Thursday, 22 March 2018

ವಾಟ್ಸ್ ಆ್ಯಪ್ ಕಥೆ: ಹೆಬ್ಬೆಟ್ಟು

ಹೆಬ್ಬೆಟ್ಟು ಒತ್ತುತ್ತಿದ್ದ ನನ್ನ ಅಜ್ಜಿ ನನ್ನನ್ನು ಕರೆದು ಹೀಗಂದಳು "ಚೆನ್ನಾಗಿ ಓದ ಬೇಕು ಮಗ, ಇಲ್ಲ ಅಂದ್ರೆ ನನ್ನ ಹಾಗೆ ಹೆಬ್ಬೆಟ್ಟು ಒತ್ತಬೇಕಾಗುತ್ತದೆ".

ಅಜ್ಜಿ ಮಾತಿನಂತೆ ಚೆನ್ನಾಗಿ ಓದಿ ದೊಡ್ಡ ಆಫೀಸನಲ್ಲಿ ದೊಡ್ಡ ಕೆಲಸ ಪಡೆದುಕೊಂಡೆ. ಆದರೆ, ಅಲ್ಲೂ ಪಂಚ್ ಮಾಡುವುದಕ್ಕೆ ಹೆಬೆಟ್ಟೇ ಉಪಯೋಗಿಸಿ ಅಂತಾರೆ.

ಅಜ್ಜೀ, ನೀನು ಓದದೇ ಹೆಬ್ಬೆಟ್ಟು, ನಾನು ಓದಿಯೂ ಹೆಬ್ಬೆಟ್ಟು!!!

ರಚನೆ: ಯೋಗೀಶ್ ಮಲ್ಲಿಗೆಮಾಡು

Saturday, 17 March 2018

ಯುಗ ಯುಗಾದಿ ಕಳೆದರೂ

ಯುಗಸ್ಯ ಆದಿಃ ಯುಗಾದಿ. ಯುಗ ಎಂದರೆ ಕಾಲಘಟ್ಟಗಳಾಗಿದ್ದರೂ ಇಲ್ಲಿ ಯುಗ ಎಂದರೆ ಸಂಕುಚಿತಾರ್ಥದಲ್ಲಿ ಸಂವತ್ಸರ ಎಂದು ಭಾವಿಸಲಾಗಿದೆ. ಆದುದರಿಂದ ಯುಗಾದಿ ಎಂದರೆ ಒಂದು ಹೊಸ ಸಂವತ್ಸರ, ಹೊಸ ವರುಷದ ಆರಂಭ.

ಸನಾತನ ಧರ್ಮವು ಬಹಳ ಪ್ರಶಸ್ತವಾದ ಕಾಲವನ್ನು ನವ ಸಂವತ್ಸರದ ಆರಂಭಕ್ಕೆ ಅರ್ಥಾತ್ ಹೊಸ ವರುಷದ ಆರಂಭ ಕಾಲವನ್ನಾಗಿ ಸ್ವೀಕರಿಸಿದೆ. ಯುಗಾದಿಯು ವಸಂತ ಋತುವಿನ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಕಾಲಗಳಲ್ಲಿ ವಸಂತ ಕಾಲ ಸೊಗಸಾದ ಕಾಲ. ಹೆಚ್ಚು ಚಳಿಯೂ ಅಲ್ಲದ, ಹೆಚ್ಚು ಬಿಸಿಲೂ ಇರದ ಆಪ್ಯಾಯಮಾನ ಮಾಸ. ಮಾಘ ಫಾಲ್ಗುಣದಲ್ಲಿ ಎಲೆಯುದುರಿದ ಮರಗಿಡ ಈ ಮಾಸದಲ್ಲಿ ಹೊಸ ಚಿಗುರು ಹೂವುಗಳಿಂದ ಕಂಗೊಳಿಸುತ್ತವೆ. ಮಾವು ತೂಗಿ, ಕೋಗಿಲೆ ಹಾಡುವ ಸುಂದರ ಸಂಪದ್ಭರಿತ ಕಾಲವಾದ ವಸಂತ ಕಾಲಕ್ಕಿಂತ ಸೊಗಸಾದ ಕಾಲ ಬೇರಾವುದು. ಈ ಕಾಲ ಹೊಸ ವರುಷದ ಆರಂಭಕ್ಕೆ ಪ್ರಶಸ್ತವಾಗಿದೆ.

ಚೈತ್ರ ಶುಕ್ಲ ಪಾಡ್ಯದ ಯುಗಾದಿಯ ಈ ಶುಭ ದಿನವೇ ಬ್ರಹ್ಮ ತನ್ನ ಸೃಿಷ್ಟಿ ಕಾರ್ಯ ಆರಂಭಿಸಿದ ಎಂಬ ಪ್ರತೀತಿ ಇದೆ. ವಸಂತ ನವರಾತ್ರಿಯೂ ಇದೇ ದಿನದಿಂದ ಆರಂಭವಾಗುತ್ತದೆ. ಕಾಶ್ಮೀರದಲ್ಲಿ ಇದನ್ನು ನವರೇಹ್ ಎಂದು ಆಚರಿಸಲಾಗುತ್ತದೆ. ಉತ್ತರ ಭಾರತದ ಅನೇಕ ಕಡೆ ಚೈತ್ರ ಶುಕ್ಲ ಎಂದು, ಸಿಂಧೀ ಪ್ರದೇಶದಲ್ಲಿ ಚೆಟ್ಟಿ ಚಾಂದ್ ಎಂದು, ಮಹಾರಾಷ್ಟ್ರದಲ್ಲಿ ಗುಡಿಪಾಡ್ವ ಎಂಬ ಹೆಸರಿನಿಂದ ಆಚರಿಸುತ್ತಾರೆ. ಇರಾನ್ ಪ್ರದೇಶದಲ್ಲಿ ಇದೇ ಹಬ್ಬವನ್ನು ನವ್ ರೋಜ್ ಎಂದು ಆಚರಿಸಲಾಗುತ್ತದೆ.

ಬೇವು ಬೆಲ್ಲ ಯುಗಾದಿಯ ವಿಶೇಷತೆ. ಬೇವು ಮತ್ತು ಬೆಲ್ಲ ಕಷ್ಟ ಸುಖಗಳನ್ನು ಬಾಳಿನ ಸಿಹಿ ಕಹಿಗಳನ್ನು ಪ್ರತಿನಿಧಿಸುತ್ತವೆ. ಜೊತೆಗೆ ಮುಂದೆ ಬರುವ ಬೇಸಗೆಯ ಧಗೆಗೆ ಬೆಲ್ಲ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವ ಹಾಗೂ ಬೇವು ರೋಗನಿರೋಧಕ ಎನ್ನುವ ಸಂಕೇತವೂ ಹೌದು. ಅಲ್ಲದೆ ಮುಂದೆ ಈ ಒಂದು ವರುಷ ನಮ್ಮ ಜೀವನದಲ್ಲಿ ಕಷ್ಟ ಸುಖಗಳೆರಡನ್ನು ಸಮನಾಗಿ ಸ್ವೀಕರಿಸುವ ಮಾನಸಿಕ ಸಿದ್ಧತೆಯೂ ಹೌದು.

ಪಂಚಾಂಗ ಶ್ರವಣವೂ ಯುಗಾದಿಯ ವೈಶಿಷ್ಟ್ಯ. ಈ ವರುಷದ ಸಂವತ್ಸರ, ಹಬ್ಬಗಳು, ಮಳೆ, ಬೆಳೆ, ಗ್ರಹಣ ಮುಂತಾದ ಪ್ರಾಕೃತಿಕ ಬದಲಾವಣೆಗಳನ್ನು ತಿಳಿದುಕೊಂಡು ಅದಕ್ಕನುಗುಣವಾಗಿ ಜೀವನ ನಡೆಸಲು ನಮ್ಮನ್ನು ನಾವು ಸಿದ್ಧಮಾಡುವ ಒಂದು ವಿನೂತನ ಪ್ರಕ್ರಿಯೆ.

ಯುಗಾದಿಯು ಯಾವ ವಾರ ಬರುತ್ತದೊ ಆ ವಾರದ ಅಧಿಪತಿಯೇ ಈ ಸಂವತ್ಸರದ ಅಧಿಪತಿಯಾಗಿರುತ್ತಾನೆ. ಈ ವರುಷ ಯುಗಾದಿ ಆದಿತ್ಯವಾರ ಬಂದಿರುವುದರಿಂದ ಈ ಸಂವತ್ಸರದ ಅಧಿಪತಿ ಸೂರ್ಯನಾಗಿದ್ದಾನೆ.

ಹೇವಿಲಂಬಿ ಸಂವತ್ಸರದಿಂದ ವಿಲಂಬಿ ಸಂವತ್ಸರದೆಡೆಗೆ ಹೊರಳಿರುವ ಕಾಲಘಟ್ಟದಲ್ಲಿ ಯುಗಾದಿ ಸಕಲರಿಗೂ ಶುಭಲನ್ನೇ ತರಲಿ.

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು.