Wednesday, 18 December 2019

ನೀಲ ಮೇಘ ಮತ್ತು ಶ್ಯಾಮ

ಮೇಘ ಸಾಲಿನಲ್ಲಿ ಮತ್ತೆ ನೀಲಿ ಬಣ್ಣ ಬೆರೆತಿದೆ
ನೀಲ ಮೇಘ ಶ್ಯಾಮ ನಿನ್ನ ಹಾಗೆ ಕಂಡು ಬರುತಿದೆ

ದಟ್ಟ ಮುಗಿಲ ಮೇಲೆ ಪುಟ್ಟ ನವಿಲಗರಿಯ ರೂಪವು
ಪುಟ್ಟ ಪಾದದಂಚ ಕೆಳಗೆ ಅಚ್ಚ ಹೊಗೆಯ ಧೂಪವು

ನಿನ್ನ ರೂಪ ಮುಗಿಲ ತುಂಬ ಕೊಳಲ ನುಡಿಸುವಂತಿದೆ
ನೀಲಿ ಬಣ್ಣದೋಕುಳಿಯಲಿ ಜೀವ ತುಂಬಿದಂತಿದೆ

ಕುಸುಮಮಾಲೆ ನೇಯುತಿರುವೆ ಧರಿಸಲೊಮ್ಮೆ ಬಾರೆಯಾ?
ನಿನ್ನ ರಾಧೆ ಇಲ್ಲೆ ಇರುವೆ ಮೊಗವನೊಮ್ಮೆ ತೋರೆಯಾ?

ಬೆಳ್ಳಿ ಬಾನ ಬಯಲಿಗೇಕೆ ನೀಲಿ ಬಣ್ಣ ಲೇಪವು?
ನೀಲವರ್ಣ ನನ್ನ ತೊರೆದೆ ಏಕೆ ಇಂಥ ಶಾಪವು?

ಮೇಘ ಜೀವ ಪಡೆದು ಧರೆಗೆ ಇಳಿಯಬಾರದೇತಕೆ?
ರಾಧೆ ತೊರೆದ ಮೇಘವರ್ಣ ಮರಳಬಾರದೇತಕೆ?

ಯೋಗೀಶ್ ಮಲ್ಲಿಗೆಮಾಡು

Wednesday, 4 December 2019

ಕಪ್ಪು ಬಿಳುಪು

ಹಟ್ಟಿ ಮನೆಯ ಪುಟ್ಟ ಗುಡಿಸಿಲಿನ ಒಳಗೆ ಮಬ್ಬು ದೀಪದ ಬೆಳಕಲ್ಲಿ ಆತ ಒಲೆಯ ಮೇಲೆ ಬೇಯುತ್ತಿದ್ದ ಮಡಕೆಯನ್ನೇ ನೋಡುತ್ತಾ ಕೂತಿದ್ದ.

ಆತ ಒಲೆಯ ಮೇಲಿದ್ದ ಕಪ್ಪು ಮಡಕೆಯನ್ನೇ ನೋಡುತ್ತಿದ್ದ. ಇವತ್ತು ಶಾಲೆಯಲ್ಲಿ ಆತ ಕಪ್ಪು ಎಂದು ತಮಾಷೆ ಮಾಡಿದ್ದರು. ಅದನ್ನೇ ಯೋಚಿಸುತ್ತಾ ಆ ಮಡಕೆಯ ಕಪ್ಪಿನೊಂದಿಗೆ ತನ್ನ ಹೋಲಿಸುತ್ತಾ ಕೂತಿದ್ದ.

ಇದ್ದಕ್ಕಿದ್ದ ಹಾಗೆ ಬಾಗಿಲ ಕಡೆ ನೋಡಿದ ಆತನ ಕಣ್ಣಲ್ಲಿ ಸಾವಿರ ದೀಪದ ಪ್ರತಿಫಲನ. ಅಂಗಳದಲ್ಲಿ ಹಾಲಿನಂತಹ ಬೆಳಕು. ಹೊರಗೋಡಿ ಬಂದವನಿಗೆ ಎಲ್ಲಿಲ್ಲದ ಖುಷಿ. "ಅಮ್ಮ....ಈ ಕತ್ತಲ್ನಲ್ಲಿ ಇದ್ಯಾಕಿಷ್ಟು ಬೆಳ್ಕು?"
ಆತ ಮುಗ್ಧವಾಗಿ ಕೇಳಿದ್ದ.

"ಮುತ್ತೇ... ಅದು ತಿಂಗ್ಳು ಬೆಳ್ಕು ಮಗಾ... ಆಕಾಶ ನೋಡು ಚಂದ್ರನ್ ಹುಣುಮೆ" ಅಮ್ಮ ಹೇಳುತ್ತಾ ಮಗನ ತಲೆನೇವರಿಸಿದಳು.

ಆತನ ಗುಡಿಸಲು, ಅಂಗಳ, ಊರ ದಾರಿ, ಕಾಡು ಮಲೆ ಎಲ್ಲವೂ ಹಾಲ ಬಿಳುಪಿನ ಬೆಳಕಲ್ಲಿ ಹೊಳೆಯುತ್ತಿತ್ತು.
ಅದನ್ನೆಲ್ಲಾ ದಿಟ್ಟಿಸುತ್ತಲೇ ಆತ ಹೀಗೆ ಹೇಳಿದ್ದ "ಅಮ್ಮ, ಕಪ್ಪಾದ ಕತ್ತಲೆ ಇಲ್ದಿದ್ರೆ, ಬಿಳುಪಾದ ಹುಣುಮೆಗೆ ಮಹತ್ವ ಇದೆಯಾ?"

ಅರ್ಥ ಮಾಡಿದ ಅಮ್ಮ ಆತನ ಅಪ್ಪಿ ಹಿಡಿದು  "ಇಲ್ಲ ಮಗಾ, ಬಿಳಿ ಅಕ್ಕಿ ಬೆಂದು ಅನ್ನ ಆಗೂದಕ್ಕೆ ಕಪ್ಪು ಮಡಕೆಯೇ ಬೇಕು. ಬಿಳಿ ಕಪ್ಪು ಬಣ್ಣವಷ್ಟೆ, ಮೇಲು ಕೀಳಲ್ಲ" ಎಂದು ಮುತ್ತಿಟ್ಟಳು.

ಕಪ್ಪಲ್ಲಿ ಹೊಳೆದ ಬಿಳಿ ಹುಣ್ಣಿಮೆ ಆತನಿಗೆ ಹೊಸತಾಗಿ ಕಂಡಿತು. ಒಳಗೆ ಹಟ್ಟಿಯಲ್ಲಿ ಕಪ್ಪು ಮಡಿಕೆಯಲ್ಲಿ ಬಿಳಿ ಅನ್ನ ಬೇಯುತ್ತಿತ್ತು!

ರಚನೆ: ಯೋಗೀಶ್ ಮಲ್ಲಿಗೆಮಾಡು


Wednesday, 27 November 2019

ವೀಣೆ

ಅವಳು ಮೀಟಿದ ವೀಣೆಯ ತಂತಿ ಬೆಳ್ಳಿಯ ನಾದ ಹೊಮ್ಮಿಸಿ ಒಳಕೋಣೆಯಿಂದ ಚಾವಡಿಗೆ ಹರಿಯುತ್ತಿತ್ತು.

ನಡುಮನೆಯ ದೀಪ ವೀಣಾನಾದಕ್ಕೆ ತಕ್ಕ ಹಾಗೆ ಬಳುಕುತ್ತಿತ್ತು. ಬಂಗಾರದ ಬೆಳಕಲ್ಲಿ ವೀಣೆ ಮೀಟುವ ಹುಡುಗಿ ಚಿನ್ನದ ಬೊಂಬೆಯತಿದ್ದಳು.

ವೀಣೆ ಮೀಟುವ ಕೈಬೆರಳ ಓಘ, ಕುಳಿತ ಭಂಗಿ, ನುಡಿಸುತ್ತಿದ್ದ ಶೃತಿ ಅವಳ ವಿದ್ವತ್ತಿಗೆ ಸಾಕ್ಷಿಯಾಗಿತ್ತು.

ಹೊರಮನೆಯ ಕಂಬಕ್ಕೊರಗಿ ನೋಡುತ್ತಾ ಕುಳಿತ ಅವನ ಕಣ್ಣಲ್ಲಿ ಚಿನ್ನದ ಪುತ್ಥಳಿಯಂತಹ ವೈಣಿಕಳ ರೂಪ ಅಚ್ಚೊತ್ತಿತ್ತು.

ಪ್ರಿಯಕರ ಆತ, ಅವಳು ಅವನ ಪ್ರಿಯತಮೆ. ವೀಣೆ ನುಡಿಸಿ ಹೊರಬಂದವಳ ಅವನು ಕೇಳಿದ್ದು ಒಂದೆ. "ವೀಣೆ ನುಡಿಸುವ ಭರದಲಿ ನೀನು ನನ್ನೆಡೆಗೆ ನೋಡಲೇ ಇಲ್ಲ, ನನ್ನ ಕನವರಿಕೆಗಳು ನಿನ್ನ ತಟ್ಟಲಿಲ್ಲವೆ?"

ಅವಳು ನಕ್ಕು ನುಡಿದಳು "ನನ್ನ ವೀಣಾ ಝೇಂಕಾರ ನಿನ್ನ ತನಕ ಬಂದು ತಲುಪುವಾಗ ನನ್ನ ಪ್ರೀತಿಯ ಸಂದೇಶಗಳು ಅದರಲ್ಲಿತ್ತು, ಆಲಿಸಲಿಲ್ಲವೆ?"

ವೀಣೆಯ ಮಂದ ಝೇಂಕಾರ ಇನ್ನೂ ಅಲ್ಲೇ ಹೊರಳಿದಂತಿತ್ತು

ಯೋಗೀಶ್ ಮಲ್ಲಿಗೆಮಾಡು

Sunday, 24 November 2019

ಕನಸಲ್ಲದ ಕನಸು

ನವೆಂಬರ್ ತಿಂಗಳ ರಾತ್ರಿ. ನಿರ್ಜನ ರಸ್ತೆಯ ಕತ್ತಲಿನಲ್ಲಿ ಬೀದಿ ದೀಪದ ಬೆಳಕಿಗೆ ಮಬ್ಬು ಕವಿದ ಮಂಜು ಬೆರೆತಿತ್ತು. ಬೀದಿಯ ಉದ್ದಕ್ಕೂ ಒಂದು ಅಸ್ಪಷ್ಟ ನಿಶ್ಯಬ್ಧತೆ.

ಕನಸು ಹೊದ್ದು ಮಲಗಿದ್ದ ನೀಲಾ ರಾತ್ರಿಯ ಯಾವುದೊ ಜಾವದಲ್ಲಿ ಎಚ್ಚೆತ್ತುಕೊಂಡಳು. ಯಾರೊ ಹೊರಗೆ ಬೀದಿಯಲ್ಲಿ ಓಡಾಡಿದ ಹಾಗೆ.

ಕಿಟಕಿಯಿಂದ ಮೆಲ್ಲಗೆ ಹೊರಗಿಣುಕ್ಕಿದ್ದಳು. ಮನೆ ಎದುರಿನ ದಾಸವಾಳದ ಗಿಡದ ಮೇಲೆಲ್ಲಾ ನಕ್ಷತ್ರಗಳು ಮಿನುಗುತ್ತಿತ್ತು. ಮಿನುಕು ಹುಳ, ಹೊಳೆವ ಚಿಟ್ಟೆಗಳ ಫಳಫಳದ ನಡುವೆ ನಕ್ಷತ್ರದ ಕಿರೀಟ ತೊಟ್ಟ ಮಾಯಾ ರಾಜಕುಮಾರಿ ಕುಳಿತಿದ್ದಳು.

ಆಶ್ಚರ್ಯ ಬೆರೆತ ಕಣ್ಣಲ್ಲಿ ದಿಟ್ಟಿಸುತ್ತಿದ್ದಳು ನೀಲಾ. ಎಂಥಾ ಸೌಂದರ್ಯ, ಯಾವ ಲೋಕದ ಅಪ್ರತಿಮ ಸುಂದರಿ ಇವಳು. ನಕ್ಷತ್ರ ಲೋಕದ ರಾಜಕುವರಿ!

ನೋಡುತ್ತಿದ್ದಂತೆ ಬಿಳಿ ಕುದುರೆಯ ಮೇಲೇರಿ ರಾಜಕುಮಾರನೊಬ್ಬ ಆಕಾಶ ಮಾರ್ಗದಿಂದ ಬಂದದ್ದು ಕಾಣಿಸಿತು. ಶ್ವೇತಾಶ್ವವನ್ನೇರಿದ ಯಕ್ಷನಂತವನು.

ರಾಜಕುವರಿಯ ಮುಂದೆ ಮಂಡಿಯೂರಿ ಆಕೆಯ ಮುಂಗೈ ಹಿಡಿದು ಶ್ವೇತ ತುರಗವನ್ನೇರಿ ಚಂದ್ರನ ಕಡೆಗೆ ಧಾವಿಸಿ ಮರೆಯಾದರು.

ನೀಲಾಳ ಕಣ್ಣಲ್ಲಿ ನಕ್ಷತ್ರಮಿಂಚು!! ಕನಸಲ್ಲದ ಕನಸೊಂದು ಹೀಗೆ ತೆರೆಕಂಡು ಮರೆಯಾದಂತೆ. ಮತ್ತೆ ನಿದಿರೆಗೆ ಜಾರಿದಳು ನೀಲಾ. ಇಂತಹ ಅದೆಷ್ಟು ಕನಸುಗಳು ಕಂಡಿವೆಯೊ ನೀಲಾಳ ಕಣ್ಣುಗಳು.

ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Sunday, 6 October 2019

ದುರ್ಗಾ ದುರ್ಗತಿ ನಾಶಿನಿ

ಸನಾತನ ಧರ್ಮದಲ್ಲಿ ನಾಲ್ಕು ನವರಾತ್ರಿಗಳನ್ನು ಆಚರಿಸಲಾಗುತ್ತದೆ. ಚೈತ್ರ/ವಸಂತ ನವರಾತ್ರಿ, ಶರನ್ನವರಾತ್ರಿ, ಆಷಾಢ ನವರಾತ್ರಿ ಮತ್ತು ಮಾಘ ನವರಾತ್ರಿ.

ಚೈತ್ರ ಅಥವಾ ವಸಂತ ನವರಾತ್ರಿಯು ಯುಗಾದಿಯಿಂದ ಆರಂಭಗೊಂಡು ನವಮಿಯಂದು ಸಮಾಪನಗೊಳ್ಳುತ್ತದೆ. ಆ ನವಮಿಯ ದಿನವನ್ನು ರಾಮನವಮಿಯಾಗಿ ಆಚರಿಸಲಾಗುತ್ತದೆ.

ಆಷಾಢ ನವರಾತ್ರಿಯು ಆಷಾಢಮಾಸದ ಶುಕ್ಲಪಕ್ಷದ ಪಾಡ್ಯದಿಂದ ಮೊದಲುಗೊಂಡು ನವಮಿಯ ತನಕ ನಡೆಯುತ್ತದೆ.

ಮಾಘ ನವರಾತ್ರಿ. ಇದು ಮಾಘಮಾಸದ ಸಮಯದಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ನಡೆಯುವ ವಸಂತ ಪಂಚಮಿಯು ವಿಶೇಷವಾದುದು.

ಶರನ್ನವರಾತ್ರಿಯು ಶರತ್ ಋತುವಿನ ಆಶ್ವಯುಜಮಾಸದ ಪಾಡ್ಯದಿಂದ ಮೊದಲುಗೊಂಡು ಆಚರಿಸಲಾಗುತ್ತದೆ. ವರ್ಷದಲ್ಲಿ ನಾಲ್ಕು ನವರಾತ್ರಿಗಳಿದ್ದಾಗಿಯೂ ಶರನ್ನವರಾತ್ರಿಯು ಹೆಚ್ಚು ವ್ಯಾಪಕವಾಗಿ ಆಚರಿಸಲ್ಪಡುತ್ತದೆ.

ಹೀಗೆ ನವರಾತ್ರಿಯನ್ನು ನವದುರ್ಗೆಯ ಆರಾಧನೆಯೊಂದಿಗೆ ಆಚರಿಸಲ್ಪಟ್ಟು ತನ್ಮೂಲಕ ಸ್ತ್ರೀ ಶಕ್ತಿಯನ್ನು ಆರಾಧಿಸುವ ಕೆಲವೇ ಧರ್ಮಗಳಲ್ಲಿ ಸನಾತನ ಧರ್ಮವು ಪ್ರಮುಖವಾಗಿದೆ.

*ಶೈಲಪುತ್ರಿ*

ಭಾರತೀಯ ಪರಿಕಲ್ಪನೆಯಲ್ಲಿ ಪರ್ವತಗಳು ಎಂದಿಗೂ ಅಚ್ಚರಿಯ ಸಂಗತಿಗಳಾಗಿವೆ. ಇದೇ ಪರ್ವತದ ತಪ್ಪಲಿನಲ್ಲೇ ಹರಿವ ನದಿಯ ತಟದಲ್ಲಿ ಜನಜೀವನ ಬದುಕು ಕಟ್ಟಿಕೊಂಡಿತು. ತಪ್ಪಲಿನಿಂದ ಮೇಲೆದ್ದು ನಿಂತ ಪರ್ವತ, ಆ ಪರ್ವತದ ಮೇಲಿನಿಂದ ಸುರಿದು ಬರುವ ನದಿ ಎಲ್ಲವೂ ಪಿಸ್ಮಯದ ಮೂರ್ತ ರೂಪ ಧಾರಣೆ ಮಾಡಿತು. ಸನಾತನ ವಿಜ್ಞಾನಿಗಳಾದ ಋಷಿಗಳು ಜನರಿಗೆ ಸಕಲವನ್ನು ಅನುಗ್ರಹಿಸುವ ಪರ್ವತವನ್ನೇ "ಪರ್ವತರಾಜ" ಎಂದು ಗೌರವಿಸಿದರು.

ಆ ಪರ್ವತದ ತಪ್ಪಲಿನಲ್ಲಿ ಕೃಷಿಯೇ ಮೊದಲಾದ ಕಾಯಕದಿಂದ ಸಮೃದ್ಧಿಯನ್ನು ಜನರು ಕಂಡುಕೊಂಡರು. ಯಥೇಚ್ಛ ಹುಲ್ಲುಗಾವಲು ಪಶುಗಳಿಗೆ ಆಹಾರವನ್ನಿತ್ತವು. ಇದೇ ಪರ್ವತದ ತಪ್ಪಲಿನಲ್ಲಿ ಗದ್ದೆ ಬಯಲನು ಮಾಡಿಕೊಂಡ ಜನರಿಗೆ ಸಮೃದ್ಧಿ ದೊರೆಯಿತು. ಪರ್ವತದಿಂದ ದೊರಕಿದ ಆ ಸಮೃದ್ಧಿಯನ್ನೇ ಪರ್ವತರಾಜನ ಮಗಳು ಪಾರ್ವತಿ ಎಂದು ಕರೆದರು. ಹಾಗಾಗಿಯೇ ಆಕೆಯನ್ನು ಅದೇ ಪರ್ವತ ತಪ್ಪಲಿನಲ್ಲಿ ಹರಿವ ನದಿಯ ಮಣ್ಣಿನಿಂದ ಮೂರ್ತಿ ಮಾಡಿ ಜನಪದರು ಪೂಜಿಸಿದರು.

ಆಕೆಯೇ ಶೈಲಪುತ್ರಿ. ನವರಾತ್ರಿ ಆರಂಭದ ಮೊದಲ ದಿನ ಪೂಜಿಸಲ್ಪಡುವ  ಶೈಲಪುತ್ರಿ. ಹೆಸರೇ ಸೂಚಿಸುವಂತೆ ಶೈಲ ಅಂದರೆ ಪರ್ವತ  ಪುತ್ರಿ ಎಂದರೆ ಮಗಳು ಅರ್ಥಾತ್ ಶೈಲಪುತ್ರಿ ಎಂದರೆ ಪರ್ವತರಾಜನ ಮಗಳು ಪಾರ್ವತಿ.

ಪರ್ವತ, ಅದರಿಂದ ಬಂದ ಸಮೃದ್ಧಿ, ಆಕಾಶ, ಮಳೆ ಎಲ್ಲವನ್ನೂ ಧಾರಣೆ ಮಾಡಿದವನನ್ನು ಶಿವ ಎಂದು ಕರೆದರು. ಪರ್ವತದ ತಪ್ಪಲಿನಲ್ಲಿ ನಿಂತು ಮುಗಿಲೆತ್ತರ ನಿಂತ ಪರ್ವತದ ತುತ್ತತುದಿಯಿಂದ ಹರಿದು ಬರುವ ಜಲಪಾತವೇ ಶಿವ ಜಟೆಯಿಂದ ಇಳಿದ ಗಂಗೆಯಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ.

ಇಂತಹ ಶೈಲಪುತ್ರಿಯು ಜನಪದರ ದಿನನಿತ್ಯದ ಜನಜೀವನದ ದೇವಿಯಾಗಿದ್ದಾಳೆ. ಹಾಗಾಗಿಯೇ ಇಂದಿಗೂ ಶಕ್ತಿ ರೂಪದಲ್ಲಿ ಉಳಿದೆಲ್ಲಾ ದೇವಿ ರೂಪಕ್ಕಿಂತ ಪಾರ್ವತಿ ಜನಮಾನಸದಲ್ಲಿ ನೆಲೆಸಿದ್ದಾಳೆ.

ಈಕೆ ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಕಮಲವನ್ನು ಹಿಡಿದು ಹಣೆಯಲ್ಲಿ ಅರ್ಧ ಚಂದ್ರನನ್ನು ಧರಿಸಿರುತ್ತಾಳೆ, ವೃಷಭವಾಹನೆಯಾಗಿದ್ದಾಳೆ ಎಂಬುವುದಾಗಿ ಭಾಗವತಗಳು ಉಲ್ಲೇಖಿಸುತ್ತವೆ.

ಪರ್ವತನ ಮಗಳಾದ್ದರಿಂದ ಈಕೆ ಸಂಪೂರ್ಣವಾಗಿ ಪ್ರಕೃತಿ ತತ್ವದವಳು. ಈಕೆಯ ವಾಹನ ನಂದಿ ಆದುದರಿಂದ ಈಕೆಯನ್ನು ವೃಷಾರೂಢ ಎಂದೂ ಕರೆಯಲಾಗುತ್ತದೆ. ಈಕೆ ಚಂದ್ರನನ್ನು  ಪ್ರತಿನಿಧಿಸುತ್ತಾಳೆ. ಚಂದ್ರ  ಮನೋಕಾರಕ  ಆದುದರಿಂದ ಈಕೆಯ ಸ್ಮರಣೆ ಮನಃಕ್ಲೇಶವನ್ನು ನಿವಾರಿಸುತ್ತದೆ ಎಂದು ಅರ್ಥೈಸಲಾಗುತ್ತದೆ.

ಯೋಗದಲ್ಲಿ ಈಕೆ ಮೂಲಾಧಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ.ಮೂಲಾಧಾರ ಚಕ್ರವು ಬೆನ್ನು ಹುರಿಯ ಕೆಳಗಿದ್ದು ಸುಪ್ತ ಚೈತನ್ಯದ ಮೂಲ ಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ. ಹಾಗಾಗಿಯೇ ಸಾಧಕರು ನವರಾತ್ರಿಯ ಮೊದಲದಿನ ಮೂಲಾಧಾರ ಚಕ್ರವನ್ನು ಕೇಂದ್ರೀಕರಿಸಿ ಧ್ಯಾನಸ್ಥರಾಗುತ್ತಾರೆ.

ಈಕೆಯನ್ನು
"ವಂದೆ ವಾಂಚಿತ ಲಾಭಾಯ ಚಂದ್ರಾರ್ಧ ಕ್ರಿತ ಶೇಖರಂ
ವ್ರಿಶಾರೂಢಂ ಶೂಲಧರಾಂ ಶೈಲಪುತ್ರಿ ಯಶಸ್ವಿನೀಂ" ಎಂದು ಸ್ತುತಿಸಿ ಫಲವನ್ನು ಪಡೆಯಬಹುದು.

*ಬ್ರಹ್ಮಚಾರಿಣಿ*

ನವರಾತ್ರಿ ಎನ್ನುವ ಹೆಸರು ಸೂಚಿಸುವಂತೆ ಇದು ರಾತ್ರಿಯ ಕುರಿತು ಉಲ್ಲೇಖಿಸುತ್ತದೆ. ರಾತ್ರಿ ಎಂದರೆ ಕತ್ತಲು ಮತ್ತು ಕತ್ತಲು ಇಲ್ಲಿ ಅಜ್ಞಾನವನ್ನು ಸಂಕೇತಿಸುತ್ತದೆ. ಅಜ್ಞಾನದ ನಾಶ ತನ್ಮೂಲಕ ವಿಜಯದ ಸಂಕೇತವನ್ನು ನೀಡುತ್ತದೆ.

ಬ್ರಹ್ಮ ಎಂದರೆ ಜ್ಞಾನ ಎಂದು ಅರ್ಥ. ಹಾಗಾಗಿಯೇ ಯಾರು ಜ್ಞಾನವನ್ನು ಸಿದ್ಧಿಸುತ್ತಾನೊ ಆತನನ್ನು ಬ್ರಾಹ್ಮಣ ಎಂದು ಕರೆಯಲಾಗಿದೆ.

ವೇದಗಳ ಅರ್ಥವೂ ಜ್ಞಾನವೇ. ಆದುದರಿಂದ ಆ ವೇದಗಳು ಬ್ರಹ್ಮನ ಮುಖದಿಂದ ಹೊಮ್ಮಿದವೊ ಎಂದು ಪರಿಭಾವಿಸಲಾಗಿದೆ. ಹಾಗಾಗಿ ಬ್ರಹ್ಮ ಅಂದರೆ ಜ್ಞಾನದ ಕಡೆಗೆ ನಡೆಯುವವಳನ್ನು ಬ್ರಹ್ಮಚಾರಿಣಿ ಎಂದು ಕರೆದರು.

ಬ್ರಹ್ಮಚಾರಿಣಿ ನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುವವಳು. ಬ್ರಹ್ಮ ಎಂದರೆ ಜ್ಞಾನ, ಚಾರಿಣಿ ಎಂದರೆ ನಡೆಯುವುದು, ಆಚರಿಸುವುದು ಎಂದು ಅರ್ಥ. ತಥಾ ಬ್ರಹ್ಮಚಾರಿಣಿ ಎಂದರೆ ಜ್ಞಾನ ಮಾರ್ಗದೆಡೆಗೆ ನಡೆಯುವವಳು ಎಂದು.

ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಜ್ಞಾನದ ಕಡೆಗೆ ನಡೆಯುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

ನಾರದ ಮುನಿಗಳು ಪಾರ್ವತಿಗೆ ಅರ್ಥಾತ್ ಶೈಲಪುತ್ರಿಗೆ ತಾನು ಹಿಂದಿನ ಜನುಮದಲ್ಲಿ ದಕ್ಷನ ಮಗಳಾದ ದಾಕ್ಷಾಯಿನಿ (ಸತಿ) ಆಗಿದ್ದು ತನ್ನ ಪತಿ ಆಗಿದ್ದ ಶಿವನನ್ನು ತಂದೆ ಆಗಿದ್ದ ದಕ್ಷ ಅವಮಾನಿಸಿದ ಕಾರಣ ತಾನು ದಕ್ಷಯಜ್ಞದ ಅಗ್ನಿಕುಂಡದಲ್ಲಿ ದೇಹ ತ್ಯಾಗ ಮಾಡಿದುದನು ನೆನಪಿಸುತ್ತಾನೆ.

ತನ್ನ ಪೂರ್ವ  ವೃತ್ತಾಂತ ತಿಳಿದ ಪಾರ್ವತಿಯು (ಶೈಲಪುತ್ರಿ) ಹಿಂದಿನ ಜನುಮದ ಪತಿಯಾದ ಶಿವನನ್ನು  ಪಡೆಯಲು ತಪಸ್ಸನ್ನಾಚರಿಸುವ ಮುಂದಿನ ರೂಪವೇ ಬ್ರಹ್ಮಚಾರಿಣಿ.

ಬ್ರಹ್ಮ ಎಂದರೆ ಜ್ಞಾನ, ಶಿವ ಎಂದರೆ ಸಂತೋಷ. ಬ್ರಹ್ಮಜ್ಞಾನ ಲೌಕಿಕ ಭೋಗದ ಆಸೆಯನ್ನು ನಾಶಪಡಿಸುತ್ತದೆ ತನ್ಮೂಲಕ ಬ್ರಹ್ಮಜ್ಞಾನ ಸಂತೋಷವನ್ನ ಅರ್ಥಾತ್ ಶಿವನನ್ನು ಪಡೆಯಲು ಸಹಕಾರಿ. ಇದನ್ನು ಈ ರೂಪ ಸಂಕೇತಿಸುತ್ತದೆ.

ಒಣ ಬಿಲ್ವದ ಎಲೆಗಳನ್ನು ತಿಂದು ತಪಸ್ಸನ್ನಾಚರಿಸಿದ ಈಕೆ ಕೊನೆಗೆ ಆ ಎಲೆಗಳನ್ನೂ ತ್ಯಜಿಸಿದಳು ಹಾಗಾಗಿ ಈಕೆಗೆ ಅಪರ್ಣಾ ಎಂಬ ಹೆಸರಾಯಿತು.

ತಪಸ್ಸಿನಿಂದ ಕೃಶಳಾದ ಈಕೆಯನ್ನು ಕಂಡ ಈಕೆಯ ತಾಯಿ ( ಉ : ಹೇ ಮಗು, ಮಾ: ಈ ರೀತಿ ಮಾಡದಿರು)ಎಂದು ಉದ್ಘರಿಸಿದಳು. ಆದುದರಿಂದ ಆಕೆಗೆ ಉಮಾ ಎಂಬ ಹೆಸರಿದೆ.
ಅರ್ಥಾತ್ ಅಲೌಕಿಕ ಸಾಧನೆ ಎನ್ನುವುದು ಕಠೋರ ತಪಸ್ಸು, ಎಲ್ಲಾ ರೀತಿಯ ಸುಖಾಭಿಲಾಷೆಗಳನ್ನು ತ್ಯಜಿಸಿದಾಗ ಮಾತ್ರ ಒಲಿಯುತ್ತದೆಂದು ಇದು ಸೂಚಿಸುತ್ತದೆ.

ಪರ್ವತದ ತಪ್ಪಲಿನಲ್ಲಿ ನೆಲೆ ಕಂಡುಕೊಂಡ ಮಾನವನಿಗೆ ಪರ್ವತದ ತಪ್ಪಲಿನ ಸಮೃದ್ಧಿಯನ್ನೇ ಪರ್ವತ ರಾಜನ ಮಗಳಾದ ಪಾರ್ವತಿಯಾಗಿ ಕಂಡಿತು ಎನ್ನುವುದನ್ನು ನಿನ್ನೆಯ ಅಂಕಣದಲ್ಲಿ ಕಂಡೆವು.

ಜ್ಞಾನ ಮಾರ್ಗದ ಮೂಲಕ ಇನ್ನೂ ಹೆಚ್ಚಿನ ಸಮೃದ್ಧಿಗಳಿಸಿದ ಮಾನವನಿಗೆ ಆ ಜ್ಞಾನದ ರೂಪವೇ ಬ್ರಹ್ಮಚಾರಿಣಿಯಾಗಿ ಕಂಡದ್ದರಲ್ಲಿ ಯಾವ ಆಶ್ಚರ್ಯವಿಲ್ಲ.

ಜ್ಞಾನದ ಮೂಲಕ ಹೊಸ ಬಗೆಯ ಚಿಂತನೆಗಳು ಹುಟ್ಟಿಕೊಂಡವು. ವೇದಗಳೇ ಮೊದಲದ ಜ್ಞಾನದ ಗಣಿಗಳ ಉಗಮವೇ ಶಿವ ಎಂಬ ಸಂತೋಷವನ್ನು ಒಲಿಸಿಕೊಳ್ಳುವ ಸಾಧನವಾದುವು.

ಜಗತ್ತಿನ ಎಲ್ಲಾ ಶಕ್ತಿಯನ್ನು ಒಲಿಸಿಕೊಳ್ಳಲು ಜ್ಞಾನದ ಬಲದಿಂದ ಮಾತ್ರ ಸಾಧ್ಯ ಎಂದರಿತ ನಮ್ಮ ಸನಾತನ ವಿಜ್ಞಾನಿಗಳಾದ ಋಷಿಮುನಿಗಳು. ಎಲ್ಲವನ್ನೂ ಧಾರಣೆ ಮಾಡಿದ ಶಿವನನ್ನು ಒಲಿಸಿಕೊಳ್ಳಲು ಶೈಲಪುತ್ರಿಗೆ ಬ್ರಹ್ಮಚಾರಿಣಿಯ ರೂಪವನ್ನು ಆರೋಪಿಸಿರುವುದು ಸಮಂಜಸವೇ ಆಗಿದೆ.

ಈಕೆ ಒಂದು ಕೈಯಲ್ಲಿ ಜಪಮಣಿ  ಮತ್ತೊಂದರಲ್ಲಿ ಕಮಂಡಲ ಹಿಡಿದಿರುವಳು, ರುದ್ರಾಕ್ಷಿಯನ್ನು ಕೊರಳಲ್ಲಿ ಧರಿಸುತ್ತಾಳೆ.

ಜಪಮಣಿ, ಕಮಂಡಲ, ರುದ್ರಾಕ್ಷಿಗಳು ಜ್ಞಾನದ ಸಂಕೇತವಾಗಿದೆ.
ಈಕೆ ಸಾತ್ವಿಕ ರೂಪದವಳಾಗಿದ್ದು ಈಕೆ ಜ್ಞಾನ ತತ್ವದವಳು. ಯೋಗದಲ್ಲಿ ಇವಳು ಸ್ವಾಧಿಷ್ಟಾನ ಚಕ್ರವನ್ನು ಪ್ರತಿನಿಧಿಸುತ್ತಾಳೆ.

ಜೀವನದಲ್ಲಿ ಶಾಂತಿ, ನೆಮ್ಮದಿ, ಪರಮಾನಂದಕ್ಕೆ ಈಕೆಯ ಸ್ತುತಿ ಲಾಭದಾಯಕ.

ಧದಾನ ಕರಪದ್ಮಾಭ್ಯಾಯಾಂ| ಅಕ್ಷಮಾಲ ಕಮಂಡಲು|| ದೇವಿ ಪ್ರಸೀದತು ಮಾ| ಬ್ರಹ್ಮಚಾರಿಣ್ಯಾನುತ್ತಮಾ||

*ಚಂದ್ರಘಂಟಾ*

ಚಂದ್ರ ಮತ್ತು ಘಂಟೆಗೆ ವಿಶೇಷ ವಿಸ್ತಾರದ ಹೊಳಹು ಇದೆ. ಚಂದ್ರ ಮನೋಕಾರಕ ಅರ್ಥಾತ್ ಆತ ಮನಸ್ಸಿಗೆ ಸಂಬಂಧಪಟ್ಟವನು. ಹುಣ್ಣಿಮೆಗೆ ಕಡಲು ಉಕ್ಕೇರುವ ಚಂದ್ರನು ಮನಸ್ಸಿನ ಮೇಲೆ ಪ್ರಭಾವವಿರುವುದನ್ನು ಗಮನಿಸಬಹುದು.

ಘಂಟೆ  ದುಷ್ಟಶಕ್ತಿಗಳು, ನಕಾರಾತ್ಮಕ ಶಕ್ತಿ (negative energy)ಯನ್ನು ದೂರ ಮಾಡುವಂತದ್ದು. ಹಾಗಾಗಿ ಮನಸ್ಸಿನ ವಿಕಾರಗಳನ್ನು ನಕಾರಾತ್ಮಕತೆಯನ್ನು ಸಕಾರಾತ್ಮಕ ವಿಚಾರಗಳಿಂದ ಸರಿಪಡಿಸುವ ದ್ಯೋತಕವಾಗಿ ಚಂದ್ರಘಂಟಾ ರೂಪವು ಕಂಡು ಬರುತ್ತದೆ.

ನವರಾತ್ರಿ  ಒಂಭತ್ತು ರಾತ್ರಿಗಳು ನಡೆದ ದುಷ್ಟಸಂಹಾರವನ್ನು ಸಂಕೇತಿಸುತ್ತವೆ. ಈ ದುಷ್ಟತೆಗಳು ಮನಸ್ಸಿನ ಕ್ಲೇಶಗಳನ್ನೂ ಸಂಕೇತಿಸುತ್ತವೆ. ಹಲವು ದೇವಿ ರೂಪಗಳು ಚಂದ್ರನನ್ನು ಧರಿಸಿರುವುದು ಕಾಣಬಹುದು.

ತಸ್ಮಾತ್ ಚಂದ್ರಘಂಟಾಳನ್ನು ಸ್ತುತಿಸಿದರೆ ಮನಸ್ಸಿಗೆ ಸಂಬಂಧಿಸಿದ ಕ್ಲೇಶ, ದುಃಖ, ವಿಕಾರ ನಾಶವಾಗುತ್ತದೆ.

ನವರಾತ್ರಿಯ ಮೂರನೇ 3 ದಿನ ಪೂಜಿಸುವ ದೇವಿ *"ಚಂದ್ರಘಂಟಾ"*: ಪಾರ್ವತಿಯು (ಶೈಲಪುತ್ರಿ) ಬ್ರಹ್ಮಚಾರಿಣಿಯಾಗಿ ಶಿವನ ಕುರಿತು ತಪಸ್ಸಾಚರಿಸಿ ಶಿವನನ್ನು ಒಲಿಸಿಕೊಳ್ಳುತ್ತಾಳೆ ಅನ್ನುವುದನ್ನು ನಿನ್ನೆಯ ಅಂಕಣಲ್ಲಿ ನೋಡಿದೆವು.

ಪಾರ್ವತಿಯನ್ನು ವರಿಸುವ ಸಲುವಾಗಿ ತನ್ನ ಗಣಗಳ  ಜೊತೆಗೆ ಶಿವನು  ಭೈರಾಗಿಯಂತೆ, ಸ್ಮಶಾನವಾಸಿಯಂತೆ ಪಾರ್ವತಿಯ ಮನೆಗೆ ಆಗಮಿಸುತ್ತಾನೆ.

ಸ್ಮಶಾನವಾಸಿ ರೂಪಿನಲ್ಲಿರುವ ಶಿವನನ್ನು ಕಂಡು ಪಾರ್ವತಿಯ ತಾಯಿ ರೂಪ ಲಾವಣ್ಯದಿಂದ ಕೂಡಿದ ಮಗಳನ್ನು ಇಂತಹ ಶಿವನು ಮದುವೆಯಾಗುವುದೇ ಎಂದುಕೊಂಡು ಭೀತಗೊಂಡು  ಮೂರ್ಛಿತಳಾಗುತ್ತಾಳೆ.

ಈ ಸಂದರ್ಭದಲ್ಲಿ ಪಾರ್ವತಿಯು ಅಲಂಕಾರಭರಿತಳಾಗಿ ಬಹುಸುಂದರವಾದ ರೂಪವನ್ನು ಧಾರಣೆಮಾಡುತ್ತ, ತನ್ನ ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿದಳು ಎಂಬ ಉಲ್ಲೇಖವಿದೆ.

ಆ ಅರ್ಧಚಂದ್ರವು ಹಣೆಯಲ್ಲಿ ಘಂಟೆಯಂತೆ ಓಲಾಡುತಿತ್ತು ಆದುದರಿಂದ ಆಕೆಯನ್ನು *"ಚಂದ್ರಘಂಟಾ"* ಎಂದು ಸ್ತುತಿಸಿದರು.

*ಚಂದ್ರಘಂಟಾ: ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ' ಅಂದರೆ  ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ.*

ಹಣೆಯಲ್ಲಿ ಧರಿಸಿದ ಚಂದ್ರಘಂಟೆಯ ಸದ್ದಿಗೆ ಹಲವು ದುಷ್ಟ ಶಕ್ತಿಗಳು ನಕಾರಾತ್ಮಕ ಶಕ್ತಿ  (negative energy) ನಾಶವಾದವು ಎಂಬ ಉಲ್ಲೇಖವಿದೆ.

ಚಂದ್ರಘಂಟಾ ರೂಪವನ್ನು
ನೋಡಿದ ಶಿವ ತನ್ನ ಭೈರಾಗಿ ರೂಪವನ್ನು ತ್ಯಜಿಸಿ ಅಲಂಕೃತನಾದ ಸುಂದರಾಂಗನ ರೂಪ ಧಾರಣೆ ಮಾಡಿದನು.

ಹೆಣ್ಣು ಗಂಡನ್ನು ಪರಿವರ್ತಿಸಬಲ್ಲಳು ಎಂದೂ ಇದನ್ನು ಅರ್ಥೈಸಬಹುದು.  ಮನಸ್ಸು ವಿಕಾರರಹಿತವಾದಾಗ ಬೈರಾಗಿಯಂತ ಬದುಕು ಸುಂದರವಾಗುತ್ತದೆ ಎಂದೂ ಅರ್ಥೈಸಬಹುದು.

ಶಿವನನ್ನು (ಸಂತೋಷವನ್ನು) ಒಲಿಸಿಕೊಳ್ಳಲು ಸಕಾರಾತ್ಮಕ ಚಿಂತನೆ ಅಗತ್ಯ. ಚಂದ್ರ ಎಂಬ ನಕಾರಾತ್ಮಕತೆಯನ್ನು ಘಂಟೆ ಎಂಬ ಸಕಾರಾತ್ಮಕತೆಯಿಂದ ಬದಲಾಯಿಸುವ ತತ್ವವಿದು.
ಆಗ ಶಿವ ಎಂಬ ಸಂತೋಷ ಒಲಿಯುತ್ತದೆ.

ಪರ್ವತದ ತಪ್ಪಲಿನ ಸಮೃದ್ಧಿಯನ್ನು ಪಾರ್ವತೀ ಎಂದು ಕೊಂಡಾಡಿದ ಮಾನವ, ಜ್ಞಾನ ಎಂಬ ಬ್ರಹ್ಮಚಾರಿಣಿಯ ತಪಸ್ಸಿನಂತೆ ಕೃಷಿಯನ್ನು ಒಲಿಸಿ ಬದುಕು ಕಂಡುಕೊಂಡ. ಆತನ ಶ್ರಮಕ್ಕೆ ಶಿವ ಎಂಬ ಸಂತೋಷ ಒಲಿದರೂ ಆಗೊಮ್ಮೆ ಈಗೊಮ್ಮೆ ಪ್ರಕೃತಿಯ ಎದುರು ಸೋತು ಕೃಷಿ ಕೈಕೊಟ್ಟು ಮಾನಸಿಕ ಕ್ಲೇಶವನುಭವಿಸುತ್ತಿದ್ದ.

ಆಗ ಚಂದ್ರಘಂಟಾ ಎಂಬ ತತ್ವದಂತೆ ಪ್ರಕೃತಿಯ ಸವಾಲುಗಳನ್ನು ಸಕಾರಾತ್ಮಕವಾಗಿ ಎದುರಿಸಿ ಮತ್ತೆ ಬದುಕು ಕಟ್ಟಿ ಭೀಕರ ಶಿವನಿಂದ ಸುಂದರ ಶಿವನನ್ನು ಪಡೆದುಕೊಂಡ.

ಪ್ರಕೃತಿ ಮತ್ತು ಪುರುಷ  ತತ್ವವನ್ನು ಇದು ತಿಳಿಯಪಡಿಸುತ್ತದೆ.

ಯೋಗದಲ್ಲಿ ಈಕೆ ಮಣಿಪುರ ಚಕ್ರವನ್ನು ಪ್ರತಿನಿಧಿಸುತ್ತಾಳೆ.

ಹತ್ತು ಕೈಗಳಲ್ಲಿ ಖಡ್ಗ, ತ್ರಿಶೂಲ, ಕಮಲ, ಕಮಂಡಲ ಮುಂತಾದವನ್ನು ಧರಿಸಿದ್ದು, ಈಕೆಯನ್ನು ಚಾಮುಂಡ, ಚಂಡಿಕಾ ಎಂಬೂದಾಗಿಯೂ ಕರೆಯುತ್ತಾರೆ.

ಈಕೆಯನ್ನು "ಪಿಂಡಜಪ್ರವರಾರೂಢಾಚಂದಕೋಪಾಸ್ತ್ರಕೈರ್ಯುತಾ |ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||" ಎಂದು ಸ್ತುತಿಸಿ ಮನಃ ಕ್ಲೇಶ ದೂರ ಮಾಡಿ ನೆಮ್ಮದಿ ಕಾಣಬಹುದು.

*ಕೂಷ್ಮಾಂಡ*

ನವರಾತ್ರಿಯು ಕತ್ತಲಿನಿಂದ ಬೆಳಕಿನೆಡೆಗಿನ ತತ್ವವನು ಸಾರುತ್ತದೆ. ಅಜ್ಞಾನದ ತಿಮಿರದಿಂದ ಸುಜ್ಞಾನದ ಪ್ರಕಾಶದೆಡೆಗೆ. ದುಃಖ, ಕ್ಲೇಶಗಳಿಂದ ನಗು ನಲಿವಿನ ಕಡೆಗೆ.

ನವರಾತ್ರಿಯ ನಾಲ್ಕನೇ 4ದಿನ ಪೂಜಿಸಲ್ಪಡುವವಳು *"ಕೂಷ್ಮಾಂಡ"* "ಕು" ಅಂದರೆ ಸಣ್ಣ "ಉಷ್ಮ"ಎಂದರೆ ಶಕ್ತಿ"ಅಂಡ"ಎಂದರೆ ಮೊಟ್ಟೆ ಅರ್ಥಾತ್ ಕೂಷ್ಮಾಂಡ ಎಂದರೆ ಸಣ್ಣ ನಗುವಿನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದವಳು.

ದೇವಿ ಸಪ್ತಶತಿಯು ಈ ಬ್ರಹ್ಮಾಂಡದ ಉಗಮದ ಬಗ್ಗೆ ಈ ಪ್ರಕಾರವಾಗಿ ಹೇಳುತ್ತದೆ. ಏನೂ ಇರದ ಬರೀ ಕತ್ತಲಷ್ಟೇ  ತುಂಬಿದ್ದ ಈ ಪ್ರಕೃತಿಯಲ್ಲಿ ದುರ್ಗ ಮಾತೆ ತನ್ನ ಮಂದಹಾಸದಿಂದ  ಬ್ರಹ್ಮಾಂಡದ ಉಗಮವನ್ನು ಮಾಡಿದಳು. ಅಲ್ಲದೆ ತನ್ನ ನಗುವಿನಿಂದಲೇ  ಬೆಳಕನ್ನು ಪಸರಿಸುವವಳು ಇವಳೇ ಎಂದು ಉಲ್ಲೇಖಿಸಲಾಗಿದೆ.

ಹೀಗೆ ಬೆಳಕನ್ನು ಸ್ತ್ರೀಯ ನಗುವಿನೊಂದಿಗೆ ಸಂಕೇತಿಸಲಾಗಿದೆ. ಅರ್ಥಾತ್ ಯಾವ ಮನೆಯಲ್ಲಿ, ಊರಿನಲ್ಲಿ, ದೇಶದಲ್ಲಿ  ಹೆಣ್ಣು ಮಕ್ಕಳು ನಗುವಿನಿಂದ ಕೂಡಿರುತ್ತಾರೋ ಅರ್ಥಾತ್ ಸಂತೋಷದಿಂದ ಇರುತ್ತಾರೋ ಅಲ್ಲಿ ಬೆಳಕು ಅಂದರೆ ಸಮೃದ್ಧಿ ನೆಲೆಸುತ್ತದೆ .

ಕೂಷ್ಮಾಂಡ ದೇವಿಯು ಸೌರಮಂಡಲಕ್ಕೆ ಅಧಿದೇವತೆಯಾಗಿದ್ದಾಳೆ ಎಂದೂ, ಸೂರ್ಯನಿಗೆ ಬೆಳಕು ಅದು ಈಕೆಯಿಂದಲೇ ಎಂದೂ ಈಕೆ ಸೂರ್ಯನ ಆಂತರ್ಯದಲ್ಲಿ ಸ್ಥಿತಳಾಗಿದ್ದಾಳೆ ಎಂದೂ ಹೇಳಲಾಗುತ್ತದೆ.

ಹೀಗಾಗಿ ಮತ್ತೆ ಮತ್ತೆ ಬೆಳಕನ್ನು ಸ್ತ್ರೀಯೊಂದಿಗೆ ಸಮೀಕರಿಸಲಾಗಿದೆ. ಅರ್ಥಾತ್ ಸ್ತ್ರೀ ಬೆಳಕನ್ನು , ಜ್ಞಾನವನ್ನು ಪಸರಿಸುವವಳು, ಸ್ತ್ರೀ ಜೀವ ಸಂಚಲನ, ಸೃಷ್ಟಿಯಲ್ಲಿ ಸ್ತ್ರೀ  ಪಾತ್ರ ಮಹತ್ತರವಾದುದು ಎಂದು ಸೂಚಿಸುತ್ತದೆ.

ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡ ಜನಪದರು ಆ ಪರ್ವತದ ಮಗಳೇ ಪಾರ್ವತಿ ಎಂದು ಪರಿಭಾವಿಸಿ, ಜ್ಞಾನ ಎಂಬ ಬ್ರಹ್ಮಚಾರಿಣಿಯ ಮೂಲಕ ಶಿವ ಎಂಬ ಶುಭವನ್ನು ದಕ್ಕಿಸಿಕೊಂಡರು.

ಆದರೂ ಪ್ರಕೃತಿಯ ಎದುರು ಸೋತು ಪ್ರಳಯ ಭೀಕರವಾದ ಪ್ರಕೃತಿಯನ್ನು ಧಾರಣೆ ಮಾಡಿದ ಶಿವನೆದುರು ಖಿನ್ನರಾಗದೆ ಚಂದ್ರಘಂಟ ಎಂಬ ಸಕಾರಾತ್ಮಕ ತತ್ವವನ್ನು ಅನುಸರಿಸಿ ಸವಾಲುಗಳನ್ನೆದುರಿಸಿ ಬದುಕು ಕಟ್ಟಿಕೊಂಡು ಸುಂದರ ಶುಭ ಎಂಬ ಶಿವನನ್ನು ಮರಳಿ ಪಡೆದರು.

ಆ ಮೂಲಕ ಸಣ್ಣದಾದ ನಗುವು ತೇಲಿ ಇಡೀ ಮನುಕುಲವು ಈ ನಗುವನ್ನು ಪಸರಿಸಿರುವ ಪ್ರಕೃತಿಯನ್ನು ತಾಯಿ ಕೂಷ್ಮಾಂಡ ಎಂದು ಸನಾತನ ವಿಜ್ಞಾನಿಗಳಾದ ಮುನಿಗಳು ಪರಿಭಾವಿಸಿ ಪೂಜಿಸಿದರು.

ಆಕೆಯನ್ನು ಅಷ್ಟಭುಜ ಎಂದು ಕರೆಯುತ್ತಾರೆ ತನ್ಮೂಲಕ ಗದೆ, ಚಕ್ರ, ಕಮಲ, ಕಮಂಡಲ, ಬಿಲ್ಲು, ಬಾಣ, ಅಮ್ರತ ಹಾಗೂ ಜಪಮಣಿ ಧಾರಣೆ ಮಾಡಿದ್ದಾಳೆ (ಗದೆ ಶಕ್ತಿಯನ್ನು, ಚಕ್ರ ಕಾಲವನ್ನು, ಕಮಲ ಆಧ್ಯಾತ್ಮವನ್ನು, ಕಮಂಡಲ ಪಾವಿತ್ರ್ಯವನ್ನು, ಬಿಲ್ಲು ಕರ್ಮವನ್ನು, ಬಾಣ ಗುರಿಯನ್ನು, ಅಮೃತ ಅಮರತ್ವವನ್ನು, ಜಪಮಣಿ ಜ್ಞಾನವನ್ನು ಪ್ರತಿನಿಧಿಸುತ್ತದೆ). ಆಮೂಲಕ ನವನಿಧಿ, ಅಷ್ಟಸಿದ್ಧಿ ಕರುಣಿಸುತ್ತಾಳೆ ಎಂಬ ಪ್ರತೀತಿ ಇದೆ.

ಕುಂಬಳಕಾಯಿ ಈಕೆಗೆ ಸಮರ್ಪಿಸುತ್ತಾರೆ ಆದುದರಿಂದ ಕುಂಬಳಕಾಯಿಗೆ ಕೂಷ್ಮಾಂಡ ಎಂದು ಕರೆಯುತ್ತಾರೆ. ಯೋಗದಲ್ಲಿ ಈಕೆ ಅನಾಹತ ಚಕ್ರವನ್ನು ಪ್ರತಿನಿಧಿಸುತ್ತಾಳೆ.

"ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ| ಧದಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ಮೇ||

*ಸ್ಕಂದ ಮಾತ*

ನವರಾತ್ರಿಯಲ್ಲಿ ಐದನೇ 5ದಿನ ಪೂಜಿಸಲ್ಪಡುವವಳು "ಸ್ಕಂದ ಮಾತ"
ನವರಾತ್ರಿಯು ತಾಯಿ ರೂಪದಲ್ಲಿರುವ ದುರ್ಗೆಯನ್ನು ಪೂಜಿಸುವ ವಿಶೇಷ ಪರ್ವ. ಸಕಲ ಜೀವಿಯನ್ನೂ ಮಕ್ಕಳ ರೂಪದಲ್ಲಿ ಪೊರೆಯುವ ತಾಯಿಯ ಕಲ್ಪನೆಯೇ ಅಮೋಘವಾದುದು. ತಸ್ಮಾತ್ ನವರಾತ್ರಿ ತಾಯಿ ಮಗುವಿನ ಬಾಂಧವ್ಯವನ್ನೂ ಪ್ರತಿನಿಧಿಸುತ್ತದೆ.

ದಕ್ಷ ಯಜ್ಞದಲ್ಲಿ ದಾಕ್ಷಾಯಿನಿಯು ದೇಹತ್ಯಾಗ ಮಾಡಿದ ನಂತರ ಶಿವನು ದಕ್ಷಪುತ್ರಿಯ ನೆನಪಲ್ಲಿ ಭೈರಾಗಿಯಂತೆ ಊರೂರೂ ಅಲೆಯ ತೊಡಗಿದ. ತಾರಕಾಸುರನೆಂಬ ರಾಕ್ಷಸ ಇನ್ನು ಶಿವನಿಗೆ  ಮದುವೆ ಆಗಲಾರದು ಎಂಬ ಕಲ್ಪನೆಯಲ್ಲಿ ಶಿವನ ಮಗನಿಂದ ತನಗೆ ಸಾವು ಬರಲಿ ಎಂದು ವರ ಪಡೆದನು.

ಪಾರ್ವತಿಯಾಗಿ (ಶೈಲಪುತ್ರಿ) ಮರುಜನ್ಮ ಪಡೆದ ದಾಕ್ಷಾಯಿನಿ  ಶಿವನಿಗಾಗಿ ಬ್ರಹ್ಮಚಾರಿಣಿಯಾಗಿ ತಪವನ್ನಾಚರಿಸಿ ಶಿವ ಆಕೆಯನ್ನು ಚಂದ್ರಘಂಟ ರೂಪದಲ್ಲಿ  ವರಿಸಿದನು.

ಇದನ್ನರಿತ ತಾರಕಾಸುರ ಶಿವನಿಗೆ ಮಗುವಾದರೆ ತನ್ನ ಮರಣ ನಿಶ್ಚಿತ ಎಂದರಿತು ಶಿವನ ಸಂತಾನದ ನಾಶದ ಕಡೆಗೆ ಯೋಚಿಸಿದನು. ಶಿವನ ವೀರ್ಯವನ್ನು ತಾರಕಾಸುರನಿಂದ ಕಾಪಾಡಲು ಅಗ್ನಿ ದೇವ ಕೊಂಡೊಯ್ಯುತಿರಲು ಅದು ಆಕಾಶಮಾರ್ಗದಲ್ಲಿ ಕೆಳಗುರುಳಿತು ಮತ್ತು ಅದನ್ನು ಪಕ್ಷಿಯೊಂದು ನುಂಗಿ ಅದರ ತೇಜಸ್ಸಿನ ಬಿಸಿ ತಡೆಯಲಾಗದೆ ಕೃತ್ತಿಕಾ ಲೋಕದ ನದಿಯಲ್ಲಿ ಮುಳುಗಿತು
ನದಿಯಲ್ಲಿ ಸ್ನಾನ  ಮಾಡುತ್ತಿದ್ದ ಆರು ಜನ ಕೃತ್ತಿಕೆಯರ ಗರ್ಭ ಆ ಸಂದರ್ಭ ಈ ವೀರ್ಯದಿಂದ ಫಲಿಸಿತು. ಆರು ತಾಯಂದಿರಿಗೆ ಒಬ್ಬನಾಗಿ ಹುಟ್ಟಿದವನೇ "ಸ್ಕಂದ". ಕೃತ್ತಿಕೆಯರು ಮಗುವನ್ನು ಹೆತ್ತು ಪಾರ್ವತಿಗೆ ವಾಪಾಸು ಮಾಡಿದರು ಎಂದು ಉಲ್ಲೇಖಿಸಿದೆ.ಮಗನನ್ನು ಮರಳಿ ಪಡೆದ ಪಾರ್ವತಿ ಸ್ಕಂದನನ್ನು ತನ್ನ ತೊಡೆಯಲ್ಲಿ ಕುಳ್ಳಿರಿಸಿದಳು ಈ ರೂಪವೇ "ಸ್ಕಂದ ಮಾತಾ".

ಆರು ಮುಖ ಹೊಂದಿ ಜನಿಸಿದ ಸ್ಕಂದ ನಮ್ಮೊಳಗಿನ ಅರಿಷಡ್ವರ್ಗಗಳನ್ನು ಪ್ರತಿನಿಧಿಸುತ್ತಾನೆ. ಆತನ ವಾಹನವಾದ ನವಿಲಿನ ಬಣ್ಣದ ಗರಿಗಳು ಐಹಿಕ ಕಾಮನೆಗಳನ್ನು ಪ್ರತಿನಿಧಿಸಿ ತನ್ಮೂಲಕ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅರಿಷಡ್ವರ್ಗ ಉಂಟುಮಾಡುವುದರೊಂದಿಗೆ ಸಮೀಕರಿಸಿದೆ.

ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡು ಆ ಶೈಲದ ಸಮೃದ್ಧಿಯನ್ನೇ ಶೈಲಪುತ್ರಿ ಎಂದು ಕರೆದು, ಜ್ಞಾನ ಎಂಬ ಬ್ರಹ್ಮದ ಮೂಲಕ ಕೃಷಿಸಿದ್ಧಿಗಳಿಸಿ ಅದನ್ನೇ ಬ್ರಹ್ಮಚಾರಿಣಿ ಎಂದು ಭಾವಿಸಿ, ಕಷ್ಟಗಳಿಗೆ ಕುಗ್ಗದೆ ಇಡೀ ವಿಶ್ವವನ್ನು ಧಾರಣೆ ಮಾಡಿದ ಶಿವನೆಂಬ ಸಂತಸವನ್ನು ಸಕಾರಾತ್ಮಕವಾಗಿ ಪಡೆದು ಅದನ್ನೇ ಮನಸ್ಸಿನ ತತ್ವವಾದ ಚಂದ್ರಘಂಟಾ ಎಂದು ಪರಿಭಾವಿಸಿ, ಯಶಸ್ಸು ದಕ್ಕಿದಾಗ ಎಲ್ಲೆಲ್ಲೂ ಹೊಮ್ಮಿದ ನಗುವನ್ನೇ ಕೂಷ್ಮಾಂಡ ಎಂದು ಕರೆದು, ಈ ಸೃಷ್ಟಿ ಕಾರ್ಯ ಮುಂದುವರೆಯಲು, ವಂಶ, ಕುಲ, ಪಂಗಡ ಬೆಳೆಯಲು, ಪರ್ವತದ ತಪ್ಪಲಿನಲ್ಲಿ ಬದುಕು ಕಟ್ಟಿ ಮುಂದರಿಯಲು ಮಕ್ಕಳೇ ಭವಿಷ್ಯ ಹಾಗೂ ತಾಯಿಯೇ ಪ್ರಧಾನ ಎಂದರಿತ ಮಾನವ ತಾಯಿ ಮಗುವನ್ನು ಸ್ಕಂದ ಮಾತಾ ರೂಪದಲ್ಲಿ ಕಂಡುಕೊಂಡ ಬಗೆ ಅನನ್ಯ.

ಸೃಷ್ಟಿ ತತ್ವವನ್ನು ಈ ರೂಪ ತಿಳಿಸುತ್ತದೆ. ಸೃಷ್ಟಿಯಲ್ಲಿ ತಾಯಿ ಮತ್ತು ಮಗುವಿನ ಪಾತ್ರವನ್ನು ವಿಶದಪಡಿಸುತ್ತದೆ.

ಸ್ಕಂದನನ್ನು ತೊಡೆಯಲ್ಲಿ ಕುಳ್ಳಿರಿಸಿ, ಎರಡು ಕೈಗಳಲ್ಲಿ ಕಮಲವನ್ನು ಧಾರಣೆ ಮಾಡಿ ಅಭಯಮುದ್ರಳಾದ ಸ್ಕಂದಮಾತ ಪದ್ಮಾಸನ ರೂಪದಲ್ಲಿ ಸ್ಥಿತಳಾಗಿದ್ದಾಳೆ. ಆಕೆಯನ್ನು ಪದ್ಮಾಸನ ದೇವಿ ಎಂತಲೂ ಕರೆಯುತ್ತಾರೆ.

ಈ ರೂಪವನ್ನು ಪೂಜಿಸುವುದರಿಂದ ದ್ವಿಗುಣ ಫಲ ಪಡೆಯಬಹುದು. ಕಾರಣ ಈಕೆಯನ್ನು ಪೂಜಿಸಿದರೆ ಸ್ಕಂದನನ್ನು ಪೂಜಿಸಿದಂತೆ ತನ್ಮೂಲಕ ಸ್ಕಂದ ಹಾಗೂ ಸ್ಕಂದ ಮಾತ ಇಬ್ಬರ ಆಶೀರ್ವಾದ  ಪಡೆಯಬಹುದು.

ಯೋಗದಲ್ಲಿ ವಿಶುದ್ಧ ಚಕ್ರವನ್ನು ಪ್ರತಿನಿಧಿಸುತ್ತಾಳೆ.

ಸಿಂಹಾಸನಾ ಗತಾನಿತ್ಯಂ ಪದ್ಮಾಶ್ರಿತ ಕರದ್ವಯಂ| ಶುಭದಸ್ತು ಸದಾ ದೇವಿ ಸ್ಕಂದ ಮಾತ ಯಶಸ್ವಿನಿ|| ಎಂದು ಸ್ತುತಿಸಿ ಸಕಲ ಸಂಮಂಗಲ ಪಡೆಯಬಹುದು.

ನವರಾತ್ರಿಯು ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತ ಎನ್ನುವುದನ್ನು ನಾವು ಈ ಹಿಂದೆಯೇ ತಿಳಿದುಕೊಂಡೆವು. ಬ್ರಹ್ಮಚಾರಿಣಿ ರೂಪವು ಲೌಕಿಕ ಕಾಮನೆಗಳ ಮೇಲೆ ಅಲೌಕಿಕ ಸತ್ಯದ ಅರಿವನ್ನು ನೀಡುತ್ತದೆ. ಅಂತೆಯೇ ಕಾತ್ಯಾಯಿನಿ ರೂಪವು  ಅರಿಷಡ್ವರ್ಗಗಳ ಮೇಲಿನ ವಿಜಯವನ್ನೂ ಸಂಕೇತಿಸುತ್ತದೆ.

 *"ಕಾತ್ಯಾಯಿನಿ"*

ನವರಾತ್ರಿಯ ಆರನೇ ದಿನ 6 ಪೂಜಿಸಲ್ಪಡುವವಳು.
ಅಮರಕೋಶದಲ್ಲಿ ಕಾತ್ಯಾಯಿನಿ ಪಾರ್ವತಿಯ ಎರಡನೇ ಹೆಸರಾಗಿದೆ.

ಮಹಾಕಾಲಿ ಪುರಾಣದಲ್ಲಿ ಕಾತ್ಯಾಯನ ಎಂಬ ಋಷಿಯು ಈಕೆಯನ್ನು ಮೊದಲಿಗೆ ಪೂಜಿಸಿದನಾದರಿಂದ ಈಕೆಗೆ ಕಾತ್ಯಾಯಿನಿ ಎಂದು ಹೆಸರು ಬಂತು ಎಂದು ಉಲ್ಲೇಖಿಸಿದೆ.
ಹಲವಾರು ಪುರಾಣಗಳು (ದೇವಿ ಭಾಗವತ, ಮಾರ್ಕಾಂಡೇಯ, ಮಹಾಕಾಲಿ ಪುರಾಣ) ಈಕೆಯ ಬಗೆಗೆ ಪ್ರಸ್ತಾಪಿಸಿದೆ.

ಮಹಿಷಾಸುರನ ಸಂಹಾರಕ್ಕೆ ಅವತರಿಸಿದವಳು ಇವಳು ಎಂದು ತಿಳಿದುಬರುತ್ತದೆ. ಗಂಡಸರಿಂದ ಸಾವು ಬರದಂತೆ ವರ ಪಡೆದಿದ್ದ ಮಹಿಷಾಸುರ  ಮಹಿಷಮಂಡಲವನ್ನು ಆಳುತ್ತಿದ್ದ. ಆತ ಕಾತ್ಯಾಯಿನಿಯ ರೂಪಕ್ಕೆ ಮರುಳಾಗಿ ತನ್ನನ್ನು ವರಿಸುವಂತೆ ಕೇಳಿದನು. ಯುದ್ಧದಲ್ಲಿ ತನ್ನನ್ನು ಗೆದ್ದಲ್ಲಿ ತಾನು ಮಹಿಷಾಸುರನನ್ನು  ವರಿಸುವುದಾಗಿ ಹೇಳಿದ ಕಾತ್ಯಾಯಿನಿ ಅವನೊಂದಿಗೆ ಯುದ್ಧಕ್ಕೆ ಅಣಿಯಾದಳು. ಯುದ್ಧದಲ್ಲಿ ಮಹಿಷಾಸುರನನ್ನು ವಧಿಸಿದಳು. ತನ್ಮೂಲಕ ಮಹಿಷಾಸುರಮರ್ಧಿನಿ ಎಂಬ ಹೆಸರನ್ನು ಹೊಂದಿದಳು.

ಮಹಿಷ ಎಂದರೆ ಕೋಣ. ಕೋಣ ಅಜ್ಞಾನವನ್ನು ಸಂಕೇತಿಸುತ್ತದೆ. ಲೌಕಿಕ ಜಗತ್ತಿನಲ್ಲಿ  ಕಾಮ , ಕ್ರೋಧ , ಮೋಹ , ಮಾಯೆ ಎಂಬ ಅಜ್ಞಾನಗಳು ನಮ್ಮನ್ನು ಆಗಾಗ ವರಿಸಲು ಬರುತ್ತವೆ. ಆ ಸಂದರ್ಭದಲ್ಲಿ ಜ್ಞಾನ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯ ಸ್ಮರಣೆ ಅಜ್ಞಾನ ನಾಶಕ್ಕೆ ಹಾಗೂ ಜ್ಞಾನ ಜ್ಯೋತಿ  ಬೆಳಗಲು ಕಾರಣಳಾಗುತ್ತಾಳೆ.

ಭಾಗವತ ಪುರಾಣದಲ್ಲಿ ಕನ್ಯೆಯರು  ಅರ್ಥಾತ್ ಮದುವೆಯಾಗದ ಗೋಪಿಕೆಯರು ಕೃಷ್ಣನೇ ಗಂಡನಾಗಿ ಸಿಗಲಿ ಎಂಬ ಉದ್ದೇಶದಿಂದ ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿಯ ತೀರದಲ್ಲಿ ಸ್ನಾನ ಮಾಡಿ ಒಂದು ತಿಂಗಳ ಕಾತ್ಯಾಯಿನಿ ವೃತ ಕೈಗೊಳ್ಳುತ್ತಿದ್ದರು ಎಂದು ಪ್ರಸ್ತಾಪಿಸುತ್ತದೆ.

ಕನ್ಯಾ ಕುಮಾರಿ ದೇವಾಲಯದಲ್ಲಿರುವ  ಕನ್ಯಾಕುಮಾರಿಯು ಕಾತ್ಯಾಯಿನಿಯ ಸ್ವರೂಪ.

ಪರ್ವತದ ತಪ್ಪಲಿನಲ್ಲಿಯ ಸಮೃದ್ಧಿಯನ್ನು ಶೈಲಪುತ್ರಿಗೆ ಆರೋಪಿಸಿ, ಕೃಷಿಯೇ ಮುಂತಾದ ಜ್ಞಾನದ ಬಲವನ್ನು ಬ್ರಹ್ಮಚಾರಿಣಿಯೆಂದು ಕರೆದು, ಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯವನ್ನೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳನ್ನು ಗೆದ್ದು ಜಗತ್ತನ್ನೇಧಾರಣೆ ಮಾಡಿದ ಶಿವ ಎಂಬ ಸಂತಸ ಪಡೆದು ಬೀರಿದ ಮಂದಹಾಸವೇ ಕೂಷ್ಮಾಂಡ ಎಂದು ಭಾವಿಸಿ, ತಮ್ಮ ಕುಲದ, ವಂಶದ, ಜಗತ್ತಿನ, ಸೃಷ್ಟಿಯ ಮುಂದೆ ಕೊಂಡೊಯ್ಯುವಲ್ಲಿ ತಾಯಿ ಮಗುವಿನ ಸೇತುವನ್ನೇ ಸ್ಕಂದ ಮಾತ ಎಂದ ಮಾನವ, ಎಲ್ಲಾ ಸಮೃದ್ಧಿಯ ಆಚೆಗೆ ಈ ಐಹಿಕ ಜಗದ ಮೋಹ ಪಾಶಕ್ಕೆ ಒಳಗಾಗದಂತೆ, ಈ ಪರ್ವತದ ತಪ್ಪಲಿನ ಬದುಕಿನಾಚೆಗಿನ ಪಾರಮಾರ್ಥಿಕವೇ ಸತ್ಯ ಎಂದು ಆ ಸತ್ಯವನ್ನು ಕಾತ್ಯಾಯಿನಿ ರೂಪದಲ್ಲಿ ಸನಾತನ ವಿಜ್ಞಾನಿಗಳಾದ ಮುನಿವರ್ಯರು ಪರಿಭಾವಿಸಿದರು.

ಯೋಗದಲ್ಲಿ ಈಕೆ ಅಜ್ಙಾ ಚಕ್ರವನ್ನು ಪ್ರತಿನಿಧಿಸುತ್ತಾಳೆ.

ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಧೀಶ್ವರೀ| ನಂದ ಗೋಪ ಸುತಂ ದೇವಿಪತಿಂ ಮೇ ಕುರು ತೆ ನಮಃ ||ಎಂದು ಸ್ತುತಿಸಿ ಫಲವನ್ನು ಪಡೆಯಬಹುದು.

*"ಕಾಲರಾತ್ರಿ"*

ನವರಾತ್ರಿಯ ಏಳನೇ 7ದಿನ ಪೂಜಿಸಲ್ಪಡುವವಳು.
"ಕಾಲಿ" ಅಥವಾ "ಕಾಳಿ" ಎಂಬ ಶಬ್ಧವು "ಕಾಲ" ಎಂಬ ಶಬ್ಧದಿಂದ ಉದಿಸಿದೆ. ಕಾಲ ಅಂದರೆ ಇಲ್ಲಿ ಸಮಯ ಅಥವಾ ಮೃತ್ಯು ಎಂದು ಪರಿಗಣಿಸಬಹುದು.
ಕಾಲರಾತ್ರಿ ಎಂದರೆ ಕಾಲ ಅರ್ಥಾತ್ ಸಮಯ ಅಥವಾ ಸಾವಿಗೆ ಅಂತ್ಯವನ್ನು ಕರುಣಿಸುವವಳು ಎಂದು ಸಂಕೇತಿಸುತ್ತದೆ.

ಕಾಲಿ ಎಂಬ ಶಬ್ಧಕ್ಕೆ ಕಪ್ಪು ಎಂಬ ಅರ್ಥವೂ ಇದೆ. ಕಪ್ಪು ಅತ್ಯಂತ ಗೂಢವೂ, ನಿಗೂಢವೂ ಆಗಿದೆ. ಕಾಲರಾತ್ರಿಯು ಅಂತ್ಯಕ್ಕೆ ಅಂತ್ಯ ಕರುಣಿಸುವವಳಾಗಿ ಆಕೆ ಯಾರಿಗೂ ಅರ್ಥವಾಗದ ಗೂಢತೆಯೊಂದಿಗೆ ಕಪ್ಪು ಬಣ್ಣವನ್ನು ಸಮೀಕರಿಸಿರುವುದು ಸಮಂಜಸವೇ ಆಗಿದೆ.

ಶಬ್ಧಕಲ್ಪಧ್ರುಮದಲ್ಲಿ ಕಾಲಿಯನ್ನು "ಕಾಲಃ ಶಿವಃ ತಸ್ಯ ಪತ್ನೇತಿ ಕಾಲಿ" ಎಂದು ಉಲ್ಲೇಖಿಸಿದೆ. ಅರ್ಥಾತ್ ಕಾಲನಾದ ಶಿವನ ಪತ್ನಿ ಕಾಲಿ. ಕಾಲನಿಗೂ ಕಾಲವಾದವಳು.

ರಕ್ತಬೀಜಾಸುರ, ಎಲ್ಲಿ ತನ್ನ ರಕ್ತ ಬೀಳುತ್ತದೊ ಅಲ್ಲಿ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುವಂತಹ ವರವನ್ನು ಪಡೆದಿದ್ದನು. ಆತನ ವಧೆ ದುಸ್ಸಾಧ್ಯವಾದಾಗ ಮಹಾಕಾಲಿ ತನ್ನ ನಾಲಿಗೆಯಿಂದ ಆತನ ದೇಹದಿಂದ ತೊಟ್ಟಿಕ್ಕುವ ರಕ್ತವನ್ನು ಹೀರುತ್ತಾ ವಧಿಸಿದಳು ಎಂಬ ಪ್ರತೀತಿ ಇದೆ.

ಶೈಲಪುತ್ರಿಯು ಬ್ರಹ್ಮಚಾರಿಣಿಯಾಗಿ  ಶಿವನನ್ನು ಒಲಿಸಲು ಅನೇಕ ವರುಷ ಮಳೆ, ಚಳಿ, ಗಾಳಿ, ಬಿಸಿಲಲ್ಲಿ  ತಪಸ್ಸು ಮಾಡಿದ ಪರಿಣಾಮ ಆಕೆಯ ಮೈ ಬಣ್ಣ ಕಪ್ಪಾಯಿತು. ಶಿವನು ಆಕೆಯ ತಪಸ್ಸಿಗೊಲಿದು ಆಕೆಯನ್ನು ಕಾಲಿ ಎಂದು ಛೇಡಿಸಿದ ಎನ್ನುವುದು ಇನ್ನೊಂದು ಪ್ರತೀತಿ.

ಕಾಲರಾತ್ರಿಯು ಕೆದರಿದ ಕೂದಲು,  ಹೊರಚಾಚಿದ ಕಣ್ಣಗುಡ್ಡೆ , ರಕ್ತಭರಿತವಾದ ನಾಲಿಗೆ , ಬೆಂಕಿ ಉಗುಳುವ  ಮೂಗಿನ ಹೊಳ್ಳೆ, ಕಪ್ಪು ಮೈ ಬಣ್ಣ,  ರುಂಡ ಮಾಲೆ,ಕೈಯಲ್ಲಿ ಖಡ್ಗ ಧಾರಣೆ ಮಾಡಿ, ಕತ್ತೆಯನ್ನು ವಾಹನವಾಗಿಸಿದ ಭೀಕರ ರೂಪ.

ನವದುರ್ಗೆಯರಲ್ಲಿ ಆಕೆಯದು ಭೀಕರ ಮತ್ತು ಭೀಭತ್ಸ ರೂಪ. ಮಹಾಗೌರಿ ಎಷ್ಟು ಸುಂದರವೋ ಅಷ್ಟೇ ಭೀಕರತೆ ಕಾಲರಾತ್ರಿ. ಅರ್ಥಾತ್ ಪ್ರಕೃತಿ ಎಷ್ಟು ಸುಂದರವೊ ಅಷ್ಟೇ ಪ್ರಳಯ ಭೀಕರ ಎಂದು ಈ ರೂಪ ಸೂಚಿಸುತ್ತದೆ.

ಪ್ರಳಯಕಾಲದಲ್ಲಿ  ಪ್ರಕೃತಿಯು ಕಾಲಿಯಷ್ಟೇ ಭೀಕರವಾಗಿ ಸರ್ವವನ್ನೂ ನಾಶಮಾಡುವ ಸಂದೇಶ ನೀಡುತ್ತದೆ.

ಕೆಲವು ಚಿತ್ರಗಳು ಶಿವನು ನೆಲದ ಮೇಲೆ ಮಲಗಿರುವಂತೆ ಹಾಗೂ ಕಾಲಿ ಶಿವನ ಎದೆಯನ್ನು ಮೆಟ್ಟಿರುವಂತೆ  ಕಾಣಬಹುದು.
ಅರ್ಥಾತ್ ಶಿವ ಪುರುಷ ತತ್ವ ಮತ್ತು ಶಕ್ತಿ ಪ್ರಕೃತಿ ತತ್ವವನ್ನು ತಿಳಿಸುತ್ತದೆ.  ಪುರುಷನಿಗೆ ಪ್ರಕೃತಿ ಅಂದರೆ ಶಕ್ತಿ ಇಲ್ಲದಿದ್ದರೆ ವ್ಯರ್ಥ. "ಶಕ್ತಿ ಇಲ್ಲದಿದ್ದರೆ ಶಿವನೂ ಶವದಂತೆ" ಎನ್ನುವುದನ್ನು ಈ ಚಿತ್ರ ಉಲ್ಲೇಖಿಸುತ್ತದೆ.

ಕಾಲಿದಾಸ ಮಾತಾ ಕಾಲಿಯ ಕೃಪೆಯಿಂದ ಕವಿಯಾದ ಎಂಬ ಪ್ರತೀತಿ ಇದೆ. ಆತ ಕಾಲಿಯ ಮೇಲೆ ಬರೆದ ಶ್ಯಾಮಲ ದಂಡಕಂ ಈ ಕೆಳಗೆ ಅರ್ಥಸಹಿತ ನೀಡಿದ್ದೇನೆ.

********  *ಶ್ಯಾಮಲ ದಂಡಕಂ* *******

ಏನೂ ಅರಿಯದ ಮುಗ್ಧನೊಬ್ಬ ಮಹಾಕಾಳಿಯ ಕೃಪೆಯಿಂದ ಸಾಮರ್ಥ್ಯವನ್ನುಗಳಿಸಿ ಲೋಕವಿಖ್ಯಾತಿ ಹೊಂದಿದ. ಕಾಳಿಯ ಕೃಪೆಯಿಂದಾಗಿ ಆತ ಕಾಳಿದಾಸ ಎಂದು ಜನಜನಿತನಾದ. ಕಾಳಿಯನ್ನು ಶ್ಯಾಮಲ ರೂಪದಲ್ಲಿ ಕಂಡ ಆತ ಆಕೆಯನ್ನು ಅಕ್ಷರ ದೇವತೆಯಾಗಿ ಕಂಡು ಆಕೆಯನ್ನು ಸ್ತುತಿಸಿದ್ದೆ *ಶ್ಯಾಮಲ ದಂಡಕಂ.*

ಶ್ಯಾಮಲೆಯನ್ನು ದಂಡಕಎಂಬ ಹಾಡಿನ ಶೈಲಿಯಲ್ಲಿ ಸ್ತುತಿಸಿದ್ದೆ ಶ್ಯಾಮಲ ದಂಡಕಂ ಎಂದು ಪ್ರಸಿದ್ಧವಾಯಿತು.
ಡಾ. ರಾಜ್ ಕುಮಾರ ನಟಿಸಿದ ಕವಿರತ್ನ ಕಾಳಿದಾಸ ಚಲನಚಿತ್ರದಲ್ಲಿ ರಾಜ್ ಕುಮಾರರ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಈ ಹಾಡು ಜನಜನಿತವಾಗಿದೆ.

ಶ್ಲೋಕ ಮತ್ತು ಅದರ ಅರ್ಥವನ್ನು ಈ ಕೆಳಗೆ ನೀಡಿದೆ.
ನವರಾತ್ರಿಯ ಈ ದಿನ ಮಹಾಕಾಳಿಯು ಪ್ರತಿನಿಧಿಸುತ್ತಿದ್ದು ಈ ಶ್ಲೋಕಗಳನ್ನು ಪಠಿಸಿ ಅಮೋಘ ಫಲ ಸಿದ್ಧಿಗಳಿಸಬಹುದು. ಸದಾ ಈ ಶ್ಲೋಕವನ್ನು ಸ್ತುತಿಸುವುದರಿಂದ ಸಕಲ ಶುಭಫಲಗಳು ಸಕಾರಾತ್ಮಕವಾಗಿ ಹರಿದುಬರುತ್ತವೆ ಎಂಬ ಪ್ರತೀತಿ ಇದೆ.

ಮಾಣಿಕ್ಯ ವೀಣಾಂ ಉಪಲಾಲಯಂತೀಂ,
ಮದಾಲಸಾಂ ಮಂಜುಲ ವಾಗ್ ವಿಲಾಸಂ,
ಮಾಹೇಂದ್ರ ನೀಲ ದ್ಯುತಿ ಕೋಮಲಾಂಗಿಂ,
ಮಾತಂಗ ಕನ್ಯಾಂ ಮನಸಾ ಸ್ಮರಾಮಿ

*(ಮಾಣಿಕ್ಯದಿಂದ ಕೂಡಿದ ವೀಣೆಯನ್ನು ನುಡಿಸುತ್ತಿರುವವಳೇ, ಆಲಸ್ಯ ತರುವಷ್ಟು ವಿಜೃಂಭಿತವಾಗಿ ಶೋಭಿಸುತ್ತಿರುವವಳೇ, ಮಂಜುಲವಾದ ಮಾತನಾಡುವವಳೇ,ನವರತ್ನಗಳಲ್ಲಿ ಒಂದಾದ ನೀಲದಂತೆ ಕೋಮಲವಾಗಿರುವವಳೇ, ಮಾತಂಗನ ಮಗಳಾದ ತಾಯಿಯನ್ನು ಮನಸಾರೆ ಸ್ಮರಿಸುತ್ತೇನೆ)*

ಚತುರ್ಭುಜೆ ಚಂದ್ರಕಳಾ ವತಂಸೆ
ಕುಚೋನ್ನತೆ ಕುಂಕುಮ ರಾಗ ಶೋಣೆ
ಪುಂಡ್ರೇಕ್ಷು ಪಾಶಾಂಕುಶ ಪುಷ್ಪ ಬಾಣ ಹಸ್ತೇ
ನಮಸ್ತೇ ಜಗದೇಕ ಮಾತಃ

*(ಚತುರ್ಭುಜವನ್ನು ಹೊಂದಿ ಚಂದ್ರನನ್ನು ಧಾರಣೆ ಮಾಡಿರುವವಳೇ, ಉನ್ನತ ಕುಚಗಳನ್ನು ಹೊಂದಿ ಕುಂಕುಮವರ್ಣದಿಂದ ಶೋಭಿಸುವವಳೇ, ಸಿಹಿ ಕಬ್ಬು, ಪಾಶ, ಅಂಕುಶ, ಪುಷ್ಪಬಾಣಗಳನ್ನು ಕೈಯಲ್ಲಿ ಧರಿಸಿರುವವಳೇ, ಜಗತ್ತಿನ ಏಕೈಕ ಮಾತೇ ನಿನಗೆ ನಮನಗಳು)*

ಮಾತಾ ಮರಕತ ಶ್ಯಾಮ
ಮಾತಂಗೀ ಮಧು ಶಾಲಿನಿ
ಕುರ್ಯಾತ್ಕಟಾಕ್ಷಂ ಕಲ್ಯಾಣಿ
ಕದಂಬ ವನವಾಸಿನಿ

*(ನವರತ್ನಗಳಲ್ಲಿ ಮರಕತ ಎಂಬ ಮಣಿಯಂತೆ ಶ್ಯಾಮಲವಾಗಿರುವ ಮಾತೇ, ಮಾತಂಗನ ಮಗಳಾದ ಮಾತಂಗೀ ಸುಮಧುರವಾಗಿರುವವಳೇ, ಶುಭಫಲವನ್ನು ನೀಡು, ಕದಂಬವನದಲ್ಲಿ ವಾಸವಾದವಳೆ.)*

ಜಯ ಮಾತಂಗ ತನಯೇ, ಜಯ ನೀಲೋತ್ಪಲ ಧ್ಯುತೆ,
ಜಯ ಸಂಗೀತ ರಸಿಕೆ,
ಜಯ ಲೀಲಾ ಶುಕ ಪ್ರಿಯೆ

*(ಮಾತಂಗನ ಮಗಳಿಗೆ ಜಯವಾಗಲಿ, ನೈದಿಲೆಯನ್ನು ಪ್ರತಿನಿಧಿಸುವವಳಿಗೆ ಜಯವಾಗಲಿ, ಸಂಗೀತವನ್ನು ಆಸ್ವಾದಿಸುವವಳಿಗೆ ಜಯವಾಗಲಿ, ಲೀಲೆಯೆಂಬ ಗಿಳಿಯನ್ನು ಮೆಚ್ಚಿರುವವಳಿಗೆ ಜಯವಾಗಲಿ)*

ಸುಧಾಸಮುದ್ರಾಂತಹ್ರುಧ್ಯನ್ಮಣೀ ದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪಧ್ರುಮಾ ಕಲ್ಪ ಕಾದಂಬ ವಾಸ ಪ್ರಿಯೆ
ಕೃತ್ತಿ ವಾಸ ಪ್ರಿಯೆ
ಸರ್ವಲೋಕ ಪ್ರಿಯೆ

*(ಜೇನಿನಂತಹ ಕಡಲಿನ ನಡುವೆ ಇರುವ ನವರತ್ನದಂತಹ ದ್ವೀಪದಲ್ಲಿ ಆರೂಢವಾದ, ಬಿಲ್ವದ ಕಾಡಿನ ಮಧ್ಯೆ ಕದಂಬವನದಲ್ಲಿ ವಾಸವಾಗಿ ಕಲ್ಪವ್ರಕ್ಷದಂತೆ ಬಯಸಿದ್ದನ್ನು ನೀಡುವ, ಸದಾಶಿವನ ಪ್ರಿಯೆಯಾದ, ಸರ್ವಲೋಕ ಪ್ರಿಯೆಯಾದವಳಿಗೆ ಜಯವಾಗಲಿ)*

ಕಾಲರಾತ್ರಿ ನಂಬಿದವರನ್ನು ಸಲಹುತ್ತಾಳೆ  ಆಕೆ ಮಾತಾ ಸ್ವರೂಪಿಣಿ. ಇಡೀ ಬ್ರಹ್ಮಾಂಡ ಏನೂ ಇರದಾಗ ಕತ್ತಲಿನಿಂದ ಕೂಡಿತ್ತು ಮತ್ತು ಅದೇ ಕತ್ತಲನ್ನು ಕಾಲಿಯ ಕಪ್ಪು ಬಣ್ಣದೊಂದಿಗೆ ಸಮೀಕರಿಸಿ ಆಕೆಯಿಂದಲೇ ಸಕಲ ಚರಾಚರದ ಉಗಮ ಮತ್ತು ಅಂತ್ಯ ಎಂದು ಸೂಚಿಸುತ್ತದೆ.

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು ಪರಿಭಾವಿಸಿದ ಮುನಿಗಳು ಪರ್ವತದ ತಪ್ಪಲಿನ ಪ್ರಕೃತಿಯ ಪ್ರಳಯ ಭೀಕರ ಆಟಾಟೋಪಗಳನ್ನು ಕಂಡು ಎಲ್ಲಕ್ಕಿಂತ ಮಿಗಿಲಾದ ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ ಎನ್ನುವುದನ್ನು ಮನಗಂಡು ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಸ್ತುತಿಸಿದರು.

ಯೋಗದಲ್ಲಿ ಈಕೆ ಸಹಸ್ರಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ.

ಕಾಲಿ, ಮಹಾಕಾಲಿ, ಕಾಲಿಕೆ, ಪರಮೇಶ್ವರಿ||
ಸರ್ವಾನಂದಕರಿ ದೇವಿ ನಾರಾಯಣಿ ನಮೋಸ್ತುತೆ||

ನವರಾತ್ರಿಯು ಕಲ್ಮಶಗಳನ್ನು ಕಳೆದು ಪರಿಶುದ್ಧತೆಯನ್ನು ಧಾರಣೆಮಾಡುವ ಸಂಕೇತವನ್ನು ನೀಡುತ್ತದೆ. ತಸ್ಮಾತ್ ನವರಾತ್ರಿಯು ಕೆಡುಕಿನ ಮೇಲಿನ ಒಳಿತಿನ ಗೆಲುವಾಗಿದೆ.

*ಮಹಾಗೌರಿ*

ನವರಾತ್ರಿಯ ಎಂಟನೇ ದಿನ ಪೂಜಿಸಲ್ಪಡುವವಳು.
ಗೌರಿ ಎಂದರೆ ಬಿಳಿ ಎನ್ನುವ ಅರ್ಥ. ಮಹಾಗೌರಿಯು ಬಿಳಿಯ ಮೈಬಣ್ಣ ಹೊಂದಿದ್ದು ಆಕೆಯನ್ನು ಶ್ವೇತ ವಸನ ಧಾರಿಯಾಗಿ  ಉಲ್ಲೇಖಿಸಿದೆ. ಅಚ್ಚ ಬಿಳುಪಿನ ಶುಭ್ರವರ್ಣವಾಗಿ ಕಂಡು ಬರುವ ಈಕೆಯ ಶುಭ್ರತೆಯನ್ನು ಶಂಖ ಅಥವಾ ಚಂದ್ರನಿಗೆ ಸಮೀಕರಿಸಿದೆ.

ಶಿವನಿಗಾಗಿ ತಪಸ್ಸನ್ನು ಮಾಡಿದ ಬ್ರಹ್ಮಚಾರಿಣಿಯು ಗಾಳಿ, ಮಳೆ, ಬಿಸಿಲಿಗೆ ಕಪ್ಪಗಾಗಿ  ಶಿವನೊಲಿದು ಆಕೆಯನ್ನು ಕಾಲಿ ಎಂದು ಛೇಡಿಸಿದ ಎಂಬ ವಿಚಾರವನ್ನು ಹಿಂದಿನ ರೂಪದಲ್ಲಿ ಕೇಳಿದ್ದೆವು. ಮುಂದುವರೆದು ಶಿವನು ಆಕೆಯನ್ನು ಗಂಗಾ ನದಿಯಲ್ಲಿ  ಸ್ನಾನ ಮಾಡಿಸಿದಾಗ ಆಕೆಯ ಕಪ್ಪು ವರ್ಣ ತೊಳೆದು ಶುಭ್ರವಾದಳು  ಎಂಬ ಪ್ರತೀತಿ ಇದೆ.

ಅರ್ಥಾತ್ ಮನಸ್ಸಿನ  ಆಂತರ್ಯದಲ್ಲಿರುವ ಕೊಳೆ, ಕಲ್ಮಶಗಳನು ಜ್ಞಾನ ಗಂಗೆಯಿಂದ ತೊಳೆದಾಗ ಬದುಕು ಶುಭ್ರವಾಗುತ್ತದೆ. ತಥಾ ಮಹಾಗೌರಿಯ ಸ್ಮರಣೆ ಬದುಕನ್ನು ಶುಭ್ರಗೊಳಿಸಿ ಬೆಳಗುತ್ತದೆ.

ಮಹಾಗೌರಿಯು ನಂದಿಯನ್ನು ವಾಹನವಾಗಿ ಹೊಂದಿದ್ದು. ಚತುರ್ಭುಜ ಹೊಂದಿದ್ದಾಳೆ. ತ್ರಿಶೂಲ ಮತ್ತು ಢಮರು ಹಾಗೂ ಅಭಯಮುದ್ರೆಯನ್ನು  ಧರಿಸಿದ್ದಾಳೆ.

ಈಕೆಯದು ಸಾತ್ವಿಕ ರೂಪ. ಶಾಂತಿ, ಪಾವಿತ್ರ್ಯ, ಪರಿಶುದ್ಧತೆ,  ಸಮೃದ್ಧಿಯನ್ನು ಈಕೆ ಕರುಣಿಸುತ್ತಾಳೆ. ಈಕೆಯನ್ನು "ಶ್ವೇತಾಂಬರಧರಾ" ಎಂದೂ ಕರೆಯುತ್ತಾರೆ.

ಯೋಗದಲ್ಲಿ ಈಕೆ ಯಾವುದೇ ಚಕ್ರವನ್ನು ಪ್ರತಿನಿಧಿಸುವುದಿಲ್ಲ ಅರ್ಥಾತ್ ಏಳು ಚಕ್ರಗಳು ಕಾಲರಾತ್ರಿ ಅವತಾರದೊಂದಿಗೆ ಸಮಾಪನವಾಗುತ್ತದೆ. ಅಂದರೆ ಯಾವಾಗ ಈ ಏಳೂ  ಚಕ್ರಗಳು ಮನುಷ್ಯನಲ್ಲಿ ಜಾಗೃತವಾಗುತ್ತದೊ ಆವಾಗ ಮನುಷ್ಯ ಪರಿಶುದ್ಧನಾಗುತ್ತಾನೆ. ಆಂತರಿಕವಾಗಿ ಕಲ್ಮಶಗಳು ಜ್ಞಾನಗಂಗೆಯಲಿ ತೊಳೆದು ಮಹಾಗೌರಿಯಂತ ಸಾತ್ವಿಕ ಶುಭ್ರರೂಪು ಧಾರಣೆಯಾಗುತ್ತದೆ. ತಥಾ ಮಹಾಗೌರಿಯ ಆರಾಧನೆ ಮುಖ್ಯವಾಗುತ್ತದೆ.

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು, ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ  ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಪರಿಭಾವಿಸಿದ ಮಾನವ ಶಾಂತ ಶುಭ್ರ ಪ್ರಕೃತಿಯನ್ನು ಮಾನಸಿಕ ಪರಿಶುದ್ಧತೆಯೊಂದಿಗೆ ಸಮೀಕರಿಸಿ ಗೌರಿ ಎಂದು ಕರೆದನು. ಆಕೆಯನ್ನು ಶೈಲಪುತ್ರಿಯ ಮತ್ತೊಂದು ರೂಪವಾಗಿ ಕಂಡುಕೊಂಡನು. ಪರ್ವತವು ಮಣ್ಣಿನಿಂದ ಕೂಡಿದುದಾಗಿ ಗೌರಿಗೆ ಈ ಮಣ್ಣನ್ನೇ ಆರೋಪಿಸಿ ಜನಪದರ ಮೂಲತತ್ವವಾದ ಗೌರಮ್ಮ ಮಣ್ಣಿಂದಲೇ ಮೈದೆಳೆದಳು.

ಪರ್ವತದ ಅಗಾಧತೆ, ನಿತ್ಯಹರಿದ್ವರ್ಣದ ವನರಾಶಿ, ಹರಿದು ಬರುವ ನದಿ ತೊರೆಗಳು ಎಲ್ಲವೂ ಸೇರಿ ಜನಪದರು ಆ ಗೌರಿಯನ್ನು ಸುಮಂಗಲಿಯಂತೆ ಸದಾ ಪೂಜಿಸಿದರು. ಪಾರ್ವತಿ ಎಂಬ ಶೈಲಪುತ್ರಿಯ ರೂಪವು ಗೌರಿಯೊಂದಿಗೆ ಬೆಸೆದುಕೊಂಡು ಗೌರಮ್ಮ ಮನೆಮನೆಯಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳಲ್ಲಿ ನಿಕಟವಾಗಿ ಬೆಸೆದುಕೊಂಡಳು.

ಶ್ವೇತೆ ವೃಷೆ ಸಮಾರೂಢ ಶ್ವೇತಾಂಬರಧರ ಶುಚಿ| ಮಹಾಗೌರಿ ಶುಭಂ ದಧ್ಯಂತ್ರ ಮಹಾದೇವ ಪ್ರಮೋದಾದ||
ಎಂದು ಪಠಿಸಿ ಫಲವನ್ನು ಪಡೆಯಬಹುದು.

*ಸಿದ್ಧಿಧಾತ್ರಿ*

ನವರಾತ್ರಿಯ ಒಂಭತ್ತನೆ ದಿನ ಪೂಜಿಸಲ್ಪಡುವವಳು
ಹೆಸರೇ ಸೂಚಿಸುವಂತೆ ಸಿದ್ಧಿಧಾತ್ರಿ ಬಗೆ ಬಗೆಯ ಸಿದ್ಧಿಗಳನ್ನು ನೀಡುವವಳು.
ಅಷ್ಟಸಿದ್ಧಿಗಳಾದ "ಅನಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಖ್ಯಮ್ಯ, ಇಷಿತ್ವ, ವಷಿತ್ವ" ಇವುಗಳನ್ನು ನೀಡುತ್ತಾಳೆ ಎಂದೂ, ಗಂಧರ್ವ, ಯಕ್ಷ, ಸಿದ್ಧ, ಅಸುರ, ದೇವತೆಗಳೆಲ್ಲರೂ ಈಕೆಯನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಿದೆ.

ತಂತ್ರ ಮಾಡುವವರು, ಸಾಧಕರು, ಯೋಗಿಗಳು ಈಕೆಯ ಪೂಜೆಯನ್ನು ಮಾಡಿ ಸಿದ್ಧಿಗಳಿಸುತ್ತಾರೆ ಎಂಬ ಪ್ರತೀತಿ ಇದೆ.

ಶಿವನು ಈಕೆಯನ್ನು ಪೂಜಿಸಿ ಸಿದ್ಧಿಯನ್ನು ಪಡೆದನು ಎಂದು ಉಲ್ಲೇಖಿಸಿದೆ. ಶಕ್ತಿಯನ್ನು ಒಲಿಸಿದ ಶಿವ ಅರ್ಧನಾರೀಶ್ವರನಾದ. ಗಂಡು ಹೆಣ್ಣು ಒಂದೇ ಎಂದು ಸಾರಿದ್ದು ಅರ್ಧನಾರೀಶ್ವರ ತತ್ವ.

ಈಕೆ ಕಮಲದ ಮೇಲೆ ಕುಳಿತಿದ್ದು ಶಂಖ, ಚಕ್ರ, ಗಧಾ, ಪದ್ಮ ಧಾರಣೆ ಮಾಡಿದ್ದಾಳೆ.

ಎಲ್ಲಾ ಚಕ್ರ ಜಾಗೃತವಾದ ಮೇಲೆ ಮನುಷ್ಯ ಮಹಾಗೌರಿಯಂತೆ ಪರಿಶುದ್ಧನಾದ ಮೇಲೆ ಎಲ್ಲಾ ರೀತಿಯ ಸಿದ್ಧಿಯನು ಹೊಂದಬಹುದು. ತಥಾ ಸಿದ್ಧಿಧಾತ್ರಿ ಸಿದ್ಧಿಯನ್ನ ತನ್ಮೂಲಕ ಕರುಣಿಸುತ್ತಾಳೆ.

ಪರ್ವತದ ತಪ್ಪಲಿನ ಮಣ್ಣೇ ಶೈಲಪುತ್ರಿಯಾಗಿ, ಅಲ್ಲಿ ಬೆಳೆಯುವ ಜ್ಞಾನವೇ ಬ್ರಹ್ಮಚಾರಿಣಿಯಾಗಿ, ಬೆಳೆಗಳ ನಡುವಿನ ಸವಾಲುಗಳನ್ನೆದುರಿಸುವುದೇ ಚಂದ್ರಘಂಟಾ ಎಂಬುದಾಗಿ, ಸಮರ್ಥ ಕೃಷಿ ಬದುಕಿನ ಯಶಸ್ಸಿನ ನಗುವೇ ಕೂಷ್ಮಾಂಡವಾಗಿ, ವಂಶ ಕುಲಗಳ ಮುಂದುವರಿಕೆಯೆ ಸ್ಕಂದ ಮಾತವಾಗಿ, ಮೋಹಗಳಿಗೆ ಒಳಗಾಗದಿರುವುದೇ ಕಾತ್ಯಾಯಿನಿಯಾಗಿ, ಪ್ರಕೃತಿಯ ಪ್ರಳಯ ಭೀಕರವೇ ಕಾಲರಾತ್ರಿಯಾಗಿ, ಶಾಂತ ಪ್ರಕೃತಿಯೇ ಮಹಾಗೌರಿಯಾಗಿ ಕಂಡುಕೊಂಡ ಮಾನವ ಇದೇ ಪರ್ವತದ ತಪ್ಪಲಿನಲ್ಲಿ ಬಗೆಬಗೆಯ ಸಿದ್ಧಿಯನ್ನು ಕಂಡುಕೊಂಡ. ಕೃಷಿಯೊಂದಿಗೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಬದುಕು ಸುಗಮಗೊಳಿಸಿದ. ಅಂದಿನಿಂದ ಇಂದಿನ ವರೆಗೂ ಮಾನವ ಹೊಸ ಹೊಸ ಕ್ರಾಂತಿಗೆ ಕಾರಣನಾದ. ಈ ಎಲ್ಲಾ ಸಿದ್ಧಿಯನ್ನು ಕರುಣಿಸಿದವಳು ಸಿದ್ಧಿಧಾತ್ರಿ ಎಂದು ಪರಿಭಾವಿಸಿದ

ನವರಾತ್ರಿಯು ಹಲವು ರೂಪಗಳ ಮೂಲಕ ಮಾನವರಿಗೆ ಅಗತ್ಯ ಸಂದೇಶಗಳನ್ನು ನೀಡಿ ತನ್ಮೂಲಕ ಬದುಕನ್ನು ಹೆಚ್ಚು ಸಮರ್ಥವಾಗಿ ಬದುಕುವ ದಾರಿಯನ್ನು ತೋರುತ್ತವೆ. ಆ ಮೂಲಕ ಬಗೆಬಗೆಯ ಸಿದ್ಧಿಗಳನ್ನೂ ಕರುಣಿಸುವ ಮಹಾಪರ್ವ ನವರಾತ್ರಿ.

ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ| ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||
ಸಿದ್ಧಿಧಾತ್ರಿ ಸಕಲ ಸಿದ್ಧಿಯನ್ನು  ಕರುಣಿಸಲಿ

ಆಯುಧಪೂಜೆಯನ್ನೂ ಇದೆ ದಿನ ನೆರವೇರಿಸಲಾಗುತ್ತದೆ. ಪಾಂಡವರು ಇದೆ ದಿನ ವನವಾಸದಿಂದ ವಾಪಾಸಾಗಿ ತಮ್ಮ ಶಸ್ತ್ರಗಳನ್ನು ತಾವು ಬಚ್ಚಿಟ್ಟ ಶಮಿ (ಬನ್ನಿ) ಮರದಿಂದ ತಗೆದು ಅದಕ್ಕೆ ಪೂಜೆಯನ್ನು ಸಲ್ಲಿಸಿದರು ಎಂಬ ಪ್ರತೀತಿ ಇದೆ.

ಇಲ್ಲಿಗೆ ನವದುರ್ಗೆಯರ ಅವತಾರಗಳ ವಿಶ್ಲೇಷಣೆಗೆ ವಿರಾಮ ಹೇಳುತ್ತಾ.
ಹೀಗೆ ನವರಾತ್ರಿಯಲ್ಲಿ ನವದುರ್ಗೆಯರ ಸ್ಮರಣೆ, ಪಠನೆ, ಸಂಕೀರ್ತನೆಗಳಿಂದ ಬದುಕಿನ ಜಂಜಡಗಳನ್ನು ದಾಟಿ ಬರುವುದೇ ವಿಜಯ. ತಸ್ಮಾತ್ ವಿಜಯದಶಮಿ ಪ್ರಮುಖವಾಗುತ್ತದೆ. ನವರಾತ್ರಿ ಕಳೆದು ಹತ್ತನೇ ದಿನ  ಆಚರಿಸುವ ವಿಜಯದಶಮಿ, ದೇಹ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಿ ವಿಜಯವನ್ನು ಗಳಿಸುವ ಸಂದೇಶವನ್ನು ನೀಡುತ್ತದೆ.


"ದುರ್ಗಾ ದುರ್ಗತಿ ನಾಶಿನಿ" ಅರ್ಥಾತ್ ದುರ್ಗತಿಯನ್ನು ನಾಶ ಮಾಡುವವಳು ದುರ್ಗೆ. *ದುರ್ಗಾ* ಎಂದರೆ *ಕೋಟೆ,* *ರಕ್ಷಣೆ* ಎನ್ನುವ ಅರ್ಥವೂ ಇದೆ. ಅಂದರೆ ಎಲ್ಲಾ ರೀತಿಯ ಕಷ್ಟಗಳಲ್ಲಿ ತಾಯಿ ದುರ್ಗೆಯ ಸ್ಮರಣೆ ಮಾಡಿದರೆ ಆಕೆ ಕೋಟೆಯಂತೆ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಾಳೆ ಅನ್ನುವುದೊಂದು ನಂಬಿಕೆ.


ನವರಾತ್ರಿಯು ಒಂಭತ್ತು 9ರಾತ್ರಿಗಳನ್ನು ಪ್ರತಿನಿಧಿಸುತ್ತವೆ. ರಾತ್ರಿ ಅಂದರೆ ಕತ್ತಲು, ಕತ್ತಲು ಎಂದರೆ ನಕಾರಾತ್ಮಕತೆ (negativity). ನಮ್ಮ ದೇಹದ ನವದ್ವಾರದ ಮೂಲಕ ಬರುವ ಕಾಮ, ಕ್ರೋಧ,ಮೋಹ, ಲೋಭ, ಮದ, ಮತ್ಸರವನ್ನು ನಾಶ ಮಾಡುವ ಸಂದೇಶ ನೀಡುತ್ತದೆ.


ದೇಹದ ಸಪ್ತ ಚಕ್ರಗಳನ್ನು ಈ ನವದುರ್ಗೆಯರು ಪ್ರತಿನಿಧಿಸಿ ಚಕ್ರಗಳನ್ನು ಜಾಗೃತಗೊಳಿಸಿ, ಪರಿಶುದ್ಧತೆಯಲ್ಲಿ ಸಿದ್ಧಿಗಳಿಸುವ ಸಂದೇಶವನ್ನು ನೀಡುತ್ತಾರೆ.


ದೇವಿಯ ಬಗೆ ಬಗೆಯ ರೂಪಗಳು 
*ಪ್ರಕ್ರತಿ ಆರಾಧನೆ (ಶೈಲ ಪುತ್ರಿ)*
*ಜ್ಞಾನಾರ್ಜನೆ (ಬ್ರಹ್ಮಚಾರಿಣಿ)*
*ನಕಾರಾತ್ಮಕತೆಯ ನಾಶದಿಂದ ಮನಃಕ್ಲೇಶ ನಿವಾರಣೆ (ಚಂದ್ರಘಂಟ)*
*ನಗು ನಲಿವಿನಿಂದ ಸಕಾರಾತ್ಮಕ ಪ್ರಭೆ (ಕೂಷ್ಮಾಂಡ)*
*ಮಾತ್ರ್ ವಾತ್ಸಲ್ಯ ಕರುಣೆ (ಸ್ಕಂದ ಮಾತಾ)*
*ವಿಷಯಸುಖಗಳ ಮೇಲಿನ ಹಿಡಿತ (ಕಾತ್ಯಾಯಿನಿ)*
*ದುಷ್ಟತೆಗಳ ನಾಶ ಸತ್ಯ ನ್ಯಾಯ ಧರ್ಮಗಳ ಪಾಲನೆ (ಕಾಲರಾತ್ರಿ)*
*ಶಾಂತಿಯೊಂದಿಗೆ ಬದುಕಿನ ಪರಿಶುದ್ಧತೆ (ಮಹಾಗೌರಿ)*
*ಸಾರ್ಥಕ್ಯದ ಬದುಕಿನೊಂದಿಗೆ ಸಿದ್ಧಿ (ಸಿದ್ಧಿಧಾತ್ರಿ)*
ಬದುಕಿಗೆ ಪಾಠವೇ ಆಗಿದೆ.


*ಶಮಿ ಶಮಯತೆ ಪಾಪಂ, ಶಮಿ ಶತ್ರು ವಿನಾಶಿನಿ| ಅರ್ಜುನಸ್ಯ ಧನುರ್ಧಾರಿ,  ರಾಮಸ್ಯ ಪ್ರಿಯದರ್ಶಿನಿ||


*ಶಮಿ (ಬನ್ನಿ)* ಮರ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಿದ್ದಾರೆ. ಬನ್ನಿಯ ಎಲೆ ಬಂಗಾರಕ್ಕೆ ಸಮ ಅನ್ನುತ್ತಾರೆ ಆದುದರಿಂದ ಇದರ ಎಲೆ ಕೊಟ್ಟು *" ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ"* ಅಂತ ಹೇಳಿ ಹಳೆ ಕೋಪ ಮನಸ್ತಾಪ ಮರೆತು ಮತ್ತೆ ಬೆರೆತು ಬಾಳುತ್ತಾರೆ.


ಈ ಒಂಭತ್ತು ದಿನಗಳ ವಿಶ್ಲೇಷಣೆಯು ನಮ್ಮೊಳಗಿನ *ಮಾನವತ್ವವನ್ನು* *ದೈವಿಕತ್ವದೆಡೆ* ಕೊಂಡೊಯ್ಯಲಿ ತನ್ಮೂಲಕ *"ಅಹಂ ಬ್ರಹ್ಮಾಸ್ಮಿ"*ಎನ್ನುವ ಕಲ್ಪನೆ ಮೂಡಲಿ ಎಂದು ಆಶಿಸುತ್ತಾ, ವಿಜಯದಶಮಿ ಶುಭಾಶಯಗಳು.


ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Sunday, 22 September 2019

ಅಂತರಿಕ್ಷ ಪ್ರೀತಿ

ಅವಳೊಬ್ಬ ಪ್ರಬುದ್ಧ ಜನಪ್ರಿಯ ಪತ್ರಕರ್ತೆ. ಅವಳು ಖ್ಯಾತ ಅಂಕಣದಿಂದ ಮನೆಮಾತಾಗಿದ್ದಳು. ಅವಳ ಅಂಕಣ ಪ್ರಕಟಗೊಂಡ ದಿನ ಪತ್ರಿಕೆ ಹೆಚ್ಚು ಮಾರಾಟವಾಗುತ್ತಿತ್ತು.

ಆ ದಿನ ಅವಳೊಂದು ಅಂತರಿಕ್ಷದ ಲೇಖನ ಬರೆದಿದ್ದಳು. ಚಂದಿರನಲ್ಲಿಗೆ ಕಾಲಿಟ್ಟು ಬಂದವನನ್ನು ತಾನು ವರಿಸಬೇಕೆಂಬುವುದು ಅವಳ ಕನಸಾಗಿತ್ತು ಎಂದು ಬರೆದುಕೊಂಡಿದ್ದಳು!

ಅವನು ಆ ಅಂಕಣವನ್ನು ಓದಿದ್ದ. ಆತ ಖ್ಯಾತ ವಿಜ್ಞಾನಿಯಾಗಿದ್ದ. ಅವಳ ಲೇಖನಗಳಿಂದ ಪ್ರಭಾವಿತನಾಗುತ್ತಿದ್ದ. ಚಂದಿರನಲ್ಲಿಗೆ ಹೋಗುವ ಛಲ ಹುಟ್ಟಿತು.

ಅವಿರತ ಪ್ರಯತ್ನದ ಫಲವಾಗಿ ರಾಕೇಟು ಆತನನ್ನು ಚಂದ್ರನಲ್ಲಿಗೆ ಹೊತ್ತೊಯ್ದಿತ್ತು!!

ವಾರಗಳ ಅಧ್ಯಯನದ ತರುವಾಯ ಆತ ಮರಳಿ ಬಂದಿದ್ದ. ಹಾಗೆ ಮರಳುವ ಹೊತ್ತಲ್ಲಿ ಅತ್ಯಮೂಲ್ಯ ವಸ್ತುವೊಂದನ್ನು ಅಲ್ಲೇ ಮರೆತು ಬಂದಿದ್ದ!

ಅದು ಹೇಗೊ ಸುದ್ದಿ ಸಂಸ್ಥೆಗೆ ಈ ವಿಚಾರ ತಿಳಿಯಿತು. ಆಕೆ ಒಂದು ಲೇಖನ ಪ್ರಕಟಿಸಿದಳು.
"ಅತ್ಯಮೂಲ್ಯ ವಸ್ತು ಮರೆತು ಬಂದ ಅಂತರಿಕ್ಷ ಯಾನಿ".

ಓದಿದ ಅವನು ಸಣ್ಣಗೆ ನಕ್ಕು ಅವಳಿಗೆ ಕರೆ ಮಾಡಿದ.

ಮರೆತದ್ದೇನೊ ಹೌದು ಆದರೆ ಅದೊಂದು ಪತ್ರವಾಗಿತ್ತು. ಹೇಳಿದನವನು.

"ಅಂತದ್ದೇನಿತ್ತು?"ಎಂಬ ಅವಳ ಪ್ರಶ್ನೆಗೆ
"ಚಂದ್ರನಲ್ಲಿ ಇಳಿದವನ ವರಿಸುವೆ ಎಂದಿರಿ. ಮದುವೆಯಾಗುವಿರಾ ಎಂಬ ಸಾಲುಗಳ ಪತ್ರ ಎಂದು ಉತ್ತರಿಸಿದ್ದ.

ಅವಳ ಕೆನ್ನೆಗೆ ಲಜ್ಜೆಯ ಕೆಂಪೇರಿತ್ತು. ಕಿಟಕಿಯೆಡೆಗೆ ನೋಡಿದಳು. ಆಗಸದಲ್ಲಿ ಅಂದು ಹುಣ್ಣಿಮೆಯ ಚಂದ್ರ. ಪತ್ರ ಓದಿದ ಚಂದ್ರ ನಕ್ಕಂತಿತ್ತು.

ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Saturday, 21 September 2019

ಬೀಸುಗಾಳಿ ಮತ್ತು ದೀಪ

ಅವರಿಬ್ಬರೂ ಬದುಕಿನ ಹಾದಿಯಲ್ಲಿ ಮುಖಾಮುಖಿಯಾಗಿದ್ದರು. ಇಬ್ಬರೂ ಬದುಕು ಕಟ್ಟುವ ಛಲದಲ್ಲಿದ್ದವರು. ಇಬ್ಬರ ಕಣ್ಣಲ್ಲೂ ಸಾವಿರ ಕನಸಿನ ಬಣ್ಣಗಳು.

ಅವನು ಅವನನ್ನು ಪರಿಚಯಿಸಿಕೊಂಡ. ನಾನು ಬೀಸುಗಾಳಿಗೆ ಮೈಯೊಡ್ಡಿರುವವನು. ಬಿರುಗಾಳಿಗೂ ಎದೆಯೊಡ್ಡಿ ಬದುಕು ಕಟ್ಟಬೇಕೆಂದಿರುವವನು.

ಅವಳೂ ಅವಳನ್ನು ಪರಿಚಯಿಸಿಕೊಂಡಳು. ನಾನು ನೋಡು ದೀಪ ಹಿಡಿದವಳು. ಈ ದೀಪದಿಂದಲೇ ಬದುಕು ಬೆಳಗಿಸಬೇಕೆಂದು ಹೊರಟಿರುವವಳು.

ಇಬ್ಬರೂ ಬದುಕು ಕಟ್ಟುವವರಾದ್ದರಿಂದ ಜೊತೆಗೆ ನಡೆಯೋಣ ಎಂದುಕೊಂಡರು. ಆದರೆ, ಅವನೊಡನೆ ಹೊರಟರೆ ಬೀಸುಗಾಳಿಗೆ ಎದುರಾಗಬೇಕು. ಅವಳ ಕೈಯ ದೀಪವಾರುತ್ತದೆ. ಅದು ಅವಳ ಸಿದ್ಧಾಂತವಲ್ಲ!

ಅವಳೊಂದಿಗೆ ಹೆಜ್ಜೆ ಹಾಕಬೇಕೆಂದರೆ ಗಾಳಿಗೆ ಬೆನ್ನಾಗಿ ನಡೆಯಬೇಕು. ಅದು ಅವನ ಸಿದ್ಧಾಂತವಲ್ಲ!!

ಬೇರೆ ಉಪಾಯ ತೋರದೆ ಇಬ್ಬರೂ ತಮ್ಮ ತಮ್ಮ ದಾರಿ ಕಂಡುಕೊಳ್ಳುವ ಸನ್ನಹದಲ್ಲಿದ್ದರು.

ದೂರವಾಗಲು ಅನುವಾದರು. ಆಗ ಅವನು ಕೇಳಿಕೊಂಡ.

"ನೀ ನನ್ನ ಬೆನ್ನಿಗೆ ನಿಂತುಕೊಳ್ಳುವೆಯಾ? ನೀ ಬೆನ್ನಿಗಿದ್ದರೆ ಎಂಥಾ ಬೀಸುಗಾಳಿಯನ್ನಾದರೂ ಬಂಡೆಯಂತೆ ಎದುರಿಸಬಲ್ಲೆ. ಬೆನ್ನ ಹಿಂದಿರುವ ನಿನ್ನ ಕೈಯ ಪುಟ್ಟ ದೀಪ ಆರದಂತೆ ತಡೆಯ ಬಲ್ಲೆ."

ಬದುಕು ಕಟ್ಟಿಕೊಂಡಿತು.

ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Friday, 20 September 2019

ಗೆಜ್ಜೆಪಾದದ ಹುಡುಗಿ

ಆವತ್ತು ಅವನು ಆ ಪಾದ ಮತ್ತು ಗೆಜ್ಜೆಯನ್ನು ಮೂರನೆ ಬಾರಿಗೆ ನೋಡಿದ್ದ. ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಮೇಲೇಳುವಾಗ ಆಕೆ ಹಾಗೆ ನಡೆದು ಹೋಗಿದ್ದಳು. ಈ ಹಿಂದೆಯೂ ಕಂಡಿದ್ದು ಅದೇ ಪಾದ, ಅದೇ ಗೆಜ್ಜೆ. ಆದರೆ ಅವಳ್ಯಾರು ಎಂದು ನೋಡುವಷ್ಟರಲ್ಲಿ ಮರೆಯಾಗಿದ್ದಳು.

ಮೇಲೆದ್ದು ದೇವರ ಮೂರ್ತಿಯ ಮುಂದೆ ಬಿನ್ನವಿಸಿಕೊಂಡಿದ್ದ "ಮದುವೆ ಎಂಬುವುದಾದರೆ ಅವಳನ್ನೇ ಆಗುವಂತೆ ಅನುಗ್ರಹಿಸು ದೇವಾ" ಎಂದು. ಪಾದ ಮತ್ತು ಗೆಜ್ಜೆಯನ್ನಷ್ಟೇ ನೋಡಿ ಪ್ರೀತಿಸಿದವನು ಈ ಜಗದಲ್ಲಿ ಅವನೊಬ್ಬನೇ ಇರಬೇಕು! ದೇವರು ನಕ್ಕಂತಾಯಿತು.

ದಿನ ಕಳೆಯಿತು. ಮನೆಯವರು ಹೆಣ್ಣು ನೋಡುವ ಶಾಸ್ತ್ರದಂತೆ ಅವನನ್ನು ಹೊರಡಿಸಿದ್ದರು. ಮನದಲ್ಲಿ ಮಾತ್ರ ಅವಳ ಗೆಜ್ಜೆ ಪಾದವೇ ಕದಲುತ್ತಿತ್ತು. "ಭಗವಂತಾ... ಬೇಡಿದ್ದನ್ನು ಕರುಣಿಸದೇ ಹೋದೆಯ" ನಿಡುಸುಯ್ದು ಒಲ್ಲದ ಮನಸ್ಸಿನಿಂದ ಹುಡುಗಿಯನ್ನು ನೋಡಲು ಹೊರಟ.

ತಲೆತಗ್ಗಿಸಿ ಕುಳಿತಿದ್ದ. ಹುಡುಗಿಯ ಕಾತರವಲ್ಲ, ಗೆಜ್ಜೆಪಾದದ ಹುಡುಗಿಯನ್ನು ಮರೆಯುವುದಂತು ಎಂಬ ಚಿಂತೆ. ಅಲ್ಲೆಲ್ಲೊ ಹುಡುಗಿ ಚಹ ಕಪ್ಪುಗಳನ್ನು ಹಿಡಿದು ತರುತ್ತಿದ್ದಳು. ಗೆಜ್ಜೆ ಸದ್ದಿಟ್ಟಿತು. ತಲೆಯೆತ್ತಿ ಪಾದಗಳನ್ನು ನೋಡಿದ್ದ. ಅದೇ ಪಾದ ಅದೇ ಗೆಜ್ಜೆ!

ಹುಡುಗಿಯ ಕಡೆಗೆ ಬಿಡುಗಣ್ಣಾಗಿ ನೋಡಿದ. ಹೂನಗುವಿನ ಹುಡುಗಿ ಚಹದ ಲೋಟವನ್ನು ಮುಂದಿಟ್ಟಳು. "ಎಲ್ಲಿ ಕಳೆದು ಹೋಗುತ್ತಿದ್ದಿಯೇ ಗೆಜ್ಜೆಪಾದದ ಹುಡುಗಿ" ಅವನು ಮನದಲ್ಲೇ ಅಂದುಕೊಂಡ. ಅಲ್ಲೆಲ್ಲೊ ಗುಡಿಯಲ್ಲಿ ದೇವರು ಮತ್ತೆ ನಕ್ಕ! ಗೆಜ್ಜೆ ಘಲ್ ಎಂದಿತು !!

ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Saturday, 31 August 2019

ಗೌರಿ ಗಣೇಶ

ಭಾದ್ರಪದ ಮಾಸದ ಮೊದಲ ಹಬ್ಬ ಗೌರಿಹಬ್ಬ.
ಗೌರಿ ಸಮೃದ್ಧಿಯ ಸಂಕೇತ, ಗಣಪತಿ ಶುಭ ಹಾಗೂ ಲಾಭದ ಸಂಕೇತ. ಹಾಗಾಗಿ ಎಲ್ಲಿ ಸಮ್ರದ್ಧಿ ಇರುತ್ತದೊ ಅಲ್ಲಿ ಶುಭ ಹಾಗೂ ಲಾಭ ಇರುತ್ತದೆ. ಅರ್ಥಾತ್ ಎಲ್ಲಿ ಮಳೆ ಬಿದ್ದು ಬೆಳೆ ಸಮೃದ್ಧವಾಗಿದೆಯೊ ಅಲ್ಲಿ ಶುಭ ಹಾಗೂ ಲಾಭ ನೆಲೆಸುತ್ತದೆ. ಆದುದರಿಂದ, ಗೌರಿ ಬಂದ ಮೇಲೆ ಗಣೇಶ ಬರುವುದು ಇದನ್ನೇ ಸಂಕೇತಿಸುತ್ತದೆ.
ಭಾದ್ರಪದ ಮಾಸ ಬೆಳೆ ಕೈಗೆ ಬರುವ ಕಾಲ ಹಾಗಾಗಿ ಕಣಜ ತುಂಬಿದ ಧವಸ ಧಾನ್ಯ ಸಮೃದ್ಧತೆಯನ್ನೂ ಹಾಗೂ ಗ್ರಹಿಣಿ ಮುಂದಿನ ಒಂದು ವರುಷ ಆ ಧವಸ ಧಾನ್ಯದಿಂದ ಮನೆ ನಿಭಾಯಿಸುವ ನಿಟ್ಟಿನಲ್ಲಿ ಮಂಗಳಗೌರಿಯನ್ನು ಪೂಜಿಸಿ ಸಮೃದ್ಧತೆಯನ್ನು ಸಂಕೇತಿಸುತ್ತಾರೆ.
ಶ್ರಾವಣದ ತನಕ ಹೊಲದಲ್ಲಿ ಬೆಳೆಗಾಗಿ ಕೆಲಸ ಮಾಡುವ ಹೆಂಗಸರ ಗಾಜಿನ ಬಳೆಗಳು ಒಡೆದು ಹೋಗುವುದು ಸಹಜ, ಮತ್ತೆ ಬಳೆ ಖರೀದಿಸಲು ಸಮ್ರದ್ಧ ಫಸಲು ಕೈ ಸೇರಬೇಕು ಹಾಗಾಗಿ ಗೌರಿ ಹಬ್ಬದಂದು ಮಹಿಳೆಯರು ಬಳೆ ತೊಡುತ್ತಾರೆ.
*ಗೌರಿ ಗಣೇಶ ಹಬ್ಬದ ಶುಭಾಶಯಗಳು*

ಹಬ್ಬವನ್ನು ಅರಿತು ಆಚರಿಸೋಣ
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Wednesday, 24 July 2019

ಬಾ, ಬಂದು ನೋಡು ಈ ದೀಪ ಸಾಲ!

ನೀನಿರದ ಸಂಜೆಯಲಿ ನಾನಿಲ್ಲಿ ಹೀಗಿರುವೆ
ಮಾತಿಲ್ಲದ ಮೌನ ಹಣತೆಯಂತೆ.
ನೂರು ಬಣ್ಣದ ಸಂಜೆ ಕಪ್ಪಿನಲಿ ಕರಗುತಿದೆ
"ನೀ ಬರುವೆಯ?" ಎಂಬುದೊಂದೆ ಚಿಂತೆ.

ಬಾನಲ್ಲಿ ಬೆಳ್ಳಿಗಳು ಸಂತೆ ನೆರೆದಿರುವಾಗ
ಬಯಲಲ್ಲಿ ಮಿನುಕು ಹುಳ ಬೆಳಕ ಬೀರಿ,
ಹೆಜ್ಜೆ ಹೆಜ್ಜೆಗೆ ನಿನಗೆ ಬೆಳಕಾಗಿ ಮಿನುಗುತ್ತಿದೆ
ನನ್ನೆಡೆಗೆ ನೀ ಬರಲು ದಾರಿ ತೋರಿ.

ಹಾಡು ಹಕ್ಕಿಯ ಮೌನ ಗೂಡಿನಲಿ ಬಿಸಿಯುಸಿರು
ತೊನೆದ ಕೊಂಬೆಯ ಮೇಲೆ ನೂರು ಕನಸು.
ಬಿಳಿಯ ಮಲ್ಲಿಗೆ ಅರಳು ಬಿರಿದು ಅರಳುತಲಿರಲು
ಘಮವನೇ ತುಂಬಿಹುದು ಆಸುಪಾಸು

ಬೀಸು ಗಾಳಿಯ ಗಂಧ ನಿನ್ನ ಘಮವನೆ ತರಲಿ
ಕಾದಿರುವ ಹಾದಿಗೆ ತಿಂಗಳಿರಲಿ.
ನಿನ್ನ ಹೆಜ್ಜೆಯ ಪಯಣ ನನ್ನೆಡೆಗೆ ಹೊರಳಿರಲಿ
ನನ್ನೆದೆಯ ತಹತಹಿಕೆ ಕೇಳುತಿರಲಿ.

ಊರ ದಾರಿಯ ತುಂಬಾ ಹೊಂದಳಿರ ತೇರಿಹುದು
ಊರಾಚೆ ಕೆರೆ ಸುತ್ತ ಕೆಂಪು ಕಮಲ.
ಬರುವ ದಾರಿಯ ತುಂಬಾ ಹೊಂದೀಪ ಹಚ್ಚಿರುವೆ
ಬಾ, ಬಂದು ನೋಡು ಈ ದೀಪ ಸಾಲ!

ಯೋಗೀಶ್ ಮಲ್ಲಿಗೆಮಾಡು

Wednesday, 6 February 2019

ದೈವಿಕ ಪ್ರೀತಿ

ಪ್ರತಿಯೊಬ್ಬರ ಬದುಕಿನಲ್ಲೂ ಪ್ರೀತಿಯೆಂಬ ರಥ ಸಾಗುತ್ತಿರುತ್ತದೆ. ಬಲವಂತದಿಂದ ಯಾವತ್ತೂ ಆ ರಥದ ಗಾಲಿಗಳನ್ನು ನಮ್ಮ ಬೀದಿಗೆ ಹೊರಳಿಸಿ ದಿಕ್ಕು ಕೆಡಿಸಬಾರದು. ಅದಾಗಿಯೇ ಅದು ನಮ್ಮ ಬೀದಿಗೆ ಸಾಗಿ ಬರಬೇಕು. ಇಲ್ಲವಾದರೆ, ಆ ರಥವು ಹೋಗುತ್ತಿರುವ ದಾರಿಯನ್ನೇ ದೂರದಿಂದ ನೋಡಿ ಕೈ ಮುಗಿಯಬೇಕು. ರಥದೊಳಗಿನ ದೇವರು ನಮ್ಮೆಡೆಗೆ ನೋಡದಿದ್ದರೂ ಪರವಾಗಿಲ್ಲ. ಹಾದಿಯುದಕ್ಕೂ ಚೆಲ್ಲಿದ ಹೂವಷ್ಟೇ ಸಾಕು ಬದುಕಿಗೆ. ಅದಲ್ಲವಾ ದೈವಿಕ ಪ್ರೀತಿ?

Saturday, 2 February 2019

ಬದುಕು

ಬದುಕು ಬಯಲ ಬಂಡೆಯ ಮೇಲೆ ಬೇರು ಬಿಟ್ಟ ಆಲದಂತಿರಬೇಕು

ನೀರಿಲ್ಲ, ಮಣ್ಣಿಲ್ಲ ಆದರೂ ಸದೃಢವೂ ಹೌದು ಸುಭದ್ರವೂ ಹೌದು.

ಯೋಗೀಶ್ ಮಲ್ಲಿಗೆಮಾಡು