Monday, 22 January 2018

ಮಾಲಿನ ಕವಿತೆ

ಮಾಲಿನ ಕವಿತೆ
ಮಾಲಿನಲಿ ಆ ಸಂಜೆ, ನೋಡಿರಲು ನಿಮ್ಮನ್ನು,
ಏರು ಮೆಟ್ಟಿಲ ಮೇಲೆ ನೀವಿದ್ದಿರಿ.
ಜನ ಜಾತ್ರೆ ಮಾಲಿನಂಗಳದಲ್ಲಿ ಒಳಗೆಲ್ಲ
ಕೆ.ಎಫ್.ಸಿಯಲಿ ನೀವು ನಗುತಿದ್ದಿರಿ.

ಸಿಕ್ಕಿದಿರಿ ಆಗಾಗ ಮಾಲಮಹಡಿಗಳಲ್ಲಿ,
ಫ್ಲೋರು ಫ್ಲೋರುಗಳಲ್ಲಿ ಮತ್ತೆ ತಪ್ಪಿ.
ಸಂಧಿಸಿತು ಕಣ್ಣುಗಳು ಫುಡ್ಡುಕೋರ್ಟಿನಲೊಮ್ಮೆ,
ಕೈಗೆ ಕೈ ತಾಗಿತ್ತು ಅಪ್ಪಿ ತಪ್ಪಿ!

ಸಂಜೆಯಲಿ ಮಾಲಿನೊಳು ಏ.ಸಿ ತಂಪಾಗಿತ್ತು.
ಗಾಜಿನಂಗಡಿಯೊಳಗೆ ಬಣ್ಣ ಬೆಳಕು.
ಎಲ್ಲ ತೊಳೆದಿಟ್ಟಂತೆ ಹೊಳೆದು ಬೆಳಗುತಲಿತ್ತು.
ಗಂಡು ಹೆಣ್ಣುಗಳೆಲ್ಲ ತಳುಕು ಬಳುಕು.

ಹತ್ತಿರಿದ್ದಿರಿ ನೀವು ಸ್ಪಾರಿನಲಿ ಪಕ್ಕದಲಿ, 
ನನ್ನ ನೋಡದೆ ಮುಂದೆ ಹೋಗುತಿರಲು,
“ಎಕ್ಸ್ಯೂಸ್ಮಿ” ಎಂದೆನಲು, ತಿರುಗಿದಿರಿ ನನ್ನೆಡೆಗೆ, 
“ಏನೆಂದು” ಕಣ್ಣುಗಳು ಕೇಳುತಿರಲು.

ಬಿದ್ದ ಕರ್ಚೀಫನ್ನು ಎತ್ತಿಕೊಟ್ಟೆನು ನಾನು.
ನೀವು ನಕ್ಕಿರಿ ಧನ್ಯವಾದವೆಂದು.
ಆಗ ನೆನಪಾಯಿತು ನಿಮಗೆ ತಡಕಿ ಹುಡುಕಾಡಿದಿರಿ.
ಕೈಲಿದ್ದ ಫೋನು ಕಾಣದೆಂದು.

ಕರ್ಚೀಫಿನೊಂದಿಗೆ ಬಿದ್ದು ಹೋಗಿರಬಹುದು.
ಕಣ್ಗಳಲಿ ಗಾಬರಿಯೇ ತುಂಬಿ ಹೋಯ್ತು.
ಹುಡುಕಾಡಿ ತಡಕಾಡಿ ಎಲ್ಲು ಕಾಣಿಸದಿರಲು,
ಒಂದು ಕ್ಷಣ ಮಾಲು ಸಹ ಸ್ಥಬ್ಧವಾಯ್ತು.

ನನ್ನ ಫೋನನು ತೆಗೆದು ನಿಮ್ಮ ನಂಬರನೊತ್ತಿ,
ಕರೆಕೊಟ್ಟು ಕಿವಿಗಿಟ್ಟೆ. ರಿಂಗಣಿಸಿತು!
ಹಾಡು ಮೊಳಗಿತು ಅಲ್ಲೆ, ಉಸಿರು ಬಿಟ್ಟಿರಿ ನೀವು,
ಫೋನು ವ್ಯಾನಿಟಿಯೊಳಗೆ ಕಣಕಣಿಸಿತು!!

ಕಾಕತಾಳಿಯ ಘಟನೆ ನಡೆದು ಹೋಯಿತು ಹೀಗೆ,
ದೇವರನು ನೆನೆದೆ ನಾ ಕೈ ಮುಗಿಯುತ.
ಹೊರಟೆ ನಾ ಅಲ್ಲಿಂದ ಜಾರು ಮೆಟ್ಟಿಲ ಮೇಲೆ,
ನಿಮ್ಮ ನಂಬರ ನಾನು ಸೇವ್ ಮಾಡುತಾ.
ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.