Sunday, 23 December 2018

ಕ್ರಿಸ್ಮಸ್ ರಾತ್ರಿ

ಡಿಸೆಂಬರ್ 25ರ ಕ್ರಿಸ್ಮಸ್ ನ ರಾತ್ರಿ. ಮೆಕ್ ಮತ್ತು ರೋಸ್ ದಂಪತಿಗಳು ನಿದ್ದೆ ಹೋಗಿದ್ದರು. ಮನೆಯೊಳಗೆ ಬೆಚ್ಚಗಿನ ವಾತಾವರಣವಿತ್ತು. ಹೊರಗೆ ಥಂಡಿ ಗಾಳಿ ಬೀಸುತ್ತಿತ್ತು. ಸುರಿಯುತ್ತಿದ್ದ ಮಂಜಿನ ನಡುವೆ ಕ್ರಿಸ್ಮಸ್ ಟ್ರೀಗೆ ಹಾಕಿದ್ದ ನಕ್ಷತ್ರ ಬಲ್ಬುಗಳು ಹೊಳೆಯುತ್ತಿತ್ತು.

ಬೆಚ್ಚಗಿದ್ದ ಮನೆಯೊಳಗೆ ತಣ್ಣನೆಯ ಗಾಳಿ ಆವರಿಸುತ್ತಿರುವ ಅನುಭವವಾಗಿ ರೋಸ್ ಎಚ್ಚೆತ್ತಳು. ಯಾಕಿಷ್ಟು ತಂಪಾಗುತ್ತಿದೆ ಎಂದೆಣಿಸುವಷ್ಟರಲ್ಲಿ ಕಿಟಕಿಯ ಬಾಗಿಲು ತಾನಾಗಿಯೇ ಅರ್ಧ ತೆರೆದುಕೊಂಡದ್ದು  ಗಮನಕ್ಕೆ ಬಂತು.

ಕಿಟಕಿಯನ್ನು ಹಾಕೋಣ ಎಂದು ಕಿಟಕಿಯ ಬಳಿ ಎದ್ದು ಬಂದವಳಿಗೆ ಗೋದಲಿಗೆ ಹಾಕಿದ್ದ ಮಿನುಕು ಬೆಳಕಿನ ಝಗಮಗದ ಪ್ರತಿಫಲನದಲ್ಲಿ ದೂರದಲ್ಲಿ ಅದ್ಯಾರೊ ಹೊದ್ದು ಕುಳಿತಂತೆ ಕಾಣಿಸಿತು. "ಸ್ನೋ ಬೀಳುತ್ತಿರುವ ಈ ಥಂಡೀ ಹೊತ್ತಲ್ಲಿ ಯಾರಿದು" ಎಂದು ತನಗೆ ತಾನೆ ಹೇಳಿಕೊಂಡು ಮೆಕ್ ಅನ್ನು ಕರೆದು ತಿಳಿಸಿದಳು.

ಮೆಕ್ ಬಾಗಿಲು ತೆರೆದು "ಹೇ, ಕಮ್ಮಿನ್. ಇಟ್ಸ್ ಕೋಲ್ಡ್ ಔಟ್ಸೈಡ್" ಎಂದು ಆತನನ್ನು ಒಳ ಕರೆದ. ಹೊದಿಕೆಯನ್ನು ಮತ್ತಷ್ಟು ಬಿಗಿಯಾಗಿ ಹೊದ್ದು ಮುದುಕ ಕೋಲೂರುತ್ತಾ ಮೆಕ್ ನ ಮನೆಯ ಬಾಗಿಲ ಮುಂದೆ ಬಂದು ನಿಂತುಕೊಂಡ.

"ಬನ್ನಿ ಒಳಗೆ. ಹೊರಗೆ ತುಂಬಾ ಥಂಡಿ ಇದೆ" ಎನ್ನುತ್ತಾ ಮೆಕ್ ಮುದುಕನನ್ನು ಒಳಗೆ ಕರೆದುಕೊಂಡು ಬಾಗಿಲು ಹಾಕಿದ. ಶೀತಲವಾಗಿದ್ದ ವಾತಾವರಣ ಒಮ್ಮೆಗೆ ಬೆಚ್ಚಗಾದ ಅನುಭವವಾಯಿತು. ಮುದುಕನ ಮುಖದಲ್ಲಿ ಒಂದು ಕಾಂತಿ, ಕಣ್ಣಲ್ಲಿ ತೇಜಸ್ಸನ್ನು ನೋಡಿದ ಮೆಕ್ ದಂಪತಿಗೆ ಆ ಮಂದ ಬೆಳಕಿನ  ಮನೆಯೊಳಗೆ ದಿವ್ಯ ಪ್ರಕಾಶವಾದ ಅನುಭವವಾಯಿತು.

ಯಾರು ನೀವು? ಈ ವಿಂಟರ್ ರಾತ್ರಿಯಲ್ಲಿ ಎಲ್ಲಿಗೆ ಹೊರಟಿದ್ದೀರಿ ರೋಸ್ ಆಪ್ಯಾಯವಾಗಿ ಕೇಳಿದಳು. ಮುದುಕ ನಗುತ್ತಾ ಹೇಳಿದ "ನಾನು ಲವ್". "ಲವ್... ನಿಮ್ಮ ಹೆಸರೆ?" ಮೆಕ್ ಪ್ರಶ್ನಾರ್ಥಕವಾಗಿ ಕೇಳಿದ್ದ. "ಹೌದು, ಅನಾದಿ ಕಾಲದಿಂದಲೂ ನಾನಿಲ್ಲಿದ್ದೇನೆ. ಕ್ರಿಸ್ತನ ಸಂದೇಶ ನಾನೆ. ಆದರೆ ಇಂದು ಎಲ್ಲರ ಹೃದಯದಿಂದ ನನ್ನನ್ನು ಹೊರಗೆಸೆದಿದ್ದಾರೆ. ಹಾಗಾಗಿಯೇ ನಾನು ಥಂಡಿ ರಾತ್ರಿಯಲ್ಲಿ ಹೊರಗಡೆ ತಿರುಗಾಡುತ್ತಿದ್ದೇನೆ. ಯಾರು ನನ್ನನ್ನು ಒಳಗೆ ಕರೆದುಕೊಳ್ಳುತ್ತಾರೊ ಅವರ ಹೃದಯವನ್ನು ಭಾವವನ್ನು ಬೆಚ್ಚಗಿಡುತ್ತೇನೆ. ಎಲ್ಲಿ ನಾನಿಲ್ಲವೊ ಅಲ್ಲಿ ಶೀತಲ ಸಂಕಟ." ಪ್ರೀತಿ ತುಂಬಿ ಮುದುಕ ನುಡಿಯುತ್ತಿದ್ದ.

ಮೆಕ್ ಮತ್ತು ರೋಸ್ ಕಣ್ಣುಗಳು ತುಂಬಿಕೊಂಡಿದ್ದವು. ಕಣ್ಣೀರುಗಳು ತಣ್ಣಗಿಲ್ಲ, ಬೆಚ್ಚಗಿದೆ. ಏಕೆಂದರೆ ಅವುಗಳು ಪ್ರೀತಿಯಿಂದ ನಮ್ಮ ಬಗ್ಗೆ ಅಥವಾ ಇನ್ನೊಬ್ಬರ ಬಗ್ಗೆ ವ್ಯಥೆಯುಂಟಾದಾಗ ಬರುವಂತದ್ದು. ಬೆಚ್ಚಗಿನ ಭಾವ! ಕಣ್ಣೀರ ಒರೆಸಿ ನೋಡುವಾಗ ಮುದುಕ ಮಾಯವಾಗಿದ್ದ!! ಮೆಕ್ ದಂಪತಿಯ ಹೃದಯದಲ್ಲಿ ಪ್ರೀತಿ ತುಂಬಿತ್ತು!!! ಗೋದಲಿಯಲ್ಲಿದ್ದ ಕ್ರಿಸ್ತ ನಗುತ್ತಿದ್ದ.

ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Saturday, 22 December 2018

ಹೀ'ಗೇ'ಕೆ ?

ಮಗನ ಪ್ರೀತಿಯನ್ನು ಮನೆಯಲ್ಲಿ ತಿರಸ್ಕರಿಸಲಾಗಿತ್ತು. ಮನೆಯಲ್ಲಿ ನೀರವ ಮೌನ. ಆಕೆ ತನ್ನ ಕೈಯಲ್ಲಿರುವ ಡೈರಿಯಲ್ಲಿನ ಆ ಪುಟವನ್ನೇ ದಿಟ್ಟಿಸುತ್ತಾ ಕೂತಿದ್ದಾಳೆ. ಅದರಲ್ಲಿ ಹೀಗೆಂದು ಬರೆದಿತ್ತು. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."

ಅವಳಿಗೆ ಅವಳ ಪ್ರೀತಿಯ ದಿನಗಳ ನೆನಪಾಯಿತು. ಮನೆಯಲ್ಲಿ ಧರ್ಮ ಜಾತಿಯ ಕಾರಣ ಅವಳ ಪ್ರೀತಿಯನ್ನು ಒಪ್ಪಲಿಲ್ಲ. ಅಪ್ಪ ಬೇರೆ ಹುಡುಗನನ್ನು ನೋಡುವ ತಯಾರಿಯಲ್ಲಿದ್ದರು. ಆಕೆ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಬದುಕು ಕಟ್ಟಿಕೊಂಡಳು. ಆಗ ಆ ಡೈರಿಯ ಪುಟದಲ್ಲಿ ಹಾಗೆಂದು ಬರೆದಿದ್ದಳು. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."

ಪ್ರೀತಿಸುವವನೊಂದಿಗೆ ಬದುಕು ಕಟ್ಟಿಕೊಂಡ ಆಕೆಗೆ ಒಂದು ಗಂಡು ಮಗುವೂ ಆಯಿತು. ಸುಖಿ ಕುಟುಂಬ. ಕಾಲ ಓಡಿದ್ದೇ ತಿಳಿಯಲಿಲ್ಲ. ಮಗನಿಗೀಗ 25 ವರ್ಷ. ಆತ ಹೆತ್ತವರೆದುರು ಬಂದು ನಿಂತು ತನ್ನ ಪ್ರೀತಿಯ ಬಗ್ಗೆ ಹೇಳಿದ್ದಾನೆ. ಆತನಿಗೆ ತನ್ನ ಗೆಳೆಯನ ಮೇಲೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

ಮನೆಯಲ್ಲಿ ಪ್ರೀತಿಯನ್ನು ನಿರಾಕರಿಸಲಾಯಿತು. ಕಾರಣ ಜಾತಿ ಬೇರೆ ಎನ್ನುವುದಲ್ಲ, ಧರ್ಮ ಬೇರೆ ಎನ್ನುವುದಲ್ಲ, ಲಿಂಗ ಒಂದೇ ಎನ್ನುವುದು!!

ದಿಟ್ಟಿಸುತ್ತಿದ್ದ ಪುಟವನ್ನು ಆಕೆ ಹರಿದು ಹಾಕಿದಳು. ಮಗ ಒಳಗೆ ಕೋಣೆಯಲ್ಲಿ ಕೂತು ಬರೆಯುತ್ತಿದ್ದಾನೆ. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."

ಯೋಗೀಶ್ ಮಲ್ಲಿಗೆಮಾಡು

Thursday, 20 December 2018

ಅಪರಿಚಿತ ಅಭಿಮಾನಿ

ಆಕೆ ಅಮೋಘವಾದ ನೃತ್ಯ ಮಾಡಿ ಹೊರಟು ಹೋಗಿದ್ದಳು.
ಚಪ್ಪಾಳೆಯ ಸದ್ದು ರಂಗ ಮಂದಿರದ ತುಂಬಾ ಇನ್ನೂ ಮೊಳಗುತ್ತಲೇ ಇದ್ದವು. ಆಕೆಯ ನೃತ್ಯಕ್ಕೆ ಆತ ಮನಸೋತಿದ್ದ. ಅವಳ ಕಾಲಗೆಜ್ಜೆ ಅಲ್ಲೇ ವೇದಿಕೆಯ ಮೇಲೆ ಜಾರಿ ಬಿದ್ದಿತ್ತು.
ಅವನು ಅದನ್ನು ಹೆಕ್ಕಿಕೊಂಡ!

ಆತ ಆಕೆಯ ಆಪ್ತ ಸಹಾಯಕನಾಗಿದ್ದರಿಂದ ಎಂದಿಗೂ ಅವಳೆದುರು ಪ್ರೇಮ ನಿವೇದನೆ ಮಾಡಿಕೊಳ್ಳುವ ಧೈರ್ಯವನ್ನು ಆತ ಮಾಡಲಿಲ್ಲ. ಆದರೆ ತನ್ನ ಪ್ರೇಮದ ಮಾತುಗಳನ್ನು ಆಕೆಗೆ ಅಪರಿಚಿತ ಅಭಿಮಾನಿಯಂತೆ ಪತ್ರ ಬರೆದು ತಿಳಿಸುತ್ತಿದ್ದ!

ಅವಳಾದರೂ ಆಪ್ತ ಸಹಾಯಕನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅವಳ ಪ್ರತಿ ನೃತ್ಯವೂ ಅವನಿಗೇ ಅರ್ಪಣೆ ಎಂದು ಭಾವಿಸಿ ನರ್ತಿಸುತ್ತಿದ್ದಳು. ಆದರೆ ಅವನ ಸಮ್ಮುಖ ಎಂದೂ ತನ್ನ ಪ್ರೇಮವನ್ನು ನಿವೇದಿಸಲೇ ಇಲ್ಲ!!

ಹೀಗೆ ಇಬ್ಬರೂ ಇಬ್ಬರಿಗೂ ತಿಳಿಯದಂತೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು! ಆದರೆ ಇದು ಯಾರೊ ಅಪರಿಚಿತ ಅಭಿಮಾನಿ. ಪ್ರೀತಿ ಪ್ರೇಮವೆಂದು ಪತ್ರ ಬರೆಯುತ್ತಿದ್ದಾನೆ. ಈ ಅಪರಿಚಿತ ಅಭಿಮಾನಿಯ ಪತ್ರ ಆಕೆಗೆ ಇರುಸುಮುರುಸನ್ನು ಉಂಟು ಮಾಡಿತ್ತು. ತನ್ನ ಮತ್ತು ಆಪ್ತ ಸಹಾಯಕನ ನಡುವೆ ಈ ಅಪರಿಚಿತ ಅಭಿಮಾನಿಯು ತೊಡಕು ಎನ್ನಿಸುತ್ತಿದ್ದ. ಆತನ ಬಳಿ ತನ್ನ ಕಾಲ್ಗೆಜ್ಜೆ ಇದೆ ಎನ್ನುವುದು ಆಕೆಗೆ ಇನ್ನಷ್ಟು ಹಿಂಸೆ ಅನ್ನಿಸಿತ್ತು.

ಒಂದಿ ದಿನ ಆ ಅಪರಿಚಿತ ಅಭಿಮಾನಿಗೆ ಪ್ರತ್ಯುತ್ತರ ಬರೆದಳು. "ನಿನ್ನ ಪ್ರೀತಿ ನಿಜವಾದರೆ ನನಗಾಗಿ ನಿನ್ನ ಪ್ರಾಣ ಕೊಟ್ಟು ತೋರಿಸು, ಮೆಚ್ಚುವೆ ನಿನ್ನ ಪ್ರೀತಿಯನ್ನು!"

ಮರುದಿನ ಬೆಳಗ್ಗೆ ಆಕೆಗೆ ಸುದ್ದಿ ಬಂತು. ಆಪ್ತ ಸಹಾಯಕ ಆತ್ಮಹತ್ಯೆ ಮಾಡಿದ್ದಾನೆ. ಆಕೆ ಅತೀವಾ ದುಃಖದಿಂದ ಅವನ ಕೋಣೆಗೆ ಓಡಿ ಹೋಗಿ ನೋಡಿದಳು. ವಿಷದ ಬಾಟಲಿ ಮಂಚದ ಕೆಳಗೆ ಉರುಳಿ ಬಿದ್ದಿದೆ. ಅವಳ ಬರುವಿಕೆಗೇ ಕಾಯುವಂತೆ ತೆರೆದ ಕಣ್ಣಲ್ಲೇ ಸಾವನ್ನಪ್ಪಿದ್ದ.

ಆಕೆ ಒಂದು ಬಾರಿ ನಡುಗಿ ಹೋದಳು. ಛಿಟಾರನೆ ಚೀರಿದಳು. ಆತನ ಕೈಯಲ್ಲಿ ಕಾಲ್ಗೆಜ್ಜೆ ಇತ್ತು. ಉಸಿರು ನಿಂತ ಅವನ ನಿಶ್ಚಲ ದೇಹ ಹೇಳಿದ್ದು ಒಂದೆ, " ನಾನೇ ಆ ಅಪರಿಚಿತ ಅಭಿಮಾನಿ". ಕಾಲ ಸ್ತಂಭಿಸಿತು !!!

ಯೋಗೀಶ್ ಮಲ್ಲಿಗೆಮಾಡು

Sunday, 16 December 2018

ಕೊಟ್ಟ ಮಾತು

"ನಾನು ಸತ್ತರೂ ನಿನ್ನೊಂದಿಗೆ ಇರುತ್ತೇನೆ" ಎಂದು ಅವನು ಅವಳಿಗೆ ಮಾತು ಕೊಟ್ಟಿದ್ದ...
ಪ್ರೀತಿಯಲ್ಲಿ ಮೋಸ ಮಾಡಿದ ಆಕೆ ಅವನಿಗೆ ಕೈಕೊಟ್ಟಳು...
ಅವಳ ನೆನಪಲ್ಲಿ ಅವನು ಪ್ರಾಣ ಕಳೆದುಕೊಂಡ...
ಇನ್ನೊಬ್ಬನ ಮದುವೆಯಾದ ಆಕೆ ಬದುಕು ಕಂಡುಕೊಂಡಳು...
ಅದೆಷ್ಟೋ ವರುಷಗಳ ಮೇಲೆ ಹೊಸ ಮನೆಯ ಕಟ್ಟಿಸಿ ಗಂಡನೊಂದಿಗೆ ಮನೆ ತುಂಬಾ ಸಂಭ್ರಮಿಸಿದಳು ಅವಳು...
ಮನೆಯ ಅಡಿಪಾಯದ ಕೆಳಗೆಲ್ಲೋ ಅವನು ಗೋರಿಯಲ್ಲಿ ಮಗ್ಗುಲು ಬದಲಿಸಿ ಮಲಗಿದ್ದ...
"ನಾನು ಸತ್ತರೂ ನಿನ್ನೊಂದಿಗೆ ಇರುತ್ತೇನೆ" ಎಂದು ಅವನು ಕೊಟ್ಟ ಮಾತು ಈಡೇರಿಸಿದ್ದ...
ಆದರೆ ಅವಳಿಗದು ಗೊತ್ತೇ ಆಗಲಿಲ್ಲ...
         ಯೋಗೀಶ್ ಮಲ್ಲಿಗೆಮಾಡು

Wednesday, 5 December 2018

ನನ್ನ ಅಮ್ಮ

ಮನೆಯ ಬೇಲಿ ಸಾಲಿನ ಬಳ್ಳಿಗಿಡಗಳ
ಸರಿ ಮಾಡಿದವಳು ನನ್ನಮ್ಮ.

ಅಂಗಳಕ್ಕೆ ಸೆಗಣಿ ಸಾರಿ
ಚೆಂದದ ರಂಗೋಲಿ ಇಟ್ಟವಳು ನನ್ನಮ್ಮ.

ಹೊಸ್ತಿಲಂಚಿಗೆ ಹೂವು, ಮನೆಯ ತೋರಣಕೆ
ಹಸಿರೆಲೆ ಕಟ್ಟಿದವಳು ನನ್ನಮ್ಮ.

ದೀಪ ಮುಡಿಸಿ ಮನೆಯ ಬೆಳಗಿಸಿ
ಮನೆಯಾಗಿಸಿದವಳು ನನ್ನಮ್ಮ.

ಅನ್ನ ಬಸಿದು, ಚಟ್ನಿ ನುರಿದು,
ತುತ್ತು ಉಣಿಸಿದವಳು ನನ್ನಮ್ಮ.

ಮಾಡಿದಷ್ಟೂ ಕೆಲಸ, ಮುಗಿಯಿತೆಂದು
ಉಸ್ ಎನ್ನದವಳು ನನ್ನಮ್ಮ.

ಮನೆಯೆಲ್ಲಾ ಮಲಗಿದರೂ
ಅಡುಗೆ ಮನೆಯ ಪಾತ್ರೆ ಸದ್ದಾಗಿಸುವವಳು ನನ್ನಮ್ಮ.

ಸರಿರಾತ್ರಿವರೆಗೂ ಬೀಡಿ ಸೂಪನಿಟ್ಟು
ಬೀಡಿ ತಿರುಗಿಸಿದವಳು ನನ್ನಮ್ಮ.

ಇಂದು ಮನೆಯಲ್ಲಿ ಅಮ್ಮನ ಕೈಬಳೆಯ ಸದ್ದಿಲ್ಲ,
ಎದೆಯಲ್ಲಿ ಅಮ್ಮ ಹಚ್ಚಿದ ಹಣತೆ ಮಾತ್ರ ಇನ್ನೂ ಬೆಳಗಿದೆ!!

ಯೋಗೀಶ್ ಮಲ್ಲಿಗೆಮಾಡು

Tuesday, 6 November 2018

ದೀಪಾವಳಿಗೊಂದು ಪುಟ್ಟ ಕಥೆ

ವರುಷಗಳ ಹಿಂದಿನ ಹಣತೆಗಳ ಜೊತೆಗೆ ಈ ಬಾರಿ ಕೊಂಡ ಹೊಸ ಹಣತೆಗಳನ್ನೂ ಇರಿಸಲಾಗಿತ್ತು.
ಎಣ್ಣೆ ಜಿಡ್ಡುಕಟ್ಟಿದ ಹಳೆ ಹಣತೆಗಳ ನಡುವೆ ಹೊಸ ಹಣತೆಗಳು ಹೊಚ್ಚ ಹೊಸತಾಗಿ ಹೊಳೆಯುತ್ತಿದ್ದವು. ಹೊಸ ಹಣತೆಗಳು ಹಳೆಯ ಹಣತೆಗಳನ್ನು ತಾತ್ಸಾರವಾಗಿ ನೋಡಿ "ಎಣ್ಣೆಗಟ್ಟಿದ ಹಳೆಯ ಹಣತೆಗಳೇ, ನನ್ನ ನೋಡಿರಿ ಎಷ್ಟು ಸುಂದರವಾಗಿದ್ದೇನೆ" ಎಂದು ನುಡಿದು ಮೂದಲಿಸಿತು.
ಹಳೆಯ ಹಣತೆಗಳು ನಸು ನಕ್ಕು ಸುಮ್ಮನಾದವು.

ಸಂಜೆಗೆ ಎಲ್ಲಾ ಹಣತೆಗಳಲ್ಲಿ ಎಣ್ಣೆ ಸುರಿದು ದೀಪ ಹಚ್ಚಲಾಯಿತು. ಎಲ್ಲಾ ಹಣತೆಗಳಲ್ಲೂ ನಿಚ್ಚಳ ಬೆಳಕು. ಬಣ್ಣ ಮಾಸಿದ ಕಪ್ಪಾದ ಹಳೆಯ ಹಣತೆಗಳಲ್ಲೂ, ಬಣ್ಣ ತುಂಬಿ ಮಿರುಗುವ ಹೊಸ ಹಣತೆಗಳಲ್ಲೂ ಒಂದೇ ತೆರನಾದ ಪ್ರಕಾಶಮಾನ ಬೆಳಕು.

ಹೊಸ ಹಣತೆಗಳಿಗೆ ಕಸಿವಿಸಿಯಾಯಿತು. "ಮಂಕಾದ ಹಣತೆಗಳಲ್ಲೂ ನಮ್ಮಷ್ಟೇ ಬೆಳಕು, ಅದೆಂತು?" ಪ್ರಶ್ನಿಸಿತು ಹೊಸ ಹಣತೆ.

"ಯಾವ ಹಣತೆಯಾದರೇನು? ಹೊಸತು ಹಳತು ಎನ್ನುವುದು ಬಾಹ್ಯ ಮಾತ್ರ. ಆಂತರ್ಯದ ಸೊಬಗು ಎಂದಿಗೂ ನಿತ್ಯನೂತನ. ಹೊರಗಿನ ಸೌಂದರ್ಯ ಕಾಲದೊಂದಿಗೆ ಕರಗಿ ಹೋಗುತ್ತದೆ. ಒಳಗಿನ ಜ್ಯೋತಿ ಮಾತ್ರ ಎಂದಿಗೂ ಬೆಳಗುತ್ತಿರುತ್ತದೆ ಹೀಗೆಯೇ. ಇಂದು ಹೊಸತು ಎಂದು ಬೀಗುವ ನೀನೂ ಕಾಲದ ಹೊಡೆತಕ್ಕೆ ಜಡ್ಡುಗಟ್ಟುತ್ತೀಯ. ಕಳೆಗುಂದಿದ ಮಾತ್ರಕ್ಕೆ ಬೆಳಕಿಲ್ಲವೆಂದಲ್ಲ" ಮುದಿ ಹಣತೆಯೊಂದು ಸಾವಧಾನವಾಗಿ ಉತ್ತರಿಸಿತು.

ಎಲ್ಲಾ ಹಣತೆಗಳೂ ಮೌನವಾಗಿ ಉರಿದು ಬೆಳಕು ಬೀರಿದವು ಪರರಿಗಾಗಿ !!

ರಚನೆ: ಯೋಗೀಶ್ ಮಲ್ಲಿಗೆಮಾಡು

Wednesday, 17 October 2018

ಸಿದ್ಧಿಧಾತ್ರಿ ನಮಸ್ತುಭ್ಯಂ

ನವರಾತ್ರಿಯ ಒಂಭತ್ತನೆ ದಿನ ಪೂಜಿಸಲ್ಪಡುವವಳು *ಸಿದ್ಧಿಧಾತ್ರಿ*

ಹೆಸರೇ ಸೂಚಿಸುವಂತೆ *ಸಿದ್ಧಿಧಾತ್ರಿ*ಬಗೆ ಬಗೆಯ ಸಿದ್ಧಿಗಳನ್ನು ನೀಡುವವಳು.
*ಅಷ್ಟಸಿದ್ಧಿಗಳಾದ "ಅನಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಖ್ಯಮ್ಯ, ಇಷಿತ್ವ, ವಷಿತ್ವ"* ಇವುಗಳನ್ನು ನೀಡುತ್ತಾಳೆ ಎಂದೂ, *ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ* ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ. *ತಂತ್ರ ಮಾಡುವವರು, ಸಾಧಕರು, ಯೋಗಿಗಳು* ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ.

ಶಿವನು ಈಕೆಯನ್ನು ಪೂಜಿಸಿ ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ. ಶಕ್ತಿಯನ್ನು ಒಲಿಸಿದ ಶಿವ *ಅರ್ಧನಾರೀಶ್ವರನಾದ*. ಗಂಡು ಹೆಣ್ಣು ಒಂದೇ ಎಂದು ಸಾರಿದ್ದು *ಅರ್ಧನಾರೀಶ್ವರ ತತ್ವ.*

ಈಕೆ ಕಮಲದ ಮೇಲೆ ಕುಳಿತಿದ್ದು *ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ.*

ಎಲ್ಲಾ ಚಕ್ರ ಜಾಗೃತವಾದ ಮೇಲೆ ಮನುಷ್ಯ *ಮಹಾಗೌರಿಯಂತೆ* ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ *ಸಿದ್ಧಿಯನು ಹೊಂದಬಹುದು.* ತಥಾ ಸಿದ್ಧಿಧಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ.

ಪರ್ವತದ ತಪ್ಪಲಿನ ಮಣ್ಣೇ ಶೈಲಪುತ್ರಿಯಾಗಿ, ಅಲ್ಲಿ ಬೆಳೆಯುವ ಜ್ಞಾನವೇ ಬ್ರಹ್ಮಚಾರಿಣಿಯಾಗಿ, ಬೆಳೆಗಳ ನಡುವಿನ ಸವಾಲುಗಳನ್ನೆದುರಿಸುವುದೇ ಚಂದ್ರಘಂಟಾ ಎಂಬುದಾಗಿ, ಸಮರ್ಥ ಕೃಷಿ ಬದುಕಿನ ಯಶಸ್ಸಿನ ನಗುವೇ ಕೂಷ್ಮಾಂಡವಾಗಿ, ವಂಶ ಕುಲಗಳ ಮುಂದುವರಿಕೆಯೆ ಸ್ಕಂದ ಮಾತವಾಗಿ, ಮೋಹಗಳಿಗೆ ಒಳಗಾಗದಿರುವುದೇ ಕಾತ್ಯಾಯಿನಿಯಾಗಿ, ಪ್ರಕೃತಿಯ ಪ್ರಳಯ ಭೀಕರವೇ ಕಾಲರಾತ್ರಿಯಾಗಿ, ಶಾಂತ ಪ್ರಕೃತಿಯೇ ಮಹಾಗೌರಿಯಾಗಿ ಕಂಡುಕೊಂಡ ಮಾನವ ಇದೇ ಪರ್ವತದ ತಪ್ಪಲಿನಲ್ಲಿ ಬಗೆಬಗೆಯ ಸಿದ್ಧಿಯನ್ನು ಕಂಡುಕೊಂಡ. ಕೃಷಿಯೊಂದಿಗೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಬದುಕು ಸುಗಮಗೊಳಿಸಿದ. ಅಂದಿನಿಂದ ಇಂದಿನ ವರೆಗೂ ಮಾನವ ಹೊಸ ಹೊಸ ಕ್ರಾಂತಿಗೆ ಕಾರಣನಾದ. ಈ ಎಲ್ಲಾ ಸಿದ್ಧಿಯನ್ನು ಕರುಣಿಸಿದವಳು ಸಿದ್ಧಿಧಾತ್ರಿ ಎಂದು ಪರಿಭಾವಿಸಿದ

ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು *ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ.* ಆ ಮೂಲಕ ಬಗೆಬಗೆಯ *ಸಿದ್ಧಿಗಳನ್ನೂ ಕರುಣಿಸುವ ಮಹಾಪರ್ವ ನವರಾತ್ರಿ.*

*ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ| ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||*
ಸಿದ್ಧಿಧಾತ್ರಿ ಸಕಲ ಸಿದ್ಧಿಯನ್ನು  ಕರುಣಿಸಲಿ

*ಆಯುಧಪೂಜೆಯನ್ನೂ* ಇದೆ ದಿನ ನೆರವೇರಿಸಲಾಗುತ್ತದೆ... *ಪಾಂಡವರು* ಇದೆ ದಿನ *ವನವಾಸದಿಂದ ವಾಪಾಸಾಗಿ ತಮ್ಮ ಶಸ್ತ್ರಗಳನ್ನು ತಾವು ಬಚ್ಚಿಟ್ಟ ಶಮಿ (ಬನ್ನಿ)🌿 ಮರದಿಂದ ತಗೆದು ಅದಕ್ಕೆ ಪೂಜೆಯನ್ನು ಸಲ್ಲಿಸಿದರು ಎಂಬ ಪ್ರತೀತಿ ಇದೆ.*

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Tuesday, 16 October 2018

ಮಹಾಗೌರಿ ನಮಸ್ತುಭ್ಯಂ

ನವರಾತ್ರಿಯ ಎಂಟನೇ ದಿನ ಪೂಜಿಸಲ್ಪಡುವವಳು *"ಮಹಾಗೌರಿ"* :

*ಗೌರಿ* ಎಂದರೆ *ಬಿಳಿ* ಎನ್ನುವ ಅರ್ಥ. ಮಹಾಗೌರಿಯು ಬಿಳಿಯ ಮೈಬಣ್ಣ ಹೊಂದಿದ್ದು ಆಕೆಯನ್ನು *ಶ್ವೇತ ವಸನ* ಧಾರಿಯಾಗಿ  ಉಲ್ಲೇಖಿಸಿದೆ. ಅಚ್ಚ ಬಿಳುಪಿನ ಶುಭ್ರವರ್ಣವಾಗಿ ಕಂಡು ಬರುವ ಈಕೆಯ *ಶುಭ್ರತೆಯನ್ನು ಶಂಖ ಅಥವಾ ಚಂದ್ರನಿಗೆ ಸಮೀಕರಿಸಿದೆ.*

ಶಿವನಿಗಾಗಿ ತಪಸ್ಸನ್ನು ಮಾಡಿದ *ಬ್ರಹ್ಮಚಾರಿಣಿಯು* ಗಾಳಿ, ಮಳೆ, ಬಿಸಿಲಿಗೆ ಕಪ್ಪಗಾಗಿ  ಶಿವನೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎಂಬ ವಿಚಾರವನ್ನು ಹಿಂದಿನ ರೂಪದಲ್ಲಿ ಕೇಳಿದ್ದೆವು. ಮುಂದುವರೆದು *ಶಿವನು ಆಕೆಯನ್ನು ಗಂಗಾ ನದಿಯಲ್ಲಿ  ಸ್ನಾನ ಮಾಡಿಸಿದಾಗ ಆಕೆಯ ಕಪ್ಪು ವರ್ಣ ತೊಳೆದು ಶುಭ್ರವಾದಳು  ಎಂಬ ಪ್ರತೀತಿ ಇದೆ.*
ಅರ್ಥಾತ್ *ಮನಸ್ಸಿನ  ಆಂತರ್ಯದಲ್ಲಿರುವ ಕೊಳೆ, ಕಲ್ಮಶಗಳನು ಜ್ಞಾನ ಗಂಗೆಯಿಂದ ತೊಳೆದಾಗ ಬದುಕು ಶುಭ್ರವಾಗುತ್ತದೆ.* ತಥಾ ಮಹಾಗೌರಿಯ ಸ್ಮರಣೆ ಬದುಕನ್ನು ಶುಭ್ರಗೊಳಿಸಿ ಬೆಳಗುತ್ತದೆ.

ಮಹಾಗೌರಿಯು *ನಂದಿ*ಯನ್ನು ವಾಹನವಾಗಿ ಹೊಂದಿದ್ದು. *ಚತುರ್ಭುಜ* ಹೊಂದಿದ್ದಾಳೆ. *ತ್ರಿಶೂಲ ಮತ್ತು ಢಮರು ಹಾಗೂ ಅಭಯಮುದ್ರೆಯನ್ನು  ಧರಿಸಿದ್ದಾಳೆ.*

ಈಕೆಯದು *ಸಾತ್ವಿಕ ರೂಪ.* ಶಾಂತಿ, ಪಾವಿತ್ರ್ಯ, ಪರಿಶುದ್ಧತೆ,  ಸಮೃದ್ಧಿಯನ್ನು ಈಕೆ ಕರುಣಿಸುತ್ತಾಳೆ. ಈಕೆಯನ್ನು *"ಶ್ವೇತಾಂಬರಧರಾ"* ಎಂದೂ ಕರೆಯುತ್ತಾರೆ.

*ಯೋಗದಲ್ಲಿ ಈಕೆ ಯಾವುದೇ ಚಕ್ರವನ್ನು ಪ್ರತಿನಿಧಿಸುವುದಿಲ್ಲ* ಅರ್ಥಾತ್ ಏಳು ಚಕ್ರಗಳು ಕಾಲರಾತ್ರಿ ಅವತಾರದೊಂದಿಗೆ ಸಮಾಪನವಾಗುತ್ತದೆ. ಅಂದರೆ ಯಾವಾಗ ಈ ಏಳೂ  ಚಕ್ರಗಳು ಮನುಷ್ಯನಲ್ಲಿ ಜಾಗೃತವಾಗುತ್ತದೊ ಆವಾಗ ಮನುಷ್ಯ ಪರಿಶುದ್ಧನಾಗುತ್ತಾನೆ. ಆಂತರಿಕವಾಗಿ ಕಲ್ಮಶಗಳು ಜ್ಞಾನಗಂಗೆಯಲಿ ತೊಳೆದು ಮಹಾಗೌರಿಯಂತ ಸಾತ್ವಿಕ ಶುಭ್ರರೂಪು ಧಾರಣೆಯಾಗುತ್ತದೆ. ತಥಾ ಮಹಾಗೌರಿಯ ಆರಾಧನೆ ಮುಖ್ಯವಾಗುತ್ತದೆ.

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು, ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ  ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಪರಿಭಾವಿಸಿದ ಮಾನವ ಶಾಂತ ಶುಭ್ರ ಪ್ರಕೃತಿಯನ್ನು ಮಾನಸಿಕ ಪರಿಶುದ್ಧತೆಯೊಂದಿಗೆ ಸಮೀಕರಿಸಿ ಗೌರಿ ಎಂದು ಕರೆದನು. ಆಕೆಯನ್ನು ಶೈಲಪುತ್ರಿಯ ಮತ್ತೊಂದು ರೂಪವಾಗಿ ಕಂಡುಕೊಂಡನು. ಪರ್ವತವು ಮಣ್ಣಿನಿಂದ ಕೂಡಿದುದಾಗಿ ಗೌರಿಗೆ ಈ ಮಣ್ಣನ್ನೇ ಆರೋಪಿಸಿ ಜನಪದರ ಮೂಲತತ್ವವಾದ ಗೌರಮ್ಮ ಮಣ್ಣಿಂದಲೇ ಮೈದೆಳೆದಳು.
ಪರ್ವತದ ಅಗಾಧತೆ, ನಿತ್ಯಹರಿದ್ವರ್ಣದ ವನರಾಶಿ, ಹರಿದು ಬರುವ ನದಿ ತೊರೆಗಳು ಎಲ್ಲವೂ ಸೇರಿ ಜನಪದರು ಆ ಗೌರಿಯನ್ನು ಸುಮಂಗಲಿಯಂತೆ ಸದಾ ಪೂಜಿಸಿದರು. ಪಾರ್ವತಿ ಎಂಬ ಶೈಲಪುತ್ರಿಯ ರೂಪವು ಗೌರಿಯೊಂದಿಗೆ ಬೆಸೆದುಕೊಂಡು ಗೌರಮ್ಮ ಮನೆಮನೆಯಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳಲ್ಲಿ ನಿಕಟವಾಗಿ ಬೆಸೆದುಕೊಂಡಳು.

*ಶ್ವೇತೆ ವೃಷೆ ಸಮಾರೂಢ ಶ್ವೇತಾಂಬರಧರ ಶುಚಿ| ಮಹಾಗೌರಿ ಶುಭಂ ದಧ್ಯಂತ್ರ ಮಹಾದೇವ ಪ್ರಮೋದಾದ||*
ಎಂದು ಪಠಿಸಿ ಫಲವನ್ನು ಪಡೆಯಬಹುದು

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

Monday, 15 October 2018

ಕಾಲರಾತ್ರಿ ನಮಸ್ತುಭ್ಯಂ

ನವರಾತ್ರಿಯ ಏಳನೇ 7ದಿನ ಪೂಜಿಸಲ್ಪಡುವವಳು *"ಕಾಲರಾತ್ರಿ"*

*"ಕಾಲಿ"* ಅಥವಾ *"ಕಾಳಿ"* ಎಂಬ ಶಬ್ಧವು*"ಕಾಲ"*  ಎಂಬ ಶಬ್ಧದಿಂದ ಉದಿಸಿದೆ. ಕಾಲ ಅಂದರೆ ಇಲ್ಲಿ *ಸಮಯ* ಅಥವಾ *ಮೃತ್ಯು* ಎಂದು ಪರಿಗಣಿಸಬಹುದು.
*ಕಾಲರಾತ್ರಿ ಎಂದರೆ ಕಾಲ ಅರ್ಥಾತ್ ಸಮಯ ಅಥವಾ ಸಾವಿಗೆ ಅಂತ್ಯವನ್ನು ಕರುಣಿಸುವವಳು ಎಂದು ಸಂಕೇತಿಸುತ್ತದೆ.
*ಕಾಲಿ ಎಂಬ ಶಬ್ಧಕ್ಕೆ ಕಪ್ಪು ಎಂಬ ಅರ್ಥವೂ ಇದೆ.* *ಕಪ್ಪು ಅತ್ಯಂತ ಗೂಢವೂ, ನಿಗೂಢವೂ ಆಗಿದೆ.* ಕಾಲರಾತ್ರಿಯು ಅಂತ್ಯಕ್ಕೆ ಅಂತ್ಯ ಕರುಣಿಸುವವಳಾಗಿ ಆಕೆ ಯಾರಿಗೂ ಅರ್ಥವಾಗದ ಗೂಢತೆಯೊಂದಿಗೆ ಕಪ್ಪು ಬಣ್ಣವನ್ನು ಸಮೀಕರಿಸಿರುವುದು ಸಮಂಜಸವೇ ಆಗಿದೆ.

ಶಬ್ಧಕಲ್ಪಧ್ರುಮದಲ್ಲಿ ಕಾಲಿಯನ್ನು *"ಕಾಲಃ ಶಿವಃ ತಸ್ಯ ಪತ್ನೇತಿ ಕಾಲಿ"* ಎಂದು ಉಲ್ಲೇಖಿಸಿದೆ. ಅರ್ಥಾತ್ ಕಾಲನಾದ ಶಿವನ ಪತ್ನಿ ಕಾಲಿ. *ಕಾಲನಿಗೂ ಕಾಲವಾದವಳು.*

ರಕ್ತಬೀಜಾಸುರ, ಎಲ್ಲಿ ತನ್ನ ರಕ್ತ ಬೀಳುತ್ತದೊ ಅಲ್ಲಿ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುವಂತಹ ವರವನ್ನು ಪಡೆದಿದ್ದನು. ಆತನ ವಧೆ ದುಸ್ಸಾಧ್ಯವಾದಾಗ ಮಹಾಕಾಲಿ ತನ್ನ ನಾಲಿಗೆಯಿಂದ ಆತನ ದೇಹದಿಂದ ತೊಟ್ಟಿಕ್ಕುವ ರಕ್ತವನ್ನು ಹೀರುತ್ತಾ ವಧಿಸಿದಳು ಎಂಬ ಪ್ರತೀತಿ ಇದೆ.

*ಶೈಲಪುತ್ರಿಯು*  *ಬ್ರಹ್ಮಚಾರಿಣಿ*ಯಾಗಿ  ಶಿವನನ್ನು ಒಲಿಸಲು ಅನೇಕ ವರುಷ ಮಳೆ, ಚಳಿ, ಗಾಳಿ, ಬಿಸಿಲಲ್ಲಿ  ತಪಸ್ಸು ಮಾಡಿದ ಪರಿಣಾಮ ಆಕೆಯ ಮೈ ಬಣ್ಣ ಕಪ್ಪಾಯಿತು. ಶಿವನು ಆಕೆಯ ತಪಸ್ಸಿಗೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎನ್ನುವುದು ಇನ್ನೊಂದು ಪ್ರತೀತಿ...

ಕಾಲರಾತ್ರಿಯು ಕೆದರಿದ ಕೂದಲು,  ಹೊರಚಾಚಿದ ಕಣ್ಣಗುಡ್ಡೆ , ರಕ್ತಭರಿತವಾದ ನಾಲಿಗೆ , ಬೆಂಕಿ ಉಗುಳುವ  ಮೂಗಿನ ಹೊಳ್ಳೆ, ಕಪ್ಪು ಮೈ ಬಣ್ಣ,  ರುಂಡ ಮಾಲೆ,ಕೈಯಲ್ಲಿ ಖಡ್ಗ ಧಾರಣೆ ಮಾಡಿ, ಕತ್ತೆಯನ್ನು ವಾಹನವಾಗಿಸಿದ ಭೀಕರ ರೂಪ.

ನವದುರ್ಗೆಯರಲ್ಲಿ ಆಕೆಯದು ಭೀಕರ ಮತ್ತು ಭೀಭತ್ಸ ರೂಪ. *ಮಹಾಗೌರಿ ಎಷ್ಟು ಸುಂದರವೋ ಅಷ್ಟೇ ಭೀಕರತೆ ಕಾಲರಾತ್ರಿ.* ಅರ್ಥಾತ್ ಪ್ರಕೃತಿ ಎಷ್ಟು ಸುಂದರವೊ ಅಷ್ಟೇ ಪ್ರಳಯ ಭೀಕರ ಎಂದು ಈ ರೂಪ ಸೂಚಿಸುತ್ತದೆ. ಪ್ರಳಯಕಾಲದಲ್ಲಿ  *ಪ್ರಕೃತಿಯು ಕಾಲಿಯಷ್ಟೇ ಭೀಕರವಾಗಿ ಸರ್ವವನ್ನೂ ನಾಶಮಾಡುವ ಸಂದೇಶ ನೀಡುತ್ತದೆ.*

ಕೆಲವು ಚಿತ್ರಗಳು ಶಿವನು ನೆಲದ ಮೇಲೆ ಮಲಗಿರುವಂತೆ ಹಾಗೂ ಕಾಲಿ ಶಿವನ ಎದೆಯನ್ನು ಮೆಟ್ಟಿರುವಂತೆ  ಕಾಣಬಹುದು....
ಅರ್ಥಾತ್ ಶಿವ ಪುರುಷ ತತ್ವ ಮತ್ತು ಶಕ್ತಿ ಪ್ರಕೃತಿ ತತ್ವವನ್ನು ತಿಳಿಸುತ್ತದೆ.  ಪುರುಷನಿಗೆ ಪ್ರಕೃತಿ ಅಂದರೆ ಶಕ್ತಿ ಇಲ್ಲದಿದ್ದರೆ ವ್ಯರ್ಥ. *"ಶಕ್ತಿ ಇಲ್ಲದಿದ್ದರೆ ಶಿವನೂ ಶವದಂತೆ"* ಎನ್ನುವುದನ್ನು ಈ ಚಿತ್ರ ಉಲ್ಲೇಖಿಸುತ್ತದೆ....

*ಕಾಲಿದಾಸ ಮಾತಾ ಕಾಲಿಯ ಕೃಪೆಯಿಂದ ಕವಿಯಾದ ಎಂಬ ಪ್ರತೀತಿ ಇದೆ.* ಆತ ಕಾಲಿಯ ಮೇಲೆ ಬರೆದ ಶ್ಯಾಮಲ ದಂಡಕಂ ಈ ಕೆಳಗೆ ಅರ್ಥಸಹಿತ ನೀಡಿದ್ದೇನೆ

********  *ಶ್ಯಾಮಲ ದಂಡಕಂ* *******

ಏನೂ ಅರಿಯದ ಮುಗ್ಧನೊಬ್ಬ *ಮಹಾಕಾಳಿಯ* ಕೃಪೆಯಿಂದ ಸಾಮರ್ಥ್ಯವನ್ನುಗಳಿಸಿ ಲೋಕವಿಖ್ಯಾತಿ ಹೊಂದಿದ. ಕಾಳಿಯ ಕೃಪೆಯಿಂದಾಗಿ ಆತ *ಕಾಳಿದಾಸ* ಎಂದು ಜನಜನಿತನಾದ. ಕಾಳಿಯನ್ನು ಶ್ಯಾಮಲ ರೂಪದಲ್ಲಿ ಕಂಡ ಆತ ಆಕೆಯನ್ನು *ಅಕ್ಷರ ದೇವತೆಯಾಗಿ* ಕಂಡು ಆಕೆಯನ್ನು ಸ್ತುತಿಸಿದ್ದೆ *ಶ್ಯಾಮಲ ದಂಡಕಂ.*

*ಶ್ಯಾಮಲೆಯನ್ನು ದಂಡಕ* ಎಂಬ ಹಾಡಿನ ಶೈಲಿಯಲ್ಲಿ ಸ್ತುತಿಸಿದ್ದೆ ಶ್ಯಾಮಲ ದಂಡಕಂ ಎಂದು ಪ್ರಸಿದ್ಧವಾಯಿತು.
*ಡಾ. ರಾಜ್ ಕುಮಾರ* ನಟಿಸಿದ *ಕವಿರತ್ನ ಕಾಳಿದಾಸ* ಚಲನಚಿತ್ರದಲ್ಲಿ ರಾಜ್ ಕುಮಾರರ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಈ ಹಾಡು ಜನಜನಿತವಾಗಿದೆ.

ಶ್ಲೋಕ ಮತ್ತು ಅದರ ಅರ್ಥವನ್ನು ಈ ಕೆಳಗೆ ನೀಡಿದೆ.
ನವರಾತ್ರಿಯ ಈ ದಿನ ಮಹಾಕಾಳಿಯು ಪ್ರತಿನಿಧಿಸುತ್ತಿದ್ದು ಈ ಶ್ಲೋಕಗಳನ್ನು ಪಠಿಸಿ ಅಮೋಘ ಫಲ ಸಿದ್ಧಿಗಳಿಸಬಹುದು. ಸದಾ ಈ ಶ್ಲೋಕವನ್ನು ಸ್ತುತಿಸುವುದರಿಂದ ಸಕಲ ಶುಭಫಲಗಳು ಸಕಾರಾತ್ಮಕವಾಗಿ ಹರಿದುಬರುತ್ತವೆ ಎಂಬ ಪ್ರತೀತಿ ಇದೆ.

ಮಾಣಿಕ್ಯ ವೀಣಾಂ ಉಪಲಾಲಯಂತೀಂ,
ಮದಾಲಸಾಂ ಮಂಜುಲ ವಾಗ್ ವಿಲಾಸಂ,
ಮಾಹೇಂದ್ರ ನೀಲ ದ್ಯುತಿ ಕೋಮಲಾಂಗಿಂ,
ಮಾತಂಗ ಕನ್ಯಾಂ ಮನಸಾ ಸ್ಮರಾಮಿ
*(ಮಾಣಿಕ್ಯದಿಂದ ಕೂಡಿದ ವೀಣೆಯನ್ನು ನುಡಿಸುತ್ತಿರುವವಳೇ, ಆಲಸ್ಯ ತರುವಷ್ಟು ವಿಜ್ರಂಭಿತವಾಗಿ ಶೋಭಿಸುತ್ತಿರುವವಳೇ, ಮಂಜುಲವಾದ ಮಾತನಾಡುವವಳೇ,ನವರತ್ನಗಳಲ್ಲಿ ಒಂದಾದ ನೀಲದಂತೆ ಕೋಮಲವಾಗಿರುವವಳೇ, ಮಾತಂಗನ ಮಗಳಾದ ತಾಯಿಯನ್ನು ಮನಸಾರೆ ಸ್ಮರಿಸುತ್ತೇನೆ)*

ಚತುರ್ಭುಜೆ ಚಂದ್ರಕಳಾ ವತಂಸೆ
ಕುಚೋನ್ನತೆ ಕುಂಕುಮ ರಾಗ ಶೋಣೆ
ಪುಂಡ್ರೇಕ್ಷು ಪಾಶಾಂಕುಶ ಪುಷ್ಪ ಬಾಣ ಹಸ್ತೇ
ನಮಸ್ತೇ ಜಗದೇಕ ಮಾತಃ
*(ಚತುರ್ಭುಜವನ್ನು ಹೊಂದಿ ಚಂದ್ರನನ್ನು ಧಾರಣೆ ಮಾಡಿರುವವಳೇ, ಉನ್ನತ ಕುಚಗಳನ್ನು ಹೊಂದಿ ಕುಂಕುಮವರ್ಣದಿಂದ ಶೋಭಿಸುವವಳೇ, ಸಿಹಿ ಕಬ್ಬು, ಪಾಶ, ಅಂಕುಶ, ಪುಷ್ಪಬಾಣಗಳನ್ನು ಕೈಯಲ್ಲಿ ಧರಿಸಿರುವವಳೇ, ಜಗತ್ತಿನ ಏಕೈಕ ಮಾತೇ ನಿನಗೆ ನಮನಗಳು)*

ಮಾತಾ ಮರಕತ ಶ್ಯಾಮ
ಮಾತಂಗೀ ಮಧು ಶಾಲಿನಿ
ಕುರ್ಯಾತ್ಕಟಾಕ್ಷಂ ಕಲ್ಯಾಣಿ
ಕದಂಬ ವನವಾಸಿನಿ
*(ನವರತ್ನಗಳಲ್ಲಿ ಮರಕತ ಎಂಬ ಮಣಿಯಂತೆ ಶ್ಯಾಮಲವಾಗಿರುವ ಮಾತೇ, ಮಾತಂಗನ ಮಗಳಾದ ಮಾತಂಗೀ ಸುಮಧುರವಾಗಿರುವವಳೇ, ಶುಭಫಲವನ್ನು ನೀಡು, ಕದಂಬವನದಲ್ಲಿ ವಾಸವಾದವಳೆ.)*

ಜಯ ಮಾತಂಗ ತನಯೇ, ಜಯ ನೀಲೋತ್ಪಲ ಧ್ಯುತೆ,
ಜಯ ಸಂಗೀತ ರಸಿಕೆ,
ಜಯ ಲೀಲಾ ಶುಕ ಪ್ರಿಯೆ
*(ಮಾತಂಗನ ಮಗಳಿಗೆ ಜಯವಾಗಲಿ, ನೈದಿಲೆಯನ್ನು ಪ್ರತಿನಿಧಿಸುವವಳಿಗೆ ಜಯವಾಗಲಿ, ಸಂಗೀತವನ್ನು ಆಸ್ವಾದಿಸುವವಳಿಗೆ ಜಯವಾಗಲಿ, ಲೀಲೆಯೆಂಬ ಗಿಳಿಯನ್ನು ಮೆಚ್ಚಿರುವವಳಿಗೆ ಜಯವಾಗಲಿ)*

ಸುಧಾಸಮುದ್ರಾಂತಹ್ರುಧ್ಯನ್ಮಣೀ ದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪಧ್ರುಮಾ ಕಲ್ಪ ಕಾದಂಬ ವಾಸ ಪ್ರಿಯೆ
ಕೃತ್ತಿ ವಾಸ ಪ್ರಿಯೆ
ಸರ್ವಲೋಕ ಪ್ರಿಯೆ
*(ಜೇನಿನಂತಹ ಕಡಲಿನ ನಡುವೆ ಇರುವ ನವರತ್ನದಂತಹ ದ್ವೀಪದಲ್ಲಿ ಆರೂಢವಾದ, ಬಿಲ್ವದ ಕಾಡಿನ ಮಧ್ಯೆ ಕದಂಬವನದಲ್ಲಿ ವಾಸವಾಗಿ ಕಲ್ಪವ್ರಕ್ಷದಂತೆ ಬಯಸಿದ್ದನ್ನು ನೀಡುವ, ಸದಾಶಿವನ ಪ್ರಿಯೆಯಾದ, ಸರ್ವಲೋಕ ಪ್ರಿಯೆಯಾದವಳಿಗೆ ಜಯವಾಗಲಿ)*

ಕಾಲರಾತ್ರಿ ನಂಬಿದವರನ್ನು ಸಲಹುತ್ತಾಳೆ  ಆಕೆ ಮಾತಾ ಸ್ವರೂಪಿಣಿ. ಇಡೀ ಬ್ರಹ್ಮಾಂಡ ಏನೂ ಇರದಾಗ ಕತ್ತಲಿನಿಂದ ಕೂಡಿತ್ತು ಮತ್ತು ಅದೇ *ಕತ್ತಲನ್ನು ಕಾಲಿಯ ಕಪ್ಪು ಬಣ್ಣದೊಂದಿಗೆ ಸಮೀಕರಿಸಿ ಆಕೆಯಿಂದಲೇ ಸಕಲ ಚರಾಚರದ ಉಗಮ ಮತ್ತು ಅಂತ್ಯ ಎಂದು ಸೂಚಿಸುತ್ತದೆ.*

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು ಪರಿಭಾವಿಸಿದ ಮಾನವ ಪರ್ವತದ ತಪ್ಪಲಿನ ಪ್ರಕೃತಿಯ ಪ್ರಳಯ ಭೀಕರ ಆಟಾಟೋಪಗಳನ್ನು ಕಂಡು ಭೀತಗೊಂಡು ಎಲ್ಲಕ್ಕಿಂತ ಮಿಗಿಲಾದ ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ ಎನ್ನುವುದನ್ನು ಮನಗಂಡು ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಸ್ತುತಿಸಿದ.

*ಯೋಗದಲ್ಲಿ ಈಕೆ ಸಹಸ್ರಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ.*

ಕಾಲಿ, ಮಹಾಕಾಲಿ, ಕಾಲಿಕೆ, ಪರಮೇಶ್ವರಿ||
ಸರ್ವಾನಂದಕರಿ ದೇವಿ ನಾರಾಯಣಿ ನಮೋಸ್ತುತೆ||

ತಾಯಿ ಸಕಲರಿಗೂ ಶುಭ ಕರುಣಿಸಲಿ.

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

Sunday, 14 October 2018

ಕಾತ್ಯಾಯಿನಿ ನಮಸ್ತುಭ್ಯಂ

ನವರಾತ್ರಿಯ ಆರನೇ ದಿನ 6 ಪೂಜಿಸಲ್ಪಡುವವಳು  *"ಕಾತ್ಯಾಯಿನಿ"*

ಅಮರಕೋಶದಲ್ಲಿ ಕಾತ್ಯಾಯಿನಿ ಪಾರ್ವತಿಯ ಎರಡನೇ ಹೆಸರಾಗಿದೆ.

*ಮಹಾಕಾಲಿ ಪುರಾಣದಲ್ಲಿ* *ಕಾತ್ಯಾಯನ ಎಂಬ ಋಷಿಯು ಈಕೆಯನ್ನು ಮೊದಲಿಗೆ ಪೂಜಿಸಿದನಾದರಿಂದ ಈಕೆಗೆ ಕಾತ್ಯಾಯಿನಿ ಎಂದು ಹೆಸರು ಬಂತು ಎಂದು ಉಲ್ಲೇಖಿಸಿದೆ.*

ಹಲವಾರು ಪುರಾಣಗಳು (ದೇವಿ ಭಾಗವತ, ಮಾರ್ಕಾಂಡೇಯ, ಮಹಾಕಾಲಿ ಪುರಾಣ) ಈಕೆಯ ಬಗೆಗೆ ಪ್ರಸ್ತಾಪಿಸಿದೆ.

*ಮಹಿಷಾಸುರನ* ಸಂಹಾರಕ್ಕೆ ಅವತರಿಸಿದವಳು ಇವಳು ಎಂದು ತಿಳಿದುಬರುತ್ತದೆ. ಗಂಡಸರಿಂದ ಸಾವು ಬರದಂತೆ ವರ ಪಡೆದಿದ್ದ ಮಹಿಷಾಸುರ  *ಮಹಿಷಮಂಡಲವನ್ನು* ಆಳುತ್ತಿದ್ದ. ಆತ ಕಾತ್ಯಾಯಿನಿಯ ರೂಪಕ್ಕೆ ಮರುಳಾಗಿ ತನ್ನನ್ನು ವರಿಸುವಂತೆ ಕೇಳಿದನು. ಯುದ್ಧದಲ್ಲಿ ತನ್ನನ್ನು ಗೆದ್ದಲ್ಲಿ ತಾನು ಮಹಿಷಾಸುರನನ್ನು  ವರಿಸುವುದಾಗಿ ಹೇಳಿದ ಕಾತ್ಯಾಯಿನಿ ಅವನೊಂದಿಗೆ ಯುದ್ಧಕ್ಕೆ ಅಣಿಯಾದಳು. ಯುದ್ಧದಲ್ಲಿ ಮಹಿಷಾಸುರನನ್ನು ವಧಿಸಿದಳು. ತನ್ಮೂಲಕ *ಮಹಿಷಾಸುರಮರ್ಧಿನಿ* ಎಂಬ ಹೆಸರನ್ನು ಹೊಂದಿದಳು.

*ಮಹಿಷ* ಎಂದರೆ *ಕೋಣ*. *ಕೋಣ* *ಅಜ್ಞಾನವನ್ನು* ಸಂಕೇತಿಸುತ್ತದೆ. *ಲೌಕಿಕ ಜಗತ್ತಿನಲ್ಲಿ  ಕಾಮ , ಕ್ರೋಧ , ಮೋಹ , ಮಾಯೆ ಎಂಬ ಅಜ್ಞಾನಗಳು ನಮ್ಮನ್ನು ಆಗಾಗ ವರಿಸಲು ಬರುತ್ತವೆ* ಆ ಸಂದರ್ಭದಲ್ಲಿ *ಜ್ಞಾನ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯ ಸ್ಮರಣೆ ಅಜ್ಞಾನ ನಾಶಕ್ಕೆ ಹಾಗೂ ಜ್ಞಾನ ಜ್ಯೋತಿ  ಬೆಳಗಲು ಕಾರಣಳಾಗುತ್ತಾಳೆ.*

ಭಾಗವತ ಪುರಾಣದಲ್ಲಿ ಕನ್ಯೆಯರು  ಅರ್ಥಾತ್ *ಮದುವೆಯಾಗದ ಗೋಪಿಕೆಯರು ಕೃಷ್ಣನೇ ಗಂಡನಾಗಿ ಸಿಗಲಿ ಎಂಬ ಉದ್ದೇಶದಿಂದ ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿಯ ತೀರದಲ್ಲಿ ಸ್ನಾನ ಮಾಡಿ ಒಂದು ತಿಂಗಳ ಕಾತ್ಯಾಯಿನಿ ವೃತ ಕೈಗೊಳ್ಳುತ್ತಿದ್ದರು ಎಂದು ಪ್ರಸ್ತಾಪಿಸುತ್ತದೆ.*

ಕನ್ಯಾ ಕುಮಾರಿ ದೇವಾಲಯದಲ್ಲಿರುವ  *ಕನ್ಯಾಕುಮಾರಿಯು* ಕಾತ್ಯಾಯಿನಿಯ ಸ್ವರೂಪ.

ನವರಾತ್ರಿಯು *ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತ* ಎನ್ನುವುದನ್ನು ನಾವು ಈ ಹಿಂದೆಯೇ ತಿಳಿದುಕೊಂಡೆವು. ಬ್ರಹ್ಮಚಾರಿಣಿ ರೂಪವು *ಲೌಕಿಕ ಕಾಮನೆಗಳ ಮೇಲೆ ಅಲೌಕಿಕ ಸತ್ಯದ ಅರಿವನ್ನು ನೀಡುತ್ತದೆ.* ಅಂತೆಯೇ ಕಾತ್ಯಾಯಿನಿ ರೂಪವು  *ಅರಿಷಡ್ವರ್ಗಗಳ ಮೇಲಿನ ವಿಜಯವನ್ನೂ ಸಂಕೇತಿಸುತ್ತದೆ.*

ಪರ್ವತದ ತಪ್ಪಲಿನಲ್ಲಿಯ ಸಮೃದ್ಧಿಯನ್ನು ಶೈಲಪುತ್ರಿಗೆ ಆರೋಪಿಸಿ, ಕೃಷಿಯೇ ಮುಂತಾದ ಜ್ಞಾನದ ಬಲವನ್ನು ಬ್ರಹ್ಮಚಾರಿಣಿಯೆಂದು ಕರೆದು, ಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯವನ್ನೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳನ್ನು ಗೆದ್ದು ಜಗತ್ತನ್ನೇಧಾರಣೆ ಮಾಡಿದ ಶಿವ ಎಂಬ ಸಂತಸ ಪಡೆದು ಬೀರಿದ ಮಂದಹಾಸವೇ ಕೂಷ್ಮಾಂಡ ಎಂದು ಭಾವಿಸಿ, ತಮ್ಮ ಕುಲದ, ವಂಶದ, ಜಗತ್ತಿನ, ಸೃಷ್ಟಿಯ ಮುಂದೆ ಕೊಂಡೊಯ್ಯುವಲ್ಲಿ ತಾಯಿ ಮಗುವಿನ ಸೇತುವನ್ನೇ ಸ್ಕಂದ ಮಾತ ಎಂದ ಮಾನವ, ಎಲ್ಲಾ ಸಮೃದ್ಧಿಯ ಆಚೆಗೆ ಈ ಐಹಿಕ ಜಗದ ಮೋಹ ಪಾಶಕ್ಕೆ ಒಳಗಾಗದಂತೆ, ಈ ಪರ್ವತದ ತಪ್ಪಲಿನ ಬದುಕಿನಾಚೆಗಿನ ಪಾರಮಾರ್ಥಿಕವೇ ಸತ್ಯ ಎಂದು ಆ ಸತ್ಯವನ್ನು ಕಾತ್ಯಾಯಿನಿ ರೂಪದಲ್ಲಿ ಪರಿಭಾವಿಸಿಕೊಂಡನು 

*ಯೋಗದಲ್ಲಿ ಈಕೆ ಆಜ್ಙಾ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*

*ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಧೀಶ್ವರೀ| ನಂದ ಗೋಪ ಸುತಂ ದೇವಿಪತಿಂ ಮೇ ಕುರು ತೆ ನಮಃ ||*ಎಂದು ಸ್ತುತಿಸಿ ಫಲವನ್ನು ಪಡೆಯಬಹುದು...

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"