Wednesday, 17 October 2018

ಸಿದ್ಧಿಧಾತ್ರಿ ನಮಸ್ತುಭ್ಯಂ

ನವರಾತ್ರಿಯ ಒಂಭತ್ತನೆ ದಿನ ಪೂಜಿಸಲ್ಪಡುವವಳು *ಸಿದ್ಧಿಧಾತ್ರಿ*

ಹೆಸರೇ ಸೂಚಿಸುವಂತೆ *ಸಿದ್ಧಿಧಾತ್ರಿ*ಬಗೆ ಬಗೆಯ ಸಿದ್ಧಿಗಳನ್ನು ನೀಡುವವಳು.
*ಅಷ್ಟಸಿದ್ಧಿಗಳಾದ "ಅನಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಖ್ಯಮ್ಯ, ಇಷಿತ್ವ, ವಷಿತ್ವ"* ಇವುಗಳನ್ನು ನೀಡುತ್ತಾಳೆ ಎಂದೂ, *ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ* ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ. *ತಂತ್ರ ಮಾಡುವವರು, ಸಾಧಕರು, ಯೋಗಿಗಳು* ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ.

ಶಿವನು ಈಕೆಯನ್ನು ಪೂಜಿಸಿ ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ. ಶಕ್ತಿಯನ್ನು ಒಲಿಸಿದ ಶಿವ *ಅರ್ಧನಾರೀಶ್ವರನಾದ*. ಗಂಡು ಹೆಣ್ಣು ಒಂದೇ ಎಂದು ಸಾರಿದ್ದು *ಅರ್ಧನಾರೀಶ್ವರ ತತ್ವ.*

ಈಕೆ ಕಮಲದ ಮೇಲೆ ಕುಳಿತಿದ್ದು *ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ.*

ಎಲ್ಲಾ ಚಕ್ರ ಜಾಗೃತವಾದ ಮೇಲೆ ಮನುಷ್ಯ *ಮಹಾಗೌರಿಯಂತೆ* ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ *ಸಿದ್ಧಿಯನು ಹೊಂದಬಹುದು.* ತಥಾ ಸಿದ್ಧಿಧಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ.

ಪರ್ವತದ ತಪ್ಪಲಿನ ಮಣ್ಣೇ ಶೈಲಪುತ್ರಿಯಾಗಿ, ಅಲ್ಲಿ ಬೆಳೆಯುವ ಜ್ಞಾನವೇ ಬ್ರಹ್ಮಚಾರಿಣಿಯಾಗಿ, ಬೆಳೆಗಳ ನಡುವಿನ ಸವಾಲುಗಳನ್ನೆದುರಿಸುವುದೇ ಚಂದ್ರಘಂಟಾ ಎಂಬುದಾಗಿ, ಸಮರ್ಥ ಕೃಷಿ ಬದುಕಿನ ಯಶಸ್ಸಿನ ನಗುವೇ ಕೂಷ್ಮಾಂಡವಾಗಿ, ವಂಶ ಕುಲಗಳ ಮುಂದುವರಿಕೆಯೆ ಸ್ಕಂದ ಮಾತವಾಗಿ, ಮೋಹಗಳಿಗೆ ಒಳಗಾಗದಿರುವುದೇ ಕಾತ್ಯಾಯಿನಿಯಾಗಿ, ಪ್ರಕೃತಿಯ ಪ್ರಳಯ ಭೀಕರವೇ ಕಾಲರಾತ್ರಿಯಾಗಿ, ಶಾಂತ ಪ್ರಕೃತಿಯೇ ಮಹಾಗೌರಿಯಾಗಿ ಕಂಡುಕೊಂಡ ಮಾನವ ಇದೇ ಪರ್ವತದ ತಪ್ಪಲಿನಲ್ಲಿ ಬಗೆಬಗೆಯ ಸಿದ್ಧಿಯನ್ನು ಕಂಡುಕೊಂಡ. ಕೃಷಿಯೊಂದಿಗೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಬದುಕು ಸುಗಮಗೊಳಿಸಿದ. ಅಂದಿನಿಂದ ಇಂದಿನ ವರೆಗೂ ಮಾನವ ಹೊಸ ಹೊಸ ಕ್ರಾಂತಿಗೆ ಕಾರಣನಾದ. ಈ ಎಲ್ಲಾ ಸಿದ್ಧಿಯನ್ನು ಕರುಣಿಸಿದವಳು ಸಿದ್ಧಿಧಾತ್ರಿ ಎಂದು ಪರಿಭಾವಿಸಿದ

ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು *ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ.* ಆ ಮೂಲಕ ಬಗೆಬಗೆಯ *ಸಿದ್ಧಿಗಳನ್ನೂ ಕರುಣಿಸುವ ಮಹಾಪರ್ವ ನವರಾತ್ರಿ.*

*ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ| ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||*
ಸಿದ್ಧಿಧಾತ್ರಿ ಸಕಲ ಸಿದ್ಧಿಯನ್ನು  ಕರುಣಿಸಲಿ

*ಆಯುಧಪೂಜೆಯನ್ನೂ* ಇದೆ ದಿನ ನೆರವೇರಿಸಲಾಗುತ್ತದೆ... *ಪಾಂಡವರು* ಇದೆ ದಿನ *ವನವಾಸದಿಂದ ವಾಪಾಸಾಗಿ ತಮ್ಮ ಶಸ್ತ್ರಗಳನ್ನು ತಾವು ಬಚ್ಚಿಟ್ಟ ಶಮಿ (ಬನ್ನಿ)🌿 ಮರದಿಂದ ತಗೆದು ಅದಕ್ಕೆ ಪೂಜೆಯನ್ನು ಸಲ್ಲಿಸಿದರು ಎಂಬ ಪ್ರತೀತಿ ಇದೆ.*

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Tuesday, 16 October 2018

ಮಹಾಗೌರಿ ನಮಸ್ತುಭ್ಯಂ

ನವರಾತ್ರಿಯ ಎಂಟನೇ ದಿನ ಪೂಜಿಸಲ್ಪಡುವವಳು *"ಮಹಾಗೌರಿ"* :

*ಗೌರಿ* ಎಂದರೆ *ಬಿಳಿ* ಎನ್ನುವ ಅರ್ಥ. ಮಹಾಗೌರಿಯು ಬಿಳಿಯ ಮೈಬಣ್ಣ ಹೊಂದಿದ್ದು ಆಕೆಯನ್ನು *ಶ್ವೇತ ವಸನ* ಧಾರಿಯಾಗಿ  ಉಲ್ಲೇಖಿಸಿದೆ. ಅಚ್ಚ ಬಿಳುಪಿನ ಶುಭ್ರವರ್ಣವಾಗಿ ಕಂಡು ಬರುವ ಈಕೆಯ *ಶುಭ್ರತೆಯನ್ನು ಶಂಖ ಅಥವಾ ಚಂದ್ರನಿಗೆ ಸಮೀಕರಿಸಿದೆ.*

ಶಿವನಿಗಾಗಿ ತಪಸ್ಸನ್ನು ಮಾಡಿದ *ಬ್ರಹ್ಮಚಾರಿಣಿಯು* ಗಾಳಿ, ಮಳೆ, ಬಿಸಿಲಿಗೆ ಕಪ್ಪಗಾಗಿ  ಶಿವನೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎಂಬ ವಿಚಾರವನ್ನು ಹಿಂದಿನ ರೂಪದಲ್ಲಿ ಕೇಳಿದ್ದೆವು. ಮುಂದುವರೆದು *ಶಿವನು ಆಕೆಯನ್ನು ಗಂಗಾ ನದಿಯಲ್ಲಿ  ಸ್ನಾನ ಮಾಡಿಸಿದಾಗ ಆಕೆಯ ಕಪ್ಪು ವರ್ಣ ತೊಳೆದು ಶುಭ್ರವಾದಳು  ಎಂಬ ಪ್ರತೀತಿ ಇದೆ.*
ಅರ್ಥಾತ್ *ಮನಸ್ಸಿನ  ಆಂತರ್ಯದಲ್ಲಿರುವ ಕೊಳೆ, ಕಲ್ಮಶಗಳನು ಜ್ಞಾನ ಗಂಗೆಯಿಂದ ತೊಳೆದಾಗ ಬದುಕು ಶುಭ್ರವಾಗುತ್ತದೆ.* ತಥಾ ಮಹಾಗೌರಿಯ ಸ್ಮರಣೆ ಬದುಕನ್ನು ಶುಭ್ರಗೊಳಿಸಿ ಬೆಳಗುತ್ತದೆ.

ಮಹಾಗೌರಿಯು *ನಂದಿ*ಯನ್ನು ವಾಹನವಾಗಿ ಹೊಂದಿದ್ದು. *ಚತುರ್ಭುಜ* ಹೊಂದಿದ್ದಾಳೆ. *ತ್ರಿಶೂಲ ಮತ್ತು ಢಮರು ಹಾಗೂ ಅಭಯಮುದ್ರೆಯನ್ನು  ಧರಿಸಿದ್ದಾಳೆ.*

ಈಕೆಯದು *ಸಾತ್ವಿಕ ರೂಪ.* ಶಾಂತಿ, ಪಾವಿತ್ರ್ಯ, ಪರಿಶುದ್ಧತೆ,  ಸಮೃದ್ಧಿಯನ್ನು ಈಕೆ ಕರುಣಿಸುತ್ತಾಳೆ. ಈಕೆಯನ್ನು *"ಶ್ವೇತಾಂಬರಧರಾ"* ಎಂದೂ ಕರೆಯುತ್ತಾರೆ.

*ಯೋಗದಲ್ಲಿ ಈಕೆ ಯಾವುದೇ ಚಕ್ರವನ್ನು ಪ್ರತಿನಿಧಿಸುವುದಿಲ್ಲ* ಅರ್ಥಾತ್ ಏಳು ಚಕ್ರಗಳು ಕಾಲರಾತ್ರಿ ಅವತಾರದೊಂದಿಗೆ ಸಮಾಪನವಾಗುತ್ತದೆ. ಅಂದರೆ ಯಾವಾಗ ಈ ಏಳೂ  ಚಕ್ರಗಳು ಮನುಷ್ಯನಲ್ಲಿ ಜಾಗೃತವಾಗುತ್ತದೊ ಆವಾಗ ಮನುಷ್ಯ ಪರಿಶುದ್ಧನಾಗುತ್ತಾನೆ. ಆಂತರಿಕವಾಗಿ ಕಲ್ಮಶಗಳು ಜ್ಞಾನಗಂಗೆಯಲಿ ತೊಳೆದು ಮಹಾಗೌರಿಯಂತ ಸಾತ್ವಿಕ ಶುಭ್ರರೂಪು ಧಾರಣೆಯಾಗುತ್ತದೆ. ತಥಾ ಮಹಾಗೌರಿಯ ಆರಾಧನೆ ಮುಖ್ಯವಾಗುತ್ತದೆ.

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು, ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ  ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಪರಿಭಾವಿಸಿದ ಮಾನವ ಶಾಂತ ಶುಭ್ರ ಪ್ರಕೃತಿಯನ್ನು ಮಾನಸಿಕ ಪರಿಶುದ್ಧತೆಯೊಂದಿಗೆ ಸಮೀಕರಿಸಿ ಗೌರಿ ಎಂದು ಕರೆದನು. ಆಕೆಯನ್ನು ಶೈಲಪುತ್ರಿಯ ಮತ್ತೊಂದು ರೂಪವಾಗಿ ಕಂಡುಕೊಂಡನು. ಪರ್ವತವು ಮಣ್ಣಿನಿಂದ ಕೂಡಿದುದಾಗಿ ಗೌರಿಗೆ ಈ ಮಣ್ಣನ್ನೇ ಆರೋಪಿಸಿ ಜನಪದರ ಮೂಲತತ್ವವಾದ ಗೌರಮ್ಮ ಮಣ್ಣಿಂದಲೇ ಮೈದೆಳೆದಳು.
ಪರ್ವತದ ಅಗಾಧತೆ, ನಿತ್ಯಹರಿದ್ವರ್ಣದ ವನರಾಶಿ, ಹರಿದು ಬರುವ ನದಿ ತೊರೆಗಳು ಎಲ್ಲವೂ ಸೇರಿ ಜನಪದರು ಆ ಗೌರಿಯನ್ನು ಸುಮಂಗಲಿಯಂತೆ ಸದಾ ಪೂಜಿಸಿದರು. ಪಾರ್ವತಿ ಎಂಬ ಶೈಲಪುತ್ರಿಯ ರೂಪವು ಗೌರಿಯೊಂದಿಗೆ ಬೆಸೆದುಕೊಂಡು ಗೌರಮ್ಮ ಮನೆಮನೆಯಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳಲ್ಲಿ ನಿಕಟವಾಗಿ ಬೆಸೆದುಕೊಂಡಳು.

*ಶ್ವೇತೆ ವೃಷೆ ಸಮಾರೂಢ ಶ್ವೇತಾಂಬರಧರ ಶುಚಿ| ಮಹಾಗೌರಿ ಶುಭಂ ದಧ್ಯಂತ್ರ ಮಹಾದೇವ ಪ್ರಮೋದಾದ||*
ಎಂದು ಪಠಿಸಿ ಫಲವನ್ನು ಪಡೆಯಬಹುದು

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

Monday, 15 October 2018

ಕಾಲರಾತ್ರಿ ನಮಸ್ತುಭ್ಯಂ

ನವರಾತ್ರಿಯ ಏಳನೇ 7ದಿನ ಪೂಜಿಸಲ್ಪಡುವವಳು *"ಕಾಲರಾತ್ರಿ"*

*"ಕಾಲಿ"* ಅಥವಾ *"ಕಾಳಿ"* ಎಂಬ ಶಬ್ಧವು*"ಕಾಲ"*  ಎಂಬ ಶಬ್ಧದಿಂದ ಉದಿಸಿದೆ. ಕಾಲ ಅಂದರೆ ಇಲ್ಲಿ *ಸಮಯ* ಅಥವಾ *ಮೃತ್ಯು* ಎಂದು ಪರಿಗಣಿಸಬಹುದು.
*ಕಾಲರಾತ್ರಿ ಎಂದರೆ ಕಾಲ ಅರ್ಥಾತ್ ಸಮಯ ಅಥವಾ ಸಾವಿಗೆ ಅಂತ್ಯವನ್ನು ಕರುಣಿಸುವವಳು ಎಂದು ಸಂಕೇತಿಸುತ್ತದೆ.
*ಕಾಲಿ ಎಂಬ ಶಬ್ಧಕ್ಕೆ ಕಪ್ಪು ಎಂಬ ಅರ್ಥವೂ ಇದೆ.* *ಕಪ್ಪು ಅತ್ಯಂತ ಗೂಢವೂ, ನಿಗೂಢವೂ ಆಗಿದೆ.* ಕಾಲರಾತ್ರಿಯು ಅಂತ್ಯಕ್ಕೆ ಅಂತ್ಯ ಕರುಣಿಸುವವಳಾಗಿ ಆಕೆ ಯಾರಿಗೂ ಅರ್ಥವಾಗದ ಗೂಢತೆಯೊಂದಿಗೆ ಕಪ್ಪು ಬಣ್ಣವನ್ನು ಸಮೀಕರಿಸಿರುವುದು ಸಮಂಜಸವೇ ಆಗಿದೆ.

ಶಬ್ಧಕಲ್ಪಧ್ರುಮದಲ್ಲಿ ಕಾಲಿಯನ್ನು *"ಕಾಲಃ ಶಿವಃ ತಸ್ಯ ಪತ್ನೇತಿ ಕಾಲಿ"* ಎಂದು ಉಲ್ಲೇಖಿಸಿದೆ. ಅರ್ಥಾತ್ ಕಾಲನಾದ ಶಿವನ ಪತ್ನಿ ಕಾಲಿ. *ಕಾಲನಿಗೂ ಕಾಲವಾದವಳು.*

ರಕ್ತಬೀಜಾಸುರ, ಎಲ್ಲಿ ತನ್ನ ರಕ್ತ ಬೀಳುತ್ತದೊ ಅಲ್ಲಿ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುವಂತಹ ವರವನ್ನು ಪಡೆದಿದ್ದನು. ಆತನ ವಧೆ ದುಸ್ಸಾಧ್ಯವಾದಾಗ ಮಹಾಕಾಲಿ ತನ್ನ ನಾಲಿಗೆಯಿಂದ ಆತನ ದೇಹದಿಂದ ತೊಟ್ಟಿಕ್ಕುವ ರಕ್ತವನ್ನು ಹೀರುತ್ತಾ ವಧಿಸಿದಳು ಎಂಬ ಪ್ರತೀತಿ ಇದೆ.

*ಶೈಲಪುತ್ರಿಯು*  *ಬ್ರಹ್ಮಚಾರಿಣಿ*ಯಾಗಿ  ಶಿವನನ್ನು ಒಲಿಸಲು ಅನೇಕ ವರುಷ ಮಳೆ, ಚಳಿ, ಗಾಳಿ, ಬಿಸಿಲಲ್ಲಿ  ತಪಸ್ಸು ಮಾಡಿದ ಪರಿಣಾಮ ಆಕೆಯ ಮೈ ಬಣ್ಣ ಕಪ್ಪಾಯಿತು. ಶಿವನು ಆಕೆಯ ತಪಸ್ಸಿಗೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎನ್ನುವುದು ಇನ್ನೊಂದು ಪ್ರತೀತಿ...

ಕಾಲರಾತ್ರಿಯು ಕೆದರಿದ ಕೂದಲು,  ಹೊರಚಾಚಿದ ಕಣ್ಣಗುಡ್ಡೆ , ರಕ್ತಭರಿತವಾದ ನಾಲಿಗೆ , ಬೆಂಕಿ ಉಗುಳುವ  ಮೂಗಿನ ಹೊಳ್ಳೆ, ಕಪ್ಪು ಮೈ ಬಣ್ಣ,  ರುಂಡ ಮಾಲೆ,ಕೈಯಲ್ಲಿ ಖಡ್ಗ ಧಾರಣೆ ಮಾಡಿ, ಕತ್ತೆಯನ್ನು ವಾಹನವಾಗಿಸಿದ ಭೀಕರ ರೂಪ.

ನವದುರ್ಗೆಯರಲ್ಲಿ ಆಕೆಯದು ಭೀಕರ ಮತ್ತು ಭೀಭತ್ಸ ರೂಪ. *ಮಹಾಗೌರಿ ಎಷ್ಟು ಸುಂದರವೋ ಅಷ್ಟೇ ಭೀಕರತೆ ಕಾಲರಾತ್ರಿ.* ಅರ್ಥಾತ್ ಪ್ರಕೃತಿ ಎಷ್ಟು ಸುಂದರವೊ ಅಷ್ಟೇ ಪ್ರಳಯ ಭೀಕರ ಎಂದು ಈ ರೂಪ ಸೂಚಿಸುತ್ತದೆ. ಪ್ರಳಯಕಾಲದಲ್ಲಿ  *ಪ್ರಕೃತಿಯು ಕಾಲಿಯಷ್ಟೇ ಭೀಕರವಾಗಿ ಸರ್ವವನ್ನೂ ನಾಶಮಾಡುವ ಸಂದೇಶ ನೀಡುತ್ತದೆ.*

ಕೆಲವು ಚಿತ್ರಗಳು ಶಿವನು ನೆಲದ ಮೇಲೆ ಮಲಗಿರುವಂತೆ ಹಾಗೂ ಕಾಲಿ ಶಿವನ ಎದೆಯನ್ನು ಮೆಟ್ಟಿರುವಂತೆ  ಕಾಣಬಹುದು....
ಅರ್ಥಾತ್ ಶಿವ ಪುರುಷ ತತ್ವ ಮತ್ತು ಶಕ್ತಿ ಪ್ರಕೃತಿ ತತ್ವವನ್ನು ತಿಳಿಸುತ್ತದೆ.  ಪುರುಷನಿಗೆ ಪ್ರಕೃತಿ ಅಂದರೆ ಶಕ್ತಿ ಇಲ್ಲದಿದ್ದರೆ ವ್ಯರ್ಥ. *"ಶಕ್ತಿ ಇಲ್ಲದಿದ್ದರೆ ಶಿವನೂ ಶವದಂತೆ"* ಎನ್ನುವುದನ್ನು ಈ ಚಿತ್ರ ಉಲ್ಲೇಖಿಸುತ್ತದೆ....

*ಕಾಲಿದಾಸ ಮಾತಾ ಕಾಲಿಯ ಕೃಪೆಯಿಂದ ಕವಿಯಾದ ಎಂಬ ಪ್ರತೀತಿ ಇದೆ.* ಆತ ಕಾಲಿಯ ಮೇಲೆ ಬರೆದ ಶ್ಯಾಮಲ ದಂಡಕಂ ಈ ಕೆಳಗೆ ಅರ್ಥಸಹಿತ ನೀಡಿದ್ದೇನೆ

********  *ಶ್ಯಾಮಲ ದಂಡಕಂ* *******

ಏನೂ ಅರಿಯದ ಮುಗ್ಧನೊಬ್ಬ *ಮಹಾಕಾಳಿಯ* ಕೃಪೆಯಿಂದ ಸಾಮರ್ಥ್ಯವನ್ನುಗಳಿಸಿ ಲೋಕವಿಖ್ಯಾತಿ ಹೊಂದಿದ. ಕಾಳಿಯ ಕೃಪೆಯಿಂದಾಗಿ ಆತ *ಕಾಳಿದಾಸ* ಎಂದು ಜನಜನಿತನಾದ. ಕಾಳಿಯನ್ನು ಶ್ಯಾಮಲ ರೂಪದಲ್ಲಿ ಕಂಡ ಆತ ಆಕೆಯನ್ನು *ಅಕ್ಷರ ದೇವತೆಯಾಗಿ* ಕಂಡು ಆಕೆಯನ್ನು ಸ್ತುತಿಸಿದ್ದೆ *ಶ್ಯಾಮಲ ದಂಡಕಂ.*

*ಶ್ಯಾಮಲೆಯನ್ನು ದಂಡಕ* ಎಂಬ ಹಾಡಿನ ಶೈಲಿಯಲ್ಲಿ ಸ್ತುತಿಸಿದ್ದೆ ಶ್ಯಾಮಲ ದಂಡಕಂ ಎಂದು ಪ್ರಸಿದ್ಧವಾಯಿತು.
*ಡಾ. ರಾಜ್ ಕುಮಾರ* ನಟಿಸಿದ *ಕವಿರತ್ನ ಕಾಳಿದಾಸ* ಚಲನಚಿತ್ರದಲ್ಲಿ ರಾಜ್ ಕುಮಾರರ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಈ ಹಾಡು ಜನಜನಿತವಾಗಿದೆ.

ಶ್ಲೋಕ ಮತ್ತು ಅದರ ಅರ್ಥವನ್ನು ಈ ಕೆಳಗೆ ನೀಡಿದೆ.
ನವರಾತ್ರಿಯ ಈ ದಿನ ಮಹಾಕಾಳಿಯು ಪ್ರತಿನಿಧಿಸುತ್ತಿದ್ದು ಈ ಶ್ಲೋಕಗಳನ್ನು ಪಠಿಸಿ ಅಮೋಘ ಫಲ ಸಿದ್ಧಿಗಳಿಸಬಹುದು. ಸದಾ ಈ ಶ್ಲೋಕವನ್ನು ಸ್ತುತಿಸುವುದರಿಂದ ಸಕಲ ಶುಭಫಲಗಳು ಸಕಾರಾತ್ಮಕವಾಗಿ ಹರಿದುಬರುತ್ತವೆ ಎಂಬ ಪ್ರತೀತಿ ಇದೆ.

ಮಾಣಿಕ್ಯ ವೀಣಾಂ ಉಪಲಾಲಯಂತೀಂ,
ಮದಾಲಸಾಂ ಮಂಜುಲ ವಾಗ್ ವಿಲಾಸಂ,
ಮಾಹೇಂದ್ರ ನೀಲ ದ್ಯುತಿ ಕೋಮಲಾಂಗಿಂ,
ಮಾತಂಗ ಕನ್ಯಾಂ ಮನಸಾ ಸ್ಮರಾಮಿ
*(ಮಾಣಿಕ್ಯದಿಂದ ಕೂಡಿದ ವೀಣೆಯನ್ನು ನುಡಿಸುತ್ತಿರುವವಳೇ, ಆಲಸ್ಯ ತರುವಷ್ಟು ವಿಜ್ರಂಭಿತವಾಗಿ ಶೋಭಿಸುತ್ತಿರುವವಳೇ, ಮಂಜುಲವಾದ ಮಾತನಾಡುವವಳೇ,ನವರತ್ನಗಳಲ್ಲಿ ಒಂದಾದ ನೀಲದಂತೆ ಕೋಮಲವಾಗಿರುವವಳೇ, ಮಾತಂಗನ ಮಗಳಾದ ತಾಯಿಯನ್ನು ಮನಸಾರೆ ಸ್ಮರಿಸುತ್ತೇನೆ)*

ಚತುರ್ಭುಜೆ ಚಂದ್ರಕಳಾ ವತಂಸೆ
ಕುಚೋನ್ನತೆ ಕುಂಕುಮ ರಾಗ ಶೋಣೆ
ಪುಂಡ್ರೇಕ್ಷು ಪಾಶಾಂಕುಶ ಪುಷ್ಪ ಬಾಣ ಹಸ್ತೇ
ನಮಸ್ತೇ ಜಗದೇಕ ಮಾತಃ
*(ಚತುರ್ಭುಜವನ್ನು ಹೊಂದಿ ಚಂದ್ರನನ್ನು ಧಾರಣೆ ಮಾಡಿರುವವಳೇ, ಉನ್ನತ ಕುಚಗಳನ್ನು ಹೊಂದಿ ಕುಂಕುಮವರ್ಣದಿಂದ ಶೋಭಿಸುವವಳೇ, ಸಿಹಿ ಕಬ್ಬು, ಪಾಶ, ಅಂಕುಶ, ಪುಷ್ಪಬಾಣಗಳನ್ನು ಕೈಯಲ್ಲಿ ಧರಿಸಿರುವವಳೇ, ಜಗತ್ತಿನ ಏಕೈಕ ಮಾತೇ ನಿನಗೆ ನಮನಗಳು)*

ಮಾತಾ ಮರಕತ ಶ್ಯಾಮ
ಮಾತಂಗೀ ಮಧು ಶಾಲಿನಿ
ಕುರ್ಯಾತ್ಕಟಾಕ್ಷಂ ಕಲ್ಯಾಣಿ
ಕದಂಬ ವನವಾಸಿನಿ
*(ನವರತ್ನಗಳಲ್ಲಿ ಮರಕತ ಎಂಬ ಮಣಿಯಂತೆ ಶ್ಯಾಮಲವಾಗಿರುವ ಮಾತೇ, ಮಾತಂಗನ ಮಗಳಾದ ಮಾತಂಗೀ ಸುಮಧುರವಾಗಿರುವವಳೇ, ಶುಭಫಲವನ್ನು ನೀಡು, ಕದಂಬವನದಲ್ಲಿ ವಾಸವಾದವಳೆ.)*

ಜಯ ಮಾತಂಗ ತನಯೇ, ಜಯ ನೀಲೋತ್ಪಲ ಧ್ಯುತೆ,
ಜಯ ಸಂಗೀತ ರಸಿಕೆ,
ಜಯ ಲೀಲಾ ಶುಕ ಪ್ರಿಯೆ
*(ಮಾತಂಗನ ಮಗಳಿಗೆ ಜಯವಾಗಲಿ, ನೈದಿಲೆಯನ್ನು ಪ್ರತಿನಿಧಿಸುವವಳಿಗೆ ಜಯವಾಗಲಿ, ಸಂಗೀತವನ್ನು ಆಸ್ವಾದಿಸುವವಳಿಗೆ ಜಯವಾಗಲಿ, ಲೀಲೆಯೆಂಬ ಗಿಳಿಯನ್ನು ಮೆಚ್ಚಿರುವವಳಿಗೆ ಜಯವಾಗಲಿ)*

ಸುಧಾಸಮುದ್ರಾಂತಹ್ರುಧ್ಯನ್ಮಣೀ ದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪಧ್ರುಮಾ ಕಲ್ಪ ಕಾದಂಬ ವಾಸ ಪ್ರಿಯೆ
ಕೃತ್ತಿ ವಾಸ ಪ್ರಿಯೆ
ಸರ್ವಲೋಕ ಪ್ರಿಯೆ
*(ಜೇನಿನಂತಹ ಕಡಲಿನ ನಡುವೆ ಇರುವ ನವರತ್ನದಂತಹ ದ್ವೀಪದಲ್ಲಿ ಆರೂಢವಾದ, ಬಿಲ್ವದ ಕಾಡಿನ ಮಧ್ಯೆ ಕದಂಬವನದಲ್ಲಿ ವಾಸವಾಗಿ ಕಲ್ಪವ್ರಕ್ಷದಂತೆ ಬಯಸಿದ್ದನ್ನು ನೀಡುವ, ಸದಾಶಿವನ ಪ್ರಿಯೆಯಾದ, ಸರ್ವಲೋಕ ಪ್ರಿಯೆಯಾದವಳಿಗೆ ಜಯವಾಗಲಿ)*

ಕಾಲರಾತ್ರಿ ನಂಬಿದವರನ್ನು ಸಲಹುತ್ತಾಳೆ  ಆಕೆ ಮಾತಾ ಸ್ವರೂಪಿಣಿ. ಇಡೀ ಬ್ರಹ್ಮಾಂಡ ಏನೂ ಇರದಾಗ ಕತ್ತಲಿನಿಂದ ಕೂಡಿತ್ತು ಮತ್ತು ಅದೇ *ಕತ್ತಲನ್ನು ಕಾಲಿಯ ಕಪ್ಪು ಬಣ್ಣದೊಂದಿಗೆ ಸಮೀಕರಿಸಿ ಆಕೆಯಿಂದಲೇ ಸಕಲ ಚರಾಚರದ ಉಗಮ ಮತ್ತು ಅಂತ್ಯ ಎಂದು ಸೂಚಿಸುತ್ತದೆ.*

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು ಪರಿಭಾವಿಸಿದ ಮಾನವ ಪರ್ವತದ ತಪ್ಪಲಿನ ಪ್ರಕೃತಿಯ ಪ್ರಳಯ ಭೀಕರ ಆಟಾಟೋಪಗಳನ್ನು ಕಂಡು ಭೀತಗೊಂಡು ಎಲ್ಲಕ್ಕಿಂತ ಮಿಗಿಲಾದ ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ ಎನ್ನುವುದನ್ನು ಮನಗಂಡು ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಸ್ತುತಿಸಿದ.

*ಯೋಗದಲ್ಲಿ ಈಕೆ ಸಹಸ್ರಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ.*

ಕಾಲಿ, ಮಹಾಕಾಲಿ, ಕಾಲಿಕೆ, ಪರಮೇಶ್ವರಿ||
ಸರ್ವಾನಂದಕರಿ ದೇವಿ ನಾರಾಯಣಿ ನಮೋಸ್ತುತೆ||

ತಾಯಿ ಸಕಲರಿಗೂ ಶುಭ ಕರುಣಿಸಲಿ.

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

Sunday, 14 October 2018

ಕಾತ್ಯಾಯಿನಿ ನಮಸ್ತುಭ್ಯಂ

ನವರಾತ್ರಿಯ ಆರನೇ ದಿನ 6 ಪೂಜಿಸಲ್ಪಡುವವಳು  *"ಕಾತ್ಯಾಯಿನಿ"*

ಅಮರಕೋಶದಲ್ಲಿ ಕಾತ್ಯಾಯಿನಿ ಪಾರ್ವತಿಯ ಎರಡನೇ ಹೆಸರಾಗಿದೆ.

*ಮಹಾಕಾಲಿ ಪುರಾಣದಲ್ಲಿ* *ಕಾತ್ಯಾಯನ ಎಂಬ ಋಷಿಯು ಈಕೆಯನ್ನು ಮೊದಲಿಗೆ ಪೂಜಿಸಿದನಾದರಿಂದ ಈಕೆಗೆ ಕಾತ್ಯಾಯಿನಿ ಎಂದು ಹೆಸರು ಬಂತು ಎಂದು ಉಲ್ಲೇಖಿಸಿದೆ.*

ಹಲವಾರು ಪುರಾಣಗಳು (ದೇವಿ ಭಾಗವತ, ಮಾರ್ಕಾಂಡೇಯ, ಮಹಾಕಾಲಿ ಪುರಾಣ) ಈಕೆಯ ಬಗೆಗೆ ಪ್ರಸ್ತಾಪಿಸಿದೆ.

*ಮಹಿಷಾಸುರನ* ಸಂಹಾರಕ್ಕೆ ಅವತರಿಸಿದವಳು ಇವಳು ಎಂದು ತಿಳಿದುಬರುತ್ತದೆ. ಗಂಡಸರಿಂದ ಸಾವು ಬರದಂತೆ ವರ ಪಡೆದಿದ್ದ ಮಹಿಷಾಸುರ  *ಮಹಿಷಮಂಡಲವನ್ನು* ಆಳುತ್ತಿದ್ದ. ಆತ ಕಾತ್ಯಾಯಿನಿಯ ರೂಪಕ್ಕೆ ಮರುಳಾಗಿ ತನ್ನನ್ನು ವರಿಸುವಂತೆ ಕೇಳಿದನು. ಯುದ್ಧದಲ್ಲಿ ತನ್ನನ್ನು ಗೆದ್ದಲ್ಲಿ ತಾನು ಮಹಿಷಾಸುರನನ್ನು  ವರಿಸುವುದಾಗಿ ಹೇಳಿದ ಕಾತ್ಯಾಯಿನಿ ಅವನೊಂದಿಗೆ ಯುದ್ಧಕ್ಕೆ ಅಣಿಯಾದಳು. ಯುದ್ಧದಲ್ಲಿ ಮಹಿಷಾಸುರನನ್ನು ವಧಿಸಿದಳು. ತನ್ಮೂಲಕ *ಮಹಿಷಾಸುರಮರ್ಧಿನಿ* ಎಂಬ ಹೆಸರನ್ನು ಹೊಂದಿದಳು.

*ಮಹಿಷ* ಎಂದರೆ *ಕೋಣ*. *ಕೋಣ* *ಅಜ್ಞಾನವನ್ನು* ಸಂಕೇತಿಸುತ್ತದೆ. *ಲೌಕಿಕ ಜಗತ್ತಿನಲ್ಲಿ  ಕಾಮ , ಕ್ರೋಧ , ಮೋಹ , ಮಾಯೆ ಎಂಬ ಅಜ್ಞಾನಗಳು ನಮ್ಮನ್ನು ಆಗಾಗ ವರಿಸಲು ಬರುತ್ತವೆ* ಆ ಸಂದರ್ಭದಲ್ಲಿ *ಜ್ಞಾನ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯ ಸ್ಮರಣೆ ಅಜ್ಞಾನ ನಾಶಕ್ಕೆ ಹಾಗೂ ಜ್ಞಾನ ಜ್ಯೋತಿ  ಬೆಳಗಲು ಕಾರಣಳಾಗುತ್ತಾಳೆ.*

ಭಾಗವತ ಪುರಾಣದಲ್ಲಿ ಕನ್ಯೆಯರು  ಅರ್ಥಾತ್ *ಮದುವೆಯಾಗದ ಗೋಪಿಕೆಯರು ಕೃಷ್ಣನೇ ಗಂಡನಾಗಿ ಸಿಗಲಿ ಎಂಬ ಉದ್ದೇಶದಿಂದ ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿಯ ತೀರದಲ್ಲಿ ಸ್ನಾನ ಮಾಡಿ ಒಂದು ತಿಂಗಳ ಕಾತ್ಯಾಯಿನಿ ವೃತ ಕೈಗೊಳ್ಳುತ್ತಿದ್ದರು ಎಂದು ಪ್ರಸ್ತಾಪಿಸುತ್ತದೆ.*

ಕನ್ಯಾ ಕುಮಾರಿ ದೇವಾಲಯದಲ್ಲಿರುವ  *ಕನ್ಯಾಕುಮಾರಿಯು* ಕಾತ್ಯಾಯಿನಿಯ ಸ್ವರೂಪ.

ನವರಾತ್ರಿಯು *ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತ* ಎನ್ನುವುದನ್ನು ನಾವು ಈ ಹಿಂದೆಯೇ ತಿಳಿದುಕೊಂಡೆವು. ಬ್ರಹ್ಮಚಾರಿಣಿ ರೂಪವು *ಲೌಕಿಕ ಕಾಮನೆಗಳ ಮೇಲೆ ಅಲೌಕಿಕ ಸತ್ಯದ ಅರಿವನ್ನು ನೀಡುತ್ತದೆ.* ಅಂತೆಯೇ ಕಾತ್ಯಾಯಿನಿ ರೂಪವು  *ಅರಿಷಡ್ವರ್ಗಗಳ ಮೇಲಿನ ವಿಜಯವನ್ನೂ ಸಂಕೇತಿಸುತ್ತದೆ.*

ಪರ್ವತದ ತಪ್ಪಲಿನಲ್ಲಿಯ ಸಮೃದ್ಧಿಯನ್ನು ಶೈಲಪುತ್ರಿಗೆ ಆರೋಪಿಸಿ, ಕೃಷಿಯೇ ಮುಂತಾದ ಜ್ಞಾನದ ಬಲವನ್ನು ಬ್ರಹ್ಮಚಾರಿಣಿಯೆಂದು ಕರೆದು, ಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯವನ್ನೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳನ್ನು ಗೆದ್ದು ಜಗತ್ತನ್ನೇಧಾರಣೆ ಮಾಡಿದ ಶಿವ ಎಂಬ ಸಂತಸ ಪಡೆದು ಬೀರಿದ ಮಂದಹಾಸವೇ ಕೂಷ್ಮಾಂಡ ಎಂದು ಭಾವಿಸಿ, ತಮ್ಮ ಕುಲದ, ವಂಶದ, ಜಗತ್ತಿನ, ಸೃಷ್ಟಿಯ ಮುಂದೆ ಕೊಂಡೊಯ್ಯುವಲ್ಲಿ ತಾಯಿ ಮಗುವಿನ ಸೇತುವನ್ನೇ ಸ್ಕಂದ ಮಾತ ಎಂದ ಮಾನವ, ಎಲ್ಲಾ ಸಮೃದ್ಧಿಯ ಆಚೆಗೆ ಈ ಐಹಿಕ ಜಗದ ಮೋಹ ಪಾಶಕ್ಕೆ ಒಳಗಾಗದಂತೆ, ಈ ಪರ್ವತದ ತಪ್ಪಲಿನ ಬದುಕಿನಾಚೆಗಿನ ಪಾರಮಾರ್ಥಿಕವೇ ಸತ್ಯ ಎಂದು ಆ ಸತ್ಯವನ್ನು ಕಾತ್ಯಾಯಿನಿ ರೂಪದಲ್ಲಿ ಪರಿಭಾವಿಸಿಕೊಂಡನು 

*ಯೋಗದಲ್ಲಿ ಈಕೆ ಆಜ್ಙಾ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*

*ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಧೀಶ್ವರೀ| ನಂದ ಗೋಪ ಸುತಂ ದೇವಿಪತಿಂ ಮೇ ಕುರು ತೆ ನಮಃ ||*ಎಂದು ಸ್ತುತಿಸಿ ಫಲವನ್ನು ಪಡೆಯಬಹುದು...

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

Saturday, 13 October 2018

ಸ್ಕಂದಮಾತಾ ನಮಸ್ತುಭ್ಯಂ

ನವರಾತ್ರಿಯಲ್ಲಿ ಐದನೇ 5ದಿನ ಪೂಜಿಸಲ್ಪಡುವವಳು *"ಸ್ಕಂದ ಮಾತ"*

ದಕ್ಷ ಯಜ್ಞದಲ್ಲಿ ದಾಕ್ಷಾಯಿನಿಯು ದೇಹತ್ಯಾಗ ಮಾಡಿದ ನಂತರ ಶಿವನು ದಕ್ಷಪುತ್ರಿಯ ನೆನಪಲ್ಲಿ ಭೈರಾಗಿಯಂತೆ ಊರೂರೂ ಅಲೆಯ ತೊಡಗಿದ
*ತಾರಕಾಸುರ*ನೆಂಬ ರಾಕ್ಷಸ ಇನ್ನು ಶಿವನಿಗೆ  ಮದುವೆ ಆಗಲಾರದು ಎಂಬ ಕಲ್ಪನೆಯಲ್ಲಿ *ಶಿವನ ಮಗನಿಂದ ತನಗೆ ಸಾವು ಬರಲಿ* ಎಂದು ವರ ಪಡೆದನು.

ಪಾರ್ವತಿಯಾಗಿ *(ಶೈಲಪುತ್ರಿಯಾಗಿ)* ಮರುಜನ್ಮ ಪಡೆದ ದಾಕ್ಷಾಯಿನಿ  ಶಿವನಿಗಾಗಿ *ಬ್ರಹ್ಮಚಾರಿಣಿಯಾಗಿ* ತಪವನ್ನಾಚರಿಸಿ ಶಿವ ಆಕೆಯನ್ನು *ಚಂದ್ರಘಂಟ* ರೂಪದಲ್ಲಿ  ವರಿಸಿದನು

ಇದನ್ನರಿತ ತಾರಕಾಸುರ ಶಿವನಿಗೆ ಮಗುವಾದರೆ ತನ್ನ ಮರಣ ನಿಶ್ಚಿತ ಎಂದರಿತು *ಶಿವನ ಸಂತಾನದ ನಾಶದ ಕಡೆಗೆ ಯೋಚಿಸಿದನು*
ಶಿವನ ವೀರ್ಯವನ್ನು ತಾರಕಾಸುರನಿಂದ ಕಾಪಾಡಲು ಅಗ್ನಿ ದೇವ ಕೊಂಡೊಯ್ಯುತಿರಲು ಅದು ಆಕಾಶಮಾರ್ಗದಲ್ಲಿ ಕೆಳಗುರುಳಿತು ಮತ್ತು ಅದನ್ನು ಪಕ್ಷಿಯೊಂದು ನುಂಗಿ ಅದರ ತೇಜಸ್ಸಿನ ಬಿಸಿ ತಡೆಯಲಾಗದೆ *ಕೃತ್ತಿಕಾ ಲೋಕದ ನದಿಯಲ್ಲಿ ಮುಳುಗಿತು*
ನದಿಯಲ್ಲಿ ಸ್ನಾನ  ಮಾಡುತ್ತಿದ್ದ *ಆರು ಜನ ಕೃತ್ತಿಕೆಯರ ಗರ್ಭ ಆ ಸಂದರ್ಭ ಈ ವೀರ್ಯದಿಂದ ಫಲಿಸಿತು....* ಆರು ತಾಯಂದಿರಿಗೆ ಒಬ್ಬನಾಗಿ ಹುಟ್ಟಿದವನೇ *"ಸ್ಕಂದ"*. ಕೃತ್ತಿಕೆಯರು ಮಗುವನ್ನು ಹೆತ್ತು ಪಾರ್ವತಿಗೆ ವಾಪಾಸು ಮಾಡಿದರು.* ಎಂದು ಉಲ್ಲೇಖಿಸಿದೆ

*ಕೃತ್ತಿಕೆಯರಿಗೆ ಜನಿಸಿದನಾದರಿಂದ ಕಾರ್ತಿಕೇಯ* ಎಂದೂ *ನವಿಲ ವಾಹನನಾದರಿಂದ ಮಯೂರವಾಹನ* ಎಂದು, *ಆರು ಮುಖ ಇರುವುದರಿಂದ ಆರ್ಮೊಗಂ, ಷಡಾನನ* ಎಂದು *ಸುಬ್ರಹ್ಮಣ್ಯನನ್ನು* ಹಲವು ನಾಮದಿಂದ ಕರೆಯುತ್ತಾರೆ.

ಮಗನನ್ನು ಮರಳಿ ಪಡೆದ ಪಾರ್ವತಿ ಸ್ಕಂದನನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿದಳು ಈ ರೂಪವೇ *"ಸ್ಕಂದ ಮಾತಾ"*👩👶....

ಸ್ಕಂದನನ್ನು ತೊಡೆಯಲ್ಲಿ ಕುಳ್ಳಿರಿಸಿ, ಎರಡು ಕೈಗಳಲ್ಲಿ ಕಮಲವನ್ನು ಧಾರಣೆ ಮಾಡಿ ಅಭಯಮುದ್ರಳಾದ ಸ್ಕಂದಮಾತ ಪದ್ಮಾಸನ ರೂಪದಲ್ಲಿ ಸ್ಥಿತಳಾಗಿದ್ದಾಳೆ. ಆಕೆಯನ್ನು *ಪದ್ಮಾಸನ ದೇವಿ* ಎಂತಲೂ ಕರೆಯುತ್ತಾರೆ.

ಈ ರೂಪವನ್ನು ಪೂಜಿಸುವುದರಿಂದ ದ್ವಿಗುಣ ಫಲ ಪಡೆಯಬಹುದು.... ಕಾರಣ *ಈಕೆಯನ್ನು ಪೂಜಿಸಿದರೆ ಸ್ಕಂದನನ್ನು ಪೂಜಿಸಿದಂತೆ ತನ್ಮೂಲಕ ಸ್ಕಂದ ಹಾಗೂ ಸ್ಕಂದ ಮಾತ ಇಬ್ಬರ ಆಶೀರ್ವಾದ ಪಡೆಯಬಹುದು.*

ನವರಾತ್ರಿಯು *ತಾಯಿ ರೂಪದಲ್ಲಿರುವ ದುರ್ಗೆಯನ್ನು ಪೂಜಿಸುವ ವಿಶೇಷ ಪರ್ವ.* ಸಕಲ ಜೀವಿಯನ್ನೂ ಮಕ್ಕಳ ರೂಪದಲ್ಲಿ ಪೊರೆಯುವ ತಾಯಿಯ ಕಲ್ಪನೆಯೇ ಅಮೋಘವಾದುದು. *ತಸ್ಮಾತ್ ನವರಾತ್ರಿ ತಾಯಿ ಮಗುವಿನ ಬಾಂಧವ್ಯವನ್ನೂ ಪ್ರತಿನಿಧಿಸುತ್ತದೆ.*

ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡು ಆ ಶೈಲದ ಸಮೃದ್ಧಿಯನ್ನೇ ಶೈಲಪುತ್ರಿ ಎಂದು ಕರೆದು, ಜ್ಞಾನ ಎಂಬ ಬ್ರಹ್ಮದ ಮೂಲಕ ಕೃಷಿಸಿದ್ಧಿಗಳಿಸಿ ಅದನ್ನೇ ಬ್ರಹ್ಮಚಾರಿಣಿ ಎಂದು ಭಾವಿಸಿ, ಕಷ್ಟಗಳಿಗೆ ಕುಗ್ಗದೆ ಇಡೀ ವಿಶ್ವವನ್ನು ಧಾರಣೆ ಮಾಡಿದ ಶಿವನೆಂಬ ಸಂತಸವನ್ನು ಸಕಾರಾತ್ಮಕವಾಗಿ ಪಡೆದು ಅದನ್ನೇ ಮನಸ್ಸಿನ ತತ್ವವಾದ ಚಂದ್ರಘಂಟಾ ಎಂದು ಪರಿಭಾವಿಸಿ, ಯಶಸ್ಸು ದಕ್ಕಿದಾಗ ಎಲ್ಲೆಲ್ಲೂ ಹೊಮ್ಮಿದ ನಗುವನ್ನೇ ಕೂಷ್ಮಾಂಡ ಎಂದು ಕರೆದು, ಈ ಸೃಷ್ಟಿ ಕಾರ್ಯ ಮುಂದುವರೆಯಲು, ವಂಶ, ಕುಲ, ಪಂಗಡ ಬೆಳೆಯಲು, ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿ ಮುಂದರಿಯಲು ಮಕ್ಕಳೇ ಭವಿಷ್ಯ ಹಾಗೂ ತಾಯಿಯೇ ಪ್ರಧಾನ ಎಂದರಿತ ಮಾನವ ತಾಯಿ ಮಗುವನ್ನು ಸ್ಕಂದ ಮಾತಾ ರೂಪದಲ್ಲಿ ಕಂಡುಕೊಂಡ ಬಗೆ ಅನನ್ಯ.

*ಯೋಗದಲ್ಲಿ ಈಕೆ ವಿಶುದ್ಧ ಚಕ್ರವನ್ನು ಪ್ರತಿನಿಧಿಸುತ್ತಾಳೆ🐍*

ಸೃಷ್ಟಿ ತತ್ವವನ್ನು 🌱ಈ ರೂಪ ತಿಳಿಸುತ್ತದೆ .... ಸೃಷ್ಟಿಯಲ್ಲಿ ತಾಯಿ ಮತ್ತು ಮಗುವಿನ ಪಾತ್ರವನ್ನು ವಿಶದಪಡಿಸುತ್ತದೆ...

*ಸಿಂಹಾಸನಾ ಗತಾನಿತ್ಯಂ ಪದ್ಮಾಶ್ರಿತ ಕರದ್ವಯಂ| ಶುಭದಸ್ತು ಸದಾ ದೇವಿ ಸ್ಕಂದ ಮಾತ ಯಶಸ್ವಿನಿ||* ಎಂದು ಸ್ತುತಿಸಿ ಸಕಲ ಸಂಮಂಗಲ ಪಡೆಯಬಹುದು....

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

Friday, 12 October 2018

ಕೂಷ್ಮಾಂಡ ನಮಸ್ತುಭ್ಯಂ

ನವರಾತ್ರಿಯ ನಾಲ್ಕನೇ 4ದಿನ ಪೂಜಿಸಲ್ಪಡುವವಳು *"ಕೂಷ್ಮಾಂಡ"* :
*"ಕು"* ಅಂದರೆ *ಸಣ್ಣ* *"ಉಷ್ಮ"* ಎಂದರೆ *ಶಕ್ತಿ* *"ಅಂಡ"*ಎಂದರೆ *ಮೊಟ್ಟೆ* ಅರ್ಥಾತ್ *ಕೂಷ್ಮಾಂಡ ಎಂದರೆ ಸಣ್ಣ ನಗುವಿನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದವಳು*

*ದೇವಿ ಸಪ್ತಶತಿಯಲ್ಲಿ ಏನೂ ಇರದ *ಬರೀ ಕತ್ತಲಷ್ಟೇ ತುಂಬಿದ್ದ ಈ ಬ್ರಹ್ಮಾಂಡವು ದುರ್ಗ ಮಾತೆಯ ಮಂದಹಾಸದಿಂದ ಉಗಮವಾಯಿತು ಎಂದು ಹೇಳುತ್ತದೆ.  ಅಲ್ಲದೆ ತನ್ನ ನಗುವಿನಿಂದಲೇ ಬೆಳಕನ್ನು  ಪಸರಿಸುವವಳು ಇವಳೇ ಎಂದು ಉಲ್ಲೇಖಿಸಲಾಗಿದೆ. ಹೀಗೆ ಬೆಳಕನ್ನು ಸ್ತ್ರೀಯ ನಗುವಿನೊಂದಿಗೆ ಸಂಕೇತಿಸಲಾಗಿದೆ.

ಕೂಷ್ಮಾಂಡ ದೇವಿಯು ಸೌರಮಂಡಲಕ್ಕೆ ಅಧಿದೇವತೆಯಾಗಿದ್ದಾಳೆ ಎಂದೂ, ಸೂರ್ಯನಿಗೆ  ಬೆಳಕು ಅದು ಈಕೆಯಿಂದಲೇ ಎಂದೂ *ಈಕೆ ಸೂರ್ಯನ ಆಂತರ್ಯದಲ್ಲಿ  ಸ್ಥಿತಳಾಗಿದ್ದಾಳೆ* ಎಂದೂ ಹೇಳಲಾಗುತ್ತದೆ. ಹೀಗಾಗಿ ಮತ್ತೆ ಮತ್ತೆ ಬೆಳಕನ್ನು ಸ್ತ್ರೀಯೊಂದಿಗೆ ಸಮೀಕರಿಸಲಾಗಿದೆ. ಅರ್ಥಾತ್ ಸ್ತ್ರೀ ಬೆಳಕನ್ನು , ಜ್ಞಾನವನ್ನು  ಪಸರಿಸುವವಳು, ಸ್ತ್ರೀ ಜೀವ ಸಂಚಲನ, ಸೃಷ್ಟಿಯಲ್ಲಿ ಸ್ತ್ರೀ  ಪಾತ್ರ ಮಹತ್ತರವಾದುದು ಎಂದು ಸೂಚಿಸುತ್ತದೆ.

ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡ ಜನಪದರು ಆ ಪರ್ವತದ ಮಗಳೇ ಪಾರ್ವತಿ ಎಂದು ಪರಿಭಾವಿಸಿ, ಕೃಷಿಯ ಜ್ಞಾನ ಎಂಬ ಬ್ರಹ್ಮಚಾರಿಣಿಯ ಮೂಲಕ ಶಿವ ಎಂಬ ಶುಭವನ್ನು ದಕ್ಕಿಸಿಕೊಂಡರು, ಆದರೂ ಪ್ರಕೃತಿಯ ಎದುರು ಸೋತು ಪ್ರಳಯ ಭೀಕರವಾದ ಪ್ರಕೃತಿಯನ್ನು ಧಾರಣೆ ಮಾಡಿದ ಶಿವನೆದುರು ಖಿನ್ನರಾಗದೆ ಚಂದ್ರಘಂಟ ಎಂಬ ಸಕಾರಾತ್ಮಕ ತತ್ವವನ್ನು ಅನುಸರಿಸಿ ಸವಾಲುಗಳನ್ನೆದುರಿಸಿ ಬದುಕು ಕಟ್ಟಿಕೊಂಡು ಸುಂದರ ಶುಭ ಎಂಬ ಶಿವನನ್ನು ಮರಳಿ ಪಡೆದರು. ಆ ಮೂಲಕ ಸಣ್ಣದಾದ ನಗುವು ತೇಲಿ ಇಡೀ ಮನುಕುಲವು ಈ ನಗುವನ್ನು ಪಸರಿಸಿರುವ ಪ್ರಕೃತಿಯನ್ನು ತಾಯಿ ಕೂಷ್ಮಾಂಡ ಎಂದು ಪರಿಭಾವಿಸಿತು.

ಆಕೆಯನ್ನು *ಅಷ್ಟಭುಜ* ಎಂದು ಕರೆಯುತ್ತಾರೆ ತನ್ಮೂಲಕ ಗದೆ, ಚಕ್ರ, ಕಮಲ, ಕಮಂಡಲ, ಬಿಲ್ಲು, ಬಾಣ, ಅಮೃತ ಹಾಗೂ ಜಪಮಣಿ ಧಾರಣೆ ಮಾಡಿದ್ದಾಳೆ *(ಗದೆ ಶಕ್ತಿಯನ್ನು, ಚಕ್ರ ಕಾಲವನ್ನು, ಕಮಲ ಆಧ್ಯಾತ್ಮವನ್ನು, ಕಮಂಡಲ ಪಾವಿತ್ರ್ಯವನ್ನು, ಬಿಲ್ಲು ಕರ್ಮವನ್ನು, ಬಾಣ ಗುರಿಯನ್ನು, ಅಮೃತ ಅಮರತ್ವವನ್ನು, ಜಪಮಣಿ ಜ್ಞಾನವನ್ನು ಪ್ರತಿನಿಧಿಸುತ್ತದೆ)* ... ಆಮೂಲಕ *ನವನಿಧಿ, ಅಷ್ಟಸಿದ್ಧಿ* ಕರುಣಿಸುತ್ತಾಳೆ ಎಂಬ ಪ್ರತೀತಿ ಇದೆ....

*ಕುಂಬಳಕಾಯಿ* ಈಕೆಗೆ ಸಮರ್ಪಿಸುತ್ತಾರೆ ಆದುದರಿಂದ ಕುಂಬಳಕಾಯಿಗೆ ಕೂಷ್ಮಾಂಡ ಎಂದು ಕರೆಯುತ್ತಾರೆ.

*ಯೋಗದಲ್ಲಿ ಈಕೆ ಅನಾಹತ ಚಕ್ರವನ್ನು ಪ್ರತಿನಿಧಿಸುತ್ತಾಳೆ*

*"ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ| ಧದಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ||*
ಎಂದು ಸ್ತುತಿಸಿ ಬಾಳ ಕತ್ತಲನ್ನು ಹೋಗಲಾಡಿಸಿ ಸುಖ ಶಾಂತಿ ಎಂಬ ಬೆಳಕನ್ನು ಹೊಂದಬಹುದು

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Thursday, 11 October 2018

ಚಂದ್ರಘಂಟಾ ನಮಸ್ತುಭ್ಯಂ

ಚಂದ್ರ ಮತ್ತು ಘಂಟೆಗೆ ವಿಶೇಷ ವಿಸ್ತಾರದ ಹೊಳಹು ಇದೆ. ಚಂದ್ರ ಮನೋಕಾರಕ ಅರ್ಥಾತ್ ಮನಸ್ಸಿಗೆ ಸಂಬಂಧಪಟ್ಟವನು. ಹುಣ್ಣಿಮೆಗೆ ಕಡಲು ಉಕ್ಕೇರುವ, ಮನಸ್ಸಿನ ಮೇಲೆ ಪ್ರಭಾವವಿರುವುದನ್ನು ಸ್ಮರಿಸಬಹುದು.

ಘಂಟೆ  ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿ (negative energy) ಅನ್ನು ದೂರ ಮಾಡುವಂತದ್ದು. ಹಾಗಾಗಿ ಮನಸ್ಸಿನ ವಿಕಾರಗಳನ್ನು ನಕಾರಾತ್ಮಕತೆಯನ್ನು ಸಕಾರಾತ್ಮಕ ವಿಚಾರಗಳಿಂದ ಸರಿಪಡಿಸುವ ದ್ಯೋತಕವಾಗಿ ಚಂದ್ರಘಂಟಾ ರೂಪವು ಕಂಡು ಬರುತ್ತದೆ.

ತಸ್ಮಾತ್ *ಚಂದ್ರಘಂಟಾಳನ್ನು ಸ್ತುತಿಸಿದರೆ ಮನಸ್ಸಿಗೆ ಸಂಬಂಧಿಸಿದ ಕ್ಲೇಶ, ದುಃಖ, ವಿಕಾರ ನಾಶವಾಗುತ್ತದೆ.

ನವರಾತ್ರಿಯ ಮೂರನೇ 3 ದಿನ ಪೂಜಿಸುವ ದೇವಿ *"ಚಂದ್ರಘಂಟಾ"*: *ಪಾರ್ವತಿಯು (ಶೈಲಪುತ್ರಿ) ಬ್ರಹ್ಮಚಾರಿಣಿಯಾಗಿ* ಶಿವನ ಕುರಿತು ತಪಸ್ಸಾಚರಿಸಿ ಶಿವನನ್ನು ಒಲಿಸಿಕೊಳ್ಳುತ್ತಾಳೆ .

ಸ್ಮಶಾನವಾಸಿಯಂತೆ, ಭೈರಾಗಿಯಂತೆ  ಶಿವನನ್ನು ಕಂಡು ಪಾರ್ವತಿಯ ತಾಯಿ ರೂಪ ಲಾವಣ್ಯದಿಂದ ಕೂಡಿದ ಮಗಳನ್ನು ಇಂತಹ ಶಿವನು ಮದುವೆಯಾಗುವುದೇ ಎಂದುಕೊಂಡು ಭೀತಗೊಂಡು  ಮೂರ್ಛಿತಳಾಗುತ್ತಾಳೆ.

ಈ ಸಂದರ್ಭದಲ್ಲಿ ಪಾರ್ವತಿಯು ಅಲಂಕಾರಭರಿತಳಾಗಿ ಬಹುಸುಂದರವಾದ ರೂಪವನ್ನು ಧಾರಣೆಮಾಡುತ್ತ, ತನ್ನ ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿದಳು ಎಂಬ ಉಲ್ಲೇಖವಿದೆ. ಆ ಅರ್ಧಚಂದ್ರವು ಹಣೆಯಲ್ಲಿ ಘಂಟೆಯಂತೆ ಓಲಾಡುತಿತ್ತು ಆದುದರಿಂದ ಆಕೆಯನ್ನು *"ಚಂದ್ರಘಂಟಾ"* 🌙🔔ಎಂದು ಸ್ತುತಿಸಿದರು.

*ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ' ಅಂದರೆ  ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ.. 🌙🔔*

ಹಣೆಯಲ್ಲಿ ಧರಿಸಿದ ಚಂದ್ರಘಂಟೆಯ ಸದ್ದಿಗೆ 🔔ಹಲವು ದುಷ್ಟ ಶಕ್ತಿಗಳು ನಕಾರಾತ್ಮಕ ಶಕ್ತಿ  (negative energy) ನಾಶವಾದವು ಎಂಬ ಉಲ್ಲೇಖವಿದೆ.

ಚಂದ್ರಘಂಟಾ ರೂಪವನ್ನು
ನೋಡಿದ ಶಿವ ತನ್ನ ಭೈರಾಗಿ ರೂಪವನ್ನು ತ್ಯಜಿಸಿ ಅಲಂಕೃತನಾದ ಸುಂದರಾಂಗನ ರೂಪ ಧಾರಣೆ ಮಾಡಿದನು. *ಹೆಣ್ಣು ಗಂಡನ್ನು ಪರಿವರ್ತಿಸಬಲ್ಲಳು ಎಂದೂ ಇದನ್ನು ಅರ್ಥೈಸಬಹುದು.  ಮನಸ್ಸು ವಿಕಾರರಹಿತವಾದಾಗ ಬೈರಾಗಿಯಂತ ಬದುಕು ಸುಂದರವಾಗುತ್ತದೆ ಎಂದೂ ಅರ್ಥೈಸಬಹುದು.* ಶಿವನನ್ನು (ಸಂತೋಷವನ್ನು) ಒಲಿಸಿಕೊಳ್ಳಲು ಸಕಾರಾತ್ಮಕ ಚಿಂತನೆ ಅಗತ್ಯ. ಚಂದ್ರ ಎಂಬ ನಕಾರಾತ್ಮಕತೆಯನ್ನು ಘಂಟೆ ಎಂಬ ಸಕಾರಾತ್ಮಕತೆಯಿಂದ ಬದಲಾಯಿಸುವ ತತ್ವವಿದು. ಆಗ ಶಿವ ಎಂಬ ಸಂತೋಷ ಒಲಿಯುತ್ತದೆ.

ಪರ್ವತದ ತಪ್ಪಲಿನ ಸಮೃದ್ಧಿಯನ್ನು ಪಾರ್ವತೀ ಎಂದು ಕೊಂಡಾಡಿದ ಮಾನವ, ಜ್ಞಾನ ಎಂಬ ಬ್ರಹ್ಮಚಾರಿಣಿ ತಪಸ್ಸಿನಂತೆ ಕೃಷಿಯನ್ನು ಒಲಿಸಿ ಬದುಕು ಕಂಡುಕೊಂಡ. ಆತನ ಶ್ರಮಕ್ಕೆ ಶಿವ ಎಂಬ ಸಂತೋಷ ಒಲಿದರೂ ಆಗೊಮ್ಮೆ ಈಗೊಮ್ಮೆ ಪ್ರಕೃತಿಯ ಎದುರು ಸೋತು ಕೃಷಿ ಕೈಕೊಟ್ಟು ಮಾನಸಿಕ ಕ್ಲೇಶವನುಭವಿಸುತ್ತಿದ್ದ. ಆಗ ಚಂದ್ರಘಂಟಾ ಎಂಬ ತತ್ವದಂತೆ ಪ್ರಕೃತಿಯ ಸವಾಲುಗಳನ್ನು ಸಕಾರಾತ್ಮಕವಾಗಿ ಎದುರಿಸಿ ಮತ್ತೆ ಬದುಕು ಕಟ್ಟಿ ಭೀಕರ ಶಿವನಿಂದ ಸುಂದರ ಶಿವನನ್ನು ಪಡೆದುಕೊಂಡ.

*ಪ್ರಕೃತಿ 🍃🌿ಮತ್ತು ಪುರುಷ 👤 ತತ್ವವನ್ನು ಇದು ತಿಳಿಯಪಡಿಸುತ್ತದೆ....*

*ಯೋಗದಲ್ಲಿ ಈಕೆ ಮಣಿಪುರ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*

ಹತ್ತು ಕೈಗಳಲ್ಲಿ ಖಡ್ಗ, ತ್ರಿಶೂಲ, ಕಮಲ, ಕಮಂಡಲ ಮುಂತಾದವನ್ನು ಧರಿಸಿದ್ದು, ಈಕೆಯನ್ನು *ಚಾಮುಂಡ, ಚಂಡಿಕಾ* ಎಂಬೂದಾಗಿಯೂ ಕರೆಯುತ್ತಾರೆ

ಈಕೆಯನ್ನು *"ಪಿಂಡಜಪ್ರವರಾರೂಢಾಚಂದಕೋಪಾಸ್ತ್ರಕೈರ್ಯುತಾ |ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||"* ಎಂದು ಸ್ತುತಿಸಿ ಮನಃ ಕ್ಲೇಶ ದೂರ ಮಾಡಿ ನೆಮ್ಮದಿ ಕಾಣಬಹುದು....

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ಸುಖ, ನೆಮ್ಮದಿ ಕರುಣಿಸಲಿ......

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"