ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-6
ಕಾರ್ತಿಕ ಮಾಸ ಎನ್ನುವುದು ದೀಪದ ಮಾಸ🕯 ಅಂತಲೂ ಕರೆಸಿಕೊಳ್ಳುವ ಮಾಸ. ದೀಪಾವಳಿಯೂ🕯 ಇದೆ ಮಾಸದಲ್ಲಿ ಬರುವಂತಹುದು. ಮುಂದಿನ ಚಳಿಗಾಲದ ⛄ ಆಗಮನಕ್ಕೆ ಶಾಖವು🔥 ಮೈಮನಸ್ಸನ್ನು ಬೆಚ್ಚಗಿಡಲಿ ಎಂಬ ಉದ್ದೇಶವೂ ದೀಪಗಳೊಂದಿಗೆ ತಳುಕು ಹಾಕಿದೆ ಎನ್ನಬಹುದು. ದೇವಸ್ಥಾನಗಳಲ್ಲಿ ಲಕ್ಷದೀಪೋತ್ಸವಗಳು🕯🕯🕯 ಈ ಮಾಸಗಳಲ್ಲಿಯೇ ನಡೆಯುತ್ತವೆ.
ಹೀಗೆ ದೀಪೋತ್ಸವಗಳು ಕಳೆಯುತ್ತಿದ್ದಂತೆ ಶುರುವಾಗುವುದು ಊರ ಜಾತ್ರೆಗಳು 🎆. ಹಿಮಂತ, ಮಾಘ, ಫಾಲ್ಗುನ, ಚೈತ್ರ, ವೈಶಾಖ ಹೀಗೆ ಈ ಎಲ್ಲಾ ಮಾಸಗಳಲ್ಲಿ ಸಾಲು ಸಾಲು ಜಾತ್ರೆಗಳು ಜರುಗುತ್ತವೆ. ಜಾತ್ರೆ ಎನ್ನುವ ಊರ ಹಬ್ಬ ಎಲ್ಲಾ ಹಳೆಯ ನೆನಪುಗಳ ಸುರುಳಿ ಬಿಚ್ಚುತ್ತವೆ 🎆🎆.
ಜಾತ್ರೆ ಎಂದಾಗ ಕಣ್ಣಿಗೆ ಮೊದಲು ಕಟ್ಟುವುದು ಸಂತೆಗಳು 🎪. ದೂರದಿಂದಲೇ ಸಾಲು ಸಾಲಾಗಿ ಹಾಕಿರುವ ಡೇರೆಗಳಲ್ಲಿ ಬಣ್ಣ ಬಣ್ಣದ ವಸ್ತುಗಳು ಕಣ್ಣುಕೋರೈಸುತ್ತವೆ. ಮಿಠಾಯಿ 🍭🍬 ಹಲ್ವಾಗಳ🍩 ಸಿಹಿ ಒಂದೆಡೆಯಾದರೆ ಬಜ್ಜಿ ಬೋಂಡಾಗಳ🌶 ಕಾಯಿಸಿ ಮಾರುವ ಘಮ ಇನ್ನೊಂದೆಡೆ. ಅಲ್ಲೆಲ್ಲೊ ಕಬ್ಬು 🎋 ಅರೆಯುವ ಯಂತ್ರ ಅದಕ್ಕೆ ಕಟ್ಟಿದ ಗೆಜ್ಜೆನಾದ ಹೊಮ್ಮಿಸಿ ತಿರುಗುತ್ತಿದ್ದರೆ, ಕಟಕಟನೆ ಪಾತ್ರೆ ಬಡಿಯುತ್ತಾ ಗೋಬಿ🥦 ಕಾಯಿಸುವವನು ಇನ್ನೊಂದೆಡೆ. ಗಾಳಿಗೆ ತೇಲಿ ಬರುವ ಕೊಳಲ ನಾದ, ಬಲೂನುಗಳ ಹೊತ್ತು ಸಾಗುವ ಬಲೂನುಗಾರ 🎈, ಗೊಂಬೆಗಳದ್ದೇ ಒಂದಷ್ಟು ಸ್ಟಾಲ್‍ಗಳು 🎎 ಎಲ್ಲಿಂದಲೋ ತೇಲಿ ಬರುವ ಸಾಬೂನು ನೀರ ಗುಳ್ಳೆಗಳು, ದಾರಿಯ ಇಕ್ಕೆಲಗಳಲ್ಲಿ ಜನಜಂಗುಳಿ.
ದಾರಿಯ ಕೊನೆಯಲ್ಲಿ ಅರಳಿಮರದ 🌳ಬುಡದಲ್ಲಿ ಭವ್ಯ ರಥ ಸಾಲಂಕೃತಗೊಂಡು ನಿಂತಿದೆ. ಬಣ್ಣ ಬಣ್ಣದ ಬಾವುಟಗಳಿಂದ ಕಂಗೊಳಿಸುವ ರಥದ ಗಾಲಿಗಳ ಕೆಳಗೆ ಒಡೆದ ತೆಂಗಿನ ಕಾಯಿ 🥥 ಚೆಲ್ಲಿದ ಕುಂಕುಮ. ರಥದ ಮರದ ಚಕ್ರಗಳ ಬಳಿ ಸುಳಿವಾಗ ಒಂದು ಭಕ್ತಿಯ ಭಾವ.
ಕತ್ತಲೇರುತ್ತಿದ್ದಂತೆ ಬೆಳಕು ಹೊತ್ತಿಸುವ ಡೇರೆಗಳು, ರಾತ್ರಿಯ ಹೊತ್ತು ಗ್ಯಾಸ್‍ಲೈಟಿನ, ಬಲ್ಬುಗಳ 💡ಬೆಳಕಲ್ಲಿ ಸಂತೆಗೊಂದು ಚಿನ್ನದ ಮೆರುಗು. ಹುಡುಗಿಯರ ತರಹೆವಾರಿ ಕ್ಲಿಪ್ಪು ಬಳೆ ಬೊಟ್ಟುಗಳ ಡೇರೆಯ ಸುತ್ತಾ ಜಮಾಯಿಸಿದ ತರುಣಿಯರು. ಹೆಜ್ಜೆಗೊಂದು ಐಸ್‍ಕ್ರೀಮಿನ ಗಾಡಿ 🍦ಅಲ್ಲೆಲ್ಲೊ ತಿರುಗು ಚಕ್ರದ ಜೋಕಾಲಿ🎡
ತೇರು ಸಾಗುವ ದಾರಿಯ ಇಕ್ಕೆಲದಲ್ಲೂ ಒತ್ತಾಗಿ ಸಾಗುವ ಜನರ ಕಣ್ಣುಗಳಲ್ಲಿ 👀 ಹಬ್ಬದ 😱 ಸಂಭ್ರಮ. ದಾರಿಯಲ್ಲಿ ಪಕ್ಕನೆ ಸಿಗುವ ಪರಿಚಿತರೊಂದಿಗೆ ಒಂದಷ್ಟು ನಗು ಹರಟೆ. ದೂರದಲ್ಲೆಲ್ಲೊ ಕೊಳಲು ಮಾರುವವನ ಕೊಳಲಗಾನ ತೇಲಿ ಬರುತ್ತವೆ. ಹತ್ತು ರೂಪಾಯಿಗೊಂದು ಪ್ಲಾಸ್ಟಿಕು ಪಾತ್ರೆ, ಸ್ಟೀಲ್ ತಟ್ಟೆಗಳು ಬಿಡುವಿಲ್ಲದ ವ್ಯಾಪಾರ.
ಜಾತ್ರೆಯ ರೂಪಗಳು ಬದಲಾಗಿರಬಹುದು, ಹೊಸ ಅಂಗಡಿಗಳು ಬಂದಿರಬಹುದು, ಆಧುನಿಕತೆಯ ಸೋಗಿರಬಹುದು ಆದರೆ, ಜಾತ್ರೆಗಳ ಖುಷಿ, ಸಂಭ್ರಮ ಮತ್ತು ಅಲ್ಲಿಯ ಘಮ ಇವತ್ತಿಗೂ ಹಾಗೆಯೇ ಇದೆ.
ಮತ್ತೆ ಜಾತ್ರೆಗಳು ಬಂದಿವೆ. ಹಾಗೆ ಸುಮ್ಮನೆ ನೆನಪಾಯಿತು ಎಂದು ಬರೆದಿದ್ದೇನೆ. ನಿಮ್ಮ ನೆನಪುಗಳನ್ನು ತಾಕಿದ್ದೇನೆ ಎಂದು ಭಾವಿಸುತ್ತೇನೆ. ನನ್ನ ಬರಹ ಈ ಬಾರಿಯ ನಿಮ್ಮ ಜಾತ್ರಾವಿಹಾರವನ್ನು ಹೆಚ್ಚು ಸೊಗಸಾಗಿಸಲಿ
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.