Saturday, 20 January 2018

ಕಾಂಕ್ರೀಟ್ ನಗರದ ನಡುವೆ ಗೂಡಿಲ್ಲದ ಗುಬ್ಬಚ್ಚಿಗಳು

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-4

ವಿಶಾಲವಾದ ಹೆಂಚು ಮನೆಗಳು 🏠, ಮನೆ ಸುತ್ತ ಬಾಗಿ ತೂಗಿ ತೊನೆಯುವ ಹೂ ಬಳ್ಳಿ ಮರಗಳು🌳🌱🌴, ಸೆಗಣಿ ಸಾರಿದ ಇಷ್ಟಗಲದ ಅಂಗಳ🏕, ಮನೆಯ ಮೆಟ್ಟಿಲುಗಳದ್ದೊಂದು ಗಾತ್ರ, ಕಂಬ ಕಂಬದ ಮೆರುಗು⛩, ಸದ್ದಿಟ್ಟು ತೆರೆವ ಬಾಗಿಲುಗಳು🚪, ತಂಪು ಮನೆಯೊಳಗೆ ಕಣ್ಣಿಗೆ ಹಿತವಾಗುವಂತಹ ಮಬ್ಬು ಕತ್ತಲು. ಮನೆ ಹೀಗಿತ್ತು ಒಂದೊಮ್ಮೆ.
ಸಣ್ಣ ಸಣ್ಣ ಹೆಂಚಿನ ಮನೆಗಳಲ್ಲಿ ತಲೆತಾಗುವಷ್ಟು ಬಾಗಿ ನಿಂತ ಹೆಂಚು ಹೊದಿಕೆ ಇತ್ತು, ತಲೆ ಬಗ್ಗಿಸಿ ಒಳ ಹೋಗುವಂತಹ ಪುಟ್ಟ ಬಾಗಿಲುಗಳಿದ್ದವು, ಹೆಂಚಿನ ಪಕ್ಕಾಸಿನೆಡೆಯಲ್ಲಿ ಮದುವೆ ಕಾಗದಗಳು✉, ಬಾಚಣಿಗೆ ಪೌಡರುಗಳು, ಪಕ್ಕದಲ್ಲೇ ಜೋತಾಡುವ ಹಿರಿಯಜ್ಜನ ಕೋಲು🌂 ಕೊಡೆಗಳು, ಚಾವಡಿಯಲ್ಲಿ ಮರದ ಕುರ್ಚಿಗಳು. ತಾರಸಿಗಳು (ಟೆರೆಸು) ಎಂಬುವುದು ಬರುವ ಮುನ್ನ ಮನೆಗೊಂದು ಶೋಭೆ ಇತ್ತು, ಲಕ್ಷಣವಿತ್ತು.

ಇಂತಹ ಮನೆಗಳ ತುಂಬಾ ಜನಜಂಗುಳಿ ಇತ್ತು 👨‍👩‍👧‍👦👪. ಅಮ್ಮ ಚಿಕ್ಕಮ್ಮರ ಕೈ ಬಳೆ ಸದ್ದು 👏🏼, ಅಕ್ಕ ತಂಗಿಯರ ಮಲ್ಲಿಗೆಯ ಜಡೆ ಕಂಪು 🧚🏻‍♀, ಅಣ್ಣನ ಚಿಟ್ಟು ಬಿಲ್ಲು, ತಮ್ಮನ ಹುಸಿಕೋಪ, ದೊಡ್ಡಪ್ಪನ ಠೀವಿ, ಅಪ್ಪನ ಗದರುವಿಕೆ, ಅಜ್ಜನ ಕೆಮ್ಮು, ಅಜ್ಜಿಯ ಆರೈಕೆ, ಚಿಕ್ಕಪ್ಪ ಮಾವಂದಿರ ಪ್ರೀತಿಗಳ ನಡುವೆ ಹೆಂಚಿನ ಮನೆಗೆ ಬೆಳದಿಂಗಳ ಬೆಳಕಿತ್ತು 🏠🌌

ಹೀಗೆ ತುಂಬು ಮನೆಗಳ ಸಂಭ್ರಮದಲ್ಲಿ ಹೆಂಚಿನೆಡೆಗಳಲ್ಲಿ, ಕಂಬದ ಮೇಲೆ ಸದ್ದಿಲ್ಲದೆ ಗೂಡು ಕಟ್ಟುತ್ತಿದ್ದದ್ದು ಗುಬ್ಬಚ್ಚಿಗಳು 🐥. ಸಂಘ ಜೀವಿಗಳಾದ ಗುಬ್ಬಚ್ಚಿಗಳು ಮನುಷ್ಯರ ಅತಿ ಸಮೀಪ ತನ್ನ ಬದುಕು ಕಟ್ಟಿಕೊಳ್ಳುತ್ತವೆ🐣 ಅತ್ಯಂತ ಸಂಕೋಚ ಜೀವಿಯಾದ ಈ ಹಕ್ಕಿ ಅಷ್ಟೇ ಶುಚಿಯಾದ ಮುದ್ದು ಹಕ್ಕಿ. ಅಂಗೈಯ ಹಿಡಿಯ ಪುಟ್ಟ ಹಕ್ಕಿಯಾದರೂ ತುಂಬಾ ಸ್ವಭಿಮಾನಿ. ಹೆಂಚು ಮನೆಗಳ ಒಳಹೊರಗೂ ಹಾರಾಡಿ ತುಂಬು ಮನೆಯ ಪುಟ್ಟ ಸದಸ್ಯನಂತೆ ಇರುತ್ತಿತ್ತು.

ಮನೆ ಹಿತ್ತಲಿನಲ್ಲಿ ಅಮ್ಮ ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿಗಾಗಿ ಹಾರಿ ಬರುತ್ತಿತ್ತು, ಸೆಗಣಿ ಸಾರಿದ ಅಂಗಳದಲ್ಲಿ ಹುಳು ಹೆಕ್ಕುತ್ತಿತ್ತು, ಸಂಜೆಗೆ ಒಟ್ಟು ಸೇರಿ ಮನೆಯ ಬದಿಯ ಹೊಳೆದಾಸವಾಳದ ಮರದಲ್ಲಿ ಹಾಡು ನುಡಿಸುತ್ತಿತ್ತು, ರಾತ್ರಿಗೆ ಹೆಂಚು ಮನೆಯ ತುಂಬು ಕೇಕೆಯಲ್ಲಿ ಗುಬ್ಬಚ್ಚಿಗಳದ್ದು ಬೆರಗುಗಣ್ಣು.🐥🐤

ನಗರಗಳೇ ಅಭಿವ್ರದ್ಧಿಯ ಮಾನದಂಡಗಳು ಎಂಬ ತಪ್ಪು ಕಲ್ಪನೆಯಲ್ಲಿ, ದೂರದೇಶದ ಜೀವನ ಶೈಲಿಗೆ ಮಾರು ಹೋಗಿ ದೊಡ್ಡ ಹಳ್ಳಿಗಳು🏘 ನಗರಗಳಾದಾಗ 🏬🏭 ಚಿಕ್ಕ ಹಳ್ಳಿಗಳ ಜನ ನಗರಕ್ಕೆ ವಲಸೆ ಬಂದರು. ಮರಗಳನ್ನು ಕಡಿದು, ರಸ್ತೆ ಮಾಡಿ, ಕಟ್ಟಡಗಳನ್ನು ಕಟ್ಟಿ ನಗರ ಬೆಳೆಯಿತು 🏩. ಬಹುಮಹಡಿ ಕಟ್ಟಡಗಳು, ನೂರ್ಮಹಡಿ ಫ್ಲಾಟುಗಳು ತಲೆಯೆತ್ತಿದವು. ಹಳ್ಳಿ ಜನರ ತುಂಬು ಮನೆಗಳ ಅವಿಭಕ್ತ ಸಂಸಾರಗಳು ವಿಭಕ್ತವಾಗಿ ನಗರದೆಡೆ ಹೊರಟವು. ನಗರದ ಶೋಕಿಯಲ್ಲಿ ಮನೆಗಳು ತಾರಸಿಯಾದವು.

ಇತ್ತ ಹಳ್ಳಿಯ ಹೆಂಚು ಮನೆಗಳು🏠 ಕಾಲಾಂತರದಲ್ಲಿ ಬದಲಾದವು. ತಾರಸಿ ಮನೆಗಳು🏬 ಪಟ್ಟಣದಿಂದ ಹಳ್ಳಿವರೆಗೂ ಬಂದವು. ಬಾಗಿಲೇ ಇರದ ಕೋಲು ಕೋಲಿನ ಕಿಟಕಿಗಳ ಬದಲಿಗೆ ಭದ್ರವಾದ ಶೋಕಿ ಕಿಟಕಿಗಳು ಬಂದವು. ಬಾಗಿಲು ಮುಚ್ಚಿದ ಕಿಟಕಿ ಗುಬ್ಬಚ್ಚಿಗೆ🐥 ಮನೆಯೊಳಗಿನ ದಾರಿ ಮುಚ್ಚಿದವು. ಸದಾ ತೆರೆದಿರುತ್ತಿದ್ದ ಮನೆ ಬಾಗಿಲು ಎಲ್ಲರೂ ಕೆಲಸಕ್ಕೆ ಹೋಗುವ ಭರದಲ್ಲಿ ಮುಚ್ಚಿ ಇರುವಂತಾದವು. ಗುಬ್ಬಚ್ಚಿ🐥 ಮನೆಯ ಹೊರಗೆ ಉಳಿದವು.

ಕಂಬವಿರದ, ಹೆಂಚಿನೆಡೆಯಿರದ ತಾರಸಿ ಮನೆಗಳು🏬 ಗುಬ್ಬಚ್ಚಿಗಳಿಗೆಂತೂ ಗೂಡ ಕಟ್ಟಲು ಅವಕಾಶ ಕಲ್ಪಿಸದು. ಹಾಗೂ ಒಳ ಬಂದರೆ ತಿರುಗುವ ಫ್ಯಾನುಗಳಿಗೆ ಸಿಕ್ಕು ಸತ್ತವೆಷ್ಟೊ. ಅಕ್ಕಿಯಲ್ಲಿ ಕಲ್ಲುಗಳೇ ಇರದಂತೆ ತಯಾರಾಗುವಲ್ಲೇ ಶುಚಿ ಮಾಡುತ್ತಾರಾದ್ದರಿಂದ ಅಕ್ಕಿ ಆರಿಸುವರಿಲ್ಲ. ಗುಬ್ಬಚ್ಚಿಗೆ 🐥ಅಕ್ಕಿ ನುಚ್ಚು ದಕ್ಕುತ್ತಿಲ್ಲ. ಸೆಗಣಿ ಸಾರದ ಅಂಗಳದಲ್ಲಿ ಗುಬ್ಬಚ್ಚಿಗೆಲ್ಲಿದೆ ಹುಳು.

ಇತ್ತ ನಗರಗಳ ಮುಗಿಲೆತ್ತರದ ಫ್ಲಾಟುಗಳಲ್ಲಿ 🏬ಗುಬ್ಬಚ್ಚಿಗಳು🐥 ಎಂದೂ ಗೂಡು ಕಟ್ಟಲಾರವು, ಸ್ವಚ್ಛ ಶುಭ್ರತೆಯೇ ಶ್ರೀಮಂತಿಕೆಯೆಂಬ ಫ್ಲಾಟುಗಳಲ್ಲಿ ಗುಬ್ಬಚ್ಚಿ ಪಾರಿವಾಳಗಳು ಗಲೀಜು ಮಾಡುವ ಉಪದ್ರವ ಹಕ್ಕಿ. ಅವುಗಳಿಗೆ ಅಲ್ಲಿ ನಿಲ್ಲಲೂ ಅನುವಿಲ್ಲ.

ನಮ್ಮೊಂದಿಗೆ ಬೆಳೆದ, ನಮ್ಮ ಮನೆಯ ಹಬ್ಬ ಸಂಭ್ರಮದಲ್ಲಿದ್ದ, ನಮ್ಮ ಮನೆಯಲ್ಲೇ ಬಾಣಂತನಗಳಾದ ಗುಬ್ಬಚ್ಚಿಗಳಿಗೆ 🐥ಇಂದು ನಮ್ಮದೇ ಮನೆಗಳಲ್ಲಿ ಜಾಗವಿಲ್ಲ. ನಮ್ಮ ಬಾಲ್ಯದ ಕಥೆಗಳಲ್ಲಿ ಗುಬ್ಬಕ್ಕನಾದ ಹಕ್ಕಿ ಇಂದು ನಮ್ಮ ಮನದಲ್ಲೂ ಇಲ್ಲ. ನಮ್ಮ ಮಕ್ಕಳಿಗೆ ಇಂದು ನಾವು ಗುಬಕ್ಕನ ಕಥೆಗಳನ್ನು ಹೇಳಲಾರೆವು ಯಾಕೆಂದರೆ ನಾವು ಕಥೆ ಕೇಳುವಾಗ ಹೆಂಚಿನೆಡೆಗಳಲ್ಲಿ ಗುಬ್ಬಚ್ಚಿಗಳಿದ್ದವು. ಗುಬ್ಬಚ್ಚಿಗಳು ನಮ್ಮ ಬಾಲ್ಯವನ್ನು ಶ್ರೀಮಂತವಾಗಿಸಿದೆ, ಅವುಗಳಿಗಾಗಿ ಕಾದಿದ್ದೇವೆ, ಹುಲ್ಲಿನ ಗೂಡು ಮಾಡಿ ಮರಿ ಮಾಡುವ ಸೋಜಿಗಕ್ಕೆ ಮಾರು ಹೋಗಿದ್ದೇವೆ ಆದರೆ, ನಮ್ಮ ಕಿರಿಯರಿಗೆ ಇರದ ಗುಬ್ಬಚ್ಚಿಯ ಕಥೆ ಹೇಗೆ ತಾನೆ ಹೇಳಿಯೇವು?

ನಗರದ ಸಿರಿಗೆ ಮನಸೋತ ನಾವುಗಳು ಗ್ರಾಮಸ್ಥರಿಂದ ನಾಗರೀಕರೇನೊ ಆದೆವು. ಆದರೆ, ನಾಗರೀಕರಣದ ಭರದಲ್ಲಿ ನಾವು ಅದೆಷ್ಟು ಸಂಭ್ರಮಗಳನ್ನು ಕಳೆದುಕೊಂಡೆವು ಎಂದು ಲೆಕ್ಕ ಹಾಕಿದರೆ ಆ ಪಟ್ಟಿಯಲ್ಲಿ ಗುಬ್ಬಚ್ಟಿಗಳು ಕೂಡ ಒಂದು.
ಅವಿಭಕ್ತ ವಿಭಕ್ತ ಕುಟುಂಬಗಳಾದಾಗ ಮನುಷ್ಯರನ್ನೇ ದೂರ ಮಾಡಿಕೊಂಡಿರುವ ನಮಗೆ ಗುಬ್ಬಚ್ಚಿ ದೂರಾಗುವುದು ದೊಡ್ಡ ವಿಷಯವಲ್ಲ ಬಿಡಿ.
ಗುಬ್ಬಚ್ಚಿಯಂತಹ ಸಂಬಂಧಗಳು ಸತ್ತು ಹೋಗಿದ್ದಾವೆ, ಇನ್ನು ಗುಬ್ಬಚ್ಚಿ ಯಾವ ಲೆಕ್ಕ. ಕಾಂಕ್ರೀಟಿನ ನಗರದೊಳಗೆ ಗುಬ್ಬಚ್ಚಿಗೆ ಗೂಡಿಲ್ಲ. ಗುಬಚ್ಚಿಯಂತಹ ನಮ್ಮ ಮನೆಯೊಳಗೆ ತುಂಬು ಕುಟುಂಬವಿಲ್ಲ!!

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.