ಭಾರತದ ಹಲವು ಹಬ್ಬಗಳ ಸಾಲಿನಲ್ಲಿ ಬಣ್ಣಗಳ ಹೊತ್ತು ಬರುವ ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬವೆಂದೇ ಕರೆಯಲಾಗುತ್ತದೆ. ಇದು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಬಣ್ಣಗಳನ್ನು ಹಚ್ಚಿ ಆಚರಿಸುವ ಈ ಹಬ್ಬದ ಮೂಲ ತತ್ವವೇನು ಅನ್ನುವುದನ್ನು ಕೊಂಚ ಅವಲೋಕಿಸೋಣ.
ನಮ್ಮಲ್ಲಿ ಕಾಲ ಕಾಲಗಳು ಬದಲಾಗುವ ಸಂಧಿಕಾಲಗಳಲ್ಲಿ ಹಬ್ಬಗಳನ್ನು ಆಚರಿಸುವುದನ್ನು ನೋಡಿದ್ದೇವೆ. ಮಳೆಯಿಂದ ಚಳಿಗಾಲದೆಡೆಗೆ ಹೊರಳುವ ಸಂಕ್ರಮಣದಲ್ಲಿ ದೀಪಾವಳಿ, ಚಳಿಯಿಂದ ಬಿಸಿಲೆಡೆಗೆ ಹೊರಳುವ ಮಕರ ಸಂಕ್ರಾಂತಿ, ಆಷಾಢದಿಂದ ಮಳೆಯೆಡೆಗೆ ಹೊರಳುವ ಶ್ರಾವಣ ಹಬ್ಬಗಳು, ವಸಂತನ ಆಗಮನದ ಯುಗಾದಿ ಇತ್ಯಾದಿ. ಅಂತಹುದೇ ಸಂಧಿಕಾಲದಲ್ಲಿ ಬರುವ ಹಬ್ಬ ಹೋಳಿ.
ಹೋಳಿ ಹಬ್ಬವು ಫಾಲ್ಗುಣದ ಕೊನೆಯ ದಿನಗಳಲ್ಲಿ ಆಚರಿಸಲಾಗುತ್ತದೆ. ಫಾಲ್ಗುಣ ಚಲಿಗಾಲ ಅಂತ್ಯವಾಗುವ ಮಾಸ. ಮುಂದೆ ಬರಲಿರುವುದು ವಸಂತಕಾಲ. ವಸಂತಕಾಲ ಅತ್ಯಂತ ಸುಂದರ ಕಾಲ ಎಲ್ಲೆಲ್ಲೂ ಹೂಗಳು ಅರಳಿ, ಹೊಂದಳಿರು, ಹಸಿ ಚಿಗುರಿನ ನೋಟ ಸೊಗಸೀಯುತ್ತದೆ. ಹಾಗಾಗಿ ಬಣ್ಣ ತುಂಬಿದ ಭುವಿಯನ್ನು ಬಣ್ಣಗಳಿಂದಲೇ ಎದುರುಗೊಳ್ಳುವ ಹಬ್ಬ ಹೋಳಿ ಹಬ್ಬ.
ಹೋಳಿ ಹಬ್ಬವು ಕೇವಲ ಬಣ್ಣ ಹಚ್ಚುವುದಷ್ಟೇ ಅಲ್ಲ ಬದಲಾಗಿ ಕಾಮದಹನವೂ ಕೂಡ ನಡೆಸಲಾಗುತ್ತದೆ. ಅರ್ಥಾತ್ ಊರಿನ ಒಂದು ನಿಗದಿತ ಜಾಗದಲ್ಲಿ ಕಟ್ಟಿಗೆಗಳನ್ನು ಒಟ್ಟು ಮಾಡಿ ಅದಕ್ಕೆ ಬೆಂಕಿ ಹಚ್ಚಿ ಕಾಮದಹನವನ್ನು ಆಚರಿಸುತ್ತಾರೆ. ಇದಕ್ಕೆ ಶಿವನು ತನ್ನ ಹಣೆಗಣ್ಣಿನಿಂದ ಮನ್ಮಥನನ್ನು ಸುಟ್ಟ ಪುರಾಣ ಕಥೆಯನ್ನೂ ಸಮೀಕರಿಸಿದೆ. ಆದರೆ ಮೂಲತಃ ಈ ಕಾಮದಹನ ಎನ್ನುವುದು ಚಳಿಯನ್ನು ಓಡಿಸಿ ವಸಂತ ಋತುವಿನ ಆಗಮನಕ್ಕೆ ಅವಕಾಶ ಕಲ್ಪಿಸುವ ಕ್ರಿಯೆಯೇ ಆಗಿದೆ. ಲಕ್ಸೆಂಬರ್ಗ್ ಎಂಬಲ್ಲಿ ಇದನ್ನೇ ಬೆಟ್ಟದ ಮೇಲೆ ಮರದ ದೊಡ್ಡದಾದ ಶಿಲುಬೆ ತಯಾರಿಸಿ ಅದಕ್ಕೆ ಬೆಂಕಿ ಹಚ್ಚಿ ಆಚರಿಸಲಾಗುತ್ತದೆ. ಇದನ್ನು ಲಕ್ಸೆಂಬರ್ಗ್, ಜರ್ಮನಿಗಳಲ್ಲಿ Buergbrennen ಎಂದು ಕರೆಯಲಾಗುತ್ತದೆ. ಅಲ್ಲಿ ಈ ಉತ್ಸವ ಚಲಿಗಾಲದ ಕೊನೆ ಹಾಗೂ (Spring) ವಸಂತ ಕಾಲದ ಆರಂಭವನ್ನು ಸೂಚಿಸುತ್ತದೆ. ಲೆಂಟಿನ ಮೊದಲ ಆದಿತ್ಯವಾರ ಈ ಉತ್ಸವ ಆಚರಿಸುತ್ತಾರೆ. ಫ್ರಾನ್ಸ್ ಮತ್ತು ಬೆಲ್ಜಿಯಂಗಳಲ್ಲಿ ಇದನ್ನೇ dimanche des brandons ಎಂದು ಕರೆಯಲಾಗುತ್ತದೆ.
ಇದನ್ನೇ ಸ್ವಾಬಿಯನ್ ಹಾಗೂ ಅಲೆಮಾನಿಕ್ ಪ್ರದೇಶಗಳಲ್ಲಿ Funkenfeuer ಎಂದು ಕರೆದರೆ ಸ್ವಿಟ್ಸರ್ ಲ್ಯಾಂಡ್ ಮುಂತಾದೆಡೆ Feuerrad ಎಂದೂ ಕರೆಯಲಾಗುತ್ತದೆ. ಇನ್ನೂ ಅನೇಕ ಕಡೆ ಇದೇ ರೀತಿಯ ಆಚರಣೆಗಳು ಚಾಲ್ತಿಯಲ್ಲಿವೆ.
ಹಿಮಾಲಯದಲ್ಲಿರುವ ಶಿವನು ಫಾಲ್ಗುಣದ ಚಳಿಯನ್ನು ಆ ಹಿಮರಾಶಿಯ ನಡುವೆ ಹೇಗೆ ತಾನೇ ತಡೆದಾನು, ಕವಿಯೊಬ್ಬ ಇದನ್ನೇ ಸೊಗಸಾಗಿ ಕಲ್ಪಿಸಿ ಫಾಲ್ಗುಣದಲ್ಲಿ ಶಿವ ತಂಪಾಗಿರುವ ಚಂದಿರ ಮತ್ತು ಗಂಗೆಯನ್ನು ತೆಗೆದಿಟ್ಟು ತನ್ನ ಉರಿವ ಹಣೆಗಣ್ಣನ್ನು ಅಗಲಿಸಿ ಚಳಿಕಾಯಿಸುತ್ತಾನೆ ಎಂದು ಚಿತ್ರಿಸಿದ್ದಾನೆ. ಪಾರ್ವತಿ ಇದೇ ಫಾಲ್ಗುಣದ ಚಳಿಗೆ ಶಿವನು ಹಾಸಿಕುಳಿತ ಚರ್ಮವನ್ನು ಕಸಿದು ಗಣಪತಿಗೆ ಚಳಿಯಿಂದ ಕಾಪಾಡಲು ಹೊದ್ದಿಸಿದಳು ಎನ್ನುವ ಕಲ್ಪನೆಗಳು ಅದ್ಭುತ ಪಾತ್ರಚಿತ್ರಣ. ಈ ನಿಟ್ಟಿನಲ್ಲಿ ಶಿವ ಆ ಚಳಿಯಲ್ಲಿ ಮನ್ಮಥನನ್ನು ಸುಟ್ಟಿದ್ದು ಹಲವು ರೀತಿಯಲ್ಲಿ ಸಾಮ್ಯವೆನಿಸುತ್ತದೆ.
ಹೀಗೆ ಜಗತ್ತಿನಾದ್ಯಂತ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ನಮ್ಮ ದೇಶದಲ್ಲಿ ಬರೀ ಚಳಿಯಿಂದ ವಸಂತದೆಡೆಗಿನ ಸಂಕ್ರಮಣ ಅಲ್ಲ ಅದು ಕಾಮನೆಗಳನ್ನು ಜಯಿಸುವ ಆ ಮೂಲಕ ವಸಂತದಲ್ಲಿ ಸಹಜವಾಗಿ ಆಕರ್ಷಿತವಾಗುವ ಆಸೆಆಕಾಂಕ್ಷೆಗಳ ಹತೋಟಿ, ಆಧ್ಯಾತ್ಮಿಕ ನೆಲೆಯಲ್ಲಿ ಶಿವನೆಡೆಗೆ ಹೊರಳುವ ಗಮ್ಯ.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.