ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
ಲಕ್ಷ್ಮಿಯು ಸಿರಿ ಸಂಪತ್ತಿನ ಅಧಿದೇವತೆ. ಅಮೃತ ಮಂಥನದ ಸಮಯದಲ್ಲಿ ಆಕೆ ಚಂದ್ರ, ಉಚ್ಚೈಶ್ರವಸ್ಸು, ಐರಾವತ, ಕೌಸ್ತುಭ ಮುಂತಾದವುಗಳೊಂದಿಗೆ ಉದಿಸಿದಳು ಎನ್ನುವುದು ಪ್ರತೀತಿ.
ಆಕೆಯನ್ನು ಚಂಚಲೆ ಎಂದು ಉಲ್ಲೇಖಿಸಿದೆ. ಸಹಜವಾಗಿ ಸಿರಿ ಸಂಪತ್ತು ಶಾಶ್ವತವಾಗಿ ಉಳಿಯುವಂತದ್ದಲ್ಲವಾದ್ದರಿಂದ ಚಂಚಲೆ ಎನ್ನುವ ಹೆಸರು ಲಕ್ಷ್ಮಿಗೆ ಅತ್ಯಂತ ಸಮಂಜಸವಾಗಿ ಒಪ್ಪುವಂತದ್ದು.
ಹಾಗಾದರೆ ಇಂತಹ ಚಂಚಲೆ ಲಕ್ಷ್ಮಿಯನ್ನೇಕೆ ಪೂಜಿಸಬೇಕು?
ಲಕ್ಷ್ಮೀ ಎಂದರೆ ಸಿರಿ ಸಂಪತ್ತಿನ ಅಧಿದೇವತೆ. ಸಿರಿ ಸಂಪತ್ತು ಎಂದರೆ ಆರ್ಥಿಕ ಅಭಿವೃದ್ಧಿ. ಅರ್ಥಾತ್ ಲಕ್ಷ್ಮಿಯು ಆರ್ಥಿಕ ಅಭಿವೃದ್ಧಿಯ ದಾತೆ... ಆರ್ಥಿಕ ಅಭಿವೃದ್ಧಿ ಅತ್ಯಂತ ಹೆಚ್ಚಿನ ಏಕಾಗ್ರತೆ ಬೇಡುತ್ತದೆ. ಅರ್ಥಾತ್ ಸಿರಿಸಂಪತ್ತು ಎಂಬ ಚಂಚಲವಾದ ಲಕ್ಷ್ಮಿಯು ನಮ್ಮಲ್ಲಿ ಶಾಶ್ವತವಾಗಿ ನೆಲೆಸಬೇಕಾದರೆ ಏಕಾಗ್ರತೆ ತುಂಬಾ ಅಗತ್ಯ. ಯಾರಲ್ಲಿ ಏಕಾಗ್ರತೆ ಇಲ್ಲವೊ ಅಲ್ಲಿ ಚಂಚಲವಾದ ಲಕ್ಷ್ಮೀ ಎಂಬ ಆರ್ಥಿಕ ಅಭಿವೃದ್ಧಿ ನೆಲೆಸದೆ ಹೊರಟು ಹೋಗುತ್ತದೆ.
ನಮ್ಮ ಕಾರ್ಯಗಳು ಪೂರ್ವನಿಯೋಜಿತವೂ, ಏಕಾಗ್ರತೆಯಿಂದಲೂ ಕೂಡಿದ್ದಾಗ ಮಾತ್ರ ಆರ್ಥಿಕ ಅಭಿವೃದ್ಧಿ (ಲಕ್ಷ್ಮೀ) ನೆಲೆಗೊಳ್ಳಲು ಸಾಧ್ಯ....
ಆಷಾಢ ಮಾಸ ಕಳೆದು ಬರುವ
ಶ್ರಾವಣ ಮಾಸ ಸಮೃದ್ಧಿಯ ಕಾಲ.. ಶ್ರಾವಣದಿಂದ ಮೊದಲು ಮಾಡಿ ಮುಂದಿನ ಒಂದು ವರುಷ ಕಾಲ ನಾವು ನಮ್ಮ ಬಳಿ ಇರುವ ಸಂಪತ್ತನ್ನು ಹೇಗೆ ಬಳಸಿಕೊಳ್ಳುತ್ತೇವೆ, ಈ ವರುಷದ ಪೂರ್ತಿ ನಾವು ನಮ್ಮ ಬಳಿ ಇರುವ ಹಣವನ್ನು ಹೇಗೆ ನಡೆಸಿಕೊಳ್ಳುತ್ತೇವೆ ಅನ್ನುವುದರ ಮೇಲೆ ಚಂಚಲೆಯಾದ ಲಕ್ಷ್ಮೀ ಎಂಬ ಆರ್ಥಿಕ ಅಭಿವೃದ್ಧಿಯು ನಮ್ಮಲ್ಲಿ ನೆಲೆಸುತ್ತದೊ ಇಲ್ಲವೊ ಅನ್ನುವುದು ನಿರ್ಧಾರವಾಗುತ್ತದೆ. ಹಾಗಾಗಿ ಈ ವರಮಹಾಲಕ್ಷ್ಮೀ ವೃತವು ಬರೀ ಲಕ್ಷ್ಮಿಯನ್ನು ಪೂಜಿಸುವುದಲ್ಲದೆ, ಮುಂದಿನ ಒಂದು ವರುಷಕ್ಕೆ ಕೂಡಿಕೆ, ಹೂಡಿಕೆಯಂತಹ ಯಾವುದಾದರೂ ಒಂದು ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಿ ತನ್ಮೂಲಕ ಈಗಿರುವ ಆರ್ಥಿಕ ಸ್ಥಿತಿಯಿಂದ ಮತ್ತೊಂದು ಹಂತದ ಆರ್ಥಿಕ ಸ್ಥಿತಿಗೆ ಮೇಲೇರುವುದಾಗಿದೆ. ಆ ಮೂಲಕ ಏಕಾಗ್ರತೆಯಿಂದ ಕೂಡಿಕೆ ಹೂಡಿಕೆ ಮಾಡಿ ಚಂಚಲೆ ಲಕ್ಷ್ಮೀ ಎಂಬ ಆರ್ಥಿಕ ಅಭಿವೃದ್ಧಿಯು ಸದಾ ನಮ್ಮಲ್ಲಿ ನೆಲೆಸುವಂತೆ ಮಾಡುವುದಾಗಿದೆ. ಇದೇ ವರಮಹಾಲಕ್ಷ್ಮಿಯ ಆಶೀರ್ವಾದ!
ಇದು ಬರಿ ಹಬ್ಬವಲ್ಲ ಬದಲಾಗಿ Financial Management ಅರ್ಥಾತ್ ವಿತ್ತ ನಿರ್ವಹಣೆಯೇ ಆಗಿದೆ. ಇಂದಿನ ಶ್ರಾವಣದಿಂದ ಮುಂದಿನ ಆಷಾಢದ ತನಕ ಬರುವ ಎಲ್ಲಾ ಶುಭ ಕಾರ್ಯಕ್ಕೂ, ಅಶುಭ ಘಟನೆಗೂ ಮಾನಸಿಕವಾಗಿ ಆರ್ಥಿಕ ಸಿದ್ಧತೆ (Psychological Finance Preparation), ಹಣದ ವ್ಯವಸ್ಥಿತ ನಿರ್ವಹಣೆಗೆ ಪಣ ತೊಡುವ ಒಂದು ವಿಶಿಷ್ಟ ಪರಿಕಲ್ಪನೆಯಾಗಿದೆ.
ಎಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು