ಸನಾತನ ಧರ್ಮದ ಸ್ತ್ರೀಪರ ಚಿಂತನೆಯ ಮೇಲೆ ಬೆಳಕುಚೆಲ್ಲುವ ಲೇಖನ ನಿಮಗಾಗಿ
ಸನಾತನ ಧರ್ಮವು ಅನೇಕ ವೈಶಿಷ್ಟ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ ಎನ್ನುವುದನ್ನು ಕಾಲ ಕಾಲಗಳಲ್ಲಿ ನಾವು ನೋಡಿ, ಕೇಳಿ, ಅನುಭವಿಸಿ ತಿಳಿದಿದ್ದೇವೆ. ಇಂತಹ ಸನಾತನ ಧರ್ಮವು ಅನಂತ ಜ್ಞಾನ ಶಾಖೆಗಳನ್ನು ಹೊಂದಿ ಬಹುತ್ವದ ಆಧಾರದ ಮೇಲೆ ಯಾರಿಗೆ ಏನು ಬೇಕೊ ಅದನ್ನು ಆಯ್ದುಕೊಳ್ಳುವ ಮುಕ್ತ ಅವಕಾಶವನಿತ್ತಿರುವುದು ಸರ್ವ ವಿಧಿತ.
ಆಧುನಿಕ ಭಾರತೀಯ ಪರಂಪರೆಯಲ್ಲಿ ಹೆಣ್ಣು ವಿವಾಹವಾದ ಮೇಲೆ ತನ್ನ ಹೆಸರನ್ನು ಗಂಡನ ಹೆಸರಿನ ಜೊತೆ ಸೇರಿಸಿ ಹೇಳುವುದೊಂದು ಶೈಲಿಯಾಗಿದೆ. ಹಲವಾರು ಸ್ತ್ರೀಪರ ಚಿಂತಕರು ಇದನ್ನು ಸ್ವಾಗತಿಸದಿದ್ದರೂ ಭಾರತದಲ್ಲಿ ಇದೊಂದು ಶೈಲಿಯಾಗಿ (Trend)ಚಾಲ್ತಿಯಲ್ಲಿರುವುದು ಮಾತ್ರ ಸತ್ಯ.
ಆದರೆ ಸನಾತನ ಧರ್ಮದ ಕೆಲವೊಂದು ವ್ಯಕ್ತಿ ಪಾತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿ ಗಂಡ ಹೆಂಡತಿಯರ ಹೆಸರುಗಳನ್ನು ಜೋಡಿಸಿದ ರೀತಿ ಮಹಿಳಾವಾದವನ್ನು ಹಿಂದೂ ಧರ್ಮ ಎತ್ತಿ ಹಿಡಿದಿತ್ತು ಎನ್ನುವುದು ತಿಳಿಯುತ್ತದೆ.
ಇವುಗಳನ್ನು ಕೆಲವೊಂದು ಉದಾಹರಣೆಯ ಮೂಲಕ ನೋಡೋಣ:
ಸೀತೆ ಮತ್ತು ರಾಮ ಗಂಡ ಹೆಂಡತಿಯರು. ಆದರೆ ಇಂದಿನ ಶೈಲಿಯಂತೆ ನಾವೆಲ್ಲಿಯೂ "ಸೀತೆ"ಯನ್ನು ತನ್ನ ಗಂಡ ಹೆಸರನ್ನು ಜೋಡಿಸಿ ಕರೆಯುವುದಿಲ್ಲ. ಆದರೆ ರಾಮನನ್ನು ಹೇಳುವಾಗ ತನ್ನ ಹೆಂಡತಿಯ ಹೆಸರನ್ನು ಮೊದಲಿಗೆ ಸೇರಿಸಿ ಹೇಳುತ್ತೇವೆ. "ಸೀತಾರಾಮ" ಎಂದಾಗ ಅದು ರಾಮನ ಹೆಸರು. ಸೀತೆಯನ್ನು ನಾವೆಂದೂ ಶ್ರೀಮತಿ ಸೀತಾರಾಮ್ ಎಂದದ್ದಿಲ್ಲ!
ಇದೇ ರೀತಿ ಲಕ್ಷ್ಮಿಯನ್ನು ಇಂದಿನ ಶೈಲಿಯಂತೆ "ಶ್ರೀಮತಿ ಲಕ್ಷ್ಮೀ ನಾರಾಯಣ" ಎಂದು ಹೇಳುವುದಿಲ್ಲ. ಬದಲಾಗಿ ನಾರಾಯಣನನ್ನು ನಾವು ತನ್ನ ಮಡದಿಯ ಹೆಸರನ್ನು ಮೊದಲಿಟ್ಟು "ಲಕ್ಷ್ಮೀ ನಾರಾಯಣ" ಎಂದು ಕರೆಯುತ್ತೇವೆ.
ಹೀಗೆ, ರಾಧಾಕೃಷ್ಣ (ಗಂಡ ಹೆಂಡಿರಲ್ಲದಿದ್ದರೂ ಆಧ್ಯಾತ್ಮಿಕ ಬಂಧದ ಸಲುವಾಗಿ), ಗೌರಿಶಂಕರ ಮುಂತಾದ ದಂಪತಿಗಳಲ್ಲಿ ಗಂಡನ ಹೆಸರಿನ ಮುಂದೆ ಹೆಂಡತಿಯ ಹೆಸರು ಸೇರಿಸಿ ಕರೆಯುವ ಕ್ರಮವಿದೆಯೇ ಹೊರತು ಈಗಿನಂತೆ ಹೆಂಡತಿಯ ಹೆಸರಿಗೆ ಗಂಡನ ಹೆಸರು ಜೋಡಿಸುವುದಲ್ಲ. ಇದು ಹಿಂದೂ ಧರ್ಮ ಮಹಿಳಾಪರವಾಗಿದುದ್ದಕ್ಕೆ ಒಂದು ಸಣ್ಣ ಉದಾಹರಣೆ!!!
ಪರಿಕಲ್ಪನೆ: ಸನಾತನ ಧರ್ಮದ ಮೂಲ ಸಿದ್ಧಾಂತಗಳ ಪ್ರತಿಪಾದಕರು "ಯೋಗೀಶ್ ಮಲ್ಲಿಗೆಮಾಡು"