Friday, 2 February 2018

ಚಲನಶೀಲತೆಯೇ ಬದುಕು

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 17

ಈ ಸೃಷ್ಟಿಯನ್ನೊಮ್ಮೆ 🌎 ಸೂಕ್ಷ್ಮವಾಗಿ ಗಮನಿಸಿ ನೋಡಿ ಇಲ್ಲಿ ಎಲ್ಲವೂ ಚಲನಶೀಲ 🏃🏼‍♂. ಯಾವುದು ಚಲಿಸುವುದನ್ನು ನಿಲ್ಲಿಸುತ್ತದೊ ಅದು ನಾಶವಾಗುತ್ತದೆ.

ದಿನವಿಡೀ ನಾವು ಚಲನಶೀಲರಾಗಿರುತ್ತೇವೆ 🏃🏻‍♀🏃🏼‍♂. ಹಾಗಿದ್ದಾಗ ಮಾತ್ರ ನಾವು ಜೀವಂತ ಅನ್ನುವ ಅನುಭವವಾಗುತ್ತದೆ. ಇವತ್ತಿಡೀ ಚಲಿಸುವುದಿಲ್ಲ ಕಲ್ಲಿನಂತೆ ಕೂರುತ್ತೇನೆ ಎಂದು ಹಠಕ್ಕೆ ಬಿದ್ದು ಒಂದಿಡೀ ದಿನ ಕಲ್ಲಿನಂತೆ ಕೂತು ನೋಡಿ 🙇🏿‍♂ಆದರೂ ನಮ್ಮೊಳಗಿನ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಕೂದಲು 💇🏻‍♀ಬೆಳೆಯುತ್ತದೆ, ಹೃದಯ ಬಡಿಯುತ್ತದೆ ❤ ಉಗುರು ಬೆಳೆಯುತ್ತದೆ💅🏾 ರಕ್ತ ಹರಿಯುತ್ತದೆ 💉ನಾವು ಮತ್ತೆ ಚಲನಶೀಲ. ಇಲ್ಲ ಇದೆಲ್ಲವನ್ನೂ ತಡೆಯುತ್ತೇನೆಂದು ತಡೆದು ಬಿಟ್ಟರೆ? ನಾವು ಹೆಣವಾಗುತ್ತೇವೆ ⚰. ಚಲನಶೀಲತೆ ನಿಂತ ಕೂಡಲೆ ಶವವಾಗುತ್ತೇವೆ🧟‍♂ ಹಾಗಾಗಿ ಚಲನೆಯೇ ಜೀವನ, ನಿಶ್ಚಲವೇ ಮರಣ. ಇದನ್ನೇ ಬಸವಣ್ಣ "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂದದ್ದು. ಸ್ಥಾವರ ಎಂದರೆ ನಿಶ್ಚಲ ವಸ್ತುಗಳು, ಜಂಗಮ ಎಂದರೆ ಚಲಿಸುವಂತದ್ದು. ಚಲಿಸುವಂತದ್ದು ಸದಾ ಶಾಶ್ವತ.

ಹರಿಯುವ ನೀರನ್ನು 🌅 ನೋಡಿ, ನದಿಯಾಗಿ ಹರಿಯುವ ನೀರು ಶುಭ್ರ ಸುಂದರ. ಕಡಲಾದರೂ ಅಲೆಯಾಗಿ 🌊 ದಡಕ್ಕೆ ಅಪ್ಪಳಿಸುತ್ತಾ ಚಲನಶೀಲ. ಒಂದೆಡೆ ನೀರು ಹರಿಯದೇ ನಿಂತರೆ ಅದು ಕೊಚ್ಚೆಯಾಗುತ್ತದೆ. ಆ ಹನಿಗಳಾದರೂ 💦☔ಬಾನು ಭುವಿಗಳ ನಡುವೆ ಚಲನಶೀಲ.

ಒಂದು ಪುಟ್ಟ ಬೀಜವೂ🥜 ಮೊಳಕೆಯೊಡೆದು 🌱ಗಿಡವಾಗಿ 🌿ಮರವಾಗಿ 🌳ಹೂ 🌸ಕಾಯಿ 🍈ಹಣ್ಣಾಗಿ 🍑ಘಟ್ಟ ಘಟ್ಟದಲ್ಲೂ ಚಲನಶೀಲ. ಬೀಜವಾದರೂ ತನ್ನೊಳಗೆ ಹುದುಗಿಸಿದ ಸಾವಿರಾರು ಬೀಜಗಳನ್ನು ನೂರಾರು ಕಡೆಗೆ ಹರಡಿ ಹಂಚಿ ಚಲನಶೀಲ.

ಒಂದೆಡೆ ನಿಂತ ಬೆಟ್ಟ ⛰ಗುಡ್ಡ 🗻 ಪರ್ವತಗಳೂ🌋 ಚಲನಶೀಲವೇ. ನಮ್ಮೀ ಖಂಡಗಳೂ 🌕ಚಲನಶೀಲವೆ. ಅಗಾಧ ಸಾಗರಗಳ ಅಲೆಗಳು🌊 ಈ ಭೂ ಖಂಡಗಳನ್ನು ಒತ್ತಿ ಮುಂದೂಡುತ್ತಿವೆಯಂತೆ. ಖಂಡಗಳು ಚಲಿಸುತ್ತಿವೆ. ಭೂಮಿಯೂ 🌍ಚಲಿಸುತ್ತಿದೆ. ತನ್ನ ಅಕ್ಷದಲ್ಲೇ ನಿರಂತರ ಪರಿಭ್ರಮಿಸುತ್ತಿದೆ. ಪ್ರತಿಯೊಂದು ಗ್ರಹ, ತಾರೆಗಳೂ ಪರಿಭ್ರಮಿಸುತ್ತವೆ.  ಆಕಾಶಗಂಗೆ (Milky Way) ಎನ್ನುವ ನಮ್ಮ ನಕ್ಷತ್ರ ಪುಂಜವೂ (Galaxy)🌌 ಒಟ್ಟಾಗಿ ಪರಿಭ್ರಮಿಸುತ್ತವೆ. ಹೀಗೆ ಸಂಪೂರ್ಣ ನಕ್ಷತ್ರ ಪುಂಜ ಪರಿಭ್ರಮಿಸಲು ಅದು ತೆಗೆದುಕೊಳ್ಳುವ ಅವಧಿ 225-250 ಮಿಲಿಯ ಭೂ ವರ್ಷ! ಇಂತಹ ಸಹಸ್ರಾರು ನಕ್ಷತ್ರ ಪುಂಜಗಳೂ, ನಕ್ಷತ್ರ ಪುಂಜಗಳನ್ನು ಹೊತ್ತ ಸಹಸ್ರಾರು ಬಹುಬ್ರಹ್ಮಾಂಡಗಳು (Multi Universe) ಎಲ್ಲವೂ ಚಲನಶೀಲ!! ಚಲನ ಜೀವಂತಿಕೆ.

ಯಾವುದು ಓಲಾಡುತ್ತವೊ ಅವು ನಮ್ಮನ್ನು ಬೇಗ ಸೆಳೆಯುತ್ತವೆ. ಗಾಳಿಗೆ ಬೀಸುವ ಬಟ್ಟೆ, ಕಿವಿಯಲ್ಲಿ ಓಲಾಡುವ ಜುಮುಕಿ, ತೂಗಾಡುವ ಉಯ್ಯಾಲೆ ಯಾವುದೇ ಆಗಿರಲಿ ಅದರ ಕಡೆಗೆ ನಮ್ಮ ಲಕ್ಷ್ಯ ಹೋಗುತ್ತದೆ. ಸುಮ್ಮನೇ ಬೆಳಗುವ ಬಲ್ಬು ಅಷ್ಟಾಗಿ ಸೆಳೆಯದು ಆದರೆ ಓಡಾಡುವ ಬೆಳಕಿನ ಮಿನೇಚರ್ ಬಲ್ಬುಗಳು ನಮ್ಮ ಗಮನ ಸೆಳೆಯುತ್ತವೆ. ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಈ ಚಲನತಂತ್ರಗಳನ್ನು ಉಪಯೋಗಿಸುತ್ತಾರೆ.

ಹೀಗೆ, ಬದುಕು ಸದಾ ಚಲನಶೀಲ. ಅದನ್ನು ಸದಾ ಚಲನಶೀಲವಾಗಿಡುವುದೇ ನಮ್ಮ ಜವಾಬ್ದಾರಿ. ಮನಸ್ಸಾದರೂ ಚಲನಶೀಲವಾಗಿಯೇ ಇರಬೇಕು. ಅದನ್ನೇ ನಾವು ಚಟುವಟಿಕೆಯಿಂದ ಕೂಡಿದ್ದು , ಕ್ರಿಯಾತ್ಮಕವಾಗಿರುವುದು ಎಂದು ಹೇಳುತ್ತೇವೆ. ಇಲ್ಲವಾದರೆ ಜಡವಾಗುತ್ತದೆ. ಜಡವಾದರೆ ಸತ್ತಂತೆ, ಯಾಕೆಂದರೆ ಅಲ್ಲಿ ಚಲನಶೀಲ ಪ್ರಕ್ರಿಯೆ ಇಲ್ಲ.

ಇಂತಹ ಸಕಲದರಲ್ಲಿಯೂ ಚಲನಶೀಲತೆಯನ್ನು ಕಾಯುವ ಆ ಚಾಲಕ ಶಕ್ತಿಯನ್ನೇ ನಾವು ನಿರಾಕಾರ ನಿರ್ಗುಣ ದೇವರು🙏🏻 ಎಂದು ಬಣ್ಣಿಸುವುದು ಕೂಡ. ಹರಿಯುವ ನದಿಯಂತೆ 🌅ಬದುಕು ಸದಾ ಕ್ರಿಯಾಶೀಲವಾಗಿರಲಿ, ಚಲನಶೀಲತೆಯೇ ಬದುಕಾಗಲಿ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.