Wednesday, 31 January 2018

ಗ್ರಹಣ ಮುಗಿಯಿತು, ಈಗ ನನ್ನದೊಂದಿಷ್ಟು ವಿಚಾರ ಕೇಳಿರಿ

ಸನಾತನ ಧರ್ಮವು ಅಗಾಧ ಜ್ಞಾನ ಶಾಖೆಗಳನ್ನು ಹೊಂದಿರುವುದು ನಮಗೆಲ್ಲಾ ತಿಳಿದಿರುವ ವಿಚಾರ.  ಇಂತಹ ಕ್ಲಿಷ್ಟ ವಿಚಾರಗಳನ್ನು ಅತ್ಯಂತ ಸರಳ ರೀತಿಯಲ್ಲಿ ಜನರಿಗೆ ತಿಳಿಸುವ ಸಲುವಾಗಿ ಮುನಿಗಳು ಕಥೆಗಳ ರೂಪದಲ್ಲಿ ಧಾರೆಯೆರೆದರು. ಮೂಲತಃ ಅನೇಕ ಕಥೆಗಳು ಸನಾತನ ಧರ್ಮದ ಮೂಲ ತತ್ವಗಳನ್ನು ತಿಳಿಸುವ ಸಂಕೇತಗಳಾಗಿವೆ. ಹೇಗೆ ಗಣಿತದ ಲೆಕ್ಕಗಳನ್ನು ಮಕ್ಕಳಿಗೆ ಮನೆಯಲ್ಲಿರುವ ರೊಟ್ಟಿ, ಚಾಕಲೇಟಿನೊಂದಿಗೆ ಸಮೀಕರಿಸಿ ಹೇಳುವುದಿಲ್ಲವೆ ಹಾಗೆ.

ಗ್ರಹಣದ ತತ್ವವಾದರೂ ಹೀಗೆಯೇ. ಮೂಲತಃ ಹಿಂದೂ ಸನಾತನ ಧರ್ಮದಲ್ಲಿ ಗ್ರಹಗಳನ್ನು ಲೆಕ್ಕ ಹಾಕಿದ ಮಹರ್ಷಿ ಪರಾಶರಾ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂದು ಹೇಳಿದರು. ಆದರೆ ವಿಜ್ಞಾನಿಗಳು ಒಂಭತ್ತು ಗ್ರಹಗಳ ಲೆಕ್ಕ ಹಾಕುವಾಗ (ಮರ್ಕ್ಯುರಿ, ವೀನಸ್, ಅರ್ಥ್, ಮಾರ್ಸ್, ಜ್ಯುಪಿಟರ್, ಸಾಟರ್ನ್, ಯುರೇನಸ್, ನೆಪ್ಚ್ಯುನ್) ಎಂದು ಹೇಳಿದರು.

ಮರ್ಕ್ಯುರಿ- ಬುಧ
ವೀನಸ್- ಶುಕ್ರ
ಮಾರ್ಸ್- ಕುಜ/ಮಂಗಳ
ಜ್ಯುಪಿಟರ್- ಗುರು
ಸಾಟರ್ನ್- ಶನಿ
ಎಂಬುವುದು ವಿಜ್ಞಾನ ಮತ್ತು ಸನಾತನ ಧರ್ಮದಲ್ಲಿ ಸರಿಯಾಗಿ ಉಲ್ಲೇಖವಾಗಿದೆ. ಆದರೆ, ಅರ್ಥ್(ಭೂಮಿ) ಅನ್ನು ಗ್ರಹವಾಗಿ ಸನಾತನ ಧರ್ಮ ತೆಗೆದುಕೊಂಡಿಲ್ಲ. ಯಾಕೆಂದರೆ ನಾವು ಇರುವುದು ಭೂಮಿಯ ಮೇಲೆಯೇ ಆದ್ದರಿಂದ ಭೂಮಿಯಿಂದ ಮನುಷ್ಯನ ಮೇಲೆ ಪ್ರಭಾವ ಬೀರುವುದಿಲ್ಲ ಹಾಗಾಗಿ ಸನಾತನ ಧರ್ಮವು ಭೂಮಿಯನ್ನು ಗ್ರಹವೆಂದು ನವಗ್ರಹದಲ್ಲಿ ಸ್ವೀಕರಿಸಿಲ್ಲ.
ಇನ್ನು ಯುರೇನಸ್, ನೆಪ್ಚ್ಯುನ್ ಗಳು ನಮ್ಮ ಭೂವಲಯದಿಂದ ಅತ್ಯಂತ ದೂರವಿರುವುದರಿಂದ ಮತ್ತು ಅವುಗಳ ಬೆಳಕಿನ ಪ್ರತಿಫಲನ ಭೂಮಿಗೆ ತಾಕುವುದಕ್ಕಿಂತ ಅತ್ಯಂತ ದೂರವಿರುವುದರಿಂದ ಆ ಗ್ರಹಗಳ ಪ್ರಭಾವ ನಮ್ಮ ಮೇಲೆ ಆಗುವುದಿಲ್ಲವೆಂಬ ಕಾರಣಕ್ಕೆ ಅವುಗಳನ್ನು ನವಗ್ರಹದ ಪರಿಧಿಯಲ್ಲಿ ಸ್ವೀಕರಿಸಿಲ್ಲ.

ಸೂರ್ಯ ಮತ್ತು ಚಂದ್ರರು  ಭೂಮಿಯ ಮೇಲೆ ಪ್ರಭಾವ ಬೀರುವಂತೆ ಅತ್ಯಂತ ನಿಕಟವಾಗಿದ್ದು ಆ ಗ್ರಹಗಳ ಪ್ರಭಾವ ಭೂಮಿಯ ಮೇಲೆ ನೇರವಾಗಿ ಆಗುವುದರಿಂದ (ಸೂರ್ಯ ಮಳೆ, ಬೆಳೆ ತರುತ್ತಾನೆ, ಚಂದ್ರನು ಕಡಲ ಅಲೆಗಳನ್ನು ಉಕ್ಕೇರಿಸುತ್ತಾನೆ ಇತ್ಯಾದಿ) ಅವುಗಳನ್ನು ಗ್ರಹಗಳ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಆಶ್ಚರ್ಯಕರ ಸಂಗತಿ ಏನೆಂದರೆ, ರಾಹು ಮತ್ತು ಕೇತು ಎಂಬ ಎರಡು ಗ್ರಹಗಳನ್ನು ಸನಾತನ ಧರ್ಮದಲ್ಲಿ ಉಲ್ಲೇಖಿಸಿರುವುದು. ಮೂಲತಃ ಅಂತಹಃ ಗ್ರಹಗಳೇ ಇಲ್ಲದಿರುವಾಗ ಹಿಂದೂ ಧರ್ಮದಲ್ಲಿ ಈ ಎರಡು ಕಾಲ್ಪನಿಕ ಗ್ರಹಗಳನ್ನು ಯಾಕೆ ಉಲ್ಲೇಖಿಸಲಾಯಿತು?

ಇದಕ್ಕೆ ನಾವು ಮೊದಲು ಪುರಾಣ ಕಥೆಯನ್ನು ಕೇಳೋಣ:
ರಾಹು ಎಂಬವನು ಪ್ರಹ್ಲಾದನ ತಂಗಿಯಾದ ಸಿಮ್ಹಿಕಾ ಮತ್ತು ವಿಪ್ರಚಿತಿ ಎಂಬ ದಂಪತಿಗಳ ಮಗ. ಅಮ್ರತ ಮಥನದ ಸಂದರ್ಭ ರಾಕ್ಷಸರ ಸಹಾಯ ತೆಗೆದುಕೊಂಡರು ದೇವತೆಗಳು. ಅಮ್ರತೋದ್ಭವ ಸಂದರ್ಭ ರಾಕ್ಷಸರು ಅಮ್ರತ ಕಲಶವನ್ನು ಕಸಿದುಕೊಂಡರು. ವಿಷ್ಣು ಮೋಹಿನಿ ರೂಪಧಾರಣೆ ಮಾಡಿ ರಾಕ್ಷಸರು ಮೋಹಿಸಲು ಉಪಾಯವಾಗಿ ಅಮ್ರತವನ್ನು ಪಡೆದುಕೊಂಡು ಎಲ್ಲರಿಗೂ ನೀಡುತ್ತೇನೆ ಎಂದು ತಿಳಿಸಿದನು.  ಇದರಲ್ಲೇನೊ ಮೋಸವಿದೆ ಎಂದರಿತ ರಾಹು ವೇಷ ಮರೆಸಿ ದೇವತೆಗಳ ಸಾಲಿನಲ್ಲಿ ಸೂರ್ಯ ಚಂದ್ರರ ನಡುವೆ ಕುಳಿತನು. ಇದನ್ನರಿತ ಸೂರ್ಯ ಚಂದ್ರರು ವಿಷ್ಣುವಿಗೆ ಈ ಬಗ್ಗೆ ತಿಳಿಸಿದರು. ವಿಷ್ಣು ತನ್ನ ಸುದರ್ಶನ ಚಕ್ರದಿಂದ ರಾಹುವಿನ ತಲೆ ಕತ್ತರಿಸಿದನು. ಅಷ್ಟರಲ್ಲಾಗಲೆ ವಿಷ್ಣುವಿನ ಕಲಶದ ಒಂದು ಹನಿ ಅಮ್ರತ ಆತ ಸೇವಿಸಿದ ಕಾರಣ ರಾಹುವಿನ ತಲೆ ಮತ್ತು ದೇಹದ ಭಾಗ ಬೇರ್ಪಟ್ಟರೂ ಅವು ಜೀವಂತ ಉಳಿದವು. ತಲೆ ಭಾಗವು ರಾಹು ಎಂದು ಮೈಯ್ಯ ಭಾಗವು ಕೇತು ಎಂದು ಕರೆದರು. ಸೂರ್ಯ ಚಂದ್ರರು ಹೇಳಿಕೊಟ್ಟಿದ್ದರಿಂದ ಆ ಇಬ್ಬರನ್ನು ರಾಹು ಕೇತು ಆಕ್ರಮಿಸಲು ಹವಣಿಸುತ್ತಾರೆ ಎನ್ನುವ ಕಥೆಯಿದೆ. ಇದು ಒಂದು ಕಥೆಯಷ್ಟೇ. 

ಆದರೇ, ಈ ಕಥೆಯ ಆಳದಲ್ಲಿ ಹಲವು ಜೋತೀಷ್ಯ, ಗ್ರಹ ನಕ್ಷತ್ರಗಳ ವಿಚಾರಗಳಿವೆ. ಮೂಲತಃ ರಾಹು ಮತ್ತು ಕೇತು ಬೇರೆ ಗ್ರಹಗಳಂತೆ ಆಕಾಶದಲ್ಲಿ ಕಾಣದು ಹಾಗಾಗಿ ಇದನ್ನು ಛಾಯ (ನೆರಳು) ಗ್ರಹ ಎನ್ನಲಾಗುತ್ತದೆ. ಗ್ರಹಣವಾದರೂ ಸೂರ್ಯ, ಭೂಮಿ, ಚಂದ್ರರ ನೆರಳು ಬೆಳಕಿನ ಆಟವಷ್ಟೆ.

ರಾಹು ಮತ್ತು ಕೇತುಗಳು (Lunar north south nodes) ಚಂದ್ರನ ಉತ್ತರ ಮತ್ತು ದಕ್ಷಿಣ ಅಂಚುಗಳೆಂದು ಹೇಳಲಾಗುತ್ತದೆ. ಹಾಗಾಗಿ ಸೂರ್ಯ ಚಂದ್ರರ (intersection path)ಅಂತರ್ ವಿಭಾಗೀಯ ಹಾದಿಯಲ್ಲಿ ರಾಹು ಮತ್ತು ಕೇತುವನ್ನು ಉಲ್ಲೇಖಿಸಲಾಗುತ್ತದೆ. ಹಾಗಾಗಿ ಸೂರ್ಯ ಚಂದ್ರರ ನೆರಳು ಬೆಳಕಿನ ಆಟವೇ ಈ ಅಂಚುಗಳನ್ನು ರಾಹು ಕೇತು ಹಿಡಿಯುವುದು ಎಂದು ಹೇಳಲಾಗುತ್ತದೆ. ಹಾಗಾಗಿ ಗ್ರಹಣವು ಸೂರ್ಯ, ಭೂಮಿ, ಚಂದ್ರರ ನೆರಳು ಬೆಳಕಿನ ಆಟ ಮಾತ್ರ ಮತ್ತು ಅದನ್ನು ರಾಹು ಮತ್ತು ಕೇತು ಎಂಬ ಕಾಲ್ಪನಿಕ ಛಾಯಾ ಗ್ರಹಗಳ ಮೂಲಕ ಲೆಕ್ಕ ಹಾಕಲಾಗುತ್ತದೆ.

ಆದರೆ, ಹೇಗೆ ನಿರಂತರ ಬೆಳಕು ಬೀಳುವ ಸಂದರ್ಭದಲ್ಲಿ ಯಾವುದಾದರೂ ವಸ್ತು ಬೆಳಕಿಗೆ ಅಡ್ಡಬಂದಾಗ ಕತ್ತಲು ಮೂಡಿದ ಕೂಡಲೆ ನಮ್ಮ ಕಣ್ಣು ಕತ್ತಲಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಂತೆ ಸುರ್ಯ ಚಂದ್ರರ ಸಹಜ ಬೆಳಕಿಗೆ ಅಡ್ಡ ಬರುವ ಗ್ರಹದಿಂದ ಉಂಟಾಗುವ ನೆರಳು ನಮ್ಮ ಮನೋಮಯದಲ್ಲಿ ಕೊಂಚ ಗೊಂದಲ ಉಂಟು ಮಾಡುವುದು ಸಹಜ. ಹೇಗೆ ಮೋಡವಿದ್ದಾಗ ಮನಸ್ಸಿಗೆ ಕೊಂಚ ಮಂಕು ಕವಿಯುತ್ತದೊ ಹಾಗೆ. ಹಾಗಾಗಿ ಗ್ರಹಣ ಕಾಲ ಸ್ವಲ್ಪ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇಂದು ಟಿವಿಯಲ್ಲಿ ಕೂತ ಜೋತೀಷಿಗಳು ಹೇಳುವಷ್ಟು ಗಾಢವಾಗಿ ತೆಗೆದುಕೊಂಡು ಮಾನಸಿಕ ಹಿಂಸೆ ಅನುಭವಿಸುವುದು ಸಲ್ಲದು. ನೈಸರ್ಗಿಕವಾಗಿ ನಡೆಯುವ ಕ್ರಿಯೆಯಾದ್ದರಿಂದ ಇದರ ಬಗ್ಗೆ ಅತಿಯಾದ ಮಡಿವಂತಿಕೆ ಒಳ್ಳೆಯದಲ್ಲ.

ಅಷ್ಟಕ್ಕೂ ನಾವಿಂದು ನಿಸರ್ಗಕ್ಕೆ ವಿರುದ್ಧವಾಗಿ ವಾಯು, ಜಲ, ಭೂ ಮಾಲಿನ್ಯ, ಕಾರ್ಖಾನೆಗಳ ತ್ಯಾಜ್ಯ ಮುಂತಾದವುಗಳ ಪ್ರಭಾವವನ್ನೇ ಎದುರಿಸಿ ಬದುಕುತ್ತಿದ್ದೇವೆ. ಹಾಗಿರುವಾಗ ನಿಸರ್ಗ ಸಹಜ ಗ್ರಹಣದ ಪ್ರಭಾವ ಅಂತಹ ತೊಂದರೆಯೇನು ಮಾಡದು. ಭಯ ಬಿಡಿ

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.