Wednesday, 17 January 2018

ಶೆಟ್ರಂಗಡಿಯಿಂದ ಮಾಲಿನೆಡೆಗೆ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-1

         21ನೇ ಶತಮಾನ ಅರ್ಥಾತ್ 2000ದ ಇಸವಿಯ ಈಚೆಗೆ ಕಾಲ ವೇಗವಾಗಿ ಬದಲಾಯಿತು. ತಂತ್ರಜ್ಞಾನ, ಜಾಲತಾಣ 💻, ಮೊಬೈಲು📱 ಮಾಲ್ 🏢ಮುಂತಾದ ಹೊಸ ವಿಚಾರಗಳು ಅತಿ ಹೆಚ್ಚಾಗಿ ಬಳಕೆಗೆ ಬಂದವು. ಬಳಕೆಗೆ ಬಂದವು ಎನ್ನುವುದಕ್ಕಿಂತಲೂ  ಇವೆಲ್ಲವೂ ಮಧ್ಯಮ ವರ್ಗದ 🏠 ಮನೆಗಳನ್ನು ತಲುಪಿದವು ಎಂದರೆ ಹೆಚ್ಚು ಸೂಕ್ತ ಎನ್ನಿಸುತ್ತದೆ.
    
         ಯಾಕೆಂದರೆ, ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಮನೆಗಳಲ್ಲಿ 🏠ಹೆಚ್ಚು ಚಾಲ್ತಿಯಲ್ಲಿರುವ ವಿಷಯಗಳು ಕೇಂದ್ರ ಬಿಂದು ಆಗುವುದನ್ನು ನಾವು ಕಂಡಿದ್ದೇವೆ. ಮಧ್ಯಮ ವರ್ಗದ ಮನೆಗಳಲ್ಲಿ 🏘ಯಾವ ವಿಚಾರಗಳು ಹೆಚ್ಚು ಪ್ರಚುರವಾಗುತ್ತದೊ ಅವು ಬಹುಕೋಟಿ ಆದಾಯಗಳನ್ನೇ 💰 ತಂದುಕೊಟ್ಟಿರುವುದಂತು ನಿಜ. ಧಾರಾವಾಹಿಗಳು 📺ಮತ್ತು ಜಾಹೀರಾತುಗಳು🆓 ಇದನ್ನು ಬಹಳ ಚೆನ್ನಾಗಿ ಅರಿತಿಕೊಂಡಿವೆ.  ಹೀಗಾಗಿ ಮಧ್ಯಮ ವರ್ಗದ ಮೇಲೆ ಪ್ರಭಾವ ಬೀರುವಂತೆ ಇಂದಿನ ಧಾರಾವಾಹಿಗಳು ಶ್ರೀಮಂತಿಕೆಯನ್ನು ಧಾರಾವಾಹಿಗಳ ಮೂಲಕ ಹೇರುವುದನ್ನು ಆ ಮೂಲಕ ವ್ಯಾಪಾರೀಕರಣ💴💵 ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಜಾಹೀರಾತುಗಳದ್ದಾದರೂ ಇದೇ ಹಣೆಬರಹ. (ಈ ಬಗ್ಗೆ ಮುಂದಿನ ಅಂಕಣಗಳಲ್ಲಿ ವಿಶದವಾಗಿ ಚರ್ಚಿಸೋಣ).

         ಇದಕ್ಕಿನ್ನೊಂದು ಉದಾಹರಣೆಯೆ Shopping Mall🛒. ಇಂದು ನಗರ ಜೀವನದ ಅವಿಭಾಜ್ಯ ಅಂಗವೇನೊ ಎಂಬಂತೆ ಪ್ರತಿಬಿಂಬಿತವಾಗಿರುವುದು ಶಾಪಿಂಗ್ ಮಾಲ್. ನಗರದ ಅಭಿವ್ರದ್ಧಿಯ ಮಾಪನದಲ್ಲಿ ಮಾಲ್ ಗಳು ಪ್ರಮುಖ ಪಾತ್ರವಹಿಸುತ್ತಿರುವುದು ಕೂಡ ಕಾಣಬಹುದಾಗಿದೆ.
ಒಂದು ಬಹು ಮಹಡಿ ಕಟ್ಟಡದೊಳಗೆ, ಒಂದೇ ಸೂರಿನಡಿ, ಎಲ್ಲವೂ ಎಲ್ಲರಿಗಾಗಿ ಎಂಬಂತೆ ಹಲವು ಅಂತಾರಾಷ್ಟ್ರೀಯ ಬ್ರಾಂಡ್ ಗಳು ಹವಾನಿಯಂತ್ರಿತ ಕಟ್ಟಡದೊಳಗೆ ಕಣ್ಕೋರೈಸುವ ನೆಲಹಾಸಿನ ಮಿಂಚಲ್ಲಿ ಆಕರ್ಷಕವಾಗಿ ತೋರುತ್ತವೆ. ಜನರನ್ನು ಮರಳುಗೊಳಿಸಿವೆ.
      
          ಸಮಯ ಕೊಲ್ಲುವ (time killing) ಚಟುವಟಿಕೆಯಾಗಿ, ಶಾಪಿಂಗ್ ಅನುಭವಕ್ಕಾಗಿ, ಮೀಟಿಂಗ್, ಔಟಿಂಗ್, ಡೇಟಿಂಗ್, ಈಟಿಂಗ್ ಮುಂತಾದ ಎಲ್ಲಾ ಇಂಗ್ ಗಳಿಗಾಗಿ ಮಾಲ್ ಪ್ರಶಸ್ತ ಎಂಬಂತಾಗಿದೆ. ಪ್ರೀತಿ ಪ್ರೇಮದ ಹೆಸರಲ್ಲಿ ಮರ ಸುತ್ತುವುದು ಕಡಿಮೆಯಾಗಿ ಈಗ ಮಾಲ್ ಸುತ್ತುವುದು ಹೆಚ್ಚು ಮನೋಹರವಾಗಿದೆ. ತಪ್ಪೇನು ಇಲ್ಲ, ಮನಸ್ಸಿಗೆ ಮುದಕೊಡುವ, ಮನರಂಜನೆ ನೀಡುವ ನಿಟ್ಟಿನಲ್ಲಿ ಮಾಲ್ ಗಳ ಭೇಟಿ ತಪ್ಪೇನು ಅಲ್ಲ. ಆದರೆ,

            ಇಂತಹ ಮಾಲ್ ನಲ್ಲಿ ಇಂದು ಹುಡುಕಿದರೂ ದೇಶಿಯತೆ ಕಾಣಸಿಗುವುದು ವಿರಳಾತಿವಿರಳ. ಅತಿ ಹೆಚ್ಚು ಆಂಗ್ಲ ಭಾಷೆ ಬಳಸುವ, ಪಾಶ್ಚಾತ್ಯ ಬಟ್ಟೆ ಬರೆಗಳ, ವಿದೇಶಿಗರಂತೆ ಹಾವಭಾವಗಳ ಮಾಡುವ ಜನರೇ ಕಂಡು ಬರುತ್ತಾರೆ 🍟🍿🍝. ಬೇರೆಯವರಿಂದ ಎರವಲು ಪಡೆಯುವುದು ತಪ್ಪು ಎಂಬುವುದು ನನ್ನ ಮತವಲ್ಲ. ಬದಲಿಗೆ ನನ್ನ ಪ್ರಶ್ನೆ ಹೀಗೆ ಅನುಕರಿಸುತ್ತಾ ಹೋಗುವ ನಮ್ಮಲ್ಲಿನ ನಮ್ಮತನವನ್ನು ನಾವು ಎಲ್ಲಿ ಮರೆತೆವು??

        ಮಾಲ್ ಎಂದಾಗ ಸೀರೆ ಪಕ್ಕಕ್ಕಿಟ್ಟು ಜೀನ್ಸ್ ಮತ್ತು ಟಿ-ಶರ್ಟ್ ಹಾಕುವ ಸ್ತ್ರೀಯರು, ಜುಬ್ಬ ಖಾದಿ ಕುರ್ತಗಳ ನೆಚ್ಚದೆ ತ್ರೀಫೋರ್ತ್, ಸ್ಲೀವ್ ಲೆಸ್ ಟೀಸ್ ಹಾಕುವ ಪುರುಷರು ಏನನ್ನು ಪ್ರತಿನಿಧಿಸುತ್ತಿದ್ದಾರೆ? ಮಾಲ್ ಎಂದಕೂಡಲೆ ಅದೆಲ್ಲೋ ಲಂಡನ್ ನಲ್ಲಿ ಇರುವಂತೆ ನಮ್ಮಲ್ಲಿ ಈ ನೆಲದ ವ್ಯಕ್ತಿಯೇ ಅಲ್ಲ ಎಂಬಂತ ವರ್ತನೆಗಳೇಕೆ? ವಿಶೇಷವಾಗಿ ಯುವ ಸಮುದಾಯವು ಈ ಲೋಕದಲ್ಲೇ ಇಲ್ಲ ಎಂಬಂತೆ ಹೊರಗಿನ ಎಲ್ಲಾ ವ್ಯವಹಾರಗಳಿಂದಲೂ ತಮ್ಮನ್ನು ಕತ್ತರಿಸಿಕೊಂಡು ತಮ್ಮದೇ ವಲಯದೊಳಕ್ಕೆ ಸೀಮಿತಗೊಳ್ಳುವುದು ಅವರ ಸಾಮಾಜಿಕರಣದ (Socialisation) ಮೇಲೆ ಬಹಳ ಪ್ರಭಾವ ಬೀರುವಂತದ್ದು.ಯಾರಿಗೂ ಮಿಡಿಯದ, ಯಾರಿಗೂ ಆಗದ ಇಂತಹ ಯುವ ಸಮುದಾಯ ನಾಳೆ ದಿನ ಯಾರ ಧ್ವನಿಯಾಗಬಲ್ಲರು? ತಂದೆ ತಾಯಿ ಜೊತೆ ಹೋಗುವ ಮಕ್ಕಳು ಈ ಮಾಲ್ ಸಂಸ್ಕ್ರತಿಯಿಂದ ಏನು ಕಲಿಯುತ್ತಿದ್ದಾರೆ? ನಾಳೆಯ ಎಂತಹ ಭಾರತ ಅವರ ಕಲ್ಪನೆಯಲ್ಲಿ ಮೂಡುತ್ತಿದೆ? ಆಲೋಚಿಸ ಬೇಕಾಗುತ್ತದೆ.

       15 ವರುಷಗಳ ಹಿಂದೆ ಮಾಲ್ ಎಂಬುದೇ ಇಲ್ಲವಾದಾಗ ಶೆಟ್ರಂಗಡಿ ಬಾಗಿಲ ಬಳಿ ನಿಂತು ಚೀಟಿ ಕೊಟ್ಟು ಸಾಮಾನು ಕಟ್ಟಿಸಿಕೊಂಡವರೇ ಇಂದು ಮಾಲ್ ನಲ್ಲಿ ಇರುವವರೇ ವಿನಃ ಯಾರೂ ಅಮೇರಿಕಾದಿಂದ ಬಂದವರಲ್ಲ. ಹಾಗಿದ್ದರೆ ಶೆಟ್ರಂಗಡಿಗೆ ಬರುತ್ತಿದ್ದಾಗ ಇದ್ದ ನಮ್ಮತನ ಮಾಲ್ ಒಳಗಡೆ ಯಾಕೆ ಬರುತ್ತಿಲ್ಲ? ಶೆಟ್ರಂಗಡಿಯಲ್ಲಿ ನಡೆಯುತ್ತಿದ್ದಂತಹ ಆಪ್ತ ಸಂವಾದಗಳು ಇಂದು ಮಾಲ್ ಗಳಲ್ಲಿ ಯಾಕೆ ನಡೆಯುತ್ತಿಲ್ಲ?

          ಎಲ್ಲವೂ ಸಿಗುವ ಮಾಲ್ ನಲ್ಲಿ ಇಂದು ಮಾನವೀಯ ಮೌಲ್ಯಗಳು, ದೇಶಿಯತೆ, ನಮ್ಮತನ, ಅಪ್ಪಟ ಕನ್ನಡ ಭಾಷೆ, ಸಂಸ್ಕ್ರತಿ, ಸಾಹಿತ್ಯಗಳು ಏಕೆ ಸಿಗುತ್ತಿಲ್ಲ? ನಮ್ಮ ಮುಂದಿನ ಪೀಳಿಗೆಗೆ ನಮ್ಮದಲ್ಲದ ಇನ್ನೊಂದು ದೇಶದ ಸಾಂಸ್ಕ್ರತಿಕ ಅನುಕರಣೆಯ ಕೊಡುಗೆ ನೀಡುವ ನಮ್ಮನ್ನು ನಮ್ಮ ಮುಂದಿನ ತಲೆಮಾರು ಮೆಚ್ಚೀತೆ?

           ಶೆಟ್ರಂಗಡಿಯಲ್ಲಿ ದಿನಸಿ ಕಟ್ಟುವವನೊಂದಿಗೆ ನಮಗಿದ್ದ ಒಡನಾಟ ಶಾಪಿಂಗ್ ಮಾಲಿನ ಒಳಗೆ ಕನ್ನಡಿ ಗಾಜಿನ ಅಂಗಡಿಯೊಳಗೆ ವ್ಯಾಪಾರ ಮಾಡುವವರಲ್ಲಿ ಏಕೆ ಮೂಡುವುದಿಲ್ಲ??
ಯಾಕೆಂದರೆ ಮಾಲುಗಳಲ್ಲಿ ಬರೀ ವ್ಯಾಪರ ನಡೆಯುತ್ತವೆ, ಶೆಟ್ರಂಗಡಿಯಲ್ಲಿ ವ್ಯಾಪಾರದ ಜೊತೆ ಪ್ರೀತಿಯೂ ಬೆರೆಯುತ್ತಿತ್ತು.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.