Friday, 9 February 2018

ಕರ್ಣಂಗೊಡ್ಡಿತ್ತು ದಲ್ ಭಾರತ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-24

ರಾಧೇಯ, ದಾನಶೂರ, ಸೂರ್ಯಪುತ್ರ, ಮಹಾರಥಿ ಕರ್ಣ ಭಾರತದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದು ಹೀಗೆ ಉಳಿದು ಹೋಗುತ್ತಾನೆ. ಪಂಪನು ಅತ್ಯಂತ ಪ್ರೀತಿಯಿಂದ ಪಂಪಭಾರತದಲ್ಲಿ ಕರ್ಣನ ಪಾತ್ರವನ್ನು ಔನತ್ಯಕ್ಕೇರಿಸುತ್ತಾನೆ. *"ಕರ್ಣರಸಾಯನಮಲ್ತೆ ಭಾರತಂ"* ಎನ್ನುವಲ್ಲಿ ಇದು ಸುವೇದ್ಯವಾಗುತ್ತದೆ.

ಧರೆಗುರುಳಿದ ಕರ್ಣನಲ್ಲಿ ಕೃಷ್ಣನಾಗಮಿಸಿ ಕರ್ಣನ ಪರಾಕ್ರಮವನ್ನು ಕೊಂಡಾಡುತ್ತಾನೆ. ತನ್ನ ವಿಶ್ವರೂಪವನ್ನು ಕರ್ಣನಿಗೆ ತೋರುತ್ತಾನೆ. ದಾನ, ಸತ್ಯ, ನ್ಯಾಯ, ಧರ್ಮ, ಸ್ವಾಮಿನಿಷ್ಠೆಗಳೇ ಮೊದಲಾದ ಮೌಲ್ಯದ ಪ್ರತಿಬಿಂಬವಾದರೂ ಕರ್ಣನೇಕೆ ದೈವತ್ವಕ್ಕೇರಲಿಲ್ಲ ಎಂಬುವುದೊಂದು ಜಿಜ್ಞಾಸೆ ಉಳಿದು ಹೋಗುತ್ತದೆ.

ಮೊದಲನೆಯದಾಗಿ ಅಭಿಮನ್ಯು ಎಂಬ ಬಾಲಕ ಚಕ್ರವ್ಯೂಹ ಭೇದಿಸಿ ಒಳನುಗ್ಗಿರಲು ಕರ್ಣ ಧರ್ಮಾಧರ್ಮಗಳ ತೂಗಿನೋಡದೆ ಬೆನ್ನ ಹಿಂದಿನಿಂದ ಅಭಿಮನ್ಯುವನ್ನು ಇರಿದು ಕೆಡವಿದ. ಇದು ಅಕ್ಷಮ್ಯವಾಗಿ ಉಳಿದು ಹೋಯಿತು ಕರ್ಣ ಚರಿತ್ರೆಯಲ್ಲಿ.

ಎರಡನೆಯದಾಗಿ ದ್ರೌಪದಿಯ ವಸ್ತ್ರಾಹರಣದ ಸಂದರ್ಭ ಕರ್ಣ ಕೈ ಕಟ್ಟಿ ನಿಂತಿದ್ದ. ಪರಾಕ್ರಮಿಯ ಎದುರು ಹೆಣ್ಣಿನ ಮಾನ ಹಾನಿಯನ್ನೂ ನೋಡಿ ಸುಮ್ಮನಿದ್ದದ್ದು ಅಕ್ಷಮ್ಯ. ಆದರೇನು, ದ್ರೌಪದಿಯೂ ತನ್ನ ಮಾನಹಾನಿಯನ್ನು ಸ್ವಯಂವರದಲ್ಲಿ ನಡೆಸಿಲ್ಲವೆ ಎನ್ನುವುದು ಕರ್ಣನ ಸಮರ್ಥನೆ. ಆದರೆ, ಒಂದು ಹೆಣ್ಣು ಏನೇ ಅಪಮಾನಗಳನ್ನು ಮಾಡಿದ್ದರೂ ಒಬ್ಬ ಪರಾಕ್ರಮಿ ಆಕೆಯ ಮಾನಹಾನಿಯ ಸಮಯದಲ್ಲಿ ಸಹಾಯಕ್ಕೆ ಧಾವಿಸದೇ ಇದ್ದಲ್ಲಿ ಅದು ಸಂಸ್ಕಾರವಲ್ಲ. ಹಾಗಾಗಿ ಸೀರೆ ಸೆಳೆದ ದುಶ್ಶಾಸನ ರಾಕ್ಷಸತ್ವಕ್ಕೆ ಇಳಿದ, ನೋಡಿ ಸುಮ್ಮನಿದ್ದ ಕರ್ಣ ಮಾನವತ್ವದಲ್ಲೇ ಉಳಿದ, ಮಾನ ರಕ್ಷಣೆಗಾಗಿ ಅಕ್ಷಯವಸನವನಿತ್ತ ಕೃಷ್ಣ  ದೈವತ್ವತ್ಕೇರಿದ.

ಕೃಷ್ಣನಿಗೂ ಇಬ್ಬರು ತಾಯಂದಿರು ಆತ ಇಬ್ಬರ ನಡುವಿನ ಸೇತುವೆಯಾದ. ಕರ್ಣನಿಗೂ ಇಬ್ಬರು ತಾಯಂದಿರು ಆತ ತಾನು ರಾಧೇಯನಾಗಿ ಮಾತ್ರ ಉಳಿಯುತ್ತೇನೆಂದ.

ಕೃಷ್ಣಾ ತಾನು ಬೆಳೆದ ದನಗಾಹಿಗಳ ವಂಶವನ್ನೇ ಔನತ್ಯಕ್ಕೇರಿಸಿದ. ಕರ್ಣ ತನ್ನನು ಸೂತನೆಂದು ಜರಿದರು ಎಂದು ದುಃಖ ಪಟ್ಟನೆ ವಿನಃ ತನ್ನ ಪರಾಕ್ರಮದಿಂದ ಸೂತಕುಲವನ್ನೇ ಉನ್ನತಿಗೇರಿಸುವ ಪ್ರಯತ್ನ ಮಾಡಲಿಲ್ಲ.

ಕೃಷ್ಣಾ ತನ್ನನ್ನು ಜರಿದವರ ಎದುರು ತನ್ನ ಸಾಮರ್ಥ್ಯಗಳನ್ನು ತೋರುತ್ತಲೇ ಹೋದ. ದುರ್ಯೋಧನನ ಅಹಂಕಾರವನ್ನು ಹೆಬ್ಬೆರಳನ್ನೊತ್ತಿ ಸಿಂಹಾಸನಾರೂಢ ದುರ್ಯೋಧನ ಕೆಳಗುರುಳುವಂತೆ ಮಾಡಿದ. ಕರ್ಣ ತನ್ನ ಕುಲದ ಅವಮಾನವನ್ನು ತನ್ನ ಸಾಮರ್ಥ್ಯದ ಅವಮಾನವೆಂದು ಅರಿಯದೇ ಹೋದ.

ಕೃಷ್ಣ ಮಾಡಿದ ಅಧರ್ಮಗಳಿಗೆ ತಾರ್ಕಿಕ ಸಮಜಾಯಿಷಿಗಳಿವೆ ಆದರೆ ಕರ್ಣನು ಅರಿತೊ ಅರಿಯದೆಯೊ ಮಾಡಿದ ತಪ್ಪುಗಳಿಗೆ ಯಾವ ಸಮಜಾಯಿಷಿಗಳೂ ಇಲ್ಲ.

ಎಂತಹುದೇ ದಾನ ಧರ್ಮಗಳು ಮಾಡಿದರೂ ಬಾಲಕನ ಹತ್ಯೆ, ಹೆಣ್ಣಿನ ಮಾನಭಂಗದಲ್ಲಿ ಪರಾಕ್ರಮಿಯ ಅಸಹಾಯಕತೆ ಆತನ ಎಲ್ಲಾ ಒಳ್ಳೆತನವ ನುಂಗಿ ಹಾಕಿತು.

ಹೀಗೆ, ಜಗಕ್ಕೆಲ್ಲಾ ಬೆಳಕು ಕೊಟ್ಟ ಸೂರ್ಯನ ಮಗ ಕತ್ತಲ್ಲಲ್ಲಿ ಉಳಿದು ಹೋದ. ಅಂತೆಯೆ ಕೃಷ್ಣಾ ರಾಮಾಯಣದಲ್ಲಿ ರಾಮನಾಗಿ ಸೂರ್ಯಪುತ್ರ ಸುಗ್ರೀವನನ್ನು ಗೆಲ್ಲಿಸಿ ಇಂದ್ರನ ಮಗ ವಾಲಿಯನ್ನು ಸೋಲಿಸುತ್ತಾನೆ. ಕೃಷ್ಣಾ ಮಹಾಭಾರತದಲ್ಲಿ ಇಂದ್ರನ ಮಗ ಅರ್ಜುನನನ್ನು ಗೆಲ್ಲಿಸಿ ಸೂರ್ಯಪುತ್ರ ಕರ್ಣನನ್ನು ಸೋಲಿಸುತ್ತಾನೆ.

ಹೀಗೆ ಕರ್ಣನ ಪಾತ್ರ ಮಾನವತ್ವ ಮತ್ತು ದೈವತ್ವದ ಘರ್ಷಣೆಯಲ್ಲಿ ಕಂಡು ಬರುವ ಪಾತ್ರವಾಗುತ್ತದೆ. ಪಂಪ *ಕರ್ಣಂಗೊಡ್ಡಿತ್ತು ದಲ್ ಭಾರತ* ಎಂದು ಬಣ್ಣಿಸುತ್ತಾನೆ ಅರ್ಥಾತ್ ಕರ್ಣನಿಗಾಗಿಯೇ ಭಾರತ ಯುದ್ಧವೇರ್ಪಟ್ಟಿತು ಎಂದು.

ಕರ್ಣನು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಬೇಕು. ಆತನ ಸತ್ಯ, ನ್ಯಾಯಪರತೆ, ದಾನಶೀಲ, ಪರಾಕ್ರಮ, ಗೆಳೆತನ, ವಚನಪಾಲನೆ ಮುಂತಾದವುಗಳು ಎಲ್ಲರಿಗೂ ಸ್ಫೂರ್ತಿ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.