ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 28
ಇಂದು ವಿಶ್ವಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ಈ ಬಗ್ಗೆ ಪರವಿರೋಧದ ಚರ್ಚೆಗಳೂ ನಡೆಯುತ್ತವೆ. ಅವೆಲ್ಲವುಗಳನ್ನು ಪಕ್ಕಕ್ಕಿಟ್ಟು ನಾವಿಂದು ಭಾರತ ಸಾಹಿತ್ಯದ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಪ್ರೇಮ ಕಥೆ ದುಷ್ಯಂತ ಶಾಕುಂತಲೆಯರ ಪಾತ್ರವನ್ನು ವಿಶ್ಲೇಷಿಸೋಣ.
ಪ್ರೇಮ ಕಾವ್ಯಗಳಲ್ಲಿ ದುಷ್ಯಂತ ಶಾಕುಂತಲೆ ಮೊದಲಪಂಕ್ತಿಯಲ್ಲಿ ನೆನಪಾಗುತ್ತಾರೆ. ಈ ಪಾತ್ರಗಳು ಮಹಾಭಾರತದಲ್ಲಿ ಬಂದುದಾದರೂ ಕಾಳಿದಾಸನ ಅಭಿಜ್ಞಾನ ಶಾಕುಂತಲದಿಂದಲೆ ಜನಮನ್ನಣೆ ಪಡೆದಿದೆ. ಕಾಳಿದಾಸನ ಪ್ರತಿಭೆ ಅಭಿಜ್ಞಾನ ಶಾಕುಂತಲದಲ್ಲಿ ಸಂಪೂರ್ಣವಾಗಿ ಅನಾವರಣವಾಗುತ್ತದೆ ಎಂದು ಅನೇಕ ಪಂಡಿತರು ಕೊಂಡಾಡುತ್ತಾರೆ.
ವಿಶ್ವಾಮಿತ್ರ ಹಾಗೂ ಅಪ್ಸರೆ ಮೇನಕೆಯ ಮಗಳಾಗಿ ಹುಟ್ಟುವ ಹೆಣ್ಣು ಮಗು ಪರಿತ್ಯಕ್ತ ಬಾಲೆಯಾಗಿ ಕಾಡಿನಲ್ಲಿ ಶಾಕುಂತ ಪಕ್ಷಿಗಳ ಗುಂಪಿನಲ್ಲಿ ಕಣ್ವ ಮಹರ್ಷಿಗಳಿಗೆ ದೊರಕುತ್ತಾಳೆ. ಶಾಕುಂತ ಪಕ್ಷಿಗಳ ಆರೈಕೆಯಲ್ಲಿದ್ದ ಆಕೆಯನ್ನು ಕಣ್ವ ಮಹರ್ಷಿಗಳು ಶಾಕುಂತಲಾ ಎಂದು ಹೆಸರಿಸಿ ತನ್ನ ಆಶ್ರಮಕ್ಕೆ ತರುತ್ತಾರೆ.
ಹೀಗೆ ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಸಾತ್ವಿಕ ವಾತಾವರಣದಲ್ಲಿ ಗಿಡ, ಮರ, ಬಳ್ಳಿ , ಹೂ, ಹಕ್ಕಿ, ಸಖಿಯರೊಡನೆ ಬೆಳೆಯುವ ಶಾಕುಂತಲೆಯನ್ನು ದುಷ್ಯಂತನೆಂಬ ರಾಜನು ವನಬೇಟೆಯ ಸಂದರ್ಭದಲ್ಲಿ ಕಂಡು ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ಗಾಂಧರ್ವ ವಿವಾಹವಾಗಿ ರಾಜ ದುಷ್ಯಂತ ಆಕೆಯೊಡನೆ ಆಶ್ರಮದಲ್ಲಿ ಸಾಂಸಾರಿಕ ಜೀವನ ನಡೆಸುತ್ತಾನೆ.
ತುರ್ತು ಕಾರ್ಯದ ನಿಮಿತ್ತ ರಾಜಧಾನಿಗೆ ವಾಪಾಸಾಗಬೇಕಾದ ಪ್ರಸಂಗ ಬಂದು ರಾಜ ದುಷ್ಯಂತ ಶಾಕುಂತಲೆಯನ್ನು ತಕ್ಷಣಕ್ಕೆ ಕರೆದೊಯ್ಯಲಾಗದ ಅಸಹಾಯಕತೆಯನ್ನು ತಿಳಿಸಿ ಆದಷ್ಟು ಬೇಗ ಆಕೆಯನ್ನು ಕರೆಸಿಕೊಳ್ಳುವ ಮಾತು ಕೊಟ್ಟು ಬೆರಳುಂಗುರವ ತೊಡಿಸಿ ಹೊರಡುತ್ತಾನೆ.
ಪತಿಯ ಬಗ್ಗೆ ಧ್ಯಾನಿಸುತ್ತಾ ಆತನ ಆಗಮನದ ನಿರೀಕ್ಷೆಯಲ್ಲಿ ತಲ್ಲೀನಳಾದ ಶಾಕುಂತಲಾ ದೂರ್ವಾಸ ಮುನಿಗಳು ಆಶ್ರಮಕ್ಕೆ ಬಂದಿರುವುದೂ ಗಮನಿಸದೆ ಆತಿಥ್ಯ ನೀಡದಿರುವುದರಿಂದ ಕುಪಿತರಾದ ಋಷಿ ಯಾರ ನೆನಪಿನಲ್ಲಿ ಕಳೆದುಹೋಗಿರುವೆಯೊ ಅವನು ನಿನ್ನನ್ನು ಮರೆಯಲಿ ಎನ್ನುವ ಶಾಪವೀಯುತ್ತಾರೆ.
ಇದನ್ನು ಕೇಳಿದ ಸಖಿಯರು ಶಾಕುಂತಲೆಯ ಪರಿಸ್ಥಿತಿಯನ್ನು ಮುನಿವರ್ಯನಿಗೆ ತಿಳಿಸುತ್ತಾರೆ.
ದೂರ್ವಾಸರು ಸಖಿಯರಿಗೆ ಆಕೆಯ ಪತಿಯು ನೀಡಿದ ಕಾಣಿಕೆಯೊಂದನ್ನು ತೋರಿಸಿದಂದು ಆತನಿಗೆ ಮತ್ತೆ ಆಕೆಯ ನೆನಪಾಗುತ್ತದೆ ಎಂದು ಶಾಪ ವಿಮೋಚನೆಯನ್ನು ನೀಡಿ ಹೊರಟುಹೋಗುತ್ತಾರೆ.
ಮುಂದೆ ರಾಜನ ಆಗಮನದ ಯಾವ ಕುರುಹೂ ಇಲ್ಲದೆ ಹೋದಾಗ ಕಣ್ವರು ಶಾಕುಂತಲೆಯನ್ನು ದುಷ್ಯಂತನಲ್ಲಿಗೆ ಕಳುಹುವ ತಯಾರಿ ಮಾಡುತ್ತಾರೆ. ಸಖಿಯರು ಶಾಕುಂತಲೆಗೆ ಉಂಗುರವನ್ನು ಜಾಗರೂಕತೆಯಿಂದ ನೋಡಿಕೊ ಎಂದು ಹೇಳಿದರ ಮರ್ಮವರಿಯದ ಶಾಕುಂತಲೆ ನದಿ ದಾಟುವ ಸಮಯದಲ್ಲಿ ದೋಣಿಯಲ್ಲಿ ಕುಳಿತು ನೀರಲೆಯ ಆಟಕ್ಕೆ ಕೈ ಇಳಿಬಿಟ್ಟ ಸಂದರ್ಭ ಉಂಗುರ ಜಾರಿ ಹೋಗುತ್ತದೆ.
ಆಸ್ಥಾನಕ್ಕೆ ಬಂದವಳನ್ನು ಗುರುತಿಸದಾದ ದುಷ್ಯಂತನೆದುರು ಅತ್ತು ಕರೆದು ತಾನಿತ್ತ ಉಂಗುರವನ್ನು ತೋರಿ ಕೈಬೆರಳು ಖಾಲಿಯಿರಲು ವಿಧಿಯನ್ನು ಹಳಿಯುತ್ತಾ ಶಾಕುಂತಲೆ ಆಶ್ರಮಕ್ಕೆ ಮರಳುತ್ತಾಳೆ.
ಮಹಾಭಾರತದಲ್ಲಿ ಬರುವ ಈ ಪಾತ್ರಗಳು ಅದ್ಭುತ ಪಾತ್ರಚಿತ್ರಣಕ್ಕೆ ಹಿಡಿದ ಕೈಗನ್ನಡಿ. ದೂರ್ವಾಸರು ಶಾಪವೀಯುವಾಗ "ನೀನು ನೆನೆಯುತ್ತಿರುವವನು ನಿನ್ನನ್ನು ಮರೆಯಲಿ" ಎಂದು ಶಾಪ ಕೊಡುತ್ತಾನೆಯೆ ವಿನಃ "ನೀನು ನೆನೆಯುತ್ತಿರುವವನನ್ನು ನೀನು ಮರೆತು ಬಿಡು" ಎಂದು ಶಾಪ ಕೊಡುವುದಿಲ್ಲ. ಕವಿಯ ಕಾವ್ಯ ಪ್ರಜ್ಞೆ ಇಲ್ಲಿ ಮುಖ್ಯವಾಗುತ್ತದೆ. ಒಂದು ವೇಳೆ ಶಾಕುಂತಲೆ ದುಷ್ಯಂತನನ್ನು ಮರೆಯಲಿ ಎಂದು ದೂರ್ವಾಸರು ಶಾಪ ಕೊಟ್ಟಿದ್ದರೆ ಅದು ಶಾಕುಂತಲೆಗೆ ಶಾಪದ ಬದಲಾಗಿ ವರವಾಗುತ್ತಿತ್ತು. ಯಾಕೆಂದರೆ ಮರೆತ ಮೇಲೆ ಆ ವ್ಯಕ್ತಿಯ ಕಲ್ಪನೆಯೇ ಇಲ್ಲ. ಆಕೆ ಎಲ್ಲವನ್ನೂ ಮರೆತು ನೆಮ್ಮದಿಯ ಜೀವನ ನಡೆಸಬಹುದು. ದುಷ್ಯಂತನಿಗೆ ಆ ನೆಮ್ಮದಿ ಇತ್ತು.
ಆದರೆ ಇಲ್ಲಿ ಕವಿ ದೂರ್ವಾಸರ ಕೈಯಿಂದ ದುಷ್ಯಂತ ನಿನ್ನನ್ನು ಮರೆಯಲಿ ಎಂದು ಹೇಳಿದ್ದು ಶಾಕುಂತಲೆಗೆ ನಿಜವಾದ ಶಾಪವಾಯಿತು. ಯಾಕೆಂದರೆ ಅದು ಆಕೆಗೆ ದಿನವೂ ನೆನಪಾಗುವ ಕ್ರಿಯೆ. ಆತ ನನಗೆ ನೆನಪಾಗುತ್ತಿಲ್ಲ ಎನ್ನುವುದು ಶೋಕವಲ್ಲ ಆದರೆ, ಆತನಿಗೆ ನಾನು ನೆನಪಾಗಲಿಲ್ಲ ಎಂಬ ಶೋಕ ದೊಡ್ಡದು.
ಜೋಗಿಯವರು ಈ ಕುರಿತು ಸುದೀರ್ಘವಾಗಿ ಒಂದು ಲೇಖನದಲ್ಲಿ ಬರೆದಿದ್ದರು.
ಶತಮಾನಗಳ ಹಿಂದೆ ದಾಖಲಾದ ಈ ಕಾವ್ಯಪ್ರಸಂಗ ಇಂದಿಗೂ ಪ್ರಸ್ತುತ. ಪ್ರೇಮಿಗಳ ದಿನವಾದ ಇಂದು ಅದೆಷ್ಟೋ ಶಾಕುಂತಲೆಯರು ಮರೆತ ದುಷ್ಯಂತನ ಬಗೆಗೆ ಶೋಕಿತರಾಗಿರಬಹುದು (ದುಷ್ಯಂತನನ್ನು ಮರೆತ ಶಾಕುಂತಲೆಯರೂ ಇರಬಹುದು)
ಅಲ್ಲಿ ದುಷ್ಯಂತನ ಮರೆವಿಗೆ ದೂರ್ವಾಸರ ಶಾಪವಾದರೂ ಕಾರಣ. ಆದರೆ ಇಂದಿನ ಪ್ರೇಮಿಗಳ ನಡುವಿನ ಮರೆವಿಗೆ ಕಾರಣಗಳಿದೆಯೆ??
ಕಥೆ ಮುಂದುವರೆಸೋಣ ಬಿಡಿ, ಹೀಗೆ ಆಶ್ರಮಕ್ಕೆ ಬಂದು ಭರತ (ಭರತನಿಂದಲೇ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂತು) ಎಂಬ ಮಗನನ್ನೂ ಹೆತ್ತು ಬದುಕು ಸಾಗಿಸುತ್ತಿರುತ್ತಾಳೆ ಶಾಕುಂತಲೆ. ಈ ನಡುವೆ ಮೀನುಗಾರನಿಗೆ ಸಿಕ್ಕ ಮೀನಿನ ಹೊಟ್ಟೆಯೊಳಗಿದ್ದ ಉಂಗುರ ರಾಜನ ಆಸ್ಥಾವನ್ನು ತಲುಪಿ ದುಷ್ಯಂತನಿಗೆ ತನ್ನ ಪೂರ್ವವೃತ್ತಾಂತ ನೆನಪಾಗಿ ಆತ ಶಾಕುಂತಲೆಯ ಬಳಿಗೆ ಬರುತ್ತಾನೆ. ಅಲ್ಲಿಗೆ ಎಲ್ಲವೂ ಸುಖಾಂತ್ಯವಾಗುತ್ತದೆ.
ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ನೆನಪಾಗಿಸಲು ಯಾವ ಮೀನಿನ ಹೊಟ್ಟೆ ಕೊಯ್ದು ಉಂಗುರ ತೆಗೆವ ಅನಿವಾರ್ಯತೆ ಇಲ್ಲ. ಅಭಿಜ್ಞಾನವಾಗಿ (ನೆನಪಿನ ಗುರುತು) ಫೋಟೊ, ಸೆಲ್ಫಿ, ವಾಟ್ಸ್ ಆ್ಯಪ್ ಚ್ಯಾಟ್ ಗಳು ದಂಡಿಯಾಗಿ ಸಿಗುತ್ತವೆ. ಅಷ್ಟಿದ್ದರೂ ಮರೆತದ್ದು ನೆನಪಾಗುವುದಿಲ್ಲ!!!
ಅಲ್ಲಿಗೇನು, ದುಷ್ಯಂತನೇನೂ ಉದ್ದೇಶ ಪೂರ್ವಕ ಮರೆತದ್ದಲ್ಲ ಹಾಗಾಗಿ ಉಂಗುರ ಕಂಡು ನೆನಪಾಯಿತು. ಇಂದು ಪ್ರೇಮಿಗಳಿಗೆ ಮರೆವು ಉದ್ದೇಶಪೂರ್ವಕ ಹಾಗಾಗಿ ನೆನಪಾದರೂ ಹೇಗಾದೀತು?
ಇಬ್ಬರ ನಡುವೆ ಮರೆವು ನೆನಪುಗಳ ಗೊಂದಲವನ್ನುಂಟು ಮಾಡಿದ ಆ ದುಷ್ಯಂತ ಶಾಕುಂತಲೆಯ ಕಥೆಯನ್ನು ಇಂದಿನ ಕಾಲಘಟ್ಟಕ್ಕೆ ಎಳೆದು ತಂದು ವಿಶ್ಲೇಷಿಸಿದಾಗ ಇಂದಿನ ಪ್ರೇಮಿಗಳ ದಿನ ಆ ಕಥೆ ಮರೆವು ಮತ್ತು ನೆನಪುಗಳ ನಡುವೆ ಒಂದು ಸೇತುವೆಯಾಗಿ ನಿಲ್ಲುತ್ತದೆ. ಮರೆಯದೆ ನೆನಪಾಗಿಸುವ ಪ್ರೀತಿಗೆ ಅಮರ ಪ್ರೇಮದ ಸಂದೇಶವಾಗುತ್ತದೆ.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.