Sunday, 28 January 2018

ಮಾಘಿಯ ಚಳಿಗೆ ಕಟಕಟಿಸಿತು ಹಲ್ಲು

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-12

ಶಿಶಿರ ಋತುವಿನ ಮಾಘ ಮಾಸ ಎಂಬುವುದೇ ಒಂದು ಸೊಗಸಾದ ಮಾಸ. ಚಳಿಗಾಲವೇ ⛄ ಮೈತೆಳೆದು ಬರುವ ಈ ಮಾಸದಲ್ಲಿ ಸೂರ್ಯನೂ 🌞ಸುಡು ಸುಡು ಎನ್ನದೆ ಸಹಜ ಶಾಂತನಾಗಿ ಹವೆಗೊಂದು ಆಪ್ಯಾಯತೆಯನ್ನೀಯುತ್ತಾನೆ.

ಮುಂಜಾವುಗಳೆಲ್ಲಾ 🌄ತಂಪಾಗಿ ಹೊದೆದ ಕಂಬಳಿಯನ್ನು ಮತ್ತಷ್ಟು ಹೊದ್ದು ಮಲಗುವುದೊಂದು ಸೊಗಸು. ಹೊರಗೆ ಬೆಳ್ಳಗೆ ಬಿಚ್ಚುವ ಬೆಳಕಿನಲ್ಲಿ 🌅ತಂಪಿಟ್ಟು ಬೀಸುವ ಗಾಳಿ. ಗಾನವೇ ಹೊಮ್ಮಿಸದ ಕೋಗಿಲೆಗಳ🐦 ಕಂಠದಲ್ಲಿ ಗಾಢ ಮೌನ. ಹಾಡಲು ದನಿ ಹೊರಡಿಸುವ ಕೋಗಿಲೆಗಳಿಗೂ ಹಲ್ಲುಗಳು ಕಟಕಟಿಸಿತೆ!!?

ಎಲೆಯುದುರಿದ 🍃ಮರಗಳ ಗೆಲ್ಲು ಗೆಲ್ಲುಗಳಲ್ಲೂ ವಿರಳ ಪತ್ರಗಳು 🌿. ಆ ವಿರಳವಾದ ಎಲೆಗಳೂ ಕೂಡ ಹಣ್ಣಾಗಿವೆ🍂 ಇಂದಲ್ಲ ನಾಳೆ ಈ ಮಾಘದಲ್ಲೇ ಬಿದ್ದು ಹೋಗುತ್ತವೆ ಅವು.  ಗೆಲ್ಲಿನ ಹೊಸ ಚಿಗುರುಗಳು🎋 ಬರುವ ವಸಂತನ ಕಾತರದಲ್ಲಿದೆ, ಕೋಗಿಲೆಯೂ🐦 ಕೂಡ! ಬೋಳು ಮರದ ತುಂಬಾ ಚೈತ್ರಾಗಮನದ ಶುಭ ನಿರೀಕ್ಷೆ.

ಬಾಗಿಲುಗಳನ್ನೊ 🚪, ಕಿಟಕಿಗಳನ್ನೊ 🖼ತೆರೆಯುತ್ತಿದ್ದಂತೆ ಜುಮ್ಮ್ ಎಂದು ಬೀಸಿ ಬರುವ ಚಳಿಗಾಳಿಗೆ ಮೈ ನಡುಗುತ್ತದೆ. ಚಳಿ ಹಾಗೆ ಮೈಯ ಚರ್ಮಗದೊಳಗಿನ ಎಲುಬಿಗೇ ತಾಕಿ ಮೈಯನ್ನೇ ಅದರಿಸಿ ಬಿಡುತ್ತದೆ. ಅಲ್ಲೆಲ್ಲೋ ಸಂಪಿಗೆಯ, ಪಾರಿಜಾತದ ಮರದ ಗೆಲ್ಲಿನ 🌳ಮೇಲಿಂದ ರೆಕ್ಕೆ ಬಡಿದು, ಸಿಳ್ಳು ಹೊಡೆದು ಹಾರಿ ಹೋಗುವ ಪಿಕಳಾರಗಳಿಗೆ🐤 ಈ ಚಳಿಯಲ್ಲೂ ಅದೆಂತಹುದೊ ಉತ್ಸಾಹ.

ಇಂತಹ ಚಳಿಗಾಲದ⛄ ಮುಂಜಾವಿಗೇ🌄 ಅಲ್ಲವೆ ಹಬೆಯಾಡುವ ಬಿಸಿ ಬಿಸಿ ಚಹ ಕಾಫಿಗಳ☕ ಘಮ ಮತ್ತಷ್ಟು ಅಮೋಘವೆನಿಸುವುದು. ಗುಟುಕು ಗುಟುಕಾಗಿ ಚಹ ಹೀರುತ್ತಾ ತಾಜ ಸುದ್ದಿಗಳ ದಿನಪತ್ರಿಕೆಯ📃 ಪುಟ ತಿರುವುತ್ತಿರುವಾಗಲೇ ಅಲ್ಲಿ ಚಳಿಯನ್ನು ಬಿಚ್ಚುತ್ತಾ ಸೂರ್ಯ☀ ಮಲೆಯೇರುತ್ತಾನೆ.

ಬಿಸಿ ನೀರೇ ಥಂಡಿ ಎಂದಾದ ಮೇಲೆ ತಣ್ಣೀರು ಎಂದರೆ ಮಾರು ದೂರ🚿🛀🏻. ಅದೊಂದು ಬಲವಂತದ ಮಾಘ ಸ್ನಾನ!! ಮಾತನಾಡಲು ಬಾಯ್ದೆರೆದರೆ ಒಳಗಿನ ಶೀತ ಹೊಗೆಯಾಗಿ ಹೊಮ್ಮುತ್ತದೆ. ಹಲ್ಲು ಕಟಕಟಿಸುತ್ತದೆ. ಮೈ ನಡುಗಿ ಚಳಿ ದೇಹದೊಳಗಿನ ರಕ್ತ ಹೆಪ್ಪುಗಟ್ಟಿಸುತ್ತದೆ, ನರ ಬಿಗಿಯಾಗಿ ಎಲುಬುಗಳು ಜುಮ್ಮ್ ಎನ್ನುತ್ತವೆ.

ದಿನವಿಡೀ ಶೀತ ಶೀತದ ಗಾಳಿ ಮಂಜಿನೊಡನೆ ಸಂಜೆಗಳು ಮತ್ತೆ ಹಾಜರಾಗುತ್ತವೆ ಥಂಡೀ ರಾತ್ರಿಗಳ ಹೊತ್ತು 🎇🌌 ಸಹಜ ಸಂಜೆಗೆ ಬೇಸಗೆಯಂತೆ ಇಡ್ಲಿ ಬೇಯುವಂತಹ ಬಿಸಿ ಹಬೆಯ ಧಗೆಯಿಲ್ಲ. ಇಲ್ಲೇನಿದ್ದರೂ ಶೀತಕದ (Refrigerator) ಒಳಗಿಟ್ಟ ತಾಜಾ ಹಣ್ಣಿನಂತೆ ತಂಪು ತಂಪು ಕೂಲ್ ಕೂಲ್.

ಚಂದ್ರ 🌝ಸುರಿಸುವ ಹಾಲಿನಂತಹ ಬೆಳ್ದಿಂಗಳಲಿ ತಣ್ಣಗಿನ ರಾತ್ರಿಗಳು 🌠 ನೀರವ ರಾತ್ರಿಯ ಬೀದಿ ದೀಪಗಳ ಬೆಂಕಿ ಬೆಳಕಿನ ಹೊಳಪಿನಲ್ಲಿ ಹೊಗೆ ಮಬ್ಬು. ಹೊರಗಿನ ಚಳಿಗೆ ಮನೆಯೊಳಗಿನ ಕತ್ತಲ ಕೋಣೆಯಲ್ಲಿ ಬೆಚ್ಚಗಿನ ನಿದಿರೆ. ಹೊದ್ದ ಕಂಬಳಿಯ ಮತ್ತಷ್ಟು ಗಾಢವಾಗಿ ಸುತ್ತಿ ನಿದ್ರೆ ಹೋದರೆ ಮತ್ತೆ ಎಚ್ಚರಾಗುವಾಗ ಹೊರಗೆ ಮಂಜು ಮುಸುಕಿದ ಹಿಮ ಹಿಮದ ಮುಂಜಾವು.

ಇಂದಿನ ಮಾಘಿಗೆ ಅಂತಹ ಚಳಿಯಿಲ್ಲದಿರಬಹುದು ಅದಕ್ಕೂ ಮಿಗಿಲಾಗಿ ಮಂಗಳೂರಿಗಂತು ಚಳಿಯ ಆಸ್ವಾದವೇ ವಿರಳವಾಗಿದೆ. ಜಾಗತಿಕ ತಾಪಮಾನ, ಕಾಡಿನ ನಾಶ, ಕಾಂಕ್ರೀಟ್ ರೋಡುಗಳು, ಗಾಜಿನ ಬಿಲ್ಡೀಂಗುಗಳು ಮುಂತಾದವು ಚಳಿಗಾಲವನ್ನು ಬೇಸಗೆ ಮಾಡಿದೆ. ಆದರೂ ಇರುವ ಸ್ವಲ್ಪ ಚಳಿಯ ಮಾಘ ಮಾಸದಲ್ಲಿ ಇದೆಲ್ಲವೂ ನೆನಪಾದವು, ನೀವು ಸಹ ಮಾಘ ಮಾಸದ ಘಳಿಗೆಯಲ್ಲಿ ಇರುವ ಕೊಂಚ ಚಳಿಯನ್ನಾದರೂ ಆಸ್ವಾದಿಸಿ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.