ನವರಾತ್ರಿಯು ನವದುರ್ಗೆಯರನ್ನು ಪ್ರತಿನಿಧಿಸುವ ಒಂದು ವಿಶೇಷವಾದ ಹಬ್ಬ. ನವರೂಪದಲ್ಲಿ ಕಂಡುಬರುವ ತಾಯಿ ದುರ್ಗಾಮಾತೆಯು ಅನೇಕ ಸಂದೇಶ ಸಂಕೇತಗಳನ್ನು ವಿವಿಧ ರೂಪಗಳ ಮೂಲಕ ನಮಗೆ ನೀಡುತ್ತಾಳೆ.
ಸ್ತ್ರೀ ರೂಪವನ್ನು ದೇವಿ ಸ್ವರೂಪದಲ್ಲಿ ಕಾಣುವ ಪರಿಪಾಠ ಸನಾತನ ಧರ್ಮದಲ್ಲಿ ಅತಿ ಪುರಾತನವಾದುದು ಮತ್ತು ಹಲವು ಆಚಾರ ವಿಚಾರಗಳಲ್ಲಿ ಅದು ಪ್ರಸ್ತುತವೂ ಕೂಡ. ಇಂದಿನ ಆಧುನಿಕ ಜೀವನದಲ್ಲೂ ನಾವು ಇಂತಹ ಅನೇಕ ದುರ್ಗಾರೂಪಗಳನ್ನು ಕಾಣಬಹುದಾಗಿದೆ. ಇಂತಹ ದೈವೀ ಸ್ವರೂಪದ ಸ್ತ್ರೀಯರನ್ನು ನವದುರ್ಗಾ ಸ್ವರೂಪದಲ್ಲಿ ಹಿಡಿದಿಡುವ ಸಣ್ಣ ಪ್ರಯತ್ನ ಈ ಆಧುನಿಕ ನವದುರ್ಗೆಯರು ಎಂಬ ಅಂಕಣದಲ್ಲಿ.
ಸ್ತ್ರೀ ರೂಪವನ್ನು ದೇವಿ ಸ್ವರೂಪದಲ್ಲಿ ಕಾಣುವ ಪರಿಪಾಠ ಸನಾತನ ಧರ್ಮದಲ್ಲಿ ಅತಿ ಪುರಾತನವಾದುದು ಮತ್ತು ಹಲವು ಆಚಾರ ವಿಚಾರಗಳಲ್ಲಿ ಅದು ಪ್ರಸ್ತುತವೂ ಕೂಡ. ಇಂದಿನ ಆಧುನಿಕ ಜೀವನದಲ್ಲೂ ನಾವು ಇಂತಹ ಅನೇಕ ದುರ್ಗಾರೂಪಗಳನ್ನು ಕಾಣಬಹುದಾಗಿದೆ. ಇಂತಹ ದೈವೀ ಸ್ವರೂಪದ ಸ್ತ್ರೀಯರನ್ನು ನವದುರ್ಗಾ ಸ್ವರೂಪದಲ್ಲಿ ಹಿಡಿದಿಡುವ ಸಣ್ಣ ಪ್ರಯತ್ನ ಈ ಆಧುನಿಕ ನವದುರ್ಗೆಯರು ಎಂಬ ಅಂಕಣದಲ್ಲಿ.
ಶೈಲಪುತ್ರಿ: ಶೈಲ ಎಂದರೆ ಪರ್ವತ, ಪುತ್ರಿ ಎಂದರೆ ಮಗಳು ಶೈಲಪುತ್ರಿ ಎಂದರೆ ಅರ್ಥಾತ್ ಪರ್ವತರಾಜನ ಮಗಳು ಪಾರ್ವತಿ. ಪರ್ವತ ದೃಢತೆಯನ್ನು ಸಂಕೇತಿಸುತ್ತದೆ. ಎಂತಹ ಬಿರುಗಾಳಿಯನ್ನು ತಡೆದು ನಿಲ್ಲಿಸುವ ಸಾಮಥ್ರ್ಯವನ್ನು ಪ್ರತಿನಿಧಿಸುತ್ತದೆ. ಪರ್ವತನ ಮಗಳಾದ ಪಾರ್ವತಿಯಾದರೂ ಇದೇ ಸಾಮಥ್ರ್ಯವನ್ನು ಸಂಕೇತಿಸುತ್ತಾಳೆ.
ಇಂದಿನ ಆಧುನಿಕ ಯುಗದಲ್ಲೂ ಇಂತಹ ಅನೇಕ ಹೆಣ್ಣುಮಕ್ಕಳನ್ನು ನಾವು ಕಾಣಬಹುದಾಗಿದೆ. ದೃಢ ವಿಶ್ವಾಸದಿಂದ ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿರುವ ಮಹಿಳೆಯರು, ಪುರುಷಪ್ರಧಾನ ವ್ಯವಸ್ಥೆಯಲ್ಲಿ ತಾವು ಯಾವ ರೀತಿಯಿಂದಲೂ ಕಡಿಮೆಯಿಲ್ಲ ಎಂದು ತೋರುವ ಮಹಿಳೆಯರು, ಕುಟುಂಬದ ಸಂಕಷ್ಟಗಳಿಗೆ ಸದೃಢವಾಗಿ ಹೆಗಲೊಡ್ಡಿ ನಿಂತ ಮಹಿಳೆಯರು ಇದೇ ಶೈಲಪುತ್ರಿ ರೂಪವನ್ನು ಪ್ರತಿನಿಧಿಸುತ್ತಾರೆ.
ಬ್ರಹ್ಮಚಾರಿಣಿ: ಬ್ರಹ್ಮ ಎಂದರೆ ಜ್ಞಾನ, ಚಾರಿಣಿ ಎಂದರೆ ನಡೆಯುವುದು ಅರ್ಥಾತ್ ಬ್ರಹ್ಮಚಾರಿಣಿ ಎಂದರೆ ಜ್ಞಾನ ಮಾರ್ಗದಲ್ಲಿ ನಡೆಯುವುದು. ಶಿವ ಎಂದರೆ ಮಂಗಳಕರ ಎಂದು ಅರ್ಥ, ಶಿವನನ್ನೇ ಪಡೆಯಲು ತಪವನ್ನು ಆಚರಿಸಿ ಒಲಿಸಿಕೊಂಡವಳು ಬ್ರಹ್ಮಚಾರಿಣಿ. ತನ್ನ ಆಯ್ಕೆಯನ್ನು ತಾನೇ ನಿರ್ಧರಿಸಿ ಅದನ್ನು ತಾನಾಗಿಯೇ ಒಲಿಸಕೊಂಡ ಬ್ರಹ್ಮಚಾರಿಣಿ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತಾಳೆ.
ಇಂದು ಅನೇಕ ಹೆಣ್ಣು ಮಕ್ಕಳು ತಮ್ಮ ಆಯ್ಕೆಯಲ್ಲಿ ವಿವಾಹಕ್ಕಿಂತ ಮೊದಲು ಜ್ಞಾನಾರ್ಜನೆಗೆ ಒತ್ತುಕೊಟ್ಟು ವ್ಯವಸ್ಥಿತ ಔದ್ಯೋಗಿಕ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಉನ್ನತ ಶಿಕ್ಷಣ, ವೃತ್ತಿ ಜೀವನದ ಮೂಲಕ ತಮ್ಮ ಬದುಕನ್ನು ತಾವೇ ಸ್ವತಂತ್ರವಾಗಿ ಕಟ್ಟುವ ಆಯ್ಕೆಯನ್ನು ಇಂದು ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ವಯಸ್ಸಿಗೆ ಬಂದ ಹೆಣ್ಣು ಮಗಳ ಮದುವಯೇ ಮುಖ್ಯ ಎಂಬ ಮನಸ್ಥಿತಿ ಕ್ರಮೇಣ ಬದಲಾಗುತ್ತಿದ್ದು ತಮ್ಮ ಬದುಕನ್ನು ತಾವೇ ನಿರ್ಮಿಸಿಕೊಳ್ಳುತ್ತಿರುವ, ತಮ್ಮ ಆಯ್ಕೆಯನ್ನು ತಾವೇ ಮಾಡುತ್ತಿರುವ ಹೆಣ್ಣುಮಕ್ಕಳು ಬ್ರಹ್ಮಚಾರಿಣಿಯ ರೂಪವನ್ನೇ ಪ್ರತಿನಿಧಿಸುತ್ತಾರೆ.
ಚಂದ್ರಘಂಟ: ಪಾರ್ವತಿಯು ಬ್ರಹ್ಮಚಾರಿಣಿಯಾಗಿ ಶಿವನ ಕುರಿತು ತಪವನ್ನು ಆಚರಿಸಿ ಆತನನ್ನು ಒಲಿಸಿಕೊಂಡಳು. ಆಕೆಯನ್ನು ವರಿಸುವ ಸಲುವಾಗಿ ತನ್ನ ಗಣಗಳ ಜೊತೆ ಭೈರಾಗಿಯಂತೆ, ಸ್ಮಶಾನವಾಸಿಯಂತೆ ಆಗಮಿಸಿದ ಶಿವನನ್ನು ಕಂಡು ಪಾರ್ವತಿಯ ತಾಯಿಯು ಮೂರ್ಛಿತಳಾಗುತ್ತಾಳೆ. ಈ ಸಂದರ್ಭ ಪಾರ್ವತಿಯು ಸುಂದರ ರೂಪವನ್ನು ಧಾರಣೆ ಮಾಡುತ್ತಾಳೆ. ತನ್ನ ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸುತ್ತಾಳೆ. ಅದು ಹಣೆಯಲ್ಲಿ ಘಂಟೆಯಂತೆ ಓಲಾಡುತ್ತಿತ್ತು ಹಾಗಾಗಿ ಆಕೆಯನ್ನು ಚಂದ್ರಘಂಟ ಎಂದು ಸ್ತುತಿಸಿದರು ಎಂದು ಉಲ್ಲೇಖವಿದೆ. “ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ” ಎಂಬ ಸಾಲು ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೊ ಅವಳೇ ಚಂದ್ರಘಂಟ ಎಂದು ಸೂಚಿಸುತ್ತದೆ. ಹೀಗೆ ಚಂದ್ರಘಂಟ ರೂಪವನ್ನು ನೋಡಿದ ಶಿವ ತನ್ನ ಭೈರಾಗಿ ರೂಪವನ್ನು ತ್ಯಜಿಸಿ ಅಲಂಕೃತವಾದ ಸುಂದರ ರೂಪ ಧಾರಣೆ ಮಾಡಿದನು ಎಂಬ ಪ್ರತೀತಿ ಇದೆ.
ಪುರುಷ ಮತ್ತು ಪ್ರಕೃತಿ ಒಟ್ಟಾದಾಗ ಮಾತ್ರ ಜೀವಂತಿಕೆ. ತಸ್ಮಾತ್ ಶಕ್ತಿ ಇಲ್ಲದಿರೆ ಶಿವನೂ ಬರಿ ಶವ ಎಂಬ ಮಾತಿದೆ. ಅರ್ಥಾತ್ ಶಕ್ತಿ ಎಂದರೆ ಸ್ತ್ರೀ ರೂಪ. ಇಂದು ಅನೇಕ ಮಹಿಳೆಯರು ತಮ್ಮ ಪತಿಯ ಸಾಧನೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಎಷ್ಟೋ ಪುರುಷರು ಮದುವೆಯ ನಂತರ ವ್ಯವಸ್ಥಿತ ಜೀವನ ನಡೆಸುವುದು ಶಿವನು ಭೈರಾಗಿಯಂತಹ ರೂಪವನ್ನು ತ್ಯಜಿಸಿ ಸುಂದರ ರೂಪ ಧಾರಣೆ ಮಾಡಿದ್ದನ್ನು ಸಂಕೇತಿಸುತ್ತದೆ. ಇಂದು ಮಹಿಳೆಯರೂ ಉದ್ಯೋಗವನ್ನು ಮಾಡುತ್ತಿದ್ದು ಮನೆಯ ಕೆಲಸಗಳಲ್ಲಿ ಗಂಡ ಹೆಂಡತಿ ಇಬ್ಬರೂ ಸಮನಾಗಿ ಹಂಚಿಕೊಳ್ಳುವುದು ಅಗತ್ಯ. ಹಾಗಾಗಿ ಗಂಡ ಹೆಂಡತಿ ಅನ್ಯೋನ್ಯವಾಗಿ ಜೊತೆ ಸೇರಿ ಬಾಳುವಲ್ಲಿ ಪ್ರತಿ ಹೆಣ್ಣೂ ಚಂದ್ರಘಂಟ ರೂಪವನ್ನು ಪ್ರತಿನಿಧಿಸುತ್ತಾಳೆ.
ಕೂಷ್ಮಾಂಡ: ‘ಕೂ’ ಎಂದರೆ ‘ಸಣ್ಣ’, ‘ಉಷ್ಮ’ ಎಂದರೆ ‘ಶಕ್ತಿ’, ‘ಅಂಡ’ ಎಂದರೆ ‘ಮೊಟ್ಟೆ’. ಅರ್ಥಾತ್ ಕೂಷ್ಮಾಂಡ ಎಂದರೆ ಸಣ್ಣ ನಗುವಿನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದವಳು ಎಂದು. ದೇವಿ ಸಪ್ತಶತಿಯು ಏನೂ ಇರದ ಬರೀ ಕತ್ತಲು ತುಂಬಿದ್ದ ಈ ಪ್ರಕೃತಿಯಲ್ಲಿ ದುರ್ಗಾಮಾತೆ ತನ್ನ ಮಂದಹಾಸದಿಂದ ಬ್ರಹ್ಮಾಂಡದ ಉಗಮ ಮಾಡಿದಳು ಎಂದು ಹೇಳುತ್ತದೆ.
ಇಂದು ಅದೆಷ್ಟೋ ಮನೆಗಳು ಮೆರುಗನ್ನು ಪಡೆದಿರುವುದು ಮಹಿಳೆಯರಿಂದ. ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಗಳಾಗಿ, ಹೆಂಡತಿಯಾಗಿ ಹೀಗೆ ಹಲವು ರೀತಿಯಿಂದ ಹೆಣ್ಣು ತನ್ನ ನಗು, ನಲಿವು, ಚಟುವಟಿಕೆಯಿಂದ ಮನೆಯ ಜೀವಂತಿಕೆಗೆ ಕಾರಣೀಭೂತಳು.
ನಮ್ಮ ದೇಶದ ಅನೇಕ ನದಿಗಳಿಗೆ ಹೆಣ್ಣಿನ ಹೆಸರಿದೆ. ಕಾರಣ ನದಿ ಹರಿವ ಉದ್ದಗಲಕ್ಕೂ ಜೀವಂತಿಕೆ ಸ್ಪುರಿಸುತ್ತದೆ. ಅಂತೆಯೇ, ಹೆಣ್ಣುಮಕ್ಕಳು ನೆಲೆಸಿದ ಮನೆಗಳೂ ಸದಾ ಜೀವಂತಿಕೆಯ ನೆಲೆವೀಡಾಗಿದೆ. ಹೀಗಾಗಿ ಪ್ರತಿ ಮಹಿಳೆಯರೂ ಕೂಷ್ಮಾಂಡ ರೂಪವನ್ನೇ ಪ್ರತಿನಿಧಿಸುತ್ತಾರೆ.
ಸ್ಕಂದ ಮಾತ: ಇದು ಮಗುವಿನೊಂದಿಗಿರುವ ತಾಯಿಯ ರೂಪ. ಕಾರ್ತಿಕೇಯನೊಂದಿಗೆ ಇರುವ ದುರ್ಗೆಯ ಈ ರೂಪವು ತಾಯಿ ಮಗುವಿನ ಅವಿನಾಭಾವ ಸಂಬಂಧವನ್ನು ಪ್ರತಿನಿಧಿಸುತ್ತದೆ.
ಇಂದಿನ ಈ ಕಾಲಘಟ್ಟದಲ್ಲೂ ತಾಯಿ ಮಗುವಿನ ಅನುಬಂಧ ಅದೇ ಮಾತೃ ವಾತ್ಸಲ್ಯದಿಂದ ತುಂಬಿದೆ. ಒಬ್ಬರು ಮತ್ತೊಬ್ಬರಿಂದಲೇ ಪರಿಪೂರ್ಣರು ಎಂಬಂತೆ ತಾಯಿ ಮತ್ತು ಮಗು ಒಬ್ಬರನ್ನೊಬ್ಬರು ಬೆಸೆದುಕೊಂಡಿದ್ದಾರೆ.
ಇಂದು ಹೆಣ್ಣು ಮನೆಗಷ್ಟೇ ಸೀಮಿತವಾಗದೆ ಉದ್ಯೋಗದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಆದರೆ, ತನ್ನ ಬಿಡುವಿರದ ಕಾರ್ಯಲಾಪದ ನಡುವೆಯೂ ತನ್ನ ಪೂರ್ಣ ಗಮನವನ್ನು ಮಗುವಿನ ಕಡೆ ನೀಡುವ ಪ್ರಯತ್ನವನ್ನು ಆಕೆ ನಿರಂತರ ಮಾಡುತ್ತಲೇ ಇದ್ದಾಳೆ. ತನ್ನ ಎಲ್ಲಾ ಒತ್ತಡಗಳ ನಡುವೆಯೂ ತನ್ನ ಮಗುವಿನ ಉತ್ತಮ ಬೆಳವಣಿಗೆಯನ್ನು ಸದಾ ಪೋಷಿಸುವ ಪ್ರತಿ ತಾಯಿಯೂ ಸ್ಕಂದ ಮಾತಾ ರೂಪವನ್ನೇ ಪ್ರತಿನಿಧಿಸುತ್ತಾಳೆ.
ಕಾತ್ಯಾಯಿನಿ: ಕಾತ್ಯಾಯನಿ ರೂಪವು ಮಹಿಷಾಸುರನನ್ನು ವಧೆ ಮಾಡಿದ ಉಲ್ಲೇಖವಿದೆ. ಮಹಿಷ ಎಂದರೆ ಕೋಣ. ಕೋಣ ಅಜ್ಞಾನದ ಸಂಕೇತ. ನಾವು ದಡ್ಡನನ್ನು ಕೋಣ ಎಂದು ಬೈಯುವ ವಾಡಿಕೆ ಇದೆ. ಅಂತಹ ಅಜ್ಞಾನವನ್ನು ಜ್ಞಾನ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಸಂಹಾರ ಮಾಡುತ್ತಾಳೆ. ಅರ್ಥಾತ್ ಅಜ್ಞಾನವನ್ನು ಜ್ಞಾನದ ಮೂಲಕ ಸಂಹರಿಸುವ ಸಂದೇಶವನ್ನು ನೀಡುವ ಕಾತ್ಯಾಯನಿ ರೂಪವು ಜ್ಞಾನದ ಸಂಕೇತವಾಗಿದೆ.
ಇಂದು ಮಹಿಳೆಯರು ಅನೇಕ ಕ್ಷೇತ್ರದಲ್ಲಿ ತಮ್ಮ ಜ್ಞಾನವನ್ನು ಧಾರೆಯೆರೆಯುತ್ತಿದ್ದಾರೆ. ತನ್ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದಾರೆ. ರಾಜಕೀಯ, ಆರ್ಥಿಕ, ಅಂತರಿಕ್ಷ, ಆಡಳಿತಾತ್ಮಕ, ವೈದ್ಯಕೀಯ, ವ್ಶೆಜ್ಞಾನಿಕ, ಸಾಮಾಜಿಕ, ಮನೋವ್ಶೆಜ್ಞಾನಿಕ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮ ಜ್ಞಾನಗಂಗೆಯನ್ನು ಹರಿಸಿ ಕಾತ್ಯಾಯಿನಿ ರೂಪವನ್ನೇ ಪ್ರತಿನಿಧಿಸುತ್ತಿದ್ದಾರೆ.
ಕಾಲರಾತ್ರಿ: ಮಹಾಕಾಳಿಯು ಭೀಕರವು, ಭೀಭತ್ಸವೂ ಆದ ರೂಪ. ದುಷ್ಟರನ್ನು ನಿರ್ದಯವಾಗಿ ಶಿಕ್ಷಿಸುವ ದಂಡಿಸುವ ರೂಪವಿದು.
ಇಂದು ಮಹಿಳೆಯರು ಪುರುಷರಿಗಷ್ಟೇ ಸೀಮಿತವಾಗಿದ್ದಂತಹ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿ ದೇಶದಲ್ಲಿ ನಡೆಯುವ ಅನಾಚಾರ, ಕ್ರೂರತೆಗಳನ್ನು ಮಟ್ಟಹಾಕುವಲ್ಲಿ ಸಮರ್ಥರಾಗಿದ್ದಾರೆ. ಐ.ಎ.ಎಸ್, ಐ.ಪಿ.ಎಸ್, ಪತ್ರಿಕೋದ್ಯಮ, ರಾಜಕೀಯ ಮುಂತಾದ ಅತ್ಯಂತ ಸೂಕ್ಷ್ಮ ರಂಗಗಳ ಮೂಲಕ ದುಷ್ಟರನ್ನು ಸದೆಬಡಿದು ಕಾನೂನು ಮತ್ತು ಸುವ್ಯವಸ್ಥೆಯನ್ನು ನೆಲೆಗೊಳಿಸುವಲ್ಲಿ ವಿಶೇಷ ಪಾತ್ರವಹಿಸುತ್ತಿರುವ ಪ್ರತಿ ಸ್ತ್ರೀಯೂ ಕಾಲರಾತ್ರಿಯನ್ನೇ ಪ್ರತಿನಿಧಿಸುತ್ತಾರೆ.
ಮಹಾಗೌರಿ: ಗೌರಿ ಎಂದರೆ ಬಿಳಿ. ಬಿಳಿ ಶಾಂತಿಯ ಸಂಕೇತ. ಅರ್ಥಾತ್ ಮಹಾಗೌರಿ ಶಾಂತಿಯನ್ನು ಪ್ರತಿನಿಧಿಸುತ್ತಾಳೆ. ಮಹಿಳೆಯರು ಮೂಲತಃ ಸಾತ್ವಿಕ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸಾತ್ವಿಕತೆ ಇದ್ದಲ್ಲಿ ಶಾಂತಿ, ಪ್ರಬುದ್ಧತೆಗಳು ಕಂಡುಬರುವುದು ಸಹಜ. ಅಂತೆಯೇ, ಇಂದಿನ ಅನೇಕ ಮಹಿಳೆಯರು ಶಾಂತಿ ಮತ್ತು ಸ್ನೇಹಪರತೆಯ ದ್ಯೋತಕವಾಗಿ ಕಂಡುಬರುತ್ತಾರೆ. ಅನೇಕ ಉದ್ಧಾತ ಚಿಂತನೆಗಳ ಮಹಿಳೆಯರು ಶಾಂತಿ ಸೌಹಾರ್ದತೆಗೆ ಕಾರಣೀಭೂತರಾಗಿದ್ದಾರೆ. ಇಂತಹ ಮಹಿಳೆಯರು ಮಹಾಗೌರಿಯನ್ನೇ ಪ್ರತಿನಿಧಿಸುತ್ತಾರೆ.
ಸಿದ್ಧಿದಾತ್ರಿ: ಹೆಸರೇ ಸೂಚಿಸುವಂತೆ ಈಕೆ ಬಗೆಬಗೆಯ ಸಿದ್ಧಿಯನ್ನು ನೀಡುವವಳು. ಈಕೆ ಅಷ್ಟ ಸಿದ್ಧಿಗಳನ್ನೂ ಕರುಣಿಸುವವಳು ಎಂದು ಹೇಳಲಾಗುತ್ತದೆ.
ಇಂದು ಅನೇಕ ಮಹಿಳೆಯರು ತಮ್ಮ ಬದುಕನ್ನು ಕಟ್ಟುವುದರೊಂದಿಗೆ ತಮ್ಮ ಸುತ್ತಮುತ್ತಲಿನವರಿಗೂ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅನೇಕರ ಬದುಕಿಗೆ ತಾವೊಂದು ಮಾದರಿಯಾಗಿದ್ದಾರೆ. ಅನೇಕ ಯಶಸ್ವೀ ಮಹಿಳೆಯರನ್ನು ಆದರ್ಶವಾಗಿಟ್ಟುಕೊಂಡು ಅತ್ಯದ್ಭುತ ಸಾಧನೆಗಳನ್ನು ಮಾಡಿ ಹೆಸರು ಕೀರ್ತಿ ಮುಂತಾದ ಬಗೆಬಗೆಯ ಸಿದ್ಧಿಗಳಿಸಿದವರು ನಮ್ಮ ನಡುವೆ ಇದ್ದಾರೆ. ಇಂತಹ ಸ್ಫೂರ್ತಿ, ಆದರ್ಶಪ್ರಾಯ ಮಹಿಳೆಯರು ಸಿದ್ಧಿದಾತ್ರಿಯ ರೂಪವನ್ನೇ ಪ್ರತಿನಿಧಿಸುತ್ತಾರೆ.
ಇಷ್ಟೆಲ್ಲಾ ರೂಪಗಳನ್ನು ಆಧುನಿಕ ಮಹಿಳೆಯರು ಪ್ರತಿನಿಧಿಸುವಂತೆ ಅನೇಕ ಮಹಿಳೆಯರು ಇಂದು ತಮ್ಮ ಮೂಲಭೂತ ಹಕ್ಕುಗಳಿಂದ, ಅವಕಾಶಗಳಿಂದ ವಂಚಿತರಾಗಿರುವುದು ಅಷ್ಟೇ ಸತ್ಯ. ಈ ನವರಾತ್ರಿಯಲ್ಲಿ ನಾವು ಪೂಜಿಸುವ ಈ ದೈವೀ ಸ್ವರೂಪವನ್ನು ನಮ್ಮ ಸುತ್ತಮುತ್ತಲಿನ ಮಹಿಳೆಯರಲ್ಲೂ ಕಾಣಬೇಕಾಗಿರುವುದು ಅಗತ್ಯವಾಗಿದೆ. ನವರಾತ್ರಿ ಬರೀ ದೈವೀ ಸ್ವರೂಪದ ಪೂಜೆಯಾಗದೆ ಪ್ರತಿ ಸ್ತ್ರೀಯನ್ನು ಪೂಜನೀಯವಾಗಿ ಕಾಣುವ ತನ್ಮೂಲಕ ಪ್ರತಿ ಹೆಣ್ಣಿಗೂ ತನ್ನ ಹಕ್ಕು, ಅವಕಾಶಗಳನ್ನು ಕಲ್ಪಸಿ ಶೋಷಣೆರಹಿತ ಬದುಕಿನಲ್ಲಿ ಘನತೆಯಿಂದ ಬದುಕುವ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ನಮ್ಮ ಕರ್ತವ್ಯ. “ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ” ಎಂಬ ಸಾಲಿನಂತೆ ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುವುದೊ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುವುದನ್ನು ಸಾಕ್ಷಾತ್ಕರಿಸುವುದು ನಮ್ಮೆಲ್ಲರ ಜವಾಬ್ದಾರಿ.
ಯೋಗೀಶ್ ಮಲ್ಲಿಗೆಮಾಡು

No comments:
Post a Comment
Note: only a member of this blog may post a comment.