ಅಡಿಕೆ ಸಾಲಿನ ತೋಟ, ತಂಪು ಬೀಸಿದ ಹಾದಿ,
ಹೆಮ್ಮರದ ಬುಡದಲ್ಲಿ ನಾಗ ಕಲ್ಲು.
ಇಳಿಬಿದ್ದ ಹೂಬಳ್ಳಿ, ಬನಬನದಿ ಹಸಿರ ಸಿರಿ,
ಕಾಡುಚಪ್ಪರದಿ ನುಸುಳುತಿಹ ಸೂರ್ಯರಶ್ಮಿ.
ಕೆಂಪು ಹಣ್ಣಿನ ಅರಳಿ, ಅಗಲದೆಲೆಗಳ ಆಲ,
ಜಡೆಯಾಗಿ ಜಟೆಯಾಗಿ ಜೋತ ಬಿಳಲು.
ನಾಗ ಕಲ್ಲಿನ ಮುಂದೆ, ಎಣ್ಣೆ ಜಿಡ್ಡಿನ ದೀಪ,
ಬುಡದಲ್ಲಿ ಬೆಳಗುತಿದೆ ದಾಸವಾಳ.
ಉದುರಿದಾಲದ ತರಗು, ಬೀಸು ಗಾಳಿಯ ಬೆರಗು,
ಸರಸರನೆ ಸದ್ದಿಟ್ಟ ಸರ್ಪ ಸದ್ದು.
ಸಹಜ ಶಾಂತಿಯ ಸೊಬಗು, ಬನದಿ ಸುಳಿಯುತಲಿರಲು,
ಗೆಲ್ಲು ಗೆಲ್ಲಿನ ಮೇಲೆ ಹಕ್ಕಿ ಹಾಡು.
ಜೇನ ಹೀರುವ ದುಂಬಿ, ಝೇಂಕಾರವನೆ ತುಂಬಿ,
ಬನದಲ್ಲಿ ಆಗಾಗ ಮಂತ್ರ ಘೋಷ.
ಕರಿನಾಗ ಕಲ್ಲಲ್ಲಿ, ಕಲ್ಲ ದೀಪಗಳಲ್ಲಿ,
ಬನವೆಲ್ಲ ಸುರಿಸುತಿದೆ ಭಕ್ತಿವರ್ಷ.
ಹಕ್ಕಿ ಉಲಿಹವೆ ಶ್ಲೋಕ, ಬೀಸು ಗಾಳಿಯೆ ನಾದ,
ಉದುರುತಿಹ ಹೂ ಮೊಗ್ಗೆ ಪುಷ್ಪವೃಷ್ಟಿ.
ಮನುಜನಿಲ್ಲದ ಲೋಕ, ಶಾಂತಿ ಪ್ರೇಮದ ನಾಕ
ಮೌನದೊಳು ಕಾಣುವುದು ದೈವಸೃಷ್ಟಿ.
No comments:
Post a Comment
Note: only a member of this blog may post a comment.