Wednesday, 17 January 2018

ಶಿಶಿರಾಗಮನ

              ಹೇಮಂತ ತನ್ನ ಪಾಳಿ ಮುಗಿಸಿ ಹೊರಟಿದ್ದಾನೆ, ಶಿಶಿರನ ಆಗಮನವಾಗಿದೆ. ಮಾರ್ಗಶೀರ್ಷ ಮತ್ತು ಪೌಷ ಮಾಸಗಳಲ್ಲಿ ಹೇಮಂತ ಋತು ತನ್ನೆಲ್ಲಾ ಸೊಬಗಿನೊಂದಿಗೆ ವಾತಾವರಣದಲ್ಲಿ ಸುಳಿದಾಡಿದ. ಮುಂಜಾವುಗಳು ತಣ್ಣಗೆ ಬಿಚ್ಚಿಕೊಳ್ಳುತ್ತಿದ್ದವು ತಂಪು ಘಮಲಿನ ಬೆಳಗಿನೊಂದಿಗೆ. ಹೂವಿನ ಘಮದೊಂದಿಗೆ ತಂಪಿಟ್ಟು ಹಾಡುತ್ತಿದ್ದ ಹಕ್ಕಿಗಳು ಹೇಮಂತ ಪ್ರಭಾತವನ್ನು ಸಾರಿ ಹೇಳುತ್ತಿದ್ದವು. ಎಲ್ಲೊ ದೂರದಿಂದ ತೇಲಿ ಬಂದ ಕೊಳಲ ನಾದದಂತೆ ಮಂಜು ತಬ್ಬಿದ ಗಾಳಿ ತೀಡಿಬರುತ್ತಿತ್ತು. ತಂಬೂರಿಯ ತಂತಿ ಮೀಟಿದಂತೆ ಸಾವಧಾನವಾಗಿ ಬಿಚ್ಚಿಕೊಳ್ಳುತ್ತಿದ್ದ ಹೇಮಂತಗಾನಕ್ಕೆ ರವಿ ಆಪ್ಯಾಯಮಾನವಾಗಿ ಮೇಲೆದ್ದು ಬರುತ್ತಿದ್ದ. ಬಿಸಿಲು ಮಧ್ಯಾಹ್ನದಲ್ಲೂ ನಿಶಿತವಾಗದೆ ಹದವಾಗಿ ಮುದವಾಗಿ ಬೆಚ್ಚಗಿರಿಸುತ್ತಿತ್ತು. ಸಂಜೆಗೊ ಗಾಳಿ ಬೀಸಿ ಚಳಿಯೇರಿಸುತ್ತಿತ್ತು. ಸಂಧ್ಯಾಮೌನದಲ್ಲಿ ಹೇಮಂತನು ರಾತ್ರಿಯ ಸೆರಗು ಹೊದ್ದಿಸುತ್ತಿದ್ದ. ಚಳಿಗಾಲದ ಹೊಸ್ತಿಲಾದ ಹೇಮಂತವನ್ನು ದಾಟಿ ಚಳಿ ಶಿಶಿರನ ಚಾವಡಿಗೆ ಬಂದು ನಿಂತಿದೆ. ಹೊರಟು ನಿಂತಿದ್ದಾನೆ ಹೇಮಂತ, ಅವನಿಗೊಂದು ವಿದಾಯ.
                ಶಿಶಿರನ ಆಗಮನವಾಗಿದೆ, ಮಾಘ ಫಾಲ್ಗುನಗಳೆಂಬ ಮಾಸಗಳೊಂದಿಗೆ ಮತ್ತೆ ಶಿಶಿರನ ಆಗಮನವಾಗಿದೆ. ಮಂಜು ಮುಸುಕಿನ ಪರದೆಯನ್ನು ಮುಂಜಾವಿಗೆ ಹರಡಿ ಮೂಡಣದ ಸೂರ್ಯನೂ ಮಬ್ಬಾಗುವಂತೆ, ಬಿಳಿ ಹಾಲ ನೊರೆಯಂತೆ ಕಾವಣಗಳ ಕಡಲ ಹಬ್ಬಿಸಿ ಅಲೆಅಲೆಯಾಗಿ ಹೊಗೆಗೂಡಿ ಮೇಲೇಳುವ ಹಿಮಗಾಳಿ ಹೊಮ್ಮುವಂತೆ, ಹನಿಮುತ್ತಿನ ತೆರದಿ ಇಬ್ಬನಿಗಳು ತಟಪಟನೆ ಉದುರಿ ಹೂ ಹುಲ್ಲುಗಳ ಮೇಲೆ ಮುತ್ತಾಗುವಂತೆ, ಮಾತನಾಡಲು ತುಟಿ ತೆರೆದರೆ ಹೊಗೆ ಹೊಮ್ಮಿ ಹಲ್ಲು ಕಟಕಟಿಸುವಂತೆ ಶಿಶಿರನ ಆಗಮನವಾಗಿದೆ.
                ಮಾಘದ ಮುಂಜಾವುಗಳೇ ಹಾಗೆ, ಚಳಿಗೇ ಚಳಿ ಹಿಡಿಯುತ್ತವೆ! ನೀರು ಬರೀ ನೀರಲ್ಲ ಅದು ಹಿಮವರ್ಷ!! ಸ್ನಾನ ಬಲವಂತದ ಮಾಘ ಸ್ನಾನ!!! ಮನೆಯ ಕಿಟಕಿ ಗಾಜುಗಳಲ್ಲಿ ತಂಪು ಇಬ್ಬನಿ ಪಸೆಗಟ್ಟಿ ಜಾರಿ ಇಳಿಯುತ್ತವೆ ಹನಿಗಳು, ಹಣ್ಣೆಲೆಗಳು ಚೊಟ್ಟು ಕಳಚಿ ತೇಲಿ ಉದುರುತ್ತವೆ, ವಿರಾಳಾತಿವಿರಳದ ಎಲೆಗಳೊಂದಿಗೆ ಚಳಿಗೆದೆಯೊಡ್ಡಿ ನಿಲ್ಲುತ್ತವೆ ಬೋಳು ಮರಗಳು. ಶಿಶಿರನ ಒಡನಾಟದಲ್ಲಿ ಬಾನು ಭುವಿಗಳು ಚಳಿಯಲ್ಲಿ ಮಿಂದೇಳುತ್ತವೆ. ಹಬೆಯಾಡುವ ಚಹ ಕಟಕಟಿಸುವ ಹಲ್ಲಿಗೆ ಮುದ ನೀಡುತ್ತವೆ. ಚಳಿ ಸೋಲುತ್ತವೆ ಬಿಸಿ ಚಹದ ಮುಂದೆ!
                  ಶಿಶಿರ ಸೊಬಗಿನ ಸಂಜೆಗೆ ಯಾವುದೋ ಅವ್ಯಕ್ತ ಸೆಳೆತ. ಶೀತ ಗಾಳಿಗೆ ಮೈತಾಕುವ ಸಂಜೆಯಲ್ಲಿ ಮರದೆಡೆಯ ಹಕ್ಕಿಗಳು ಮುದುಡುತ್ತವೆ ಹಾಡು ಕೊರಳಾಳದಿಂದ ಮಂದವಾಗಿ ಹೊಮ್ಮುತ್ತ. ತೊನೆಯುವ ಮಾಮರದಲ್ಲಿ ಅದಾಗಲೇ ಅರಳಿ ಬಿರಿದ ಹೂವುಗಳು ವಸಂತನ ಕಾಯುವಿಕೆಗೆ ಅಣಿಯಾಗಿದೆ. ಶಿಶಿರ ಸುಮ್ಮನೇ ನಗುತ್ತಾನೆ ಚಳಿಯ ಕಚಗುಳಿಯಿಟ್ಟು.
                   ರಾತ್ರಿಗೆ ಆಕಾಶದಲ್ಲಿ ಶಿಶಿರಚಂದ್ರ ನಕ್ಷತ್ರಗಳೊಡಗೂಡಿ ಹೊಳೆಯುತ್ತಾನೆ. ಹಾಲು ಚೆಲ್ಲಿದ ಬೆಳದಿಂಗಳಲ್ಲಿ ಬೋಳು ಮರಗಳ ಮಸಿ ಚಿತ್ರಗಳು ಬೆಟ್ಟಗಳ ಹಿನ್ನೆಲೆಯಲ್ಲಿ ಮೂಡಿ ನಿಲ್ಲುತ್ತವೆ. ಚಳಿ ಅಲೆಅಲೆಯಾಗಿ ಏರಿ ನಿಲ್ಲುತ್ತವೆ ಹಿಮಾದ್ರಿಯ ತರಹ.
              ಹೇಮಂತನೆಂಬ ಪೂರ್ವಶೈತ್ಯದಿಂದ ವಸಂತನೆಂಬ ಮಧುರ ಕಾಲದೆಡೆಗೆ ಹೊರಳುವ ಸಮಯದಲ್ಲಿ ಶಿಶಿರ ಎಂಬ ಶೈತ್ಯರಾಜ ಅಪೂರ್ವನೂ, ಮುದಾತೀತನೂ ಹೌದು. ಶಿಶಿರನ ಚಳಿಗೆ ಮೈ ಮನಸು ಮುದಗೊಳ್ಳಲಿ, ಎಲೆಗಳು ಹಣ್ಣಾಗುವಂತೆ ಮನಸು ಹಣ್ಣಾಗಲಿ, ಎಲೆಗಳು ಚೊಟ್ಟು ಕಳಚಿದ ಹಾಗೆ ಮನಸು ಭವದ ಬಂಧನವನ್ನು ಕಳಚಲಿ, ಮಾಘದಲಿ ಮನಸು ಮಾಗಲಿ.

                                                                 ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.