ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-7
ನ್ಯಾಯಾಂಗ (Judiciary), ಶಾಸಕಾಂಗ (Legislature), ಕಾರ್ಯಾಂಗಗಳನ್ನು (Executive) ಭಾರತದ ಪ್ರಜಾಪ್ರಭುತ್ವದ ಮೂರು ಸ್ತಂಭಗಳೆಂದು ಕರೆಯಲಾಗುತ್ತದೆ. ಪತ್ರಿಕಾಂಗ (Media) ಇದರ ನಾಲ್ಕನೇ ಸ್ತಂಭ ಎನ್ನುವುದು ಒಂದು ಅಲಿಖಿತ ನಂಬಿಕೆ. ಒಟ್ಟಿನಲ್ಲಿ ಈ ನಾಲ್ಕು ಅಂಗಗಳೇ ಪ್ರಜಾಪ್ರಭುತ್ವ (Democracy) ವ್ಯವಸ್ಥೆಯನ್ನು ಸಮರ್ಥವಾಗಿ ನಡೆಸಲು ಸಹಕರಿಸುವಂತದ್ದು.
ಶಾಸಕಾಂಗವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬೇಕಾದ ಕಾನೂನು, ಕಾಯ್ದೆ, ಶಾಸನ, ನಿಯಮಗಳನ್ನು ರೂಪಿಸಿದರೆ; ಕಾರ್ಯಾಂಗವು ಈ ಕಾನೂನಿನ ಅನುಷ್ಠಾನ ಮತ್ತು ಪಾಲನೆಗೆ ಒತ್ತು ಕೊಡುತ್ತವೆ; ನ್ಯಾಯಂಗವು ಇದರ ಉಲ್ಲಂಘನೆಯಾದಾಗ ಅವುಗಳ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತವೆ. ಮತ್ತು ಇವೆಲ್ಲವೂ ವ್ಯವಸ್ಥಿತವಾಗಿ ನಡೆಯಲು ಕಾವಲು ನಾಯಿಯಂತೆ (Watch Dog) ಪತ್ರಿಕಾಂಗವು ಕಾರ್ಯನಿರ್ವಹಿಸುತ್ತವೆ.
ಇಂತಹ ಸುಂದರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಲಶಪ್ರಾಯವಾಗಿ ಸಂವಿಧಾನವಿದೆ. ಇದರ ಹಿರಿಮೆ ಸಲ್ಲಬೇಕಾದದ್ದು ಡಾ. ಬಿ.ಆರ್ ಅಂಬೇಡ್ಕರರಿಗೆ.
ಆದರೆ, ಪ್ರಶ್ನೆ ಮೂಡುತ್ತಿರುವುದು ಇಂದು ಈ ಎಲ್ಲಾ ಅಂಗಗಳು ಸಮರ್ಥವಾಗಿ ಮತ್ತು ಪ್ರಾಮಾಣಿಕವಾಗಿ ತಮ್ಮ ಕಾರ್ಯವನ್ನು ಮಾಡುತ್ತವೆಯೆ ಎಂಬುವುದು. ನ್ಯಾಯಾಂಗದಲ್ಲಿ ಇರುವ ಅಹಂಮಿಕೆ, ವಿಳಂಬ ನೀತಿಯ ನ್ಯಾಯಗಳು, ಕಾರ್ಯಾಂಗದಲ್ಲಿ ನಡೆಯುವ ಭ್ರಷ್ಟಾಚಾರ, ಅಸಮರ್ಪಕ ಅನುಷ್ಠಾನ, ಒಳ ರಾಜಕೀಯ ಮತ್ತು ಶಾಸಕಾಂಗದಲ್ಲಿರುವ ಮತ ಲೆಕ್ಕಾಚಾರ, ವಂಶಪಾರಂಪರ್ಯ ಆಡಳಿತಗಳು ಇಂದು ಮೂರು ಮುಖ್ಯ ಅಂಗಗಳನ್ನು ಧರಾಶಾಯಿಯಾಗಿಸಿದೆ. ಹೀಗಿದ್ದಾಗಿಯೂ ಒಂದು ಪತ್ರಿಕಾಂಗ ಮೇಲೆ ಹೇಳಿದ ಮೂರು ಅಂಗಗಳ ಲೋಪದೋಷಗಳನ್ನು ಎತ್ತಿ ತೋರಿ ಮೂರು ಅಂಗಗಳು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು. ಆದುದರಿಂದಲೇ ಪತ್ರಿಕಾಂಗವು ಭಾರತದ ಪ್ರಜಾಪ್ರಭುತ್ವದ ಕಾವಲು ನಾಯಿ (Watch Dog) ಎಂದು ಹೇಳಲಾಗುತ್ತದೆ.
ಆದರೆ ಇವತ್ತಿನ ಪತ್ರಿಕಾಂಗವು (ಒಟ್ಟಂದದಲಿ ಮಾಧ್ಯಮ) ತನ್ನ ಮೂಲ ತತ್ವಗಳನ್ನು ಗಾಳಿಗೆ ತೂರಿದ್ದೇ ಹೆಚ್ಚು. ಬ್ರೇಕಿಂಗ್ ನ್ಯೂಸ್, ಸುದ್ಧಿ ಸ್ಫೋಟ, ಎಕ್ಸ್ಲೂಸಿವ್ ನ್ಯೂಸ್ ಗಳ ಹೆಸರಲ್ಲಿ ಗಡಿಬಿಡಿಯ ಸುದ್ದಿಗಳಿಗಾಗಿ ಕಾದಿರುತ್ತವೆ. ಒಂದು ಗುರುತರ ಜವಾಬ್ದಾರಿ ಹೊತ್ತಿರುವ ಮಾಧ್ಯಮ ಜವಾಬ್ದಾರಿಯುತವಾಗಿ ನಡೆದುಕೊಳ್ಳದೇ ಇರುವುದು ದುರಂತ. ಇತರೆ ಪತ್ರಿಕೆ ಯಾ ವಾಹಿನಿಯೊಂದಿಗಿನ ಪೈಪೋಟಿ, ಅತಿಯಾದ ಉತ್ಪ್ರೇಕ್ಷೆ, ತಮ್ಮದೇ ಸರಿ ಎಂಬ ನಿಲುವು, ತಾವೇ ತೀರ್ಪೀಯುವ ವ್ಯವಸ್ಥೆ ಎಂಬಂತೆ ವರ್ತಿಸುವುದು ಪತ್ರಿಕಾ ಧರ್ಮಗಳಲ್ಲ.
ಮಾಧ್ಯಮಗಳು ಅತ್ಯಂತ ಸೂಕ್ಷ್ಮವಾಗಿ, ಗಂಭೀರವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂರೂ ಅಂಗಗಳ ಲೋಪ ದೋಷಗಳನ್ನು, ಉನ್ನತ ಕಾರ್ಯಗಳನ್ನು ಜನರ ಬಳಿಗೆ ಕೊಂಡೊಯ್ಯವ ಮಾಧ್ಯಮವು ಹೆಚ್ಚು ಪರಿಪಕ್ವವಾಗಿ ಸಮಾಜಕ್ಕೆ ಮುಖಾಮುಖಿಯಾಗಬೇಕಾಗುತ್ತದೆ.
ಮಾಧ್ಯಮ ಸದಾಕಾಲ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಸರ್ಕಾರವನ್ನು ತಿದ್ದಬೇಕಾಗುತ್ತದೆ. ತಪ್ಪಾದಲ್ಲಿ ಟೀಕಿಸುತ್ತಾ, ಉತ್ತಮ ಕಾರ್ಯವನ್ನು ಶ್ಲಾಘಿಸುತ್ತ ಪಕ್ಷಪಾತ ರಹಿತವಾಗಿ ಜನರಿಗೆ ಸುದ್ದಿ ತಲುಪಿಸ ಬೇಕಾಗುತ್ತದೆ.
ಆದರೆ ಹಲವು ಮಾಧ್ಯಮಗಳು ಪಕ್ಷಗಳ ಪರವಾಗಿ ಓಲೈಕೆಯ ತಂತ್ರಗಳನ್ನು ಮಾಡುತ್ತವೆ. ಟಿ ಆರ್ ಪಿ ಹೆಚ್ಚಾಗುವ ವಿಚಾರಗಳಿಗೆ ಮಾನ್ಯತೆ ಕೊಡುವ, ಮತೀಯ ದ್ವೇಷಗಳನ್ನು ಕೆರಳಿಸುವ, ಅನಗತ್ಯ ಪ್ರಚಾರ ಕೊಡುವ ಮಾಧ್ಯಮಗಳಿಗೇನು ಕಡಿಮೆ ಇಲ್ಲ. ಇಂತಹ ಬೆಳವಣಿಗೆ ದೇಶದ ನಿಲುವಿನಿಂದ ಒಂದು ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾದಾಗ ಪ್ರಜಾಪ್ರಭುತ್ವವೇ ಬುಡಮೇಲಾಗುವುದು ಸತ್ಯವೆ.
ಇನ್ನೇನು ಬರುವ 26ನೇ ತಾರೀಖು ಪ್ರಜಾಪ್ರಭುತ್ವ ದಿನ. ಹಾಗಾಗಿ ಇದೆಲ್ಲವೂ ನೆನಪಾಯಿತು. ನಾಲ್ಕೂ ಅಂಗಗಳು ಧರಾಶಾಯಿಯಾಗುತ್ತಿರುವ ಸಂದರ್ಭದಲ್ಲಿ ನಾಗರೀಕರಾದ ನಾವು ನಿಷ್ಪಕ್ಷಪಾತವಾದ ಪ್ರಾಮಾಣಿಕ ವ್ಯವಸ್ಥೆಯನ್ನು ಕೇಳುವ ಹಕ್ಕೊತ್ತಾಯ ಮಾಡಬೇಕು. ಪತ್ರಿಕಾಧರ್ಮವನ್ನು ಪಾಲಿಸದ ಮಾಧ್ಯಮಗಳನ್ನು ತಿರಸ್ಕರಿಸಬೇಕು. ಮಾಧ್ಯಮ ತನ್ನ ನೈತಿಕ ನಿಲುವನ್ನು ಮರೆಯದೆ ತನ್ನ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಿ. ಆ ಮೂಲಕ ಇನ್ನುಳಿದ ಮೂರೂ ಅಂಗಗಳನ್ನು ಸುಭದ್ರವಾಗಿ ಸ್ಥಾಪಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲಿ.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.