Wednesday, 28 February 2018

ಬಣ್ಣಗಳ ಹಬ್ಬ ಹೋಳಿ

ಭಾರತದ ಹಲವು ಹಬ್ಬಗಳ ಸಾಲಿನಲ್ಲಿ ಬಣ್ಣಗಳ ಹೊತ್ತು ಬರುವ ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬವೆಂದೇ ಕರೆಯಲಾಗುತ್ತದೆ. ಇದು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಬಣ್ಣಗಳನ್ನು ಹಚ್ಚಿ ಆಚರಿಸುವ ಈ ಹಬ್ಬದ ಮೂಲ ತತ್ವವೇನು ಅನ್ನುವುದನ್ನು ಕೊಂಚ ಅವಲೋಕಿಸೋಣ.

ನಮ್ಮಲ್ಲಿ ಕಾಲ ಕಾಲಗಳು ಬದಲಾಗುವ ಸಂಧಿಕಾಲಗಳಲ್ಲಿ ಹಬ್ಬಗಳನ್ನು ಆಚರಿಸುವುದನ್ನು ನೋಡಿದ್ದೇವೆ. ಮಳೆಯಿಂದ ಚಳಿಗಾಲದೆಡೆಗೆ ಹೊರಳುವ ಸಂಕ್ರಮಣದಲ್ಲಿ ದೀಪಾವಳಿ, ಚಳಿಯಿಂದ ಬಿಸಿಲೆಡೆಗೆ ಹೊರಳುವ ಮಕರ ಸಂಕ್ರಾಂತಿ, ಆಷಾಢದಿಂದ ಮಳೆಯೆಡೆಗೆ ಹೊರಳುವ ಶ್ರಾವಣ ಹಬ್ಬಗಳು, ವಸಂತನ ಆಗಮನದ ಯುಗಾದಿ ಇತ್ಯಾದಿ. ಅಂತಹುದೇ ಸಂಧಿಕಾಲದಲ್ಲಿ ಬರುವ ಹಬ್ಬ ಹೋಳಿ.
ಹೋಳಿ ಹಬ್ಬವು ಫಾಲ್ಗುಣದ ಕೊನೆಯ ದಿನಗಳಲ್ಲಿ ಆಚರಿಸಲಾಗುತ್ತದೆ. ಫಾಲ್ಗುಣ ಚಲಿಗಾಲ ಅಂತ್ಯವಾಗುವ ಮಾಸ. ಮುಂದೆ ಬರಲಿರುವುದು ವಸಂತಕಾಲ. ವಸಂತಕಾಲ ಅತ್ಯಂತ ಸುಂದರ ಕಾಲ ಎಲ್ಲೆಲ್ಲೂ ಹೂಗಳು ಅರಳಿ, ಹೊಂದಳಿರು, ಹಸಿ ಚಿಗುರಿನ ನೋಟ ಸೊಗಸೀಯುತ್ತದೆ. ಹಾಗಾಗಿ ಬಣ್ಣ ತುಂಬಿದ ಭುವಿಯನ್ನು ಬಣ್ಣಗಳಿಂದಲೇ ಎದುರುಗೊಳ್ಳುವ ಹಬ್ಬ ಹೋಳಿ ಹಬ್ಬ.

ಹೋಳಿ ಹಬ್ಬವು ಕೇವಲ ಬಣ್ಣ ಹಚ್ಚುವುದಷ್ಟೇ ಅಲ್ಲ ಬದಲಾಗಿ ಕಾಮದಹನವೂ ಕೂಡ ನಡೆಸಲಾಗುತ್ತದೆ. ಅರ್ಥಾತ್ ಊರಿನ ಒಂದು ನಿಗದಿತ ಜಾಗದಲ್ಲಿ ಕಟ್ಟಿಗೆಗಳನ್ನು ಒಟ್ಟು ಮಾಡಿ ಅದಕ್ಕೆ ಬೆಂಕಿ ಹಚ್ಚಿ ಕಾಮದಹನವನ್ನು ಆಚರಿಸುತ್ತಾರೆ. ಇದಕ್ಕೆ ಶಿವನು ತನ್ನ ಹಣೆಗಣ್ಣಿನಿಂದ ಮನ್ಮಥನನ್ನು ಸುಟ್ಟ ಪುರಾಣ ಕಥೆಯನ್ನೂ ಸಮೀಕರಿಸಿದೆ. ಆದರೆ ಮೂಲತಃ ಈ ಕಾಮದಹನ ಎನ್ನುವುದು ಚಳಿಯನ್ನು ಓಡಿಸಿ ವಸಂತ ಋತುವಿನ ಆಗಮನಕ್ಕೆ ಅವಕಾಶ ಕಲ್ಪಿಸುವ ಕ್ರಿಯೆಯೇ ಆಗಿದೆ. ಲಕ್ಸೆಂಬರ್ಗ್ ಎಂಬಲ್ಲಿ  ಇದನ್ನೇ ಬೆಟ್ಟದ ಮೇಲೆ ಮರದ ದೊಡ್ಡದಾದ ಶಿಲುಬೆ ತಯಾರಿಸಿ ಅದಕ್ಕೆ ಬೆಂಕಿ ಹಚ್ಚಿ ಆಚರಿಸಲಾಗುತ್ತದೆ. ಇದನ್ನು ಲಕ್ಸೆಂಬರ್ಗ್, ಜರ್ಮನಿಗಳಲ್ಲಿ Buergbrennen ಎಂದು ಕರೆಯಲಾಗುತ್ತದೆ. ಅಲ್ಲಿ ಈ ಉತ್ಸವ ಚಲಿಗಾಲದ ಕೊನೆ ಹಾಗೂ (Spring) ವಸಂತ ಕಾಲದ ಆರಂಭವನ್ನು ಸೂಚಿಸುತ್ತದೆ. ಲೆಂಟಿನ ಮೊದಲ ಆದಿತ್ಯವಾರ ಈ ಉತ್ಸವ ಆಚರಿಸುತ್ತಾರೆ. ಫ್ರಾನ್ಸ್ ಮತ್ತು ಬೆಲ್ಜಿಯಂಗಳಲ್ಲಿ ಇದನ್ನೇ dimanche des brandons ಎಂದು ಕರೆಯಲಾಗುತ್ತದೆ.
ಇದನ್ನೇ ಸ್ವಾಬಿಯನ್ ಹಾಗೂ ಅಲೆಮಾನಿಕ್ ಪ್ರದೇಶಗಳಲ್ಲಿ Funkenfeuer ಎಂದು ಕರೆದರೆ ಸ್ವಿಟ್ಸರ್ ಲ್ಯಾಂಡ್ ಮುಂತಾದೆಡೆ Feuerrad ಎಂದೂ ಕರೆಯಲಾಗುತ್ತದೆ. ಇನ್ನೂ ಅನೇಕ ಕಡೆ ಇದೇ ರೀತಿಯ ಆಚರಣೆಗಳು ಚಾಲ್ತಿಯಲ್ಲಿವೆ.

ಹಿಮಾಲಯದಲ್ಲಿರುವ ಶಿವನು ಫಾಲ್ಗುಣದ ಚಳಿಯನ್ನು ಆ ಹಿಮರಾಶಿಯ ನಡುವೆ ಹೇಗೆ ತಾನೇ ತಡೆದಾನು, ಕವಿಯೊಬ್ಬ ಇದನ್ನೇ ಸೊಗಸಾಗಿ ಕಲ್ಪಿಸಿ ಫಾಲ್ಗುಣದಲ್ಲಿ ಶಿವ ತಂಪಾಗಿರುವ ಚಂದಿರ ಮತ್ತು ಗಂಗೆಯನ್ನು ತೆಗೆದಿಟ್ಟು ತನ್ನ ಉರಿವ ಹಣೆಗಣ್ಣನ್ನು ಅಗಲಿಸಿ ಚಳಿಕಾಯಿಸುತ್ತಾನೆ ಎಂದು ಚಿತ್ರಿಸಿದ್ದಾನೆ. ಪಾರ್ವತಿ ಇದೇ ಫಾಲ್ಗುಣದ ಚಳಿಗೆ ಶಿವನು ಹಾಸಿಕುಳಿತ ಚರ್ಮವನ್ನು ಕಸಿದು ಗಣಪತಿಗೆ ಚಳಿಯಿಂದ ಕಾಪಾಡಲು ಹೊದ್ದಿಸಿದಳು ಎನ್ನುವ ಕಲ್ಪನೆಗಳು ಅದ್ಭುತ ಪಾತ್ರಚಿತ್ರಣ. ಈ ನಿಟ್ಟಿನಲ್ಲಿ ಶಿವ ಆ ಚಳಿಯಲ್ಲಿ ಮನ್ಮಥನನ್ನು ಸುಟ್ಟಿದ್ದು ಹಲವು ರೀತಿಯಲ್ಲಿ ಸಾಮ್ಯವೆನಿಸುತ್ತದೆ.

ಹೀಗೆ ಜಗತ್ತಿನಾದ್ಯಂತ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ  ನಮ್ಮ ದೇಶದಲ್ಲಿ ಬರೀ ಚಳಿಯಿಂದ ವಸಂತದೆಡೆಗಿನ ಸಂಕ್ರಮಣ ಅಲ್ಲ ಅದು ಕಾಮನೆಗಳನ್ನು ಜಯಿಸುವ ಆ ಮೂಲಕ ವಸಂತದಲ್ಲಿ ಸಹಜವಾಗಿ ಆಕರ್ಷಿತವಾಗುವ ಆಸೆಆಕಾಂಕ್ಷೆಗಳ ಹತೋಟಿ, ಆಧ್ಯಾತ್ಮಿಕ ನೆಲೆಯಲ್ಲಿ ಶಿವನೆಡೆಗೆ ಹೊರಳುವ ಗಮ್ಯ.

ಯೋಗೀಶ್ ಮಲ್ಲಿಗೆಮಾಡು

Thursday, 22 February 2018

ಯಾವ ಕಂಪೆನಿ ಹುಡುಗಿ?

ಎನ್ಫೀಲ್ಡು ಬೈಕಿನಲಿ
ಬೀಸುಗಾಳಿಯ ಹಾಗೆ
ಸದ್ದಿಟ್ಟು ಹೋದವರು ನೀವಲ್ಲವೆ?

ರೇಬೆನ್ನು ಗ್ಲಾಸಿನಲಿ
ನನ್ನೆಡೆಗೆ ತುಸು ನೋಡಿ
ಸಣ್ಣಗೆ ನಕ್ಕವರು
ನೀವಲ್ಲವೆ?

ನಮ್ಮೂರ ಮೇಲಾಸಿ
ನಿಮ್ಮ ಬೈಕೋಡಿರಲು
ಮೂರು ಹಾರ್ನಿಟ್ಟವರು
ನೀವಲ್ಲವೆ?

ನನ್ನ ಮೇಕಪ್ಪಿಗೆ
ತೊಟ್ಟ ಟೈಟ್ಫಿಟ್ಟಿಗೆ
ಮನಸೋತು ಸುಳಿದವರು
ನೀವಲ್ಲವೆ?

ಯಾವ ಐಟಿಯ ಹುಡುಗಿ
ಯಾವ ಕಾಲೇಜ್ ಬೆಡಗಿ
ಎಂದು ತಲೆ ಕೆರೆದವರು
ನೀವಲ್ಲವೆ?

ಅಂದು ಬಸ್ಟ್ಯಾಂಡಿನಲಿ
ನಿಂತಿರಲು ನಾನೆಂತು
ಬೈಕಿನಲಿ ಬಂದವರು
ನೀವಲ್ಲವೆ?

ಬನ್ನಿರಿ ಎಂದವರು
ಕುಳ್ಳಿರಿ ಎಂದವರು
ಡ್ರಾಪ್ ಕೊಡುವೆನೆಂದವರು
ನೀವಲ್ಲವೆ?

ಹತ್ತಿ ಕೂರಲು ನಾನು
ಸೈಡ್ ಮಿರರು ಸರಿ ಮಾಡಿ
ಸಣ್ಣಗೆ ನಕ್ಕವರು
ನೀವಲ್ಲವೆ?

ನನ್ನ ಚೆಲುವಿಗೆ
ನಿಮ್ಮ ರೇಬೆನ್ನು ಹೊಳೆಯಿತು
ಎಕ್ಸಲೇಟರ್ ಕೊಟ್ಟವರು ನೀವಲ್ಲವೆ?

ಎಂ ಎನ್ ಸಿ ಯೋ
ಐಟಿ, ಬಿಟಿ ಕಂಪೆನಿಯೋ
ಎಂದು ಕೇಳ್ದವರು
ನೀವಲ್ಲವೆ?

ಬೀಡಿ ಕಂಪೆನಿಯೆಂದು
ನಾಚಿ ನುಡಿಯಲು ನಾನು
ಬ್ರೇಕೊತ್ತಿ ನಿಂದವರು
ನೀವಲ್ಲವೆ?

ಬೀಡಿ ಬ್ರಾಂಚಿನ ಮುಂದೆ
ನನ್ನ ಬಿಟ್ಟು
ತಿರುಗದೇ ಹೋದವರು
ನೀವಲ್ಲವೆ?

ರೇಬೆನ್ನು ಮಂಕಾಯ್ತು
ಮತ್ತೆ ನಗು ಕಳೆದೋಯ್ತು
ತಿರುಗದೇ ಹೋದವರು
ನೀವಲ್ಲವೆ?

ಯೋಗೀಶ್ ಮಲ್ಲಿಗೆಮಾಡು

Thursday, 15 February 2018

ಕೊನೆಯ ಅಂಕಣ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 30

ಸತತವಾಗಿ ಒಂದು ತಿಂಗಳ ನಿರಂತರ ಅಂಕಣವನ್ನು ದಿನಕ್ಕೊಂದರಂತೆ ನಿಮ್ಮ ಮುಂದೆ ಪ್ರಸ್ತುತಪಡಿಸಿ ಇವತ್ತಿಗೆ ಈ ಅಂಕಣದೊಂದಿಗೆ ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣವನ್ನು ಸಮಾಪನಗೈಯುತ್ತಿದ್ದೇನೆ. ಪ್ರತಿ ರಾತ್ರಿ ಹನ್ನೆರಡು ಒಂದು ಗಂಟೆಯವರೆಗೆ ಕೂತು ಅಂಕಣ ಬರೆದಿದ್ದೇನೆ, ವಿಷಯ ಸಿಕ್ಕದಿದ್ದಾಗ ತಲೆ ಕೆರೆದಿದ್ದೇನೆ ಆದರೆ, ಏನೇ ಆದರೂ ಬೆಳಗ್ಗೆ 6:30-7:00 ಗಂಟೆಗೆ ನಿಮ್ಮ ವಾಟ್ಸ್ ಆ್ಯಪ್ ಅಂಗಳಕ್ಕೆ ನನ್ನ ಅಂಕಣವನ್ನು ತಲುಪಿಸಿದ್ದೇನೆ.

ನೆಚ್ಚಿ ಓದಿದವರಿಗೂ, ಓದಿ ಒಕ್ಕಣಿಸಿದವರಿಗೂ (ಕಮೆಂಟಿಸಿದವರಿಗೂ),  ಸಲಹೆಗಳನ್ನು ಕೊಟ್ಟವರಿಗೂ, ಈ ವಿಷಯದ ಬಗ್ಗೆ ಬರೆಯಿರಿ ಎಂದು ವಿಷಯವನ್ನು ಆಯ್ದು ಕಳುಹಿಸಿದವರಿಗೂ, ಮುಖಪುಟದಲ್ಲಿ ನನ್ನ ಅಂಕಣವನ್ನು ಹಂಚಿಕೊಂಡವರಿಗೂ, ಹೆಬ್ಬರಳ ಮೆಚ್ಚುಗೆಯ ಒತ್ತಿದವರಿಗೂ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಮೆಚ್ಚುಗೆಗೆ ಚಿರಋಣಿ. ಯಾರೋ ಅಪರಿಚಿತರೊಬ್ಬರು  ನನ್ನ ಹೆಸರು ಕೇಳಿದೊಡನೆ ನಿಮ್ಮ ಅಂಕಣಗಳನ್ನು ಓದಿದ್ದೇನೆ ಎಂದು ಹೇಳಿದ್ದು ಖುಷಿ ಕೊಟ್ಟಿದೆ. ಎಲ್ಲರಿಗೂ ಮನತುಂಬಿದ ಧನ್ಯವಾದಗಳು.

ಪ್ರತೀ ಹತ್ತನೇ ಅಂಕಣವನ್ನು ಸಾಹಿತಿಗೆ ಅರ್ಪಿಸುವ ಸಲುವಾಗಿ ಇಂದಿನ ಅಂಕಣ ಕನ್ನಡದ ಖ್ಯಾತ ಕವಯತ್ರಿ ತ್ರಿವೇಣಿಯವರ ಸ್ಮರಣೆಯಲ್ಲಿ.

ನಾಡು ಕಂಡ ಅನೇಕ ಮಹಿಳಾ ಲೇಖಕಿಯರಲ್ಲಿ ತ್ರಿವೇಣಿಯವರೂ ಒಬ್ಬರು. ತ್ರಿವೇಣಿ ಎಂಬುವುದು ಅವರ ಕಾವ್ಯ ನಾಮ. ಮೂಲ ಹೆಸರು ಅನಸೂಯ ಶಂಕರ್. 1 ಸೆಪ್ಟಂಬರ್ 1928 ರಂದು ಮಂಡ್ಯದಲ್ಲಿ ಜನಿಸಿದರು. ತಮ್ಮ ಬಿ.ಎ ವ್ಯಾಸಾಂಗದ ಅವಧಿಯಲ್ಲಿ ಮನಃಶಾಸ್ತ್ರ ವಿಷಯಕ್ಕೆ ಸಂಬಂಧಿಸಿ ಸ್ವರ್ಣ ಪದಕವನ್ನು ಪಡೆದುಕೊಂಡಿದ್ದರು.

ಮಹಾತ್ಮ ಗಾಂಧೀಜಿಯ ಅಸ್ತಿಯನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದ ಗೌರವಾರ್ಥ ಅನಸೂಯ ಶಂಕರ್ ತಮ್ಮ ಕಾವ್ಯನಾಮವನ್ನು ತ್ರಿವೇಣಿ ಎಂದು ಇಟ್ಟುಕೊಂಡಿದ್ದರು.

1953 ರಲ್ಲಿ ಅವರ ಮೊದಲ ಕಾದಂಬರಿ ಅಪಸ್ವರ ಪ್ರಕಟವಾಯಿತು. ತದನಂತರ 24 ಕಾದಂಬರಿ ಹಾಗೂ ಮೂರು ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ.

"ಬೆಳ್ಳಿ ಮೋಡ" ಕಾದಂಬರಿಯನ್ನು ಚಲನಚಿತ್ರವಾಗಿಸಿದ ಪುಟ್ಟಣ್ಣ ಕಣಗಾಲರಿಗೆ ಈ ಚಿತ್ರ ಭಾಗ್ಯವನ್ನೇ ತೆರೆಯಿತು. ಈ ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಬರುವ "ಮಿನುಗು ತಾರೆ" ಎಂಬ ಪದ ಕಲ್ಪನಾ ಹೆಸರಿಗೆ ಬಿರುದಾಗಿ ಉಳಿಯಿತು. ತನ್ನ ಬೆಂಗಳೂರು ನಿವಾಸಕ್ಕೂ ಕಲ್ಪನ "ಬೆಳ್ಳಿ ಮೋಡ" ಎಂಬ ಹೆಸರಿಟ್ಟು ತನಗೆ ಹೆಸರು ತಂದುಕೊಟ್ಟ ಚಲನಚಿತ್ರಕ್ಕೆ ಗೌರವ ಸಲ್ಲಿಸಿದ್ದರು. ಈ ಚಿತ್ರ ಏಳು ರಾಜ್ಯ ಪ್ರಶಸ್ತಿಗಳನ್ನೂ ದಕ್ಕಿಸಿಕೊಂಡಿತ್ತು.

ಮೂಲತಃ ಅವರ ಹೆಚ್ಚಿನ ಕಾದಂಬರಿಗಳು ಮನೋಸಾಮಾಜಿಕ (PsychoSocial) ವಸ್ತುಗಳನ್ನೊಳಗೊಂಡಿದೆ. "ಶರಪಂಜರ" ಅಂತಹ ಒಂದು ಮನೋಸಾಮಾಜಿಕ ಕಾದಂಬರಿ. "ಕಾವೇರಿ" ಎಂಬ ಕಥಾ ನಾಯಕಿ ಮಾನಸಿಕ ಖಾಯಿಲೆಯಿಂದ ಗುಣಮುಖವಾದ ಮೇಲೂ ಸಮಾಜ ಆಕೆಯನ್ನು ನಡೆಸಿಕೊಳ್ಳುವ ರೀತಿಯನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಪುಟ್ಟಣ್ಣ ಕಣಗಾಲರು ಈ ಕಾದಂಬರಿಯನ್ನು ಚಲನಚಿತ್ರವಾಗಿಸಿದರು. ಕಥಾನಾಯಕಿ ಪಾತ್ರದಲ್ಲಿ ಮಿನುಗು ತಾರೆ ಕಲ್ಪನ ನಟಿಸಿದ ಈ ಚಿತ್ರ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗಿದೆ. ಅತ್ಯುತ್ತಮ ಚಿತ್ರಕಥೆಯ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಗೆದ್ದುಕೊಂಡಿದೆ.

ಕಲ್ಪನಾ ನಿರ್ವಹಿಸಿದ ಕಾವೇರಿಯ ಪಾತ್ರ ಒಂದು  ಅಮೋಘ ಅಭಿನಯ. ಚಿತ್ರದ ಮುಕ್ತಾಯದ ಭಾಗದಲ್ಲಿ ಕಲ್ಪನ ನಟನೆ ಮುಗಿದ ನಂತರವೂ ಚೀರಾಡುತ್ತಿದ್ದದ್ದು ಅಭಿನಯದ ಪರಾಕಾಷ್ಠೆಯನ್ನು ತಲುಪಿದ್ದರು ಎನ್ನುವುದಕ್ಕೆ ಸಾಕ್ಷಿ. ಅವರಿಗೆ ಈ ಚಲನಚಿತ್ರ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಯನ್ನೂ ತಂದು ಕೊಟ್ಟಿತು.

ತ್ರಿವೇಣಿಯವರ ಐದು ಕಾದಂಬರಿಗಳು ಚಲನಚಿತ್ರಗಳಾಗಿವೆ. "ಶರಪಂಜರ", "ಬೆಳ್ಳಿಮೋಡ", "ಹಣ್ಣೆಲೆ ಚಿಗುರಿದಾಗ", "ಮುಕ್ತಿ", "ಹೂವು ಹಣ್ಣು".

24 ಕಾದಂಬರಿಗಳನ್ನು ಬರೆದಿದ್ದ ತ್ರಿವೇಣಿ 25ನೇ ಕಾದಂಬರಿ "ಅವಳ ಮಗಳು" ಮುಗಿಸುವ ಮುನ್ನ ನಿಧನರಾದರು. ಮುಂದೆ ಈ ಕಾದಂಬರಿಯನ್ನು ಎಂ.ಸಿ.ಪದ್ಮ ಇವರು ಪೂರ್ಣಗೊಳಿಸಿದರು.

"ಬೆಕ್ಕಿನ ಕಣ್ಣು" ಕಾದಂಬರಿಯನ್ನು ಪುಟ್ಟಣ್ಣ ಕಣಗಾಲರು ಮಲಯಾಳಂನಲ್ಲಿ "ಪೂಚಕಣ್ಣಿ" ಎಂಬ ಹೆಸರಿನಲ್ಲಿ ನಿರ್ದೇಶಿಸಿದ್ದರು. ಇದೂ ಕೂಡ ಒಂದು ಮನೊಸಾಮಾಜಿಕ (PsychoSocial) ಕಾದಂಬರಿ ಮಲಯಾಳಂನಲ್ಲಿ ಈ ಚಿತ್ರ ಬಹಳ ಯಶಸ್ವಿಯಾಯಿತು.

29 ಜುಲೈ 1963 ರಲ್ಲಿ ಅವರು ನಿಧನರಾದರು. ತಮ್ಮ ಮಗಳಿಗೆ ಜನ್ಮ ನೀಡಿದ ಹತ್ತನೆ ದಿನಕ್ಕೆ ಮರಣ ಹೊಂದಿದ ಅವರಿಗೆ ಆಗ ವಯಸ್ಸು ಕೇವಲ 34 ವರುಷ. ಅವರ ಮೊದಲ ಕಾದಂಬರಿ 1953 ರಲ್ಲಿ ಪ್ರಕಟವಾಯಿತು. 1963 ಅವರು ನಿಧನರಾದರು. ಸಾಹಿತ್ಯ ಲೋಕದಲ್ಲಿ ಕೇವಲ ಹತ್ತು ವರುಷದ ಅವಧಿಯಲ್ಲಿ ಮಿಂಚಿ ಮರೆಯಾದ ಅವರು ಇಂದಿಗೂ ಸಾರಸ್ವತ ಲೋಕದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರೆ ಅವರು ಆಯ್ದು ಕೊಂಡ ವಸ್ತು, ಬರೆದ ಶೈಲಿ ಮತ್ತು ಸೂಕ್ಷ್ಮತೆಗಳೇ ಕಾರಣ.

ತಾವರೆ ಕೊಳ ಮತ್ತು ಅವಳ ಮಗಳು ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ

ಇಂತಹ ಶ್ರೇಷ್ಠ ಸಾಹಿತಿಯ ಕಾದಂಬರಿಗಳನ್ನು ಓದುವುದು ತ್ರಿವೇಣಿಯವರಿಗೆ ಅಂತೆಯೇ ಕನ್ನಡ ಸಾರಸ್ವತ ಲೋಕಕ್ಕೆ ನಾವು ಸಲ್ಲಿಸುವ ಗೌರವ.

ಯೋಗೀಶ್ ಮಲ್ಲಿಗೆಮಾಡು.

Wednesday, 14 February 2018

ತುಳುನಾಡಿನ ಸಿರಿ ಬದುಕು ಭಾಗ-2

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 29

ತುಳುನಾಡಿನ ಸಾಂಸ್ಕ್ರತಿಕ ಶ್ರೀಮಂತಿಕೆಯು ಈ ನೆಲದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇಲ್ಲಿಯ ಹಳ್ಳಿ ಹಳ್ಳಿಗಳು ದೈವಸಾನಿಧ್ಯದ ಕತೆ ಹೇಳುತ್ತವೆ. ನವೆಂಬರ್ ನಿಂದ ಮೇ ವರೆಗಿನ ರಾತ್ರಿಗಳಲ್ಲಿ ಬೈದೂರಿನಿಂದ ಕಾಸರಗೋಡಿನವರೆಗಿನ ಕರಾವಳಿಯಲ್ಲಿ ಯಕ್ಷಗಾನ, ಭೂತಕೋಲ, ನೇಮ ಮುಂತಾದ ಕಲೆಗಳಿಂದ ವಿದ್ಯುದ್ದೀಪಗಳ ಬೆಳಕಿನಲ್ಲಿ ಇಲ್ಲಿಯ ಕಲಾವೈಭವವನ್ನು ತೆರೆದಿಡುತ್ತವೆ. ಇಂತಹ ತುಳುನಾಡು ಕರ್ನಾಟಕದ ಕರಾವಳಿಯಲ್ಲಿ ಇಲ್ಲದೇ ಇರುತ್ತಿದ್ದರೆ, ಕರ್ನಾಟಕದ ಕರಾವಳಿಗೆ, ಸೊಬಗೇ ಇರುತ್ತಿರಲಿಲ್ಲ.

ಸೌರ ಕಾಲಮಾನವನ್ನೇ  ಅವಲಂಬಿಸಿ ಜೀವನ ನಡೆಸುವ ತುಳುನಾಡಿಗೆ ಸೂರ್ಯನ ಸಂಕ್ರಮಣವೇ ಪ್ರಶಸ್ತ. ಅದನ್ನವಲಂಬಿಸಿ ಬರುವ ಆಟಿಯ ತಿಂಗಳು ವಿಶಿಷ್ಟವಾದುದು. ದನಗೋಳಾಗಿ ಸುರಿಯುವ ಮಳೆಯಲ್ಲಿ ಆಟಿ ತಿಂಗಳು ಬಹಳ ಉದಾಸೀನದ ಕಾಲ. ಅದಕ್ಕಾಗಿಯೇ "ಆಟಿ ಆಡೋಂದು ಪೋಪುನ, ಸೋಣ ಓಡೋಂದು ಪೋಪುನ" ಎಂಬ ನುಡಿ ಚಾಲ್ತಿಯಲ್ಲಿದೆ.ಇಂತಹ ಉದಾಸೀನವನ್ನು ಕಳೆದು ಹುರುಪು ಹೊತ್ತು ಬರುವ ಆಟಿ ಕಳೆಂಜ ಮಳೆಗಾಲದಲ್ಲಿ ಬರುವ ಕಾಯಿಲೆಗಳನ್ನು ಓಡಿಸುತ್ತಾನೆ ಎಂಬ ನಂಬಿಕೆಯಿದೆ. "ನಲಿಕೆ" ಎಂಬ ಜನಾಂಗವು ಈ ಕಲೆಯನ್ನು ನಡೆಸಿಕೊಡುತ್ತಾರೆ.

ಕಂಗೀಲು ಕುಣಿತ: ತುಳುನಾಡಿನ ಒಂದು ವಿಶಿಷ್ಟ ಆರಾಧನಾ ಕಲೆ ಇದಾಗಿದೆ. ಮಾರಿ ಓಡಿಸುವ ಕಲ್ಪನೆಯಲ್ಲಿ ಕಂಗೀಲು ಕುಣಿತದ ಸೇವೆ ಮಾಡಲಾಗುತ್ತದೆ. ಮುಂಡಾಲ, ಗೊಡ್ಡ ಜನಾಂಗದವರು ನಡೆಸಿಕೊಡುವ ಈ ಸೇವೆ ರೊಗರುಜಿನದಿಂದ ರಕ್ಷಣೆ ಹಾಗೂ ಸಮ್ರದ್ಧಿಯ ಆಶಯದಲ್ಲಿ ನಡೆಯುವಂತದ್ದು. ಮಾಯಿ ತಿಂಗಳಿನಲ್ಲಿ  ಹುಣ್ಣಿಮೆಯ ಬೆಳಕಿನಿಂದ ಶುರುಮಾಡಿ ಈ ಆರಾಧನಾ ಕಲೆಯನ್ನು ನೆರೆವೇರಿಸಲಾಗುತ್ತದೆ.

ಕಾಲೇಕೋಲ ಎನ್ನುವ ಒಂದು ವಿಶಿಷ್ಟ ಕೋಲವು ಈ ನೆಲದಲ್ಲಿ ನಡೆಯುತ್ತಿತ್ತು ಎಂದು ಆತ್ಮೀಯ ಪ್ರದೀಪ್ ಉಲ್ಲೇಖಿಸಿದ್ದರು. ಮನೆಯ ಹಿರಿಯರು ಮರಣ ಹೊಂದಿದಾಗ ಅವರನ್ನು ಮೈಯಲ್ಲಿ ಆವಾಹಿಸಿ ಮಾಡುವ ಸೇವೆಯೇ ಕಾಲೇಕೋಲ.  ಹಿರಿಯರ ಆಸೆಯನ್ನು ತೀರಿಸುವ ಸಲುವಾಗಿ ಈ ಸೇವೆ ವಿಶಿಷ್ಟವಾದುದು.

ಯಕ್ಷಗಾನವು ಇಂದು ಒಂದು ಅಮೋಘ ಕಲೆಯಾಗಿ ವಿಶ್ವವಿಖ್ಯಾತವಾಗಿದೆ. ತುಳುವಿನಲ್ಲಿ ಇದು ಆಟವೆಂದೇ ಪರಿಚಿತ. ಬಣ್ಣ, ವೇಷ, ನ್ರತ್ಯ, ಸಂಭಾಷಣೆ, ನಾದ, ಅಭಿನಯಗಳ ಸಮ್ಮಿಲನವು ಯಕ್ಷಗಾನದ ಜೀವಂತಿಕೆ. ಕಂಬಳ, ಕೋರಿಕಟ್ಟ, ಸುಗ್ಗಿ ಕುಣಿತ, ಓಬೇಲೆ ಹಾಡು, ಹುಲಿವೇಷ ಮುಂತಾದವು ತುಳುನಾಡಿನ ಜಾನಪದ ಶ್ರೀಮಂತಿಕೆ

ಶೈವ, ವೈಷ್ಣವ, ಶಾಕ್ತ ಪಂಥಗಳು ಪಸರಿಸಿದ; ಜೈನ ಧರ್ಮ ಉಚ್ಛ್ರಾಯ ಕಂಡ ಪ್ರದೇಶಗಳಲ್ಲಿ ತುಳುನಾಡು ಕೂಡ ಒಂದು. ಬ್ಯಾರಿ, ಕೊಂಕಣಿ, ತುಳು, ಕನ್ನಡಗಳು ಇಲ್ಲಿ ಜೊತೆಜೊತೆಯಾಗಿ ಮುಂಬರಿದಿದೆ. ಸೀಮೆಗಳ ಪಂಥಗಳ ಮೀರಿ ಇಲ್ಲಿ ಭಾಷೆಗಳು ನಲಿದಾಡಿದೆ. ವಿಶಾಲಕಡಲಿನ ತಟದ ಮರಳು, ತೇಲಿ ತೂಗಿ ಓಲಾಡುವ ದೋಣಿ, ಬೀಸಿ ಒಗೆಯುವ ಬಲೆಯ ತುಂಬಾ ಮೀನು ರಾಶಿ.

ಜಾತ್ರೆಗಳಿಗೆ ತೆರೆಯೆಳೆಯುವಂತೆ, ಯಕ್ಷಗಾನದ ಗೆಜ್ಜೆ ಬಿಚ್ಚುವಂತೆ ಪತ್ತನಾಜೆ ಆಚರಣೆಗಳು, ಸೋಣೆಯ ಸಂಭ್ರಮದ ಹಬ್ಬಗಳು ಇಲ್ಲಿಯ ಸೊಗಡನ್ನು ಶ್ರೀಮಂತಗೊಳಿಸಿದೆ. ಇಂತಹ ತುಳುನಾಡಿನ ಸಿರಿಬದುಕನ್ನು ಕಣ್ತುಂಬಲು ಇಲ್ಲಿಯ ನೈಜ ಆಚರಣೆಗಳೇ ನೋಡಬೇಕು.

ಯೋಗೀಶ್ ಮಲ್ಲಿಗೆಮಾಡು

Tuesday, 13 February 2018

ನೆನಪಾದಳು ಶಾಕುಂತಲೆ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 28

ಇಂದು ವಿಶ್ವಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ಈ ಬಗ್ಗೆ ಪರವಿರೋಧದ ಚರ್ಚೆಗಳೂ ನಡೆಯುತ್ತವೆ. ಅವೆಲ್ಲವುಗಳನ್ನು ಪಕ್ಕಕ್ಕಿಟ್ಟು ನಾವಿಂದು ಭಾರತ ಸಾಹಿತ್ಯದ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಪ್ರೇಮ ಕಥೆ ದುಷ್ಯಂತ ಶಾಕುಂತಲೆಯರ ಪಾತ್ರವನ್ನು  ವಿಶ್ಲೇಷಿಸೋಣ.

ಪ್ರೇಮ ಕಾವ್ಯಗಳಲ್ಲಿ ದುಷ್ಯಂತ ಶಾಕುಂತಲೆ ಮೊದಲಪಂಕ್ತಿಯಲ್ಲಿ  ನೆನಪಾಗುತ್ತಾರೆ. ಈ ಪಾತ್ರಗಳು ಮಹಾಭಾರತದಲ್ಲಿ ಬಂದುದಾದರೂ ಕಾಳಿದಾಸನ ಅಭಿಜ್ಞಾನ ಶಾಕುಂತಲದಿಂದಲೆ ಜನಮನ್ನಣೆ ಪಡೆದಿದೆ. ಕಾಳಿದಾಸನ ಪ್ರತಿಭೆ ಅಭಿಜ್ಞಾನ ಶಾಕುಂತಲದಲ್ಲಿ ಸಂಪೂರ್ಣವಾಗಿ ಅನಾವರಣವಾಗುತ್ತದೆ ಎಂದು ಅನೇಕ ಪಂಡಿತರು ಕೊಂಡಾಡುತ್ತಾರೆ.

ವಿಶ್ವಾಮಿತ್ರ ಹಾಗೂ ಅಪ್ಸರೆ ಮೇನಕೆಯ ಮಗಳಾಗಿ ಹುಟ್ಟುವ ಹೆಣ್ಣು ಮಗು ಪರಿತ್ಯಕ್ತ ಬಾಲೆಯಾಗಿ ಕಾಡಿನಲ್ಲಿ ಶಾಕುಂತ ಪಕ್ಷಿಗಳ ಗುಂಪಿನಲ್ಲಿ ಕಣ್ವ ಮಹರ್ಷಿಗಳಿಗೆ ದೊರಕುತ್ತಾಳೆ. ಶಾಕುಂತ ಪಕ್ಷಿಗಳ ಆರೈಕೆಯಲ್ಲಿದ್ದ ಆಕೆಯನ್ನು ಕಣ್ವ ಮಹರ್ಷಿಗಳು ಶಾಕುಂತಲಾ ಎಂದು ಹೆಸರಿಸಿ ತನ್ನ ಆಶ್ರಮಕ್ಕೆ ತರುತ್ತಾರೆ.

ಹೀಗೆ ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಸಾತ್ವಿಕ ವಾತಾವರಣದಲ್ಲಿ ಗಿಡ, ಮರ, ಬಳ್ಳಿ , ಹೂ, ಹಕ್ಕಿ, ಸಖಿಯರೊಡನೆ ಬೆಳೆಯುವ ಶಾಕುಂತಲೆಯನ್ನು ದುಷ್ಯಂತನೆಂಬ ರಾಜನು ವನಬೇಟೆಯ ಸಂದರ್ಭದಲ್ಲಿ ಕಂಡು ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ಗಾಂಧರ್ವ ವಿವಾಹವಾಗಿ ರಾಜ ದುಷ್ಯಂತ ಆಕೆಯೊಡನೆ ಆಶ್ರಮದಲ್ಲಿ ಸಾಂಸಾರಿಕ ಜೀವನ ನಡೆಸುತ್ತಾನೆ.

ತುರ್ತು ಕಾರ್ಯದ ನಿಮಿತ್ತ ರಾಜಧಾನಿಗೆ ವಾಪಾಸಾಗಬೇಕಾದ ಪ್ರಸಂಗ ಬಂದು ರಾಜ ದುಷ್ಯಂತ ಶಾಕುಂತಲೆಯನ್ನು ತಕ್ಷಣಕ್ಕೆ ಕರೆದೊಯ್ಯಲಾಗದ ಅಸಹಾಯಕತೆಯನ್ನು ತಿಳಿಸಿ ಆದಷ್ಟು ಬೇಗ ಆಕೆಯನ್ನು ಕರೆಸಿಕೊಳ್ಳುವ ಮಾತು ಕೊಟ್ಟು ಬೆರಳುಂಗುರವ ತೊಡಿಸಿ ಹೊರಡುತ್ತಾನೆ.

ಪತಿಯ ಬಗ್ಗೆ ಧ್ಯಾನಿಸುತ್ತಾ ಆತನ ಆಗಮನದ ನಿರೀಕ್ಷೆಯಲ್ಲಿ ತಲ್ಲೀನಳಾದ ಶಾಕುಂತಲಾ ದೂರ್ವಾಸ ಮುನಿಗಳು ಆಶ್ರಮಕ್ಕೆ ಬಂದಿರುವುದೂ ಗಮನಿಸದೆ ಆತಿಥ್ಯ ನೀಡದಿರುವುದರಿಂದ ಕುಪಿತರಾದ ಋಷಿ ಯಾರ ನೆನಪಿನಲ್ಲಿ ಕಳೆದುಹೋಗಿರುವೆಯೊ ಅವನು ನಿನ್ನನ್ನು ಮರೆಯಲಿ ಎನ್ನುವ ಶಾಪವೀಯುತ್ತಾರೆ.

ಇದನ್ನು ಕೇಳಿದ ಸಖಿಯರು ಶಾಕುಂತಲೆಯ ಪರಿಸ್ಥಿತಿಯನ್ನು ಮುನಿವರ್ಯನಿಗೆ ತಿಳಿಸುತ್ತಾರೆ.
ದೂರ್ವಾಸರು ಸಖಿಯರಿಗೆ ಆಕೆಯ ಪತಿಯು ನೀಡಿದ ಕಾಣಿಕೆಯೊಂದನ್ನು ತೋರಿಸಿದಂದು ಆತನಿಗೆ ಮತ್ತೆ ಆಕೆಯ ನೆನಪಾಗುತ್ತದೆ ಎಂದು ಶಾಪ ವಿಮೋಚನೆಯನ್ನು ನೀಡಿ ಹೊರಟುಹೋಗುತ್ತಾರೆ.

ಮುಂದೆ ರಾಜನ ಆಗಮನದ ಯಾವ ಕುರುಹೂ ಇಲ್ಲದೆ ಹೋದಾಗ ಕಣ್ವರು ಶಾಕುಂತಲೆಯನ್ನು ದುಷ್ಯಂತನಲ್ಲಿಗೆ ಕಳುಹುವ ತಯಾರಿ ಮಾಡುತ್ತಾರೆ. ಸಖಿಯರು ಶಾಕುಂತಲೆಗೆ ಉಂಗುರವನ್ನು ಜಾಗರೂಕತೆಯಿಂದ ನೋಡಿಕೊ ಎಂದು ಹೇಳಿದರ ಮರ್ಮವರಿಯದ ಶಾಕುಂತಲೆ ನದಿ ದಾಟುವ ಸಮಯದಲ್ಲಿ ದೋಣಿಯಲ್ಲಿ ಕುಳಿತು  ನೀರಲೆಯ ಆಟಕ್ಕೆ ಕೈ ಇಳಿಬಿಟ್ಟ ಸಂದರ್ಭ ಉಂಗುರ ಜಾರಿ ಹೋಗುತ್ತದೆ.

ಆಸ್ಥಾನಕ್ಕೆ ಬಂದವಳನ್ನು ಗುರುತಿಸದಾದ ದುಷ್ಯಂತನೆದುರು ಅತ್ತು ಕರೆದು ತಾನಿತ್ತ ಉಂಗುರವನ್ನು ತೋರಿ ಕೈಬೆರಳು ಖಾಲಿಯಿರಲು ವಿಧಿಯನ್ನು ಹಳಿಯುತ್ತಾ ಶಾಕುಂತಲೆ ಆಶ್ರಮಕ್ಕೆ ಮರಳುತ್ತಾಳೆ.

ಮಹಾಭಾರತದಲ್ಲಿ ಬರುವ ಈ ಪಾತ್ರಗಳು ಅದ್ಭುತ ಪಾತ್ರಚಿತ್ರಣಕ್ಕೆ ಹಿಡಿದ ಕೈಗನ್ನಡಿ. ದೂರ್ವಾಸರು ಶಾಪವೀಯುವಾಗ "ನೀನು ನೆನೆಯುತ್ತಿರುವವನು ನಿನ್ನನ್ನು ಮರೆಯಲಿ" ಎಂದು ಶಾಪ ಕೊಡುತ್ತಾನೆಯೆ ವಿನಃ "ನೀನು ನೆನೆಯುತ್ತಿರುವವನನ್ನು ನೀನು ಮರೆತು ಬಿಡು" ಎಂದು ಶಾಪ ಕೊಡುವುದಿಲ್ಲ. ಕವಿಯ ಕಾವ್ಯ ಪ್ರಜ್ಞೆ ಇಲ್ಲಿ ಮುಖ್ಯವಾಗುತ್ತದೆ. ಒಂದು ವೇಳೆ ಶಾಕುಂತಲೆ ದುಷ್ಯಂತನನ್ನು ಮರೆಯಲಿ ಎಂದು ದೂರ್ವಾಸರು ಶಾಪ ಕೊಟ್ಟಿದ್ದರೆ ಅದು ಶಾಕುಂತಲೆಗೆ ಶಾಪದ ಬದಲಾಗಿ ವರವಾಗುತ್ತಿತ್ತು. ಯಾಕೆಂದರೆ ಮರೆತ ಮೇಲೆ ಆ ವ್ಯಕ್ತಿಯ ಕಲ್ಪನೆಯೇ ಇಲ್ಲ. ಆಕೆ ಎಲ್ಲವನ್ನೂ ಮರೆತು ನೆಮ್ಮದಿಯ ಜೀವನ ನಡೆಸಬಹುದು. ದುಷ್ಯಂತನಿಗೆ ಆ ನೆಮ್ಮದಿ ಇತ್ತು.

ಆದರೆ ಇಲ್ಲಿ ಕವಿ ದೂರ್ವಾಸರ ಕೈಯಿಂದ ದುಷ್ಯಂತ ನಿನ್ನನ್ನು ಮರೆಯಲಿ ಎಂದು ಹೇಳಿದ್ದು ಶಾಕುಂತಲೆಗೆ ನಿಜವಾದ ಶಾಪವಾಯಿತು. ಯಾಕೆಂದರೆ ಅದು ಆಕೆಗೆ ದಿನವೂ ನೆನಪಾಗುವ ಕ್ರಿಯೆ. ಆತ ನನಗೆ ನೆನಪಾಗುತ್ತಿಲ್ಲ ಎನ್ನುವುದು ಶೋಕವಲ್ಲ ಆದರೆ, ಆತನಿಗೆ ನಾನು ನೆನಪಾಗಲಿಲ್ಲ ಎಂಬ ಶೋಕ ದೊಡ್ಡದು.
ಜೋಗಿಯವರು ಈ ಕುರಿತು ಸುದೀರ್ಘವಾಗಿ ಒಂದು ಲೇಖನದಲ್ಲಿ ಬರೆದಿದ್ದರು.

ಶತಮಾನಗಳ ಹಿಂದೆ ದಾಖಲಾದ ಈ ಕಾವ್ಯಪ್ರಸಂಗ ಇಂದಿಗೂ ಪ್ರಸ್ತುತ. ಪ್ರೇಮಿಗಳ ದಿನವಾದ ಇಂದು ಅದೆಷ್ಟೋ ಶಾಕುಂತಲೆಯರು ಮರೆತ ದುಷ್ಯಂತನ ಬಗೆಗೆ ಶೋಕಿತರಾಗಿರಬಹುದು (ದುಷ್ಯಂತನನ್ನು ಮರೆತ ಶಾಕುಂತಲೆಯರೂ ಇರಬಹುದು)

ಅಲ್ಲಿ ದುಷ್ಯಂತನ ಮರೆವಿಗೆ ದೂರ್ವಾಸರ ಶಾಪವಾದರೂ ಕಾರಣ. ಆದರೆ ಇಂದಿನ ಪ್ರೇಮಿಗಳ ನಡುವಿನ ಮರೆವಿಗೆ ಕಾರಣಗಳಿದೆಯೆ??

ಕಥೆ ಮುಂದುವರೆಸೋಣ ಬಿಡಿ, ಹೀಗೆ ಆಶ್ರಮಕ್ಕೆ ಬಂದು ಭರತ (ಭರತನಿಂದಲೇ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂತು) ಎಂಬ ಮಗನನ್ನೂ ಹೆತ್ತು ಬದುಕು ಸಾಗಿಸುತ್ತಿರುತ್ತಾಳೆ ಶಾಕುಂತಲೆ. ಈ ನಡುವೆ ಮೀನುಗಾರನಿಗೆ ಸಿಕ್ಕ ಮೀನಿನ ಹೊಟ್ಟೆಯೊಳಗಿದ್ದ ಉಂಗುರ ರಾಜನ ಆಸ್ಥಾವನ್ನು ತಲುಪಿ ದುಷ್ಯಂತನಿಗೆ ತನ್ನ ಪೂರ್ವವೃತ್ತಾಂತ ನೆನಪಾಗಿ ಆತ ಶಾಕುಂತಲೆಯ ಬಳಿಗೆ ಬರುತ್ತಾನೆ. ಅಲ್ಲಿಗೆ ಎಲ್ಲವೂ ಸುಖಾಂತ್ಯವಾಗುತ್ತದೆ.

ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ನೆನಪಾಗಿಸಲು ಯಾವ ಮೀನಿನ ಹೊಟ್ಟೆ ಕೊಯ್ದು ಉಂಗುರ ತೆಗೆವ ಅನಿವಾರ್ಯತೆ ಇಲ್ಲ. ಅಭಿಜ್ಞಾನವಾಗಿ (ನೆನಪಿನ ಗುರುತು) ಫೋಟೊ, ಸೆಲ್ಫಿ, ವಾಟ್ಸ್ ಆ್ಯಪ್ ಚ್ಯಾಟ್ ಗಳು ದಂಡಿಯಾಗಿ ಸಿಗುತ್ತವೆ. ಅಷ್ಟಿದ್ದರೂ ಮರೆತದ್ದು ನೆನಪಾಗುವುದಿಲ್ಲ!!!

ಅಲ್ಲಿಗೇನು, ದುಷ್ಯಂತನೇನೂ ಉದ್ದೇಶ ಪೂರ್ವಕ ಮರೆತದ್ದಲ್ಲ ಹಾಗಾಗಿ ಉಂಗುರ ಕಂಡು ನೆನಪಾಯಿತು. ಇಂದು ಪ್ರೇಮಿಗಳಿಗೆ ಮರೆವು ಉದ್ದೇಶಪೂರ್ವಕ ಹಾಗಾಗಿ ನೆನಪಾದರೂ ಹೇಗಾದೀತು? 

ಇಬ್ಬರ ನಡುವೆ ಮರೆವು ನೆನಪುಗಳ ಗೊಂದಲವನ್ನುಂಟು ಮಾಡಿದ ಆ ದುಷ್ಯಂತ ಶಾಕುಂತಲೆಯ ಕಥೆಯನ್ನು ಇಂದಿನ ಕಾಲಘಟ್ಟಕ್ಕೆ ಎಳೆದು ತಂದು ವಿಶ್ಲೇಷಿಸಿದಾಗ ಇಂದಿನ ಪ್ರೇಮಿಗಳ ದಿನ ಆ ಕಥೆ ಮರೆವು ಮತ್ತು ನೆನಪುಗಳ ನಡುವೆ ಒಂದು ಸೇತುವೆಯಾಗಿ ನಿಲ್ಲುತ್ತದೆ. ಮರೆಯದೆ ನೆನಪಾಗಿಸುವ ಪ್ರೀತಿಗೆ ಅಮರ ಪ್ರೇಮದ ಸಂದೇಶವಾಗುತ್ತದೆ.

ಯೋಗೀಶ್ ಮಲ್ಲಿಗೆಮಾಡು

Monday, 12 February 2018

ವಂದೇ ಶಿವಂ ಶಂಕರಂ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 27

ಹಿಂದೂ ದೇವತೆಗಳಲ್ಲಿ ಅತ್ಯಂತ ಗೂಢನೂ ನಿಗೂಢನೂ ಆದ ಶಿವ ಅರಿತರೂ ಅರಿಯಲಾಗದ ಅಗಾಧ ರೂಪ. ಆತನನ್ನು ಹಿಡಿದಿಡುವ ಸಣ್ಣ ಪ್ರಯತ್ನ ಈ ಶಿವರಾತ್ರಿಗಾಗಿ

ಶಿವ ಎಂದರೆ ಮಂಗಲ, ಶುಭ 🕉 ಎಂಬ ಅರ್ಥವಿದೆ. ತಥ ಶಿವನ ಆರಾಧನೆ ಮಂಗಲವನ್ನೂ ಶುಭವನ್ನೂ ಉಂಟುಮಾಡುತ್ತದೆ.
ಶಿವ ಪಂಚಭೂತಗಳಾದ ಅಗ್ನಿ 🔥 ವಾಯು 🌬 ಅಪ್ (ನೀರು) 🌊,  ಆಕಾಶ ☄ಮತ್ತು ಭೂಮಿಯಿಂದ🌍 ಸಂಪೂರ್ಣನು. ಹಾಗಾಗಿ ಶಿವನ ಹಣೆಯ ಕಣ್ಣಿನ 👁ಬೆಂಕಿ ಅಗ್ನಿಯನ್ನೂ 🔥, ಶಿವನ ಕುತ್ತಿಗೆಯಲ್ಲಿರುವ ಹಾವು🐍 ಗಾಳಿಯನ್ನೂ 🌬(ಗಾಳಿ- ಹಾವು ಗಾಳಿ ಸೇವಿಸಿ ಬದುಕಬಲ್ಲದು), ಶಿವನ ತಲೆಯ ಮೇಲಿನ ಗಂಗೆ 👧 ನೀರನ್ನೂ 🌊(ಅಪ್- ನೀರು), ಶಿವನ ನೀಲಿ ಗಂಟಲು ಆಕಾಶವನ್ನೂ ☄ (ಆಕಾಶ- ಆಕಾಶದ ನೀಲಿ ಬಣ್ಣ) ಹಾಗೂ ಶಿವನ ತೊಡೆಯ ಮೇಲಿನ ಗೌರಿ👱‍♀ ಭೂಮಿಯನ್ನೂ🌍 (ಭೂಮಿ- ಆಕೆ ಪರ್ವತ ರಾಜನ ಮಗಳು) ಆತನಿಗೆ ಆರೋಪಿಸಿ ಪಂಚಭೂತಗಳಿಂದ ಆತ  ಸಂಪೂರ್ಣ ಎಂಬ ತತ್ವವನ್ನು ತಿಳಿಸುತ್ತದೆ.

ಚಂದ್ರ 🌝ಮನೋಕಾರಕ, ಮನಸ್ಸಿನ 🧠ವಿಕಾರತೆಯಲ್ಲಿ ಚಂದ್ರನ 🌜ಪ್ರಭಾವ ಹೆಚ್ಚು ಶಿವನು ಮನಕ್ಲೇಶ🙇🏽‍♂ ನಿವಾರಿಸುವನು ತನ್ಮೂಲಕ ಮಂಗಲವನ್ನು ಕರುಣಿಸುತ್ತಾನೆ. ಹಾಗಾಗಿ ಆತನ ಶಿರದಲ್ಲಿ ಅರ್ಧ ಚಂದ್ರನನ್ನು 🌛ಧಾರಣೆ ಮಾಡಿದ್ದಾನೆ.

ಆತ ಜಗತ್ತಿಗೆ ಒಡೆಯನಾದ ಪಶುಪತಿ 🐮🙌🏼ಆದರೆ ಆತ ಸ್ಮಶಾನವಾಸಿ ☠👻.

ಆತನ ಮಡದಿ ಸ್ವಯಂ ಅನ್ನಪೂರ್ಣೆ 🍛ಆದರೆ ಆತ ಕಪಾಲಿ ( ಕಪಾಲ ಅರ್ಥಾತ್ ತಲೆಬುರುಡೆ) 💀ಹಿಡಿದು ಭಿಕ್ಷೆ ಎತ್ತುತ್ತಾನೆ.

ಆತ ರುದ್ರಭೀಕರ👺 ಆದರೆ ಜನ ಆತನನ್ನು ಶಿವ 🙌🏼(ಶಿವ ಅರ್ಥಾತ್ ಒಳಿತು, ಸಂತೋಷ) ಎನ್ನುತ್ತಾರೆ.
ಹಣೆಯ ಕಣ್ಣು 👁ಬೆಂಕಿ🔥 ಉಗುಳಿದರೆ ತಲೆಯಮೇಲೆ ಶಾಂತ ಗಂಗೆ 💦
ಹೀಗೆ, ಒಂದಕ್ಕೊಂದು ತಾಳೆಯಾಗದ ಅಥವಾ ತಾಳೆಯಾಗಿಯೂ ನಮಗೆ ಅರ್ಥವಾಗದ ❓ಅಮೋಘ ರೂಪು ಆತನದು. ಸನಾತನ ಧರ್ಮದ ಬೇರಾವ ದೇವರಲ್ಲೂ ಇಂತಹ ವೈರುಧ್ಯ ಕಾಣಲಾಗದು.
ನೀರು 💦ಮತ್ತು ಭೂಮಿ🏜 ಬದುಕಿಗೆ ಅನಿವಾರ್ಯ. ಅವೆರಡನ್ನೂ ಶಿವನ ಪತ್ನಿಯರಾಗಿ ಸಮೀಕರಿಸಿದೆ. ತಲೆಯ ಮೇಲೆ ಗಂಗೆಯನ್ನು ಹೊತ್ತು ಆತ ಗಂಗಾಧರ. ಶಿವನ ಎದೆಯಲಿ ಗೌರಿಯನ್ನು ಧಾರಣೆಮಾಡಿ ಆತ ಗೌರಿ ಶಂಕರ. ಈ ಗೌರಿಶಂಕರನ ಮಗನಾಗಿ ಹುಟ್ಟುವ ಗಣಪತಿ ಕ್ರಿಷಿಯ ಮೂರ್ತರೂಪವಾಗಿ ಮೈದೆಳೆಯುತ್ತಾನೆ. ನೀರು💦 ಮತ್ತು ಭೂಮಿಯಿಂದ 🏜ಸಮ್ರದ್ಧ ಕ್ರಿಷಿಯಾದಾಗ🌱🌴🌳 ಶುಭ ಲಾಭಗಳು ಉಂಟಾಗುತ್ತವೆ. ತಸ್ಮಾತ್ ಶಿವನ ಈ ಎಲ್ಲಾ ತತ್ವಗಳ ಕೇಂದ್ರನಾಗಿದ್ದಾನೆ.

ಶಿವನ ಸಂಸಾರವೂ ವೈರುಧ್ಯಗಳ ಸಂಗಮಸ್ಥಾನ. ಶಿವನ ವಾಹನ ನಂದಿಗೆ🐂 ಪಾರ್ವತಿಯ ವಾಹನ ಸಿಂಹ🦁 ವೈರುಧ್ಯ, ಗಣಪತಿಯ ವಾಹನ ಇಲಿಯ 🐁ಮೇಲೆ ಶಿವನ ಕುತ್ತಿಗೆಯ ಹಾವಿನ 🐍ವೈರುಧ್ಯ, ಹಾವಿನ🐍 ಮೇಲೆ ಶಿವನ ಮತ್ತೋರ್ವ ಮಗ ಸ್ಕಂದನ ( ಸುಬ್ರಹ್ಮಣ್ಯ) ನವಿಲಿನ🦃 ವೈರುಧ್ಯ ಹೀಗೆ ಎಲ್ಲಾ ವೈರುಧ್ಯಗಳ ನಡುವೆ ಶಿವ ಶಾಂತನಾಗಿ ಕುಳಿತ ಭಂಗಿ ಬದುಕಿನ ಜಂಜಡಕ್ಕೊಂದು ಪಾಠವೇ ಸರಿ

ಒಲಿದವರಿಗೆ ಏನನ್ನೂ ಕೊಡುವ ದೇವ. ರಾವಣಗೆ 🤴🏻ತನ್ನ ಆತ್ಮವನೇ 👤ನೀಡಿದ ಭಕ್ತರ ಭಕ್ತ. ಭಕ್ತಿ ಮಾರ್ಗದಲ್ಲಿ ಸಾಗುವವರಿಗೆ ಸುಲಭದಲ್ಲಿ ಅರ್ಥವಾಗುವನು ಎಂಬ ಸಂದೇಶ ನೀಡುತ್ತದೆ.

ಕಾಮನನ್ನೆ 🌈ತನ್ನ ಮೂರನೇ ಕಣ್ಣಿಂದ 👁ಧಹಿಸಿದ🔥 ಮದನಾರಿ. ಮೂರನೇ ಕಣ್ಣು ಲೌಕಿಕ ಆಸಕ್ತಿಯಿಂದ ಅಲೌಕಿಕದೆಡೆಗೆ ತೆರೆದುಕೊಳ್ಳುವ ಸಂದೇಶ ನೀಡುತ್ತದೆ.

ದಕ್ಷನ ಮಗಳಾದ ದಾಕ್ಷಾಯಿನಿ (ಸತಿ) 👰🏻ಯಜ್ಞದಲ್ಲಿ 🔥 ದಹಿಸಿಕೊಂಡಾಗ ಸತಿಯ ಪತಿ ಶಿವ ರುದ್ರಭೀಕರ. ಪತಿ ಪತ್ನಿಯ ಪ್ರೇಮಾನುರಾಗದ ಸಂಕೇತ ಸತಿ ಮತ್ತು ಈಶ.

ಅಪಸ್ಮಾರ ( ಅಜ್ಞಾನದ ಸಂಕೇತದ ರಾಕ್ಷಸ) ಅಸುರನನ್ನು ತನ್ನ ತಾಂಡವ ನ್ರತ್ಯದ ಮೂಲಕ ಕಾಲಿನಡಿ ಮೆಟ್ಟಿ ನಿಂತ ಶಿವ ಜಗತ್ತಿಗೆ ನೀಡಿದ ಸಂದೇಶ ಅಜ್ಞಾನ 🌑ಕೇವಲ ಜ್ಞಾನದಿಂದ🌕 ಮಾತ್ರ ನಾಶಮಾಡಲು ಶಕ್ತ.

ಶಿವನ ಅರ್ಧ ದೇಹವನ್ನು ತನ್ನ ಮಡದಿಗೆ ನೀಡಿ ಪ್ರಕ್ರತಿ ಪುರುಷ ತತ್ವವನ್ನು ತಿಳಿಸಿ ಅರ್ಧನಾರೀಶ್ವರನಾದ.

ಆತ ಲೇಪಿಸಿದ ಚಿತಾಭಸ್ಮ ಎಲ್ಲಾ ನಾಶದ ನಂತರ ಉಳಿದು ಹೋಗುವ ಆತ್ಮವನ್ನು👻 ಪ್ರತಿನಿಧಿಸುತ್ತದೆ. ಆತ ಸಕಲ ಜೀವದ ಲಯಕಾರಕ.

ಶಿವರಾತ್ರಿ ಬರೀ ಜಾಗರಣೆ ಅಲ್ಲ ಅದು ರಾತ್ರಿಯ ಕತ್ತಲಿನ ಆಚೆಗಿನ ಬೆಳಕಿನ ಅರ್ಥ ಹುಡುಕುವ ಸೊಗಸು. ಕಾಲ 🌏( ಲಯ) ಅರ್ಥಾತ್ ಶಿವ,  ಕಾಲದ (ಲಯದ) ಆಚೆಗಿನ ಜೀವದ ನಿಜಾರ್ಥವನ್ನು ತೋರಿಸುವುದೇ ಶಿವರಾತ್ರಿಯ ಉದ್ದೇಶ. ಬದುಕಿನ ಗುಟ್ಟು ಮತ್ತು ಅಮರತ್ವವನ್ನು ಪಾರ್ವತಿಗೆ ಅಮರನಾಥದಲ್ಲಿ ಭೋಧಿಸಿದ ಶಿವ ಜೀವ ಮತ್ತು ಕಾಲದ ನಡುವಿನ ಸೇತುವೆಯಾಗಿದ್ದಾನೆ.

ಇಂತಹ ಶಿವ ತಲೆಯ ಮೇಲೆ ಗಂಗೆ ಹೊತ್ತು ಗಂಗಾಧರ, ಚಂದ್ರನನು ಧರಿಸಿ ಚಂದ್ರಶೇಖರ, ಹಣೆಗಣ್ಣ ಫಾಲಾಕ್ಷಾ, ಗೌರಿ ಸಮೇತ ಗೌರೀಶ, ಭಸ್ಮ ಲೇಪಿತ ಭಸ್ಮಧಾರಿ, ಸ್ಮಶಾನವಾಸಿ, ತ್ರಿಶೂಲ ಹಿಡಿದ ತ್ರಿಶೂಲಪಾಣಿ, ಬಿಲ್ವದ ಎಲೆಗೂ ಒಲಿಯುವ ಭಕ್ತಸಾಗರ, *ಯೋಗಿಗಳ ಯೋಗಿ ಯೋಗೀಶ*

ಈ ಶಿವರಾತ್ರಿ ಬದುಕಿನ ಅರ್ಥವನ್ನು ನಮಗೆ ತೋರಿಸಿ ಕೊಡಲಿ ಎಂದು ಆಶಿಸುತ್ತಾ *ಶಿವ ತ್ರಯೋದಶಿಯ ಶುಭಾಶಯಗಳು*

ಯೋಗೀಶ್ ಮಲ್ಲಿಗೆಮಾಡು

Sunday, 11 February 2018

ತುಳುನಾಡಿನ ಸಿರಿ ಬದುಕು ಭಾಗ-1

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-26

ಇಂದು ಕೆಡ್ಡಸವಾದುದರಿಂದ ತುಳುನಾಡಿನ ಬಗ್ಗೆ ಒಂದು ಸಂಕ್ಷಿಪ್ತ ಅಂಕಣ

ಕರ್ನಾಟಕ 🌼ಮತ್ತು ಕೇರಳದ🌴 ಕರಾವಳಿ 🌊 ಪ್ರದೇಶಗಳನ್ನೊಳಗೊಂಡ ಒಂದು ಭೂಭಾಗವೇ ತುಳುನಾಡು 🌍. ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡುಗಳನ್ನು ತನ್ನ ಸೀಮೆಯಾಗಿ ಹೊಂದಿದೆ. "ತುಳು" ಭಾಷೆಯನ್ನಾಡುವ ಜನರಿರುವ ಪ್ರದೇಶವು ಸಹಜವಾಗಿಯೇ ತುಳುನಾಡು ಎಂದು ಕರೆಯಲ್ಪಟ್ಟಿದೆ.

ಮೂಲದ್ರಾವಿಡವು 🐾ತಮಿಳು  ನಾಡಿನಲ್ಲಿ ಉದಿಸಿತು, ತದನಂತರದಲ್ಲಿ ಕನ್ನಡದಂತೆ ತುಳು ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದು ಸ್ವತಂತ್ರಗೊಂಡಿತು ಎಂದು ಭಾಷಾ ತಜ್ಞರು ಅಭಿಪ್ರಾಯಿಸುತ್ತಾರೆ. ತುಳು ಮತ್ತು ಹಳೆಗನ್ನಡದ ಹಲವು ಶಬ್ಧಗಳು ಸಾಮ್ಯತೆಯನ್ನು ಹೊಂದಿದ್ದು ತುಳು ತನ್ನ ಮೂಲಸ್ವರೂಪವನ್ನು ಇನ್ನೂ ಉಳಿಸಿಕೊಂಡು ಬಂದಿರುವುದಕ್ಕೆ ಸಾಕ್ಷಿ. (ಹಕ್ಕಿ-ಪಕ್ಕಿ, ಪಾಡು-ಪಾಡ್ದಾನ, ಹಲ್ಲಿ-ಪಲ್ಲಿ, ಅಪ್ಪೆ-ಅಮ್ಮ, ಅಮ್ಮೆ-ಅಪ್ಪ)

ತುಳುನಾಡಿನ ಜನ ಇಡೀ ಭಾರತದ 🇮🇳ಪರಿಕಲ್ಪನೆಯನ್ನು ತುಳುನಾಡ ಸೀಮೆಯಲ್ಲೇ ಕಂಡುಕೊಂಡರು. ತುಳುನಾಡಿನ ಸೀಮೆಯಲ್ಲಿರುವ ಘಟ್ಟಗಳನ್ನೇ ಕೈಲಾಸವೆಂದು ⛰ಪರಿಭಾವಿಸಿ, ಆ ಘಟ್ಟದ ಆ ಕಡೆಯಿಂದಲೇ ಶಿವನ ಗಣಗಳು 👺ಧರ್ಮ ನೆಲೆ ಮಾಡಲು ಇಲ್ಲಿಗೆ ಬಂದರು ಎಂದು ಇಲ್ಲಿನ ಬಹು ಪುರಾತನ ನಂಬಿಕೆ. ಅಂತೆಯೇ, ಇಂದಿಗೂ ಧರ್ಮದ ನೆಲೆಬೀಡಾಗಿರುವ ತುಳುನಾಡು ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಸಭ್ಯ, ಶಿಸ್ತಿನ, ಶಿಕ್ಷಿತ, ಸಾಮಾಜಿಕ ಪ್ರಜ್ಞೆ, ಸತ್ಯ, ನ್ಯಾಯಗಳ ಪ್ರದೇಶವಾಗಿದೆ.
ಪರುಶುರಾಮನೇ ತನ್ನ ಕೊಡಲಿಯಿಂದ⛏ ಈ ಭೂಭಾಗವನ್ನು ಸೃಷ್ಟಿಸಿದ ಎಂಬ ನಂಬಿಕೆ ಪುರಾತನವಾದುದು. ಪರಶುರಾಮನ ಆಜ್ಞೆಗೆ ಕಡಲು🌊 ಹಿಂದೆ ಸರಿದು ಇಲ್ಲಿ ಜನವಸತಿಗೆ ಅನುವು ಮಾಡಿಕೊಟ್ಟಿತು ಎಂದು, ಉಪ್ಪಾದ ನೆಲಗಳನ್ನು ನಾಗಗಳು 🐍ಫಲವತ್ತಾಗಿಸಿತು ಎಂದು ಪ್ರತೀತಿ. ಇದನ್ನು ನೆನೆದು ನಾಗಗಳಿಗೆ ತನಿ ಎರೆದು ಸಂತೃಪ್ತಿ ಪಡಿಸುವ ಸಂಪ್ರದಾಯವು ತುಳುನಾಡಿನ ಒಂದು ವಿಶಿಷ್ಟ ಪದ್ಧತಿ.

ಪಶ್ಚಿಮ ಘಟ್ಟದಿಂದಾವೃತವಾದ 🏞 ಈ ಪ್ರದೇಶದಲ್ಲಿ ವಾಸಿಸುವ ಸಲುವಾಗಿ ನಮ್ಮ ಪೂರ್ವಜರು ಇಲ್ಲಿನ ಕಾಡುಗಳನ್ನು ಕೊಡಲಿಯಿಂದ ಕಡಿದು ಯೋಗ್ಯ ಭೂಮಿಗಳಾಗಿ ನಿರ್ಮಾಣ ಮಾಡಿದರು ಹಾಗಾಗಿ ಇದು ಪರಶುರಾಮ (ಕೊಡಲಿ) ಕ್ಷೇತ್ರ ಎಂದು ಬಣ್ಣಿಸಲಾಗುತ್ತದೆ. ಕಾಡಾದುದರಿಂದ ಹಾವುಗಳು🐍🐍 ಅಧಿಕವಾಗಿರುವುದು ಸಹಜ, ಆ ಹಾವುಗಳ ನೆಲೆಕೆಡವದಿರಲು ಹಾವುಗಳನ್ನು ನಾಗನಬನ, ನಾಗನ ಕೆರೆ ಎನ್ನುವ ಹೆಸರುಗಳಲ್ಲಿ ರಕ್ಷಿಸುವ ಸಲುವಾಗಿ ಪೂಜಿಸಿದರು. ನಾಗ ದರ್ಶನ, ನಾಗಮಂಡಲಗಳು ಇವುಗಳು ಇಲ್ಲಿಯ ಅನನ್ಯ ಆಚರಣೆಗಳಲ್ಲಿ ಒಂದು.

ಇಂತಹ ತುಳುನಾಡಿನ ಕಲೆ, ಸಂಪ್ರದಾಯಗಳು ಅದ್ಭುತವಾದುದು. ಅವುಗಳಲ್ಲಿ ಒಂದು ಕೆಡ್ಡಸ.
ತುಳು ಆಚರಣೆಗಳಲ್ಲಿ ಕೆಡ್ಡಸ ಅಥವಾ ಕೆಡ್ಡೊಸ ಅನ್ನುವುದು ಒಂದು ಸುಂದರ ಕಲ್ಪನೆಯ ಆಚರಣೆ. ಭೂಮಿ ತಾಯಿಯು🌏 ಋತುಮತಿ ಆಗುವ ನಂಬಿಕೆ ಇಲ್ಲಿದೆ. ಈ ಸಮಯದಲ್ಲಿ ಭೂಮಿಯನ್ನು ಆಯುಧಗಳಿಂದ ⛏🗡 ಅಗೆಯಬಾರದೆಂಬ ನಿಯಮವಿದೆ. ಚಳಿಗಾಲದ ಸಂದರ್ಭವಾದ ತುಳು ತಿಂಗಳಾದ ಪುಯಿಂತೆಲ್ (ಮಕರ) ಶಿಶಿರ ಋತುವಿನಲ್ಲಿ ಮರಗಿಡಗಳು ಎಲೆಯುದುರಿಸಿ 🍂 ಹೂಗಳಿಲ್ಲದೆ ಇರುವ ಹೊತ್ತಲ್ಲಿ ಭೂಮಿಯು ಮುಂದೆ ಸುಗ್ಗಿ (ಮೀನ) ಎಂಬ ವಸಂತ ಋತುವಿನಲಿ ಹೂ 🌼 ಹಣ್ಣು🍊 ಚಿಗುರು ಎಲೆಗಳಿಂದ🍃 ಕಂಗೊಳಿಸುವಂತೆ ಬರಲಿರುವ ವಸಂತ ಋತುವಿಗೆ ಮುನ್ನ ಮಾಡುವ ಈ ಆಚರಣೆ ಮದುಮಗಳಿಗೆ 🧚🏻‍♀ಮಾಡುವ ಶಾಸ್ತ್ರದ ಕಲ್ಪನೆಯೇ ಆಗಿದೆ.

ದೈವಾರಾಧನೆ ಭೂತಕೋಲಗಳು ಇಲ್ಲಿಯ ಮೂಲ ದ್ರಾವಿಡ ಪದ್ಧತಿಗೆ ಹಿಡಿದ ಕೈಗನ್ನಡಿ. ತುಳುನಾಡಿನ ದೈವಾರಾಧನೆಯೂ ಇಂತಹ ಒಂದು ದ್ರಾವಿಡ ಪದ್ಧತಿಯಾಗಿದೆ. ಇಲ್ಲಿ ಗಂಟೆ, ಜಾಗಟೆ, ದೀಪಾರತಿ, ಪುಷ್ಪಾರ್ಚನೆಗಳು ಕಂಡು ಬರುವುದಿಲ್ಲ ಬದಲಾಗಿ ಮಣಿಗಂಟೆ, ಧೂಪ, ದೊಂದಿಗಳೇ ಪ್ರಾಮುಖ್ಯ ಪಡೆಯುತ್ತವೆ. ಮಂತ್ರಾರ್ಚನೆಗಳಿಲ್ಲದೆ ಪಾಡ್ದಾನಗಳೇ ಪ್ರಾಮುಖ್ಯತೆ ಪಡೆಯುತ್ತವೆ. ಬಣ್ಣ, ಹಾಡುಗಾರಿಕೆ, ವಾದ್ಯ, ವೇಷ ಭೂಷಣ, ನರ್ತನಗಳ ಅನನ್ಯ ಕಲೆಯೇ ಕೋಲ ನೇಮಗಳು. ತುಳುನಾಡ ವೀರರ ಕಥೆಗಳೇ ಇವುಗಳಿಗೆ ಸ್ಫೂರ್ತಿ. ಇದರೊಂದಿಗೆ ಆ ಕಾಲದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ಮಟ್ಟದವರೆಂದು ಕರೆಸಿಕೊಳ್ಳುವವರು ಕೆಳಮಟ್ಟದವರೆಂದು ಬಿಂಬಿಸಲಾದ ಜನಾಂಗದೆದುರು ಕೈ ಮುಗಿದು ನಿಲ್ಲುವುದು ಜಾತಿ ವ್ಯವಸ್ಥೆಯ ಆಚೆಗೆ ತುಳುನಾಡಿನ ನೋಟವನ್ನು ವಿಶದಪಡಿಸುತ್ತದೆ.

ದ್ರಾವಿಡ ಪದ್ಧತಿಯಂತೆ ಪ್ರಕೃತಿ  ಆರಾಧನೆಯೇ ಮುಖ್ಯವಾಗಿ ಇರುವುದರಿಂದ ನಾಗ ಬನ, ದೈವಸ್ಥಾನಗಳು ಗೂಡಿ ಗೋಪುರವಿಲ್ಲದ ಪ್ರಕೃತಿ ಸಹಜ ನೆಲೆಯಾಗಿದ್ದವು ಆದರೆ ಇಂದು ಇವೆಲ್ಲವೂ ಕಾಂಕ್ರೀಟ್ ನೆಲಹಾಸು, ಗೋಪುರ ಕಟ್ಟಡಗಳಾಗಿರುವುದು ವಿಷಾದನೀಯ.

ತುಳು ನಾಡಿನ ಮತ್ತೊಂದು ವಿಶಿಷ್ಟ ಪದ್ಧತಿಯೇ ಉಲೈ ಲೆಪ್ಪುನಿ. ಮರಣಾನಂತರ ವ್ಯಕ್ತಿಯನ್ನು ಮಣ್ಣು ಮಾಡುವ ಯಾ ಚಿತೆಯೇರಿಸುವ ಸಂಪ್ರದಾಯದ ನಡುವೆ ತುಳುನಾಡಿನ ಈ ಉಲೈ ಲೆಪ್ಪುನಿ ಪದ್ಧತಿಯು ಭಿನ್ನವಾದುದು ಮತ್ತು ಉದ್ಧಾತವಾದುದು. ಇಲ್ಲಿ ಸತ್ತ ವ್ಯಕ್ತಿಯ ಸಂಸ್ಕಾರಾನಂತರ ಮತ್ತೆ ಒಳಗೆ ಕರೆಸಿಕೊಳ್ಳುವ ಮತ್ತು ತನ್ಮೂಲಕ ಅವರು ನಮ್ಮೊಂದಿಗೆ ಸದಾ ನೆಲೆಗೊಳ್ಳುತ್ತಾರೆ ಅನ್ನುವ ಕಲ್ಪನೆ ಸಂಬಂಧಗಳು ಸಾವಿನಾಚೆಗೂ ಉಳಿಯುವಂತದ್ದು ಎಂಬ ಸಂದೇಶ ನೀಡುತ್ತದೆ.

ನಾಳಿನ ಅಂಕಣದಲ್ಲಿ ಇನ್ನೊಂದಿಷ್ಟು ತುಳುನಾಡಿನ ಬಗ್ಗೆ ವಿಶ್ಲೇಷಿಸೋಣ

ಯೋಗೀಶ್ ಮಲ್ಲಿಗೆಮಾಡು