ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 29
ತುಳುನಾಡಿನ ಸಾಂಸ್ಕ್ರತಿಕ ಶ್ರೀಮಂತಿಕೆಯು ಈ ನೆಲದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇಲ್ಲಿಯ ಹಳ್ಳಿ ಹಳ್ಳಿಗಳು ದೈವಸಾನಿಧ್ಯದ ಕತೆ ಹೇಳುತ್ತವೆ. ನವೆಂಬರ್ ನಿಂದ ಮೇ ವರೆಗಿನ ರಾತ್ರಿಗಳಲ್ಲಿ ಬೈದೂರಿನಿಂದ ಕಾಸರಗೋಡಿನವರೆಗಿನ ಕರಾವಳಿಯಲ್ಲಿ ಯಕ್ಷಗಾನ, ಭೂತಕೋಲ, ನೇಮ ಮುಂತಾದ ಕಲೆಗಳಿಂದ ವಿದ್ಯುದ್ದೀಪಗಳ ಬೆಳಕಿನಲ್ಲಿ ಇಲ್ಲಿಯ ಕಲಾವೈಭವವನ್ನು ತೆರೆದಿಡುತ್ತವೆ. ಇಂತಹ ತುಳುನಾಡು ಕರ್ನಾಟಕದ ಕರಾವಳಿಯಲ್ಲಿ ಇಲ್ಲದೇ ಇರುತ್ತಿದ್ದರೆ, ಕರ್ನಾಟಕದ ಕರಾವಳಿಗೆ, ಸೊಬಗೇ ಇರುತ್ತಿರಲಿಲ್ಲ.
ಸೌರ ಕಾಲಮಾನವನ್ನೇ ಅವಲಂಬಿಸಿ ಜೀವನ ನಡೆಸುವ ತುಳುನಾಡಿಗೆ ಸೂರ್ಯನ ಸಂಕ್ರಮಣವೇ ಪ್ರಶಸ್ತ. ಅದನ್ನವಲಂಬಿಸಿ ಬರುವ ಆಟಿಯ ತಿಂಗಳು ವಿಶಿಷ್ಟವಾದುದು. ದನಗೋಳಾಗಿ ಸುರಿಯುವ ಮಳೆಯಲ್ಲಿ ಆಟಿ ತಿಂಗಳು ಬಹಳ ಉದಾಸೀನದ ಕಾಲ. ಅದಕ್ಕಾಗಿಯೇ "ಆಟಿ ಆಡೋಂದು ಪೋಪುನ, ಸೋಣ ಓಡೋಂದು ಪೋಪುನ" ಎಂಬ ನುಡಿ ಚಾಲ್ತಿಯಲ್ಲಿದೆ.ಇಂತಹ ಉದಾಸೀನವನ್ನು ಕಳೆದು ಹುರುಪು ಹೊತ್ತು ಬರುವ ಆಟಿ ಕಳೆಂಜ ಮಳೆಗಾಲದಲ್ಲಿ ಬರುವ ಕಾಯಿಲೆಗಳನ್ನು ಓಡಿಸುತ್ತಾನೆ ಎಂಬ ನಂಬಿಕೆಯಿದೆ. "ನಲಿಕೆ" ಎಂಬ ಜನಾಂಗವು ಈ ಕಲೆಯನ್ನು ನಡೆಸಿಕೊಡುತ್ತಾರೆ.
ಕಂಗೀಲು ಕುಣಿತ: ತುಳುನಾಡಿನ ಒಂದು ವಿಶಿಷ್ಟ ಆರಾಧನಾ ಕಲೆ ಇದಾಗಿದೆ. ಮಾರಿ ಓಡಿಸುವ ಕಲ್ಪನೆಯಲ್ಲಿ ಕಂಗೀಲು ಕುಣಿತದ ಸೇವೆ ಮಾಡಲಾಗುತ್ತದೆ. ಮುಂಡಾಲ, ಗೊಡ್ಡ ಜನಾಂಗದವರು ನಡೆಸಿಕೊಡುವ ಈ ಸೇವೆ ರೊಗರುಜಿನದಿಂದ ರಕ್ಷಣೆ ಹಾಗೂ ಸಮ್ರದ್ಧಿಯ ಆಶಯದಲ್ಲಿ ನಡೆಯುವಂತದ್ದು. ಮಾಯಿ ತಿಂಗಳಿನಲ್ಲಿ ಹುಣ್ಣಿಮೆಯ ಬೆಳಕಿನಿಂದ ಶುರುಮಾಡಿ ಈ ಆರಾಧನಾ ಕಲೆಯನ್ನು ನೆರೆವೇರಿಸಲಾಗುತ್ತದೆ.
ಕಾಲೇಕೋಲ ಎನ್ನುವ ಒಂದು ವಿಶಿಷ್ಟ ಕೋಲವು ಈ ನೆಲದಲ್ಲಿ ನಡೆಯುತ್ತಿತ್ತು ಎಂದು ಆತ್ಮೀಯ ಪ್ರದೀಪ್ ಉಲ್ಲೇಖಿಸಿದ್ದರು. ಮನೆಯ ಹಿರಿಯರು ಮರಣ ಹೊಂದಿದಾಗ ಅವರನ್ನು ಮೈಯಲ್ಲಿ ಆವಾಹಿಸಿ ಮಾಡುವ ಸೇವೆಯೇ ಕಾಲೇಕೋಲ. ಹಿರಿಯರ ಆಸೆಯನ್ನು ತೀರಿಸುವ ಸಲುವಾಗಿ ಈ ಸೇವೆ ವಿಶಿಷ್ಟವಾದುದು.
ಯಕ್ಷಗಾನವು ಇಂದು ಒಂದು ಅಮೋಘ ಕಲೆಯಾಗಿ ವಿಶ್ವವಿಖ್ಯಾತವಾಗಿದೆ. ತುಳುವಿನಲ್ಲಿ ಇದು ಆಟವೆಂದೇ ಪರಿಚಿತ. ಬಣ್ಣ, ವೇಷ, ನ್ರತ್ಯ, ಸಂಭಾಷಣೆ, ನಾದ, ಅಭಿನಯಗಳ ಸಮ್ಮಿಲನವು ಯಕ್ಷಗಾನದ ಜೀವಂತಿಕೆ. ಕಂಬಳ, ಕೋರಿಕಟ್ಟ, ಸುಗ್ಗಿ ಕುಣಿತ, ಓಬೇಲೆ ಹಾಡು, ಹುಲಿವೇಷ ಮುಂತಾದವು ತುಳುನಾಡಿನ ಜಾನಪದ ಶ್ರೀಮಂತಿಕೆ
ಶೈವ, ವೈಷ್ಣವ, ಶಾಕ್ತ ಪಂಥಗಳು ಪಸರಿಸಿದ; ಜೈನ ಧರ್ಮ ಉಚ್ಛ್ರಾಯ ಕಂಡ ಪ್ರದೇಶಗಳಲ್ಲಿ ತುಳುನಾಡು ಕೂಡ ಒಂದು. ಬ್ಯಾರಿ, ಕೊಂಕಣಿ, ತುಳು, ಕನ್ನಡಗಳು ಇಲ್ಲಿ ಜೊತೆಜೊತೆಯಾಗಿ ಮುಂಬರಿದಿದೆ. ಸೀಮೆಗಳ ಪಂಥಗಳ ಮೀರಿ ಇಲ್ಲಿ ಭಾಷೆಗಳು ನಲಿದಾಡಿದೆ. ವಿಶಾಲಕಡಲಿನ ತಟದ ಮರಳು, ತೇಲಿ ತೂಗಿ ಓಲಾಡುವ ದೋಣಿ, ಬೀಸಿ ಒಗೆಯುವ ಬಲೆಯ ತುಂಬಾ ಮೀನು ರಾಶಿ.
ಜಾತ್ರೆಗಳಿಗೆ ತೆರೆಯೆಳೆಯುವಂತೆ, ಯಕ್ಷಗಾನದ ಗೆಜ್ಜೆ ಬಿಚ್ಚುವಂತೆ ಪತ್ತನಾಜೆ ಆಚರಣೆಗಳು, ಸೋಣೆಯ ಸಂಭ್ರಮದ ಹಬ್ಬಗಳು ಇಲ್ಲಿಯ ಸೊಗಡನ್ನು ಶ್ರೀಮಂತಗೊಳಿಸಿದೆ. ಇಂತಹ ತುಳುನಾಡಿನ ಸಿರಿಬದುಕನ್ನು ಕಣ್ತುಂಬಲು ಇಲ್ಲಿಯ ನೈಜ ಆಚರಣೆಗಳೇ ನೋಡಬೇಕು.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.