ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-10
ವಾಟ್ಸ್ ಆ್ಯಪ್ ಅಂಕಣದ ಪ್ರತಿ ಹತ್ತನೇ ಅಂಕಣವನ್ನು ಕನ್ನಡದ ಕವಿಗಳಿಗೆ ಅರ್ಪಿಸುವ ಸಲುವಾಗಿ ಇಂದಿನ ಅಂಕಣ ದಾಂಪತ್ಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಸ್ಮರಣೆಯಲ್ಲಿ.
“ಸೇತುವೆಯ ದಾಟುತ್ತ, ಹೆದ್ದಾರಿಯಲ್ಲಿ ನಡೆದು
ಎಲ್ಲಾ ನೋವನು ಮರೆತೆ ಬದುಕಿನೊಳಗೆ
ನೊಂದ ನೋವನ್ನಷ್ಟೇ ಹಾಡಬೇಕೆನು?
ಬೇಡವೆ ಯಾರಿಗೂ ಸಿರಿಮಲ್ಲಿಗೆ?”
ಹೀಗೆ, ಕೇಳಿದ ಕವಿ ಕೆ.ಎಸ್.ನರಸಿಂಹಸ್ವಾಮಿ. ಇವರು ಕೆ.ಎಸ್.ನ ಎಂದೇ ಪ್ರಸಿದ್ದರು. ಕನ್ನಡದ ಶ್ರೇಷ್ಠ ಕವಿಗಳನ್ನು ಲೆಕ್ಕ ಹಾಕುವುದಾದರೆ ಕೆ.ಎಸ್.ನ ಅವರು ಇಲ್ಲದೆ ಆ ಪಟ್ಟಿ ಅಪೂರ್ಣವಾದೀತು. ಕನ್ನಡ ಜನತೆಗೆ, ಕನ್ನಡ ಸಾಹಿತ್ಯಕ್ಕೆ ಮಲ್ಲಿಗೆಯ ಘಮದಂತಹ ಕವಿತೆಗಳನ್ನು ಕೊಟ್ಟವರು ಕೆ.ಎಸ್.ನ. ಜನವರಿ 26 1915ರಲ್ಲಿ ಮಂಡ್ಯದ ಕಿಕ್ಕೇರಿಯಲ್ಲಿ ಜನಿಸಿದರು.
ದಾಂಪತ್ಯ ಕವಿ ಕೆ.ಎಸ್.ನ ತಮ್ಮನ್ನು ತಾವು ಒಲವಿನ ಭಕ್ತ ಎಂದು ಕರೆದುಕೊಂಡವರು. ಗಂಡ ಹೆಂಡತಿಯ ನಡುವಿನ ಸರಸ ಸಲ್ಲಾಪಗಳ ಮಧುರ ಮಾತುಗಳನ್ನು ಗೀತೆಗಳ ರೂಪದಲ್ಲಿ ಹಿಡಿದಿಟ್ಟಿರುವ ಕೆ.ಎಸ್.ನ ನಮ್ಮ ನಾಡು ಕಂಡ ಅಪರೂಪದ ಕವಿ. ಅವರ “ಮೈಸೂರ ಮಲ್ಲಿಗೆ” ಕವಿತಾ ಸಂಕಲನ ಕನ್ನಡ ಸಾಹಿತ್ಯಲೋಕದಲ್ಲಿ ಒಂದು ಮೈಲುಗಲ್ಲು.
ತೀ.ನಂ.ಶ್ರೀ ಅವರು ಮೆಚ್ಚಿದ ಕೆ.ಎಸ್.ನ ರವರ ಕವನಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಮೈಸೂರು ಮಹಾರಾಜ ಕಾಲೇಜಿನ ಕರ್ನಾಟಕ ಸಂಘ ಪುಸ್ತಕ ರೂಪದಲ್ಲಿ ಇದನ್ನು ಪ್ರಕಟಿಸುತ್ತದೆ. ಆ ಸಂಕಲನಕ್ಕೆ ಹೆಸರಿಡಲು ಮೈಸೂರಿನ ಕ್ಲಾಕ್ ಟವರ್ ಬಳಿ ಹೂವು ಕಟ್ಟುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ತಾವು ಕಟ್ಟುತ್ತಿದ್ದ ಮಲ್ಲಿಗೆ ಹೂವಿನ ದಂಡೆಯನ್ನು ತೋರಿಸಿ ಇದೆ ಹೆಸರು ಇಡಿ ಎಂಬುವುದು ಪ್ರೇರಣೆಯಾಗಿ ತಮ್ಮ ಪುಸ್ತಕಕ್ಕೆ “ಮೈಸೂರ ಮಲ್ಲಿಗೆ” ಎಂಬ ಹೆಸರನಿಟ್ಟರು.
“ಮೈಸೂರ ಮಲ್ಲಿಗೆ” ಕವನ ಸಂಕಲನದ ಅನೇಕ ಜನಮೆಚ್ಚುಗೆಯ ಹಾಡುಗಳು ಆ ಕಾಲಘಟ್ಟದಲ್ಲಿ ಮನೆಮಾತಾದವು
“ರಾಯರು ಬಂದರು ಮಾವನ ಮನೆಗೆ
ರಾತ್ರಿಯಾಗಿತ್ತು,
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು- ತುಂಬಿದ ಚಂದಿರ ಬಂದಿತ್ತು” ಎನ್ನುತ್ತಾ ಬೆಳದಿಂಗಳ ರಾತ್ರಿಗಳಿಗೆ ಕೊಂಡೊಯ್ದಿದ್ದಾರೆ. “ಮೊದಲ ದಿನ ಮೌನ
ಅಳುವೇ ತುಟಿಗೆ ಬಂದಂತೆ.
ಚಿಂತೆ ಬಿಡಿ ಹೂವ ಮುಡಿದಂತೆ” ಎಂಬ ನವವಧುವಿನ ಗಂಡನ ಮನೆಯಲ್ಲಿನ ಮೊದಲ ದಿನದ ಬೆಳಗನ್ನು ಹಿಡಿದುಕೊಟ್ಟಿದ್ದಾರೆ.
“ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ, ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು,
ನಿಮ್ಮ ನೆನಸೆ ನನ್ನ ಹಿಂಡುವುದ ಹಗಲಿನಲಿ, ಇರುಳಿನಲಿ ಕಾಣುವುದು ನಿಮ್ಮ ಕನಸು” ಎಂದು ಪತ್ರರೂಪದ ಕವಿತೆ ಕಟ್ಟಿದ್ದಾರೆ.
“ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು.
ಒಳಗೆ ಬರಲಪ್ಪಣೆಯೆ ದೊರೆಯೇ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ”
ಎಂದು ಹಾಡಿದ್ದಾರೆ.
"ತಾರೆಗಳ ಜರಿತಾರೆ ಅಂಗಿ ತೊಡಿಸುವರಂತೆ ಚಂದಿರನ ತಂಗಿಯರು ನಿನ್ನ ಕರೆದು,
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ, ವೀಣೆ ನುಡಿಸುವರಂತೆ ಸುತ್ತ ನೆರೆದು” ಎಂದು ಮಗುವಿಗೆ ಜೋಗುಳ ಹಾಡುತ್ತಾರೆ
ದೀಪ, ಹೊಸ್ತಿಲು, ಹೆಂಡತಿ, ಹೂವು, ಬೆಳದಿಂಗಳು, ಸಂಜೆ ಇವೆ ಮೊದಲಾದ ಸಾಂಸಾರಿಕ ವಸ್ತುಗಳನಿಟ್ಟು ಬಹಳ ಸಹಜವಾಗಿ ಬರೆದರು. ಓದುತ್ತಾ ಹೋಗುತ್ತಿದ್ದಂತೆ ಹಳ್ಳಿ ಬದುಕಿನ, ಸುಖ ಸಂಸಾರದ ಸ್ಮರಣೀಯ ಘಳಿಗೆಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ನಮ್ಮ ಬದುಕಿಗೆ, ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಟ್ಟ, ಸಂಭ್ರಮದ ಕವಿತೆಗಳು ಒಂದು ಅಪೂರ್ವ ನಿಧಿ
ಬಡತನವೇ ಬದುಕಾಗಿ ಬಾಳಿದ ಕೆ.ಎಸ್.ನ ಗುಮಾಸ್ತರಾಗಿ ಕೆಲಸ ಮಾಡಿದವರು. ಹೌಸಿಂಗ್ ಬೋರ್ಡಿನಿಂದ ಸೇವಾವಧಿ ಮುಗಿಯುವಾಗಲೂ ಒಂದು ಸ್ವಂತ ಮನೆ ಅವರಿಗಿರಲಿಲ್ಲ. ಇದು ನಮ್ಮ ನಾಡಿನ ದುರಂತವಲ್ಲದೆ ಮತ್ತೇನು?
"ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರಿ? ಒಬ್ಬಳೇ ಮಡದಿಯೆನಗೆ!" ಎಂದು ಹೇಳುವಲ್ಲಿ ಸಣ್ಣ ನಗು ಉಕ್ಕುತ್ತದೆ. ಹೀಗೆ, ನಗು, ಪ್ರೀತಿ, ದಾಂಪತ್ಯದ ನವಿರು ಭಾವಗಳ ಕವಿತೆಗಳು ಜನರ ಮನಸ್ಸಿಗೆ ಹತ್ತಿರವಾಗಿದೆ.
ಅವರ ಇತರೆ ಕವಿತಾ ಸಂಕಲನಗಳು ಉಂಗುರ, ದೀಪದ ಮಲ್ಲಿ, ಇರುವಂತಿಗೆ, ಐರಾವತ, ಶಿಲಾಲತೆ, ಮನೆಯಿಂದ ಮನೆಗೆ, ನವಪಲ್ಲವ, ಕೈಮರದ ನೆಳಲಲ್ಲಿ, ಎದೆ ತುಂಬಾ ನಕ್ಷತ್ರ, ದುಂಡು ಮಲ್ಲಿಗೆ, ದೀಪ ಸಾಲಿನ ನಡುವೆ, ಇತ್ಯಾದಿ. ಇಂದು ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಕೆ.ಎಸ್.ನ ರವರ ಕವಿತೆಗಳನ್ನು ವಿಶೇಷವಾಗಿ "ಮೈಸೂರ ಮಲ್ಲಿಗೆ"ಯನ್ನು ಓದಬೇಕು. ಇಲ್ಲವಾದರೆ ಕನ್ನಡ ಸಾಹಿತ್ಯ ಭಂಡಾರದಿಂದ ಒಂದು ಅಪೂರ್ವ ಮಣಿಯನ್ನು ಸ್ಪರ್ಶಿಸದೇ ಬಿಟ್ಟಂತೆ.
ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಮುಂತಾದ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಸಂದಿವೆ.
ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲಿ ಕೆಂಪಾಗಿ ನಿನ್ನ ಹೆಸರು,
ಗುಡಿಯ ಗೋಪುರದಲ್ಲಿ, ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು” ಎಂದು ಹಾಡಿದ ಕವಿ
“ದೂರದಿಂದ ಬಂದವರೆ,
ದಾರಿಯಲಿ ನೊಂದವರೆ,
ಬೇವು ಬೆಲ್ಲ ತಿಂದವರೆ,
ನೆರಳಿನಲ್ಲಿ ನಿಂದವರೆ ಇದೊ ನನ್ನ ನಮನ.
ಬೆವರು ಸುರಿಸಿ ದುಡಿದವರೆ,
ಬಾಯಿ ತುಂಬಾ ನುಡಿದವರೆ,
ಅಡ್ಡಿಗಳನು ದಾಟಿದವರೆ,
ತಂಬೂರಿಯ ಮೀಟಿದವರೆ ಇದೊ ನನ್ನ ನಮನ. ಬಾಳಿಗೆ ಒಲವ ತುಂಬಿದವರೆ,
ಎಲ್ಲರನು ನಂಬಿದವರೆ,
ಬೆಳದಿಂಗಳ ಸೀಮೆಯವರೆ,
ನಿಮ್ಮ ನೆನಪು ಕೆಂದಾವರೆ ಇದೊ ನನ್ನ ನಮನ” ಎಂದು ಬರೆಯುತ್ತಾರೆ.
27 ಡಿಸೆಂಬರ್ 2003 ರಂದು ನಿಧನ ಹೊಂದುತ್ತಾರೆ.ಇಂತಹ ಅಮೋಘ ಕವಿ ನಮ್ಮ ನಾಡಲ್ಲಿ ಬಾಳಿ ಬದುಕಿದ್ದರು ಎಂಬುವುದೇ ನಮ್ಮ ಸೌಭಾಗ್ಯ
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.