Wednesday, 24 January 2018

ಪಾಶ್ಚಾತ್ಯ ಸಂಸ್ಕೃತಿಗೆ ಮಾರಿಕೊಂಡ ನಮ್ಮತನಕ್ಕೆ ಟ್ರಡೀಷನಲ್ ಡೇ ಎಂಬ ಸೋಗು

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-8

ಪ್ರತಿಯೊಂದು ದೇಶಕ್ಕೂ ಒಂದು ಭವ್ಯ ಇತಿಹಾಸವಿರುತ್ತದೆ. ಆ ದೇಶದ ಆಹಾರ, ವೇಷ ಭೂಷ, ಭಾಷೆ, ಕಲೆ ಸಂಸ್ಕೃತಿಗಳು ಆ ದೇಶದ ಮೂಲ ನೆಲಯೊಂದಿಗೆ ಬೆರೆತಿರುತ್ತದೆ. ಹಾಗೆ ಅವೆಲ್ಲವುಗಳಿಂದಾಗಿಯೇ ಪ್ರತಿಯೊಂದು ದೇಶವೂ ತನ್ನದೇ ಆದ ರೀತಿಯಲ್ಲಿ ಭಿನ್ನ ಮತ್ತು ಶ್ರೀಮಂತ.

ಅಂತೆಯೇ, ಭಾರತವೂ ಸಹ ಸಾಂಸ್ಕೃತಿಕ, ಭಾಷಿಕ, ವ್ಯಾವಹಾರಿಕವಾಗಿ ತನ್ನದೇ ರೂಪಗಳನ್ನು ಹೊಂದಿರುವಂತದ್ದು. ತನ್ನದೆ ಉಡುಗೆ ತೊಡುಗೆ, ಖಾದ್ಯ ವೈವಿಧ್ಯಗಳನ್ನು ಪ್ರಚುರಪಡಿಸಿದೆ. ಆದರೆ, ನಮ್ಮ ದೇಶದ ಅನೇಕ ವಿಚಾರಗಳು ಅನ್ಯ ದೇಶಗಳ ಜೊತೆ ಸಂಪರ್ಕಗೊಂಡು ಕೊಡುಕೊಳ್ಳುವಿಕೆಯಿಂದ ರೂಪುಗೊಂಡಿವೆ. ನಮ್ಮ ದೇಶದ ಖಾದ್ಯಗಳನ್ನೇ ತೆಗೆದುಕೊಳ್ಳಿ ಅದರ ಮೇಲೆ ಮೊಘಲ್, ಅರಬ್, ಬ್ರಿಟನ್ ಹೀಗೆ ಅನೇಕ ದೇಶಗಳ ಪ್ರಭಾವವಿದೆ.  ಅವೆಲ್ಲವುಗಳೊಂದಿಗೆ ಕೊಡುಕೊಳ್ಳುವಿಕೆಯಿಂದ ಕಾಲಾಂತರದಲ್ಲಿ ಹೊಸತನಗಳು ರೂಪುಗೊಂಡು ನಮ್ಮವೇ ಆಗಿ ಉಗಮವಾಗಿದೆ. ಉದಾಹರಣೆಗೆ: ನಮ್ಮವೇ ಆದ ಜಿಲೇಬಿ ಮೂಲತಃ ಮಧ್ಯಪ್ರಾಚ್ಯದ ಖಾದ್ಯ, ಗುಲಾಬ್ ಜಾಮೂನ್ ಪರ್ಸಿಯಾ ಮೂಲದ್ದು. ಭಾಷೆಗಳಾದರೂ ಅಷ್ಟೇ.

ಒಂದು ದೇಶ ಮತ್ತೊಂದು ದೇಶದ ಜೊತೆ  ಕೊಡುಕೊಳ್ಳುವಿಕೆ ನಡೆಸಿದಾಗ ಮಾತ್ರ ಭಾಷೆ, ಖಾದ್ಯ, ಕಲೆಗಳೆಲ್ಲವೂ ಜೀವಂತಿಕೆ ಪಡೆಯುವುದು. ಇಲ್ಲವಾದರೆ ಅವುಗಳು ನಿಂತ ನೀರಿನಂತೆ ಕೊಳೆಯುತ್ತವೆ, ನಶಿಸುತ್ತವೆ. ಸಂಸ್ಕೃತಿ ಹರಿಯುವ ನದಿಯಂತೆ ಇದ್ದಾಗ ಮಾತ್ರ ಹೊಸ ಹರಿವು, ಹೊಸ ಸೆಳೆವು, ಹೊಸ ಜೀವಂತಿಕೆ.

ಆದರೆ, ಈ ಕೊಡುಕೊಳ್ಳುವಿಕೆಯ ನಡುವೆ ನಮ್ಮತನವನ್ನು ಮರೆತು ಬರೀ ಅಂಧಾನುಕರಣೆ ಆ ದೇಶದ ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗುತ್ತದೆ. ಒಳ್ಳೆಯತನವನ್ನು ಎಲ್ಲೆಡೆಯಿಂದ ಸ್ವೀಕರಿಸಬೇಕು. ಆದರೆ, ನಮ್ಮದ್ದನ್ನು ಒಳ್ಳೆಯದಿದ್ದರೂ ತಿರಸ್ಕರಿಸಿ ಪಾಶ್ಚಾತ್ಯತೆಗೆ ಮಾರು ಹೋಗುವುದು ಸರಿಯೆ? ಇವತ್ತು ನಾವು ಫ್ಯಾಶನ್, ಟ್ರೆಂಡ್ ಗಳ ಹೆಸರಲ್ಲಿ ದೇಶೀಯತೆ ಮರೆತು ವಿದೇಶಿಯವನ್ನು ಇಷ್ಟ ಪಡುತ್ತಿರುವಲ್ಲಿ ಇದಾಗುತ್ತಿದೆ.

ಇಂದು ಯಾವ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಲ್ಲಿ ದೇಶೀಯತೆಯನ್ನು ಬಿತ್ತುತ್ತಿವೆ. ಕಾಲೇಜುಗಳಲ್ಲಿ ಮೈ ತೋರುವ ಬಟ್ಟೆಗಳು, ಹರಿದ ಜೀನ್ಸು, ಸ್ಲೀವ್ ಲೆಸ್ ಟೀಶರ್ಟು, ಕೋಟು, ಸೂಟು ಬೂಟುಗಳನ್ನು ಹಾಕುವ ಹುಡುಗ ಹುಡುಗಿಯರನ್ನು ಕಾಣುತ್ತೇವೆ. ಖಾದಿ ಜುಬ್ಬ, ಕುರ್ತ, ಲಂಗದಾವಣಿ, ಕಾಟನ್ ಸೀರೆಗಳನ್ನು ಧರಿಸುವ ವಿದ್ಯಾರ್ಥಿಗಳೆಷ್ಟು. ಈ ಬಗ್ಗೆ ವಿದ್ಯಾಲಯಗಳಿಗೆ ಯಾವ ನಿಲುವಿದೆ? ಕಾಲೇಜುಗಳು ದೇಶೀಯ ಸಮವಸ್ತ್ರಗಳನ್ನು ಅಥವಾ ದೇಶಿ ಶೈಲಿಯ ಬಟ್ಟೆಗಳನ್ನು ಮಾತ್ರ ಧರಿಸುವಂತೆ ಯುವ ಪೀಳಿಗೆಯ ಮನಸ್ಸನ್ನು ಯಾಕೆ ಒಲಿಸುತ್ತಿಲ್ಲ?

ವರುಷವಿಡೀ ಪಾಶ್ಚಾತ್ಯರಂತೆ ಬದುಕುವ ವಿದ್ಯಾರ್ಥಿಗಳಿಗೆ ವರುಷಕ್ಕೊಂದು ದಿನ "ಟ್ರಡೀಷನಲ್ ಡೇ" ಆಯೋಜಿಸುವ ಕಾಲೇಜುಗಳದೆಂತಹ ವಿಪರ್ಯಾಸ. ವರ್ಷವೆಲ್ಲಾ ದೇಶೀಯವಾಗಿದ್ದು ವರುಷಕ್ಕೊಂದು ದಿನ "ಮಾರ್ಡನ್ ಡೇ" ಮಾಡಿದರೆ ಅದು ಹೆಚ್ಚು ಸಮಂಜಸವೂ, ಘನತೆಯೂ ಹೌದಲ್ಲವೆ.

ಬಟ್ಟೆ ಚೀಲ, ದೇಶೀ ಪಾನೀಯ, ಗ್ರಾಮ್ಯ ಸೊಗಡಿನ ಜೀವನ ಶೈಲಿಗಳನ್ನು ವಿದ್ಯಾಲಯಗಳಲ್ಲಿ ಎಷ್ಟು ಪ್ರಚುರಪಡಿಸಲಾಗುತ್ತದೆ? ನಮ್ಮತನವನ್ನು ಹೇಳಿಕೊಡದಿರುವ ವಿದ್ಯಾಲಯಗಳು ಎಂತಹ ಪೀಳಿಗೆಯನ್ನು ದೇಶಕ್ಕೆ ಸಮರ್ಪಿಸುತ್ತಿದೆ?

ವೈಯಕ್ತಿಕ ಆಯ್ಕೆ ಎಂದು  ಮಾತನಾಡುವವರು ಅನೇಕರಿರಬಹುದು. ತಮ್ಮ ಸ್ವಾತಂತ್ರ್ಯ, ಸ್ಪರ್ಧಾತ್ಮಕ ಯುಗ, ನಾವು ವಿಶ್ವಕ್ಕೆ ತೆರೆದುಕೊಳ್ಳಬೇಕು ಎಂದು ಅನೇಕರು ಹೇಳಬಹುದು. ಆದರೆ ನಮ್ಮತನವನ್ನೇ ಮರೆತು ನಮ್ಮ ಅಸ್ಮಿತೆಯನ್ನೇ ಮರೆತು ಬದುಕುವ ಬದುಕು ಒಂದು ಘನತೆಯಿಂದ, ಆತ್ಮವಿಶ್ವಾಸದಿಂದ ಬದುಕುವ ಬದುಕಾಗಲು ಸಾಧ್ಯವೆ? ನಮ್ಮತನವನ್ನು ಪ್ರೀತಿಸದೆ ಜಗತ್ತಿನ ಎದುರು ಪೈಪೋಟಿಗೆ ನಿಲ್ಲುವುದರಲ್ಲಿ ಅರ್ಥವಿದೆಯೆ?

ಹೆತ್ತವರು, ವಿದ್ಯಾಲಯಗಳು ಎಲ್ಲಿಯವರೆಗೆ ತಮ್ಮ ಮಕ್ಕಳಲ್ಲಿ ದೇಶೀಯ ಬಟ್ಟೆ, ಪಾನೀಯ, ಖಾದ್ಯ, ದೇಶೀಯ ಜೀವನ ಪದ್ಧತಿ, ದೇಶೀಯ ಮನರಂಜನೆಗಳ ಕುರಿತು ಆಸಕ್ತಿ ಮೂಡಿಸುವುದಿಲ್ಲವೊ ಅಲ್ಲಿಯವರೆಗೆ ಯುವ ಪೀಳಿಗೆ ಪಾಶ್ಟಾತ್ಯ ಮೋಹದಿಂದ ಹೊರಬರಲಾರವು. ಹೆತ್ತವರಿಗೂ, ಶಿಕ್ಷಕರಿಗೂ ಅದೇ ಪಾಶ್ಚಾತ್ಯ ಅನುಕರಣೆಯೇ ಸೊಗಸಾಗಿ ಕಾಣುತ್ತಿರುವುದು ದುರಂತ. ಹೀಗೀರುವಾಗ ಪ್ರಚುರಪಡಿಸುವವರಾದರೂ ಯಾರು.

ಪಾಶ್ಚಾತ್ಯ ಸಂಸ್ಕೃತಿಗೆ ಮಾರಿಕೊಂಡ ನಮ್ಮತನಕ್ಕೆ ಟ್ರಡೀಷನಲ್ ಡೇ ಎಂಬ ಸೋಗು ಹಾಕುವ ನಮ್ಮನ್ನು ಒಂದಷ್ಟು ದಶಕಗಳ ಮುಂದಿನ ಪೀಳಿಗೆ  ನೋಡಿ ನಗದೇ ಇರುವುದಿಲ್ಲ. ಆ ಬಗ್ಗೆ ನಮಗೆ ಎಚ್ಚರಿಕೆ ಇರಬೇಕು

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.