Thursday, 23 January 2020

ಕ್ವಿಲ್ಟಡ್ ಮಲ್ಟಿವರ್ಸ್ ಥಿಯರಿ

ಬಹುಬ್ರಹ್ಮಾಂಡ ತತ್ವದ ಆಧಾರದ ಮೇಲೆ ಒಂದು ಸಿದ್ಧಾಂತ ಪ್ರತಿಪಾದಿಸಲಾಗಿತ್ತು. ಕ್ವಿಲ್ಟಡ್ ಮಲ್ಟಿವರ್ಸ್ ಥಿಯರಿ ಎಂಬುವುದು ಆ ಸಿದ್ಧಾಂತ. ಆ ಸಿದ್ಧಾಂತದ ಪ್ರಕಾರ ಅದೆಷ್ಟೊ ಜ್ಯೋತಿರ್ವರ್ಷಗಳ ಆಚೆ ಇನ್ನೊಂದು ಭೂಮಿ ಇದೆ. ಇಲ್ಲಿ ನಡೆಯುವ ಘಟನೆಗಳೇ ಅಲ್ಲೂ ನಡೆಯುತ್ತಿದೆ, ಇಲ್ಲಿರುವ ವ್ಯಕ್ತಿಗಳೇ ಅಲ್ಲೂ ಇದ್ದಾರೆ ಅನ್ನುವುದು ಆ ಸಿದ್ಧಾಂತ.

ಇಸ್ರೊ ಆಕಾಶಯಾನಕ್ಕೆ ಮುಂದಾಯಿತು. ಅತ್ಯಾಧುನಿಕ, ಸಜ್ಜಿತ ಆಕಾಶ ಕ್ಷಿಪಣಿ ಸಿದ್ಧವಾಯಿತು. ಸಾವಿರಾರು ಜ್ಯೋತಿರ್ವರ್ಷವನ್ನು ಒಂದು ಘಳಿಗೆಯಲ್ಲಿ ಹಾದು ಹೋಗ ಬಲ್ಲ ಮನೋವೇಗದ ಬಾಣಬಿರುಸಿನ ರಾಕೇಟು.

ಖ್ಯಾತ ಗಗನಯಾನಿ ಸುಮಿತ್ರ ಕಶ್ಯಪ್ ಈ ಯಾನಕ್ಕೆ ಆಯ್ಕೆಯಾಗಿದ್ದರು. ನೆಲದಿಂದ ಚಿಮ್ಮಿದ ರಾಕೇಟು ಮನೋವೇಗದಲ್ಲಿ ಜ್ಯೋತಿರ್ವರ್ಷಗಳನ್ನು ಹಿಂದಿಕ್ಕಿ ಸಾಗಿತ್ತು. ಭೂಕಕ್ಷೆ, ವಾಯುಮಂಡಲ, ಸೂರ್ಯ ಪರಿಧಿಯನ್ನು ದಾಟಿ ಕಾಲ, ಗುರುತ್ವ, ಪರಿಧಿಗಳ ಎಲ್ಲಾ ಸಿದ್ಧಾಂತ ದಾಟಿ ಮುನ್ನುಗಿತ್ತು.

ಅಲ್ಲೊಂದು ಭೂಮಿ ಇರುವುದು ಹೌದಾ ಅನ್ನುವುದೇ ಎಲ್ಲರ ಕುತೂಹಲ. ಇದ್ದದ್ದೇ ಹೌದಾದರೆ ಅದು ಇಲ್ಲಿಯಂತೆಯೇ ಘಟನೆ, ವ್ಯಕ್ತಿ, ಪರಿಸ್ಥಿಗಳನ್ನು ಹೊಂದಿರಲು ಸಾಧ್ಯವೇ ಅನ್ನುವ ಪ್ರಶ್ನೆ. ಮಾಧ್ಯಮ, ಶಾಲೆ, ಮನೆ, ಊರು ಕೇರಿ ತುಂಬಾ ಇದೇ ಚರ್ಚೆ.

ದುರಾದೃಷ್ಟ, ರಾಕೇಟು ಆ ಭೂವಲಯವನ್ನು ಶೋಧಿಸುವ ಮುನ್ನವೇ ಸಂಪರ್ಕ ಕಡಿತಗೊಂಡಿತು. ರಾಕೇಟು ಅಲ್ಲಿ ತಲುಪಿತೊ ಇಲ್ಲವೊ ನಿಗೂಢವಾಗಿ ಉಳಿಯಿತು. ಕೆಲ ದಿನಗಳು ಕಳೆದು ಎಲ್ಲವೂ ಕೈಚೆಲ್ಲುವ ಹೊತ್ತಲ್ಲಿ ಒಂದು ಕ್ಷಿಪಣಿ ಇಲ್ಲಿಯ ಭೂವಲಯದ ಕಡೆ ಬರುವ ಸಂಪರ್ಕ ಸಿಕ್ಕಿತು. ನೋಡಿದರೆ ಅದು ಇಲ್ಲಿಂದ ಕಳುಹಿಸಿದ ಕ್ಷಿಪಣಿಯೇ.

ಎಲ್ಲರಿಗೂ ಆಶ್ಚರ್ಯ ! ಕಳುಹಿಸಿದ ಕ್ಷಿಪಣಿ ಹಿಂದಿರುಗಿದೆ!! ಅದರಲ್ಲಿದ್ದ ಗಗನಯಾನಿ ಸುಮಿತ್ರ ಕಶ್ಯಪ್ ಕೆಳಗಿಳಿದು ಕೈಕುಲುಕಿದರು. ಯಾನ ರೋಮಾಂಚನವಾಗಿತ್ತು ಆದರೆ ಭೂವಲಯ ಶೋಧಿಸಲಾಗದ್ದು ಬೇಸರ ತಂದಿದೆ ಎಂದು ಹೇಳಿಕೆ ನೀಡಿದರು.

ಶೋಧವೇನೊ ಅಲ್ಲಿಗೇ ಮುಗಿಯಿತು. ಆದರೆ, ಕ್ವಿಲ್ಟಡ್ ಮಲ್ಟಿವರ್ಸ್ ಥಿಯರಿ ಆಧಾರದಲ್ಲಿ ಇಲ್ಲಿ ಬಂದ ಕ್ಷಿಪಣಿ ಅಲ್ಲಿಯದೆಂದು, ಅದರಲ್ಲಿರುವ ಸುಮಿತ್ರಾ ಕಶ್ಯಪ್ ಅಲ್ಲಿಯವರೆಂದು ಯಾರಿಗೂ ತಿಳಿಯದ್ದು ವಿಪರ್ಯಾಸ!!

ಇಲ್ಲಿಯ ಸುಮಿತ್ರಾ ಅಲ್ಲಿಯ ಭೂಮಿ ಸೇರಿಕೊಂಡರು. ಇವರಲ್ಲಿಯವರು, ಅವರಿಲ್ಲಿಯವರು ಎಂದು ಸಂಶೋಧಿಸುವುದೆಂತು ???

ರಚನೆ: ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.