ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 3
ಹಾಗೊಂದು ಕಾಲವಿತ್ತು ಮಕ್ಕಳಲ್ಲಿ 👶🏻ಏನು ಇಷ್ಟ ಎಂದು ಕೇಳಿದರೆ ಅವರ ಇಷ್ಟಗಳ ಪಟ್ಟಿಯಲ್ಲಿ ಬಾಲಮಂಗಳ, ತುಂತುರು, ಗಿಳಿವಿಂಡುಗಳು ಇರುತ್ತಿದ್ದವು. ಅದೆಷ್ಟೊ ಮಂದಿಯ ಬಾಲ್ಯದ ಸೊಬಗನ್ನು ಬಾಲಮಂಗಳ 🦁🐯🐶 ಹೆಚ್ಚಿಸಿತ್ತು. ಕಾರ್ಟೂನಿಗಿಂತಲೂ ಕಥೆ ಪುಸ್ತಕಗಳನ್ನು ಓದುವ ಗೀಳು ಅನೇಕರ ಬಾಲ್ಯವನ್ನು ಶ್ರೀಮಂತವಾಗಿಸಿತ್ತು. ಡಿಂಗ 🧒🏻 ಇವತ್ತಿಗೂ ನೆನಪಲ್ಲಿ ಉಳಿಯುವ ಪಾತ್ರ, ಶಕ್ತಿ ಮದ್ದು ಮನಮೆಚ್ಚಿದ ಕಥೆ!!
ಹೀಗೆ ನಮ್ಮನ್ನು ಓದುವ ಓಘಕ್ಕೆ ಅಂದಿನ ಕಥಾಪುಸ್ತಕಗಳು ಹಚ್ಚುತ್ತಿದ್ದವು. ಮನೆಗಳಲ್ಲಿ ಓದು ಒಂದು ದೈನಂದಿನ ಎನ್ನುವಂತಹ ಚಟುವಟಿಕೆಯಾಗಿತ್ತು. ಮಂಗಳ, ತರಂಗ ಮುಂತಾದ ಸಾಪ್ತಾಹಿಕವೊ, ಪಾಕ್ಷಿಕವೊ, ಮಾಸಿಕವೊ 📚ಮನೆ ಮನೆಗಳಲ್ಲಿ ನಮ್ಮವೇ ಅನ್ನುವ ಹಾಗೆ ಇದ್ದುಬಿಡುತ್ತಿದ್ದವು. ಪ್ರತಿಪುಟವೂ ಕೈಬೆರಳ ತುದಿಗಳಲ್ಲಿ ತಿರುವಿಕೊಳ್ಳುತ್ತ ಓದಿಸಿಕೊಂಡು ಹೋಗುತ್ತಿದ್ದರೆ ವಿಷಯದ ಮೇಲಿನ ಪಾಂಡಿತ್ಯ, ಶಬ್ಧದ ಮೇಲಿನ ಹಿಡಿತ ಸಹಜವಾಗೇ ಸಿದ್ಧಿಸುತ್ತಿತ್ತು.
ತ್ರಿವೇಣಿ, ಸಾಯಿಸುತೆ, ವೈದೇಹಿಯರ ಕಾದಂಬರಿಗಳು📙📘📗 ಹೆಣೆದು ಕೊಟ್ಟ ಕಥೆಗಳ ಪಾತ್ರಗಳಿಂದ ಮನಸ್ಸು ಪರಿಪಕ್ವವಾದ ವಿಚಾರಧಾರೆಗೆ ಹದಗೊಂಡ ಭೂಮಿಯಂತಾಗುತ್ತಿತ್ತು.
ಕಾಲ ಬದಲಾಯಿತೊ ಗೊತ್ತಿಲ್ಲ ಆದರೆ ಕಾಲಘಟ್ಟವಂತೂ ಬದಲಾಯಿತು . ಹಲವು ಕವಿಗಳಿಂದ ಶ್ರೀಮಂತವಾದ ನಮ್ಮ ಸಾಹಿತ್ಯವು ಪುಸ್ತಕದಿಂದಲೇ ಮನೆಮಾತಾಯಿತು ಎನ್ನುವುದು ನಿಸ್ಸಂಶಯ. ಆದರೆ, ಓದು ಒಂದು ಆಸಕ್ತಿದಾಯಕ ವಿಷಯವಾಗಿ ಇಂದು ಉಳಿದಿಲ್ಲ. ತಂತ್ರಜ್ಞಾನದ ಯುಗದಲ್ಲಿ ಪುಸ್ತಕ ಕ್ರಾಂತಿ ಮಂಕಾಯಿತು. 📖📱🖥
ಯಾರದರೂ ಸಿಕ್ಕರೆ ಈಗೇನು ಓದುತ್ತಿದ್ದೀರಿ 📕 ಎಂದು ಕೇಳಿ ನೋಡಿ. ಬಹಳಷ್ಟು ಮಂದಿ ಉತ್ತರಿಸಲಾರರು. ಯಾಕೆಂದರೆ ಅವರ ನಿಟ್ಟಿನಲ್ಲಿ ಓದು ವಿದ್ಯಾಭ್ಯಾಸಕ್ಕೇ ಕೊನೆಯಾಗಿದೆ. ಓದಿ ಮುಗಿದಿದೆ!! 📖
ಓದು ಒಂದು ಹಂತಕ್ಕೆ ಮುಗಿಯುವ ಕ್ರಿಯೆ ಅಲ್ಲ, ಅದು ಬದುಕಿನುದ್ದಕ್ಕೂ ನಡೆಯುವ ನಿರಂತರ ಪ್ರಕ್ರಿಯೆ. ಇಂತಹ ನಿರಂತರ ಪ್ರಕ್ರಿಯೆಯನ್ನು ಜಾರಿಯಲಿಡುವ ಕೆಲಸವನ್ನು ಪುಸ್ತಕಗಳು 📖ಬಹಳ ವ್ಯವಸ್ಥಿತವಾಗಿ ಮಾಡುತ್ತವೆ.
ಮನೆಮನೆಗಳಲ್ಲಿ ಧಾರಾವಾಹಿಗಳೊಂದಿಗೆ ತಳುಕು ಹಾಕಿರುವ ಇಂದಿನ ಟಿವಿ📺, ಜಾಲತಾಣಗಳೊಂದಿಗೆ ತಳುಕು ಹಾಕಿರುವ ಮೊಬೈಲುಗಳ📱 ನಡುವೆ ಪುಸ್ತಕಗಳದ್ದು ಮೂಕಮೌನ 📚.
ಓದುವ ಪುಸ್ತಕಗಳಲ್ಲಿ ನಮ್ಮದೇ ಕಲ್ಪನೆ 🙇🏾♂ ಮೂಡಿನಿಲ್ಲುತ್ತವೆ, ನಮ್ಮದೇ ಅಭಿಪ್ರಾಯ ವಿಮರ್ಶೆಗಳು ವ್ಯಕ್ತವಾಗುತ್ತವೆ 🗣ಭಾಷಾ ಶುದ್ಧತೆ, ಏಕಾಗ್ರತೆ, ಸಾಹಿತ್ಯ ವಲಯದ ಆಳ ಹರವುಗಳ ಜ್ಞಾನ ದೊರಕುತ್ತವೆ. ಟಿವಿ📺 ಇದನ್ನೆಂದೂ ಮಾಡಲಾರವು.
ಬಾಲ್ಯದಲ್ಲೊ ಅಥವಾ ಒಂದು ಕಾಲಘಟ್ಟದ ಆಚೆಗೆಲ್ಲೊ ಪುಸ್ತಕ 📖ಓದುವ ಪರಿಪಾಠವಿಟ್ಟುಕೊಂಡಿದ್ದ ನಾವೇ ಇಂದು ಅವುಗಳಿಂದ ಮೈಲು ದೂರ 🏃🏼♂ಸರಿದಿರುವಾಗ, ಪುಸ್ತಕಾಭಿಮಾನವೇ ಬೆಳೆಸದೆ ಬೆಳೆಸಿದ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಯಾವ ವೈಚಾರಿಕ ನಿಲುಗಳನ್ನು ಹೊಂದಿಯಾರು? ಸ್ವ ವಿಶ್ಲೇಷಣೆ, ಸ್ವ ಪರಿಕಲ್ಪನೆ, ಸ್ವ ವಿಮರ್ಶೆಗಳು ನಮ್ಮ ಕಿರಿಯರು ಹೇಗೆ ಮಾಡಿಯಾರು?
ಸಣ್ಣವರಾಗಿರುವಾಗ ನಮ್ಮ ಪುಸ್ತಕಗಳ ಪುಟಗಳ📖 ನಡುವೆ ನವಿಲಗರಿಗಳು ಮಲಗಿರುತ್ತಿದ್ದವು. ಗರಿ ಮರಿಯಿಡುತ್ತವೆ ಎನ್ನುವ ಆಶಯದೊಂದಿಗೆ ಪುಸ್ತಕಗಳನ್ನು ಜತನವಾಗಿ ಎತ್ತಿಡುತ್ತಿದ್ದೆವು. ಪುಟ ತೆರೆದಾಗ ನವಿಲ ಗರಿ ಮರಿ ಇಟ್ಟಿರುತ್ತಿರಲಿಲ್ಲ. ಆದರೆ, ತೆರೆದ ಪುಟದಲ್ಲಿರುವ ಕಥೆ, ಚಿತ್ರಗಳನ್ನು ನೋಡಿ, ಓದಿ ಮುದಗೊಳ್ಳುತ್ತಿದ್ದೆವು. ಈಗ ಮಕ್ಕಳಿಗೆ ನವಿಲಗರಿಗಳಿಡುವ ಪುಸ್ತಕಗಳಾದರೂ ಯಾವುದಿದೆ? ಆಗೊಮ್ಮೆ ಈಗೊಮ್ಮೆ ಪುಸ್ತಕ ತೆರೆದರೂ ಓದುವುದಕ್ಕೆ ಅಂತಹ ಕಥೆಗಳಾವುದಿದೆ?
ನಮ್ಮ ಹಿಂದಿನ ಪೀಳಿಗೆ ಬೆಳಸಿದಂತೆ ನಾವು ಯಾವ ಲೇಖಕ ಬಳಗವನ್ನು ಬೆಳೆಸಿದ್ದೇವೆ? 🐾ಇರುವ ಲೇಖಕರನ್ನು ಬರವಣಿಗೆಯಲ್ಲಿ ಉಳಿಸುವ ಕೆಲಸವನ್ನಾದರೂ ಮಾಡಿದ್ದೇವೆಯೆ? ನಮ್ಮ ಮುಂದಿನ ಪೀಳಿಗೆಯಲ್ಲಿ ಲೇಖಕ ಎಂಬ ಪದವಾದರೂ ಉಳಿದೀತೆ? 🐾
ಮಕ್ಕಳನ್ನು ಓದಿಗೆ ಹಚ್ಚಬೇಕಿದೆ 🎭, ಬಾಲಮಂಗಳದಂತಹ ನೆನಪಿನಲ್ಲುಳಿಯುವ ಪುಸ್ತಕಗಳು ನಮ್ಮ ಕಿರಿಯರಿಗೂ ಸಿಗುವಂತಾಗಬೇಕಿದೆ. ಹೊಸ ಪರಿಕಲ್ಪನೆಗಳ, ಸ್ವವಿಮರ್ಶೆಗಳು ಅವರುಗಳಲ್ಲಿ ಮೂಡಿನಿಲ್ಲಬೇಕಿದೆ 💭. ಕಿರಿಯರ ಜನುಮದಿನವೇ ಮೊದಲಾದ ಶುಭ ಸಂದರ್ಭದಲ್ಲಿ ಪುಸ್ತಕವನ್ನೇ 📚 ಉಡುಗೊರೆಯಾಗಿ ನೀಡುವ ಪರಿಪಾಠ ಬೆಳೆಸಬೇಕಿದೆ.
ನಮ್ಮ ಹಳೆಯ ಪುಸ್ತಕಗಳಾದರೂ ಕಪಾಟುಗಳ 🗃ಮೂಲೆಗಳಲ್ಲಿ ನಾವೂ ಓದಿದ್ದೆವು ಎಂಬ ಹಳೆಯ ಸಾಕ್ಷಿಯಾಗಿ ಇಂದಿಗೂ ಇವೆ. ಪುಟಗಳ ನಡುವೆ ನಲುಗುತ್ತಿದೆ ನವಿಲಗರಿಗಳು. ಪುಸ್ತಕಗಳನ್ನು ತೆರೆದು ಓದೋಣ ಮತ್ತೆ, ಪುಟಗಳ ನಡುವಿನ ನವಿಲಗರಿಗಳು ನಮ್ಮ ಮನಸ್ಸಿನಲ್ಲಿ ಸಾವಿರ ಕಣ್ಣಿನ ನವಿಲಾಗಿ ಗರಿಬಿಚ್ಚಿ ಗರಿಗೆದರಿ ನಿಲ್ಲಲ್ಲಿ!!!
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.