Tuesday, 2 January 2018

ಇರುಳಗಾನ

ನಿನ್ನೂರ ದಾರಿಯಲಿ ದೀಪಗಳೆ ಬೆಳಗಿರಲು
ಹಾಡಾಗಿ ಬರಲಿ ಬೆಳ್ದಿಂಗಳು
ಮಾಘದಲಿ ಬೀಸಿರಲು ಚಳಿಗಾಳಿ ಹಿತವಾಗಿ
ಸಂಧಿಸಲಿ ನಮ್ಮಿಬ್ಬರಾ ಕಂಗಳು

ಬಾಂದಳದ ನಕ್ಷತ್ರ ಬೆಳ್ಳಿನಗೆ ಬೀರುತಿದೆ
ಬಳುಕುತಿದೆ ಗಾಳಿಗೆ ಹೊನ್ನ ದೀಪ
ಘಮಿಸುತಿದೆ ಸಂಪಿಗೆಯ ಅರೆದೆರೆದ ದಳಗಳು
ನಿನ್ನ ಸಿರಿಮುಡಿಯಲ್ಲಿ ಓಲಾಡುತ

ಮನೆಯ ತೋರಣದಲ್ಲಿ ಮಲ್ಲಿಗೆಯ ಹೂಮಾಲೆ
ಹೊಸ್ತಿಲ ಅಂಚಿನಲಿ ಸೇವಂತಿಗೆ
ಮುತ್ತು ಹನಿಗಳ ಮಿಂಚು ಸಂಜೆಯಲಿ ಎಲೆಮೇಲೆ
ಜೇನು ಕಂಠದ ಹಾಡು ಕೋಣೆಯೊಳಗೆ

ಮುಳ್ಳ ಬೇಲಿಯ ಮೇಲೆ ನಕ್ಕ ಹೂವಿನ ಮಿಂಚು ಊರಾಚೆ ಕೆರೆ ಸುತ್ತ ಕಂಪ ಸೂಸಿ,
ಮುಳ್ಳು ಬದುಕಿನ ನಡುವೆ ನನ್ನವಳು ನೀ ನಕ್ಕು
ತೂಗಿ ತೊನೆಯಿತು ಬಾಳು ಗಾಳಿ ಬೀಸಿ

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.