್ವತಿ) ಒಂದರ ಜೊತೆ ಒಂದು ಗಂಡ ಹೆಂಡಿರಂತೆ ಕೂಡಿದಾಗ, ಬೆಸೆದಾಗ, ಸೇರಿಕೊಂಡಾಗ ನಾವು ಹೆಚ್ಚು ಸಮರ್ಥವಾಗಿ ಆಳವಾಗಿ ಪಾಂಡಿತ್ಯವನ್ನು ಪಡೆಯಲು ಸಾಧ್ಯ. ಹೀಗೆ ಸರಸ್ವತಿಯು ತನ್ನದೇ ತಂದೆಯನ್ನು ವರಿಸಿದಳು ಎಂದು ಪರಿಭಾವಿಸಬಹುದು.
ಒಟ್ಟಿನಲ್ಲಿ ಬ್ರಹ್ಮ ಮತ್ತು ಸರಸ್ವತಿಯ ರೂಪ ಜ್ಞಾನ ವಿದ್ಯೆಗಳ ಮೂಲಕ ಮಾನವನ ಲೌಕಿಕದಿಂದ ಅಲೌಕಿಕದೆಡೆಗಿನ ಬೆಳವಣಿಗೆಯನ್ನು ತಿಳಿಸುತ್ತದೆ.
ಈ ಮೇಲಿನ ಅಂಕಣವು ಹಲವು ಅಧ್ಯಯನದೊಂದಿಗೆ ನನ್ನದೇ ಪರಿಕಲ್ಪನೆಯಲ್ಲಿ ಮೂಡಿನಿಂತಿರುವುದರಿಂದ ಇದು ಹೀಗೆಯೇ ಎಂದು ಪರಿಭಾವಿಸಬೇಕಿಲ್ಲ. ಆದರೆ ಹೀಗೂ ಇರಬಹುದು ಎಂಬುವುದೂ ನಿಜ.
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.