ಬಾನ ಬಯಲಿನ ಮುರಿದ ತಾರಕೆಗಳೇ
ಬನ್ನಿ ನನ್ನೆದೆಯ ಬೆಳಗಿ!
ಎಲ್ಲೋ ಕಟ್ಟಿದ ಕರಿಮುಗಿಲುಗಳೇ
ಬನ್ನಿ ನನ್ನೆದೆಯ ತಣಿಸಿ!
ಬೆಟ್ಟದಿಂದಿಳಿಯುತಿಹ ಬಿಳಿ ನೀರ ಝರಿಗಳೇ
ಹರಿದು ಬನ್ನಿರಿ ನನ್ನೆದೆಗಡಲ ಕಡೆಗೆ!
ಹಾಸಿ ಹರವಿದ ಶ್ರುತಿಗೊಂಡ ವೀಣೆಗಳೇ
ನುಡಿದು ತಾಕಿರಿ ನನ್ನೆದೆಯ ತಡಿಗೆ!
ಬಣ್ಣದೊಳೆ ಮೈ ಅದ್ದಿ ಹಾರುತಿಹ ಚಿಟ್ಟೆಗಳೇ
ಬನ್ನಿ ನನ್ನದೆಯ ಮಕರಂದ ಹೀರುವೊಲೆ!
ಬಿರಿದ ಮಲ್ಲಿಗೆ ಅರಳ ಹೂಬಳ್ಳಿ ಲತೆಗಳೇ
ಬನ್ನಿ ಸೂಸಿರಿ ಕಂಪು ನನ್ನೆದೆಯ ತೋಟದೊಳೆ!
ಮುಂಜಾವ ಮಂಜಿನಲಿ ಹಕ್ಕಿಗೊರಲಿನ ಹಾಡುಗಳೇ
ಬನ್ನಿ ಇನಿಗೈಯ್ದು ನನ್ನೆದೆಯ ತುಂಬಿರಿ!
ತೂಗಿ ತೊನೆದಾಡುತಿಹ ಹೆಜ್ಜೇನ ಗೂಡುಗಳೆ
ಬನ್ನಿ ನನ್ನೆದೆಬನವ ಮಧುಶಾಲೆ ಮಾಡಿರಿ!
ವಿಶ್ವಚೈತನ್ಯದ ಶಾಂತಿ ಪ್ರಭೆಗಳೇ
ಬನ್ನಿ ನನ್ನೆದೆಯೊಳಗೆ ಕಿರಣವನು ಬೀರಿ!
ನೋವ ಮರೆಸಿ, ನಗುವ ತರಿಸಿ
ಒಂದಾಗಿ ಬಾಳುವ ದಾರಿ ತೋರಿ!
ಬಾನ ಬಯಲಿನ ಮುರಿದ ತಾರಕೆಗಳೇ
ಬನ್ನಿ ನನ್ನೆದೆಯ ಬೆಳಗಿ!
ಎಲ್ಲೋ ಕಟ್ಟಿದ ಕರಿಮುಗಿಲುಗಳೇ
ಬನ್ನಿ ನನ್ನೆದೆಯ ತಣಿಸಿ!
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.