Wednesday, 18 December 2019

ನೀಲ ಮೇಘ ಮತ್ತು ಶ್ಯಾಮ

ಮೇಘ ಸಾಲಿನಲ್ಲಿ ಮತ್ತೆ ನೀಲಿ ಬಣ್ಣ ಬೆರೆತಿದೆ
ನೀಲ ಮೇಘ ಶ್ಯಾಮ ನಿನ್ನ ಹಾಗೆ ಕಂಡು ಬರುತಿದೆ

ದಟ್ಟ ಮುಗಿಲ ಮೇಲೆ ಪುಟ್ಟ ನವಿಲಗರಿಯ ರೂಪವು
ಪುಟ್ಟ ಪಾದದಂಚ ಕೆಳಗೆ ಅಚ್ಚ ಹೊಗೆಯ ಧೂಪವು

ನಿನ್ನ ರೂಪ ಮುಗಿಲ ತುಂಬ ಕೊಳಲ ನುಡಿಸುವಂತಿದೆ
ನೀಲಿ ಬಣ್ಣದೋಕುಳಿಯಲಿ ಜೀವ ತುಂಬಿದಂತಿದೆ

ಕುಸುಮಮಾಲೆ ನೇಯುತಿರುವೆ ಧರಿಸಲೊಮ್ಮೆ ಬಾರೆಯಾ?
ನಿನ್ನ ರಾಧೆ ಇಲ್ಲೆ ಇರುವೆ ಮೊಗವನೊಮ್ಮೆ ತೋರೆಯಾ?

ಬೆಳ್ಳಿ ಬಾನ ಬಯಲಿಗೇಕೆ ನೀಲಿ ಬಣ್ಣ ಲೇಪವು?
ನೀಲವರ್ಣ ನನ್ನ ತೊರೆದೆ ಏಕೆ ಇಂಥ ಶಾಪವು?

ಮೇಘ ಜೀವ ಪಡೆದು ಧರೆಗೆ ಇಳಿಯಬಾರದೇತಕೆ?
ರಾಧೆ ತೊರೆದ ಮೇಘವರ್ಣ ಮರಳಬಾರದೇತಕೆ?

ಯೋಗೀಶ್ ಮಲ್ಲಿಗೆಮಾಡು

Wednesday, 4 December 2019

ಕಪ್ಪು ಬಿಳುಪು

ಹಟ್ಟಿ ಮನೆಯ ಪುಟ್ಟ ಗುಡಿಸಿಲಿನ ಒಳಗೆ ಮಬ್ಬು ದೀಪದ ಬೆಳಕಲ್ಲಿ ಆತ ಒಲೆಯ ಮೇಲೆ ಬೇಯುತ್ತಿದ್ದ ಮಡಕೆಯನ್ನೇ ನೋಡುತ್ತಾ ಕೂತಿದ್ದ.

ಆತ ಒಲೆಯ ಮೇಲಿದ್ದ ಕಪ್ಪು ಮಡಕೆಯನ್ನೇ ನೋಡುತ್ತಿದ್ದ. ಇವತ್ತು ಶಾಲೆಯಲ್ಲಿ ಆತ ಕಪ್ಪು ಎಂದು ತಮಾಷೆ ಮಾಡಿದ್ದರು. ಅದನ್ನೇ ಯೋಚಿಸುತ್ತಾ ಆ ಮಡಕೆಯ ಕಪ್ಪಿನೊಂದಿಗೆ ತನ್ನ ಹೋಲಿಸುತ್ತಾ ಕೂತಿದ್ದ.

ಇದ್ದಕ್ಕಿದ್ದ ಹಾಗೆ ಬಾಗಿಲ ಕಡೆ ನೋಡಿದ ಆತನ ಕಣ್ಣಲ್ಲಿ ಸಾವಿರ ದೀಪದ ಪ್ರತಿಫಲನ. ಅಂಗಳದಲ್ಲಿ ಹಾಲಿನಂತಹ ಬೆಳಕು. ಹೊರಗೋಡಿ ಬಂದವನಿಗೆ ಎಲ್ಲಿಲ್ಲದ ಖುಷಿ. "ಅಮ್ಮ....ಈ ಕತ್ತಲ್ನಲ್ಲಿ ಇದ್ಯಾಕಿಷ್ಟು ಬೆಳ್ಕು?"
ಆತ ಮುಗ್ಧವಾಗಿ ಕೇಳಿದ್ದ.

"ಮುತ್ತೇ... ಅದು ತಿಂಗ್ಳು ಬೆಳ್ಕು ಮಗಾ... ಆಕಾಶ ನೋಡು ಚಂದ್ರನ್ ಹುಣುಮೆ" ಅಮ್ಮ ಹೇಳುತ್ತಾ ಮಗನ ತಲೆನೇವರಿಸಿದಳು.

ಆತನ ಗುಡಿಸಲು, ಅಂಗಳ, ಊರ ದಾರಿ, ಕಾಡು ಮಲೆ ಎಲ್ಲವೂ ಹಾಲ ಬಿಳುಪಿನ ಬೆಳಕಲ್ಲಿ ಹೊಳೆಯುತ್ತಿತ್ತು.
ಅದನ್ನೆಲ್ಲಾ ದಿಟ್ಟಿಸುತ್ತಲೇ ಆತ ಹೀಗೆ ಹೇಳಿದ್ದ "ಅಮ್ಮ, ಕಪ್ಪಾದ ಕತ್ತಲೆ ಇಲ್ದಿದ್ರೆ, ಬಿಳುಪಾದ ಹುಣುಮೆಗೆ ಮಹತ್ವ ಇದೆಯಾ?"

ಅರ್ಥ ಮಾಡಿದ ಅಮ್ಮ ಆತನ ಅಪ್ಪಿ ಹಿಡಿದು  "ಇಲ್ಲ ಮಗಾ, ಬಿಳಿ ಅಕ್ಕಿ ಬೆಂದು ಅನ್ನ ಆಗೂದಕ್ಕೆ ಕಪ್ಪು ಮಡಕೆಯೇ ಬೇಕು. ಬಿಳಿ ಕಪ್ಪು ಬಣ್ಣವಷ್ಟೆ, ಮೇಲು ಕೀಳಲ್ಲ" ಎಂದು ಮುತ್ತಿಟ್ಟಳು.

ಕಪ್ಪಲ್ಲಿ ಹೊಳೆದ ಬಿಳಿ ಹುಣ್ಣಿಮೆ ಆತನಿಗೆ ಹೊಸತಾಗಿ ಕಂಡಿತು. ಒಳಗೆ ಹಟ್ಟಿಯಲ್ಲಿ ಕಪ್ಪು ಮಡಿಕೆಯಲ್ಲಿ ಬಿಳಿ ಅನ್ನ ಬೇಯುತ್ತಿತ್ತು!

ರಚನೆ: ಯೋಗೀಶ್ ಮಲ್ಲಿಗೆಮಾಡು