Saturday, 10 February 2018

ಎಲೆ ಮರೆಯಲ್ಲುಳಿದ ರಾಮರಾಜ ಕ್ಷತ್ರಿಯ ಎಂಬ ಕನ್ನಡ ಸಮುದಾಯ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-25

ಈ ಭಾರತ ದೇಶದಲ್ಲಿ ಅನೇಕ ಸಮುದಾಯಗಳು ಜನಾಂಗಗಳು ಆಯಾಯ ಪ್ರಾದೇಶಿಕತೆಯಲ್ಲಿ ಬೆಳೆದು ಬಂದಿದೆ. ಈ ಎಲ್ಲಾ ಸಮುದಾಯಗಳು ಜನಾಂಗಗಳು ದೇಶದ ಇತಿಹಾಸದಲ್ಲಿ ತಮ್ಮದೇ ಆದ ಸೇವೆಗಳನ್ನು ಈ ದೇಶಕ್ಕೆ ಕೊಟ್ಟದ್ದೂ ಇದೆ. ಇದು ದೇಶದಾದ್ಯಂತ ಕಾಣಬಹುದು ಅಂತೆಯೇ, ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಕರಾವಳಿಯ ತುಳುನಾಡಿನಲ್ಲಿ ಅನೇಕ ಸಮುದಾಯಗಳು ತಮ್ಮದೇ ಆಚರಣೆ, ಸಂಸ್ಕೃತಿ, ವೈವಿಧ್ಯತೆಯಿಂದ ಗುರುತಿಸಲ್ಪಟ್ಟಿದೆ. ಅಂತಹ ಸಮುದಾಯಗಳಲ್ಲಿ ಎಲೆಮರೆಯಾಗಿ ಉಳಿದು ಹೋದ ಒಂದು ಜನಾಂಗವೇ ರಾಮರಾಜ ಕ್ಷತ್ರಿಯ ಸಮುದಾಯ.

ರಾಮ ಕ್ಷತ್ರಿಯ, ರಾಮರಾಜ ಕ್ಷತ್ರಿಯ, ಕೋಟೆಗಾರ್, ಕೋಟೆಯಾರ್, ಸೇರ್ವೆಗಾರ್, ಶೇರಿಗಾರ್, ಮುಂತಾದ ಹೆಸರಿನಿಂದ ಕರೆಸಿಕೊಳ್ಳುವ ಈ ಸಮುದಾಯದವರು ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು,  ಕಾಞಂಗಾಡ್  ಪ್ರದೇಶದ ಕರಾವಳಿಯಲ್ಲಿ ಕಂಡು ಬರುತ್ತಾರೆ. ಮೂಲತಃ ಮಹಾರಾಷ್ಟ್ರದ ವಿಜಯದುರ್ಗದವರಾದ ಈ ಸಮುದಾಯವು ರಾಜರ ಕಾಲದಲ್ಲಿ ಸೈನ್ಯ ಸೇವೆಯನ್ನು ವಿಶೇಷವಾಗಿ ಕೋಟೆಗಳಲ್ಲಿ ನೀಡುತ್ತಿತ್ತು. ಕೋಟೆಗಳ ಕಾವಲಿಗಾಗಿ ಇದ್ದಂತಹ ಈ ರಾಮರಾಜ ಕ್ಷತ್ರಿಯ ಸೈನ್ಯ ಸಮುದಾಯದವರು ಜನರ ಆಡುಮಾತಿನಲ್ಲಿ ಕೋಟೆಯವರು ಎಂದು ಕರೆಸಿಕೊಂಡರು.

1565 ರಲ್ಲಿ ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಕನ್ನಡ ನಾಡನ್ನು ಕಟ್ಟಿದ ಕೀರ್ತಿ ಇಕ್ಕೇರಿ ವಂಶಕ್ಕೆ ಸಲ್ಲುತ್ತದೆ. ಇಂದಿನ ಶಿವಮೊಗ್ಗದ ಕೆಳದಿ ಇಕ್ಕೇರಿಗಳು ಅವರ ರಾಜಧಾನಿಗಳಾಗಿದ್ದವು. ಕನ್ನಡ ಸಾಮ್ರಾಜ್ಯವಾಗಿದ್ದ ಇಕ್ಕೇರಿ ವಂಶ ತನ್ನ ರಾಜ್ಯವನ್ನು ಕರ್ನಾಟಕದ ಕರಾವಳಿ, ಶಿವಮೊಗ್ಗ, ಮಧ್ಯ ಕರ್ನಾಟಕದ ಭಾಗಗಳು ಹಾಗೂ ಮಹಾರಾಷ್ಟ್ರದ ಪ್ರಾಂತ್ಯಗಳನ್ನೂ ಹೊಂದಿತ್ತು.

ಇಕ್ಕೇರಿಯ ಅರಸ ಹಿರಿಯ ವೆಂಕಟಪ್ಪ ನಾಯಕ(1586-1629) ತನ್ನ ಸೈನ್ಯವನ್ನು ವಿಸ್ತರಿಸಿ ಪಯಸ್ವಿನಿ ನದಿಯನ್ನು ದಾಟಿ ಚಂದ್ರಗಿರಿ, ಬೇಕಲ, ಫಣಿಯಾಲ, ಕುಂಡಂಕುಯಿ, ಬಂದಡ್ಕವೇ ಮೊದಲಾದ ಕಡೆಗಳಲ್ಲಿ ರಾಜ್ಯ ವಿಸ್ತರಿಸಿದನು. ಮಂಗಳೂರು, ಕುಂಬಳೆ, ಕಾಸರಗೋಡು, ಚಂದ್ರಗಿರಿ, ಬಂದಡ್ಕ ಮುಂತಾದ ಕಡೆ ಕೋಟೆಗಳನ್ನು ಕಟ್ಟಿಸಿದನು. ಈ ಕೋಟೆಗಳ ಭದ್ರತೆಗಾಗಿ ತನ್ನ ನಂಬಿಕಸ್ಥ ಸಮುದಾಯವಾದ ರಾಮರಾಜ ಕ್ಷತ್ರಿಯ ಜನಾಂಗದವರನ್ನು ಕರೆಸಿದನು. ಕೆಳದಿಯ ಹೆಸರುವಾಸಿ ರಾಜ ಶಿವಪ್ಪ ನಾಯಕನು (1645-1660) ಬೇಕಲ ಕೋಟೆಯನ್ನು ಕಟ್ಟಿದ್ದು ಅದು ಇಂದಿಗೂ ಸುಪ್ರಸಿದ್ಧವಾಗಿದೆ. ಹೀಗೆ, ಇಕ್ಕೇರಿ ವಂಶದ ಆಡಳಿತಾವಧಿಯಲ್ಲಿ ಬಾರ್ಕೂರು, ಕಾರ್ಕಳ, ಭಟ್ಕಳ, ಹೊನ್ನಾವರ, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು, ಕಾಞಂಗಾಡು ಪ್ರದೇಶಗಳಲ್ಲಿ ಕೋಟೆಗಳ ಸುತ್ತಮುತ್ತ ರಾಮರಾಜ ಕ್ಷತ್ರಿಯ ಸಮುದಾಯವು ನೆಲೆಸಿತು.

ಇಂತು, ವಿಜಯದುರ್ಗದಿಂದ ಕರ್ನಾಟಕದ ಕರಾವಳಿಗೆ ಬಂದ ರಾಮರಾಜಕ್ಷತ್ರಿಯ ಸಮುದಾಯ ಇಲ್ಲಿಯ ಕೋಟೆಗಳು, ಶಾಸನಗಳ ರಕ್ಷಣೆಗೆ ನಿಂತರು. ಉತ್ತರ ಕನ್ನಡದಲ್ಲಿ ಇವರು ಕನ್ನಡ ಮತ್ತು ಕೊಂಕಣಿ ಮಾತೃಭಾಷೆ ಹೊಂದಿದರೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಕಾಞಂಗಾಡುಗಳಲ್ಲಿ ಇವರ  ಮಾತೃಭಾಷೆ ಕನ್ನಡ!!

ಯಕ್ಷಗಾನಕ್ಕೂ "ರಾಮಕ್ಷತ್ರಿಯ" ಸಮಾಜಕ್ಕೂ ಅವಿನಾಭಾವ ಸಂಬಂಧವಿದೆಯೆಂದು ಡಾ|| ಶಿವರಾಮ ಕಾರಂತರು ಹೇಳುತ್ತಾ "ಯಕ್ಷಗಾನ" ಎಂಬ ಆಂಗ್ಲ ಕೃತಿಯಲ್ಲಿ ರಾಮಕ್ಷತ್ರಿಯ ಜನಾಂಗ ಯಕ್ಷಗಾನದ ಆದ್ಯಪ್ರವರ್ತಕರೆಂದು ಉಲ್ಲೇಖಿಸಿದ್ದಾರೆ ಎಂದು ಡಾ|| ಶಿವಾನಂದ ಬೇಕಲ್ ಇವರು ಲೇಖನವೊಂದರಲ್ಲಿ ನೆನಪಿಸಿಕೊಳ್ಳುತ್ತಾರೆ.

ಈ ಸಮುದಾಯಕ್ಕೆ ತನ್ನದೇ ಆದ ಕನ್ನಡ ಭಾಷಾ ಶೈಲಿಯಿದೆ. ಈ ಭಾಷಾ ಶೈಲಿಯನ್ನು ಕೋಟೆ ಕನ್ನಡ ಅಥವಾ ಬೇಕಲ ಕನ್ನಡ ಎಂದೂ ಕರೆಯಲಾಗುತ್ತದೆ. ಕಯ್ಯಾರ ಕಿಞ್ಞಣ್ಣ ರೈಯವರು "ಕೋಟೆಯವರ ಮನೆ ಮಾತು ಶುದ್ಧ ಕನ್ನಡ, ಹಳೆಗನ್ನಡ ಪದಗಳಿಂದ ಕೂಡಿದ ಸೊಗಸಾದ ಗ್ರಾಮ್ಯ ಭಾಷೆ, ಉತ್ತರ ಕನ್ನಡ ಜಿಲ್ಲೆ ಹಾಗೂ ಮೈಸೂರು ಗ್ರಾಮ್ಯ ಶೈಲಿಗೆ ಹೆಚ್ಚಾಗಿ ಹೊಂದಿಕೊಂಡಿದೆ" ಎಂದು ಹೇಳಿದ್ದಾರೆ ಎಂದು ವಿರೇಶ್ ಬೇಕಲ್ ತಮ್ಮ ಲೇಖನವೊಂದರಲ್ಲಿ ಉಲ್ಲೇಖಿಸುತ್ತಾರೆ.

ರಾಮಕ್ಷತ್ರಿಯರ ಆಚರಣೆಗೆ ಅದರದೇ ಆದ ವೈಶಿಷ್ಟ್ಯವಿದೆ ಹುಣ್ಣಿಮೆ ಹಬ್ಬವೆಂಬ ವಿಶಿಷ್ಟ ಹಬ್ಬ, ಮದುವೆಯಲ್ಲಿ ಸೀತಾನ್ವೇಷಣೆಯ ಆಟ, ಅಂಕೋಲ ಧಾರೆಗಳು ಈ ಸಮುದಾಯದ ವಿಶೇಷತೆಗಳು.

ಹೀಗೆ ಅಪ್ಪಟ ಕನ್ನಡ ಸಮುದಾಯವಾದ ರಾಮರಾಜ ಕ್ಷತ್ರಿಯ ಜನಾಂಗ ಕೇರಳದಲ್ಲಿದ್ದರೂ ಕನ್ನಡವನ್ನೇ ಮನೆಮಾತಾಗಿ ಶತಮಾನಗಳಿಂದ ಉಳಿಸಿಕೊಂಡು ಬೆಳೆಸಿಕೊಂಡು ಇಂದಿನವರೆಗೂ ಬಂದಿದೆ. ಗಡಿನಾಡಿನಲ್ಲಿ ಕನ್ನಡವನ್ನು ಉಳಿಸುತ್ತಿರುವ ಅನೇಕ ಸಮುದಾಯಗಳು ಇಂದಿಗೂ ಇವೆ ಅವುಗಳಲ್ಲಿ ರಾಮರಾಜ ಕ್ಷತ್ರಿಯವೂ ಒಂದು. ಕನ್ನಡಿಗರ ಮೇಲಿನ ಕೇರಳ ಸರ್ಕಾರದ ಉದಾಸೀನತೆಗೆ ಒಳಗಾಗಿ ಈ ಕಡೆ ಕರ್ನಾಟಕಕ್ಕೂ ಸೇರದೆ ಉಳಿದ ಈ ಮಂದಿ ಅಲ್ಲಿ ಕನ್ನಡದ ಉಸಿರನ್ನು ಇಂದಿಗೂ ಉಳಿಸಿದ್ದಾರೆ.

ಒಂದು ರಾಜ್ಯದ ಇತಿಹಾಸವು ಕೋಟೆ ಕೊತ್ತಲು, ಶಾಸನಗಳಿಂದ ತಿಳಿಯಲ್ಪಡುತ್ತವೆ. ಕೋಟೆಗಳು ಶಾಸನಗಳು ಇತಿಹಾಸದ ದರ್ಶನವಾಗಿದೆ. ರಾಮರಾಜ ಕ್ಷತ್ರಿಯ ಸಮುದಾಯವು ಅಂದು ಈ ಕೋಟೆ ಶಾಸನಗಳನ್ನು ಕಾದು ಕಾಪಾಡಿದ ಕಾರಣ ಇಂದು ಅವುಗಳ ಇತಿಹಾಸ ಜಗತ್ತಿಗೇ ತಿಳಿಯಲು ಅವಕಾಶವಾಗಿದೆ. ಆದರೆ ಕೋಟೆಗಳ ರಕ್ಷಣೆ ಮಾಡಿದ ರಾಮರಾಜ ಕ್ಷತ್ರಿಯ ಎಂಬ ಕನ್ನಡ ಸಮುದಾಯ ಮಾತ್ರ ಎಲೆಮರೆ ಕಾಯಿಯಂತೆ ಉಳಿದು ಹೋಗಿದೆ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.