Thursday, 1 February 2018

ಮಾಘ ಮತ್ತು ವಸಂತಗಳ ನಡುವೆ ಗೀತೋಪದೇಶ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 16

ಇವತ್ತಿನ ನನ್ನ ವಿಚಾರಗಳನ್ನು ಯಥಾವತ್ತು ಅಕ್ಷರ ರೂಪಕ್ಕೆ ತರುವುದಕ್ಕೆ ಆದಷ್ಟೂ ಪ್ರಯತ್ನ ಪಟ್ಟಿದ್ದೇನೆ. ಓದಿ ನೋಡಿ, ಗೊಂದಲವಾದರೆ ಕ್ಷಮೆ ಇರಲಿ

ಇದೀಗ “ಮಾಘ” ಮಾಸ ⛄. “ಮಾಘ” ಎನ್ನುವ ಹೆಸರೇ ಚಂದ. ಮಾಘ ಮಾಸ ಪರಿಪಕ್ವತೆಯನ್ನು ಸಂಕೇತಿಸುತ್ತದೆ. ನಾವು ಬದುಕು “ಮಾಗ”ಬೇಕು ಎನ್ನುತ್ತೇವೆ. ಅರ್ಥಾತ್ ಬದುಕು  ಪರಿಪಕ್ವವಾಗಬೇಕು ಎಂದು. ಹಾಗಾಗಿ ಮಾಘ ಮತ್ತು ಮಾಗು ಎಂಬ ಎರಡು ಪದಗಳ ನಡುವೆ ಸಾಮ್ಯತೆಯನ್ನು ಕಾಣಬಹುದು (ಅಲ್ಪಪ್ರಾಣ ಮಹಾಪ್ರಾಣ ವ್ಯತ್ಯಾಸ ಬಿಟ್ಟು). ಹೇಗೆಂದು ಗೊಂದಲವಾಗದಿರಿ, ಹೇಳುತ್ತೇನೆ:

ಮಾಘ ಮಾಸ ಎಂದರೆ ಚಳಿಗಾಲ ⛄ಎನ್ನುವುದನ್ನು ನಾವು ತಿಳಿದಿದ್ದೇವೆ. ಚಳಿಗಾಲದಲ್ಲಿ ಮರಗಳಲ್ಲಿನ ಹಣ್ಣೆಲೆಗಳು🍂 ತೊಟ್ಟು ಕಳಚಿ ಉದುರುತ್ತವೆ. ಹೀಗೆ ಎಲೆಗಳು ತಾವು ಅಂಟಿಕೊಂಡಿರುವ ಮರಗಳನ್ನು ತ್ಯಜಿಸಿ ಕೆಳಗುದುರುತ್ತವೆ. ಹಸಿಯಾಗಿರುವಾಗ ಮರದಲ್ಲಿ ಭದ್ರವಾಗಿದ್ದ ಎಲೆಗಳು 🍃ಅದು ಹೇಗೆ ಉದುರಿದವು ಎಂದು ನೋಡಿದರೆ ಕಾರಣ ಎಲೆಗಳು ಹಣ್ಣಾಗಿವೆ🍂 ಎನ್ನುವುದು ತಿಳಿಯುತ್ತದೆ. ಮೊದಲಿನಂತೆ ಎಲೆಗಳು ಹಸಿಯಲ್ಲ, ಎಲೆಗಳು ಹಣ್ಣಾಗಿವೆ ಅರ್ಥಾತ್ ಎಲೆಗಳು “ಮಾಗಿವೆ”.

ಬದುಕು ಕೂಡ ಹೀಗೆಯೆ, ಆಸೆಗಳು ನಮ್ಮನ್ನು ಮತ್ತೆ ಮತ್ತೆ ಈ ಜಗದ ಸುಖಲಾಲಸೆಗಳಿಗೆ ಅಂಟಿಸುತ್ತವೆ. ಹಸಿ ಎಲೆಯಂತೆ ನಾವು ಭದ್ರವಾಗಿ ಸ್ಥಾಪಿತರಾಗುತ್ತೇವೆ. ಆದರೆ, ಬದುಕು ಮಾಗುತ್ತಾ ಹೋದಾಗ ಬದುಕು ಬರೀ ಐಹಿಕ ಅಲ್ಲ ಅನ್ನುವುದನ್ನು ಮನಗಾಣುತ್ತೇವಲ್ಲ ಆಗ ಬದುಕು ಸಹ ಹಣ್ಣೆಲೆಯಂತೆ ಕಳಚಿಕೊಳ್ಳುತ್ತದೆ. ಇದನ್ನೇ ಪೂರ್ವಜರು “ಕಮಲ ಪತ್ರದ ಮೇಲಿನ ನೀರಿನಂತೆ ಇದ್ದೂ ಅಂಟಿಕೊಳ್ಳದ್ದು” 🌷💦ಎಂದರು. ಈಗ ನಿಮಗೆ ನಾನು ಹೇಳುತ್ತಿರುವ ಮಾಘ ಮತ್ತು ಬದುಕು ಮಾಗುವುದರ ಅರ್ಥ ಹೊಳೆಯಿತು ಎಂದು ಭಾವಿಸುತ್ತೇನೆ.

ಮಾಘ ಕಳೆದ ಮೇಲೆ ಬರುವ ಕಾಲವೇ ಚೈತ್ರ ಮಾಸದ ವಸಂತ ಋತು. ವಸಂತನು ಚಿಗುರು ಎಲೆಗಳಿಂದ 🌿, ಹಾಡು ಕೋಗಿಲೆಗಳ 🐤, ಎಲ್ಲೆಲ್ಲೂ ಹೂ ಬಿರಿಯುವ ಕಾಲ 💐. ಮಾಘದಲಿ ಎಲೆಯುದುರಿಸಿದ ಮರಗಳು ವಸಂತದಲಿ ಹೊಸ ಚಿಗುರನ್ನು 🌳ಮೈದೆಳೆಯುತ್ತದೆ. ಬದುಕು ಕೂಡ ಮಾಗಿದಾಗ ನಿಜವಾದ ಆಸ್ವಾದನೆಗೆ ದಾರಿ ಮಾಡಿಕೊಡುತ್ತವೆ. ಯಾವುದಕ್ಕೂ ಅಂಟಿಕೊಳ್ಳದೇ ಉಳಿದಾಗ ಜೀವನ ವಸಂತನಂತೆ ಸಂಭ್ರಮಿಸಲು ಸುಲಭವಾಗುತ್ತದೆ. ದುಃಖದಲ್ಲಿ ಕುಗ್ಗದೆ, ಸುಖದಲ್ಲಿ ಹಿಗ್ಗದೆ ಸಮಚಿತ್ತವಾದ ಮಾಗುವಿಕೆ ವಸಂತ ಸಂಭ್ರಮವನ್ನು ಬದುಕಿಗೆ ತಂದುಕೊಡುತ್ತವೆ.

ಗೀತೆಯ ಉಪದೇಶವಾದರೂ ಇದೇ ಅಲ್ಲವೆ? ಸಮಚಿತ್ತವಾಗಿರುವುದು, ಮೋಹವನ್ನು ತ್ಯಜಿಸುವುದು, ದುಃಖ ಮತ್ತು ಸುಖಗಳನ್ನು ಸಮನಾಗಿ ಕಾಣುವುದು, ಸಕಲರಲ್ಲೂ ದೈವವನ್ನು ಕಾಣುವುದು ಇದೆಲ್ಲವೂ ವ್ಯಕ್ತಿಯ ಮಾಗುವಿಕೆಗೆ ಸಹಕಾರಿ ಮತ್ತು ಹೀಗೆ ಮಾಗಿದವರು ಕೊನೆಗೆ ತನ್ನನ್ನೇ ಪಡೆಯುತ್ತಾರೆ ಎಂದು ಕೃಷ್ಣಾ ಹೇಳುತ್ತಾನೆ. 

ಇನ್ನೊಂದೆಡೆ ಕೃಷ್ಣನು ತನ್ನನ್ನು ಋತುವಿನಲ್ಲಿ ತಾನು ವಸಂತ ಋತು ಎಂದಿದ್ದಾನೆ. ಅಲ್ಲಿಗೆ ಮಾಘ ಮುಗಿದ ಮೇಲೆ ವಸಂತ ಬರುತ್ತದೆ ಹಾಗಾಗಿ ಆ ವಸಂತನು ಕೃಷ್ಣನೇ ಆಗಿದ್ದಾನೆ, ಯಾಕೆಂದರೆ ಋತುಗಳಲ್ಲಿ ತನ್ನನ್ನು ತಾನು ವಸಂತ ಎಂದಿದ್ದಾನೆ ಕೃಷ್ಣ.

ಅಂತೆಯೇ ಗೀತೆಯಲ್ಲಿ ಹೇಳಿದಂತೆ ಮಾಗಿದ ಜೀವಕ್ಕೆ  ಕೃಷ್ಣನೇ ದೊರಕುತ್ತಾನೆ (ತನ್ನಲ್ಲಿ ಭಕ್ತಿ ಮಾಡಿದ ಮಾಗಿದ ಜೀವ ತನ್ನನ್ನೇ ಪಡೆಯುತ್ತಾನೆ ಎಂದು ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ) ಅರ್ಥಾತ್ ಮಾಗಿದ ಬದುಕಿಗೆ ವಸಂತೋತ್ಸವ. ಈ ರೀತಿಯಾಗಿ ಮಾಘ ಮತ್ತು ವಸಂತ ಹಾಗೂ ಮಾಗುವಿಕೆ ಮತ್ತು ವಸಂತೋತ್ಸವ (ಕೃಷ್ಣ) ಒಂದಕ್ಕೊಂದು ಬೆಸೆದುಕೊಂಡಿದೆ.

ಹೀಗೆ ಮಾಘ ಮತ್ತು ವಸಂತ ಬರೀ ಋತು ಮಾಸಗಳಲ್ಲ ಬದಲಾಗಿ ಅದು ಗೀತೆಯ ಸಾರವಾಗಿಯೇ ತೋರಿತು. ನಿಮ್ಮೊಂದಿಗೆ ಹಂಚಿಕೊಂಡೆ. ಗೊಂದಲವಾಗಿದ್ದರೆ ಕ್ಷಮೆ ಇರಲಿ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.