Saturday, 3 February 2018

ಜನ ಮರುಳೊ, ಜಾಹೀರಾತೊ?

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 18

ಮಧ್ಯಮ ವರ್ಗದ ಜನರ ನಡುವೆ ಪ್ರಚುರಪಡಿಸಿದ ವಿಚಾರಗಳು ಒಳ್ಳೆಯ ಆದಾಯ ತರುತ್ತವೆ ಮತ್ತು ಇದನ್ನು ಸರಿಯಾಗಿ ತಿಳಿದುಕೊಂಡ ಜಾಹೀರಾತು ಮತ್ತು ಧಾರಾವಾಹಿಗಳು ಇದನ್ನು ಸಮರ್ಥವಾಗಿ ಬಳಸಿಕೊಂಡವು ಎನ್ನುವ ವಿಷಯವನ್ನು ನನ್ನ ಮೊದಲನೆ ಅಂಕಣದಲ್ಲಿ ತಿಳಿಸಿದ್ದೆ. ಈ ಕುರಿತು ಜಾಹೀರಾತಿನ ಹಣೆಬರಹವನ್ನು ಒಂದಷ್ಟು ವಿಶ್ಲೇಷಿಸೋಣ.

ನೀವು ಜಾಹೀರಾತುಗಳನ್ನು ಸೂಕ್ಷ್ಮವಾಗಿ ನೋಡಿದ್ದೀರಾದರೆ ಒಂದು ವಿಷಯ ನಿಮ್ಮ ಗಮನಕ್ಕೆ ಬಂದಿರುತ್ತದೆ. ಅದೇನೆಂದರೆ, ಹಲವಾರು ಜಾಹೀರಾತುಗಳು ನಮ್ಮ ಬದುಕಿನ ಸಹಜ ಸತ್ಯಗಳನ್ನು ಅತಿಶಯೋಕ್ತಿಯಿಂದ ಬಿಂಬಿಸಿ ನಮ್ಮೊಳಗೆ ಅಸಹನೆ ಸೃಷ್ಟಿಸಿ ಅವರ ಗಾಳಕ್ಕೆ ಬೀಳಿಸಿ ವ್ಯಾಪಾರ ಕುದುರಿಸುತ್ತಾರೆ. ಉದಾಹರಣೆ: ನಿಮ್ಮ ತಲೆಗೂದಲು ಬಿಳುಪಾಗುತ್ತಿದೆ ಎನ್ನುವುದು ಸಹಜ ಸತ್ಯ. ಅದನ್ನು ಬಿಳಿಯಾಗುವುದೇ ಒಂದು ಅಪರಾಧ ಎಂಬಂತೆ ಬಿಂಬಿಸಿ, ಕೂದಲು ಬಿಳಿಯಾದರೆ ನಾವು ಮುಂದಿನ ಅಷ್ಟೂ ಜೀವನ ದುಃಖದಲ್ಲೇ ಕಳೆಯಬೇಕು ಎಂಬಂತೆ ತೋರಿಸಿ ನಮ್ಮೊಳಗೆ ಒಂದು ಅಸಹನೆ ಸೃಷ್ಟಿಸಿ , ಅವರ ಉತ್ಪನ್ನ ಖರೀದಿಸುವಂತೆ ಮಾಡುತ್ತಾರೆ.

ಇದು ಬರೀ ಕೂದಲು ಬಿಳುಪಾಗುವ ವಿಚಾರವಲ್ಲ. ಒರಟು ಕೂದಲು, ದಪ್ಪ ಅಥವಾ ಸಪೂರ ಜೀವ, ಮೈ ಬೆವರಿನ ಗಂಧ ಯಾವುದನ್ನೇ ತೆಗೆದುಕೊಳ್ಳಿ, ಒಂದು ಅಸಹನೆಯ ಕಥೆ ತೋರಿಸಿ ಅವರ ಉತ್ಪನ್ನದ ವ್ಯಾಪಾರ ಮಾಡುತ್ತಾರೆ.

ಹೀಗೆ ನಮ್ಮ ಜೀವನದ ನಿಸರ್ಗ ಸಹಜ ಸತ್ಯಗಳ ಬಗ್ಗೆ ಜನರ ಮನಸ್ಸಿನಲ್ಲಿ ಅಸಹನೆ ಮೂಡಿಸುವುದು ಎಷ್ಟು ಸರಿ? ಕಪ್ಪು ಬಣ್ಣದವರಿಗೆ ಉದ್ಯೋಗ ಸಿಗದಂತಹ, ಕೂದಲು ಉದುರಿದ ವ್ಯಕ್ತಿ ಅಂಕಲ್ ಅನ್ನಿಸಿಕೊಳ್ಳುವಂತಹ, ದಪ್ಪ ಹೆಂಡತಿಯನ್ನು ಗಂಡ ಪ್ರೀತಿಸದಂತಹ, ಹಾಲಿಗೆ ಶಕ್ತಿ ಬರುವ ಹುಡಿ ಹಾಕಿದಾಗ ಮಾತ್ರ ಕ್ರಿಕೆಟ್ ಪಂದ್ಯ ಗೆಲ್ಲುವಂತಹ ಜಾಹೀರಾತುಗಳು ನಮ್ಮ ಮನಸ್ಸಿಗೆ ಯಾವ ಸಂದೇಶ ನೀಡುವುದಕ್ಕೆ ಹೊರಟಿದೆ? ತಮ್ಮ ಉತ್ಪನ್ನ ಮಾರಾಟ ಮಾಡಲು ಹೊರಟಿರುವುದು ತಪ್ಪಲ್ಲ, ಆದರೆ ಆ ಹೆಸರಲ್ಲಿ ನಮ್ಮ ಆತ್ಮವಿಶ್ವಾಸ, ಸ್ಥೈರ್ಯ, ಸಾಮರ್ಥ್ಯಗಳನ್ನು ಕುಂದಿಸುವ ನಿರಂತರ ಪ್ರಯತ್ನ ಜಾಹೀರಾತುಗಳು ಮಾಡುತ್ತಿರುವುದೇಕೆ?

ಜಾಹೀರಾತುಗಳನ್ನು ಇಷ್ಟು ಗಂಭೀರವಾಗಿ ಪರಿಗಣಿಸಬೇಕೆ ಎನ್ನುವ ಪ್ರಶ್ನೆ ನಿಮ್ಮದಾಗಿರಬಹುದು. ಸೆಕಂಡುಗಳಲ್ಲಿ ಬಂದು ಹೋಗುವ ಜಾಹೀರಾತುಗಳು ನಮ್ಮ ಮನೋವಲಯವನ್ನು ಅತಿಕ್ರಮಿಸಬಹುದೆ ಎಂದೂ  ನೀವು ಕೇಳಬಹುದು. ಆದರೆ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮನಸಿನಲ್ಲಿ ಬಹು ಸಮಯದವರೆಗೂ ನೆನಪಿನಲ್ಲಿ ಉಳಿಯುವಂತೆ ತಯಾರು ಮಾಡುವ ಜಾಹೀರಾತುಗಳು ನಮ್ಮ ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರುತ್ತವೆ. ಚಿಕ್ಕ ಮಕ್ಕಳನ್ನು ನೋಡಿ ಅವರು ಬೇರೇನಲ್ಲದಿದ್ದರೂ ಜಾಹೀರಾತುಗಳನ್ನು ತದೇಕಚಿತ್ತದಿಂದ ವೀಕ್ಷಿಸುತ್ತಾರೆ. ಮಕ್ಕಳು ನೋಡುವ ಜಾಹೀರಾತುಗಳು ಕೂಡ ಅವರ ವ್ಯಕ್ತಿತ್ವ ರೂಪಿಸುತ್ತವೆ. ಆತ್ಮ ವಿಶ್ವಾಸ ಕುಂದಿಸುವ ಜಾಹೀರಾತುಗಳನ್ನು ಅವರು ನೋಡುವುದು ಸರಿಯೆ?

ತನ್ನ ಗೆಲುವನ್ನು ಒಂದು ಮಗು ಹಾಲಿಗೆ ಹಾಕುವ ಪುಡಿಯಲ್ಲಿ ಕಾಣಬೇಕೆ? ತನ್ನ ಗಂಡನ ಪ್ರೀತಿಯನ್ನು ಒಂದು ಹೆಣ್ಣು ಜೀವ ಬಚ್ಚಿಸುವ ಆಹಾರದಲ್ಲಿ ಕಾಣಬೇಕೆ? ತನ್ನ ಕ್ರಿಯಾತ್ಮಕತೆಯನ್ನು ಒಬ್ಬ ಗೃಹಿಣಿ ಚಹದ ಪುಡಿಯಲ್ಲಿ ಕಾಣಬೇಕೆ? ಒಂದು ಗಂಡಸಿನ ಮುಖಕ್ಷೌರದ ನುಣುಪು ಹೆಣ್ಣೊಬ್ಬಳಿಂದಲೇ ತಿಳಿಯಬೇಕೆ?

ಜಾಹೀರಾತುಗಳ ಆಧಾರದ ಮೇಲೆ ಅವುಗಳ ಖರೀದಿ ಮಾಡುವ ಮತ್ತು ಮಾಡದಿರುವ ಬಗ್ಗೆ ಗ್ರಾಹಕರು ಜಾಗೃತಿ ಹೊಂದಬೇಕು. ಆಗ ಮಾತ್ರ ದಶಕಗಳಿಂದಲೂ ಜನರನ್ನು ವಂಚಿಸುವ ಜಾಹೀರಾತುಗಳು ಬದಲಾಗುವುದು. ಹಾಗೆ ಬದಲಾದಾಗ ಮಾತ್ರ ಜನರ ಜೀವನ ಮಟ್ಟ, ಚಿಂತನ ಮಟ್ಟ ಬದಲಾಗುವುದು. ಇಲ್ಲವಾದರೆ ನಾವು ಜಾಹೀರಾತುಗಳ ಅಧೀನಕ್ಕೆ ಒಳಪಟ್ಟು ಅವರು ತೋರಿಸಿದನ್ನು ನಂಬಿ ಸ್ವೀಕರಿಸಿ ಬದುಕಬೇಕಾಗುತ್ತದೆ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.