Friday, 12 October 2018

ಕೂಷ್ಮಾಂಡ ನಮಸ್ತುಭ್ಯಂ

ನವರಾತ್ರಿಯ ನಾಲ್ಕನೇ 4ದಿನ ಪೂಜಿಸಲ್ಪಡುವವಳು *"ಕೂಷ್ಮಾಂಡ"* :
*"ಕು"* ಅಂದರೆ *ಸಣ್ಣ* *"ಉಷ್ಮ"* ಎಂದರೆ *ಶಕ್ತಿ* *"ಅಂಡ"*ಎಂದರೆ *ಮೊಟ್ಟೆ* ಅರ್ಥಾತ್ *ಕೂಷ್ಮಾಂಡ ಎಂದರೆ ಸಣ್ಣ ನಗುವಿನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದವಳು*

*ದೇವಿ ಸಪ್ತಶತಿಯಲ್ಲಿ ಏನೂ ಇರದ *ಬರೀ ಕತ್ತಲಷ್ಟೇ ತುಂಬಿದ್ದ ಈ ಬ್ರಹ್ಮಾಂಡವು ದುರ್ಗ ಮಾತೆಯ ಮಂದಹಾಸದಿಂದ ಉಗಮವಾಯಿತು ಎಂದು ಹೇಳುತ್ತದೆ.  ಅಲ್ಲದೆ ತನ್ನ ನಗುವಿನಿಂದಲೇ ಬೆಳಕನ್ನು  ಪಸರಿಸುವವಳು ಇವಳೇ ಎಂದು ಉಲ್ಲೇಖಿಸಲಾಗಿದೆ. ಹೀಗೆ ಬೆಳಕನ್ನು ಸ್ತ್ರೀಯ ನಗುವಿನೊಂದಿಗೆ ಸಂಕೇತಿಸಲಾಗಿದೆ.

ಕೂಷ್ಮಾಂಡ ದೇವಿಯು ಸೌರಮಂಡಲಕ್ಕೆ ಅಧಿದೇವತೆಯಾಗಿದ್ದಾಳೆ ಎಂದೂ, ಸೂರ್ಯನಿಗೆ  ಬೆಳಕು ಅದು ಈಕೆಯಿಂದಲೇ ಎಂದೂ *ಈಕೆ ಸೂರ್ಯನ ಆಂತರ್ಯದಲ್ಲಿ  ಸ್ಥಿತಳಾಗಿದ್ದಾಳೆ* ಎಂದೂ ಹೇಳಲಾಗುತ್ತದೆ. ಹೀಗಾಗಿ ಮತ್ತೆ ಮತ್ತೆ ಬೆಳಕನ್ನು ಸ್ತ್ರೀಯೊಂದಿಗೆ ಸಮೀಕರಿಸಲಾಗಿದೆ. ಅರ್ಥಾತ್ ಸ್ತ್ರೀ ಬೆಳಕನ್ನು , ಜ್ಞಾನವನ್ನು  ಪಸರಿಸುವವಳು, ಸ್ತ್ರೀ ಜೀವ ಸಂಚಲನ, ಸೃಷ್ಟಿಯಲ್ಲಿ ಸ್ತ್ರೀ  ಪಾತ್ರ ಮಹತ್ತರವಾದುದು ಎಂದು ಸೂಚಿಸುತ್ತದೆ.

ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡ ಜನಪದರು ಆ ಪರ್ವತದ ಮಗಳೇ ಪಾರ್ವತಿ ಎಂದು ಪರಿಭಾವಿಸಿ, ಕೃಷಿಯ ಜ್ಞಾನ ಎಂಬ ಬ್ರಹ್ಮಚಾರಿಣಿಯ ಮೂಲಕ ಶಿವ ಎಂಬ ಶುಭವನ್ನು ದಕ್ಕಿಸಿಕೊಂಡರು, ಆದರೂ ಪ್ರಕೃತಿಯ ಎದುರು ಸೋತು ಪ್ರಳಯ ಭೀಕರವಾದ ಪ್ರಕೃತಿಯನ್ನು ಧಾರಣೆ ಮಾಡಿದ ಶಿವನೆದುರು ಖಿನ್ನರಾಗದೆ ಚಂದ್ರಘಂಟ ಎಂಬ ಸಕಾರಾತ್ಮಕ ತತ್ವವನ್ನು ಅನುಸರಿಸಿ ಸವಾಲುಗಳನ್ನೆದುರಿಸಿ ಬದುಕು ಕಟ್ಟಿಕೊಂಡು ಸುಂದರ ಶುಭ ಎಂಬ ಶಿವನನ್ನು ಮರಳಿ ಪಡೆದರು. ಆ ಮೂಲಕ ಸಣ್ಣದಾದ ನಗುವು ತೇಲಿ ಇಡೀ ಮನುಕುಲವು ಈ ನಗುವನ್ನು ಪಸರಿಸಿರುವ ಪ್ರಕೃತಿಯನ್ನು ತಾಯಿ ಕೂಷ್ಮಾಂಡ ಎಂದು ಪರಿಭಾವಿಸಿತು.

ಆಕೆಯನ್ನು *ಅಷ್ಟಭುಜ* ಎಂದು ಕರೆಯುತ್ತಾರೆ ತನ್ಮೂಲಕ ಗದೆ, ಚಕ್ರ, ಕಮಲ, ಕಮಂಡಲ, ಬಿಲ್ಲು, ಬಾಣ, ಅಮೃತ ಹಾಗೂ ಜಪಮಣಿ ಧಾರಣೆ ಮಾಡಿದ್ದಾಳೆ *(ಗದೆ ಶಕ್ತಿಯನ್ನು, ಚಕ್ರ ಕಾಲವನ್ನು, ಕಮಲ ಆಧ್ಯಾತ್ಮವನ್ನು, ಕಮಂಡಲ ಪಾವಿತ್ರ್ಯವನ್ನು, ಬಿಲ್ಲು ಕರ್ಮವನ್ನು, ಬಾಣ ಗುರಿಯನ್ನು, ಅಮೃತ ಅಮರತ್ವವನ್ನು, ಜಪಮಣಿ ಜ್ಞಾನವನ್ನು ಪ್ರತಿನಿಧಿಸುತ್ತದೆ)* ... ಆಮೂಲಕ *ನವನಿಧಿ, ಅಷ್ಟಸಿದ್ಧಿ* ಕರುಣಿಸುತ್ತಾಳೆ ಎಂಬ ಪ್ರತೀತಿ ಇದೆ....

*ಕುಂಬಳಕಾಯಿ* ಈಕೆಗೆ ಸಮರ್ಪಿಸುತ್ತಾರೆ ಆದುದರಿಂದ ಕುಂಬಳಕಾಯಿಗೆ ಕೂಷ್ಮಾಂಡ ಎಂದು ಕರೆಯುತ್ತಾರೆ.

*ಯೋಗದಲ್ಲಿ ಈಕೆ ಅನಾಹತ ಚಕ್ರವನ್ನು ಪ್ರತಿನಿಧಿಸುತ್ತಾಳೆ*

*"ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ| ಧದಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ||*
ಎಂದು ಸ್ತುತಿಸಿ ಬಾಳ ಕತ್ತಲನ್ನು ಹೋಗಲಾಡಿಸಿ ಸುಖ ಶಾಂತಿ ಎಂಬ ಬೆಳಕನ್ನು ಹೊಂದಬಹುದು

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.