Sunday, 23 December 2018

ಕ್ರಿಸ್ಮಸ್ ರಾತ್ರಿ

ಡಿಸೆಂಬರ್ 25ರ ಕ್ರಿಸ್ಮಸ್ ನ ರಾತ್ರಿ. ಮೆಕ್ ಮತ್ತು ರೋಸ್ ದಂಪತಿಗಳು ನಿದ್ದೆ ಹೋಗಿದ್ದರು. ಮನೆಯೊಳಗೆ ಬೆಚ್ಚಗಿನ ವಾತಾವರಣವಿತ್ತು. ಹೊರಗೆ ಥಂಡಿ ಗಾಳಿ ಬೀಸುತ್ತಿತ್ತು. ಸುರಿಯುತ್ತಿದ್ದ ಮಂಜಿನ ನಡುವೆ ಕ್ರಿಸ್ಮಸ್ ಟ್ರೀಗೆ ಹಾಕಿದ್ದ ನಕ್ಷತ್ರ ಬಲ್ಬುಗಳು ಹೊಳೆಯುತ್ತಿತ್ತು.

ಬೆಚ್ಚಗಿದ್ದ ಮನೆಯೊಳಗೆ ತಣ್ಣನೆಯ ಗಾಳಿ ಆವರಿಸುತ್ತಿರುವ ಅನುಭವವಾಗಿ ರೋಸ್ ಎಚ್ಚೆತ್ತಳು. ಯಾಕಿಷ್ಟು ತಂಪಾಗುತ್ತಿದೆ ಎಂದೆಣಿಸುವಷ್ಟರಲ್ಲಿ ಕಿಟಕಿಯ ಬಾಗಿಲು ತಾನಾಗಿಯೇ ಅರ್ಧ ತೆರೆದುಕೊಂಡದ್ದು  ಗಮನಕ್ಕೆ ಬಂತು.

ಕಿಟಕಿಯನ್ನು ಹಾಕೋಣ ಎಂದು ಕಿಟಕಿಯ ಬಳಿ ಎದ್ದು ಬಂದವಳಿಗೆ ಗೋದಲಿಗೆ ಹಾಕಿದ್ದ ಮಿನುಕು ಬೆಳಕಿನ ಝಗಮಗದ ಪ್ರತಿಫಲನದಲ್ಲಿ ದೂರದಲ್ಲಿ ಅದ್ಯಾರೊ ಹೊದ್ದು ಕುಳಿತಂತೆ ಕಾಣಿಸಿತು. "ಸ್ನೋ ಬೀಳುತ್ತಿರುವ ಈ ಥಂಡೀ ಹೊತ್ತಲ್ಲಿ ಯಾರಿದು" ಎಂದು ತನಗೆ ತಾನೆ ಹೇಳಿಕೊಂಡು ಮೆಕ್ ಅನ್ನು ಕರೆದು ತಿಳಿಸಿದಳು.

ಮೆಕ್ ಬಾಗಿಲು ತೆರೆದು "ಹೇ, ಕಮ್ಮಿನ್. ಇಟ್ಸ್ ಕೋಲ್ಡ್ ಔಟ್ಸೈಡ್" ಎಂದು ಆತನನ್ನು ಒಳ ಕರೆದ. ಹೊದಿಕೆಯನ್ನು ಮತ್ತಷ್ಟು ಬಿಗಿಯಾಗಿ ಹೊದ್ದು ಮುದುಕ ಕೋಲೂರುತ್ತಾ ಮೆಕ್ ನ ಮನೆಯ ಬಾಗಿಲ ಮುಂದೆ ಬಂದು ನಿಂತುಕೊಂಡ.

"ಬನ್ನಿ ಒಳಗೆ. ಹೊರಗೆ ತುಂಬಾ ಥಂಡಿ ಇದೆ" ಎನ್ನುತ್ತಾ ಮೆಕ್ ಮುದುಕನನ್ನು ಒಳಗೆ ಕರೆದುಕೊಂಡು ಬಾಗಿಲು ಹಾಕಿದ. ಶೀತಲವಾಗಿದ್ದ ವಾತಾವರಣ ಒಮ್ಮೆಗೆ ಬೆಚ್ಚಗಾದ ಅನುಭವವಾಯಿತು. ಮುದುಕನ ಮುಖದಲ್ಲಿ ಒಂದು ಕಾಂತಿ, ಕಣ್ಣಲ್ಲಿ ತೇಜಸ್ಸನ್ನು ನೋಡಿದ ಮೆಕ್ ದಂಪತಿಗೆ ಆ ಮಂದ ಬೆಳಕಿನ  ಮನೆಯೊಳಗೆ ದಿವ್ಯ ಪ್ರಕಾಶವಾದ ಅನುಭವವಾಯಿತು.

ಯಾರು ನೀವು? ಈ ವಿಂಟರ್ ರಾತ್ರಿಯಲ್ಲಿ ಎಲ್ಲಿಗೆ ಹೊರಟಿದ್ದೀರಿ ರೋಸ್ ಆಪ್ಯಾಯವಾಗಿ ಕೇಳಿದಳು. ಮುದುಕ ನಗುತ್ತಾ ಹೇಳಿದ "ನಾನು ಲವ್". "ಲವ್... ನಿಮ್ಮ ಹೆಸರೆ?" ಮೆಕ್ ಪ್ರಶ್ನಾರ್ಥಕವಾಗಿ ಕೇಳಿದ್ದ. "ಹೌದು, ಅನಾದಿ ಕಾಲದಿಂದಲೂ ನಾನಿಲ್ಲಿದ್ದೇನೆ. ಕ್ರಿಸ್ತನ ಸಂದೇಶ ನಾನೆ. ಆದರೆ ಇಂದು ಎಲ್ಲರ ಹೃದಯದಿಂದ ನನ್ನನ್ನು ಹೊರಗೆಸೆದಿದ್ದಾರೆ. ಹಾಗಾಗಿಯೇ ನಾನು ಥಂಡಿ ರಾತ್ರಿಯಲ್ಲಿ ಹೊರಗಡೆ ತಿರುಗಾಡುತ್ತಿದ್ದೇನೆ. ಯಾರು ನನ್ನನ್ನು ಒಳಗೆ ಕರೆದುಕೊಳ್ಳುತ್ತಾರೊ ಅವರ ಹೃದಯವನ್ನು ಭಾವವನ್ನು ಬೆಚ್ಚಗಿಡುತ್ತೇನೆ. ಎಲ್ಲಿ ನಾನಿಲ್ಲವೊ ಅಲ್ಲಿ ಶೀತಲ ಸಂಕಟ." ಪ್ರೀತಿ ತುಂಬಿ ಮುದುಕ ನುಡಿಯುತ್ತಿದ್ದ.

ಮೆಕ್ ಮತ್ತು ರೋಸ್ ಕಣ್ಣುಗಳು ತುಂಬಿಕೊಂಡಿದ್ದವು. ಕಣ್ಣೀರುಗಳು ತಣ್ಣಗಿಲ್ಲ, ಬೆಚ್ಚಗಿದೆ. ಏಕೆಂದರೆ ಅವುಗಳು ಪ್ರೀತಿಯಿಂದ ನಮ್ಮ ಬಗ್ಗೆ ಅಥವಾ ಇನ್ನೊಬ್ಬರ ಬಗ್ಗೆ ವ್ಯಥೆಯುಂಟಾದಾಗ ಬರುವಂತದ್ದು. ಬೆಚ್ಚಗಿನ ಭಾವ! ಕಣ್ಣೀರ ಒರೆಸಿ ನೋಡುವಾಗ ಮುದುಕ ಮಾಯವಾಗಿದ್ದ!! ಮೆಕ್ ದಂಪತಿಯ ಹೃದಯದಲ್ಲಿ ಪ್ರೀತಿ ತುಂಬಿತ್ತು!!! ಗೋದಲಿಯಲ್ಲಿದ್ದ ಕ್ರಿಸ್ತ ನಗುತ್ತಿದ್ದ.

ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

No comments:

Post a Comment

Note: only a member of this blog may post a comment.