ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-5
ಮೊದಲ ದಿನದ ಅಂಕಣದಲ್ಲಿ ಧಾರಾವಾಹಿಗಳು ಮಧ್ಯಮ ವರ್ಗದ 👨👩👧👦ಮನೆಗಳಿಗೆ ಲಗ್ಗೆಯಿಟ್ಟು ಆದಾಯಗಳಿಸುತ್ತಿರುವ💵 ಬಗ್ಗೆ ಮುಂದೊಂದು ದಿನ ಚರ್ಚಿಸೋಣ ಎಂದಿದ್ದೆ. ಇವತ್ತು ಆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸೋಣ ಬನ್ನಿ.
ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಮನೆಗಳಲ್ಲಿ 👨👩👧👦ಯಾವ ವಿಚಾರಗಳು ಹೆಚ್ಚು ಚಾಲ್ತಿಯಲ್ಲಿರುತ್ತದೊ ಅಲ್ಲಿ ಆದಾಯದ💵 ಹರಿವು ಜಾಸ್ತಿ. ಹಲವು ಕಂಪೆನಿಗಳು ಇದನ್ನೇ ಬಳಸಿಕೊಂಡು ಬಹುಕೋಟಿ ಆದಾಯಗಳಿಸಿದ್ದೂ 💰ಸುಳ್ಳಲ್ಲ. ಕೊಕೊ ಕೋಲಾ🍾 "Open Happiness" ಎಂಬ ಅಡಿಬರಹದಲ್ಲಿ ಮನೆಯ ಸಣ್ಣಪುಟ್ಟ ಸಂಭ್ರಮವನ್ನು🕺🏾💃🏻 ಕೋಕ್ ನೊಂದಿಗೆ ಆಚರಿಸಿ ಎಂದು ಹೇಳಿದ್ದು ಇದೇ ಮಧ್ಯಮ ವರ್ಗವನ್ನು ಕೇಂದ್ರೀಕರಿಸಿ (ಜಾಹೀರಾತಿನ ಬಗ್ಗೆ ಇನ್ನೊಂದು ಅಂಕಣದಲ್ಲಿ ಚರ್ಚಿಸೋಣ)
ಟಿವಿ ಧಾರಾವಾಹಿಗಳು📺 ಇದಕ್ಕೆ ಹೊರತಾಗಿಲ್ಲ. ಇಂದಿನ ಧಾರಾವಾಹಿಗಳು ಹಿಂದಿನ ಧಾರಾವಾಹಿಗಳಂತೆ ಕಥಾಕೇಂದ್ರಿತವಾಗಿಲ್ಲ ಎನ್ನುವುದು ದುರಂತ. ವಾಹಿನಿ ಎಂದರೆ ಡಿಡಿ ಚಂದನ ಎನ್ನುವ ಕಾಲದಲ್ಲಿ ಧಾರಾವಾಹಿಗಳ ಸಂಚಿಕೆ ಹೆಚ್ಚೆಂದರೆ 15 ದಾಟುತ್ತಿರಲಿಲ್ಲ. ನಂತರದಲ್ಲಿ ಬಂದ ಟಿ. ಎನ್. ಸೀತಾರಾಮರ "ಮಾಯಾಮೃಗ" ಒಂದು ವಿಭಿನ್ನ ದೃಷ್ಟಿಕೋನದ ವೈಚಾರಿಕ ನೆಲಗಟ್ಟಿನ ಧಾರಾವಾಹಿಯಾಗಿ ಜನಮೆಚ್ಚುಗೆ ಪಡೆಯಿತು.
ಇಂದಿನ ಧಾರಾವಾಹಿಗಳಿಗೆ📺 ಕಥೆಗಿಂತಲೂ ಅಲ್ಲಿ ತೋರಿಸುವ ಅದ್ಧೂರಿ ಸೀರೆ, ಚಿನ್ನಾಭರಣ, ಶ್ರೀಮಂತಿಕೆ, ಒಳಾಂಗಣ ವಿನ್ಯಾಸ ಇವುಗಳೇ ಮುಖ್ಯ. ಆ ಮೂಲಕ ಆಯಾ ವಸ್ತುಗಳ ಪ್ರದರ್ಶನ ಮಾಡುವ ಮಾರಾಟ ಚಾತುರ್ಯ (Marketing Strategy) ಇದಾಗಿದೆ.
ಇಂದು ಧಾರಾವಾಹಿಗಳಲ್ಲಿ📺 ತೋರಿಸುವ ಮನೆ ಬಳಕೆ ವಸ್ತುಗಳು ಹೆಚ್ಚಾಗಿ ಮಾಲ್ ಗಳಲ್ಲಿ ಸ್ಪಾರ್ ನಂತಹ ಮಾರಾಟ ಮಳಿಗೆಗಳಲ್ಲಿ ಕಂಡುಬರುತ್ತವೆ. ಧಾರಾವಾಹಿಗಳಲ್ಲಿ ಇತ್ತು ಎನ್ನುವ ಕಾರಣಕ್ಕೆ ಖರೀದಿ ಮಾಡುವಂತಹ ಪ್ರಭಾವಗಳನ್ನು ಧಾರಾವಾಹಿಗಳು ಜನರ ಮೇಲೆ ಬೀರುತ್ತಿರುವುದು ಅತಿಶಯೋಕ್ತಿಯಲ್ಲ.
ಇದೊಂದು ಸಣ್ಣ ಉದಾಹರಣೆಯಷ್ಟೆ, ಇಂದು ಧಾರಾವಾಹಿಗಳಲ್ಲಿ ಬರುವ ಬಡ ಮನೆತನದ ಕುಟುಂಬಗಳೂ ಕೂಡ ಅದ್ಧೂರಿಯಾಗಿ ಬದುಕುತ್ತಿರುವಂತೆ ತೋರಿಸುತ್ತಾರೆ. ಮತ್ತು ಹೆಚ್ಚಿನ ಕಥೆಗಳು ಶ್ರೀಮಂತರ ಸುತ್ತವೇ ಹೆಣೆದಿರುತ್ತಾರೆ. ಬಡ ಮತ್ತು ಮಧ್ಯಮ ವರ್ಗವೇ ಹೆಚ್ಚು ಧಾರಾವಾಹಿಗಳನ್ನು📺 ನೋಡುವುದೆಂದಾದರೆ ಅವರ ಬದುಕಿನ ಕಥೆಗಿಂತಲೂ ಭಿನ್ನವಾದ ಶ್ರೀಮಂತರ ಕಥೆಗಳನ್ನೇ ಏಕೆ ತೋರಿಸುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಕಾರಣವಿಷ್ಟೆ, ಧಾರಾವಾಹಿ ಎಂಬ ಕಲ್ಪನಾ ಲೋಕದಲ್ಲಿ ತಮ್ಮ ಬದುಕಿನ ವಾಸ್ತವವನ್ನು ನೋಡಲು ಪ್ರೇಕ್ಷಕರು ಇಷ್ಟ ಪಡುವುದಿಲ್ಲ. ಕನಸಿನಲ್ಲಾದರೂ ಶ್ರೀಮಂತಿಕೆಯನ್ನು ಕಂಡು ಸುಖಿಸುವಂತಹ ಧಾರಾವಾಹಿಗಳು ಬಡ ಮಧ್ಯಮ ವರ್ಗಕ್ಕೆ ಹೆಚ್ಚು ಪ್ರಿಯವಾಗುತ್ತದೆ. ಹೀಗೆ ಟಿ ಆರ್ ಪಿ ಹೆಚ್ಚಿಸುವ ಧಾರಾವಾಹಿಗಳು ಜನರಲ್ಲಿ ತಮ್ಮ ಜೀವನದ ಬಗ್ಗೆ ಜುಗುಪ್ಸೆ ಬರುವಂತೆ ಮಾಡುತ್ತವೆಯೆ ವಿನಃ ಇರುವ ಜೀವನವನ್ನು ಘನತೆಯಿಂದ ಬದುಕುವುದನ್ನು ಕಲಿಸುವುದಿಲ್ಲ.
ಸೀತಾರಾಮರ "ಮಾಯಮೃಗ", ನಾಗಾಭರಣರ "ಜೀವನ್ಮುಖಿ", ನಾಗತಿಹಳ್ಳಿಯ "ವಠಾರ", ವೈಶಾಲಿ ಕಾಸರವಳ್ಳಿಯ "ಮೂಡಲ ಮನೆ", ಸೇತುರಾಂರ "ಮಂಥನ" ಗಳಂತಹ ಧಾರಾವಾಹಿಗಳು ವೈಚಾರಿಕ ನಿಲುವು, ಸಂಪ್ರದಾಯ ಮತ್ತು ಬದುಕಿನ ಹೋರಾಟ, ವಠಾರದ ವಾಸ್ತವ ಚಿತ್ರಣ, ಉತ್ತರ ಕರ್ನಾಟಕದ ಸಂಸ್ಕೃತಿ ಮತ್ತು ಶೈಲಿ, ಸಾಹಿತ್ಯಿಕ ಭಾಷೆ ಮುಂತಾದವುಗಳನ್ನು ನೀಡಿ ಉತ್ತಮ ಧಾರಾವಾಹಿಯಾಗಿ ಮೂಡಿ ಬಂದಿದೆ. ಆದರೆ, ಇಂತಹ ಧಾರಾವಾಹಿಗಳು ಹೆಚ್ಚು ಟಿ ಆರ್ ಪಿ ಗಳಿಸುವುದಿಲ್ಲ ಕಾರಣ ಪ್ರೇಕ್ಷಕರು ಇಂತಹ ಚಿಂತನೆಗೆ ಹಚ್ಚುವಂತಹ ಧಾರಾವಾಹಿಗಳನ್ನು ಇಷ್ಟಪಡುವುದಿಲ್ಲ. ಇದು ವಿಷಾದನೀಯ.
ಗಹನವಾದ ಕಥಾವಸ್ತು ಇರುವ ಚಿಂತನೆಗೆ ಹಚ್ಚುವ ಧಾರಾವಾಹಿಗಳು ಇಲ್ಲದಿರುವಾಗ ಇಂದಿನ ಅನೇಕ ಧಾರಾವಾಹಿಗಳು ಇಬ್ಬರ ಹೆಂಡಿರ ಮುದ್ದಿನ ಗಂಡ, ಅತ್ತೆ ಸೊಸೆ ಜಗಳ, ಕೊಲೆ, ಕಿಡ್ನ್ಯಾಪ್ ಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಇತ್ತೀಚಿಗೆ ಒಂದು ಸಭೆಯಲ್ಲಿ ನಾನು ಧಾರಾವಾಹಿಗಳ ಬಗ್ಗೆ ಮಾತನಾಡುತ್ತಿರುವಾಗ ಒಬ್ಬ ಮಹಿಳೆ " ಅವರು ಧಾರಾವಾಹಿ ತೋರಿಸುತ್ತಿರುವುದರಿಂದ ನಾವು ನೋಡುತ್ತೇವೆ, ಅವರು ತೋರಿಸದಿದ್ದರೆ ನಾವೇಕೆ ನೋಡುತ್ತಿದ್ದೆವು" ಎಂದು ಹೇಳಿದರು. ಆದರೆ, ಅವರು ತೋರಿಸಿದ್ದನ್ನು ನಾವು ನೋಡುವ ಕರ್ಮ ಇಲ್ಲಿ ಯಾರಿಗೂ ಇಲ್ಲ. ಬದಲಾಗಿ ನಮಗೆಂತಹ ಧಾರಾವಾಹಿಗಳು ಬೇಕು ಎಂದು ಕೇಳುತ್ತೇವೆಯೊ ಅಂತಹ ಧಾರಾವಾಹಿಗಳನ್ನು ಅವರು ನೀಡಬೇಕು. ಇದು ಗ್ರಾಹಕರ ಹಕ್ಕು.
ಇಂದು ಪ್ರೇಕ್ಷಕರು ವೈಚಾರಿಕತೆಯನ್ನು ಹುಟ್ಟು ಹಾಕುವ, ಕಾದಂಬರಿ ಆಧಾರಿತ, ಸಾಹಿತ್ಯ ಪ್ರೇರಿತ, ವಿಶ್ಲೇಷಣಾತ್ಮಕ ಧಾರಾವಾಹಿಗಳನ್ನು ಹಕ್ಕಾಗಿ ಕೇಳಬೇಕು. ಉತ್ತಮ ಕಥಾನಸ್ತು ಇರದ, ನೈತಿಕ ಮೌಲ್ಯಗಳನ್ನು ಬುಡಮೇಲು ಮಾಡುವ, ಜನರನ್ನು ಮೂರ್ಖವಾಗಿಸುವ ಕಥಾವಸ್ತುಗಳ ಧಾರಾವಾಹಿಗಳನ್ನು ತಿರಸ್ಕರಿಸಬೇಕು ಇಲ್ಲವಾದರೆ "ಪುಟ್ಟ ಗೌರಿ"ಯಂತಹ ಮದುವೆಗಳು ನಡೆಯುತ್ತಲೇ ಇರುತ್ತವೆ.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.