ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-20
ವಾಟ್ಸ್ ಆ್ಯಪ್ ಅಂಕಣದ ಪ್ರತಿ ಹತ್ತನೇ ಅಂಕಣವನ್ನು ಕನ್ನಡ ಕವಿಗಳಿಗೆ 🖋ಅರ್ಪಿಸುವ ಸಲುವಾಗಿ ಇಂದಿನ ಅಂಕಣ ರಸಋಷಿ ಕುವೆಂಪುರವರ ಸ್ಮರಣೆಯಲ್ಲಿ
ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ: ಇದು ಪಕ್ಷಿಕಾಶಿ! (ಇಲ್ಲಿ ಪ್ರವೇಶವಿಲ್ಲ ನಿನಗೆ, ಓ ಬೇಟೆಗಾರನೇ: ಇದು ಪಕ್ಷಿಗಳ ಕಾಶಿ!) ಹೀಗೆಂದು ಮಲೆನಾಡ ಸಹ್ಯಾದ್ರಿಗಳನ್ನು ಬಣ್ಣಿಸಿದವರು ಕುವೆಂಪು.
ಕನ್ನಡ ನಾಡು ಕಂಡ ಅನೇಕ ಮಹಾನ್ ಕವಿಗಳಲ್ಲಿ ಕುವೆಂಪುರವರು ಒಬ್ಬರು. ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ 1904 ಡಿಸೆಂಬರ್ 29ರಂದು ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಜನಿಸಿದರು. ವ್ಯವಸಾಯದ ಕುಟುಂಬದಿಂದ ಬಂದ ಕುವೆಂಪುರವರಿಗೆ ನಿಸರ್ಗದ ಒಡನಾಟ ಸಹಜವಾಗಿಯೇ ದೊರಕಿತು. "ಇಂತಹ ಸುಂದರ ಪ್ರಾತಃಕಾಲದಿ ಜೀವಿಸುವುದಕಿಂತಲು ಬೇರೆಯ ಗುರಿ ಜೀವಕೆ ಬೇಕಿಲ್ಲ" ಎನ್ನುವಲ್ಲಿ ಅವರ ನಿಸರ್ಗ ಪ್ರೀಯತೆ ಮನದಟ್ಟಾಗುತ್ತದೆ.
ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ, ತೀರ್ಥಹಳ್ಳಿಯಲ್ಲಿದ್ದ ಆಂಗ್ಲೊ ವರ್ನಾಕ್ಯುಲರ್ ಶಾಲೆಯಲ್ಲಿ ತಮ್ಮ ಹಿರಿಯ ಪ್ರಾಥಮಿಕ ವ್ಯಾಸಾಂಗವನ್ನು ಮಾಡಿದರು. ಉನ್ನತ ವ್ಯಾಸಾಂಗವನ್ನು ಮೈಸೂರಿನಲ್ಲಿ ಮಾಡಿದರು. ವ್ಯಾಸಾಂಗದ ಸಂದರ್ಭದಲ್ಲಿ ಅವರಿಗೆ ರಾಮಕೃಷ್ಣ ಆಶ್ರಮದಲ್ಲಿ ಉಳಿದುಕೊಳ್ಳುವ ಅವಕಾಶ ದೊರಕಿತು. ಸ್ವಾಮಿ ವಿವೇಕಾನಂದರ, ರವೀಂದ್ರನಾಥ ಟಾಗೋರರ ಹಾಗೂ ಆಂಗ್ಲ ಕವಿಗಳ ಬರವಣಿಗೆಯಿಂದ ಪ್ರಭಾವಿತರಾದರು. ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಪೂರ್ತಿ ಪಡೆದು ಖಾದಿ ಬಟ್ಟೆಯನ್ನು ಧರಿಸುತ್ತಿದ್ದರು.
ಆಂಗ್ಲ ಕವಿತೆಗಳಿಂದ ಅವರ ರಚನೆ ಕಾಲೇಜಿನಿಂದಲೇ ಆರಂಭವಾಯಿತು. ಆಂಗ್ಲ ಕವಿ ಜೇಮ್ಸ್ ಹೆಚ್ ಕಸಿನ್ ಅವರ ಭೇಟಿಯ ಅವಕಾಶ ದೊರೆಯಿತು. ಆಂಗ್ಲ ಕವಿಯು "ನೀವು ಯಾವುದಾದರೂ ಕವಿತೆಯನ್ನು ಕನ್ನಡದಲ್ಲಿ ಬರೆದಿದ್ದೀರ?" ಎಂದು ಕೇಳಲು, ಕುವೆಂಪು "ನನಗೆ ಕನ್ನಡದಲ್ಲಿ ಅಷ್ಟು ಬುನಾದಿ ಇಲ್ಲ" ಎಂದು ಉತ್ತರಿಸಿದ್ದರು. ಆಂಗ್ಲ ಕವಿ ಜೇಮ್ಸ್ ಹೆಚ್ ಕಸಿನ್ "ಪ್ರತಿಭಾಷೆಯು ತನ್ನದೇ ಬುನಾದಿ ಮತ್ತು ಶ್ರೇಷ್ಠತೆ ಹೊಂದಿರುತ್ತದೆ" ಎಂದು ಹೇಳಿದರು. ಪ್ರೇರಣೆಗೊಂಡ ಕುವೆಂಪು ಕನ್ನಡದಲ್ಲಿ ಬರೆಯತೊಡಗಿದರು. ನಂತರದಲ್ಲಿ ಅವರು ಕನ್ನಡದ ಮೇರು ಕವಿಗಳಲ್ಲಿ ಒಬ್ಬರಾಗಿದ್ದು ವಿಶೇಷ.
ಕುವೆಂಪುರವರ ಬರವಣಿಗೆಗಳು ಸಾರ್ವಕಾಲಿಕ ಸತ್ಯಗಳಾಗಿವೆ.
"ಪ್ರತಿಯೊಂದು ಮಗುವು ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು".
"ಪಾಪಿಗುದ್ಧಾರವಿಹುದ್ ಪೃಥ್ವಿಯ ಮಹಾನ್ ವ್ಯೂಹ ರಚನೆಯಲ್ಲಿ"
"ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು, ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿಹುದೇನು?"
"ಕೋಟಿ ಹಣವಿದ್ದರೂ ಪಟ್ಟಣವು ಗೋಳು, ಹಣವಿಲ್ಲದಿದ್ದರೂ ಸುಖ ಹಳ್ಳಿ ಬಾಳು".
ಹೀಗೆ ತಮ್ಮ ಘನ ಲೇಖನಗಳಿಂದ ನಮ್ಮನ್ನು ಚಿಂತನೆಗೆ ಹಚ್ಚಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು ರಚಿಸಿದ ಎರಡು ಕಾದಂಬರಿಗಳು "ಮಲೆಗಳಲ್ಲಿ ಮದುಮಗಳು" ಹಾಗೂ "ಕಾನೂರ ಹೆಗ್ಗಡತಿ" ಒಂದು ಮೈಲುಗಲ್ಲು. ಕುವೆಂಪು ಬರೆದ ಕೃತಿಗಳಲ್ಲಿ ಈ ಎರಡು ಕಾದಂಬರಿ ಅವರ ಕವಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಭಾರತದ ಯಾರೇ ಆದರೂ ಕಾದಂಬರಿಯನ್ನು ಅಭ್ಯಾಸಿಸುವಂತಿದ್ದರೆ ಅವರು ಕುವಂಪು ಬರೆದ ಈ ಎರಡು ಕಾದಂಬರಿಯನ್ನು ಓದದೆ ಮುಂದೆ ಹೋಗುವಂತಿಲ್ಲ. ಇದೇ ಅವರ ಸಾಹಿತ್ಯದ ಗಹನತೆಗೆ ಸಾಕ್ಷಿ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪಾತ್ರಗಳಾದ ನಾಯಿ ಗುತ್ತಿ, ತಿಮ್ಮಿ, ಐತ, ಪಿಂಚಲು, ಮುಂಕುದಯ್ಯ, ಚಿನ್ನಮ್ಮ, ಚೀಂಕ್ರ ಮುಂತಾದವು ಇಂದಿಗೂ ನೆನಪಿನಲ್ಲುಳಿಯುತ್ತವೆ.
ಪ್ರಕೃತಿ ಕವಿಯಾಗಿ ಅವರ ಸಾಹಿತ್ಯದುದ್ದಕ್ಕೂ ಹಕ್ಕಿ, ಗಿಡ, ಮರ, ನದಿಗಳ ಕುರಿತು ಯಥೇಚ್ಚ ವಿಷಯಗಳು ಪ್ರಸ್ತಾಪಿತವಾಗುತ್ತವೆ. ಹಕ್ಕಿ, ಹೂವು, ಮಕ್ಕಳು ಇರದೆ ಇದ್ದರೆ, ಆಗುತ್ತಿತ್ತು ನಮ್ಮ ಪೃಥವಿ ಬರಡು ಮರುಧರೆ" ಎಂದು ಅವರು ಉಲ್ಲೇಖಿಸುತ್ತಾರೆ.
ತುಂಗೆಯ ತಟದಲ್ಲಿ ಓಡಾಡಿದ ಕುವೆಂಪುರವರು ತುಂಗೆಯನ್ನು ಅಪರಿಮಿತವಾಗಿ ಬಣ್ಣಿಸುತ್ತಾರೆ. "ಮೊರೆಮೊರೆದು ಭೋರ್ಗರೆದು ಕಲ್ಗಳೆಡೆ ನೊರೆಸೂಸಿ ಹರಿವ ಈ ತುಂಗೆ, ಕರಿಯಾನೆಗಳ ಹಿರಿದಂಡು ಬಿದ್ದವೋಲೆಸೆವ ಈ ಹೆಬ್ಬಂಡೆಗಳ ಹಿಂಡು" ಎಂದು ವರ್ಣಿಸಿದ್ದಾರೆ.
ಕವಿಶೈಲ ಅವರ ಅಚ್ಚುಮೆಚ್ಚಿನ ತಾಣ. ಅವರ ಸಮಾಧಿಯನ್ನು ಅವರ ಮನೆಯಿಂದ ಅನತಿದೂರದಲ್ಲಿ ಶಿಖರಸ್ಥಾಯಿಯಾಗಿರುವ ಕವಿಶೈಲದಲ್ಲಿ ನಿರ್ಮಿಸಲಾಗಿದೆ. "ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ: ಮೌನವೇ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ, ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ, ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!" ಎಂದು ಕವಿಶೈಲದ ಶಾಂತತೆಯನ್ನು ಬಣ್ಣಿಸಿದ್ದಾರೆ.
ಸಣ್ಣಕತೆ: ಸನ್ಯಾಸಿ ಮತ್ತು ಇತರೆ ಕಥೆಗಳು, ನನ್ನ ದೇವರು ಮತ್ತು ಇತರೆ ಕಥೆಗಳು.
ಕವನ ಸಂಕಲನ: ಕೊಳಲು, ಪಾಂಚಜನ್ಯ, ನವಿಲು, ಪಕ್ಷಿಕಾಶಿ, ಚಂದ್ರಮಂಚಕೆ ಬಾ ಚಕೋರಿ, ಅನಿಕೇತನ, ಕೋಗಿಲೆ ಮತ್ತು ಸೋವಿಯತ್ ರಷ್ಯ
ಕಾದಂಬರಿ: ಕಾನೂರ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ನಾಟಕ: ಯಮನ ಸೋಲು, ರಕ್ತಾಕ್ಷಿ, ಬೆರಳ್ಗೆ ಕೊರಳ್, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರಂ
ವಿಮರ್ಶೆ: ಕಾವ್ಯ ವಿಹಾರ, ತಪೋನಂದನ, ರಸೋ ವೈ ಸಃ
ಆತ್ಮಕಥೆ: ನೆನಪಿನ ದೋಣಿಯಲಿ
ಶಿಶು ಸಾಹಿತ್ಯ: ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನ ಹಳ್ಳಿಯ ಕಿಂದರಿಜೋಗಿ
ಮಹಾಕಾವ್ಯ: ಶ್ರೀರಾಮಾಯಣ ದರ್ಶನಂ
ಹೀಗೆ ಎಲ್ಲಾ ಸಾಹಿತ್ಯ ಪ್ರಕಾರದಲ್ಲೂ ತಮ್ಮ ಕೃತಿ ಪ್ರಕಟಿಸಿದ್ದಾರೆ.
ಶ್ರೀ ರಾಮಾಯಣ ದರ್ಶನಂ ಕೃತಿಗೆ ಶ್ರೇಷ್ಠ ಜ್ಞಾನ ಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ಪ್ರಥಮ ಬಾರಿಗೆ ತಂದುಕೊಟ್ಟರು. ಪದ್ಮವಿಭೂಷಣ, ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರತ್ನ, ಪಂಪ ಪ್ರಶಸ್ತಿ ಹೀಗೆ ಹಲವು ಉನ್ನತ ಪ್ರಶಸ್ತಿಗಳು ಅವರ ಮುಡಿಗೇರಿದೆ.
ವಿಶ್ವಮಾನವ ಸಂದೇಶ ನೀಡಿದ ಇವರು ಮಂತ್ರ ಮಾಂಗಲ್ಯದಿಂದ ಸರಳ ವಿವಾಹ ಪದ್ಧತಿ ರೂಢಿಗೆ ತಂದರು. ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ವರ ಕವಿ ಬೇಂದ್ರೆ ಇವರನ್ನು ಯುಗದ ಕವಿ, ಜಗದ ಕವಿ ಎಂದು ಕರೆದಿದ್ದಾರೆ. 11 ನವೆಂಬರ್ 1994ರಂದು ದೈವಾಧೀನರಾದರು. ಹೀಗೆ ಕುವೆಂಪು ಕರ್ನಾಟಕ ಸಾರಸ್ವತ ಲೋಕದ ಕನ್ನಡಮ್ಮನ ಮುಕುಟದ ನವಮಣಿಯಂತೆ ಶಾಶ್ವತ ಶೋಭೆಯಾಗಿ ಉಳಿದು ಹೋದರು.
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.