Thursday, 8 February 2018

ನನ್ನಿಯೊಳಿನತನಯಂ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 23

*"ಕರ್ಣ”* 🏹ಎನ್ನುವ ಪಾತ್ರ ಮಹಾಭಾರತದಲ್ಲಿ ಇಲ್ಲದೇ ಹೋಗಿದ್ದರೆ ಬಹುಶಃ ಮಹಾಭಾರತದ ಒಟ್ಟಂದಕ್ಕೆ ಧಕ್ಕೆಯಾಗುತ್ತಿತ್ತು. ಆ ಮಟ್ಟಿಗೆ *ಕರ್ಣ*🏹 ಎಂಬ ಪಾತ್ರ ಒಂದು ಗಟ್ಟಿತನವನ್ನು ಇಡೀ ಮಹಾಭಾರತಕ್ಕೆ ಕಟ್ಟಿಕೊಟ್ಟಿದೆ. ಆತನಿಂದಲೇ ಮಹಾಭಾರತಕ್ಕೆ ಶ್ರೇಷ್ಠತಮ ಮೆರುಗು ಸಿಕ್ಕಿತು. ಪಂಪ ಭಾರತದ ಲೋಕ ಪೂಜ್ಯರಲ್ಲಿ ಕರ್ಣನನ್ನು ಗುರುತಿಸಿ *ನನ್ನಿಯೊಳಿನತನಯಂ*🌞🏹 ಎನ್ನುತ್ತಾನೆ ಅರ್ಥಾತ್ ಸತ್ಯಪರತೆಯಲ್ಲಿ ಸೂರ್ಯನ ಮಗ (ಕರ್ಣ).

*ಕರ್ಣ*ನ 🏹ಬದುಕಿನಲ್ಲಿ ಯಾವೆಲ್ಲಾ ಪಾತ್ರಗಳು ವಿಧಿಯ ಜೊತೆ ಸೇರಿ ಹೇಗೆಲ್ಲಾ ಅನ್ಯಾಯ, ಮೋಸಗಳನ್ನು ನಡೆಸಿದವು ಎನ್ನುವುದನ್ನು ನಿನ್ನೆಯ ಅಂಕಣದಲ್ಲಿ ಚರ್ಚಿಸಲಾಗಿತ್ತು. ಆದರೆ, ಇವೆಲ್ಲವುಗಳ ನಡುವೆಯೂ *ಕರ್ಣ*ನ 🏹ಬದುಕಿಗೆ ಆಸರೆಯ ಮಿಂಚಾಗಿ ಉಳಿಯುವವನು ಒಬ್ಬನೇ ಒಬ್ಬ. ಆತ *ಸುಯೋಧನ!* ಲೋಕ ಇಂದು ಅವನನ್ನು ನೆನಪಿಟ್ಟುಕೊಳ್ಳುವುದು *ದುರ್ಯೋಧನ* ಎಂದು ಆದರೆ ಅವನು ನಿಜವಾಗಿಯೂ *ಸುಯೋಧನ ಅರ್ಥಾತ್ ಒಳ್ಳೆಯ ಯೋಧ.* ಪುತ್ರವಾತ್ಸಲ್ಯದ ಮೋಹವೆಂಬ ಕುರುಡು ಕಣ್ಣಿಗಡರಿದ ತಂದೆ *ಧೃತರಾಷ್ಟ್ರ* ಮತ್ತು ಮಗನ ಮೇಲಿನ ಅತಿ ಪ್ರೀತಿಯ ಕಣ್ಣಪಟ್ಟಿಯಿಂದ ಕುರುಡಾದ ತಾಯಿ *ಗಾಂಧಾರಿ*ಯ ಮುದ್ದಿನಿಂದಷ್ಟೇ ಆತ *ದುರ್ಯೋಧನಾದುದು ಅರ್ಥಾತ್ ಕೆಟ್ಟ ಯೋಧ!*

ಎಲ್ಲರೂ ಕರ್ಣನನ್ನು ಜಾತಿಯಿಂದ ಗುರುತಿಸಿದರೆ *ದುರ್ಯೋಧನ ಸಾಮರ್ಥ್ಯದಿಂದ ಕರ್ಣನನ್ನು ಗುರುತಿಸಿದ.* *ಸಾಹಸಿಗೆ ಕುಲವಿಲ್ಲ, ಆತನಿಗೆ ವೀರತ್ವವೇ ಕುಲ* ಎಂದು ಪಂಪನು ತನ್ನ ಕಾವ್ಯದಲ್ಲಿ ದುರ್ಯೋಧನನ ಕೈಯಿಂದ ಹೇಳಿಸಿದ್ದಾನೆ. ಜಾತಿಯೇ ಮುಖ್ಯ ಎಂದಾದಲ್ಲಿ ಇಗೊ ನಿನ್ನನ್ನು ಅಂಗ ದೇಶದ ರಾಜನನ್ನಾಗಿ ಮಾಡುವೆ ಎಂದು *ಅಂಗರಾಜ್ಯ ಪಟ್ಟಾಭಿಷೇಕ*ವನ್ನು ಮಾಡಿ ನಿಜ ಸ್ನೇಹದ ಗುಣವನ್ನು ಮೆರೆದವನು ದುರ್ಯೋಧನ!!

ಅಲ್ಲಿಂದಾಚೆಗೆ *ಕರ್ಣ*ನಿಗೆ🏹 ದುರ್ಯೋಧನನ ಶ್ರೇಯಸ್ಸೇ ಬದುಕಿನ ಗುರಿಯಾಗುತ್ತದೆ. ದುರ್ಯೋಧನನಿಗಾದರೂ ಕರ್ಣನು ಆಪ್ತ ಗೆಳೆಯನೇ ಆಗುತ್ತಾನೆ. *ದುರ್ಯೋಧನನ ರಾಣಿ ಭಾನುಮತಿಯ ಅಂತಃಪುರದಲ್ಲಿ ಆಕೆಯ ಮಂಚದ ಮೇಲೆ ಕುಳಿತು ಆಕೆಯೊಡನೆ ಪಗಡೆಯಾಡುವಷ್ಟು ಕರ್ಣ ದುರ್ಯೋಧನನಿಗೆ ಆಪ್ತ, ದುರ್ಯೋಧನನಿಗಾದರೂ ಕರ್ಣನ ಮೇಲೆ ಅಂತಹ ಭರವಸೆ.* ಲೋಕದಲ್ಲಿ ಸ್ನೇಹಕ್ಕೆ ಕೃಷ್ಣ ಸುಧಾಮರ, ಕೃಷ್ಣಾರ್ಜುನರ ಹೆಸರುಗಳೇ ಕೇಳಿಬಂದರೂ *ಕರ್ಣ ದುರ್ಯೋಧನರ ಸ್ನೇಹ ಅದಕ್ಕಿಂತಲೂ ಮಿಗಿಲಾದುದು.*

ಹೀಗೆ ಬದುಕಿನುದ್ದಕ್ಕೂ ಹೋರಾಡಿದ *ಕರ್ಣ*🏹 ಹದಿನೇಳನೇ ದಿನದ ಯುದ್ಧದಲ್ಲಿ ಅರ್ಜುನನ ವಿರುದ್ಧದ ಹೋರಾಟದ ಸಮಯದಲ್ಲಿ ಕರ್ಣನ ರಥದ ಚಕ್ರವು ರಕ್ತದ ಮಡುವಿನಲ್ಲಿ ತೊಯ್ದು ಕೆಸರಾಗಿದ್ದ ಯುದ್ಧ ಭೂಮಿಯಲ್ಲಿ ಹೂತು ಹೋದವು. ಸಾರಥಿ ಶಲ್ಯನೂ ಬಿಟ್ಟು ಹೊರಟು ಹೋಗಿರುವಾಗ ಕರ್ಣ ಸ್ವತಃ ತಾನೇ ರಥದಿಂದಿಳಿದು ಚಕ್ರವನ್ನು ಮೇಲೆತ್ತಲು ತೊಡಗುತ್ತಾನೆ. ಇದೇ ಸಂದರ್ಭ ಎಂದರಿತ ಕೃಷ್ಣ ಅರ್ಜುನನಿಗೆ *“ಹೂಡು ಬಾಣ”* 🏹ಎಂದು ಹೇಳುತ್ತಾನೆ. ಕರ್ಣ *“ಇದು ನ್ಯಾಯ ಸಮ್ಮತವಲ್ಲ, ಶಸ್ತ್ರರಹಿತರ ಮೇಲೆ ಬಾಣ ಹೂಡುವುದು ರಣನೀತಿಯಲ್ಲ”* 🙅🏼‍♂ ಎಂದು ಹೇಳುತ್ತಾನೆ. *“ರಜಸ್ವಲೆಯಾದ ದ್ರೌಪದಿಯ ಮುಡಿ ಎಳೆದು ತಂದು ತುಂಬಿದ ಸಭೆಯಲ್ಲಿ ವಸ್ತ್ರಹರಣ ಮಾಡುವಾಗ ಕೈಕಟ್ಟಿ ನಿಂತವನಿಗೆ ಯಾವ ನೀತಿ ಇತ್ತು, ಹೂಡು ಬಾಣ”*🏹 ಎಂದು *ಕೃಷ್ಣ* ಆಜ್ಞಾಪಿಸಲು *ಅರ್ಜುನ* ಅಂಜಲಿಕ ಅಸ್ತ್ರವನ್ನು ಪ್ರಯೋಗಿಸಿದನು 🏹. ಪರಶುರಾಮನ ಶಾಪದಂತೆ ಯಾವ ಮಂತ್ರವೂ ನೆನಪಾಗದೆ ಹೀಗೆ ಧರೆಗುರುಳಿದನು ಕರ್ಣ.

ಯಾವ ರಾಜ್ಯಕ್ಕಾಗಿ ಕೌರವ ಪಾಂಡವರು ಯುದ್ಧ ಹೂಡಿದ್ದರೊ ಆ ರಾಜ್ಯದ ನಿಜವಾದ ರಾಜನಾಗಬೇಕಿದ್ದ ತನ್ನದೇ *ಅಣ್ಣನಾದ ಕರ್ಣನನ್ನು ಅರ್ಜುನ ಸಾಯಿಸಿದ್ದು ಎಂತಹ ದುರಂತ!*🏹🏹🏹

ಯಾವ ಗೆಳೆಯನನ್ನು ಅಂತಃಪುರದ ತನ್ನ ಮಡದಿಯ ಮಂಚದ ಮೇಲೆ ಪಗಡೆಯಾಡುವಷ್ಟು ಸಲುಗೆ ಕೊಟ್ಟಿದ್ದನೊ ಅದೇ *ಗೆಳೆಯ ತಾನಾಶಿಸಿದ ರಾಜ್ಯದ ನಿಜವಾದ ಅಧಿಪತಿ ಎಂದು ದುರ್ಯೋಧನ ತಿಳಿಯದ್ದು ಎಂತಹ ದುರಂತ!*🏹🏹🏹

ಜೀವಮಾನವಿಡೀ ಸೂತಪುತ್ರ ಎಂದು ಕರೆಸಿಕೊಂಡು ಎಲ್ಲಾ ಅವಕಾಶದಿಂದ ವಂಚಿತನಾದ ಕರ್ಣ ನಿಜಕ್ಕೂ ಈ *ಜಗದ ಎಲ್ಲರ ಜೀವನಕ್ಕೆ ಆಧಾರವಾದ ಸೂರ್ಯನ ಪುತ್ರನೆಂಬುವುದು ಅವಮಾನಿಸಿದವರಿಗೆ  ತಿಳಿಯದೇ ಉಳಿದಿದ್ದು ಎಂತಹ ದುರಂತ!*🌞🌞🌞

ಬೇಡಿ ಬಂದವರಿಗೆ ಇಲ್ಲ ಎನ್ನದೆ ಕೇಳಿದ್ದನ್ನು ಕೊಟ್ಟ, ಇಂದ್ರನಿಗೆ ತನಗೆ ಸಾವೇ ಬರದಂತೆ ಇದ್ದ ಕರ್ಣಕುಂಡಲ, ಕವಚವನ್ನು ಕೊಟ್ಟ, ಕುಂತಿಗೆ ನಾಲ್ಕು ಮಕ್ಕಳನ್ನು ಕೊಲ್ಲದೆ ಉಳಿಸುವ ಮಾತು ಕೊಟ್ಟ ಕರ್ಣನಿಗೆ ಮಾತ್ರ *ಹೂತು ಹೋದ ರಥದ ಚಕ್ರ ಮೇಲೆತ್ತಲು ಒಂದು ಘಳಿಗೆಯ ಸಮಯ ಕೊಡು, ಬಾಣ ಹೂಡ ಬೇಡ ಎಂದು ಕೇಳಿದರೂ ಕೃಷ್ಣಾರ್ಜುನರು ಸಮಯ ಕೊಡದಿದ್ದದ್ದು ಎಂತಹ ದುರಂತ!* 🕙🏹

ತಾಯಿಗೆ ಕೊಟ್ಟ ಮಾತಿನಂತೆ ನಾಲ್ಕು ಮಕ್ಕಳನ್ನೂ ಕೊಲ್ಲುವ ಅವಕಾಶ ದೊರೆತರೂ ಬಿಟ್ಟು ಕಳುಹಿದ *ಕರ್ಣನನ್ನು ಇವನು ನನ್ನದೇ ಮಗ ಎಂದು ಕುಂತಿ ಕೊನೆಯವರೆಗೂ ಹೇಳದೇ ಉಳಿದದ್ದು ಎಂತಹ ದುರಂತ!*👸🏻🤱🏽

ಹೀಗೆ ದುರಂತಗಳ ಸರಮಾಲೆಯಲ್ಲಿ ಭಾರತದ ದುರಂತ ನಾಯಕನಾಗಿ ಉಳಿದು ಹೋಗುತ್ತಾನೆ *ಕರ್ಣ.*🏹

ಪಂಪ ತನ್ನ ರಾಜನಾದ *ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಬರೆದ ವಿಕ್ರಮಾರ್ಜುನ ವಿಜಯದಲ್ಲಿ* ಕೊನೆಯಲ್ಲಿ ತನ್ನ ರಾಜನನ್ನು ಹೋಲಿಸಿದ ಅರ್ಜುನನನ್ನು ಹೊಗಳದೆ ಕರ್ಣನನ್ನು ಹೊಗಳುವಲ್ಲಿ ಕರ್ಣನ ವ್ಯಕ್ತಿತ್ವದ ಗಹನತೆಯ ಅರಿವಾಗುತ್ತದೆ. ಪಂಪ ಹೇಳುತ್ತಾನೆ
*ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇರುಕರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ*
(ಭಾರತದೊಳು ಬೇರಾರನ್ನೂ ನೆನೆಯಬೇಕಾಗಿಲ್ಲ, ಒಂದೆ ಮನಸ್ಸಿನಿಂದ ನೆನೆದರೆ ಕರ್ಣನನ್ನು ನೆನೆಯಿರಿ
ಕರ್ಣನಿಗಾರು ಸರಿಸಮ, ಕರ್ಣನ ಪರಾಕ್ರಮ, ಕರ್ಣನ ಸತ್ಯ ಪರತೆ, ಕರ್ಣನ ವೀರತ್ವ, ಕರ್ಣನ ತ್ಯಾಗವೆಂದು ಕರ್ಣನ ವಿಚಾರವೇ ತುಂಬಿ ಹೋಗಿ ಭಾರತವು ಕರ್ಣ ರಸಾಯನವಾಯಿತು) ಹೀಗೆ ಬಣ್ಣಿಸುತ್ತಾನೆ ಪಂಪ

ಹೀಗೆ ಬದುಕಿನುದ್ದಕ್ಕೂ ಮೌಲ್ಯಗಳನ್ನು ತಪಸ್ಸಿನಂತೆ ಆಚರಿಸಿದ ಕರ್ಣನಿಂದ ಸತ್ಯ, ನ್ಯಾಯ, ದಾನ, ಧರ್ಮಗಳಿಗೆ ಬೆಲೆ ಬಂದವೇ ವಿನಃ ಅವುಗಳಿಂದ ಕರ್ಣನಿಗೆ ಬೆಲೆ ಬಂದುದ್ದಲ್ಲ. ಆದರೂ ಕರ್ಣ ಮಾಡಿದ ಅನ್ಯಾಯ ಏನು? ದ್ರೌಪದಿಯ ಸೀರೆಯನ್ನು ಸೆಳೆವಾಗ ಕೈ ಕಟ್ಟಿ ನಿಂತದ್ದೆ? ಆದರೇನು,
ತುಂಬಿದ ಸಭೆಯಲ್ಲಿ ಅತಿ ಸಾಮರ್ಥ್ಯವಂತನನ್ನು ಸೂತಪುತ್ರ ಎಂದು ತನ್ನನ್ನು ತಿರಸ್ಕರಿಸಿದ ದ್ರೌಪದಿಗೆ ಯಾವ ನೀತಿ ಇತ್ತು, ಅದಕ್ಕೆ ಪ್ರತಿಯಾಗಿ ವಸ್ತ್ರಹರಣದ ಸಮಯ ಕೈಕಟ್ಟಿ ನಿಂತದ್ದು ತಪ್ಪೆ?
ಕರ್ಣನೇಕೆ ಕೃಷ್ಣನಂತೆ ದೈವತ್ವಕ್ಕೇರಲಿಲ್ಲ? ಕರ್ಣನಿಂದಾದ ತಪ್ಪಾದರೂ ಏನು? ಕರ್ಣನ ಬದುಕಿನ ವಿಶ್ಲೇಷಣೆ ನಾಳಿನ ಸಂಚಿಕೆಯಲ್ಲಿ ಮಾಡೋಣ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.