Tuesday, 11 September 2018

ಗೌರೀ ಗಣೇಶ ಹಬ್ಬ

ರಚನೆ ಮತ್ತು ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

ಭಾರತೀಯ ಪರಿಕಲ್ಪನೆಯಲ್ಲಿ ಪರ್ವತಗಳು ಎಂದಿಗೂ ಅಚ್ಚರಿಯ ಸಂಗತಿಗಳಾಗಿವೆ. ಇದೇ ಪರ್ವತದ ತಪ್ಪಲಿನಲ್ಲೇ ಹರಿವ ನದಿಯ ತಟದಲ್ಲಿ ಜನಜೀವನ ಬದುಕು ಕಟ್ಟಿಕೊಂಡಿತು. ಪರ್ವತದ ತಪ್ಪಲಿನಲ್ಲಿ ಯಥೇಚ್ಛ ಹುಲ್ಲುಗಾವಲು ಪಶುಗಳಿಗೆ ಆಹಾರವನ್ನಿತ್ತವು. ಇದೇ ಪರ್ವತದ ತಪ್ಪಲಿನಲ್ಲಿ ಗದ್ದೆ ಬಯಲನು ಮಾಡಿಕೊಂಡ ಜನರಿಗೆ ಸಮೃದ್ಧಿ ದೊರೆಯಿತು. ಆ ಸಮೃದ್ಧಿಯನ್ನೇ (ಪಾರ್ವತಿ)ಗೌರೀ ಎಂದು ಕರೆದರು.

ಪರ್ವತದ ತಪ್ಪಲಿನಲ್ಲಿ ಸಮೃದ್ಧತೆಯನ್ನು ಕಂಡುಕೊಂಡ ಜನಪದರು ಸಮೃದ್ಧತೆಯನ್ನು ಪಾರ್ವತಿ ಎಂದೂ ಹಾಗೂ ಸಮೃದ್ಧತೆಯನ್ನಿತ್ತ ಪರ್ವತವು ಪಾರ್ವತಿಯ ತಂದೆ ಪರ್ವತ ರಾಜನೆಂದೂ ಪರಿಭಾವಿಸಿದರು. 

ಪರ್ವತವು ಮಣ್ಣಿನಿಂದ ಕೂಡಿದುದಾಗಿ ಗೌರಿಗೆ ಈ ಮಣ್ಣನ್ನೇ ಆರೋಪಿಸಿ ಜನಪದರ ಮೂಲತತ್ವವಾದ ಗೌರಮ್ಮ ಮಣ್ಣಿಂದಲೇ ಮೈದೆಳೆದಳು.
ಪರ್ವತದ ಅಗಾಧತೆ, ನಿತ್ಯಹರಿದ್ವರ್ಣದ ವನರಾಶಿ, ಹರಿದು ಬರುವ ನದಿ ತೊರೆಗಳು ಎಲ್ಲವೂ ಸೇರಿ ಜನಪದರು ಆ ಗೌರಿಯನ್ನು ಸುಮಂಗಲಿಯಂತೆ ಸದಾ ಪೂಜಿಸಿದರು.

ಮುಂದುವರೆದು ಈ ಪರ್ವತದ ತಪ್ಪಲಿನಲ್ಲಿ ಜ್ಞಾನದ ಬಲದಿಂದ ಕೃಷಿಯನ್ನು ಕೈಗೊಂಡು ಮತ್ತಷ್ಟು ಹೇರಳ ಸಮೃದ್ಧತೆಯನ್ನು ಪಡೆದುಕೊಂಡರು. ಇಂತಹ ಜ್ಞಾನವನ್ನೇ ಗೌರಿಯ ಕಂದ ಗಣೇಶನಿಗೆ ಆರೋಪಿಸಿದರು. ತನ್ಮೂಲಕ ಪರ್ವತನ (ಮಣ್ಣಿನ) ಮಗಳಾದ ಪಾರ್ವತಿ (ಮಣ್ಣು) ಗಣಪತಿಗೆ ಮಣ್ಣಿನಿಂದಲೇ ರೂಪ ಕೊಟ್ಟದ್ದು ಸಹಜವೇ ಆಗಿದೆ.

ಮಣ್ಣಿನ ಜೊತೆ ನಿಕಟವಾಗಿದ್ದ, ಅದರಿಂದಲೇ ಜೀವನ ಕಟ್ಟಿಕೊಂಡ, ಮಳೆ ಮತ್ತು ಮಣ್ಣ ನಡುವೆ ಬದುಕು ನಡೆಸುವ ಜನಪದರಿಗೆ ಮಣ್ಣಿನ ದೇವರು, ಮಣ್ಣೇ ದೇವರು.

ಇಂತಹ ಗಣಪನಿಗೆ ಅದೇ ತಪ್ಪಲಿನಲ್ಲಿ ಬೆಳೆದ ಗರಿಕೆಯೇ ಅರ್ಪಣೆ, ಅಲ್ಲೇ ಅರಳಿದ ಕಾಡು ಹೂಗಳ ಶೃಂಗಾರ.

ಅಗಾಧ ಪರ್ವತವನ್ನು ಧಾರಣೆ ಮಾಡಿದವನ್ನನ್ನೇ ಶಿವ ಎಂದು ಕರೆದರು. ಎಲ್ಲಕ್ಕೂ ಕಾರಣೀಭೂತನಾದ ಜಗನ್ನಿಯಾಮಕನನ್ನು ಶಿವ (ಶುಭ) ಎಂದು ಕರೆದರು. ಪರ್ವತದ ಸಮೃದ್ಧತೆಯಿಂದ ಉಂಟಾದ ಶುಭವನ್ನು ಪಾರ್ವತಿಯ ಪತಿಯೆಂದೇ ಕರೆದರು. ಇಂತಹ ಶಿವ ಇಡೀ ಭೂಮಂಡಲವನ್ನೇ ಧಾರಣೆ ಮಾಡಿದ್ದಾನೆ ಎಂದು ಪರಿಭಾವಿಸಿ ತಾನೇ ಮೋಡದ ಮೂಲಕ ಮಳೆ ಸುರಿಸುವನೆಂದು ಜಟೆಯಲ್ಲಿ ಗಂಗೆಯನ್ನೇ ಧರಿಸಿರುವನೆಂದು ನಂಬಿದರು. ತನ್ಮೂಲಕ ಮಣ್ಣು (ಪಾರ್ವತಿ) ಮತ್ತು ಮಳೆ (ಗಂಗೆ) ಎರಡನ್ನೂ ಜ್ಞಾನದ (ಗಣಪತಿ) ಮೂಲಕ ಸರಿಯಾಗಿ ಬಳಸಿಕೊಂಡರೆ ಶುಭ (ಶಿವ) ದೊರಕುವುದು ನಿಶ್ಚಿತ ಎಂದು ಅರ್ಥೈಸಿಕೊಂಡರು ನಮ್ಮ ಪೂರ್ವಜರು.

ಯಾವ ಇಲಿಯು ಪರ್ವತವನ್ನು ಕೊರೆದು ಟೊಳ್ಳಾಗಿಸಿ ಪರ್ವತವನ್ನೇ ಉರುಳಿಸುವ ಸಾಮರ್ಥ್ಯ ಹೊಂದಿದೆಯೊ ಅದನ್ನು ಮರ್ಧಿಸುವ ಹತೋಟಿಯಲ್ಲಿಡುವ ಸಂಕೇತವಾಗಿ ಗಣಪತಿಯ ವಾಹನವಾಗಿ ಇಲಿಯನ್ನು ಆರೋಪಿಸಲಾಗಿದೆ.

ಹೀಗೆ ಮಣ್ಣಿನಿಂದ (ಪಾರ್ವತಿಯಿಂದ) ಮೈದೆಳೆದು ಬಂದ ಗಣಪನು ನೀರಿನಲ್ಲಿ (ಗಂಗೆಯಲ್ಲಿ) ಕರಗಿ ಎರಡೂ ತತ್ವದೊಳಗೊಂದಾಗುತ್ತಾನೆ.

ಇಂತಹ ಗೌರೀ ಗಣೇಶರು ಯಶೋಧ ಕೃಷ್ಣರಂತೆ ಬರೀ ಅಮ್ಮ ಮಗನ ಪ್ರೀತಿಯ ಸಂಕೇತವಾಗಿ ಉಳಿಯದೆ ಅದರಾಚೆಗೂ ಮೀರಿ ಜ್ಞಾನ ಸಮೃದ್ಧತೆಯ ಉಪದೇಶವೀಯುತ್ತಾರೆ. ಗೌರಿ ಬಳೆ, ಹುಲ್ಲು ಗರಿಕೆ, ಇಲಿ, ಕಬ್ಬು, ಕಡುಬುಗಳೇ ಮೊದಲಾದ ಗ್ರಾಮ್ಯ ವಸ್ತುಗಳೊಂದಿಗೆ ಗ್ರಾಮ್ಯ ಸೊಗಡನ್ನು ಪಸರಿಸುತ್ತಾರೆ. ಮನೆ ಮನಗಳಲ್ಲಿ ಹೊಸ ಹೊಸ ಅರ್ಥವನ್ನು ಹೊಳೆಯಿಸಿ ಬದುಕನ್ನು ಪರಿಪೂರ್ಣಗೊಳಿಸುತ್ತಾರೆ.

Sunday, 2 September 2018

ಮೊಸರು ಕುಡಿಕೆ ಬರೀ ಹಬ್ಬವಲ್ಲ

ಮೊಸರು ಕುಡಿಕೆ ಬರೀ ನಾಲ್ಕು ಕುಡಿಕೆಗಳನ್ನು ಒಡೆದು ಆಚರಿಸುವ ಹಬ್ಬವಲ್ಲ, ಇದೊಂದು ಉದ್ಧಾತ ಕಲ್ಪನೆಯ ಸಂಭ್ರಮಾಚರಣೆ.

ಜಾತಿ ಉಪಜಾತಿಗಳಿಂದ ಬಿಡಿಬಿಡಿಯಾದ ಹಿಂದೂ ಸಮಾಜದ ಎಲ್ಲರೂ ಒಗ್ಗಟ್ಟನ್ನು ಬಿಂಬಿಸುವ ವಿಶೇಷ ಹಬ್ಬ. ಮೇಲು ಕೀಳೆನ್ನದೆ ಎಲ್ಲರೂ ಜೊತೆಯಾಗಿ ಭುಜಕೊಟ್ಟು ಮೇಲೇರಿ ಬದುಕಿನ ನವನೀತವನ್ನು ದಕ್ಕಿಸಿ ಸಮನಾಗಿ ಹಂಚಿ ತಿಂದು ಬದುಕುವ ಸಂಭ್ರಮದ ಹಬ್ಬ.

ಬಲಿಷ್ಠರು ತಳದಲ್ಲಿ ನಿಂತು, ಮಧ್ಯಮದವರನ್ನು ನಡುವಲ್ಲಿರಿಸಿ, ದುರ್ಬಲರನ್ನು ಎತ್ತರದ ಸ್ಥಾನಕ್ಕೆ ಏರಿಸಿ ತಾನೂ ಕೂಡ ಬೆಂಬಲದಿಂದ ನವನೀತವನ್ನೇ ದಕ್ಕಿಸಿ ಎಲ್ಲರಿಗೂ ಸಮನಾಗಿ ಹಂಚುವ ಪರಿಕಲ್ಪನೆಯೇ ಮೊಸರು ಕುಡಿಕೆ.

ಅಸ್ಪೃಶ್ಯತೆ, ಮೇಲು, ಕೀಳು, ಜಾತಿ, ಉಪಜಾತಿಗಳ ಎಲ್ಲೆ ಮೀರಿ ನಾವೆಲ್ಲರೂ ಒಂದು. ಒಬ್ಬರಿಗೊಬ್ಬರು ಭುಜ ಕೊಟ್ಟು, ಮೇಲೇರಿಸಿ, ಪ್ರೋತ್ಸಾಹಿಸಿ, ಹಿಡಿದು ನಿಂತು, ಸಾಮರ್ಥ್ಯವನ್ನು ಬಲಪಡಿಸಿ, team work  ಜೊತೆಗೆ ಬೆಳೆದು ನಿಲ್ಲುವ ಪಾಠವ ಕಲಿಸಿದ ಕೃಷ್ಣನಿಗೆ ಅದನ್ನುನುಸರಿಸಿ ನಡೆಯುವುದೇ ನಾವು ಕೊಡುವ ದೊಡ್ಡ ಕಾಣಿಕೆ.

ಎಲ್ಲರಿಗೂ ಮೊಸರು ಕುಡಿಕೆಯ ಶುಭ ಹಾರೈಕೆಗಳು.

ರಚನೆ ಮತ್ತು ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು