Tuesday, 6 February 2018

ಕೃಷ್ಣಾ ಮತ್ತು ನವಿಲಗರಿ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-21

ಈ ಹಿಂದೆ ಕೃಷ್ಣನ ಕೊಳಲಿನ ಬಗ್ಗೆ ಬರೆದಿದ್ದೆ, ಆತ್ಮೀಯರೊಬ್ಬರು ಕೃಷ್ಣನ ಶಿರದಲ್ಲಿರುವ ನವಿಲ ಗರಿಯ ಬಗ್ಗೆ ಬರೆಯಿರಿ ಎಂದು ಕೇಳಿದ್ದರು ಆ ನಿಟ್ಟಿನಲ್ಲಿ ಇಂದಿನ ಅಂಕಣವನ್ನು ಕೃಷ್ಣನ ಶಿರದ ನವಿಲ ಗರಿಯ ಕುರಿತು ವಿಶ್ಲೇಷಿಸಲು ಮೀಸಲಿರಿಸಿದ್ದೇನೆ.

ಹಿಂದಿನ ಸಂಚಿಕೆಯಲ್ಲೇ ಅಂದಂತೆ ಕೃಷ್ಣ ಎಂದರೆ ಮನಮೋಹಕ. ಆದುದರಿಂದಲೇ ಆತನನ್ನು ಮೋಹನ ಎಂದು ಕರೆಯಲಾಗುತ್ತದೆ. ಆತನದು  ಶ್ಯಾಮಲ ವರ್ಣ ಹಾಗಾಗಿ ಆತ ಎಲ್ಲರನ್ನೂ ಸೆಳೆಯುತ್ತಿದ್ದ. ಅವನ ಈ ಸೆಳೆಯುವಿಕೆ ಎಷ್ಟು ತೀವ್ರವಾಗಿತ್ತು ಎಂದರೆ ಅವನು ಜನಿಸುವ ಸಮಯ ಕಾರಾಗೃಹದ ಕಾವಲುಗಾರರೂ ಸಹ ಅವನ ಸೆಳೆತಕ್ಕೆ ಸಿಕ್ಕು ಮೈಮರೆತು ಯಾವುದೋ ಮಾಯೆಯಲ್ಲಿ ತೇಲಾಡುತ್ತಿದ್ದರಂತೆ. ತನ್ನ ತಂದೆ ವಸುದೇವನಾದರೂ ಆ ಸೆಳೆತದ ಮಾಯೆಯಲ್ಲೇ ಅಲ್ಲವೆ ಬಾಲ ಕೃಷ್ಣನನ್ನು ಒಂದು ಬುಟ್ಟಿಯಲ್ಲಿ ಹೊತ್ತು ಗೋಪನ ಮನೆಯ ಕಡೆಗೆ ನಡೆಯತೊಡಗಿದ್ದು!

ಕೃಷ್ಣನ ಬದುಕಿನುದಕ್ಕೂ ಆತನನ್ನು  ಭೇಟಿಯಾದವರೆಲ್ಲರೂ  ಸೆಳೆತವನ್ನು ಅನುಭವಿಸಿದ್ದನ್ನು ನಾವು ಕಾಣಬಹುದು. ನವಿಲುಗರಿಯಾದರೂ ಇದೇ ಸೆಳೆತವನ್ನು ಪ್ರತಿನಿಧಿಸುತ್ತದೆ. ನೀವೆ ನೋಡಿ, ನವಿಲುಗರಿಯ ಬಣ್ಣ, ನಯ, ನಾಜೂಕಿಗೆ ಯಾರು ಮಾರು ಹೋಗುವುದಿಲ್ಲ? ನಾವೆಲ್ಲರೂ ಒಂದಲ್ಲ ಒಂದು ಘಳಿಗೆ ನವಿಲುಗರಿಯನ್ನು ಮುಟ್ಟಿ ಸಂತಸ ಪಟ್ಟಿದ್ದೇವೆ, ಪುಸ್ತಕಗಳ ಎಡೆಯಲ್ಲಿ ಇಟ್ಟಿದ್ದೇವೆ. ಕೃಷ್ಣನ ಈ ತೀವ್ರವಾದ ಸೆಳೆತವನ್ನು ನವಿಲುಗರಿಯೊಂದಿಗೆ ಸಮೀಕರಿಸಲಾಗಿದೆ. ನಮ್ಮ ಬದುಕು ಕೂಡ ಹೀಗೆಯೇ ಇರಬೇಕು. ಅಗಾಧ ಜೀವನ ಪ್ರೀತಿ ಈ ಸೆಳೆತವನ್ನು ಇತರರಲ್ಲಿ ಮೂಡಿಸುತ್ತವೆ. ಅದನ್ನೇ ನಾವು Positive Energy ಎಂದೆನ್ನುತ್ತೇವೆ.

ಕೃಷ್ಣನು ನವಿಲುಗರಿಯ ಧಾರಣೆ ಮಾಡಿದ ಕುರಿತು ಹಲವು ಕಥೆಗಳಿವೆ. ಅವೆಲ್ಲವೂ ಸುಂದರ ಕಾವ್ಯ ಕಲ್ಪನೆಗಳಷ್ಟೆ. ಹಾಗೊಂದು ಕಥೆ ಏನೆಂದರೆ, ನವಿಲುಗಳು ಮಳೆಯ ಕರಿ ಮೇಘಗಳನ್ನು ಕಂಡು ಕುಣಿಯುತ್ತವೆ ಅನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅಂತೆಯೇ ಗೋಪಾಲನಾದ ಕೃಷ್ಣನು ದನಗಳನ್ನು ಮೇಯಿಸಲು ಬೆಟ್ಟದ ತಪ್ಪಲಿಗೆ ಹೋದಾಗ ಗಿರಿನವಿಲುಗಳು ನೀಲ ಮೇಘ ವರ್ಣನಾದ ಕೃಷ್ಣನನ್ನು ಕಂಡು ಮೇಘವೇ ಧರೆಗಿಳಿದಿದೆ ಎಂದು ಭಾವಿಸಿ ಕುಣಿಯುತಿತ್ತಂತೆ!! ಕೃಷ್ಣನು ನುಡಿಸುತ್ತಿದ್ದ ಕೊಳಲ ನಾದಕ್ಕೆ ಹೇಗೆ ಗೋವುಗಳು ತಲೆದೂಗುತ್ತಿದ್ದವೊ ಹಾಗೆ ನವಿಲುಗಳು ಮತ್ತಷ್ಟು ಕುಣಿಯುತಿತ್ತಂತೆ. ಹಾಗಾಗಿ ಕೃಷ್ಣನು ನವಿಲಗರಿಯನ್ನು ತನ್ನ ಶಿರದಲ್ಲಿ ಮುಡಿದಿದ್ದಾನೆ ಅನ್ನುವುದೊಂದು ಸೊಗಸಾದ ಕಾವ್ಯ ಕಲ್ಪನೆ.

ಅಲ್ಲದೆ, ಸೆಳೆಯುವ ಕೃಷ್ಣನ ಉಡುಗೆ ತೊಡುಗೆಯೂ ಅವನ ಸೆಳೆತಕ್ಕೆ ಮತ್ತಷ್ಟು ಅವಕಾಶ ಕಲ್ಪಿಸುತ್ತದೆ. ಆತನ ರೂಪವೂ ಕೂಡ ಅವನ ಸೆಳೆತಕ್ಕೆ ಕಾರಣವು ಹೌದು. ಅವನ ಮೇಘ ವರ್ಣ, ಆ ಶ್ಯಾಮಲ ವರ್ಣದ ಮೈಗೆ ಪೀತಾಂಬರ(ಹಳದಿ ಬಟ್ಟೆ), ಪ್ರೇಮಗಾನದ ನಾದ ಹೊಮ್ಮಿಸುವ ಕೊಳಲು, ನೀಲ ಕಣ್ಣಿನ ಹೊಳೆಯುವ ನವಿಲಗರಿ, ಜುಳು ಜುಳು ಹರಿವ ಯಮುನೆಯ ದಡ ಇದೆಲ್ಲವೂ ಮನಸ್ಸಿಗೆ ಮುದ ನೀಡುವವು. ಹಾಗಾಗಿ ಇದೆಲ್ಲವನ್ನೂ ಅವನಿಗೆ ಆರೋಪಿಸಲಾಗಿದೆ. ಅಂತರಂಗದ ಜೀವನಪ್ರೀತಿ ಬಹಿರಂಗದಲ್ಲಿ ಎದ್ದು ಕಾಣುತ್ತವೆ ಅನ್ನುವುದು ಇದಕ್ಕೆ ಸಾಕ್ಷಿ. ಹಾಗಾದಾಗ ಮಾತ್ರ ನಮ್ಮ ವಲಯದಲ್ಲಿ ಬಂದವರನ್ನೆಲ್ಲಾ ಸೆಳೆಯುವುದಕ್ಕೆ ಶಕ್ಯ. ಕೃಷ್ಣ ಮತ್ತು ನವಿಲಿನ ನಡುವೆ ಈ ಸಾಮ್ಯತೆ ಕಾಣುವುದು ಸಾಧ್ಯ. ಆದುದರಿಂದಲೇ ನವಿಲಿಗೆ ಪೂಜ್ಯ ಸ್ಥಾನವನ್ನು ಭಾರತೀಯ ಕಲ್ಪನೆಯಲ್ಲಿ ಕೊಡಲಾಗಿದೆ. ವಿದ್ಯೆಯ ಅಧಿದೇವತೆ ಸರಸ್ವತಿಗೂ, ದೇವತೆಗಳ ಸೇನಾಧಿಪತಿ ಸುಬ್ರಹ್ಮಣ್ಯನಿಗೂ ನವಿಲಿನ ವಾಹನವನ್ನು ಆರೋಪಿಸಲಾಗಿದೆ.

ಕೃಷ್ಣನ ಕೊಳಲ ನಾದದಂತೆ ನವಿಲ ಗರಿಯೂ ಸೆಳೆಯುವಂತದ್ದು. ನವಿಲ ಗರಿಯ ಕಣ್ಣು ಆತನ ಬಣ್ಣದೊಡನೆ ಸಮೀಕರಣಗೊಂಡು ಅಭೇದವನ್ನುಂಟು ಮಾಡಿದೆ.

ಇದೆಲ್ಲವೂ ಕಾವ್ಯ ಪರಿಕಲ್ಪನೆಯಷ್ಟೆ ಅಲ್ಲದೆ ಮತ್ತೇನು. ಯಾರು ಯಾರು ಯಾವ ಯಾವ ಭಾವದಲ್ಲಿ ತೆಗೆದುಕೊಳ್ಳುತ್ತಾರೊ, ಅವರಿಗೆ ಅದೇ ಭಾವದಲ್ಲಿ ಕಾಣಿಸುತ್ತೇನೆ ಎಂದು  ಕೃಷ್ಣ ಭಗವದ್ಗೀತೆಯಲ್ಲಿ ಹೀಗೆ ಹೇಳುತ್ತಾನೆ "ಯೇ ಯತಾಂ ಪ್ರಪದ್ಯಂತೆ, ತಮ್ ಸ್ಥತೈವ ಭಜಾಮ್ಯಹಂ"

ಕೃಷ್ಣ ಎನ್ನುವುದೇ ಒಂದು ಸುಂದರ ಕಲ್ಪನೆ, ಮನಸ್ಸಿಗೆ ಮುದನೀಡುವಂತದ್ದು. ಆತನ ಸುತ್ತಲಿನ ವಸ್ತು, ಪಾತ್ರಗಳು, ಘಟನೆಗಳು ಒಂದೊಂದು ಸಂದೇಶ, ಸಂಕೇತಗಳಾಗಿ ನಮ್ಮನ್ನು ಕಾಲದಿಂದ ಕಾಲಕ್ಕೆ ತಲುಪುತ್ತಿರುತ್ತವೆ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.