Tuesday, 31 October 2017

ತುಳಸಿ ವಿವಾಹ

"ವೃಂದ್ಯಾಯ್ಯೆ, ತುಳಸಿ ದೇವ್ಯೆಯ್ಯೆ, ಪ್ರಿಯಾಯ್ಯೆ ಕೇಶವಸ್ಯ ಚ
ಕೃಷ್ಣ ಭಕ್ತಿ ಪ್ರದೆ ದೇವಿ, ಸತ್ಯವತ್ಯೆಯ್ಯೆ ನಮೋ ನಮಃ"
🌿🌿🌿🌿🌿🌿🌿🌿🌿🌿🌿
ಭಾರತೀಯ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ಔಷಧೀಯ ಏವಂ ಪಾವಿತ್ರ್ಯದ ಸ್ಥಾನವನ್ನು ಕಲ್ಪಿಸಲಾಗಿದೆ... ಹಿಂದು ಧರ್ಮವು ತುಳಸಿಯನ್ನು ದೈವಿಕ ಎಂದೂ ಭಾವಿಸಿದೆ... ವೈಷ್ಣವಿ, ಹರಿಪ್ರಿಯಾ, ಶ್ರೀ ತುಳಸಿ, ರಾಮಾ ತುಳಸಿ, ಕೃಷ್ಣ ತುಳಸಿ ಮುಂತಾದ ಹೆಸರಿನಿಂದ ತುಳಸಿಯನ್ನು ಕರೆಯುತ್ತಾರೆ...
🌿🌿🌿🌿🌿🌿🌿🌿🌿🌿🌿
ವಿಷ್ಣುವಿಗೆ ಅತ್ಯಂತ ಪ್ರಿಯ ಎಂದು ಭಾಗವತ ಪುರಾಣ ಹಾಗೂ ಇತರೆ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ...
🌿🌿🌿🌿🌿🌿🌿🌿🌿🌿🌿
ಕೃಷ್ಣನನ್ನು ತುಳಸಿಯ ದಳದಿಂದ ತೂಗಿದ ಕಥೆ ಜನಜನಿತ... "ಒಲ್ಲನೊ ಹರಿ ಕೊಳ್ಳನೊ, ಎಲ್ಲಾ ಸಾಧನವಿದ್ದು ತುಳಸಿ ಇಲ್ಲದ ಪೂಜೆ" ಎಂದು ಪುರಂದರ ದಾಸರು ತುಳಸಿಯ ಪಾರಮ್ಯವನ್ನು ಹಾಡಿಕೊಂಡಾಡಿದ್ದಾರೆ....
🌿🌿🌿🌿🌿🌿🌿🌿🌿🌿🌿
ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ರಾತ್ರಿ ತುಳಸಿ ಗಿಡವನ್ನು ನೆಲ್ಲಿಯ ಗಿಡದೊಂದಿಗೆ ಪೂಜಿಸಿ ವಿವಾಹ ಸಂಪನ್ನಗೊಳಿಸಲಾಗುತ್ತದೆ... ಮುಂದೆ ಬರುವ ಮಾಘಮಾಸದ ಚಳಿಯ ಕುಳಿರ್ಗಾಳಿಗೆ ದೇಹಕ್ಕೆ ನೆಲ್ಲಿ ಮತ್ತು ತುಳಸಿ ಉತ್ತಮ ಔಷಧೀಯ ಸಸ್ಯಗಳು... ಈ ನಿಟ್ಟಿನಲ್ಲಿ ಇವುಗಳ ಪೂಜೆ ಸಾಂಕೇತಿಕವೂ ಹೌದು...
🌿🌿🌿🌿🌿🌿🌿🌿🌿🌿🌿
ಚಾತುರ್ಮಾಸ ಮುಗಿಸುವ ಸ್ವಾಮೀಜಿಗಳು ತುಳಸಿ ವಿವಾಹ ನೆರವೇರಿಸಿ ತಮ್ಮ ದೈನಂದಿನ
ವೃತದಲ್ಲಿ ಮುಂದುವರೆಯುತ್ತಾರೆ.... ತುಳಸಿ ವಿವಾಹವು ನಂತರದ ತಿಂಗಳುಗಳಲ್ಲಿ ಬರುವ ಮದುವೆಗಳಿಗೆ ಅಧಿಕೃತ ಚಾಲನೆಯೂ ಹೌದು...
🌿🌿🌿🌿🌿🌿🌿🌿🌿🌿🌿
ತುಳಸಿ ಬೃಂದಾವನವು ಸಕಲ ಆಯಃ, ಆರೋಗ್ಯ, ಸ್ವಸ್ಥ ಮನಸ್ಸು, ಐಶ್ವರ್ಯ ಸಿದ್ಧಿ ಕರುಣಿಸಿ ಕಾಪಾಡಲಿ.....

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

ಕನ್ನಡ ರಾಜ್ಯೋತ್ಸವ

ಜನಪದ, ಚಂಪೂ, ರಗಳೆ, ತ್ರಿಪದಿ, ವಚನ, ಕೀರ್ತನೆ, ನವ್ಯ, ಪ್ರಗತಿಶೀಲ, ನವೋದಯ, ದಲಿತ, ಬಂಡಾಯ ಮುಂತಾದ ಸಾಹಿತ್ಯದಿಂದ 📚

ಯಕ್ಷಗಾನ, ಕೋಲಾಟ, ಹಗಲುವೇಷ, ಡೊಳ್ಳುಕುಣಿತ, ಕಂಸಾಳೆ,
ಮುಂತಾದ ನ್ರತ್ಯ ಪ್ರಕಾರದಿಂದ 💃🏻🏃🏽

ಸೋಬಾನೆ ಹಾಡು, ಗೀಗಿಪದ, ಪಾಡ್ದಾನ, ಓಬೇಲೆ ಹಾಡು, ಭಾವಗೀತೆ ಮುಂತಾದ ಪದ್ಯ ಪ್ರಕಾದಿಂದ 🎤🎼

ಪಂಪ, ರನ್ನ, ಪೊನ್ನ, ಜನ್ನ, ಕುವೆಂಪು, ದ ರಾ ಬೇಂದ್ರೆ ಮೊದಲಾದ ಮಹಾಕವಿಗಳಿಂದ ✍🏼

ಮಲೆಗಳಲ್ಲಿ ಮದುಮಗಳು, ಕಾನೂರ ಹೆಗ್ಗಡತಿ, ದಾಟು, ಮೂಕಜ್ಜಿಯ ಕನಸುಗಳು, ಗ್ರಹಭಂಗ, ಸಂಸ್ಕಾರ ಮುಂತಾದ ಅದ್ಭುತ ಕಾದಂಬರಿಗಳಿಂದ 📚

ಚಾಳುಕ್ಯ, ಕದಂಬ, ಗಂಗ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮೊದಲಾದ ರಾಜಮನೆತನಗಳಿಂದ⚔🛡

ಬಸವಣ್ಣ, ದಾಸರು, ಷರೀಫರು, ಅಕ್ಕ ಮಹಾದೇವಿ ಮತ್ತು ಇತರೆ ವಚನಕಾರ್ತಿಯರು ಮೊದಲಾದ ಚಿಂತಕರಿಂದ 👳🏽👩🏾

ಕರಾವಳಿ, ಮಲೆನಾಡು, ಬಯಲುಸೀಮೆ, ಬೆಟ್ಟ, ಗುಡ್ಡ, ಬಂಡೆ, ಝರಿ ತೊರೆ ಸಮುದ್ರಗಳಿಂದ 🏔🏖

ಹಲ್ಮಡಿ, ಆತಕೂರು, ದೇಕಬ್ಬೆ ಮುಂತಾದ ಶಾಸನಗಳಿಂದ ⚠

ಹಲವು ಜನಾಂಗ, ಜಾತಿ, ಮತ, ಪಂಥ, ಧರ್ಮಗಳಿಂದ 👦🏻👲🏼🎅🏻
ಮಂದಿರ, ಮಸೀದಿ, ಇಗರ್ಜಿ, ಸ್ತೂಪ, ವಿಹಾರ, ಜಿನಾಲಯಗಳಿಂದ 🕋🕍⛪🕌

ಖಾದ್ಯ ವೈವಿಧ್ಯಗಳಿಂದ 🍲🍵☕

 
"ಕನ್ನಡ" ಎಂಬ ಶಬ್ಧಮಣಿ ಮೂಲಕ ಒಟ್ಟಾಗಿರುವ ಸಂಪದ್ಭರಿತ ಕರ್ನಾಟಕದ "ಕನ್ನಡ ರಾಜ್ಯೋತ್ಸವ" ಶುಭಾಶಯಗಳು

"ಯೋಗೀಶ್ ಮಲ್ಲಿಗೆಮಾಡು"🙏🏽🙏🏽

Thursday, 19 October 2017

ದೀಪದ ಸಾಲು

ಮಣ್ಣಿನ ಧರ್ಮ ಒತ್ತಿದ ಆಕಾರದ ರೂಪು ಪಡೆಯುವುದು
ಹತ್ತಿಯ ಧರ್ಮ ಮ್ರದುತ್ವ
ಎಣ್ಣೆಯ ಧರ್ಮ ನೆನೆಸುವುದು
ಬೆಂಕಿಯ ಧರ್ಮ ಉರಿಸುವುದು
ಗಾಳಿಯ ಧರ್ಮ ಬೆಂಕಿಯಂತಹ ಬೆಂಕಿಯನ್ನೂ ನಂದಿಸುವುದು 🌪
ಆದರೆ, ಭಿನ್ನ ಧರ್ಮಗಳ ಈ ಎಲ್ಲಾ ವಸ್ತುಗಳು ಜೊತೆ ಸೇರಿದಾಗ ಮಾತ್ರ ನಿಚ್ಚಳ ಬೆಳಕು....

ಜೀವನವಾದರೂ ಅಷ್ಟೇ, ಹಲವು ಭಿನ್ನ ಧರ್ಮಗಳು
ಭಿನ್ನ ವ್ಯಾಖ್ಯಾನಗಳು
ಭಿನ್ನ ಸಿದ್ಧಾಂತಗಳು
ಆದರೆ, ಈ ಭಿನ್ನ ಧರ್ಮಗಳ ಮೂಲ ತತ್ವ ಮಾತ್ರ ಶಾಂತಿ.

ಶುಭ ದೀಪಾವಳಿ
ಯೋಗೀಶ್ ಮಲ್ಲಿಗೆಮಾಡು

ದೀಪದ ಕವಿತೆಗಳು

ನೀ ಬರುವ ಹಾದಿ ಕಾಯುತ್ತಾ,
ದಶಕಗಳಿಂದಲೂ ಒಂಟಿಯಾಗೇ ಬೆಳಗುತ್ತಿರುವೆ
ಈ ದೀಪದಂತೆ.
****************************************
ಈ ದೀಪಾವಳಿಗೆ ನೀನಿರುತ್ತಿದ್ದರೆ
ನಾವಿಬ್ಬರೂ ಕಣ್ಣಲ್ಲೇ ದೀಪ ಹಚ್ಚಬಹುದಿತ್ತು!! ****************************************
ಬದುಕೆಂಬ ಖಾಲಿ ತೂತಿನ ಜೋಳಿಗೆ ಧರಿಸಿ,
ಬಾಳ ಹಾದಿಯಲಿ ಸಿಕ್ಕ ಪ್ರೀತಿಯನ್ನ ಅದೇ ಜೋಳಿಗೆಗೆ ಇಳಿಸಿ,
ಸಾಗುತ್ತಿರುವ ಈ ಬರಿಗೈಯ ಫಕೀರನ ಕಣ್ಣ ತುಂಬಾ,
ಮೂರು ದಿನದ ದೀಪಾವಳಿಯ ಸಂಭ್ರಮ.
****************************************
ದೀಪದಿಂದ ಮಾತ್ರ ದೀಪವನ್ನು ಹಚ್ಚಬಹುದು,
ಪ್ರೀತಿಯಿಂದ ಮಾತ್ರ ಪ್ರೀತಿ.
ಬರೀ ಹಣತೆ, ಬರೀ ಎಣ್ಣೆ, ಬರೀ ಬತ್ತಿ, ಬರೀ ಗಾಳಿ,
ದೀಪ ಉರಿಯಲು ಸಾಧ್ಯವಿಲ್ಲ,
ಎಲ್ಲವೂ ಜೊತೆಯಾದಾಗ ಬೆಳಕು.
ಬದುಕಿನಲ್ಲೂ ಅಷ್ಟೇ...
*****************************************
ಈ ದೀಪಾವಳಿಗೆ ನೀ ಜೊತೆಗಿರುತ್ತಿದ್ದರೆ,
ಮನಮನೆಯ ತುಂಬಾ ಸಾವಿರ ದೀಪದ ಹೊಳಪಿರುತ್ತಿತ್ತು,
ಕಂಗಳಲಿ ನೂರು ಮತಾಪಿನ ಸಿಡಿತದ ಸಂಭ್ರಮವಿರುತ್ತಿತ್ತು,
ಎದೆಯಲ್ಲಿ ಆಕಾಶ ದೀಪದ ಹೂಮಾಲೆಯ ಬೆಳಕಿರುತ್ತಿತ್ತು.
*****************************************
ಮನೆಯೊಳಗೆ ಬೆಳಗುವ ಹಣತೆ,
ಎದೆಯೊಳಗೆ ಉರಿಯುವ ಭರವಸೆಯ ದೀಪ,
ಎರಡೂ ಹೊರಗಿನ ಗಾಳಿಗೆ ಆರದಿರಲಿ!
*****************************************
ಈ ದೀಪಾವಳಿಗೆ
ನಿನ್ನ ಕಣ್ಣಲ್ಲಿ ಬೆಳಗುವ ಹಣತೆ,
ನನ್ನ ಕಣ್ಣ ಹಣತೆಗಳ ಬೆಳಗೀತೆ...?
*****************************************
ಮನೆಯ ಮುಂದಿನ ಗೋಡೆಯ ಮೇಗಡೆ,
ಸಾಲಾಗಿ ಬೆಳಗುವ ಮಣ್ಣ ಹಣತೆಗಳು
ಗೋಡೆಯಾಚೆಗಿನ ಸಂಬಂಧವನು ಬೆಳಗಲಿ..
*****************************************
ಸಾವಿರ ದೀಪದ ಸಾಲುಗಳು ಬೆಳಗಿ ಕರಗುತ್ತವೆ
ಕತ್ತಲಷ್ಟೇ ಮೂಡಿ...
ಬೆಳಗಿದ ಹಣತೆ ತೋರಿದ ಸತ್ಯ ಉಳಿಯುತ್ತದೆ ಮನದಲ್ಲಿ ನೋಡಿ...

ಯೋಗೀಶ್ ಮಲ್ಲಿಗೆಮಾಡು

Wednesday, 18 October 2017

ದೀಪಾವಳಿಗೆ ಇದನ್ನೊಮ್ಮೆ ಓದಿರಿ

ದೀಪಾವಳಿಯೊಂದು ವಿಶೇಷವಾದ ಹಬ್ಬ. ಬೇರೆಲ್ಲಾ ಹಬ್ಬಕ್ಕಿಂತ ಭಿನ್ನವಾದ ಸಾವಿರ ಅರ್ಥಗಳ ಹೊಳೆಯಿಸುವ ಬೆಳಕಿನ ಹಬ್ಬ!!

ಜಗತ್ತಿನ ಮೂಲ ತತ್ವವೇ ಶಾಖ ಅರ್ಥಾತ್ ಅಗ್ನಿ. ನಾವೆಲ್ಲರೂ ಬದುಕುತ್ತಿರುವುದಕ್ಕೆ ಮೂಲಕಾರಣ ಸೂರ್ಯ (ಅಗ್ನಿ). ಸೂರ್ಯ ಎನ್ನುವ ಕೇಂದ್ರ ಸ್ಥಾನವೇ ಇಲ್ಲದಿದ್ದರೆ? ಎಲ್ಲಿಯ ಮಳೆ? ಎಲ್ಲಿಯ ಬೆಳೆ? ಎಲ್ಲಿಯ ನೀರು? ಎಲ್ಲಿಯ ಜೀವಿಗಳು?
ಹಾಗಾಗಿ, ಅಂತಹ ಅಗ್ನಿಯನ್ನು ದೀಪಗಳ ಸಾಲಲ್ಲಿ ಪ್ರತಿಷ್ಠಾಪಿಸುವ ತನ್ಮೂಲಕ ಸಾಲು ಸಾಲು ದೀಪಗಳ ಶಾಖೋತ್ಪನ್ನದಲ್ಲಿ ಬದುಕಿನ ಅರ್ಥವನ್ನು ಅರ್ಥೈಸುವ ಈ ಹಬ್ಬದ ಹಿಂದೆ ಎಂತಹ ಉದ್ಧಾತ ಕಲ್ಪನೆ!!!

ಇನ್ನು ಮಾನವನ ಜೀವಿತದ ಮೂಲ ತತ್ವ ಉಸಿರು ಅರ್ಥಾತ್ ಗಾಳಿ. ನಾವೆಲ್ಲರೂ ಜೀವಿಸುತ್ತಿರುವುದಕ್ಕೆ ಮೂಲ ಕಾರಣ ಉಸಿರು (ಗಾಳಿ). ಉಸಿರು ಎಂಬ ಮೂಲ ತತ್ವ ಇಲ್ಲದಿದ್ದರೆ? ಎಲ್ಲಿಯ ಬದುಕು? ಎಲ್ಲಿಯ ಚೇತನ? ಎಲ್ಲವೂ ಬರೀ ಶವ.
ಅಲ್ಲಿಗೆ ನಾವು ಬದುಕುವುದಕ್ಕೆ ಶಾಖ ಬೇಕು ಮತ್ತು ಜೀವಿಸುವುದಕ್ಕೆ ಗಾಳಿ. ಎರಡೂ ಪ್ರಮುಖವಾದವು.

ದೀಪದಲ್ಲಿರುವುದು ಶಾಖ ಮತ್ತು ದೀಪ ಬೆಳಗಲು ಗಾಳಿ ಬೇಕು. ಗಾಳಿ ಅತಿಯಾದರೆ ದೀಪ ನಂದುತ್ತದೆ. ಹಾಗೆಂದು ಗಾಳಿಯೇ ಅತಿಶಾಖದಿಂದ ಕೂಡಿದರೆ ಬದುಕು ಅಸಾಧ್ಯ ಮತ್ತು ಗಾಳಿ ಅತಿ ಶೀತಲವಾದರೂ ಬದುಕು ಅಸಾಧ್ಯ. ದೀಪದಲ್ಲಿ ಸಮನಾದ ಗಾಳಿ ಇದ್ದರೆ ದೀಪ ಬೆಳಗುತ್ತದೆ, ಗಾಳಿಯಲ್ಲಿ ಮಿತವಾದ ಶಾಖವಿದ್ದರೆ ಹಿತವಾಗುತ್ತದೆ. ಅರ್ಥಾತ್ ಗಾಳಿ ಮತ್ತು ಶಾಖದ ಸಮವಾದ ಮಿಲನ ಮಾತ್ರ ಬದುಕನ್ನು ಹಸನಾಗಿಸುತ್ತದೆ. ಈ ಭೂಮಿಯಾದರೂ ಗಾಳಿ ಮತ್ತು ಶಾಖದ ಹಿತಮಿತವಾದ ವ್ಯವಸ್ಥೆಯೆ ಆಗಿದೆ.

ದೀಪಾವಳಿಯೂ ಇದೆ ತತ್ವದ ಹಬ್ಬ ಅಲ್ಲವೆ? ಸೂರ್ಯನೇ (ಅಗ್ನಿ) ಇರದ ಮಳೆಗಾಲದಿಂದ ಚಳಿಗಾಲದ ಶೀತಗಾಳಿಯ ಕಡೆಗೆ ಹೊರಳುವ ಈ ಸಂಧಿಕಾಲದಲ್ಲಿ ಹಣತೆ ಹಣತೆಗಳಲ್ಲಿ ದೀಪ ಹಚ್ಚಿ ಶಾಖ ಮತ್ತು ಗಾಳಿಯ ಮೂಲ ಕಲ್ಪನೆಯ ಜೊತೆ ಸಮೀಕರಿಸುವ ದೀಪಾವಳಿ ಹಬ್ಬ ಸನಾತನ ಧರ್ಮದ ಅಮೋಘ ಆಚರಣೆಯಲ್ಲೊಂದು.

ಸರಿ ಎನಿಸಿದರೆ ಇತರರೊಡನೆ ಹಂಚಿಕೊಳ್ಳಿ.

ರಚನೆ: ಯೋಗೀಶ್ ಮಲ್ಲಿಗೆಮಾಡು