Wednesday, 7 February 2018

ಒಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-22

ಈ ಹಿಂದೆಯೇ ಹೇಳಿದಂತೆ ಮಹಾಭಾರತದ ಹಲವು ಉದ್ಧಾತ ಪಾತ್ರಗಳಲ್ಲಿ ಎರಡು ಪಾತ್ರ ಪ್ರಾತಃಸ್ಮರಣೀಯವಾಗುತ್ತದೆ. ಒಂದು *ಶ್ರೀ ಕೃಷ್ಣ* ಮತ್ತೊಂದು *ದಾನಶೂರ ಕರ್ಣ*. ಇವತ್ತಿನ ಈ ಅಂಕಣ ಮಹಾಭಾರತದ ದುರಂತ ನಾಯಕನಾದ ಕರ್ಣನ ಕುರಿತು.

*ಕರ್ಣ* ಒಂದು ಪಾತ್ರ ಮಾತ್ರವೇ ಅಲ್ಲ, ಆತ ಸತ್ಯ, ನ್ಯಾಯ, ದಾನ, ಧರ್ಮ, ಸ್ವಾಮಿ ನಿಷ್ಠೆ, ಪರಾಕ್ರಮ ಇವೆಲ್ಲವೂ ಮೈದೆಳೆದು ನಿಂತ ಮೂರ್ತರೂಪ. ಯಾವುದೇ ತಂದೆ ತಾಯಿಗೆ ತನ್ನ ಮಕ್ಕಳು ಪರಾಕ್ರಮಿ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಂತರಾಗಬೇಕು ಎಂಬ ಆಶಯವಿದ್ದಲ್ಲಿ *ಮಕ್ಕಳಿಗೆ ಕರ್ಣನ ಕಥೆ ಹೇಳಬೇಕು.* ಯಾಕೆಂದರೆ ಸಣ್ಣಪುಟ್ಟ ಸೋಲಿಗೂ ಆತ್ಮಹತ್ಯೆ ಮಾಡುವ ಮನಸ್ಥಿತಿಯ ಮಕ್ಕಳು ಕರ್ಣನು  ಬದುಕಿನುದ್ದಕ್ಕೂ ಅನುಭವಿಸಿದ ಅವಮಾನ ಮತ್ತು ತನ್ನ ಸಾಮರ್ಥ್ಯದ ಅಸ್ತಿತ್ವಕ್ಕೆ ಕೊನೆಯವರೆಗೂ ಮಾಡಿದ ಹೋರಾಟಗಳನ್ನು ಮಕ್ಕಳು ತಿಳಿದುಕೊಳ್ಳಬೇಕು.

ಕರ್ಣನ ಕಥೆ ಆರಂಭವಾಗುವುದೇ *ಕುಂತಿ* ಎಂಬ ಅವಿವಾಹಿತ ಹೆಣ್ಣು ಮಗಳು ದೂರ್ವಾಸ ಮುನಿಗಳು ಕೊಟ್ಟ ದೇವತೆಗಳಿಂದ ಮಕ್ಕಳನ್ನು ಪಡೆಯುವ  ವರವನ್ನು ಮಕ್ಕಳಾಟಿಕೆಯಂತೆ ಸೂರ್ಯದೇವನ ಹೆಸರಲ್ಲಿ ಬಳಸಿದಾಗ. ಸೂರ್ಯನೇ ಪ್ರತ್ಯಕ್ಷನಾಗಿ ಕರ್ಣ ಕುಂಡಲ, ಕವಚಗಳಾದಿಯಾಗಿ ಇದ್ದಂತಹ ಸೂರ್ಯ ತೇಜಸ್ಸಿನ ಮಗುವೊಂದನ್ನು ಕುಂತಿಯ ಕೈಲಿಟ್ಟು ಅಂತರ್ಧಾನನಾಗುತ್ತಾನೆ. ಮಕ್ಕಳಾಟಿಕೆಯಿಂದ ಎಂತಹ ತಪ್ಪು ಘಟಿಸಿತು ಎಂದು ಅರಿವಾಗುವಷ್ಟರಲ್ಲಿ ಮಗು ಕುಂತಿಯ ಕೈಯಲ್ಲಿತ್ತು. *ಲೋಕಾಪವಾದಕ್ಕೆ ಅಂಜಿ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟಳು ಕುಂತಿ.* ಹೀಗೆ ಹುಟ್ಟಿದಾಗಲೇ ಹೆತ್ತ ತಾಯಿ ಮತ್ತು ಕೊಟ್ಟ ತಂದೆಯಿಂದ ದೂರಾಗುವ *ದುರಂತವೇ ವಿಧಿ ಕರ್ಣನ ಪಾಲಿಗೆ ಉಂಟು ಮಾಡುತ್ತದೆ.*

ಹೀಗೆ ತೇಲಿ ಬಂದ ಮಗು ರಥ ಓಡಿಸುವನೊಬ್ಬನಿಗೆ ದೊರಕಿ ಆತ ಅದನ್ನು ತನ್ನದೇ ಮಗುವಿನಂತೆ ಸಾಕಿದ. ಆ ಮಗುವಿಗೆ *"ವಸುಷೇಣ"* ಎಂದು ಹೆಸರಿಟ್ಟ. ಆತನ ಹೆಂಡತಿ ರಾಧೆ ಸಾಕಿದ್ದರಿಂದ *"ರಾಧೇಯ"* ಎಂಬ ಹೆಸರನ್ನೂ ಪಡೆದ. ಕನ್ಸೆಯಲ್ಲೆ ಹುಟ್ಟಿದ್ದ ಕಾರಣ *ಕಾನೀನ* ಎಂಬ ಹೆಸರೂ ಬಂತು. ಕಿವಿಯಲ್ಲಿ ಕರ್ಣ ಕುಂಡಲ ಇದ್ದಿದ್ದರಿಂದ *"ಕರ್ಣ"* ಎಂದು ಕರೆದರು. ಆದರೆ ಆತನನ್ನು ಪ್ರತಿಹಂತದಲ್ಲೂ *"ಸೂತಪುತ್ರ"* ಎಂದೇ ಜರಿದರು. ಹೀಗೆ *ಸೂರ್ಯವಂಶ*ವೆಂಬ ಶ್ರೇಷ್ಠ ಕುಲದವನೇ ಆದರೂ ಸೂತಪುತ್ರನೆಂದು ಕರೆದು *ಯೋಗ್ಯತೆ ಇದ್ದೂ ಯೋಗವೇ ಇಲ್ಲದಂತೆ* ವಿಧಿ ಕರ್ಣನ ಬದುಕಲ್ಲಿ ನಡೆಯುತ್ತದೆ.

ಕರ್ಣನಿಗೆ ಬಿಲ್ಲುವಿದ್ಯೆಯ ಬಗ್ಗೆ ಬಹಳ ಆಸಕ್ತಿ ಹಾಗಾಗಿ *ಪರಶುರಾಮ*ರಲ್ಲಿ ಬಿಲ್ಲುವಿದ್ಯೆ ಕಲಿಯುವ ಅಗಾಧ ಆಶಯದೊಂದಿಗೆ ಹೋಗುತ್ತಾನೆ. ಆದರೆ ಬ್ರಾಹ್ಮಣರಿಗೆ ಮಾತ್ರ ವಿದ್ಯೆ ಕಲಿಸುವ ದೀಕ್ಷೆತೊಟ್ಟ ಪರಶುರಾಮರಲ್ಲಿ ಬ್ರಾಹ್ಮಣನೆಂದು ಸುಳ್ಳುನುಡಿದು ಕರ್ಣ ವಿದ್ಯೆ ಕಲಿಯುತ್ತಾನೆ. ಪ್ರತಿ ಹಂತದಲ್ಲೂ ಸೂತಪುತ್ರ ಎಂಬ ಜಾತಿಯ ಹೆಸರಲ್ಲಿ ತನ್ನ ಸಾಮರ್ಥ್ಯವನ್ನು ಕಡೆಗಣಿಸುವ ಈ ಮನೋಧರ್ಮವನ್ನು ಒಪ್ಪದ ಕರ್ಣನಿಗೆ ಜಾತಿ ವ್ಯವಸ್ಥೆಯ ಬಗ್ಗೆ ಅಸಹನೆ ಇದ್ದು *ವಿದ್ಯೆ ಎಲ್ಲರ ಹಕ್ಕು* ಅನ್ನುವ ತತ್ವ ಪ್ರತಿಪಾದನೆಯಲ್ಲಿ ಆತನಿಗೆ ಬ್ರಾಹ್ಮಣ ಎಂದು ಸುಳ್ಳು ನುಡಿದು ವಿದ್ಯೆ ಕಲಿತದ್ದು ತಪ್ಪು ಯಾ ಅಪರಾಧ ಎಂದೆನಿಸಲಿಲ್ಲ. ಆದರೂ ವಿದ್ಯೆ ಕಲಿತ ತರುವಾಯ ಸತ್ಯ ಅರಿತ ಪರಶುರಾಮರು ಅಗತ್ಯ ಸಂದರ್ಭದಲ್ಲಿ ಈ ಬಿಲ್ಲು ವಿದ್ಯೆ ನಿನಗೆ ನೆನಪಾಗದೇ ಹೋಗಲಿ ಎಂಬ ಶಾಪವೀಯುತ್ತಾರೆ. ಇದನ್ನೇ *ಪಂಪ* ತನ್ನ *ವಿಕ್ರಮಾರ್ಜುನವಿಜಯ*ದಲ್ಲಿ *"ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನಕಾಲದೊಳ್ ಬೆಸಕೆಯ್ಯದಿರ್ಕೆ"* ಎಂದು ಉಲ್ಲೇಖಿಸುತ್ತಾನೆ. ಹೀಗೆ ಮತ್ತೊಮ್ಮೆ ವಿಧಿ ತನ್ನದಲ್ಲದ ತಪ್ಪಿಗೆ ಕರ್ಣನ ಬದುಕಿನಲ್ಲಿ ಆಟವಾಡುತ್ತದೆ.

ಕೌರವ ಮತ್ತು ಪಾಂಡವರ ಶಸ್ತ್ರವಿದ್ಯಾ ಪ್ರದರ್ಶನದ ಸಂದರ್ಭದಲ್ಲೂ ಅರ್ಜುನನಿಗೆ ಸೂತ ಪುತ್ರನಾದ ಕರ್ಣ ಸರಿಸಮನಲ್ಲ ಎಂದು ಜರಿದು ಶಸ್ತ್ರ ಪ್ರದರ್ಶನಕ್ಕೆ ಗುರು *ದ್ರೋಣ* ಅವಕಾಶ ಕಲ್ಪಿಸದೆ ವಿಧಿ ಮತ್ತೊಮ್ಮೆ ತನ್ನದಲ್ಲದ ತಪ್ಪಿಗೆ ಶಿಕ್ಷಿಸುತ್ತದೆ.

*ದ್ರೌಪದಿಯ ಸ್ವಯಂವರ*ದಲ್ಲಿಯೂ ಅರ್ಜುನನಿಗಿಂತ ಮೊದಲು ಮೀನಿನ ಕಣ್ಣಿಗೆ ಬಿಲ್ಲು ಕರ್ಣನೇ ಚುಚ್ಚಿದರೂ "ಸೂತಪುತ್ರ"ನನ್ನು ವರಿಸಲಾರೆ ಎಂದು *ದ್ರೌಪದಿ* ಕರ್ಣನ ಪರಾಕ್ರಮವನ್ನು ನೋಡದೆ ಅವಮಾನಿಸುತ್ತಾಳೆ. ವಿಧಿ ಮತ್ತೆ ಪುನಃ ಕರ್ಣನಿಗೆ ಅನ್ಯಾಯವೇ ಮಾಡುತ್ತದೆ.

ಯುದ್ಧ ಘೋಷಣೆಯಾಗುವ ಸಂದರ್ಭದಲ್ಲಿ ಸಂಧಾನಕ್ಕಾಗಿ ಬರುವ *ಕೃಷ್ಣ* ಮಾನಸಿಕ ಯುದ್ಧವನ್ನು ಕರ್ಣನೊಂದಿಗೆ ಹೂಡುತ್ತಾನೆ. ತಾನು ಕುಂತಿಯ ಮಗ, ಪಾಂಡವರ ಅಣ್ಣ ಎಂಬ ಸತ್ಯವನ್ನು ಯುದ್ಧ ಕಾಲದ ಸನ್ನಿಹತದಲ್ಲಿ ತಿಳಿಸಿ ಇಬ್ಬಂದಿಗೆ ಸಿಲುಕಿಸುತ್ತಾನೆ. ಹೀಗೆ ಕೌರವನಿಗಾಗಿ ಸಂಪೂರ್ಣ ಯುದ್ಧವನ್ನು ಮಾಡಲಾಗದಂತಹ ಮಾನಸಿಕ ಗೊಂದಲವುಂಟು ಮಾಡುವ ಮೂಲಕ ವಿಧಿ ಮತ್ತೊಮ್ಮೆ ಕರ್ಣನ ಬದುಕಿನಲ್ಲಿ ಆಟವಾಡುತ್ತದೆ.
ಇದನ್ನು *ಕುಮಾರವ್ಯಾಸ* *"ಕರ್ಣಾಟಕ ಭಾರತ ಕಥಾಮಂಜರಿ"*ಯಲ್ಲಿ ಸೊಗಸಾಗಿ ಹೇಳಿದ್ದಾನೆ.
*"ಕೊರಳ ಸೆರೆ ಹಿಗ್ಗಿದವು ದೃಗುಜಲವುರವಣಿಸಿ ಕಡುನೊಂದನಕಟಾ ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ ಹರಿಯ ಹಗೆ ಹೊಗೆದೋರದುರುಹದೆ ಬರಿದೆ ಹೋಹುದೆ ತನ್ನ ಜನನವನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ"* ಎಂದು ಬಣ್ಣಿಸುತ್ತಾನೆ.
ಅರ್ಥಾತ್ ಗಂಟಲು ಕಟ್ಟಿತು, ಕಣ್ಣೀರು ಸುರಿದು  ಅಯ್ಯೋ, ಕೌರವನಿಗೆ ಕೇಡಾಯಿತು ಎಂದು ಬಹಳವಾಗಿ ನೊಂದ. ಹರಿಯ ದ್ವೇಷದಹೊಗೆ ಉರಿಯದೆ ಹೋಗುವುದೆ, ನನ್ನ ಜನನವನು ಹೇಳಿ ಕೊಂದು ಬಿಟ್ಟ ಎಂದು ಚಿಂತಿಸಿದ ಎಂದು ಕುಮಾರವ್ಯಾಸ ಬಹಳ ಸೊಗಸಾಗಿ ಅದನ್ನು ವರ್ಣಿಸುತ್ತಾನೆ.

ದಾನ ಕೇಳಿ ಬಂದವರಿಗೆ ಎಂದಿಗೂ ಬರಿಗೈಯಲ್ಲಿ ಕಳುಹಿಸದ ಕರ್ಣನ ಬಳಿ ತಾಯಿ ಕುಂತಿಯೇ ಬಂದು ಯುದ್ಧದಲ್ಲಿ ತನ್ನ *ಐವರು ಮಕ್ಕಳನ್ನು ಕೊಲ್ಲದೆ ಉಳಿಸಿಕೊಡು* ಎಂದು ಕೇಳುತ್ತಾಳೆ. ತನ್ನದೇ ಮಗನೆಂದು ಗೊತ್ತಿರುವ ತಾಯಿ ಇಂತಹ ದಾನ ಕೇಳುವಾಗ ತನ್ನದೇ ತಾಯಿಯೆಂದು ಗೊತ್ತಿರುವ ಮಗ ಕರ್ಣನಿಗೆ ಏನಾಗಿರಬೇಡ. ಐದು ಜನ ಉಳಿದರೆ ಸಾಕೆ? ತನ್ನನ್ನೂ ಸೇರಿಸಿ ಆರಲ್ಲವೆ? ತನ್ನ ಉಳಿವನ್ನು ಬಯಸುತ್ತಿಲ್ಲವೆ ಹೆತ್ತ ತಾಯಿ? ಈ ಪ್ರಶ್ನೆಗಳು ಮೂಡಿರದೆ ಕರ್ಣನ ಮನಸ್ಸಿನಲ್ಲಿ? ಆದರೂ ಮಾತಿಗೆ ಒಪ್ಪಿ ಅರ್ಜುನನ್ನು ಬಿಟ್ಟು ಬೇರಾರನ್ನೂ ಕೊಲ್ಲಲಾರೆ ಎಂದು ಮಾತೀಯುತ್ತಾನೆ. ತಾನು ಸತ್ತರೆ ಎಂತೂ ಐವರು ಉಳಿಯುತ್ತಾರೆ,  ಅರ್ಜುನ ಸತ್ತರೆ ತನ್ನನ್ನು ಸೇರಿಸಿ ಐವರು ಉಳಿಯುತ್ತಾರೆ. ಒಟ್ಟಿನಲ್ಲಿ ಪಂಚಪಾಂಡವರು ತಾಯಿಗೆ ಉಳಿಯುತ್ತಾರೆ!!

ದಾನಕ್ಕಾಗಿ ಬಂದ *ಇಂದ್ರ*ನು ಅರ್ಜುನನ ಗೆಲುವಿಗಾಗಿ ಕರ್ಣ ಕುಂಡಲ, ಕವಚವನ್ನು ಕೇಳಿದಾಗ ಮೈಯ ಚರ್ಮದಿಂದ ಕಿತ್ತುಕೊಟ್ಟ ಕರ್ಣ *ಅಮರತ್ವವನ್ನೇ ಕಳೆದುಕೊಳ್ಳುತ್ತಾನೆ.*

ಹೀಗೆ ಪ್ರತಿ ಹಂತದಲ್ಲೂ ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾಗಿ, ಅವಮಾನವನ್ನನುಭವಿಸುತ್ತಾನೆ ಕರ್ಣ. *ಯೋಗ್ಯತೆ ಇದ್ದೂ ಯೋಗವಿಲ್ಲದಂತೆ* ವಿಧಿ ಲೀಲೆಗೆ ಸಿಕ್ಕ ಕರ್ಣನ ಯುದ್ಧ ಮತ್ತು ರಣರಂಗದ ಅಸಹಾಯಕತೆಯನ್ನು ಮುಂದಿನ ಅಂಕಣದಲ್ಲಿ ವಿಶ್ಲೇಷಿಸೋಣ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.