Sunday, 4 February 2018

ಕೃಷ್ಣನ ಕೊಳಲಿನ ಕರೆ ಆಲಿಸು

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 19

ಇವತ್ತಿನ ಈ ಅಂಕಣವನ್ನು ಕೃಷ್ಣನ ಕುರಿತು ಚಿಂತನೆ ನಡೆಸುವುದಕ್ಕಾಗಿ, ವಿಶ್ಲೇಷಿಸುವುದಕ್ಕಾಗಿ ಮೀಸಲಿಡುತ್ತಿದ್ದೇನೆ. ಏಕೆಂದರೆ, ಮಹಾಭಾರತವೆಂಬ ಮಹಾಕಾವ್ಯದ ಅನೇಕ ಉದ್ಧಾತ ಪಾತ್ರಗಳಲ್ಲಿ ಎರಡು ಪಾತ್ರಗಳು ಸದಾ ಪ್ರಾತಃಸ್ಮರಣೀಯವಾಗಿ ಉಳಿದು ಹೋಗುತ್ತವೆ. ಮೊದಲಾಗಿ ಶ್ರೀ ಕೃಷ್ಣ ಹಾಗೂ ಎರಡನೆಯದಾಗಿ ದಾನಶೂರ ಕರ್ಣ (ಕರ್ಣನ ಕುರಿತು ಇನ್ನೊಂದು ಅಂಕಣದಲ್ಲಿ ಚಿಂತಿಸೋಣ).

ಕೃಷ್ಣ ಎನ್ನುವ ಹೆಸರೇ ಸುಂದರವಾದುದು. ಕರ್ಷತಿ ಇತಿ ಕೃಷ್ಣ ಎಂದು ಕೃಷ್ಣನ ಹೆಸರನ್ನು ವಿಶ್ಲೇಷಿಸಬಹುದು. ಅರ್ಥಾತ್ ಯಾವುದು ಆಕರ್ಷಿಸುತ್ತದೊ ಅದು ಕೃಷ್ಣ. ಸೆಳೆಯಲ್ಪಡುವುದು ಕೃಷ್ಣ. ಆತನ ಬಣ್ಣ ಕಪ್ಪು ಅಥವಾ ಶ್ಯಾಮಲ. ಕಪ್ಪು ಅತ್ಯಂತ ಬೇಗೆ ಸೆಳೆಯುತ್ತದೆ. ಹಾಗಾಗಿ ಮೇಘ ವರ್ಣ ಕೃಷ್ಣ ಎಲ್ಲರನ್ನೂ ಸೆಳೆಯುತ್ತಾನೆ. ಶ್ವೇತ ವರ್ಣಕ್ಕೆ ಮಹತ್ವ ಕೊಡುವ ಜಗದಲ್ಲಿ ಶ್ಯಾಮಲ ಕೃಷ್ಣ ಒಂದು ರೂಪವಾಗಿ ಕಂಡು ಬರುತ್ತಾನೆ.

ಆತನ ಕೈಯಲ್ಲಿ ತುಂಡು ಬಿದುರಿನ 🎋ಕೊಳಲಿದೆ. ಯಾಕೆ ಕೃಷ್ಣನ ಕೈಯಲ್ಲಿ ಕೊಳಲಿದೆ? ಬೇರೆಲ್ಲಾ ಅವತಾರಗಳೂ ಬಿಲ್ಲು, ಚಕ್ರ, ಗಧೆ, ತ್ರಿಶೂಲಗಳನ್ನು ಹಿಡಿದುಕೊಂಡಿರುವಾಗ ಕೃಷ್ಣನೇಕೆ ತುಂಡು ಬಿದುರಿನ🎋 ಕೊಳಲಿನೊಂದಿಗೆ ಬಿಂಬಿತನಾಗುತ್ತಾನೆ?

ಕೊಳಲು ಒಂದು ಸುಂದರ ಕಲ್ಪನೆ. ಕೃಷ್ಣನ ಅವತಾರವು ಬೇರೆಲ್ಲಾ ಅವತಾರಗಳಿಗಿಂತಲೂ ಹೆಚ್ಚು ಒತ್ತನ್ನು ಕಲೆ, ನೃತ್ಯ, ಸಂಗೀತಗಳಿಗೆ ಕೊಟ್ಟಿದೆ. ಹಾಗಾಗಿ ಕೊಳಲನ್ನು ಧಾರಣೆ ಮಾಡಿದ ಕೃಷ್ಣ ಇದರ ಪ್ರತಿಬಿಂಬವಾಗಿ ತೋರಿ ಬಂದಿದ್ದಾನೆ.

ಹಾಗಿದ್ದರೂ ಕೊಳಲೇ ಯಾಕೆ? ಎನ್ನುವ ಪ್ರಶ್ನೆ ಕಾಡೀತು. ವೀಣೆ, ತಬಲ, ಸಿತಾರು ಇದ್ಯಾವುದೂ ಯಾಕಲ್ಲ ಎಂದು ಅನ್ನಿಸಲೂಬಹುದು.
ಮೊದಲನೆಯದಾಗಿ ಮೂಲತಃ ಕೊಳಲು ಬಿದಿರಿನಿಂದ ತಯಾರಿಸುವ ಒಂದು ಸಂಗೀತೋಪಕರಣ. ಬಿದಿರು ಹುಲ್ಲಿನ ಜಾತಿಗೆ ಸೇರುವ ಸಸ್ಯ. ಆದರೂ ಹುಲ್ಲಿನಂತೆ ನೆಲದಲ್ಲಿ ತೆವಳಿ ಬೆಳೆಯುವ ಬದಲು ಮರಗಳಂತೆ ಎತ್ತರಕ್ಕೆ ಬೆಳೆದು ನಿಲ್ಲುತ್ತವೆ. ಬದುಕಾದರೂ ಹೀಗೆ ಇರಬೇಕಲ್ಲ. ನಿಕೃಷ್ಟವಾಗಿ ಕಾಣುವವರು ಎದುರು ಉದ್ಧಾತವಾಗಿ ಬದುಕ ಬೇಕು.

ಎರಡನೆಯದಾಗಿ, ಬಿದಿರು ಅರವತ್ತು ವರುಷಕ್ಕೊಮ್ಮೆ ಹೂ ಬಿಡುತ್ತವೆ. ಹಾಗೆ ಹೂ ಬಿಟ್ಟ ಮೇಲೆ ಬಿದುರು ಸತ್ತು ಹೋಗುತ್ತವೆ. ಅರವತ್ತು ವರುಷಕ್ಕೊಮ್ಮೆ ಭೀಕರ ಬರಗಾಲ ಬರುತ್ತವೆಂದೂ, ಆಗ ಹೂಬಿಟ್ಟ ಬಿದುರಿನ ಅಕ್ಕಿಯೇ ಜೀವನಾಧಾರವೆಂದು ನಂಬಿಕೆಯಿದೆ. ಬೇರೆ ಜೀವಿಗಳ ಜೀವನಾಧಾರಕ್ಕೆ ತನ್ನನ್ನೇ ಕೊನೆಗಾಣಿಸುವ ಬಿದಿರಿನ ಶ್ರೇಷ್ಠತೆ ಅಮೋಘ.

ಮೂರನೆಯದಾಗಿ, ತುಂಡು ಬಿದಿರಿನ ಕೊರಡಿನೊಳಗೆ ಖಾಲಿ ಖಾಲಿ. ತೂತುಗಳಿರುವ ಖಾಲಿ ಬಿದಿರಿನ ಕೊರಡಿನಳಗಿಂದ ಸುಮಧುರ ರಾಗಗಳು ಹೊಮ್ಮುತ್ತವೆ. ಇಂತಹ ಕೊಳಲು ಖಾಲಿ ಬದುಕಿನ ಸಂಕೇತವೂ ಹೌದು. ಎಲ್ಲಾ ಇದ್ದೂ ಏನೂ ಇಲ್ಲ ಎಂಬ ಖಾಲಿತನದ ಬದುಕು ಕೂಡ ಸಂಭ್ರಮಿಸಿದರೆ ಮಧುರವಾದ ಜೀವನರಾಗವನ್ನು ಹೊಮ್ಮಿಸುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ ಕೊಳಲು ಪ್ರೀತಿಯ ಸಂಕೇತ. ಅದರಲ್ಲಿ ಹೊಮ್ಮುವ ನಾದವು ಅಗಾಧ ಪ್ರೀತಿಯ ಭಾವವನ್ನೇ ಹೊಮ್ಮಿಸುತ್ತವೆ. ಕೃಷ್ಣ ತನ್ನೆಡೆಗೆ ಸೆಳೆದ ಪ್ರತಿಯೊಬ್ಬರಲ್ಲೂ ಜೀವನ ಪ್ರೀತಿಯನ್ನೇ ಬಿತ್ತಿದ. ಗೋಕುಲದಿಂದ ಮಥುರೆಯೆಡೆಗೆ ಕೃಷ್ಣ ಹೊರಟಾಗ ಕೊಳಲನ್ನು ಕೆಳಗಿಟ್ಟು ಶಂಖವನ್ನು ಕೈಗೆತ್ತಿಕೊಂಡ. ಯಾಕೆಂದರೆ ಕೊಳಲು ಪ್ರೀತಿಯ ಸಂಕೇತ, ಶಂಖ ಯುದ್ಧದ ಸಂಕೇತ. ಎಲ್ಲಿ ಪ್ರೀತಿ ಇರುತ್ತದೊ ಅಲ್ಲಿ ಯುದ್ಧವಿಲ್ಲ, ಎಲ್ಲಿ ಯುದ್ಧವಿರುತ್ತದೊ ಅಲ್ಲಿ ಪ್ರೀತಿ ಇರಲು ಸಾಧ್ಯವಿಲ್ಲ.

ಕೃಷ್ಣನ ಅಗಾಧ ವ್ಯಕ್ತಿತ್ವದ ಬಗ್ಗೆ ಈ ಪುಟ್ಟ ಅಂಕಣದಲ್ಲಿ ಹಿಡಿದಿಡಲಸಾಧ್ಯ. ಇಂತು ಆತನ ಕೊಳಲಿನ ಬಗ್ಗೆ ಒಂದಿಷ್ಟು ವಿಚಾರ ಹಂಚಿಕೊಂಡೆ.
ಕೃಷ್ಣಂ ವಂದೇ ಜಗದ್ಗುರುಂ.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.